Friday, October 23, 2009

ಮತ್ತೆ ಕಳೆಯಿತು ದೀಪಾವಳಿ....




ದೀಪಾವಳಿ ಬರುತ್ತಿದ್ದಂತೆ ಮನೆಗಳಲ್ಲಿ ಸಡಗರ ಸಂಭ್ರಮ . ಮಕ್ಕಳೆಲ್ಲ ಸೇರಿ ಪಟಾಕಿಗಳನ್ನು "ಸಂಪಾದಿಸುವ " ಲೆಕ್ಕಾಚಾರ ಹಾಕಿ ಅಪ್ಪನಿಗೆ ತಿಳಿಸಲು ಅಮ್ಮನಲ್ಲಿ "ಮಸ್ಕ" ಹಾಕುವ ನಾನಾ ಉಪಾಯಗಳನ್ನು ಮಾಡುತ್ತಿದ್ದ ಕಾಲ . ಅಕ್ಕಂದಿರೆಲ್ಲ ಸೇರಿ ಮಹಿಳಾ ಮಂಡಲದಿಂದ ತಂದ ಬಗೆ ಬಗೆಯ ಕಾದಂಬರಿಗಳನ್ನು ಓದಿ ಮುಗಿಸುವ ತರಾತುರಿಯಲ್ಲಿದ್ದರೂ ತಿಂಡಿ ತಯಾರಿಸುವ ಕಾಯಕದಲ್ಲಿ ಪುಸ್ತಕ ಹಿಡಿದೇ ಭಾಗಿಗಳಾಗುತ್ತಿದ್ದುದು ಒಂದೆಡೆಯಾದರೆ ಅಪ್ಪನ ಮಿತ್ರರು ಸಂಜೆಯ ಹೊತ್ತಿನಲ್ಲಿ ಈ ಸರ್ತಿ ಧರ್ಮಸ್ಥಳ ಮೇಳದ ಹೊಸ ಪ್ರಸಂಗ ಯಾವುದು? ಯಾರೆಲ್ಲ ಕಲಾವಿದರು ? ಎಲ್ಲಿ ಪ್ರದರ್ಶನ ? ಇತ್ಯಾದಿ ಚರ್ಚೆಯಲ್ಲಿ ತೊಡಗುತ್ತಿದ್ದರು.


ಗುಡ್ಡೆಯ ಮುಳಿ ಹುಲ್ಲು ಕಟಾವಿಗೆ ಬಂದು , ನೆಲ್ಲಿಕಾಯಿ ಮರದಲ್ಲಿ ಪೀಚುಗಾಯಿ ಬಲಿಯುವ ಸಮಯ .... ತೋಟದ ಬದಿ ದಾಟಿ ಆ ಕಡೆಯ ಗುಡ್ಡದ ನೆಲ್ಲಿಕಾಯಿ ಮರಕ್ಕೆ ದಿನಕ್ಕೊಮ್ಮೆಯಾದರೂ ಬಲಿ ಬರದೆ ಇದ್ದರೆ " ಅದೇನೋ" ಕಳಕೊಂಡ ಅನುಭವ !


ಬೆಳಗ್ಗೆ ನಾವು ಏಳುವ ಮೊದಲೇ "ಮೋತಿ " ಮತ್ತು "ದಾಸು" ಎಂಬ ಶುನಕೋತ್ತಮರು ಚಿಕ್ಕಿನ ಮರದ ಕೆಳಗೆ ಬಿದ್ದ ಮರದಲ್ಲೇ ಹಣ್ಣಾದ ಚಿಕ್ಕಿನ ಹಣ್ಣನ್ನು ಸವಿದು ಮೆಲ್ಲನೆ "ಸುಭಗರಂತೆ " ಬಂದು ಬೆಳಗ್ಗಿನ ತಿಂಡಿಗೋಸ್ಕರ ಕಾಯುತ್ತಿದ್ದರೆ, ಚಿಕ್ಕ ಕೊಕ್ಕೆಯನ್ನು ಹಿಡಿದು ಮರದ ಬಳಿಗೆ ಹೋಗುವ ಅಮ್ಮ ಒಂದು ಹಣ್ಣು ಸಿಕ್ಕರೆ ಸಣ್ಣ ಮಗನಿಗೆ ಕೊಡಬಹುದೆಂಬ ಲೆಕ್ಕಾಚಾರ ಹಾಕುತ್ತಿದ್ದರೆ, ಚಿಕ್ ಚಿಕ್ ಚೀವ್ ಎಂದು ಮರವೇರುವ ಅಳಿಲು ಅಣಕಿಸುವಂತೆ ಓಡುತ್ತಿತ್ತು .

