Wednesday, December 23, 2009

ಕ್ಯಾಸೆಟ್ ಚೌರ್ಯ !

ಒಬ್ಬ ರಚಿಸಿದ ಯಾವುದೇ ಕೃತಿಯನ್ನು ಯಥಾವತ್ ಯಾ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಭಟ್ಟಿ ಇಳಿಸಿದರೆ ಅದನ್ನು ಕೃತಿ ಚೌರ್ಯ ಎನ್ನುತ್ತಾರೆ. ಕೆಲವರಂತೂ ಇತ್ತೀಚಿಗೆ ರಾಜಾರೋಷವಾಗಿ "ಇಂಥ ಕಡೆಯಿಂದ ಕದ್ದದ್ದು " ಎಂದು ತಮ್ಮ ಚೋರತನವನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಹೆಸರುವಾಸಿಯಾಗ ಬಯಸಿದರೆ ಇನ್ನು ಕೆಲವರು ಕೇವಲ ಹಣ ಸಂಪಾದನೆಯೇ ಗುರಿಯಾಗಿಸಿ ಕೃತಿ ಚೌರ್ಯ ಮಾಡುವುದು ಕಂಡುಬರುತ್ತದೆ.ಕೃತಿ ಚೌರ್ಯ ಮಾಡುವುದು ಕಾನೂನು ರೀತ್ಯಾ ಅಪರಾಧ. ಇಂಥ ಕೆಟ್ಟ ಚಾಳಿಯೂ ನಿಜವಾದ ಕೃತಿಕಾರನಿಗೆ ಹಲವು ರೀತಿಯ ನಷ್ಟವನ್ನು ಉಂಟುಮಾಡುತ್ತದೆ .ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಕೃತಿ ಚೌರ್ಯ ಇಂದು ವ್ಯಾಪಕವಾಗಿರುವುದು ವಿಷಾದನೀಯ. ನಿಜವಾದ ಪ್ರತಿಭೆ ಇದ್ದಲ್ಲಿ ಇಂಥ ದುರ್ಧೆಸೆಗೆ ಯಾವೊಬ್ಬನೂ ಇಳಿಯುವುದು ಹಿತಕರವಲ್ಲ .

ಇಲ್ಲಿ ನಾನು ಹೇಳಹೊರಟಿರುವುದು ಕೃತಿ ಚೌರ್ಯದ ಒಂದು ರೂಪವಾದ ಧ್ವನಿಮುದ್ರಿಕೆಗಳ ಚೋರತನದ ಬಗ್ಗೆ !

ಇತ್ತೀಚಿಗೆ ಬೆಂಗಳೂರಿನ ಪ್ರಸಿದ್ಧ ಕಲಾಕ್ಷೇತ್ರದಲ್ಲಿ ಯಕ್ಷಗಾನ ವೀಕ್ಷಣೆಗೆ ಹೋಗಿದ್ದಾಗ ಧ್ವನಿಮುದ್ರಿಕೆಗಳ ತಟ್ಟೆಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯಿಂದ ಅಪೂರ್ವವೆನಿಸಿದ ಕೆಲವು ಪ್ರಸಂಗಗಳ ತಟ್ಟೆಯೊಂದನ್ನು ಗಮನಿಸಿದಾಗ ಅದರಲ್ಲಿ ಮುದ್ರಿತವಾಗಿರುವಂತೆ "ಪಾಂಡವಸ್ವರ್ಗಾರೋಹಣ ", "ರಣಚಂಡಿ ", "ವಿಷಮ ದಾಂಪತ್ಯ " ಇತ್ಯಾದಿ ಎಂಟು ಪ್ರಸಂಗಗಳಿರುವ ಒಂದು ಅಪೂರ್ವ ಸಂಗ್ರಹವೆಂದೂ ಹಿಮ್ಮೇಳದಲ್ಲಿ ಬಡಗುತಿಟ್ಟಿನ ಭಾಗವತ ವಿದ್ವಾನ್ ಒಬ್ಬರು ಈ ಎಲ್ಲ ಪ್ರಸಂಗಗಳಲ್ಲೂ ಭಾಗವತರೆಂದೂ , ಮುಮ್ಮೆಳದಲ್ಲಿ ತೆಂಕು ತಿಟ್ಟಿನ ಪ್ರಸಿದ್ಧ ಅರ್ಥಧಾರಿಗಳಾದ ಶೇಣಿ, ಕುಂಬಳೆ, ನಯನ ಕುಮಾರ್,ಕೆ.ಗೋವಿಂದ ಭಟ್ ಎಂದೂ ಪಟ್ಟಿಯಲ್ಲಿ ಪ್ರಕಟಿಸಿದ್ದು ಸಹಜವಾಗಿ ಕುತೂಹಲ ಹುಟ್ಟಿಸುವ ವಿಚಾರವಾದುದರಿಂದ ಕೂಡಲೇ ಹಣ ತೆತ್ತು ಖರೀದಿಸಿದೆ .

