Wednesday, December 23, 2009

ಕ್ಯಾಸೆಟ್ ಚೌರ್ಯ !

ಒಬ್ಬ ರಚಿಸಿದ ಯಾವುದೇ ಕೃತಿಯನ್ನು ಯಥಾವತ್ ಯಾ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಭಟ್ಟಿ ಇಳಿಸಿದರೆ ಅದನ್ನು ಕೃತಿ ಚೌರ್ಯ ಎನ್ನುತ್ತಾರೆ. ಕೆಲವರಂತೂ ಇತ್ತೀಚಿಗೆ ರಾಜಾರೋಷವಾಗಿ "ಇಂಥ ಕಡೆಯಿಂದ ಕದ್ದದ್ದು " ಎಂದು ತಮ್ಮ ಚೋರತನವನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಹೆಸರುವಾಸಿಯಾಗ ಬಯಸಿದರೆ ಇನ್ನು ಕೆಲವರು ಕೇವಲ ಹಣ ಸಂಪಾದನೆಯೇ ಗುರಿಯಾಗಿಸಿ ಕೃತಿ ಚೌರ್ಯ ಮಾಡುವುದು ಕಂಡುಬರುತ್ತದೆ.ಕೃತಿ ಚೌರ್ಯ ಮಾಡುವುದು ಕಾನೂನು ರೀತ್ಯಾ ಅಪರಾಧ. ಇಂಥ ಕೆಟ್ಟ ಚಾಳಿಯೂ ನಿಜವಾದ ಕೃತಿಕಾರನಿಗೆ ಹಲವು ರೀತಿಯ ನಷ್ಟವನ್ನು ಉಂಟುಮಾಡುತ್ತದೆ .ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಕೃತಿ ಚೌರ್ಯ ಇಂದು ವ್ಯಾಪಕವಾಗಿರುವುದು ವಿಷಾದನೀಯ. ನಿಜವಾದ ಪ್ರತಿಭೆ ಇದ್ದಲ್ಲಿ ಇಂಥ ದುರ್ಧೆಸೆಗೆ ಯಾವೊಬ್ಬನೂ ಇಳಿಯುವುದು ಹಿತಕರವಲ್ಲ .

ಇಲ್ಲಿ ನಾನು ಹೇಳಹೊರಟಿರುವುದು ಕೃತಿ ಚೌರ್ಯದ ಒಂದು ರೂಪವಾದ ಧ್ವನಿಮುದ್ರಿಕೆಗಳ ಚೋರತನದ ಬಗ್ಗೆ !

ಇತ್ತೀಚಿಗೆ ಬೆಂಗಳೂರಿನ ಪ್ರಸಿದ್ಧ ಕಲಾಕ್ಷೇತ್ರದಲ್ಲಿ ಯಕ್ಷಗಾನ ವೀಕ್ಷಣೆಗೆ ಹೋಗಿದ್ದಾಗ ಧ್ವನಿಮುದ್ರಿಕೆಗಳ ತಟ್ಟೆಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯಿಂದ ಅಪೂರ್ವವೆನಿಸಿದ ಕೆಲವು ಪ್ರಸಂಗಗಳ ತಟ್ಟೆಯೊಂದನ್ನು ಗಮನಿಸಿದಾಗ ಅದರಲ್ಲಿ ಮುದ್ರಿತವಾಗಿರುವಂತೆ "ಪಾಂಡವಸ್ವರ್ಗಾರೋಹಣ ", "ರಣಚಂಡಿ ", "ವಿಷಮ ದಾಂಪತ್ಯ " ಇತ್ಯಾದಿ ಎಂಟು ಪ್ರಸಂಗಗಳಿರುವ ಒಂದು ಅಪೂರ್ವ ಸಂಗ್ರಹವೆಂದೂ ಹಿಮ್ಮೇಳದಲ್ಲಿ ಬಡಗುತಿಟ್ಟಿನ ಭಾಗವತ ವಿದ್ವಾನ್ ಒಬ್ಬರು ಈ ಎಲ್ಲ ಪ್ರಸಂಗಗಳಲ್ಲೂ ಭಾಗವತರೆಂದೂ , ಮುಮ್ಮೆಳದಲ್ಲಿ ತೆಂಕು ತಿಟ್ಟಿನ ಪ್ರಸಿದ್ಧ ಅರ್ಥಧಾರಿಗಳಾದ ಶೇಣಿ, ಕುಂಬಳೆ, ನಯನ ಕುಮಾರ್,ಕೆ.ಗೋವಿಂದ ಭಟ್ ಎಂದೂ ಪಟ್ಟಿಯಲ್ಲಿ ಪ್ರಕಟಿಸಿದ್ದು ಸಹಜವಾಗಿ ಕುತೂಹಲ ಹುಟ್ಟಿಸುವ ವಿಚಾರವಾದುದರಿಂದ ಕೂಡಲೇ ಹಣ ತೆತ್ತು ಖರೀದಿಸಿದೆ .

ಮನೆಗೆ ಮರಳಿ ಹೊಸತಾಗಿ ಖರೀದಿಸಿದ ತಟ್ಟೆಯನ್ನು ಆಲಿಸಬೇಕೆಂದು ಆರಂಭಿಸಿದಾಗ ಮೊದಲಿಗೆ "ಇದನ್ನೆಲ್ಲಿಯೋ ಕೇಳಿದ್ದೆನಲ್ಲಾ? " ಎಂಬ ಗುಮಾನಿ ಹುಟ್ಟಿಕೊಂಡಿತು . ಪಾಂಡವ ಸ್ವರ್ಗಾರೋಹಣ ಪ್ರಸಂಗದಲ್ಲಿ ಶೇಣಿಯವರ ಧರ್ಮರಾಯ ಹಾಗೂ ನಯನ ಕುಮಾರರ ಕೃಷಿಕ ಸಿದ್ಧನ ಪಾತ್ರದ ಸಂಭಾಷಣೆ ಕೇಳುತ್ತಿದ್ದಂತೆ ನನ್ನ ಸಂದೇಹವೆಲ್ಲ ಮಾಯವಾಗಿ ಇದು ಅದುವೇ! ಎಂದು ಸ್ಪಷ್ಟವಾಯಿತು . ನಾನು ೨೦೦೧ ರಲ್ಲಿ ಸುಳ್ಯದ ಸಂಗೀತ ಕ್ಯಾಸೆಟ್ ಅಂಗಡಿಯಿಂದ ಖರೀದಿಸಿದ್ದ ಆಡಿಯೋ ಕ್ಯಾಸೆಟ್ "ಪಾಂಡವ ಸ್ವರ್ಗಾರೋಹಣ " ದಲ್ಲಿ ತೆಂಕು ತಿಟ್ಟಿನ ಪ್ರಖ್ಯಾತ ಮನೆತನದ ಭಾಗವತರೊಬ್ಬರು ಭಾಗವತಿಕೆಯನ್ನು ಮಾಡಿದ್ದು ಅದರ ಸವಿಯನ್ನು ತುಂಬಾ ಸಲ ಸವಿದ ಮೇಲೆ ಈ ತಟ್ಟೆಯಿಂದ ಹೊರ ಹೊಮ್ಮುವ ಅರ್ಥಕ್ಕೂ ಆ ಕ್ಯಾಸೆಟ್ ಅರ್ಥಕ್ಕೂ ಎಳ್ಳಷ್ಟು ವೆತ್ಯಾಸವಿಲ್ಲ ಕೇವಲ ಪದಗಳು ಮಾತ್ರ ಬಡಗಿನವು ಅಷ್ಟೇ ಎಂದು ತಿಳಿಯಿತು !

ಬಹಳ ಜಾಣತನದಿಂದ ತೆಂಕಿನ ಪದಗಳನ್ನು ಮಾತ್ರ ಕಿತ್ತು ಹಾಕಿ ಬಡಗಿನ ಪದ್ಯಗಳನ್ನು ಜೋಡಿಸಿ ಮಾರುಕಟ್ಟೆಯಲ್ಲಿ ಬಿಟ್ಟು ಲಾಭ ಪಡೆದ ಕೃತಿ ಚೋರರು ಮಾಡಿದ ಕಿತಾಪತಿ ಇದು ಎಂದು ತಿಳಿದಾಗ ಬಹಳ ವಿಷಾದವೆನಿಸಿತು.

ಇದೇಕೆ ಹೀಗೆ ?
ತೆಂಕು ತಿಟ್ಟಿನ ಪ್ರಖ್ಯಾತ ಮನೆತನದ ಭಾಗವತರ ಹಾಡು ಅಷ್ಟೊಂದು ಕಳಪೆಯೇ ? ಈಗಿನಂತೆ ಕೇಳಲು ಕರ್ಣ ಕರ್ಕಶವೇ ?
ಖಂಡಿತಾ ಇಲ್ಲ .

ಯಾಕೆಂದರೆ ತೆಂಕಿನ ಗಾನ ಗಂಧರ್ವರೆನಿಸಿದ್ದ ಭಾಗವತರು ತಮ್ಮ ವೃತ್ತಿ ಜೀವನದ ಉತ್ತುಂಗ ಸ್ಥಿತಿಯಲ್ಲಿ ಇದ್ದಾಗ ಹಾಡಿದ ಹಾಡು ಅದು. ಹಿರಿಯ ಕಲಾವಿದರೆಲ್ಲ ಒಂದೇ ಉಸಿರಿಗೆ ಸೂಚಿಸುತ್ತಿದ್ದ ಯುವ ಭಾಗವತರಾಗಿದ್ದ ಅವರ ಹಾಡು ಅತ್ಯಂತ ಮನೋಹರವಾಗಿ ಮೂಡಿ ಬಂದ ಕ್ಯಾಸೆಟ್ ಅದು. ಯಾವನೇ ಕಲಾ ರಸಿಕ ಈ ಭಾಗವತರ ವೃತ್ತಿ ಜೀವನದ ಉತ್ತುಂಗ ಸ್ಥಿತಿಯಲ್ಲಿ ಹಾಡಿದ ಕರ್ಣ ಪರ್ವ ಪ್ರಸಂಗದ " ಎಲೆ ಪಾರ್ಥ ನೀ ಕೇಳು ಒಲಿದೆನ್ನ ಮಾತಾ " ಅಥವಾ ಪಟ್ಟಾಭಿಷೇಕ ಪ್ರಸಂಗದ " ವೀರ ದಶರಥ ನೃಪತಿ ಇನ ಕುಲವಾರಿಧಿಗೆ ಚಂದ್ರಮನು ...." ಕೇಳಿದರೆ ಈಗಲೂ ಹುಚ್ಚೆದ್ದು ಕುಣಿಯಬಲ್ಲ ಅದ್ಭುತ ಪ್ರತಿಭೆ ಅದು !

ಹಾಗಿದ್ದರೆ ಬಡಗಿನ ಭಾಗವತರ ಹಾಡು ಅಷ್ಟೊಂದು ಸೊಗಸಾಗಿದೆಯೇ ?
ಖಂಡಿತಾ ಇಲ್ಲ !
ಅವರಂತೂ ಗಡಿಬಿಡಿಗೆ ಮಾಡಿದ ಅಡುಗೆಯಂತೆ ಪದ್ಯಗಳನ್ನು ಹೇಳಿ ಮುಗಿಸಿದ್ದಾರೆ !