ಹಟ್ಟಿಯಿಂದ "ಕಮಲಿ" ತನ್ನ ಮಗಳು ನಂದಿನಿಯ ಬೆನ್ನನ್ನು ನೆಕ್ಕುತ್ತ ಶುಭ್ರ ಮಾಡುತ್ತಿದ್ದಾರೆ , ಕೆಲಸದ ಸಂಕಪ್ಪಣ್ಣ ತುಂಡು ಬೀಡಿಯನ್ನು ಸೇದುತ್ತ ಅದರ ಕೊನೆಯ ರಸಾಸ್ವಾದನೆ ಮಾಡುತ್ತ ಕತ್ತಿ ಮಸೆಯಲು ಕೂರುತ್ತಿದ್ದ. ಅದಾಗಲೇ ಆ ದಿನದ ಕೆಲಸವೇನೆಂದು ಅಪ್ಪ ಹೇಳಿ ಬಿಡುತ್ತಿದ್ದರೆ ನಾವೆಲ್ಲ "ಸ೦ಕಪ್ಪಣ್ಣ ಒಂದು ಗೂಡು ದೀಪ ಮಾಡಿ ಕೊಡೆಕ್ಕು " ಎಂಬ ಅಪ್ಪಣೆಯನ್ನು ನೀಡುತ್ತಿದ್ದರೆ "ದೇಶಾವರಿ ನಗೆ " ಬೀರುತ್ತ "ಆತು ಅಬ್ಬೋ ಮತ್ತೆ ಮಾಡಿ ಕೊಡ್ತೆ !" ಎಂದು ಹೇಳುವಲ್ಲಿವರೆಗೆ ನಮ್ಮ ಕಾಟ ತಪ್ಪುತ್ತಿರಲಿಲ್ಲ ! ಮಾದೇರಿ ಬಳ್ಳಿಯಿಂದ ತಯಾರಿಸಿದ ಗೂಡು ದೀಪಕ್ಕೆ ನಾನಾ ಬಣ್ಣದ ಕಾಗದವನ್ನು ಅಂಟಿಸಿ ಅದರೊಳಗೆ ಒಂದು ಉರಿಯುವ ಹಣತೆಯಿಟ್ಟರೆ ರಾತ್ರಿಯಲ್ಲಿ ಕಾಣುವ ಸೊಬಗೇ ಬೇರೆ !



ಮಧ್ಯಾಹ್ನ ಊಟ ಕಳೆದು ಅಪ್ಪ ಕಿರು ನಿದ್ದೆಗೆ ಜಾರಿದಾಗ ಏನೆಲ್ಲಾ ಪಟಾಕಿ ಎಲ್ಲಿ ಸಿಗುತ್ತದೆ ? ಇತ್ಯಾದಿಯ ಬಗ್ಗೆ ಸವಿವರವಾದ ಚರ್ಚೆ ಅಣ್ಣನೊಡನೆ ಆದ ಬಳಿಕ ಅಪ್ಪ ಏಳುವುದನ್ನೇ ಕಾಯುವ ತವಕ . ಎದ್ದ ಮೇಲೆ ಪೇಟೆಗೆ ಹೋಗುವಾಗ ಜತೆಯಲ್ಲಿ ಯಾರು ಹೋಗುದು ? ಎಂಬ ವಿಚಾರ ಬಂದಾಗ ಅನುಭವೀ ಅಣ್ಣನೆ ಹೋಗುವುದೊಳಿತು ಎಂಬ ನಿರ್ಧಾರವೂ ಆಗಿರುತ್ತಿತ್ತು.

