Monday, October 20, 2008

ಟೆಂಟಿನ ಆಟ .....

ಆಗಿನ್ನೂ ನಾನು ೪ನೆ ತರಗತಿಯಲ್ಲಿದ್ದೆ . ವೇಣೂರು ಶಾಲಾ ಮೈದಾನದಲ್ಲಿ ಧರ್ಮಸ್ಥಳ ಮೇಳದವರು "ಸಮುದ್ರ ಮಥನ " ಆಟ ಆಡಲಿದ್ದಾರೆ ಎಂಬ ವಿಚಾರ ಒಂದು ತಿಂಗಳ ಮೊದಲೇ ರಾಘವೇಂದ್ರ ಪೈಗಳ ಅಂಗಡಿ ಮುಂದೆ ಅಂಟಿಸಿದ್ದ ಭಿತ್ತಿ ಪತ್ರಿಕೆ ನೋಡಿ ನಮಗೆಲ್ಲ ಅದೇನೋ ಒಂದು ರೀತಿಯ ಆನಂದ ! ದಿನವೂ ಶಾಲೆಗೆ ಹೋಗುವಾಗ ಮತ್ತು ಶಾಲೆಯಿಂದ ಬರುವಾಗ ಆ ಪೋಸ್ಟರನ್ನು ಒಂದು ಸಲ ನೋಡದಿದ್ದರೆ ಮನಸ್ಸಿಗೆ ಸಮಾಧಾನವಿಲ್ಲ !
ತುಳು ಆಟಕ್ಕೆ ಹೋಗಬಾರದೆನ್ನುವ ಅಲಿಖಿತ ಕಟ್ಟಪ್ಪಣೆ ಮನೆಯಲ್ಲಿ ಇದ್ದದ್ದರಿಂದ ಕನ್ನಡ ಆಟಕ್ಕೆ ಖಂಡಿತ ಒಪ್ಪಿಗೆ ಸಿಗುತ್ತದೆಯೆಂಬ ಆಸೆ !ಯಾವಾಗ ಮಾರ್ಚ್ ೧೮ ಶನಿವಾರ ಬರುತ್ತದೋ ಎಂದು ಕಾಯುತ್ತ ಇದ್ದ ನಾನು , ಇನ್ನೇನು ಆಟಕ್ಕೆ ಮೂರು ದಿನ ಮೊದಲೇ ಮನೆಯಲ್ಲಿ ಅಪ್ಪನಿಗೆ "ಬೆಣ್ಣೆ" ಹಾಕಲು ಸುರುಮಾಡಿದ್ದೆ!

ಆಟದ ಮುನ್ನಾದಿನ ಶಾಲಾ ಮಕ್ಕಳಿಗೆ ಶಾಲೆಯಿಂದ ಆಟಕ್ಕೆ ಹೋಗುವವರಿಗಾಗಿ ಗುರುತಿನ ಚೀಟಿ (ಶಾಲೆಯ ಸೀಲ್ ಇರುವ ಚೀಟಿ ) ವಿತರಣಾ ವ್ಯವಸ್ಥೆ ಇತ್ತು . ಶಾಲೆಯಿಂದ ತಂದ ಚೀಟಿ ತೋರಿಸಿದರೆ ಟೆಂಟ್ ನ ಆಟಕ್ಕೆ ಟಿಕೇಟಿನಲ್ಲಿ ಅರ್ಧ ಭಾಗ ವಿನಾಯಿತಿ ಸಿಗುತ್ತಿತ್ತು . ಆ ಚೀಟಿಯನ್ನು ಪಡೆಯಲು ನಿಂತ ಸಾಲಿನಲ್ಲಿ ಮೊದಲಿಗನಾಗಿ ಶೀಲ ಟೀಚರ್ ಕೊಟ್ಟ ಚೀಟಿಯನ್ನು ಭದ್ರವಾಗಿ ಕಿಸೆಯಲ್ಲಿರಿಸಿಕೊಂಡು ಮನೆಗೆ ತಂದು ಅಪ್ಪನಲ್ಲಿ "ಜಾಗ್ರತೆ " ತೆಗೆದಿಡಲು ಹೇಳಿ ಮರುದಿವಸ ಶಾಲೆಗೆ ನಡೆದೆ. ಶನಿವಾರ ಅರ್ಧ ದಿನ ಶಾಲೆ . ತರಗತಿಯಲ್ಲಿ ಕುಳಿತಿದ್ದರೂ ಮನಸ್ಸೆಲ್ಲ ರಾತ್ರಿಯ ಆಟದ ಮೇಲೆ !