ಇರಲಿ ಇದೊಂದಲ್ಲವೇ ಎಂದು ಮುಂದಿನ "ರಣಚಂಡಿ " ತಾಳಮದ್ದಲೆ ಕೇಳ ಹೊರಟರೆ ಮತ್ತದೇ ಕಲಬೆರಕೆ!

ಕ್ಯಾಸೆಟ್ ಕಲಬೆರಕೆ ಮಾಡುವ ಭರದಲ್ಲಿ ಮೂಲ ಭಾಗವತರು ಪಾತ್ರಧಾರಿಯ ಮಾತಿನ ನಡುವೆ ಹೂಂ ಗುಟ್ಟಿದ್ದನ್ನು ತೆಗೆಯಲು ಮರೆತಿದ್ದು ಕೇಳುಗರಿಗೆ ಇದು ಕಲಬೆರಕೆ ಎಂದು ಸ್ಪಷ್ಟವಾಗಿ ತಿಳಿಯಲು ಅನುಕೂಲವಾಗಿದೆ . ಒಟ್ಟಿನಲ್ಲಿ ಈ ಕಲಬೆರಕೆ ಕ್ಯಾಸೆಟ್ ಕೇಳುವಾಗ ಹೋಳುಗಳಿಲ್ಲದ ಸಾಂಬಾರನ್ನು ಸವಿದ ಅನುಭವ ಆಗುವುದಂತೂ ಖಚಿತ !

ಇಂಥ ಕ್ಯಾಸೆಟ್ ಚೌರ್ಯ ನಿಜಕ್ಕೂ ಖಂಡನೀಯ . ಇದರಿಂದ ನಿಜವಾದ ರಸಾಸ್ವಾದನೆ ಸಿಗದೇ ನಿರಾಶೆಯಾಗುವುದಂತೂ ಖಂಡಿತ .

ಕಲಾ ರಸಿಕರು ಇಂಥ ತಟ್ಟೆಗಳನ್ನು ಖರೀದಿಸುವ ಮೊದಲು ಸರಿಯಾಗಿ ಪರೀಕ್ಷಿಸಿ ತೆಗೆದುಕೊಳ್ಳುವುದು ಉತ್ತಮ .

ನಿಮಗಿಂಥಾ ಅನುಭವ ಆಗಿದೆಯೇ ?

Wednesday, December 9, 2009

ಮೊದಲ ಹವ್ಯಕ ಯಕ್ಷಗಾನ "ದಕ್ಷಾಧ್ವರ "...
ಕರಾವಳಿ ಕರ್ನಾಟಕ ಹಾಗೂ ಕಾಸರಗೋಡು , ಗಡಿನಾಡು ಪ್ರದೇಶಗಲ್ಲಿ ಹೆಚ್ಚಾಗಿಕಂಡುಬರುವ ಬ್ರಾಹ್ಮಣ ಪಂಗಡಗಳಲ್ಲಿ ಹವ್ಯಕರು ಪ್ರಮುಖರು ಪಂಚಾಯತನ ಪೂಜೆಯ ಮೂಲಕ ಪ್ರಕೃತಿಯ ಆರಾಧನೆ, ಹೋಮ ಹವನಾದಿಗಳಲ್ಲಿ ಹವಿಸ್ಸನ್ನು ಅರ್ಪಿಸುವಮೂಲಕ ದೇವತಾ ಸಂತೃಪ್ತಿಯನ್ನು ನಡೆಸುವುದರಿಂದ "ಹವ್ಯಕ"ರೆಂಬ ಹೆಸರು ಪಡೆದವರು ಎಂಬುದು ಹಿರಿಯರಿಂದ ತಿಳಿದುಬರುತ್ತದೆ.ಹವ್ಯಕರ ಆಡುಭಾಷೆಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ,ಕಾಸರಗೋಡು ಪ್ರದೇಶಗಳಲ್ಲಿ ತುಸು ಭಿನ್ನವಾಗಿದೆ.

ಯಕ್ಷಗಾನ ಕ್ಷೇತ್ರಕ್ಕೆ ಹವ್ಯಕ ಸಮುದಾಯದವರ ಕೊಡುಗೆ ಅಪಾರ. ಹಲವಾರು ಶ್ರೇಷ್ಠಕಲಾವಿದರು ಯಕ್ಷಗಾನ ಕಲೆಯನ್ನು ತಮ್ಮ ಪ್ರತಿಭೆಯಿಂದ ಬೆಳಗಿದ್ದಾರೆ. ಯಕ್ಷಗಾನ ಪ್ರಸಂಗ ಸಾಹಿತ್ಯವನ್ನು ಅವಲೋಕಿಸಿದರೆ ಎಲ್ಲ ಕಲಾವಿದರೂ ಕನ್ನಡ ಭಾಷೆ ಯಾ ತುಳು ಭಾಷೆಯ ಪ್ರಸಂಗಗಳಲ್ಲಿ ಮಿಂಚಿ ಭಾಷಾ ಮಾಧ್ಯಮದ ಮೂಲಕ ತಮ್ಮ ಪ್ರತಿಭಾ ಜ್ಯೋತಿಯನ್ನು ಬೆಳಗಿದ್ದಾರೆ.

ಹವ್ಯಕರಿಗೆ ತಮ್ಮದೇ ಭಾಷೆಯಲ್ಲಿ ಯಕ್ಷಗಾನ ಪ್ರಸಂಗ ಸಾಹಿತ್ಯವು ಲಭ್ಯವಿಲ್ಲದ ವಿಚಾರವನ್ನು ಮನಗಂಡ ಕೀರಿಕ್ಕಾಡು ಮಾಸ್ಟರ್ ವಿಷ್ಣು ಭಟ್ಟರ ಮಗ ಶ್ರೀ ವಿಶ್ವ ವಿನೋದ ಬನಾರಿಯವರು ಪ್ರಪ್ರಥಮವಾಗಿ ಹವ್ಯಕ ಆಡು ಭಾಷೆಯಲ್ಲಿ ರಚಿಸಿದ ಪ್ರಸಂಗವೇ ದಕ್ಷಾಧ್ವರ. ಈ ಪ್ರಸಂಗದ ಬಳಿಕ ಅಂಬೇಮೂಲೆ ಗೋವಿಂದ ಭಟ್ಟರು ಕೆಲವಾರು ಹವ್ಯಕ ಪ್ರಸಂಗಗಳನ್ನು ರಚಿಸಿದ್ದಾರೆ.

ಶ್ರೀ ವಿಶ್ವವಿನೋದ ಬನಾರಿಯವರು ಕನ್ನಡ ಭಾಷೆಯಲ್ಲಿರುವ ಬಲು ಪ್ರಸಿದ್ಧ"ಗಿರಿಜಾ ಕಲ್ಯಾಣ" ಪ್ರಸಂಗದ ಮೊದಲ ಸಂಧಿಯನ್ನು " ದಕ್ಷಾಧ್ವರ" ಹವ್ಯಕ ಆಡು ಭಾಷೆಯಲ್ಲಿ ಬರೆದಿದ್ದು ಬಹುತೇಕ ಕನ್ನಡದಲ್ಲಿರುವ ಪದ್ಯಗಳ ತೆರನಂತೆ ಹವ್ಯಕ ಭಾಷೆಯಲ್ಲೂ ಉಳಿಸಿಕೊಂಡು ಪ್ರಸಂಗದ ಒಟ್ಟಂದವನ್ನು ಕಾಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಧ್ವ ಸಿದ್ದಾಂತ ಗ್ರಂಥಾಲಯ ಉಡುಪಿಯವರು ಪ್ರಕಟಿಸಿದ ಗಿರಿಜಾ ಕಲ್ಯಾಣ ಪ್ರಸಂಗದಲ್ಲಿ ಬರುವ ದಕ್ಷನು ಸತ್ರ ಯಾಗಕ್ಕಾಗಿ ಬರುವಾಗ ದೇವತೆಗಳೆಲ್ಲ ಎದ್ದು ವಂದಿಸಿದರೂ ಈಶ್ವರನು ಸುಮ್ಮನಿರುವುದನ್ನು ಕಂಡು ಕೆರಳಿ ಈಶ್ವರನನ್ನು ಜರೆಯುವಾಗ ಇರುವ ಬಲು ಪ್ರಸಿದ್ದ ಪದ್ಯ " ಸರಸಿಜಾಸನನೆಂದ ನುಡಿಗೆ ನಾ ಮರುಳಾಗಿ| ಕನ್ನೆಯನಿತ್ತೆ ನಿರರ್ಥ | ಪರಕಿಸಲು ಕೋಡಗನ ಕೈಯ್ಯ ಮಾಲೆಯ ಕೊಟ್ಟ ತೆರನಾದುದಕಟೆನ್ನ ಬದುಕು || .... " ಎಂಬ ಪದವು ಕುಂಬಳೆ ಸೀಮೆ ಹವ್ಯಕ ಭಾಷೆಯಲ್ಲಿ " ಸರಸಿಜಾಸನ ಹೇದ ಮಾತಿಂಗೆ ಮರುಳಾಗಿ | ಅರಡ್ಯದ್ದೆ ಮಗಳಾನು ಕೊಟ್ಟು | ಪರಿಮಳದ ಮಲ್ಲಿಗೆಯ ಮಾಲೆಯಾ ಮಂಗನ ಕೊರಳಿಂಗೆ ಹಾಕಿದಾಂಗಾತು ...." (ಸಾಮಾನ್ಯವಾಗಿ ಈ ಪದವನ್ನು ಹೆಣ್ಣು ಮಗಳನ್ನು ಕೊಟ್ಟ ಮಾವ, ತಮ್ಮ ಅಳಿಯನ ಕುರಿತಾಗಿ ದನಗಳಿಗೆ ಅಕ್ಕಚ್ಚು ಕೊಡುವಾಗ ತಲೆ ಬಿಸಿಯಾಗಿ ಹಾಡುವುದನ್ನು ಕೆಲವೆಡೆ ನಾನು ಕಂಡಿದ್ದೇನೆ!)

ಹಾಗೆಯೇ ಈಶ್ವರನು ದಾಕ್ಷಾಯಿಣಿಗೆ ದಕ್ಷನೇಕೆ ತನ್ನನು ಆಹ್ವಾನಿಸಿಲ್ಲ ಎಂಬುದನ್ನು ವಿವರಿಸುವ " ಒಂದು ದಿವಸ ನಾನು ಕುಳಿತಿರ್ಪ ಸಭೆಗೆ | ಬಂದನು ದಕ್ಷ ನಾನೇಳದ ಬಗೆಗೆ |......." ಪದ್ಯವೂ ಹವ್ಯಕದಲ್ಲಿ " ಒಂದು ದಿನ ಆನು ಕೂದೊಂಡಿದ್ದ ಸಭೆಗೆ | ಬಂದ ದಕ್ಷ ಆನೇಳದ್ದ ಬಗೆಗೆ ...." ಮಧ್ಯಮಾವತಿ ಏಕತಾಳದಲ್ಲಿ ಮೂಲ ಕನ್ನಡದಂತೆಯೇ ಸೊಗಸಾಗಿ ಬರೆದಿದ್ದು ಪಕ್ಕನೆ ಪಾತ್ರಧಾರಿಗೆ ಪ್ರಸಂಗ ನಡೆ ತಪ್ಪದಂತೆ ಅನುಕೂಲವೇ ಆಗಿದೆ.

