Thursday, November 12, 2009

ತೆಂಕಬೈಲು ಹಾಡಿದರೆಂದರೆ...


ರವಿವಾರದ ಸುಂದರ ಸಂಜೆಯ ಹೊತ್ತು ಪುಸ್ತಕ ತಿರುವಿ ಹಾಕುತ್ತಾ ಧ್ವನಿ ಸುರುಳಿಯ ಯಕ್ಷಗಾನ ಹಾಡುಗಳನ್ನು ಕೇಳುತ್ತಾ ಇದ್ದ ನನಗೆ ಹಿರಿಯ ಕವಿಯೊಬ್ಬರು ಗದುಗಿನ ನಾರಣಪ್ಪನವರ ಕುರಿತು

" ಕುಮಾರವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿಯುವುದು ..."

ಎಂದು ಹೇಳಿದ್ದನ್ನು ಓದಿದಾಗ ಅನಿಸಿದ್ದು ,
ಯಾವನೇ ಯಕ್ಷಗಾನ ಅಭಿಮಾನಿ ಇರುತ್ತಿದ್ದರೆ ಕೆಳಗಿನ ಸಾಲನ್ನು ಹೇಳುತ್ತಿದ್ದ ಅನಿಸಿತ್ತು .

ತೆಂಕಬೈಲು (ಮನಸ್ಸಿಟ್ಟು) ಹಾಡಿದರೆಂದರೆ
ಪ್ರಸಂಗವು ಕಣ್ಣಲಿ ಕುಣಿಯುವುದು
ನಿತ್ಯವೂ ಮನವನು ಕಾಡುವುದು !

ಇನ್ನಾರೆನ್ನನು ಗುಣದಲಿ ಬಣ್ಣಿಸಿ ಮನ್ನಿಸಿ ಕರೆವರು...... ಎಂದು ಸುಶ್ರಾವ್ಯ ಕಂಠದಲ್ಲಿ ಭಾವಪೂರ್ಣವಾಗಿ ಶಾಸ್ತ್ರಿಯವರು ಹಾಡುತ್ತಿದ್ದರೆ ಎಂಥವನೇ ಆದರೂ ಪದ್ಯದ ಲಯದೊಂದಿಗೆ ಲೀನವಾಗಿ ಹೋಗುವಂಥ ಸನ್ನಿವೇಶ ನಿರ್ಮಾಣವಾಗಿರುತ್ತದೆ . ಒಬ್ಬ ಅಪೂರ್ವ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಶ್ತ್ರಿಯವರ ಬಗ್ಗೆ ಕೆಲವೊಂದು ವಿಚಾರಗಳನ್ನು ಬರೆಯಬೇಕೆಂದು ಅನಿಸಿದ್ದು ಅವರ ಉತ್ಕೃಷ್ಠ ಪದ್ಯಗಳನ್ನು ನಿರಂತರ ಆಸ್ವಾದಿಸಿದ ಮೇಲೆ...

ಒಮ್ಮೆಗೇ ಹೃನ್ಮನಗಳನ್ನು ಸೂರೆಗೊಳ್ಳಬಲ್ಲ ಇವರು ತಮ್ಮದೇ ಆದ ಶೈಲಿಯನ್ನು ಬೆಳೆಸಿಕೊಂಡ ಅನನ್ಯ ಭಾಗವತ . ಶೃಂಗಾರ, ಕರುಣ ದು:ಖ ರಸದ ಪದ್ಯಗಳನ್ನು ಮನಮುಟ್ಟುವಂತೆ ಹಾಡುವ ಇವರು ತಮ್ಮ ವಿಶಿಷ್ಟ ಶೈಲಿಯಿಂದಾಗಿಯೇ ಕಲಾರಸಿಕರನ್ನು ಮತ್ತೆ ಮತ್ತೆ ಹಿತವಾಗಿ ಕಾಡುತ್ತಾರೆ !