೧೧ ಗಂಟೆಗೆ ೨ ನೆ ಬೆಲ್ ಅದ ತಕ್ಷಣ ಮೂತ್ರ ವಿಸರ್ಜನೆಗೆ ಓಡಿ ಹೋಗುತ್ತಿದ್ದುದು ಶಾಲಾ ಮೈದಾನದ ಬದಿಯ ಕುರುಚಲು ಪೊದೆಯ ಬಳಿಗೆ ! ಆಗ ನಮ್ಮ ದೃಷ್ಟಿ ಎಲ್ಲ ಮೈದಾನದ ಮದ್ಯೆ . "ಮೇಳದವರು ಬಂದಿದ್ದರೋ ಇಲ್ಲವೊ?" ಎಂಬ ಕಾತರ !

ಅಲ್ಲಿ ಟೆಂಟ್ ನ ಸಾಮಗ್ರಿಗಳನ್ನು ಇಳಿಸುತ್ತಿದ್ದ ಲಾರಿಯನ್ನು ನೋಡಿದಾಗ ಮನಸ್ಸಿಗೆ ನೆಮ್ಮದಿ !

ಮಧ್ಯಾಹ್ನ ಆಗುವುದನ್ನೇ ಕಾಯುತ್ತಿದ್ದ ನಾವು ಶಾಲೆ ಬಿಟ್ಟೊಡನೆ ಮನೆಯತ್ತ ಒಂದೇ ಓಟ .

ಮನೆಗೆ ಬಂದು ಊಟ ಮಾಡಿ ರೇಡಿಯೋ ದಲ್ಲಿ ಬರುತ್ತಿದ್ದ " ಆಕಾಶದಿಂದ ಧರೆಗಿಳಿದ ರಂಭೆ ......" ಹಾಡನ್ನು ಕೇಳುತ್ತಾ ರಾತ್ರಿಯ ಆಟಕ್ಕೆ ಕಾಯುತ್ತ ಕುಳಿತಿರುತ್ತಿದ್ದೆ .

ಆ ಹೊತ್ತಿನಲ್ಲಿ ಮನೆಯವರು ಹೇಳಿದ ಯಾವ ಕೆಲಸವನ್ನಾದರೂ ಮಾಡಲು ರೆಡಿ !

" ಒಪ್ಪದ ನೀತಿಯ ಮಾತುಗಳೆಲ್ಲ ತಟ್ಟನೆ ದಾರಿಯ ಹಿಡಿಯುವುವು " ಅಂತ ಕೆ.ಎಸ್.ನ . ಹೇಳಿದ ಮಾತು ನೂರು ಪ್ರತಿಶತ ಸತ್ಯವಾಗಿತ್ತು !

ಸಂಜೆಯಾಗುತ್ತಿದ್ದಂತೆಯೇ ಸ್ನಾನ ಮಾಡಿ ಅಪ್ಪನ ಪೂಜೆ ಮುಗಿಯುದನ್ನೇ ಕಾಯುತ್ತಿದ್ದೆ . ಎಂಟು ಗಂಟೆಯಾಗುತ್ತಿದ್ದ೦ತೆ ಏನೋ ಒಂದುರೀತಿಯ ತಳಮಳ ! ಎಲ್ಲಿ ಆಟ ಆರಂಭವಾಗಿ ಬಿಡುತ್ತದೋ , ನಮಗೆಲ್ಲಿ ಮಿಸ್ ಆಗುತ್ತದೋ ಎಂಬ ಭಯ !