ಈ ಪ್ರಸಂಗದ ಬಿಡುಗಡೆ ಹಾಗೂ ಮೊದಲ ಪ್ರದರ್ಶನ ನೀರ್ಚಾಲಿನಲ್ಲಿ ನಡೆದ ಅಖಿಲ ಭಾರತ ಹವ್ಯಕ ಸಮ್ಮೇಳನದಲ್ಲಿ ನಡೆದಿತ್ತು. ಶೇಣಿ ಅಜ್ಜನ ಮುನ್ನುಡಿ ಹೊಂದಿರುವ ಈ ಕೃತಿ ಹವ್ಯಕರ ಹೆಮ್ಮೆ ಎಂದರೂ ತಪ್ಪಾಗಲಾರದು .ಹವ್ಯಕ ಕನ್ನಡದ ಭಾಷೆಯ ಸೊಗಡನ್ನು ಸವಿಯಲು ಈ ಪ್ರಸಂಗದ ಧ್ವನಿ ಮುದ್ರಿಕೆಯು ಪದ್ಯಾಣ ಗಣಪತಿ ಭಟ್ಟರ ಕಂಠ ಸಿರಿಯಲ್ಲಿ ಶೇಣಿ ಅಜ್ಜನ ನಿರ್ದೇಶನದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಆಸಕ್ತರು ಈ ಪ್ರಸಂಗದ ಎಲ್ಲ ಪುಟಗಳಿಗಾಗಿ ಲೇಖಕರನ್ನು ಸಂಪರ್ಕಿಸಬಹುದು. .

***

Tuesday, December 8, 2009

" ದೃಷ್ಟ - ಅದೃಷ್ಟ" ದೊಳಗೊಮ್ಮೆ ಇಣುಕಿದಾಗ .....


ಕೆಲವು ವರ್ಷಗಳ ಹಿಂದೆ ಆರ್ಕುಟ್ ಸಂಪರ್ಕ ಜಾಲದಲ್ಲಿ ಯಕ್ಷಗಾನಾಸಕ್ತರ ಗುಂಪಿನಲ್ಲಿ "ಸಮಾನ ಶೀಲೇಶು ವ್ಯಸನೇಶು ಸಖ್ಯಂ " ಎಂಬಂತೆ ದೃಷ್ಟನಾದ ಮಹೇಶ ಮೊನ್ನೆಯಷ್ಟೇ ನೀಡಿದ ಪುಸ್ತಕ "ದೃಷ್ಟ-ಅದೃಷ್ಟ"ವೆಂಬ ಆತ್ಮ ವೃತ್ತಾಂತವನ್ನು ಸಾದ್ಯಂತವಾಗಿ ಓದಿದಾಗ ಸಹಜವಾಗಿ ಕೆಲವು ಅನಿಸಿಕೆಗಳು ಮನದಲ್ಲಿ ಮೂಡಿದವು. ಅವುಗಳನ್ನು ಲಿಪಿರೂಪಕ್ಕಿಳಿಸಿ ಇಲ್ಲಿ ಪ್ರಸ್ತುತಪಡಿಸಿದ್ದೇನೆ.


"ದೃಷ್ಟ-ಅದೃಷ್ಟ " ಎಂಬುದು ಎಲ್ಯಡ್ಕ ಶ್ರೀಯುತ ಈಶ್ವರ ಭಟ್ಟರ ಆತ್ಮವೃತ್ತಾಂತ . ಶ್ರೀಯುತರ ಷಷ್ಟ್ಯಬ್ಧ ಸಮಾರಂಭದ ಶುಭಾವಸರದಲ್ಲಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರಿಂದ ಅನಾವರಣಗೊಂಡ ಕೃತಿ ಕುಸುಮ.
ಸುಮಾರು ೧೯೪೦ ರಿಂದ ೧೯೭೦ರ ದಶಕದಲ್ಲಿ ದಕ್ಷಿಣ ಕನ್ನಡ, ಕಾಸರಗೋಡು ಮೂಲದ ಕೆಳ ಮಧ್ಯಮ ವರ್ಗದ ಹವ್ಯಕರ ಕುಟುಂಬಗಳ ಆರ್ಥಿಕ , ಸಾಮಾಜಿಕ ಹಾಗೂ ನೈತಿಕ ಜನ ಜೀವನಕ್ಕೆ ಹಿಡಿದ ಕೈಗನ್ನಡಿಯಂತೆ ಪುಸ್ತಕದ ಪೂರ್ವಾರ್ಧವಿದ್ದರೆ , ಪ್ರಾಮಾಣಿಕತೆ ,ಕಠಿಣ ದುಡಿಮೆಗೆ ಸಂದ ಪ್ರತಿಫಲವೇನೆಂಬ ಅಂಶವು ಕೊನೆಯ ಭಾಗದಲ್ಲಿ ಜೀವನ ಸಾರ್ಥಕ್ಯದೊಂದಿಗೆ ಉಲ್ಲೇಖಿಸಲಾಗಿದೆ .

ಪುಸ್ತಕದ ಆರಂಭದಲ್ಲಿ ಬಾಲಕ ಈಶ್ವರ ಭಟ್ಟರು ಬಾಲ್ಯದಲ್ಲಿಯೇ ಮಾತೃ ವಿಯೋಗವನ್ನು ಅನುಭವಿಸಿದ ಚಿತ್ರಣ ಮನಕಲಕುವಂತಿದೆ . ಪುಸ್ತಕ ಓದುತ್ತ ಮುಂದೆ ಸಾಗುತ್ತಿದ್ದಂತೆ ಹಳೆಯ ದಶಕಗಳ ಜೀವನ ಶೈಲಿಯ ಚಿತ್ರಣಗಳು ( ಮಳೆಯಿಂದ ರಕ್ಷಣೆ ಪಡೆಯಲು ಕೊಡೆಯ ಬದಲಾಗಿ ಮಡಲಿನ ಗೊರಬೆ....ಇತ್ಯಾದಿ ) ಮನೋಮಂಡಲದಲ್ಲಿ ಭಿತ್ತಿ ಚಿತ್ರಗಳಂತೆ ಹಾದುಹೋಗುತ್ತವೆ . ಇದರಿಂದ ನಮ್ಮ ಹಿರಿಯರು ಎಷ್ಟು ಕಷ್ಟ ಸಹಿಷ್ಣುಗಳು , ಅಶಾವಾದಿಗಳೂ , ನಿರಂತರ ಪ್ರಯತ್ನಶೀಲರು ಆಗಿದ್ದುದರಿಂದ ಇಂದಿನ ಯುವ ಪೀಳಿಗೆ ಭದ್ರ ಬುನಾದಿಯ ಮೇಲೆ ಸಮರ್ಥವಾಗಿ ನಿಂತು ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಎದೆಗಾರಿಕೆಯುಳ್ಳವರನ್ನಾಗಿ ಮಾಡಿದೆ ಎಂದು ತಿಳಿಯುತ್ತದೆ .

ಉದ್ಯಮ ಸಾಹಸಂ ಧೈರ್ಯಂ
ಬುದ್ಧಿ ಶಕ್ತಿ ಪರಾಕ್ರಮ:
ಷಡೇತೇ ಯತ್ರ ವರ್ತಂತೆ
ತತ್ರ ದೈವಂ ಪ್ರಸೀದತಿ

ಎಂಬ ಸೂಕ್ತಿಯಂತೆ ತಮ್ಮ ಜೀವನವೆಂಬ ಉದ್ಯೋಗದಲ್ಲಿ ಸಾಹಸ ಧೈರ್ಯ ಬುದ್ಧಿವಂತಿಕೆಯಿಂದ ಮುನ್ನುಗ್ಗುವ ಪ್ರವೃತ್ತಿ ಇದ್ದುದರಿಂದ ಕಾಲ ಕಾಲಕ್ಕೆ ದೈವ ಸಹಾಯವೂ ನಾನಾ ಸ್ವರೂಪದಿಂದ ದೊರೆತುದರಿಂದ ಸಮಾಜದಲ್ಲಿ ಉತ್ತಮ ಸ್ಥಾನ ಮಾನಗಳನ್ನು ಪಡೆಯಲು ಅವಕಾಶವಾದುದು ಸಂತಸದ ವಿಚಾರ.

ಜೀವನದ ಸಂಕಷ್ಟದ ದಿನಗಳಲ್ಲಿ ಸ್ಥಿತಪ್ರಜ್ಞರಾಗಿ ಸರ್ವ ರೀತಿಯ ಸಮಸ್ಯೆಗಳಿಗೆ ಎದೆಗೊಟ್ಟು ಪ್ರತಿಯೊಂದು ಸನ್ನಿವೇಶಗಳನ್ನು ಅನಿವಾರ್ಯವಾಗಿ ಸವಾಲಾಗಿ ಸ್ವೀಕರಿಸಿ ಅಧ್ಯಾಪಕರಾದ ಶ್ರೀಯುತರು ಬದುಕಿನ ಸಾರ್ಥಕತೆಯನ್ನು ಪ್ರಯತ್ನಶೀಲತೆಯಿಂದ ಸಾಧಿಸಿದ್ದು "ದೃಷ್ಟ -ಅದೃಷ್ಟ "ದಲ್ಲಿ ಮನೋಜ್ಞವಾಗಿ ವಿವರಿಸಲಾಗಿದೆ.

ಆತ್ಮ ವೃತ್ತಾಂತವನ್ನು ಬರೆಯುವುದು ನಿಜಕ್ಕೂ ಸವಾಲಿನ ಕೆಲಸವೇ . ಸಮಕಾಲೀನ ಸಾಮಾಜಿಕ ಸ್ಥಿತಿಗತಿಗಳನ್ನು , ತಾನು ಜೀವನದಲ್ಲಿ ಅನುಭವಿಸಿದ ಹಾಗೂ ಎದುರಿಸಿದ ವಿವಿಧ ಅವಕಾಶರೂಪೀ ಸವಾಲುಗಳನ್ನು ಯಥಾವತ್ತಾಗಿ ನೆನಪಿಸಿಕೊಂಡು ಬರೆಯುವಾಗ ನೇರ ಪ್ರಸ್ತುತಿಯೇ ಸಮಂಜಸವಾದರೂ ಕೆಲವೊಂದು ಕಡೆ ಆಗಿನ ಕಾಲದ ವೈಶಿಷ್ಟ್ಯಗಳು , ಆಚರಣೆಗಳು , ಸಾಂಸ್ಕೃತಿಕ ವಿಚಾರಗಳು ವಿಶೇಷ ಘಟನೆಗಳು ಮತ್ತು ಶಿಕ್ಷಣ ಕ್ರಮಗಳನ್ನು ಸವಿಸ್ತಾರವಾಗಿ ವಿವರಿಸಿದಲ್ಲಿ ಹೊತ್ತಗೆಯು ಇನ್ನೂ ಪರಿಣಾಮಕಾರಿಯಾಗಿ ಮೂಡಿಬರುತ್ತಿತ್ತೇನೋ ? ಈ ವಿಚಾರವನ್ನು ಗಮನಿಸಿದಾಗ "ದೃಷ್ಟ -ಅದೃಷ್ಟ " ದಲ್ಲಿ ಏನೋ ಕಳಕೊಂಡ ಅನುಭವ ಯಾ "ಅತೃಪ್ತ " ಭಾವನೆ ಓದುಗನಿಗೆ ಬರದೆ ಇರಲಾರದು .