ಮನೆಗೆ ಮರಳಿ ಹೊಸತಾಗಿ ಖರೀದಿಸಿದ ತಟ್ಟೆಯನ್ನು ಆಲಿಸಬೇಕೆಂದು ಆರಂಭಿಸಿದಾಗ ಮೊದಲಿಗೆ "ಇದನ್ನೆಲ್ಲಿಯೋ ಕೇಳಿದ್ದೆನಲ್ಲಾ? " ಎಂಬ ಗುಮಾನಿ ಹುಟ್ಟಿಕೊಂಡಿತು . ಪಾಂಡವ ಸ್ವರ್ಗಾರೋಹಣ ಪ್ರಸಂಗದಲ್ಲಿ ಶೇಣಿಯವರ ಧರ್ಮರಾಯ ಹಾಗೂ ನಯನ ಕುಮಾರರ ಕೃಷಿಕ ಸಿದ್ಧನ ಪಾತ್ರದ ಸಂಭಾಷಣೆ ಕೇಳುತ್ತಿದ್ದಂತೆ ನನ್ನ ಸಂದೇಹವೆಲ್ಲ ಮಾಯವಾಗಿ ಇದು ಅದುವೇ! ಎಂದು ಸ್ಪಷ್ಟವಾಯಿತು . ನಾನು ೨೦೦೧ ರಲ್ಲಿ ಸುಳ್ಯದ ಸಂಗೀತ ಕ್ಯಾಸೆಟ್ ಅಂಗಡಿಯಿಂದ ಖರೀದಿಸಿದ್ದ ಆಡಿಯೋ ಕ್ಯಾಸೆಟ್ "ಪಾಂಡವ ಸ್ವರ್ಗಾರೋಹಣ " ದಲ್ಲಿ ತೆಂಕು ತಿಟ್ಟಿನ ಪ್ರಖ್ಯಾತ ಮನೆತನದ ಭಾಗವತರೊಬ್ಬರು ಭಾಗವತಿಕೆಯನ್ನು ಮಾಡಿದ್ದು ಅದರ ಸವಿಯನ್ನು ತುಂಬಾ ಸಲ ಸವಿದ ಮೇಲೆ ಈ ತಟ್ಟೆಯಿಂದ ಹೊರ ಹೊಮ್ಮುವ ಅರ್ಥಕ್ಕೂ ಆ ಕ್ಯಾಸೆಟ್ ಅರ್ಥಕ್ಕೂ ಎಳ್ಳಷ್ಟು ವೆತ್ಯಾಸವಿಲ್ಲ ಕೇವಲ ಪದಗಳು ಮಾತ್ರ ಬಡಗಿನವು ಅಷ್ಟೇ ಎಂದು ತಿಳಿಯಿತು !

ಬಹಳ ಜಾಣತನದಿಂದ ತೆಂಕಿನ ಪದಗಳನ್ನು ಮಾತ್ರ ಕಿತ್ತು ಹಾಕಿ ಬಡಗಿನ ಪದ್ಯಗಳನ್ನು ಜೋಡಿಸಿ ಮಾರುಕಟ್ಟೆಯಲ್ಲಿ ಬಿಟ್ಟು ಲಾಭ ಪಡೆದ ಕೃತಿ ಚೋರರು ಮಾಡಿದ ಕಿತಾಪತಿ ಇದು ಎಂದು ತಿಳಿದಾಗ ಬಹಳ ವಿಷಾದವೆನಿಸಿತು.

ಇದೇಕೆ ಹೀಗೆ ?
ತೆಂಕು ತಿಟ್ಟಿನ ಪ್ರಖ್ಯಾತ ಮನೆತನದ ಭಾಗವತರ ಹಾಡು ಅಷ್ಟೊಂದು ಕಳಪೆಯೇ ? ಈಗಿನಂತೆ ಕೇಳಲು ಕರ್ಣ ಕರ್ಕಶವೇ ?
ಖಂಡಿತಾ ಇಲ್ಲ .