ಅಪ್ಪ ಎದ್ದು ಮುಖ ತೊಳೆದು ಅಮ್ಮ ಕೊಟ್ಟ ಚಹಾ ಸೇವಿಸಿ "ಚೀಲ ತಾ " ಎಂದಾಗ ಓಡಿ ಹೋಗಿ ಚಡ್ಡಿ ಅಂಗಿ ಸಿಕ್ಕಿಸಿಕೊಂಡ ಅಣ್ಣ ಅಪ್ಪನೊಡನೆ ಹೊರಟಾಗ ದೂರದಿ೦ದಲೇ ಅಸೆಗಣ್ಣಿನಿ೦ದ "ಬೇಗ ಬರೆಕ್ಕು ಆತಾ? " ಎಂದು ಹೇಳಿ ಕಳುಹಿಸಿದ ಮೇಲೆ ಕ್ಷಣವೊಂದು ಯುಗವಾದ ಅನುಭವ !

ಅಣ್ಣ ಹೇಳಿದ ಎಲ್ಲ ಪಟಾಕಿ ತರುತ್ತಾನೋ ಇಲ್ಲವೋ ? ಒಂದು ವೇಳೆ ಪೈಗಳ ಅಂಗಡಿಯಲ್ಲಿ ಪಟಾಕಿ ಮುಗಿದಿದ್ದರೆ ? ಇತ್ಯಾದಿ ಮನದಲ್ಲಿ ಸ್ವಲ್ಪ ತಳಮಳ ... ಅಣ್ಣ ಎಲ್ಲ ಪಟಾಕಿ ತಂದರೆ ಯಾವುದರ ಬಳಿಕ ಯಾವುದು? ಬಿಡುವುದು ಇತ್ಯಾದಿ ಕಲ್ಪನಾಲೋಕ ದಲ್ಲಿ ವಿಹರಿಸಿ ಅಮ್ಮನಲ್ಲಿ "ಅಪ್ಪ ಎಷ್ಟು ಹೊತ್ತಿಂಗೆ ಬಕ್ಕು ?" ಎಂದು ಕೇಳಿ ಎರಡು ಬೈಗುಳ ತಿನ್ನುವುದರ ಹಿತ ಬಲ್ಲವನಿಗೆ ಗೊತ್ತು!

ಅಂತೂ ಸಂಜೆಯ ಹೊತ್ತಿಗೆ ಅಂತೂ ಸಂಜೆಯ ಹೊತ್ತಿಗೆ ಅಪ್ಪನ ಸಮೇತ ಅಣ್ಣ ದೂರದ ಗೇಟಿನ ಬಳಿ ಪ್ರತ್ಯಕ್ಷವಾದಾಗ ಓಡಿ ಹೋಗಿ "ಎಲ್ಲ ಸಿಕ್ಕಿದ್ದ ?" ಎಂದು ಸಡಗರದಿಂದ ಕೇಳಿ ಹ್ನೂ ... ಎಂಬ ಉತ್ತರ ಪಡೆದಾಗ ಏನೋ ತೃಪ್ತಿ ...