ಅರುವತ್ತು ವರುಷಗಳ ಸುದೀರ್ಘ ಜೀವನಾನುಭವಗಳನ್ನು ಅತ್ಯಂತ ಸಂಕ್ಷಿಪ್ತವಾಗಿ ೬೪ ಪುಟಗಳಲ್ಲಿ ವಿವರಿಸಲು ಕಷ್ಟವೇ ಆದರೂ ಅತ್ಯಂತ ಚೊಕ್ಕವಾಗಿ ಚುಟುಕಾಗಿ ಪ್ರಸ್ತುತ ಪಡಿಸಿದ್ದು ಒಂದು ಈ ಪುಸ್ತಕದ ಉತ್ತಮಾಂಶ . ಸಮೃದ್ಧ ಜೀವನಾನುಭಾವಿಗಳಾದ ಶ್ರೀಯುತ ಈಶ್ವರ ಭಟ್ಟರ "ಜೀವನದ ರಸನಿಮಿಷಗಳ " ಬಗೆಗೆ ಸವಿಸ್ತಾರವಾದ ಪುಸ್ತಕವೊಂದನ್ನು ಹೊರತಂದಲ್ಲಿ ವಾಚಕರಿಗೆ ಮಹದುಪಕಾರವಾಗುತ್ತದೆ.

ಶ್ರೀಯುತರು ಬರೆದ ಟಿಪ್ಪಣಿಗಳನ್ನು ಪುಸ್ತಕ ರೂಪಾಂತರಿಸುವಲ್ಲಿ ಸಹಕರಿಸಿದ ಕು . ಮನೋರಮಾ ಬಿ. ಏನ್. ರವರ ಪರಿಶ್ರಮ , ಲಿಪಿ ಗಣಕೀಕರಿಸಿದ ಕು.ಅಕ್ಷತಾ , ಅಂದವಾದ ಮತ್ತು ಅರ್ಥಪೂರ್ಣವಾದ ಮುಖಪುಟ ವಿನ್ಯಾಸಗೊಳಿಸಿದ ಅಕ್ಷರೋದ್ಯಮದ ಸುನಿಲ್ ಕುಲಕರ್ಣಿಯವರ ಅನುಭವ , ಸುಂದರವಾಗಿ ಮುದ್ರಿಸಿದ ದಿಗಂತ ಮುದ್ರಣಾಲಯದವರ ಕಾರ್ಯ ದಕ್ಷತೆಗಳೆಲ್ಲ ಅಭಿನಂದನೀಯ .
ಒಟ್ಟಿನಲ್ಲಿ ಕನಿಷ್ಠ ಮುದ್ರಾ ರಾಕ್ಷಸನ ಹಾವಳಿಗೆ ತುತ್ತಾದರೂ ಸಂಗ್ರಹ ಯೋಗ್ಯವಾದ ಮಾಹಿತಿಪೂರ್ಣ ಅನುಭವದ ರಸ ಪಾಕ ಈ "ದೃಷ್ಟ -ಅದೃಷ್ಟ".

Thursday, November 12, 2009

ತೆಂಕಬೈಲು ಹಾಡಿದರೆಂದರೆ...


ರವಿವಾರದ ಸುಂದರ ಸಂಜೆಯ ಹೊತ್ತು ಪುಸ್ತಕ ತಿರುವಿ ಹಾಕುತ್ತಾ ಧ್ವನಿ ಸುರುಳಿಯ ಯಕ್ಷಗಾನ ಹಾಡುಗಳನ್ನು ಕೇಳುತ್ತಾ ಇದ್ದ ನನಗೆ ಹಿರಿಯ ಕವಿಯೊಬ್ಬರು ಗದುಗಿನ ನಾರಣಪ್ಪನವರ ಕುರಿತು

" ಕುಮಾರವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿಯುವುದು ..."

ಎಂದು ಹೇಳಿದ್ದನ್ನು ಓದಿದಾಗ ಅನಿಸಿದ್ದು ,
ಯಾವನೇ ಯಕ್ಷಗಾನ ಅಭಿಮಾನಿ ಇರುತ್ತಿದ್ದರೆ ಕೆಳಗಿನ ಸಾಲನ್ನು ಹೇಳುತ್ತಿದ್ದ ಅನಿಸಿತ್ತು .

ತೆಂಕಬೈಲು (ಮನಸ್ಸಿಟ್ಟು) ಹಾಡಿದರೆಂದರೆ
ಪ್ರಸಂಗವು ಕಣ್ಣಲಿ ಕುಣಿಯುವುದು
ನಿತ್ಯವೂ ಮನವನು ಕಾಡುವುದು !

ಇನ್ನಾರೆನ್ನನು ಗುಣದಲಿ ಬಣ್ಣಿಸಿ ಮನ್ನಿಸಿ ಕರೆವರು...... ಎಂದು ಸುಶ್ರಾವ್ಯ ಕಂಠದಲ್ಲಿ ಭಾವಪೂರ್ಣವಾಗಿ ಶಾಸ್ತ್ರಿಯವರು ಹಾಡುತ್ತಿದ್ದರೆ ಎಂಥವನೇ ಆದರೂ ಪದ್ಯದ ಲಯದೊಂದಿಗೆ ಲೀನವಾಗಿ ಹೋಗುವಂಥ ಸನ್ನಿವೇಶ ನಿರ್ಮಾಣವಾಗಿರುತ್ತದೆ . ಒಬ್ಬ ಅಪೂರ್ವ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಶ್ತ್ರಿಯವರ ಬಗ್ಗೆ ಕೆಲವೊಂದು ವಿಚಾರಗಳನ್ನು ಬರೆಯಬೇಕೆಂದು ಅನಿಸಿದ್ದು ಅವರ ಉತ್ಕೃಷ್ಠ ಪದ್ಯಗಳನ್ನು ನಿರಂತರ ಆಸ್ವಾದಿಸಿದ ಮೇಲೆ...

ಒಮ್ಮೆಗೇ ಹೃನ್ಮನಗಳನ್ನು ಸೂರೆಗೊಳ್ಳಬಲ್ಲ ಇವರು ತಮ್ಮದೇ ಆದ ಶೈಲಿಯನ್ನು ಬೆಳೆಸಿಕೊಂಡ ಅನನ್ಯ ಭಾಗವತ . ಶೃಂಗಾರ, ಕರುಣ ದು:ಖ ರಸದ ಪದ್ಯಗಳನ್ನು ಮನಮುಟ್ಟುವಂತೆ ಹಾಡುವ ಇವರು ತಮ್ಮ ವಿಶಿಷ್ಟ ಶೈಲಿಯಿಂದಾಗಿಯೇ ಕಲಾರಸಿಕರನ್ನು ಮತ್ತೆ ಮತ್ತೆ ಹಿತವಾಗಿ ಕಾಡುತ್ತಾರೆ !

ಹಾಗೆಂದು ತೆಂಕಬೈಲುರವರ ಭಾಗವತಿಕೆಯ ಮೇಲೆ ನಿರೀಕ್ಷೆಯಿಟ್ಟು ಯಾವುದೇ ಕಾರ್ಯಕ್ರಮಕ್ಕೆ ಹೋಗುವಂತಿಲ್ಲ ! ಹಾಗೇನಾದರೂ ಹೋದಿರೋ ಆ ದಿನ "ಯಾಕಾದರೂ ಈ ಕೆಟ್ಟ ಹಾಡು ಕೇಳಲು ಬಂದೆನೋ " ಅನಿಸುವಸ್ಟೂ ಪದ್ಯಗಳನ್ನು ಕುಲಗೆಡಿಸಿ ಬಿಟ್ಟಾರು ! ಒಂದು ವೇಳೆ ಸಂಘಟಕನ ಅದೃಷ್ಟ ಶಾಸ್ತ್ರಿಯವರ ಉಲ್ಲಸದಾಯಕ ಮನಸ್ಸು ಜೊತೆ ಸೇರಿದರೆ ಅವರ ಶೈಲಿಯ ಉತ್ತುಂಗ ಸ್ಥಿತಿಯ ಅನಾವರಣವಾಗುತ್ತದೆ. ಅದರ ಸಹಜ ಸೌ೦ದರ್ಯವನ್ನು ಕಂಡ ಎಂಥ ಪ್ರೇಕ್ಷಕನೇ ಆದರೂ "ಸೈ " ಅನ್ನಲೇಬೇಕು . ಹಲವು ನೋವನ್ನು ಅನುಭವಿಸಿದರೂ ಮಾತೆಯೋರ್ವಳು ತಾನು ಪ್ರಸವಿಸಿದ ಮಗುವಿನ ಮೊಗವನ್ನು ನೋಡಿ ನೋವನ್ನು ಮರೆವಂತೆ ಹಿಂದೆ ಕೇಳಿದ ಎಲ್ಲಾ ಕೆಟ್ಟ ಪದ್ಯಗಳನ್ನೂ ಹೊಡೆದು ಹಾಕಿ ಬಿಡಬಲ್ಲ ಅಸಾಧಾರಣ ಸಾಮರ್ಥ್ಯ ತೆಂಕಬೈಲುರವರಲ್ಲಿ ಮಾತ್ರ ಕಾಣಬಹುದೇನೋ?

ದಕ್ಷಾಧ್ವರ-ಗಿರಿಜಾಕಲ್ಯಾಣ , ಇಂದ್ರಜಿತು ಕಾಳಗ , ತುಳಸಿ ಜಲಂಧರ , ಕಂಸವಧೆ ,ಕರ್ಣಪರ್ವ ,ಸುಧನ್ವ ಮೋಕ್ಷ , ಪಟ್ಟಾಭಿಷೇಕ , ವಿದ್ಯುನ್ಮತಿ ಕಲ್ಯಾಣ ,ಶರಸೇತು ಬಂಧನ ಮುಂತಾದ ಯಾವುದೇ ಪೌರಾಣಿಕ ಪ್ರಸಂಗಗಳನ್ನು ಲೀಲಾಜಾಲವಾಗಿ ಮೆರೆಸಬಲ್ಲ ಇವರ ಕುರಿತು ಹಿರಿಯ ಭಾಗವತರೊಬ್ಬರು ಹೇಳಿದ್ದು ಹೀಗೆ " ಶಾಸ್ತ್ರಿಯವರಲ್ಲಿ ವೃತ್ತಿಪರತೆಯ ಸ್ಥಿರತೆಯ ಕೊರತೆ ಇದೆ. ಅದೊಂದು ಬಿಟ್ಟರೆ ಯಾವ ಕ್ಷಣದಲ್ಲಾದರೂ ಸಿಡಿಲಮರಿಯ ಹಾಗೆ ಅವರು ವಿಜೃ೦ಭಿಸಿಯಾರು . ಅದು ಯಾವಾಗ ಅಂತ ತರ್ಕಿಸುವುದೇ ಕಷ್ಟ ". ಆದ್ದರಿಂದಲೇ ಅವರೊಬ್ಬ ಅನನ್ಯ (unique) ಭಾಗವತ ...!