ಯಾಕೆಂದರೆ ತೆಂಕಿನ ಗಾನ ಗಂಧರ್ವರೆನಿಸಿದ್ದ ಭಾಗವತರು ತಮ್ಮ ವೃತ್ತಿ ಜೀವನದ ಉತ್ತುಂಗ ಸ್ಥಿತಿಯಲ್ಲಿ ಇದ್ದಾಗ ಹಾಡಿದ ಹಾಡು ಅದು. ಹಿರಿಯ ಕಲಾವಿದರೆಲ್ಲ ಒಂದೇ ಉಸಿರಿಗೆ ಸೂಚಿಸುತ್ತಿದ್ದ ಯುವ ಭಾಗವತರಾಗಿದ್ದ ಅವರ ಹಾಡು ಅತ್ಯಂತ ಮನೋಹರವಾಗಿ ಮೂಡಿ ಬಂದ ಕ್ಯಾಸೆಟ್ ಅದು. ಯಾವನೇ ಕಲಾ ರಸಿಕ ಈ ಭಾಗವತರ ವೃತ್ತಿ ಜೀವನದ ಉತ್ತುಂಗ ಸ್ಥಿತಿಯಲ್ಲಿ ಹಾಡಿದ ಕರ್ಣ ಪರ್ವ ಪ್ರಸಂಗದ " ಎಲೆ ಪಾರ್ಥ ನೀ ಕೇಳು ಒಲಿದೆನ್ನ ಮಾತಾ " ಅಥವಾ ಪಟ್ಟಾಭಿಷೇಕ ಪ್ರಸಂಗದ " ವೀರ ದಶರಥ ನೃಪತಿ ಇನ ಕುಲವಾರಿಧಿಗೆ ಚಂದ್ರಮನು ...." ಕೇಳಿದರೆ ಈಗಲೂ ಹುಚ್ಚೆದ್ದು ಕುಣಿಯಬಲ್ಲ ಅದ್ಭುತ ಪ್ರತಿಭೆ ಅದು !

ಹಾಗಿದ್ದರೆ ಬಡಗಿನ ಭಾಗವತರ ಹಾಡು ಅಷ್ಟೊಂದು ಸೊಗಸಾಗಿದೆಯೇ ?
ಖಂಡಿತಾ ಇಲ್ಲ !
ಅವರಂತೂ ಗಡಿಬಿಡಿಗೆ ಮಾಡಿದ ಅಡುಗೆಯಂತೆ ಪದ್ಯಗಳನ್ನು ಹೇಳಿ ಮುಗಿಸಿದ್ದಾರೆ !

ಇರಲಿ ಇದೊಂದಲ್ಲವೇ ಎಂದು ಮುಂದಿನ "ರಣಚಂಡಿ " ತಾಳಮದ್ದಲೆ ಕೇಳ ಹೊರಟರೆ ಮತ್ತದೇ ಕಲಬೆರಕೆ!

ಕ್ಯಾಸೆಟ್ ಕಲಬೆರಕೆ ಮಾಡುವ ಭರದಲ್ಲಿ ಮೂಲ ಭಾಗವತರು ಪಾತ್ರಧಾರಿಯ ಮಾತಿನ ನಡುವೆ ಹೂಂ ಗುಟ್ಟಿದ್ದನ್ನು ತೆಗೆಯಲು ಮರೆತಿದ್ದು ಕೇಳುಗರಿಗೆ ಇದು ಕಲಬೆರಕೆ ಎಂದು ಸ್ಪಷ್ಟವಾಗಿ ತಿಳಿಯಲು ಅನುಕೂಲವಾಗಿದೆ . ಒಟ್ಟಿನಲ್ಲಿ ಈ ಕಲಬೆರಕೆ ಕ್ಯಾಸೆಟ್ ಕೇಳುವಾಗ ಹೋಳುಗಳಿಲ್ಲದ ಸಾಂಬಾರನ್ನು ಸವಿದ ಅನುಭವ ಆಗುವುದಂತೂ ಖಚಿತ !

ಇಂಥ ಕ್ಯಾಸೆಟ್ ಚೌರ್ಯ ನಿಜಕ್ಕೂ ಖಂಡನೀಯ . ಇದರಿಂದ ನಿಜವಾದ ರಸಾಸ್ವಾದನೆ ಸಿಗದೇ ನಿರಾಶೆಯಾಗುವುದಂತೂ ಖಂಡಿತ .

ಕಲಾ ರಸಿಕರು ಇಂಥ ತಟ್ಟೆಗಳನ್ನು ಖರೀದಿಸುವ ಮೊದಲು ಸರಿಯಾಗಿ ಪರೀಕ್ಷಿಸಿ ತೆಗೆದುಕೊಳ್ಳುವುದು ಉತ್ತಮ .

ನಿಮಗಿಂಥಾ ಅನುಭವ ಆಗಿದೆಯೇ ?