ಸೂರ್ಯಾಸ್ತವಾದ ಬಳಿಕ ಅಮ್ಮ ದೀಪ ಹಚ್ಚಿದ ಕೂಡಲೇ ಅಪ್ಪ ಸ್ನಾನಕ್ಕೆ ಹೋಗಿ ಬಂದು ಪೂಜೆ ಮುಗಿಸುದನ್ನೇ ಕಾದು ಕುಳಿತು ಬಹು ನಿರೀಕ್ಷಿತ ಪಟಾಕಿ ಬಿಡುವ ಕಾರ್ಯಕ್ರಮ ಆರಂಭವಾಗುತ್ತಿತ್ತು. ದೊಡ್ಡ ಶಬ್ದದ ಪಟಾಕಿ ಅಪ್ಪನಿಗೆ , ನೆಲಚಕ್ರ , ಹೂ ಕುಂಡ ಇತ್ಯಾದಿ ಅಣ್ಣನಿಗೆ ಸಿಕ್ಕರೆ ನಕ್ಷತ್ರ ಕಡ್ಡಿಗಳ ಒಡೆತನ ನನ್ನ ಪಾಲಾಗುತ್ತಿತ್ತು!

ಅಪ್ಪನ ಜೇಬಿನ ದುಡ್ಡುಗಳೆಲ್ಲವು
ಚಟ ಪಟಗುಟ್ಟುತ ಸಿಡಿಯುವುವು
ಒಪ್ಪದ ನೀತಿಯ ಮಾತುಗಳೆಲ್ಲ
ತಪ್ಪದೆ ದಾರಿಯ ಹಿಡಿಯುವುವು

ಎಂದು ಕವಿ ಪುಂಗವರೊಬ್ಬರು ಹೇಳಿದರೂ ಪಟಾಕಿ ಬಿಡುವ ಆನಂದ ಬಹುಶ ಅವರು ಸವಿದಿರಲಿಕ್ಕಿಲ್ಲ ಎಂಬ ಸತ್ಯಾ೦ಶವನ್ನೂ ಹೊರಗೆಡಹುತ್ತದೆಯಷ್ಟೆ?

ಏನಿದ್ದರೂ ನಿರ್ಮಲ ಮನಸ್ಸಿನ ಬಾಲ್ಯದಲ್ಲಿ ಮನೆಯವರೆಲ್ಲ ಸೇರಿ ಗೌಜಿ ಗದ್ದಲದೊಂದಿಗೆ ಪಟಾಕಿ ಸಿಡಿಸಿ ಆನಂದಿಸಿದ್ದು ಬಹುಕಾಲ ಸ್ಮರಣೀಯ.

****

ಹೈಸ್ಕೂಲ್ ದಿನಗಳಲ್ಲೋ ಪಟಾಕಿಯ ಸೆಳೆತ ಕಡಿಮೆಯೇನಲ್ಲ ... ಆಗಂತೂ ಅಪ್ಪನಿಗೆ ಕಾಯುವ ಅವಶ್ಯವಿಲ್ಲ ... ಪಟಾಕಿ ಎಲ್ಲಿ ಸಿಗುತ್ತದೆ.. ಎಷ್ಟು ತರಬೇಕು ಎಲ್ಲ ನಮ್ಮದೇ ಪಾರುಪತ್ಯ ...
ಅಕ್ಕಂದಿರೋ ತಮ್ಮ ಪದವಿ ಪರೀಕ್ಷೆಗಳ ತರಾತುರಿಯಲ್ಲಿದ್ದರೆ ಹಬ್ಬದ ಆಚರಣೆ ನಿರಾತಂಕ... !

ಶಾಲೆಯಲ್ಲಿ ಯಕ್ಷಗಾನದ ತರಗತಿಗಳು ; ಮನೆಯಲ್ಲಿ ಅಭ್ಯಾಸ....ಮಧ್ಯೆ ಮಧ್ಯೆ ಗಣಿತದ ಮೇಸ್ಟ್ರ ಮನೆಲೆಕ್ಕದ ಹಾವಳಿ ! ಬರೆದೂ ಬರೆದೂ ಸುಸ್ತಾಗುವಷ್ಟು ನೋಟ್ಸ್ ಗಳು ಅಯ್ಯಪ್ಪಾ ಸಾಕು ಸಾಕು ....