ಅವರ ಶೈಲಿಯನ್ನು ಅನುಕರಿಸುವುದು ಅಸಾಧ್ಯ . ಅಪ್ಪನ ಶೈಲಿಯನ್ನು ಮಕ್ಕಳು ಅನುಸರಿಸುವುದು ಹಿರಿಯ ಭಾಗವತರ ಮನೆತನದಲ್ಲಿ ಕಾಣುತ್ತೇವೆ . ಆದರೂ ಇವರ ಮಗ ಅಪ್ಪನಂತೆ ಪ್ರಸಂಗವನ್ನು ಮೆರೆಸುವ ಕ್ರಮವನ್ನು ಕರಗತ ಮಾಡಿಕೊಳ್ಳಬೇಕಿದೆ . ಅವರ ಶೈಲಿಯ ಉತ್ತರಾಧಿಕಾರಿಗಳು ಅದನ್ನು ಸಮರ್ಥವಾಗಿ ಕಲಿತರೆ ಪ್ರೇಕ್ಷಕನಿಗಾಗುವ ಲಾಭ ಅಪರಿಮಿತ . ಸಮೀಪವರ್ತಿಗಳು ಹೇಳುವಂತೆ ತೆಂಕಬೈಲುರವರು ಶೀಘ್ರಕೋಪಿ (ದೂರ್ವಾಸರ ಕುಲದವರು !). ಅವರಿಗೇನಾದರೂ ಸ್ವರ ಬಿದ್ದರೆ "ಛೆ " ಮದ್ದಲೆ ಸರಿ ಇಲ್ಲೆ" ಎಂದು ಎದ್ದು ಹೋದದ್ದೂ ಇದೆ !

ದ್ವಂದ್ವ ಕಾರ್ಯಕ್ರಮ , ಯಕ್ಷ ಸಂಗೀತ ಕಾರ್ಯಕ್ರಮಗಳಲ್ಲಿ ಎದ್ದು ಕಾಣಿಸುವ ಇವರ ಬತ್ತಳಿಕೆಯಲ್ಲಿ ಅಪೂರ್ವ ರಾಗಗಳ ಸಂಗ್ರಹವೇ ಇದೆ. ಪ್ರಸಂಗವನ್ನು ಸರಿಯಾಗಿ ಅಧ್ಯಯನ ಮಾಡಿಯೇ ರಂಗವೇರುವ ಇವರು ಸದಾ ಮನಸೂರೆಗೊಳ್ಳುವ ಭಾಗವತರಲ್ಲಿ ಪ್ರಮುಖರು.
ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಜನಮಾನಸದಲ್ಲಿ ನೆಲೆಯಾಗಿರುವ ಇವರಿಗೆ ಹೆಚ್ಚಿನ ಅವಕಾಶ, ಪ್ರಚಾರಗಳು ದೊರಕದಿದ್ದರೂ, ಕೇಳುಗರ ಮನದಲ್ಲಿ "ಹಿತವಾಗಿ ಗಿರಕಿ ಹೊಡೆಯುವ " ಅಪೂರ್ವ ಕಲೆಗಾರಿಕೆ ಹೊಂದಿದ ಇವರ ಕಂಠದಲ್ಲಿ ಮೂಡಿ ಬಂದ
ದೇವಿ ಮಹಾತ್ಮೆಯ "ನೋಡಿದನು ಕಲಿ ರಕ್ತಬೀಜನು ....." ರಾವಣವಧೆಯ " ಕಂಡನು ದಶವದನ ...." ದಕ್ಷಾಧ್ವರದ "ಯಾತಕೆ ಬಂದೆನು ತಾನೇ
ಪಾತಕಿ ಮಾಡುವ ...." ಜಲಂಧರನ ಕಾಳಗದ " ಕೇಳು ಶ್ರೀರಮೆ ... ಕರುಣ ಸಾಗರೆ " ಕರ್ಣ ಪರ್ವದ "ಭಾನುಸುತ ರಥವಿಳಿದು ...." ಮುಂತಾದ ಪದಗಳು ಮತ್ತೆ ಮತ್ತೆ ಕೇಳುವಂತೆ ಮಾಡಿ ತಲೆಯಲ್ಲಿ ಹಿತವಾಗಿ ಸುತ್ತುತ್ತಾ , ಬಾಯಿಯಲ್ಲಿ ಗುನುಗುನಿಸುತ್ತಾ " ಕೊಂಡಾಟದ " ಅನುಭವವನ್ನು ನೀಡುತ್ತದೆ.

ಕೆಳಗಿನ ಕೊಂಡಿಯಲ್ಲಿ ತೆಂಕಬೈಲು ಶಾಸ್ತ್ರಿಯವರ ಹಾಡುಗಳನ್ನು ಕೇಳಿ ಆನ೦ದಿಸಬಹುದು .

http://oyakshagana.googlepages.com/audios.htm
ಏನಿದ್ದರೂ ಇಂಥ ಅಪೂರ್ವ ಕಲಾವಿದನ ಪದ್ಯಗಳ ಮಾದರಿ ಸಂಗ್ರಹವನ್ನು ಮಾಡಿ ಮುಂದಿನ ಪೀಳಿಗೆಗೆ ಉಳಿಸಿ ಇಡಬೇಕಾದ ಹೊಣೆಗಾರಿಕೆ ಇಂದು ಅವರ ಪದ್ಯಗಳನ್ನು ಆಸ್ವಾದಿಸುವ ಕಲಾರಸಿಕರಾದ ನಮ್ಮೆಲ್ಲರ ಗುರುತರ ಜವಾಬ್ದಾರಿಯಲ್ಲವೆ ?

***

Wednesday, November 11, 2009

ಪುಟಾಣಿಗಳ ಯಕ್ಷಲೋಕಕರಾವಳಿ ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನ . ಹಲವು ಶತಮಾನಗಳ ಇತಿಹಾಸವಿರುವ ಈ ಕಲೆ ಆರಾಧನಾ ಕಲೆಯಾಗಿ ಆವಿರ್ಭವಿಸಿ , ಮನೋರಂಜನಾ ಕಲೆಯಾಗಿ ಬೆಳೆದು ಬಂದಿದೆ. ಗಂಡು ಮೆಟ್ಟಿನ ಕಲೆಯೆಂದೇ ಯಕ್ಷಗಾನ ಪ್ರಸಿದ್ದವಾದರೂ ಸ್ತ್ರೀಯರೂ ಇತ್ತೀಚಿಗೆ ಈ ಕಲೆಯನ್ನು ಮೈಗೂಡಿಸಿ ಪ್ರದರ್ಶನಗಳನ್ನು ನೀಡುತ್ತಿರುವುದನ್ನು ನಾವು ಇತ್ತೀಚಿಗೆ ಕಾಣುತ್ತಿದ್ದೇವೆ. ಇಂದಿನ ಮಕ್ಕಳೇ ಮುಂದಿನ ಜನಾಂಗ . ಇಂದು ಅಳಿದುಳಿದಿರುವ ಕಲೆಯನ್ನು ಮಕ್ಕಳಿಗೆ ಕಲಿಸಿ "ಬಿಡುವಿಲ್ಲದ" ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸುತ್ತಿರುವ ಹಲವು ಹಿರಿಯರನ್ನು ನಾವು ಮನಸಾ ಮೆಚ್ಚಲೇಬೇಕು .

ಮಕ್ಕಳಿಗೆ ಯಾವುದೇ ಕಲೆಯನ್ನು ಕಲಿಸುವುದು ಸುಲಭ . ನಿರ್ಮಲ ಮನಸ್ಸಿನಲ್ಲಿ ಒಳ್ಳೆಯ ವಿಚಾರವನ್ನು ಬಿತ್ತಲು ಬಾಲ್ಯವೇ ಸಕಾಲ. ಕಲಿಸಿದ ವಿಚಾರಗಳನ್ನು ಶೀಘ್ರವಾಗಿ ಕರಗತ ಮಾಡಿಕೊಳ್ಳಬಲ್ಲ , ಹೇಳಿಕೊಟ್ಟದ್ದನ್ನು ಚಾಚೂ ತಪ್ಪದೆ ಒಪ್ಪಿಸುವ ಕಲೆಗಾರಿಕೆಯುಳ್ಳ ಮಕ್ಕಳು ಉತ್ತಮವಾದ ಯಕ್ಷಗಾನ ಪ್ರದರ್ಶನ ನೀಡುವುದು ಸಂತಸದ ವಿಚಾರ .
ಮಕ್ಕಳ ಮೇಳ ಎಂದೇ ಪ್ರಸಿದ್ಧವಾಗಿರುವ ಸಾಲಿಗ್ರಾಮದ ಮಕ್ಕಳ ಮೇಳ ದೇಶ ವಿದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದೆ. ದಕ್ಷಿಣ ಕನ್ನಡದ ಹಲವಾರು ಶಾಲೆಗಳಲ್ಲಿ ಇಂಥ ಮಕ್ಕಳ ಮೇಳಗಳನ್ನು ಇಂದಿಗೂ ನಾವು ಕಾಣಬಹುದಾಗಿದೆ .
ಬೆಂಗಳೂರು , ಮುಂಬೈಯಂಥ ಮಹಾನಗರಗಳಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುವ ಕರಾವಳಿ ಕರ್ನಾಟಕ ಮೂಲದ ಪಾಲಕರ / ಪೋಷಕರ ಪರಿಶ್ರಮದಿಂದಾಗಿ ರೂಪುಗೊಂಡ ವೃತ್ತಿಪರ ಮಟ್ಟದ ಪ್ರದರ್ಶನವನ್ನು ನೀಡಬಲ್ಲ ಮಕ್ಕಳ ಮೇಳವಿರುವುದು ಹೆಮ್ಮೆಯ ವಿಷಯ.ಮಕ್ಕಳ ಮನಸ್ಸಿನಲ್ಲಿ ಪೌರಾಣಿಕ ಜ್ಞಾನ , ಉತ್ತಮ ಸಂಸ್ಕಾರಗಳನ್ನು ಬೆಳೆಸುವಲ್ಲಿ ಇಂಥ ಪ್ರಯತ್ನಗಳು ಸಹಕಾರಿಯಾಗುತ್ತವೆ. ಹಿರಿಯ ಕಲಾವಿದರ ಮಾರ್ಗದರ್ಶನ , ಮುಖವರ್ಣಿಕೆ , ಪ್ರಸಂಗ ಸಾಹಿತ್ಯ ಪರಿಚಯವೇ ಮೊದಲಾದುವನ್ನು ಸರಿಯಾಗಿ ಸಮ್ಮಿಳಿತಗೊಳಿಸಿ ಮಕ್ಕಳಿಗೆ ಕಲಿಸಿದಲ್ಲಿ ಅವರ ಭಾಷಾ ಜ್ಞಾನ , ಮಾತುಗಾರಿಕಾ ಕೌಶಲ ಹೆಚ್ಚುವುದರೊಂದಿಗೆ ಯಕ್ಷಗಾನ ಕಲೆಯು ಜೀವಂತವಾಗಿ ಮುಂದಿನ ಪೀಳಿಗೆಯಲ್ಲೂ ಮುಂದುವರಿದು ಅದರ ರಸಾಸ್ವಾದನೆಗೆ ಅವಕಾಶವಾಗುತ್ತದೆ ಅಲ್ಲವೇ ?
***

