Monday, June 2, 2008

ಚಿಲ್ಲರೆ ಸಮಸ್ಯೆ .....

ಬೆಳಗ್ಗೆ ಬೇಗ ೬ ಗಂಟೆ ಬಸ್ಸಿಗೆ ಹೋಗಬೇಕು ; ಅವಸರದ ಕೆಲಸ ಹಾಗೂ ಹೀಗೂ ಮಾಡಿ ಮಾರ್ಗದ ಬದಿಗೆ ಬಂದು ನಿಂತಾಗ ಮಾಮೂಲಿನಂತೆ "ನವದುರ್ಗ" ಬಸ್ಸು ಬಂದಾಗ ಬೇಗನೆ ಹತ್ತಿ ಕಿಟಕಿ ಬದಿಯ ಸೀಟನ್ನು ಆಕ್ರಮಿಸಿ ಕುಳಿತು ಟಿಕೇಟು ತೆಗೆಯಲೆಂದು ಕಿಸೆಗೆ ಕೈ ಹಾಕಿದಾಗಲೇ ಗೊತ್ತಾದದ್ದು ಚಿಲ್ಲರೆ ತೆಗೆದು ಮೇಜಿನ ಮೇಲೆ ಇಟ್ಟದ್ದು ಅಲ್ಲೇ ಬಾಕಿ ಆಗಿದೆ ಅಂತ ! ಏನು ಮಾಡುವುದು? ನೂರು ರೂಪಾಯಿ ನೋಟು ಕೊಟ್ಟರೆ ಕಂಡಕ್ಟರ್ " ಏಳು ರೂಪಾಯಿ ಟಿಕೆಟ್ ಗೆ " ನೂರು ರೂಪಾಯಿ ಕೊಟ್ರೆ ಚಿಲ್ಲರೆ ಎಲ್ಲಿಂದ ಕೊಡೋದು? ಅಂತ ಬೆಳಗ್ಗೆ ಬೆಳಗ್ಗೆ "ಚಿಲ್ಲರೆ" ಸಮಸ್ಯೆ ಸುರು ಮಾಡ್ತಾನೆ .

ಹೌದು . ಈ ಚಿಲ್ಲರೆ ಸಮಸ್ಯೆ ನೀವೆನಿಸಿದಷ್ಟು "ಚಿಲ್ಲರೆ"ಏನಲ್ಲ !!

ಎಷ್ಟೋ ಬಾರಿ ಬಿ.ಟಿ.ಎಸ್ ಬಸ್ ನಲ್ಲಿ ಒ೦ಭತ್ತು ರೂಪಾಯಿ ಟಿಕೆಟ್ ಗೆ ಹತ್ತು ರೂಪಾಯಿ ಕೊಟ್ಟಾಗ ಕಂಡಕ್ಟರ್ ಟಿಕೇಟಿನ ಹಿಂಬಾಗದಲ್ಲಿ ಒಂದು ಗೆರೆ ಎಳೆದು ನಿಮ್ಮ ಕೈಗೆ ತುರುಕುತ್ತಾನೆ . ನಾವು ಇಳಿಯುವ ಅವಸರದಲ್ಲಿ ಆ ಒಂದು ರೂಪಾಯನ್ನು ಮರೆತು ಜಾಣರಾಗುತ್ತೇವೆ ! ಇದು ಕಂಡಕ್ಟರ್ ಭಾ೦ಧವರಿಗೂ ಗೊತ್ತಿರುತ್ತದೆ ! ನಾವು ಈ ರೀತಿ ಹಲವು ಸಲ ಕಳೆದುಕೊಂಡ ಮೇಲೆ ಚಿಲ್ಲರೆ ಬಗ್ಗೆ ಜಾಗೃತರಾಗುತ್ತೇವೆ. ಅಂಗಡಿಗಳಲ್ಲಿ , ಹೋಟೆಲ್ಗಳಲ್ಲಿ , ತರಕಾರಿ ಮಾರುವ ಗಾಡಿಗಳಲ್ಲಿಗಳಿಂದ ಹಿಡಿದು ದೇವಸ್ಥಾನದಲ್ಲಿ "ಪುರೋಹಿತರ ತಟ್ಟೆ"ಗೆ ಹಾಕುವಲ್ಲಿವರೆಗೆ "ಚಿಲ್ಲರೆ " ಅತೀ ಅವಶ್ಯವಾಗಿರುತ್ತದೆ .ಇದು ಪರಿಹರಿಸಬಹುದಾದ ಆದರೆ ನಮ್ಮ ಉದಾಸೀನತೆಯ ಫಲವಾಗಿ ಉದ್ಭವಿಸುವ ಸಮಸ್ಯೆ ಅಂತ ನನಗನಿಸುತ್ತದೆ.
ಕಳೆದ ತಿಂಗಳು ಆದಾಯ ತೆರಿಗೆ ಕಚೇರಿಯಿಂದ ನನ್ನ ಮಿತ್ರರೊಬ್ಬರಿಗೆ ಮೂರು ರೂಪಾಯಿ ಎಪ್ಪತ್ತೈದು ಪೈಸೆ ಬಾಕಿ ಸಂದಾಯ ಮಾಡಬೇಕೆಂದು ರಿಜಿಸ್ಟರ್ದ ಪೋಸ್ಟ್ ಬಂದಾಗ "ಚಿಲ್ಲರೆ" ವಸೂಲಿಗಾಗಿ ನಮ್ಮ ಸರಕಾರ ಎಷ್ಟು ಮುತುವರ್ಜಿ ವಹಿಸುತ್ತದೆ ಎಂದು ಅರ್ಥವಾಗಿತ್ತು !