ಬಟ್ಟಲಲ್ಲಿ ಬಡಿಸಿದ ಅನ್ನ ಹೊಟ್ಟೆಗಿಳಿಯದು !
"ಬಳುಸಿದ್ದೆಲ್ಲ ಉಂಡಿಕ್ಕಿ ಏಳೆಕ್ಕು " ಎಂಬ ದೊಡ್ಡಕ್ಕನ ಹುಕುಂ ಬೇರೆ ! ಅಂತೂ ಬೇಗ ಬೇಗನೆ ಊಟ ಮುಗಿಸಿ ಶಾಲನ್ನು ಹಿಡಿದುಕೊಂಡು ಅಪ್ಪನೊಂದಿಗೆ ಶಾಲಾ ಮೈದಾನದ ಕಡೆಗೆ ಅತ್ಯುತ್ಸಾಹದಿಂದ ಹೊರಟಾಗ ದೂರದಿಂದ ಮೈಕ್ನಲ್ಲಿ ಕೇಳುತ್ತಿದ್ದ "ಶರಣು ಶರಣಯ್ಯ... " ಪದ್ಯ ಇನ್ನೂ ಆಟ ಸುರುವಾಗಿಲ್ಲ ಎಂಬ ಸಮಾಧಾನ ನೀಡಿತ್ತು . ಹೋಗುವಾಗಲೇ ದಾರಿಯಲ್ಲಿ ರಾಘವೇಂದ್ರರ ಅಂಗಡಿಯಿಂದಲೇ ೧೦೦ ಗ್ರಾಂ . ನೆಲಕಡಲೆಯನ್ನು ತೆಗೆದು ಕೊಟ್ಟು "ಆಟದ ಹತ್ರೆ ಸಿಕ್ಕುದರ ತಿನ್ನೆಡ " ಅಂತ ಹಿತೋಪದೇಶ ನೀಡಿದಾಗ "ಹುಂ" ಅಂತ ತಲೆಯಾಡಿಸಿ ಬೇಗನೆ ಮೈದಾನಕ್ಕೆ ನಡೆದಾಗ ಆಗಲೇ ಜನ ಜಮಾಯಿಸಿತ್ತು . ಟಿಕೆಟ್ ಕೌಂಟರ್ ಬಳಿ ಬಂದಾಗಲೇ ನನಗೆ ಗೊತ್ತಾದದ್ದು ಶೀಲ ಟೀಚರ್ ಕೊಟ್ಟ ಚೀಟಿ "ಜಾಗ್ರತೆ" ತೆಗೆದಿಡಲು ಅಪ್ಪನ ಬಳಿ ಕೊಟ್ಟದ್ದು ಮನೆಯಲ್ಲೇ ಬಾಕಿ ಅಂತ !
ಛೆ ! ಹೀಗಾಯಿತಲ್ಲ ಅಂತ ಯೋಚಿಸುತ್ತಿದ್ದಾಗಲೆ ಎದುರಿನಲ್ಲಿ ದಿನಕರ ಮಾಸ್ತರು ದೇವರಂತೆ ಬಂದು ವಿನಾಯಿತಿ ಟಿಕೆಟ್ ಕೊಡಿಸುವಲ್ಲಿ ಸಹಕರಿಸಿದರು .ಟಿಕೆಟ್ ಪಡೆದ ನಾನು ಮತ್ತು ಅಪ್ಪ ನೇರವಾಗಿ ಚೌಕಿಯತ್ತ ನಡೆದೆವು . ಅಲ್ಲಿ ದೇವರ ಪ್ರಸಾದ ಪಡೆದ ಮೇಲೆ ಕಲಾವಿದರು ವೇಷ ಹಾಕುವುದನ್ನು ಅಪ್ಪ ತೋರಿಸಿದರು . ನಮ್ಮ ಊರಿನ ಸಮೀಪದವರೇ ಅದ ಎಂಪೆಕಟ್ಟೆ ರಾಮಯ್ಯ ರೈಗಳು ಅಪ್ಪನನ್ನು ಕಂಡು "ನಮಸ್ಕಾರ ಅಣ್ಣೆರೆ ಎಂಚ ಉಲ್ಲರ್ ?" ಅಂತ ಕೇಳಿದರು. ಅವರ ಪೆಟ್ಟಿಗೆಯ ಮೇಲೆ ಕುಳಿತು ಸ್ವಲ್ಪ ಹೊತ್ತು ಕುಶಲೋಪರಿ ಮಾತನಾಡಿದ ಬಳಿಕ ಅಪ್ಪ ಅವರನ್ನು ತೋರಿಸಿ ಇವತ್ತು ದೇವೇಂದ್ರನ ವೇಷ ರಾಮಯ್ಯಂದು ಎಂದು ಹೇಳಿದರು. ಬಳಿಕ ಉಳಿದ ಪರಿಚಯದ ಕಲಾವಿದರಿಗೆ ಕಿರು ನಗೆ ಬೀರಿ ನನ್ನನು ಕರೆದುಕೊಂಡು ಟೆಂಟಿನ ಒಳಗೆ ಕಬ್ಬಿಣದ ಕುರ್ಚಿಯಲ್ಲಿ ದಿನಕರ ಮಾಸ್ತರ ಪಕ್ಕ ಕುಳ್ಳಿರಿಸಿ "ಉದಿಯಪ್ಪಗ ಮಾಸ್ತರೊಟ್ಟಿ೦ಗೆ ಬಾ " ಹೇಳಿ ಆದೇಶಿಸಿ ಅಪ್ಪ ಬೀಳ್ಗೊಟ್ಟರು.
ಅಷ್ಟೊತ್ತಿಗಾಗಲೇ ಕೇಳಿ ಬಡಿಯಲು ಆರಂಭಿಸಿದ್ದ ಮೇಳದವರು ಮುಕ್ತಾಯ ಮಾಡಿದಾಗ ಸಂಗೀತಗಾರ ಸಂಗೀತ ಆರಂಭಿಸಿದ್ದರು.
ಸರಿಯಾಗಿ ಹತ್ತು ಗಂಟೆಗೆ ಪುತ್ತಿಗೆ ರಘುರಾಮ ಹೊಳ್ಳರು ರಂಗಸ್ಥಳಕ್ಕೆ ಬಂದು ದೇವೇಂದ್ರನ ಒಡ್ಡೋಲಗ ಆರಂಭಿಸಿದರು . ನಿಜಕ್ಕೂ ಯಕ್ಷಲೋಕದ ಅನಾವರಣ ಆರಂಭಗೊಂಡಿತ್ತು !
ಆ ದಿವಸ ಸಮುದ್ರ ಮಥನ ಪ್ರಸಂಗದ ವಿಶೇಷ ಆಕರ್ಷಣೆಯಾಗಿ ಉಜಿರೆಯ "ಕೃಷ್ಣ " ಆನೆಯನ್ನು ಸಿಂಗರಿಸಿ ತರಲಾಗಿತ್ತು . ದೇವೇಂದ್ರನ ಒಡ್ಡೋಲಗದ ಬಳಿಕ ದೇವೇಂದ್ರ -ದೇವತೆಗಳೆಲ್ಲ ವಿಹಾರಕ್ಕೆ ಐರಾವತ ಏರಿ ಹೊರಡುವ ದೃಶ್ಯದ ಸಮಯಕ್ಕೆ ಟೆಂಟಿನ ಒಂದು ಬದಿಯನ್ನು ಬಿಡಿಸಿ ಆನೆಯ ಮೇಲೆ ನಮ್ಮ ಎಂಪೆಕಟ್ಟೆಯವರು ದೇವೆಂದ್ರನಾಗಿ ಬರುವಾಗ ಸಿಡಿಮದ್ದು ಬ್ಯಾಂಡು ಸಮೇತ ರಂಗದ ಬದಿಗೆ ಬರುವಾಗ ಕುತೂಹಲದಿಂದ ನೋಡುತ್ತಿದ್ದ ನಾನು ಕುರ್ಚಿಯಿಂದ ಜಾರಿ ನೆಲಕ್ಕೆ ಬಿದ್ದೆ ! ಮಾಸ್ತರರು ಕೂಡಲೇ ಕೈ ಹಿಡಿದು ಎತ್ತಿ ಸ್ವಸ್ಥಾನಕ್ಕೆ ಕೂರಿಸಿದರು. ರಾತ್ರಿ ೨ ರ ಸಮಯ ಪುತ್ತೂರು ನಾರಾಯಣ ಹೆಗಡೆಯವರ ಬಲಿ ಯ ಪಾತ್ರದ ಜೊತೆಗೆ ಕಡತೋಕ ಮಂಜುನಾಥ ಭಾಗವತರ ಪದ್ಯ !
ಜೊತೆಗೆ ಮೂಕಾಸುರನ ಪ್ರವೇಶ !