Friday, October 23, 2009

ಮತ್ತೆ ಕಳೆಯಿತು ದೀಪಾವಳಿ....
ದೀಪಾವಳಿ ಬರುತ್ತಿದ್ದಂತೆ ಮನೆಗಳಲ್ಲಿ ಸಡಗರ ಸಂಭ್ರಮ . ಮಕ್ಕಳೆಲ್ಲ ಸೇರಿ ಪಟಾಕಿಗಳನ್ನು "ಸಂಪಾದಿಸುವ " ಲೆಕ್ಕಾಚಾರ ಹಾಕಿ ಅಪ್ಪನಿಗೆ ತಿಳಿಸಲು ಅಮ್ಮನಲ್ಲಿ "ಮಸ್ಕ" ಹಾಕುವ ನಾನಾ ಉಪಾಯಗಳನ್ನು ಮಾಡುತ್ತಿದ್ದ ಕಾಲ . ಅಕ್ಕಂದಿರೆಲ್ಲ ಸೇರಿ ಮಹಿಳಾ ಮಂಡಲದಿಂದ ತಂದ ಬಗೆ ಬಗೆಯ ಕಾದಂಬರಿಗಳನ್ನು ಓದಿ ಮುಗಿಸುವ ತರಾತುರಿಯಲ್ಲಿದ್ದರೂ ತಿಂಡಿ ತಯಾರಿಸುವ ಕಾಯಕದಲ್ಲಿ ಪುಸ್ತಕ ಹಿಡಿದೇ ಭಾಗಿಗಳಾಗುತ್ತಿದ್ದುದು ಒಂದೆಡೆಯಾದರೆ ಅಪ್ಪನ ಮಿತ್ರರು ಸಂಜೆಯ ಹೊತ್ತಿನಲ್ಲಿ ಈ ಸರ್ತಿ ಧರ್ಮಸ್ಥಳ ಮೇಳದ ಹೊಸ ಪ್ರಸಂಗ ಯಾವುದು? ಯಾರೆಲ್ಲ ಕಲಾವಿದರು ? ಎಲ್ಲಿ ಪ್ರದರ್ಶನ ? ಇತ್ಯಾದಿ ಚರ್ಚೆಯಲ್ಲಿ ತೊಡಗುತ್ತಿದ್ದರು.


ಗುಡ್ಡೆಯ ಮುಳಿ ಹುಲ್ಲು ಕಟಾವಿಗೆ ಬಂದು , ನೆಲ್ಲಿಕಾಯಿ ಮರದಲ್ಲಿ ಪೀಚುಗಾಯಿ ಬಲಿಯುವ ಸಮಯ .... ತೋಟದ ಬದಿ ದಾಟಿ ಆ ಕಡೆಯ ಗುಡ್ಡದ ನೆಲ್ಲಿಕಾಯಿ ಮರಕ್ಕೆ ದಿನಕ್ಕೊಮ್ಮೆಯಾದರೂ ಬಲಿ ಬರದೆ ಇದ್ದರೆ " ಅದೇನೋ" ಕಳಕೊಂಡ ಅನುಭವ !


ಬೆಳಗ್ಗೆ ನಾವು ಏಳುವ ಮೊದಲೇ "ಮೋತಿ " ಮತ್ತು "ದಾಸು" ಎಂಬ ಶುನಕೋತ್ತಮರು ಚಿಕ್ಕಿನ ಮರದ ಕೆಳಗೆ ಬಿದ್ದ ಮರದಲ್ಲೇ ಹಣ್ಣಾದ ಚಿಕ್ಕಿನ ಹಣ್ಣನ್ನು ಸವಿದು ಮೆಲ್ಲನೆ "ಸುಭಗರಂತೆ " ಬಂದು ಬೆಳಗ್ಗಿನ ತಿಂಡಿಗೋಸ್ಕರ ಕಾಯುತ್ತಿದ್ದರೆ, ಚಿಕ್ಕ ಕೊಕ್ಕೆಯನ್ನು ಹಿಡಿದು ಮರದ ಬಳಿಗೆ ಹೋಗುವ ಅಮ್ಮ ಒಂದು ಹಣ್ಣು ಸಿಕ್ಕರೆ ಸಣ್ಣ ಮಗನಿಗೆ ಕೊಡಬಹುದೆಂಬ ಲೆಕ್ಕಾಚಾರ ಹಾಕುತ್ತಿದ್ದರೆ, ಚಿಕ್ ಚಿಕ್ ಚೀವ್ ಎಂದು ಮರವೇರುವ ಅಳಿಲು ಅಣಕಿಸುವಂತೆ ಓಡುತ್ತಿತ್ತು .

ಹಟ್ಟಿಯಿಂದ "ಕಮಲಿ" ತನ್ನ ಮಗಳು ನಂದಿನಿಯ ಬೆನ್ನನ್ನು ನೆಕ್ಕುತ್ತ ಶುಭ್ರ ಮಾಡುತ್ತಿದ್ದಾರೆ , ಕೆಲಸದ ಸಂಕಪ್ಪಣ್ಣ ತುಂಡು ಬೀಡಿಯನ್ನು ಸೇದುತ್ತ ಅದರ ಕೊನೆಯ ರಸಾಸ್ವಾದನೆ ಮಾಡುತ್ತ ಕತ್ತಿ ಮಸೆಯಲು ಕೂರುತ್ತಿದ್ದ. ಅದಾಗಲೇ ಆ ದಿನದ ಕೆಲಸವೇನೆಂದು ಅಪ್ಪ ಹೇಳಿ ಬಿಡುತ್ತಿದ್ದರೆ ನಾವೆಲ್ಲ "ಸ೦ಕಪ್ಪಣ್ಣ ಒಂದು ಗೂಡು ದೀಪ ಮಾಡಿ ಕೊಡೆಕ್ಕು " ಎಂಬ ಅಪ್ಪಣೆಯನ್ನು ನೀಡುತ್ತಿದ್ದರೆ "ದೇಶಾವರಿ ನಗೆ " ಬೀರುತ್ತ "ಆತು ಅಬ್ಬೋ ಮತ್ತೆ ಮಾಡಿ ಕೊಡ್ತೆ !" ಎಂದು ಹೇಳುವಲ್ಲಿವರೆಗೆ ನಮ್ಮ ಕಾಟ ತಪ್ಪುತ್ತಿರಲಿಲ್ಲ ! ಮಾದೇರಿ ಬಳ್ಳಿಯಿಂದ ತಯಾರಿಸಿದ ಗೂಡು ದೀಪಕ್ಕೆ ನಾನಾ ಬಣ್ಣದ ಕಾಗದವನ್ನು ಅಂಟಿಸಿ ಅದರೊಳಗೆ ಒಂದು ಉರಿಯುವ ಹಣತೆಯಿಟ್ಟರೆ ರಾತ್ರಿಯಲ್ಲಿ ಕಾಣುವ ಸೊಬಗೇ ಬೇರೆ !ಮಧ್ಯಾಹ್ನ ಊಟ ಕಳೆದು ಅಪ್ಪ ಕಿರು ನಿದ್ದೆಗೆ ಜಾರಿದಾಗ ಏನೆಲ್ಲಾ ಪಟಾಕಿ ಎಲ್ಲಿ ಸಿಗುತ್ತದೆ ? ಇತ್ಯಾದಿಯ ಬಗ್ಗೆ ಸವಿವರವಾದ ಚರ್ಚೆ ಅಣ್ಣನೊಡನೆ ಆದ ಬಳಿಕ ಅಪ್ಪ ಏಳುವುದನ್ನೇ ಕಾಯುವ ತವಕ . ಎದ್ದ ಮೇಲೆ ಪೇಟೆಗೆ ಹೋಗುವಾಗ ಜತೆಯಲ್ಲಿ ಯಾರು ಹೋಗುದು ? ಎಂಬ ವಿಚಾರ ಬಂದಾಗ ಅನುಭವೀ ಅಣ್ಣನೆ ಹೋಗುವುದೊಳಿತು ಎಂಬ ನಿರ್ಧಾರವೂ ಆಗಿರುತ್ತಿತ್ತು.

ಅಪ್ಪ ಎದ್ದು ಮುಖ ತೊಳೆದು ಅಮ್ಮ ಕೊಟ್ಟ ಚಹಾ ಸೇವಿಸಿ "ಚೀಲ ತಾ " ಎಂದಾಗ ಓಡಿ ಹೋಗಿ ಚಡ್ಡಿ ಅಂಗಿ ಸಿಕ್ಕಿಸಿಕೊಂಡ ಅಣ್ಣ ಅಪ್ಪನೊಡನೆ ಹೊರಟಾಗ ದೂರದಿ೦ದಲೇ ಅಸೆಗಣ್ಣಿನಿ೦ದ "ಬೇಗ ಬರೆಕ್ಕು ಆತಾ? " ಎಂದು ಹೇಳಿ ಕಳುಹಿಸಿದ ಮೇಲೆ ಕ್ಷಣವೊಂದು ಯುಗವಾದ ಅನುಭವ !

ಅಣ್ಣ ಹೇಳಿದ ಎಲ್ಲ ಪಟಾಕಿ ತರುತ್ತಾನೋ ಇಲ್ಲವೋ ? ಒಂದು ವೇಳೆ ಪೈಗಳ ಅಂಗಡಿಯಲ್ಲಿ ಪಟಾಕಿ ಮುಗಿದಿದ್ದರೆ ? ಇತ್ಯಾದಿ ಮನದಲ್ಲಿ ಸ್ವಲ್ಪ ತಳಮಳ ... ಅಣ್ಣ ಎಲ್ಲ ಪಟಾಕಿ ತಂದರೆ ಯಾವುದರ ಬಳಿಕ ಯಾವುದು? ಬಿಡುವುದು ಇತ್ಯಾದಿ ಕಲ್ಪನಾಲೋಕ ದಲ್ಲಿ ವಿಹರಿಸಿ ಅಮ್ಮನಲ್ಲಿ "ಅಪ್ಪ ಎಷ್ಟು ಹೊತ್ತಿಂಗೆ ಬಕ್ಕು ?" ಎಂದು ಕೇಳಿ ಎರಡು ಬೈಗುಳ ತಿನ್ನುವುದರ ಹಿತ ಬಲ್ಲವನಿಗೆ ಗೊತ್ತು!

ಅಂತೂ ಸಂಜೆಯ ಹೊತ್ತಿಗೆ ಅಂತೂ ಸಂಜೆಯ ಹೊತ್ತಿಗೆ ಅಪ್ಪನ ಸಮೇತ ಅಣ್ಣ ದೂರದ ಗೇಟಿನ ಬಳಿ ಪ್ರತ್ಯಕ್ಷವಾದಾಗ ಓಡಿ ಹೋಗಿ "ಎಲ್ಲ ಸಿಕ್ಕಿದ್ದ ?" ಎಂದು ಸಡಗರದಿಂದ ಕೇಳಿ ಹ್ನೂ ... ಎಂಬ ಉತ್ತರ ಪಡೆದಾಗ ಏನೋ ತೃಪ್ತಿ ...