Wednesday, December 9, 2009

ಮೊದಲ ಹವ್ಯಕ ಯಕ್ಷಗಾನ "ದಕ್ಷಾಧ್ವರ "...
ಕರಾವಳಿ ಕರ್ನಾಟಕ ಹಾಗೂ ಕಾಸರಗೋಡು , ಗಡಿನಾಡು ಪ್ರದೇಶಗಲ್ಲಿ ಹೆಚ್ಚಾಗಿಕಂಡುಬರುವ ಬ್ರಾಹ್ಮಣ ಪಂಗಡಗಳಲ್ಲಿ ಹವ್ಯಕರು ಪ್ರಮುಖರು ಪಂಚಾಯತನ ಪೂಜೆಯ ಮೂಲಕ ಪ್ರಕೃತಿಯ ಆರಾಧನೆ, ಹೋಮ ಹವನಾದಿಗಳಲ್ಲಿ ಹವಿಸ್ಸನ್ನು ಅರ್ಪಿಸುವಮೂಲಕ ದೇವತಾ ಸಂತೃಪ್ತಿಯನ್ನು ನಡೆಸುವುದರಿಂದ "ಹವ್ಯಕ"ರೆಂಬ ಹೆಸರು ಪಡೆದವರು ಎಂಬುದು ಹಿರಿಯರಿಂದ ತಿಳಿದುಬರುತ್ತದೆ.ಹವ್ಯಕರ ಆಡುಭಾಷೆಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ,ಕಾಸರಗೋಡು ಪ್ರದೇಶಗಳಲ್ಲಿ ತುಸು ಭಿನ್ನವಾಗಿದೆ.

ಯಕ್ಷಗಾನ ಕ್ಷೇತ್ರಕ್ಕೆ ಹವ್ಯಕ ಸಮುದಾಯದವರ ಕೊಡುಗೆ ಅಪಾರ. ಹಲವಾರು ಶ್ರೇಷ್ಠಕಲಾವಿದರು ಯಕ್ಷಗಾನ ಕಲೆಯನ್ನು ತಮ್ಮ ಪ್ರತಿಭೆಯಿಂದ ಬೆಳಗಿದ್ದಾರೆ. ಯಕ್ಷಗಾನ ಪ್ರಸಂಗ ಸಾಹಿತ್ಯವನ್ನು ಅವಲೋಕಿಸಿದರೆ ಎಲ್ಲ ಕಲಾವಿದರೂ ಕನ್ನಡ ಭಾಷೆ ಯಾ ತುಳು ಭಾಷೆಯ ಪ್ರಸಂಗಗಳಲ್ಲಿ ಮಿಂಚಿ ಭಾಷಾ ಮಾಧ್ಯಮದ ಮೂಲಕ ತಮ್ಮ ಪ್ರತಿಭಾ ಜ್ಯೋತಿಯನ್ನು ಬೆಳಗಿದ್ದಾರೆ.

ಹವ್ಯಕರಿಗೆ ತಮ್ಮದೇ ಭಾಷೆಯಲ್ಲಿ ಯಕ್ಷಗಾನ ಪ್ರಸಂಗ ಸಾಹಿತ್ಯವು ಲಭ್ಯವಿಲ್ಲದ ವಿಚಾರವನ್ನು ಮನಗಂಡ ಕೀರಿಕ್ಕಾಡು ಮಾಸ್ಟರ್ ವಿಷ್ಣು ಭಟ್ಟರ ಮಗ ಶ್ರೀ ವಿಶ್ವ ವಿನೋದ ಬನಾರಿಯವರು ಪ್ರಪ್ರಥಮವಾಗಿ ಹವ್ಯಕ ಆಡು ಭಾಷೆಯಲ್ಲಿ ರಚಿಸಿದ ಪ್ರಸಂಗವೇ ದಕ್ಷಾಧ್ವರ. ಈ ಪ್ರಸಂಗದ ಬಳಿಕ ಅಂಬೇಮೂಲೆ ಗೋವಿಂದ ಭಟ್ಟರು ಕೆಲವಾರು ಹವ್ಯಕ ಪ್ರಸಂಗಗಳನ್ನು ರಚಿಸಿದ್ದಾರೆ.