ಅಂತೂ ಎಲ್ಲರೂ ಒಂದಲ್ಲ ಒಂದು ಸಲ "ಚಿಲ್ಲರೆ ಸಮಸ್ಯೆ"ಯಿಂದ ಬಳಲಿರುತ್ತೇವೆ .
ಕೆಲವೊಂದು ಸಲ ಚಿಲ್ಲರೆ ಇಲ್ಲ ಎಂಬುದು ಭಿಕ್ಶುಕರನ್ನು ಸಾಗ ಹಾಕಲು , ದುಡ್ಡು ಕೊಡಲು ಮನಸಿಲ್ಲದೆ ಇರುವಾಗ ! ಅತ್ಯಂತ ಸಹಕಾರಿಯಾಗುತ್ತದೆ ಎಂಬುದನ್ನೂ ಮರೆಯಬಾರದು !

ಇನ್ನು ನಮ್ಮ ವ್ಯವಹಾರಗಳಲ್ಲೂ ಅಗಾಗ "ಚಿಲ್ಲರೆ ಸಮಸ್ಯೆ " ಎದುರಾಗುವುದಿದೆ .
ಮಾತು ಬಲ್ಲವನಿಗೆ ಜಗಳವಿಲ್ಲ ; ಊಟ ಬಲ್ಲವನಿಗೆ ರೋಗವಿಲ್ಲ ಆದುದರಿಂದ ವ್ಯಾವಹಾರಿಕ ಚಿಲ್ಲರೆ ಸಮಸ್ಯೆಗಳನ್ನೂ ಪರಿಹರಿಸಲು ಸಾದ್ಯವಿದೆ .

****
ಅಂದ ಹಾಗೆ ....
ಮೊನ್ನೆ ಯಡಿಯೂರಪ್ಪನವರಿಗೂ ಸರಕಾರ ರಚಿಸಲು ಉಂಟಾದದ್ದು ಚಿಲ್ಲರೆ ಸಮಸ್ಯೆಯೇ !!
ನೂರಹತ್ತು ಜನ ಗೆದ್ದು ಬಂದರೂ ಚಿಲ್ಲರೆ ಆರು ಜನ ಬೆಂಬಲವಿಲ್ಲದೆ ಏನೂ ಮಾಡುವ ಹಾಗಿರಲಿಲ್ಲ . ಹಾಗಾದರೆ ಚಿಲ್ಲರೆಯೂ ಕೆಲವೊಮ್ಮೆ "ನಿರ್ಣಾಯಕ" ಪಾತ್ರ ವಹಿಸುತ್ತದೆ ಅಲ್ಲವೇ ??!!
***

2 comments:

YAKSHA CHINTANA said...