ಸೂರ್ಯಾಸ್ತವಾದ ಬಳಿಕ ಅಮ್ಮ ದೀಪ ಹಚ್ಚಿದ ಕೂಡಲೇ ಅಪ್ಪ ಸ್ನಾನಕ್ಕೆ ಹೋಗಿ ಬಂದು ಪೂಜೆ ಮುಗಿಸುದನ್ನೇ ಕಾದು ಕುಳಿತು ಬಹು ನಿರೀಕ್ಷಿತ ಪಟಾಕಿ ಬಿಡುವ ಕಾರ್ಯಕ್ರಮ ಆರಂಭವಾಗುತ್ತಿತ್ತು. ದೊಡ್ಡ ಶಬ್ದದ ಪಟಾಕಿ ಅಪ್ಪನಿಗೆ , ನೆಲಚಕ್ರ , ಹೂ ಕುಂಡ ಇತ್ಯಾದಿ ಅಣ್ಣನಿಗೆ ಸಿಕ್ಕರೆ ನಕ್ಷತ್ರ ಕಡ್ಡಿಗಳ ಒಡೆತನ ನನ್ನ ಪಾಲಾಗುತ್ತಿತ್ತು!

ಅಪ್ಪನ ಜೇಬಿನ ದುಡ್ಡುಗಳೆಲ್ಲವು
ಚಟ ಪಟಗುಟ್ಟುತ ಸಿಡಿಯುವುವು
ಒಪ್ಪದ ನೀತಿಯ ಮಾತುಗಳೆಲ್ಲ
ತಪ್ಪದೆ ದಾರಿಯ ಹಿಡಿಯುವುವು

ಎಂದು ಕವಿ ಪುಂಗವರೊಬ್ಬರು ಹೇಳಿದರೂ ಪಟಾಕಿ ಬಿಡುವ ಆನಂದ ಬಹುಶ ಅವರು ಸವಿದಿರಲಿಕ್ಕಿಲ್ಲ ಎಂಬ ಸತ್ಯಾ೦ಶವನ್ನೂ ಹೊರಗೆಡಹುತ್ತದೆಯಷ್ಟೆ?

ಏನಿದ್ದರೂ ನಿರ್ಮಲ ಮನಸ್ಸಿನ ಬಾಲ್ಯದಲ್ಲಿ ಮನೆಯವರೆಲ್ಲ ಸೇರಿ ಗೌಜಿ ಗದ್ದಲದೊಂದಿಗೆ ಪಟಾಕಿ ಸಿಡಿಸಿ ಆನಂದಿಸಿದ್ದು ಬಹುಕಾಲ ಸ್ಮರಣೀಯ.

****

ಹೈಸ್ಕೂಲ್ ದಿನಗಳಲ್ಲೋ ಪಟಾಕಿಯ ಸೆಳೆತ ಕಡಿಮೆಯೇನಲ್ಲ ... ಆಗಂತೂ ಅಪ್ಪನಿಗೆ ಕಾಯುವ ಅವಶ್ಯವಿಲ್ಲ ... ಪಟಾಕಿ ಎಲ್ಲಿ ಸಿಗುತ್ತದೆ.. ಎಷ್ಟು ತರಬೇಕು ಎಲ್ಲ ನಮ್ಮದೇ ಪಾರುಪತ್ಯ ...
ಅಕ್ಕಂದಿರೋ ತಮ್ಮ ಪದವಿ ಪರೀಕ್ಷೆಗಳ ತರಾತುರಿಯಲ್ಲಿದ್ದರೆ ಹಬ್ಬದ ಆಚರಣೆ ನಿರಾತಂಕ... !

ಶಾಲೆಯಲ್ಲಿ ಯಕ್ಷಗಾನದ ತರಗತಿಗಳು ; ಮನೆಯಲ್ಲಿ ಅಭ್ಯಾಸ....ಮಧ್ಯೆ ಮಧ್ಯೆ ಗಣಿತದ ಮೇಸ್ಟ್ರ ಮನೆಲೆಕ್ಕದ ಹಾವಳಿ ! ಬರೆದೂ ಬರೆದೂ ಸುಸ್ತಾಗುವಷ್ಟು ನೋಟ್ಸ್ ಗಳು ಅಯ್ಯಪ್ಪಾ ಸಾಕು ಸಾಕು ....

ಹೀಗಿದ್ದರೂ ದೀಪಾವಳಿ ಕಳೆಯುವುದನ್ನೇ ಕಾಯುತ್ತಿದ್ದುದು "ಉದಯವಾಣಿಯಲ್ಲಿ " ಬರುವ ಧರ್ಮಸ್ಥಳ ಮೇಳದ "ವೇಳಾ ಪಟ್ಟಿ"ಗೆ !
ಯಾವುದಿರಬಹುದು ಹೊಸ ಪ್ರಸಂಗ ? ಯಾರದಿರಬಹುದು ಕಥೆ ?

ಸುರತ್ಕಲ್ ಮೇಳದವರದ್ದೇನು ಪ್ರಸಂಗ ? ಜೋಗಿ -ಸುಂದರಣ್ಣನ ಜೋಡಿಗೆ ಪದ್ಯಾಣ ಗೆಣಪ್ಪಣ್ಣನ ಪದ! ಶ್ರೀನಿವಾಸ ಕಲ್ಯಾಣ ಪ್ರಸಂಗ ! ಇತ್ಯಾದಿ ಕಾತರ ... ಕುತೂಹಲ...

ಇದರ ಮಧ್ಯೆ ಆಚೆ ಮನೆ ಪೋಸ್ಟ್ ಮಾಸ್ತರ ಮಗಳು ಎಲೆಕ್ಟ್ರಿಸಿಯನ್ ಜೊತೆ ಓಡಿ ಹೋದ ಬಿಸಿ ಬಿಸಿ ರಂಗು ರಂಗಿನ ಸುದ್ದಿ...!

ಇನ್ನೊಂದೆಡೆ ಆಗಷ್ಟೇ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದ್ದ "ದೊಡ್ಡವರ ಚಂದಮಾಮ " "ದೊಡ್ಡವರ ಬಾಲಮಂಗಳದ " ರಸಭರಿತ ಕಥೆಗಳ ಗುಟ್ಟಾದ ವಿನಿಮಯ !

ದೀಪಾವಳಿ ರಂಗೇರಿಸುತ್ತಿದ್ದುದಂತೂ ಸತ್ಯ !

****

ಕಾಲೇಜು ದಿನ ಮುಗಿದು ಅಕ್ಕಂದಿರಿಗೆ ಮದುವೆ ಕಳೆದು ಮತ್ತೆ ಅಕ್ಕ ಭಾವಂದಿರಿಗೆ ಮನೆಯಲ್ಲಿ ಹೊಸ ದೀಪಾವಳಿ ...
ಆಗ ಸೆಮಿಸ್ಟರ್ ಪರೀಕ್ಷೆ ನೆಪದಲ್ಲಿ ಗೈರು ಹಾಜರಿ...!

****

ಪದವಿ ಮುಗಿದು ಕೆಲಸದ "ಗಾಣಕ್ಕೆ " ಹೆಗಲು ನೀಡಿದ ಮೇಲೆ ಅಕ್ಕನ ಮಕ್ಕಳೆಲ್ಲ ಮನೆ ತುಂಬಾ ಗುಲ್ಲೆಬ್ಬಿಸುತ್ತಿದ್ದು "ಮಾಮ ಯಾವಾಗ ಬತ್ತೆ?" ದೂರವಾಣಿ ಕರೆ ....!

ಮತ್ತೆ ಬಂತು ದೀಪಾವಳಿ....

ಎಲ್ಲರೊಡನೆ ಬೆರೆಯಲು ನಾಲ್ಕು ದಿನ ಸವಿಯುಣ್ಣಲು ಹರಸಾಹಸ ಮಾಡಿ ಮೆಜೆಸ್ಟಿಕ್ ದಾರಿ ಹಿಡಿದರೆ ......

"ಸೂಜಿ ಮೊನೆ ಊರುವಷ್ಟು..."
ಜಾಗವಿಲ್ಲ ಜನ ದಟ್ಟಣೆ ... ಬಸ್ಸಿನ ಕಿಟಕಿ ಮೂಲಕ ಒಳ ನುಗ್ಗಿ ಸೀಟ್ ಹಿಡಿದಾಗ ಬರುವುದು "ಉಸ್ಸಪ್ಪಾ" ಎಂಬ ದೀರ್ಘ ಸಮಾಧಾನದ ಉಸಿರು !

ಅಯ್ಯೋ ಎಂಥಾ ಕೆಟ್ಟ ರಸ್ತೆ.... ಘಾಟಿ ರಸ್ತೆಯಂತೂ ಹೇಳಿ ಪ್ರಯೋಜನವಿಲ್ಲ ...ಅದೇ ಹೊ೦ಡ .... ಅದೇ ಗುಂಡಿ ...!

ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಿದರೂ ಕಾಮಗಾರಿ ಯಾಕೋ ಇನ್ನೂ ನಡೆದೇ ಇಲ್ಲ ...!

ಬೆಳಗ್ಗೆ ಮನೆ ಸೇರಿದಾಗ ಕೊನೆಯ ಸೀಟ್ ನಲ್ಲಿ ಕುಳಿತ ಪರಿಣಾಮ ! ಸೊಂಟದ ಕೀಲುಗಳೆಲ್ಲ "ಸಂಗೀತ " ಹೇಳಲು ತೊಡಗುತ್ತದೆ ..

ಮನೆ ಸೇರಿದ ಮೇಲೆ ತಲೆಗೆ ಎಣ್ಣೆ ( ಹೊಟ್ಟೆಗಲ್ಲ..... ! ) ಹಚ್ಚಿ ಹಂಡೆಯಲ್ಲಿ ಕಾದ ಬಿಸಿ ನೀರಿನ ಸ್ನಾನವಾದಾಗ ಒಮ್ಮೆ ಹಾಯ್ ಎನಿಸಿ ಮಕ್ಕಳೊಡನೆ ಮಕ್ಕಳಾಗುವ ಹಿತ ಏನು ಚೆನ್ನ !

ಈಗಲಂತೂ ಎಲ್ಲರೂ ಸೇರುವ ಸಾದ್ಯತೆ ಇಲ್ಲ .... ಒಬ್ಬರಿಗೆ ತಿಂಗಳ ಟಾರ್ಗೆಟ್ .... ಇನ್ನೊಬ್ಬರಿಗೆ ಇನ್ನೊದು ತುರ್ತು ... ಅದರೂ ಸೇರಿದ ನಾಲ್ಕು ಜನ ಮಜಾ ಮಾಡಿ ಪಟಾಕಿ ಬದಲು ಉಳಿದವರ ಹೊಟ್ಟೆ ಉರಿಸಿ ಸಂತಸ ಪಡುವ ಕಾಲ !

ಹೊಸ ಮೇಳ ... ಹೊಸ ಆಡಳಿತ ...
ಹಳೆ ಚುಂಡಿ ಕಲಾವಿದರು ಮುಖ್ಯ ಪಾತ್ರಧಾರಿಗಳು !
ಹಾಡಿದ್ದೇ ಹಾಡು ಮಾಡಿದ್ದೇ ಆಟ !


ಎಲ್ಲ ಕಾಲಸ್ಯ ಕುಟಿಲಾಗತಿ... ..!
ಏನಿದ್ದರೂ ..... ಹೇಗಿದ್ದರೂ ..

ಮತ್ತೆ ಹೊಸತನ ... ಹೊಸ ಬಾಂಧವ್ಯ ... ಚಿಗುರೊಡೆಯುವ ಸಂಭವ ....
ಹೊಸ ಆಸೆ ... ಹೊಸ ಕಾತರ ... ನಿರೀಕ್ಷೆಗಳನ್ನು ಬಿಟ್ಟು ಮತ್ತೆ ಕಳೆಯಿತು ದೀಪಾವಳಿ....