ಶ್ರೀ ವಿಶ್ವವಿನೋದ ಬನಾರಿಯವರು ಕನ್ನಡ ಭಾಷೆಯಲ್ಲಿರುವ ಬಲು ಪ್ರಸಿದ್ಧ"ಗಿರಿಜಾ ಕಲ್ಯಾಣ" ಪ್ರಸಂಗದ ಮೊದಲ ಸಂಧಿಯನ್ನು " ದಕ್ಷಾಧ್ವರ" ಹವ್ಯಕ ಆಡು ಭಾಷೆಯಲ್ಲಿ ಬರೆದಿದ್ದು ಬಹುತೇಕ ಕನ್ನಡದಲ್ಲಿರುವ ಪದ್ಯಗಳ ತೆರನಂತೆ ಹವ್ಯಕ ಭಾಷೆಯಲ್ಲೂ ಉಳಿಸಿಕೊಂಡು ಪ್ರಸಂಗದ ಒಟ್ಟಂದವನ್ನು ಕಾಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಧ್ವ ಸಿದ್ದಾಂತ ಗ್ರಂಥಾಲಯ ಉಡುಪಿಯವರು ಪ್ರಕಟಿಸಿದ ಗಿರಿಜಾ ಕಲ್ಯಾಣ ಪ್ರಸಂಗದಲ್ಲಿ ಬರುವ ದಕ್ಷನು ಸತ್ರ ಯಾಗಕ್ಕಾಗಿ ಬರುವಾಗ ದೇವತೆಗಳೆಲ್ಲ ಎದ್ದು ವಂದಿಸಿದರೂ ಈಶ್ವರನು ಸುಮ್ಮನಿರುವುದನ್ನು ಕಂಡು ಕೆರಳಿ ಈಶ್ವರನನ್ನು ಜರೆಯುವಾಗ ಇರುವ ಬಲು ಪ್ರಸಿದ್ದ ಪದ್ಯ " ಸರಸಿಜಾಸನನೆಂದ ನುಡಿಗೆ ನಾ ಮರುಳಾಗಿ| ಕನ್ನೆಯನಿತ್ತೆ ನಿರರ್ಥ | ಪರಕಿಸಲು ಕೋಡಗನ ಕೈಯ್ಯ ಮಾಲೆಯ ಕೊಟ್ಟ ತೆರನಾದುದಕಟೆನ್ನ ಬದುಕು || .... " ಎಂಬ ಪದವು ಕುಂಬಳೆ ಸೀಮೆ ಹವ್ಯಕ ಭಾಷೆಯಲ್ಲಿ " ಸರಸಿಜಾಸನ ಹೇದ ಮಾತಿಂಗೆ ಮರುಳಾಗಿ | ಅರಡ್ಯದ್ದೆ ಮಗಳಾನು ಕೊಟ್ಟು | ಪರಿಮಳದ ಮಲ್ಲಿಗೆಯ ಮಾಲೆಯಾ ಮಂಗನ ಕೊರಳಿಂಗೆ ಹಾಕಿದಾಂಗಾತು ...." (ಸಾಮಾನ್ಯವಾಗಿ ಈ ಪದವನ್ನು ಹೆಣ್ಣು ಮಗಳನ್ನು ಕೊಟ್ಟ ಮಾವ, ತಮ್ಮ ಅಳಿಯನ ಕುರಿತಾಗಿ ದನಗಳಿಗೆ ಅಕ್ಕಚ್ಚು ಕೊಡುವಾಗ ತಲೆ ಬಿಸಿಯಾಗಿ ಹಾಡುವುದನ್ನು ಕೆಲವೆಡೆ ನಾನು ಕಂಡಿದ್ದೇನೆ!)

ಹಾಗೆಯೇ ಈಶ್ವರನು ದಾಕ್ಷಾಯಿಣಿಗೆ ದಕ್ಷನೇಕೆ ತನ್ನನು ಆಹ್ವಾನಿಸಿಲ್ಲ ಎಂಬುದನ್ನು ವಿವರಿಸುವ " ಒಂದು ದಿವಸ ನಾನು ಕುಳಿತಿರ್ಪ ಸಭೆಗೆ | ಬಂದನು ದಕ್ಷ ನಾನೇಳದ ಬಗೆಗೆ |......." ಪದ್ಯವೂ ಹವ್ಯಕದಲ್ಲಿ " ಒಂದು ದಿನ ಆನು ಕೂದೊಂಡಿದ್ದ ಸಭೆಗೆ | ಬಂದ ದಕ್ಷ ಆನೇಳದ್ದ ಬಗೆಗೆ ...." ಮಧ್ಯಮಾವತಿ ಏಕತಾಳದಲ್ಲಿ ಮೂಲ ಕನ್ನಡದಂತೆಯೇ ಸೊಗಸಾಗಿ ಬರೆದಿದ್ದು ಪಕ್ಕನೆ ಪಾತ್ರಧಾರಿಗೆ ಪ್ರಸಂಗ ನಡೆ ತಪ್ಪದಂತೆ ಅನುಕೂಲವೇ ಆಗಿದೆ.