ಹೀಗಿದ್ದರೂ ದೀಪಾವಳಿ ಕಳೆಯುವುದನ್ನೇ ಕಾಯುತ್ತಿದ್ದುದು "ಉದಯವಾಣಿಯಲ್ಲಿ " ಬರುವ ಧರ್ಮಸ್ಥಳ ಮೇಳದ "ವೇಳಾ ಪಟ್ಟಿ"ಗೆ !
ಯಾವುದಿರಬಹುದು ಹೊಸ ಪ್ರಸಂಗ ? ಯಾರದಿರಬಹುದು ಕಥೆ ?

ಸುರತ್ಕಲ್ ಮೇಳದವರದ್ದೇನು ಪ್ರಸಂಗ ? ಜೋಗಿ -ಸುಂದರಣ್ಣನ ಜೋಡಿಗೆ ಪದ್ಯಾಣ ಗೆಣಪ್ಪಣ್ಣನ ಪದ! ಶ್ರೀನಿವಾಸ ಕಲ್ಯಾಣ ಪ್ರಸಂಗ ! ಇತ್ಯಾದಿ ಕಾತರ ... ಕುತೂಹಲ...

ಇದರ ಮಧ್ಯೆ ಆಚೆ ಮನೆ ಪೋಸ್ಟ್ ಮಾಸ್ತರ ಮಗಳು ಎಲೆಕ್ಟ್ರಿಸಿಯನ್ ಜೊತೆ ಓಡಿ ಹೋದ ಬಿಸಿ ಬಿಸಿ ರಂಗು ರಂಗಿನ ಸುದ್ದಿ...!

ಇನ್ನೊಂದೆಡೆ ಆಗಷ್ಟೇ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದ್ದ "ದೊಡ್ಡವರ ಚಂದಮಾಮ " "ದೊಡ್ಡವರ ಬಾಲಮಂಗಳದ " ರಸಭರಿತ ಕಥೆಗಳ ಗುಟ್ಟಾದ ವಿನಿಮಯ !

ದೀಪಾವಳಿ ರಂಗೇರಿಸುತ್ತಿದ್ದುದಂತೂ ಸತ್ಯ !

****

ಕಾಲೇಜು ದಿನ ಮುಗಿದು ಅಕ್ಕಂದಿರಿಗೆ ಮದುವೆ ಕಳೆದು ಮತ್ತೆ ಅಕ್ಕ ಭಾವಂದಿರಿಗೆ ಮನೆಯಲ್ಲಿ ಹೊಸ ದೀಪಾವಳಿ ...
ಆಗ ಸೆಮಿಸ್ಟರ್ ಪರೀಕ್ಷೆ ನೆಪದಲ್ಲಿ ಗೈರು ಹಾಜರಿ...!

****

ಪದವಿ ಮುಗಿದು ಕೆಲಸದ "ಗಾಣಕ್ಕೆ " ಹೆಗಲು ನೀಡಿದ ಮೇಲೆ ಅಕ್ಕನ ಮಕ್ಕಳೆಲ್ಲ ಮನೆ ತುಂಬಾ ಗುಲ್ಲೆಬ್ಬಿಸುತ್ತಿದ್ದು "ಮಾಮ ಯಾವಾಗ ಬತ್ತೆ?" ದೂರವಾಣಿ ಕರೆ ....!

ಮತ್ತೆ ಬಂತು ದೀಪಾವಳಿ....

ಎಲ್ಲರೊಡನೆ ಬೆರೆಯಲು ನಾಲ್ಕು ದಿನ ಸವಿಯುಣ್ಣಲು ಹರಸಾಹಸ ಮಾಡಿ ಮೆಜೆಸ್ಟಿಕ್ ದಾರಿ ಹಿಡಿದರೆ ......