ನಾನು ನಿನ್ನೆ ಚಿಲ್ಲರೆ ಸಮಸ್ಯೆಗೆ ಸಿಕ್ಕಿದ್ದೇ ಸ್ವಾಮಿ. ನಿನ್ನೆ ವಾಣಿಜ್ಯ ತೆರಿಗೆ ಕಛೇರಿಯಲ್ಲಿ ಸ್ವಲ್ಪ ಕೆಲಸಕ್ಕೊಸ್ಕರ ಹೋಗಿದ್ದೆ. ಯಾವುದೊ ಪೇಪರ್ ಜೆರೊಕ್ಷ್ ಆಗಬೇಕೆಂದು ಪೇಪರ್ ತೆಗೊಂಡು ಹೊರಗೆ ಬಂದರೆ ನನ್ನಲ್ಲಿ ಇರೋದೆಲ್ಲಾ ನೂರು ಐನೂರು ಹಾಗೂ ಸಾವಿರದ ನೋಟುಗಳು ಜೆರೊಕ್ಷ್ ಗೆ ಒಂದು ರುಪಾಯಿ ಗೆ ನಾನು ಎಲ್ಲಿ ಹೋಗಲಿ? ಹೋಟೆಲ್ಗೆ ಹೋಗಿ ಬೇಡದ ಊಟ ಉಪಾಹಾರ ತೆಗೆದು ಕೊಳ್ಳಲು ಮನಸ್ಸೂ ಇಲ್ಲ ಹೊಟ್ಟೆಗೂ ಬೇಡ, ಸಿಗರೇಟು ಬಿಡಿ ಅಬ್ಯಾಸ ಇಲ್ಲ . ಹತ್ತಿರ ಎಲ್ಲಿಯೂ ಸಿಗುವ ಹಾಗು ಇಲ್ಲ ಏನು ಮಾಡಲಿ? ಜೆರಾಕ್ಷ್ ತೆಗೆದು ೫೦೦ ನೋಟು ಕೊಟ್ಟರೆ ಹೇಗೆ ಹೇಳಿ. ಹಾಗೆಂದು ದೂರ ಹೋಗಿ ಸೀಯಾಳ ಕುಡಿದೆ ೧೦೦ ರ ನೋಟು ಕೊಟ್ರೆ ಅವನಲ್ಲೂ ಚಿಲ್ಲರೆ ಇಲ್ಲ ಒಟ್ಟಾರೆ ಪಜೀತಿ ಆಯಿತು. ಒಂದು ಗಳಿಗೆ ತುಂಬಾ ಟೆನ್ಶನ್ ಆಯಿತು. ಜೆರೊಕ್ಷ್ ಬೇರೆ ಅಗತ್ಯ ಬೇಕಿತ್ತು ಒಂದು ರೂಪಾಯಿ ಚಿಲ್ಲರೆಗೆ ತುಂಬಾ ಅವಸ್ತೆ ಪಟ್ಟೆ. ಸೀಯಾಳದವನಿಗೂ ಸಾಲಗಾರನಾಗಬೇಕೆ? ಪುನಃ ಹತ್ತಿರದ ಮೆಡಿಕಲ್ ನಿಂದ ಯವಗಾದ್ರೂ ಅಗತ್ಯ ಬೀಳಬಹುದಾಗಿದ್ದ ಮದ್ದು ತೆಗೊಂಡು ಸಮಸ್ಯೆ ಪರಿಹರಿಸಿಕೊಂಡೆ.

Shyam said...

ನಾನು ಸಣ್ಣವನಾಗಿದ್ದಾಗ ಮಾಡುತ್ತಿದ್ದುದನ್ನು ಅಮ್ಮ ಹೇಳುವರು ಹೀಗೆ..
ಅಪ್ಪ, ಅಮ್ಮ, ಇಲ್ಲವೇ ಅಣ್ಣ ಎಲ್ಲಿಯಾದರೂ ಪೇಟೆಗೆ ಹೋಗಿ ಬಂದರೆ ಅವರ ಹಿಂದೆಯೇ ಸುತ್ತುವನು. ಯಾಕೆಂದರೆ ಅವರಲ್ಲಿ change ಸಿಕ್ಕಿ ಉಳಿದ ಚಿಲ್ಲರೆ ನಾಣ್ಯಗಳು ಇರುತ್ತವೆ ನೋಡಿ. So ನನ್ನ ಡಬ್ಬಕ್ಕೆ atleast ಒಂದು ನಾಣ್ಯವನ್ನಾದರೂ ಗಿಟ್ಟಿಸುವವನೇ. ಆವಾಗ ನಾಣ್ಯಕ್ಕಾಗಿ ಎಷ್ಟೊಂದು ತವಕವೆಂದರೆ ನೋಟುಗಳು ಕೊಟ್ಟರೂ ಬೇಡವೆಂದು ಹಿಂತಿರುಗಿಸಿ ನಾಣ್ಯವೇ ಬೇಕೆಂದು ದುಂಬಾಲು ಬೀಳೋನು! ಆವಾಗ ನೋಟಿನ ಬೆಲೆ ಗೊತ್ತಿರಲಿಲ್ಲ ನೋಡಿ..