ಈ ಪ್ರಸಂಗದ ಬಿಡುಗಡೆ ಹಾಗೂ ಮೊದಲ ಪ್ರದರ್ಶನ ನೀರ್ಚಾಲಿನಲ್ಲಿ ನಡೆದ ಅಖಿಲ ಭಾರತ ಹವ್ಯಕ ಸಮ್ಮೇಳನದಲ್ಲಿ ನಡೆದಿತ್ತು. ಶೇಣಿ ಅಜ್ಜನ ಮುನ್ನುಡಿ ಹೊಂದಿರುವ ಈ ಕೃತಿ ಹವ್ಯಕರ ಹೆಮ್ಮೆ ಎಂದರೂ ತಪ್ಪಾಗಲಾರದು .ಹವ್ಯಕ ಕನ್ನಡದ ಭಾಷೆಯ ಸೊಗಡನ್ನು ಸವಿಯಲು ಈ ಪ್ರಸಂಗದ ಧ್ವನಿ ಮುದ್ರಿಕೆಯು ಪದ್ಯಾಣ ಗಣಪತಿ ಭಟ್ಟರ ಕಂಠ ಸಿರಿಯಲ್ಲಿ ಶೇಣಿ ಅಜ್ಜನ ನಿರ್ದೇಶನದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಆಸಕ್ತರು ಈ ಪ್ರಸಂಗದ ಎಲ್ಲ ಪುಟಗಳಿಗಾಗಿ ಲೇಖಕರನ್ನು ಸಂಪರ್ಕಿಸಬಹುದು. .

***

Tuesday, December 8, 2009

" ದೃಷ್ಟ - ಅದೃಷ್ಟ" ದೊಳಗೊಮ್ಮೆ ಇಣುಕಿದಾಗ .....


ಕೆಲವು ವರ್ಷಗಳ ಹಿಂದೆ ಆರ್ಕುಟ್ ಸಂಪರ್ಕ ಜಾಲದಲ್ಲಿ ಯಕ್ಷಗಾನಾಸಕ್ತರ ಗುಂಪಿನಲ್ಲಿ "ಸಮಾನ ಶೀಲೇಶು ವ್ಯಸನೇಶು ಸಖ್ಯಂ " ಎಂಬಂತೆ ದೃಷ್ಟನಾದ ಮಹೇಶ ಮೊನ್ನೆಯಷ್ಟೇ ನೀಡಿದ ಪುಸ್ತಕ "ದೃಷ್ಟ-ಅದೃಷ್ಟ"ವೆಂಬ ಆತ್ಮ ವೃತ್ತಾಂತವನ್ನು ಸಾದ್ಯಂತವಾಗಿ ಓದಿದಾಗ ಸಹಜವಾಗಿ ಕೆಲವು ಅನಿಸಿಕೆಗಳು ಮನದಲ್ಲಿ ಮೂಡಿದವು. ಅವುಗಳನ್ನು ಲಿಪಿರೂಪಕ್ಕಿಳಿಸಿ ಇಲ್ಲಿ ಪ್ರಸ್ತುತಪಡಿಸಿದ್ದೇನೆ.


"ದೃಷ್ಟ-ಅದೃಷ್ಟ " ಎಂಬುದು ಎಲ್ಯಡ್ಕ ಶ್ರೀಯುತ ಈಶ್ವರ ಭಟ್ಟರ ಆತ್ಮವೃತ್ತಾಂತ . ಶ್ರೀಯುತರ ಷಷ್ಟ್ಯಬ್ಧ ಸಮಾರಂಭದ ಶುಭಾವಸರದಲ್ಲಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರಿಂದ ಅನಾವರಣಗೊಂಡ ಕೃತಿ ಕುಸುಮ.
ಸುಮಾರು ೧೯೪೦ ರಿಂದ ೧೯೭೦ರ ದಶಕದಲ್ಲಿ ದಕ್ಷಿಣ ಕನ್ನಡ, ಕಾಸರಗೋಡು ಮೂಲದ ಕೆಳ ಮಧ್ಯಮ ವರ್ಗದ ಹವ್ಯಕರ ಕುಟುಂಬಗಳ ಆರ್ಥಿಕ , ಸಾಮಾಜಿಕ ಹಾಗೂ ನೈತಿಕ ಜನ ಜೀವನಕ್ಕೆ ಹಿಡಿದ ಕೈಗನ್ನಡಿಯಂತೆ ಪುಸ್ತಕದ ಪೂರ್ವಾರ್ಧವಿದ್ದರೆ , ಪ್ರಾಮಾಣಿಕತೆ ,ಕಠಿಣ ದುಡಿಮೆಗೆ ಸಂದ ಪ್ರತಿಫಲವೇನೆಂಬ ಅಂಶವು ಕೊನೆಯ ಭಾಗದಲ್ಲಿ ಜೀವನ ಸಾರ್ಥಕ್ಯದೊಂದಿಗೆ ಉಲ್ಲೇಖಿಸಲಾಗಿದೆ .