ಹಾಗೆಂದು ತೆಂಕಬೈಲುರವರ ಭಾಗವತಿಕೆಯ ಮೇಲೆ ನಿರೀಕ್ಷೆಯಿಟ್ಟು ಯಾವುದೇ ಕಾರ್ಯಕ್ರಮಕ್ಕೆ ಹೋಗುವಂತಿಲ್ಲ ! ಹಾಗೇನಾದರೂ ಹೋದಿರೋ ಆ ದಿನ "ಯಾಕಾದರೂ ಈ ಕೆಟ್ಟ ಹಾಡು ಕೇಳಲು ಬಂದೆನೋ " ಅನಿಸುವಸ್ಟೂ ಪದ್ಯಗಳನ್ನು ಕುಲಗೆಡಿಸಿ ಬಿಟ್ಟಾರು ! ಒಂದು ವೇಳೆ ಸಂಘಟಕನ ಅದೃಷ್ಟ ಶಾಸ್ತ್ರಿಯವರ ಉಲ್ಲಸದಾಯಕ ಮನಸ್ಸು ಜೊತೆ ಸೇರಿದರೆ ಅವರ ಶೈಲಿಯ ಉತ್ತುಂಗ ಸ್ಥಿತಿಯ ಅನಾವರಣವಾಗುತ್ತದೆ. ಅದರ ಸಹಜ ಸೌ೦ದರ್ಯವನ್ನು ಕಂಡ ಎಂಥ ಪ್ರೇಕ್ಷಕನೇ ಆದರೂ "ಸೈ " ಅನ್ನಲೇಬೇಕು . ಹಲವು ನೋವನ್ನು ಅನುಭವಿಸಿದರೂ ಮಾತೆಯೋರ್ವಳು ತಾನು ಪ್ರಸವಿಸಿದ ಮಗುವಿನ ಮೊಗವನ್ನು ನೋಡಿ ನೋವನ್ನು ಮರೆವಂತೆ ಹಿಂದೆ ಕೇಳಿದ ಎಲ್ಲಾ ಕೆಟ್ಟ ಪದ್ಯಗಳನ್ನೂ ಹೊಡೆದು ಹಾಕಿ ಬಿಡಬಲ್ಲ ಅಸಾಧಾರಣ ಸಾಮರ್ಥ್ಯ ತೆಂಕಬೈಲುರವರಲ್ಲಿ ಮಾತ್ರ ಕಾಣಬಹುದೇನೋ?

ದಕ್ಷಾಧ್ವರ-ಗಿರಿಜಾಕಲ್ಯಾಣ , ಇಂದ್ರಜಿತು ಕಾಳಗ , ತುಳಸಿ ಜಲಂಧರ , ಕಂಸವಧೆ ,ಕರ್ಣಪರ್ವ ,ಸುಧನ್ವ ಮೋಕ್ಷ , ಪಟ್ಟಾಭಿಷೇಕ , ವಿದ್ಯುನ್ಮತಿ ಕಲ್ಯಾಣ ,ಶರಸೇತು ಬಂಧನ ಮುಂತಾದ ಯಾವುದೇ ಪೌರಾಣಿಕ ಪ್ರಸಂಗಗಳನ್ನು ಲೀಲಾಜಾಲವಾಗಿ ಮೆರೆಸಬಲ್ಲ ಇವರ ಕುರಿತು ಹಿರಿಯ ಭಾಗವತರೊಬ್ಬರು ಹೇಳಿದ್ದು ಹೀಗೆ " ಶಾಸ್ತ್ರಿಯವರಲ್ಲಿ ವೃತ್ತಿಪರತೆಯ ಸ್ಥಿರತೆಯ ಕೊರತೆ ಇದೆ. ಅದೊಂದು ಬಿಟ್ಟರೆ ಯಾವ ಕ್ಷಣದಲ್ಲಾದರೂ ಸಿಡಿಲಮರಿಯ ಹಾಗೆ ಅವರು ವಿಜೃ೦ಭಿಸಿಯಾರು . ಅದು ಯಾವಾಗ ಅಂತ ತರ್ಕಿಸುವುದೇ ಕಷ್ಟ ". ಆದ್ದರಿಂದಲೇ ಅವರೊಬ್ಬ ಅನನ್ಯ (unique) ಭಾಗವತ ...!