ಅಲ್ಲವೇ ?

****

Thursday, September 10, 2009

ಎಲ್ಲರು ಮಾಡುವುದು ಹೊಟ್ಟೆಪಾಡಿಗಾಗಿ...


ಮೊದಲೇ ಹೇಳಿಬಿಡುತ್ತೇನೆ . ಈ ವಿಷಯವನ್ನು ಹೇಳಲು ಸಂಕಟವಾಗುತ್ತದೆ . ಹೇಳದೆ ಇರೋಣವೆಂದರೆ ಮನಸ್ಸು ಒಪ್ಪುವುದಿಲ್ಲ . ಅದ್ದರಿಂದ ಇಂಥ ಒಂದು ವಿಷಯವನ್ನು ಪ್ರಸ್ತಾಪ ಮಾಡಲು ಹೊರಟಿದ್ದೇನೆ .


ಕರಾವಳಿ ಕರ್ಣಾಟಕದ ಹೆಮ್ಮೆಯ ಕಲೆ ಯಕ್ಷಗಾನವೆಂಬುದು ಸರ್ವ ವಿದಿತ . ಯಕ್ಷಗಾನವು ಆರಾಧನಾ ಕಲೆಯಾಗಿ ಆರಂಭಗೊಂಡು ಪೌರಾಣಿಕ ಪುಣ್ಯ ಕಥಾ ಭಾಗಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಮನೋರಂಜನಾ ಕಲಾ ಮಾಧ್ಯಮವಾಗಿ ಹಲವು ಶತಮಾನಗಳಿಂದ ಬೆಳೆದು ಬಂದಿದೆ. ಅನುಭವಿಗಳು ಹಿರಿಯರು ಹೇಳುವಂತೆ ಅದು ತನ್ನ ಉನ್ನತಿಕೆಯನ್ನು ಹೊಂದಿ ಇತ್ತೀಚಿಗೆ ಅವನತಿಯತ್ತ ನಿಧಾನಗತಿಯಿಂದ ಸಾಗುತ್ತಿದೆ ಎಂಬುದು ಇಂದಿನ ಹಲವು ಘಟನೆಗಳಿಂದ ಅನುಭವವೇದ್ಯವಾಗುತ್ತಿದೆ . ಯಕ್ಷಗಾನ ಕಲಾ ಪ್ರಕಾರ ಯಾವಾಗ ವಾಣಿಜ್ಯೀಕರಣ ಹೊಂದಿತೋ ಆಗಲೇ ಎಲ್ಲ ಕಲಾಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದರೂ ಕಾಲಗತಿಯಿಂದ ಮತ್ತು ಕಲಾವಿದನ ಆರ್ಥಿಕ ನೆಲೆಗಟ್ಟಿನಲ್ಲಿ ಅದಕ್ಕೆ ವ್ಯಾಪಕ ಪ್ರೋತ್ಸಾಹವೂ ದೊರೆಯಿತು .ಇದು ಒಂದು ದೃಷ್ಟಿಯಿಂದ ಕಲೆಯ ಅವನತಿಗೂ ಕಾರಣವೆಂಬುದು ನಿರ್ವಿವಾದದ ಸಂಗತಿ.

ಇತ್ತೀಚಿಗಿನ ದಿನಗಳಲ್ಲಿ ಯಕ್ಷಗಾನವು ಪ್ರದರ್ಶನದ ವಸ್ತುವಾಗುತ್ತಿರುವುದು ವಿಷಾದನೀಯ ಸಂಗತಿ . ಗಣ್ಯ ವ್ಯಕ್ತಿಗಳ ಸ್ವಾಗತಕ್ಕೆ , ರಾಜಕೀಯ ಪಕ್ಷದ ನೇತಾರರ ಹುಟ್ಟಿದ ಹಬ್ಬಗಳಿಗೆ ಶುಭ ಹಾರೈಸಲು, ಯಾವುದೊ ಸ್ವಪ್ರತಿಷ್ಠೆಯ ಮೆರವಣಿಗೆಗಳಿಗೆ, ಸಿನೆಮಾದದ ದೃಶ್ಯಗಳಲ್ಲಿ ಅಸಂಬದ್ಧ ಸನ್ನಿವೇಶದಲ್ಲಿ ಹಿನ್ನೆಲೆಯಲ್ಲಿ ಕುಣಿಯಲು ಬಳಕೆಯಾಗುತ್ತಿರುವುದು ಈ ಕಲೆಯ ಸಾಂಸ್ಕೃತಿಕ ದಿವಾಳಿತನದ ಪ್ರತೀಕವಾಗುತ್ತಿರುವುದು ಯಕ್ಷ ಪ್ರೇಮಿಗಳಿಗೆ ಸಹಿಸಲಸಾಧ್ಯವಾದ ಹಿಂಸೆಯಾಗಿ ಪರಿಣಮಿಸತೊಡಗಿದೆ .ನೀವು ಗಮನಿಸಿ ನೋಡಿದರೆ ಇಂಥ ರೋಡ್ ಷೋ ಯಾ ಇತರ ಯಕ್ಷಗಾನದ "ಅನೈತಿಕ" ಬಳಕೆಯಾಗುವಲ್ಲಿ ಯಕ್ಷಗಾನದ ವೇಷ ಭೂಷಣ ತೊಟ್ಟವರು ನಿಜವಾದ ನಟ ಸಾರ್ವಭೌಮರಾಗಿರದೆ ಬರೇ ಚಟ ಸಾರ್ವಭೌಮರಾಗಿರುವವರೆಂದು ಮೊದಲ ನೋಟದಲ್ಲೇ ತಿಳಿದುಬರುತ್ತದೆ ! ಇವರು ತಮಗೆ ಸಿಗುವ ವಿತ್ತದ ಅಸೆಯಿಂದಲೋ, ತಮ್ಮ ಚಟವನ್ನು ಪ್ರದರ್ಶನ ಮಾಡಿ ಹೆಸರುವಾಸಿಯಾಗಲೆಂದೋ? ಮನದಂದಂತೆ ಕುಣಿದು ತೀವ್ರ ಮುಜುಗರ ಉಂಟು ಮಾಡುತ್ತಾರೆ.
ಇವತ್ತಿನ ಕನ್ನಡ ದೈನಿಕವೊಂದರಲ್ಲಿ "ಕೆ. ಪಿ. ಯಲ್ . ಉದ್ಘಾಟನಾ ಸಮಾರ೦ಭದ ಸಂದರ್ಭ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರಾವಳಿ ಕರ್ಣಾಟಕದ ಹೆಮ್ಮೆಯ ಯಕ್ಷಗಾನ ವೇಷಗಳು ಮಿಂಚಿತು . ಆದರೆ ಅಲ್ಲಿ ಯಕ್ಷಗಾನ ಪದವಿರದೆ ಇನ್ನಾವುದೋ ಹಾಡಿಗೆ ವೇಷಧಾರಿಗಳು ಹೆಜ್ಜೆ ಹಾಕಬೇಕಾಗಿ ಬಂದದ್ದು ದುರಂತ " ಎಂಬ ವರದಿ ಪ್ರಕಟವಾಗಿದೆ . ಇತ್ತೀಚಿಗೆ ಸರ್ವೇ ಸಾಮಾನ್ಯವೆಂಬಂತೆ ಗೋಚರಿಸುವ ಇಂಥ ವೇಷಗಳನ್ನು ಪ್ರಜ್ಞಾವನ್ತರೆನಿಸಿದ ಕರಾವಳಿಯ ಜನರೇ ಹಾಕುತ್ತಿರುವುದಂತೂ ತೀರಾ ಶೋಚನೀಯ ಸಂಗತಿ. ಇಂಥವರನ್ನು ಕೇಳ ಹೊರಟರೆ ಸಿಗುವ ಸಿದ್ಧ ಉತ್ತರ "ನಮ್ಮ ಕಲೆಯನ್ನು ಎಲ್ಲರಿಗೂ ಪರಿಚಯಿಸುತ್ತಿದ್ದೇವೆ ; ಅದು ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯಬೇಕೆ೦ಬುದೇ ನಮ್ಮ ಆಶಯ " ಇತ್ಯಾದಿ . ನೀವೇನಾದರೂ ಸ್ವರ ಏರಿಸಿ ಮಾತಾಡಿದರೆ ಸಿಗುವ ಉತ್ತರ " ಏನು ಮಾಡುವುದು ಸ್ವಾಮೀ ಎಲ್ಲ ಹೊಟ್ಟೆ ಪಾಡು " !!! ( ಆಗ ಪಾಪ ಬಡಪಾಯಿ ಹೋಗಲಿ ಬಿಡಿ ಎಂಬ ಕನಿಕರ ನಿಮಗೆ ಸಹಜವಾಗಿಯೇ ಮೂಡುವಂತೆ ಅವರು ಮಾಡುತ್ತಾರೆ ಬಿಡಿ !! )
ಏನಿದ್ದರೂ ಯಕ್ಷಗಾನವನ್ನು ಸಿನೆಮಾಗಳಲ್ಲಾಗಲೀ , ಅಂತರರಾಷ್ಟ್ರೀಯ ವೇದಿಕೆಗಳಲ್ಲಾಗಲೀ "ಯಕ್ಷಗಾನವನ್ನಾಗಿಯೇ " ಪ್ರದರ್ಶಿಸುವ ಬಗ್ಗೆ ನಮ್ಮ ವಿರೋಧವಾಗಲೀ ಆಕ್ಷೇಪವಾಗಲೀ ಇಲ್ಲ . ಅದನ್ನು ವಿಕಾರಗೊಳಿಸಿ , ಮನಬಂದಂತೆ ಸಿಕ್ಕ ಸಿಕ್ಕ ಸ್ಥಳಗಳಲ್ಲಿ , ಅದನ್ನು ದುರುಪಯೋಗ ಪಡಿಸಿ ಕೇವಲ ಹೊಟ್ಟೆಪಾಡು ಎಂಬಂತೆ ಬಿಂಬಿಸುವ ಬಗ್ಗೆ ನಮ್ಮ ತೀವ್ರ ವಿರೋಧವಿದೆ.

ಇಂಥ ವಿಚಾರಗಳನ್ನು ಯಕ್ಷಗಾನ ಆಸಕ್ತರು , ಸಮ್ಮೇಳನಗಳಲ್ಲಿ ಹಾಗೂ ತತ್ಸಂಬಂಧೀ ವಿಚಾರ ಸಂಕಿರಣಗಳಲ್ಲಿ ಗಮನ ಹರಿಸಿ ಸಾರ್ವಜನಿಕ ಅರಿವು ಮೂಡಿಸಬೇಕಾದ ಅನಿವಾರ್ಯತೆ ಈಗಿನ ಕಾಲಘಟ್ಟದಲ್ಲಿದೆ . ಇದನ್ನು ಹೇಗೆ ಸಾಧಿಸಬಹುದು ? ನಿಮ್ಮ ಅಭಿಪ್ರಾಯಗಳೇನು? ಪುನಃ ಹೇಳುತ್ತಿದ್ದೇನೆ ಈ ವಿಷಯವನ್ನು ಹೇಳಲು ಸಂಕಟವಾಗುತ್ತದೆ . ಹೇಳದೆ ಇರೋಣವೆಂದರೆ ಮನಸ್ಸು ಒಪ್ಪುವುದಿಲ್ಲ .!