ಪುಸ್ತಕದ ಆರಂಭದಲ್ಲಿ ಬಾಲಕ ಈಶ್ವರ ಭಟ್ಟರು ಬಾಲ್ಯದಲ್ಲಿಯೇ ಮಾತೃ ವಿಯೋಗವನ್ನು ಅನುಭವಿಸಿದ ಚಿತ್ರಣ ಮನಕಲಕುವಂತಿದೆ . ಪುಸ್ತಕ ಓದುತ್ತ ಮುಂದೆ ಸಾಗುತ್ತಿದ್ದಂತೆ ಹಳೆಯ ದಶಕಗಳ ಜೀವನ ಶೈಲಿಯ ಚಿತ್ರಣಗಳು ( ಮಳೆಯಿಂದ ರಕ್ಷಣೆ ಪಡೆಯಲು ಕೊಡೆಯ ಬದಲಾಗಿ ಮಡಲಿನ ಗೊರಬೆ....ಇತ್ಯಾದಿ ) ಮನೋಮಂಡಲದಲ್ಲಿ ಭಿತ್ತಿ ಚಿತ್ರಗಳಂತೆ ಹಾದುಹೋಗುತ್ತವೆ . ಇದರಿಂದ ನಮ್ಮ ಹಿರಿಯರು ಎಷ್ಟು ಕಷ್ಟ ಸಹಿಷ್ಣುಗಳು , ಅಶಾವಾದಿಗಳೂ , ನಿರಂತರ ಪ್ರಯತ್ನಶೀಲರು ಆಗಿದ್ದುದರಿಂದ ಇಂದಿನ ಯುವ ಪೀಳಿಗೆ ಭದ್ರ ಬುನಾದಿಯ ಮೇಲೆ ಸಮರ್ಥವಾಗಿ ನಿಂತು ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಎದೆಗಾರಿಕೆಯುಳ್ಳವರನ್ನಾಗಿ ಮಾಡಿದೆ ಎಂದು ತಿಳಿಯುತ್ತದೆ .

ಉದ್ಯಮ ಸಾಹಸಂ ಧೈರ್ಯಂ
ಬುದ್ಧಿ ಶಕ್ತಿ ಪರಾಕ್ರಮ:
ಷಡೇತೇ ಯತ್ರ ವರ್ತಂತೆ
ತತ್ರ ದೈವಂ ಪ್ರಸೀದತಿ

ಎಂಬ ಸೂಕ್ತಿಯಂತೆ ತಮ್ಮ ಜೀವನವೆಂಬ ಉದ್ಯೋಗದಲ್ಲಿ ಸಾಹಸ ಧೈರ್ಯ ಬುದ್ಧಿವಂತಿಕೆಯಿಂದ ಮುನ್ನುಗ್ಗುವ ಪ್ರವೃತ್ತಿ ಇದ್ದುದರಿಂದ ಕಾಲ ಕಾಲಕ್ಕೆ ದೈವ ಸಹಾಯವೂ ನಾನಾ ಸ್ವರೂಪದಿಂದ ದೊರೆತುದರಿಂದ ಸಮಾಜದಲ್ಲಿ ಉತ್ತಮ ಸ್ಥಾನ ಮಾನಗಳನ್ನು ಪಡೆಯಲು ಅವಕಾಶವಾದುದು ಸಂತಸದ ವಿಚಾರ.

ಜೀವನದ ಸಂಕಷ್ಟದ ದಿನಗಳಲ್ಲಿ ಸ್ಥಿತಪ್ರಜ್ಞರಾಗಿ ಸರ್ವ ರೀತಿಯ ಸಮಸ್ಯೆಗಳಿಗೆ ಎದೆಗೊಟ್ಟು ಪ್ರತಿಯೊಂದು ಸನ್ನಿವೇಶಗಳನ್ನು ಅನಿವಾರ್ಯವಾಗಿ ಸವಾಲಾಗಿ ಸ್ವೀಕರಿಸಿ ಅಧ್ಯಾಪಕರಾದ ಶ್ರೀಯುತರು ಬದುಕಿನ ಸಾರ್ಥಕತೆಯನ್ನು ಪ್ರಯತ್ನಶೀಲತೆಯಿಂದ ಸಾಧಿಸಿದ್ದು "ದೃಷ್ಟ -ಅದೃಷ್ಟ "ದಲ್ಲಿ ಮನೋಜ್ಞವಾಗಿ ವಿವರಿಸಲಾಗಿದೆ.