ಅವರ ಶೈಲಿಯನ್ನು ಅನುಕರಿಸುವುದು ಅಸಾಧ್ಯ . ಅಪ್ಪನ ಶೈಲಿಯನ್ನು ಮಕ್ಕಳು ಅನುಸರಿಸುವುದು ಹಿರಿಯ ಭಾಗವತರ ಮನೆತನದಲ್ಲಿ ಕಾಣುತ್ತೇವೆ . ಆದರೂ ಇವರ ಮಗ ಅಪ್ಪನಂತೆ ಪ್ರಸಂಗವನ್ನು ಮೆರೆಸುವ ಕ್ರಮವನ್ನು ಕರಗತ ಮಾಡಿಕೊಳ್ಳಬೇಕಿದೆ . ಅವರ ಶೈಲಿಯ ಉತ್ತರಾಧಿಕಾರಿಗಳು ಅದನ್ನು ಸಮರ್ಥವಾಗಿ ಕಲಿತರೆ ಪ್ರೇಕ್ಷಕನಿಗಾಗುವ ಲಾಭ ಅಪರಿಮಿತ . ಸಮೀಪವರ್ತಿಗಳು ಹೇಳುವಂತೆ ತೆಂಕಬೈಲುರವರು ಶೀಘ್ರಕೋಪಿ (ದೂರ್ವಾಸರ ಕುಲದವರು !). ಅವರಿಗೇನಾದರೂ ಸ್ವರ ಬಿದ್ದರೆ "ಛೆ " ಮದ್ದಲೆ ಸರಿ ಇಲ್ಲೆ" ಎಂದು ಎದ್ದು ಹೋದದ್ದೂ ಇದೆ !

ದ್ವಂದ್ವ ಕಾರ್ಯಕ್ರಮ , ಯಕ್ಷ ಸಂಗೀತ ಕಾರ್ಯಕ್ರಮಗಳಲ್ಲಿ ಎದ್ದು ಕಾಣಿಸುವ ಇವರ ಬತ್ತಳಿಕೆಯಲ್ಲಿ ಅಪೂರ್ವ ರಾಗಗಳ ಸಂಗ್ರಹವೇ ಇದೆ. ಪ್ರಸಂಗವನ್ನು ಸರಿಯಾಗಿ ಅಧ್ಯಯನ ಮಾಡಿಯೇ ರಂಗವೇರುವ ಇವರು ಸದಾ ಮನಸೂರೆಗೊಳ್ಳುವ ಭಾಗವತರಲ್ಲಿ ಪ್ರಮುಖರು.




ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಜನಮಾನಸದಲ್ಲಿ ನೆಲೆಯಾಗಿರುವ ಇವರಿಗೆ ಹೆಚ್ಚಿನ ಅವಕಾಶ, ಪ್ರಚಾರಗಳು ದೊರಕದಿದ್ದರೂ, ಕೇಳುಗರ ಮನದಲ್ಲಿ "ಹಿತವಾಗಿ ಗಿರಕಿ ಹೊಡೆಯುವ " ಅಪೂರ್ವ ಕಲೆಗಾರಿಕೆ ಹೊಂದಿದ ಇವರ ಕಂಠದಲ್ಲಿ ಮೂಡಿ ಬಂದ
ದೇವಿ ಮಹಾತ್ಮೆಯ "ನೋಡಿದನು ಕಲಿ ರಕ್ತಬೀಜನು ....." ರಾವಣವಧೆಯ " ಕಂಡನು ದಶವದನ ...." ದಕ್ಷಾಧ್ವರದ "ಯಾತಕೆ ಬಂದೆನು ತಾನೇ
ಪಾತಕಿ ಮಾಡುವ ...." ಜಲಂಧರನ ಕಾಳಗದ " ಕೇಳು ಶ್ರೀರಮೆ ... ಕರುಣ ಸಾಗರೆ " ಕರ್ಣ ಪರ್ವದ "ಭಾನುಸುತ ರಥವಿಳಿದು ...." ಮುಂತಾದ ಪದಗಳು ಮತ್ತೆ ಮತ್ತೆ ಕೇಳುವಂತೆ ಮಾಡಿ ತಲೆಯಲ್ಲಿ ಹಿತವಾಗಿ ಸುತ್ತುತ್ತಾ , ಬಾಯಿಯಲ್ಲಿ ಗುನುಗುನಿಸುತ್ತಾ " ಕೊಂಡಾಟದ " ಅನುಭವವನ್ನು ನೀಡುತ್ತದೆ.