"ಸೂಜಿ ಮೊನೆ ಊರುವಷ್ಟು..."
ಜಾಗವಿಲ್ಲ ಜನ ದಟ್ಟಣೆ ... ಬಸ್ಸಿನ ಕಿಟಕಿ ಮೂಲಕ ಒಳ ನುಗ್ಗಿ ಸೀಟ್ ಹಿಡಿದಾಗ ಬರುವುದು "ಉಸ್ಸಪ್ಪಾ" ಎಂಬ ದೀರ್ಘ ಸಮಾಧಾನದ ಉಸಿರು !

ಅಯ್ಯೋ ಎಂಥಾ ಕೆಟ್ಟ ರಸ್ತೆ.... ಘಾಟಿ ರಸ್ತೆಯಂತೂ ಹೇಳಿ ಪ್ರಯೋಜನವಿಲ್ಲ ...ಅದೇ ಹೊ೦ಡ .... ಅದೇ ಗುಂಡಿ ...!

ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಿದರೂ ಕಾಮಗಾರಿ ಯಾಕೋ ಇನ್ನೂ ನಡೆದೇ ಇಲ್ಲ ...!

ಬೆಳಗ್ಗೆ ಮನೆ ಸೇರಿದಾಗ ಕೊನೆಯ ಸೀಟ್ ನಲ್ಲಿ ಕುಳಿತ ಪರಿಣಾಮ ! ಸೊಂಟದ ಕೀಲುಗಳೆಲ್ಲ "ಸಂಗೀತ " ಹೇಳಲು ತೊಡಗುತ್ತದೆ ..

ಮನೆ ಸೇರಿದ ಮೇಲೆ ತಲೆಗೆ ಎಣ್ಣೆ ( ಹೊಟ್ಟೆಗಲ್ಲ..... ! ) ಹಚ್ಚಿ ಹಂಡೆಯಲ್ಲಿ ಕಾದ ಬಿಸಿ ನೀರಿನ ಸ್ನಾನವಾದಾಗ ಒಮ್ಮೆ ಹಾಯ್ ಎನಿಸಿ ಮಕ್ಕಳೊಡನೆ ಮಕ್ಕಳಾಗುವ ಹಿತ ಏನು ಚೆನ್ನ !

ಈಗಲಂತೂ ಎಲ್ಲರೂ ಸೇರುವ ಸಾದ್ಯತೆ ಇಲ್ಲ .... ಒಬ್ಬರಿಗೆ ತಿಂಗಳ ಟಾರ್ಗೆಟ್ .... ಇನ್ನೊಬ್ಬರಿಗೆ ಇನ್ನೊದು ತುರ್ತು ... ಅದರೂ ಸೇರಿದ ನಾಲ್ಕು ಜನ ಮಜಾ ಮಾಡಿ ಪಟಾಕಿ ಬದಲು ಉಳಿದವರ ಹೊಟ್ಟೆ ಉರಿಸಿ ಸಂತಸ ಪಡುವ ಕಾಲ !

ಹೊಸ ಮೇಳ ... ಹೊಸ ಆಡಳಿತ ...
ಹಳೆ ಚುಂಡಿ ಕಲಾವಿದರು ಮುಖ್ಯ ಪಾತ್ರಧಾರಿಗಳು !
ಹಾಡಿದ್ದೇ ಹಾಡು ಮಾಡಿದ್ದೇ ಆಟ !


ಎಲ್ಲ ಕಾಲಸ್ಯ ಕುಟಿಲಾಗತಿ... ..!




ಏನಿದ್ದರೂ ..... ಹೇಗಿದ್ದರೂ ..

ಮತ್ತೆ ಹೊಸತನ ... ಹೊಸ ಬಾಂಧವ್ಯ ... ಚಿಗುರೊಡೆಯುವ ಸಂಭವ ....
ಹೊಸ ಆಸೆ ... ಹೊಸ ಕಾತರ ... ನಿರೀಕ್ಷೆಗಳನ್ನು ಬಿಟ್ಟು ಮತ್ತೆ ಕಳೆಯಿತು ದೀಪಾವಳಿ....

ಅಲ್ಲವೇ ?

****