ಆತ್ಮ ವೃತ್ತಾಂತವನ್ನು ಬರೆಯುವುದು ನಿಜಕ್ಕೂ ಸವಾಲಿನ ಕೆಲಸವೇ . ಸಮಕಾಲೀನ ಸಾಮಾಜಿಕ ಸ್ಥಿತಿಗತಿಗಳನ್ನು , ತಾನು ಜೀವನದಲ್ಲಿ ಅನುಭವಿಸಿದ ಹಾಗೂ ಎದುರಿಸಿದ ವಿವಿಧ ಅವಕಾಶರೂಪೀ ಸವಾಲುಗಳನ್ನು ಯಥಾವತ್ತಾಗಿ ನೆನಪಿಸಿಕೊಂಡು ಬರೆಯುವಾಗ ನೇರ ಪ್ರಸ್ತುತಿಯೇ ಸಮಂಜಸವಾದರೂ ಕೆಲವೊಂದು ಕಡೆ ಆಗಿನ ಕಾಲದ ವೈಶಿಷ್ಟ್ಯಗಳು , ಆಚರಣೆಗಳು , ಸಾಂಸ್ಕೃತಿಕ ವಿಚಾರಗಳು ವಿಶೇಷ ಘಟನೆಗಳು ಮತ್ತು ಶಿಕ್ಷಣ ಕ್ರಮಗಳನ್ನು ಸವಿಸ್ತಾರವಾಗಿ ವಿವರಿಸಿದಲ್ಲಿ ಹೊತ್ತಗೆಯು ಇನ್ನೂ ಪರಿಣಾಮಕಾರಿಯಾಗಿ ಮೂಡಿಬರುತ್ತಿತ್ತೇನೋ ? ಈ ವಿಚಾರವನ್ನು ಗಮನಿಸಿದಾಗ "ದೃಷ್ಟ -ಅದೃಷ್ಟ " ದಲ್ಲಿ ಏನೋ ಕಳಕೊಂಡ ಅನುಭವ ಯಾ "ಅತೃಪ್ತ " ಭಾವನೆ ಓದುಗನಿಗೆ ಬರದೆ ಇರಲಾರದು .

ಅರುವತ್ತು ವರುಷಗಳ ಸುದೀರ್ಘ ಜೀವನಾನುಭವಗಳನ್ನು ಅತ್ಯಂತ ಸಂಕ್ಷಿಪ್ತವಾಗಿ ೬೪ ಪುಟಗಳಲ್ಲಿ ವಿವರಿಸಲು ಕಷ್ಟವೇ ಆದರೂ ಅತ್ಯಂತ ಚೊಕ್ಕವಾಗಿ ಚುಟುಕಾಗಿ ಪ್ರಸ್ತುತ ಪಡಿಸಿದ್ದು ಒಂದು ಈ ಪುಸ್ತಕದ ಉತ್ತಮಾಂಶ . ಸಮೃದ್ಧ ಜೀವನಾನುಭಾವಿಗಳಾದ ಶ್ರೀಯುತ ಈಶ್ವರ ಭಟ್ಟರ "ಜೀವನದ ರಸನಿಮಿಷಗಳ " ಬಗೆಗೆ ಸವಿಸ್ತಾರವಾದ ಪುಸ್ತಕವೊಂದನ್ನು ಹೊರತಂದಲ್ಲಿ ವಾಚಕರಿಗೆ ಮಹದುಪಕಾರವಾಗುತ್ತದೆ.

ಶ್ರೀಯುತರು ಬರೆದ ಟಿಪ್ಪಣಿಗಳನ್ನು ಪುಸ್ತಕ ರೂಪಾಂತರಿಸುವಲ್ಲಿ ಸಹಕರಿಸಿದ ಕು . ಮನೋರಮಾ ಬಿ. ಏನ್. ರವರ ಪರಿಶ್ರಮ , ಲಿಪಿ ಗಣಕೀಕರಿಸಿದ ಕು.ಅಕ್ಷತಾ , ಅಂದವಾದ ಮತ್ತು ಅರ್ಥಪೂರ್ಣವಾದ ಮುಖಪುಟ ವಿನ್ಯಾಸಗೊಳಿಸಿದ ಅಕ್ಷರೋದ್ಯಮದ ಸುನಿಲ್ ಕುಲಕರ್ಣಿಯವರ ಅನುಭವ , ಸುಂದರವಾಗಿ ಮುದ್ರಿಸಿದ ದಿಗಂತ ಮುದ್ರಣಾಲಯದವರ ಕಾರ್ಯ ದಕ್ಷತೆಗಳೆಲ್ಲ ಅಭಿನಂದನೀಯ .
ಒಟ್ಟಿನಲ್ಲಿ ಕನಿಷ್ಠ ಮುದ್ರಾ ರಾಕ್ಷಸನ ಹಾವಳಿಗೆ ತುತ್ತಾದರೂ ಸಂಗ್ರಹ ಯೋಗ್ಯವಾದ ಮಾಹಿತಿಪೂರ್ಣ ಅನುಭವದ ರಸ ಪಾಕ ಈ "ದೃಷ್ಟ -ಅದೃಷ್ಟ".