ಕೆಳಗಿನ ಕೊಂಡಿಯಲ್ಲಿ ತೆಂಕಬೈಲು ಶಾಸ್ತ್ರಿಯವರ ಹಾಡುಗಳನ್ನು ಕೇಳಿ ಆನ೦ದಿಸಬಹುದು .

http://oyakshagana.googlepages.com/audios.htm




ಏನಿದ್ದರೂ ಇಂಥ ಅಪೂರ್ವ ಕಲಾವಿದನ ಪದ್ಯಗಳ ಮಾದರಿ ಸಂಗ್ರಹವನ್ನು ಮಾಡಿ ಮುಂದಿನ ಪೀಳಿಗೆಗೆ ಉಳಿಸಿ ಇಡಬೇಕಾದ ಹೊಣೆಗಾರಿಕೆ ಇಂದು ಅವರ ಪದ್ಯಗಳನ್ನು ಆಸ್ವಾದಿಸುವ ಕಲಾರಸಿಕರಾದ ನಮ್ಮೆಲ್ಲರ ಗುರುತರ ಜವಾಬ್ದಾರಿಯಲ್ಲವೆ ?

***

Wednesday, November 11, 2009

ಪುಟಾಣಿಗಳ ಯಕ್ಷಲೋಕ



ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನ . ಹಲವು ಶತಮಾನಗಳ ಇತಿಹಾಸವಿರುವ ಈ ಕಲೆ ಆರಾಧನಾ ಕಲೆಯಾಗಿ ಆವಿರ್ಭವಿಸಿ , ಮನೋರಂಜನಾ ಕಲೆಯಾಗಿ ಬೆಳೆದು ಬಂದಿದೆ. ಗಂಡು ಮೆಟ್ಟಿನ ಕಲೆಯೆಂದೇ ಯಕ್ಷಗಾನ ಪ್ರಸಿದ್ದವಾದರೂ ಸ್ತ್ರೀಯರೂ ಇತ್ತೀಚಿಗೆ ಈ ಕಲೆಯನ್ನು ಮೈಗೂಡಿಸಿ ಪ್ರದರ್ಶನಗಳನ್ನು ನೀಡುತ್ತಿರುವುದನ್ನು ನಾವು ಇತ್ತೀಚಿಗೆ ಕಾಣುತ್ತಿದ್ದೇವೆ. ಇಂದಿನ ಮಕ್ಕಳೇ ಮುಂದಿನ ಜನಾಂಗ . ಇಂದು ಅಳಿದುಳಿದಿರುವ ಕಲೆಯನ್ನು ಮಕ್ಕಳಿಗೆ ಕಲಿಸಿ "ಬಿಡುವಿಲ್ಲದ" ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸುತ್ತಿರುವ ಹಲವು ಹಿರಿಯರನ್ನು ನಾವು ಮನಸಾ ಮೆಚ್ಚಲೇಬೇಕು .