ನಿಜಕ್ಕೂ ಅದೊಂದು ಅವಿಸ್ಮರಣೀಯ ಕ್ಷಣ .
ವಿಚಿತ್ರ ಬಣ್ಣಗಾರಿಕೆ ಹಾಗೂ ಮಾತಿನ ಮೋಡಿಯಿಂದ ಮೂಕಾಸುರನಾಗಿ ಕಾಣಿಸಿಕೊಂಡ ನಯನ ಕುಮಾರ್ ಅದ್ಬುತವಾಗಿ ಅಭಿನಯಿಸಿದ್ದರು . ಕುಂಬಳೆ ಸುಂದರ ರಾವ್ ಅವರ ವಿಷ್ಣು ,ಶ್ರೀಧರ ರಾಯರ ಲಕ್ಷ್ಮಿ ಇಂದಿಗೂ ಕಣ್ಣ ಮುಂದೆ ಕಾಣುತ್ತಿದೆ.
ಬೆಳಗಿನ ವರೆಗೂ ಕಣ್ಣು ಮುಚ್ಚದೆ ಆಟ ನೋಡಿದ್ದೇ ನೋಡಿದ್ದು !
ಮಂಗಳ ಪದ ಹಾಡುತ್ತಿದ್ದಂತೆ ಮಾಸ್ತರರು " ಇನ್ನು ಮನೆಗೆ ಹೊಪೋ " ಹೇಳಿ ನನ್ನನ್ನು ಹೊರಡಿಸಿದರು .
ರಾತ್ರಿ ಬರುವಾಗ ಇದ್ದ ಉತ್ಸಾಹ ಬೆಳಗಾದಾಗ ನಿದ್ದೆಯ ಝಳದಲ್ಲಿ ಇರಲಿಲ್ಲ . ಹೇಗೂ ರವಿವಾರ ಮನೆಗೆ ಬಂದವನೇ ಮುಖ ತೊಳೆದು ತಿಂಡಿ ತಿಂದು ಚಾಪೆಯಲ್ಲಿ ಮಲಗಿದಗಲೂ ಕಿವಿಯಲ್ಲಿ ಚೆಂಡೆ ಶಬ್ದ ಕೇಳಿದ ಅನುಭವ !
ಅಹಾ !
ಮಲಗಿ ಚೆನ್ನಾಗಿ ನಿದ್ದೆ ಹೊಡೆದ ನನಗೆ ಮದ್ಯಾನ ಊಟಕ್ಕೆ ಅಮ್ಮ ಎಚ್ಚರಿಸಿದಾಗಲೇ ಎಚ್ಚರವಾದದ್ದು. ಆಮೇಲೆ ಸ್ನಾನ ಮಾಡಿ ಊಟ
ಮುಗಿಸಿ ಮರಳಿ ನಿದ್ದೆ !
ನಾಲ್ಕುವರೆಗೆ ವಸಂತ ಮೂಲ್ಯ ಬಂದು ಆಟ ಅದಲು ಕರೆದಾಗಲೇ ಎಚ್ಚರ .
ಮುಳಿ ಗುಡ್ಡೆಗೆ ಹೋಗಿ ನಿನ್ನೆ ನೋಡಿದ ಆಟವನ್ನೇ ಮರುಪ್ರದರ್ಶನ !
ನಾನೆ ದೇವೇಂದ್ರ , ವಸಂತನೇ ಬಲಿ . ಬೂಬನೆ ಭಾಗವತ , ತೂತಾದ ಡಬ್ಬಿಯೇ ಚೆಂಡೆ !
ನಾಯಿ ಬಟ್ಟಲೆ ಜಾಗಟೆ !
ಕೊತ್ತಲಿಗೆಯನ್ನು ಹಿಡಿದುಕೊಂಡು ನಮ್ಮ ಯುದ್ಧ !

ಇಂದಿಗೂ ನನಗಿಂತ ಆಟ ಮರಳಿ ಸಿಕ್ಕಿಲ್ಲ .
ಎಲ್ಲಿ ಹೋಯಿತೋ ಆ ಯಕ್ಷಲೋಕದ ವಿಹಾರದ ಸಿಹಿ ದಿನಗಳು ??
ಇನ್ನು ಸಿಗಲಾರವೇ?
ತವಕದಲ್ಲಿ ಕಾಯುತ್ತಿರುವೆ .......


***