ಮಕ್ಕಳಿಗೆ ಯಾವುದೇ ಕಲೆಯನ್ನು ಕಲಿಸುವುದು ಸುಲಭ . ನಿರ್ಮಲ ಮನಸ್ಸಿನಲ್ಲಿ ಒಳ್ಳೆಯ ವಿಚಾರವನ್ನು ಬಿತ್ತಲು ಬಾಲ್ಯವೇ ಸಕಾಲ. ಕಲಿಸಿದ ವಿಚಾರಗಳನ್ನು ಶೀಘ್ರವಾಗಿ ಕರಗತ ಮಾಡಿಕೊಳ್ಳಬಲ್ಲ , ಹೇಳಿಕೊಟ್ಟದ್ದನ್ನು ಚಾಚೂ ತಪ್ಪದೆ ಒಪ್ಪಿಸುವ ಕಲೆಗಾರಿಕೆಯುಳ್ಳ ಮಕ್ಕಳು ಉತ್ತಮವಾದ ಯಕ್ಷಗಾನ ಪ್ರದರ್ಶನ ನೀಡುವುದು ಸಂತಸದ ವಿಚಾರ .
ಮಕ್ಕಳ ಮೇಳ ಎಂದೇ ಪ್ರಸಿದ್ಧವಾಗಿರುವ ಸಾಲಿಗ್ರಾಮದ ಮಕ್ಕಳ ಮೇಳ ದೇಶ ವಿದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದೆ. ದಕ್ಷಿಣ ಕನ್ನಡದ ಹಲವಾರು ಶಾಲೆಗಳಲ್ಲಿ ಇಂಥ ಮಕ್ಕಳ ಮೇಳಗಳನ್ನು ಇಂದಿಗೂ ನಾವು ಕಾಣಬಹುದಾಗಿದೆ .
ಬೆಂಗಳೂರು , ಮುಂಬೈಯಂಥ ಮಹಾನಗರಗಳಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುವ ಕರಾವಳಿ ಕರ್ನಾಟಕ ಮೂಲದ ಪಾಲಕರ / ಪೋಷಕರ ಪರಿಶ್ರಮದಿಂದಾಗಿ ರೂಪುಗೊಂಡ ವೃತ್ತಿಪರ ಮಟ್ಟದ ಪ್ರದರ್ಶನವನ್ನು ನೀಡಬಲ್ಲ ಮಕ್ಕಳ ಮೇಳವಿರುವುದು ಹೆಮ್ಮೆಯ ವಿಷಯ.



ಮಕ್ಕಳ ಮನಸ್ಸಿನಲ್ಲಿ ಪೌರಾಣಿಕ ಜ್ಞಾನ , ಉತ್ತಮ ಸಂಸ್ಕಾರಗಳನ್ನು ಬೆಳೆಸುವಲ್ಲಿ ಇಂಥ ಪ್ರಯತ್ನಗಳು ಸಹಕಾರಿಯಾಗುತ್ತವೆ. ಹಿರಿಯ ಕಲಾವಿದರ ಮಾರ್ಗದರ್ಶನ , ಮುಖವರ್ಣಿಕೆ , ಪ್ರಸಂಗ ಸಾಹಿತ್ಯ ಪರಿಚಯವೇ ಮೊದಲಾದುವನ್ನು ಸರಿಯಾಗಿ ಸಮ್ಮಿಳಿತಗೊಳಿಸಿ ಮಕ್ಕಳಿಗೆ ಕಲಿಸಿದಲ್ಲಿ ಅವರ ಭಾಷಾ ಜ್ಞಾನ , ಮಾತುಗಾರಿಕಾ ಕೌಶಲ ಹೆಚ್ಚುವುದರೊಂದಿಗೆ ಯಕ್ಷಗಾನ ಕಲೆಯು ಜೀವಂತವಾಗಿ ಮುಂದಿನ ಪೀಳಿಗೆಯಲ್ಲೂ ಮುಂದುವರಿದು ಅದರ ರಸಾಸ್ವಾದನೆಗೆ ಅವಕಾಶವಾಗುತ್ತದೆ ಅಲ್ಲವೇ ?
***