Friday, May 27, 2011

ಕಟೀಲು ಅಮ್ಮನೂ ಬಷೀರ್ ಸಾಹೇಬರೂ .....


ಮೊನ್ನೆ ಉದಯವಾಣಿಯ
ಹನ್ನೊಂದನೇ ಪುಟ  ನೋಡಿದಾಗ ಒಂದು ಕೌತುಕವಿತ್ತು. ಯಕ್ಷಗಾನ ಕಾಲಮ್ಮಿನ ಕಟೀಲು ಮೇಳದ ಆಟ ಎಲ್ಲಿ ನಡೆಯುತ್ತದೆ ಎಂಬ ಪಟ್ಟಿಯಲ್ಲಿ ಐದನೇ ಮೇಳದ ಆ ದಿನದ ಕ್ಯಾಂಪ್  ಬಷೀರ್ ಸಾಹೇಬ್ , ಸುಡುಮದ್ದು ವ್ಯಾಪಾರಸ್ಥರು , ಬಜಪೆ ಮುರನಗರದಲ್ಲಿ ಎಂದು ನಮೂದಿಸಿತ್ತು .ಅದನ್ನು  ನೋಡಿದಾಗ ನನಗೆ ಸಹಜವಾಗಿ ಕುತೂಹಲ. ಕಳೆದ ವರ್ಷ ಕ್ರೈಸ್ತ ಬಾಂಧವರೊಬ್ಬರು ಕಟೀಲು ಮೇಳದ ಸೇವೆ ಆಟ ಆಡಿಸಿದ ಬಗ್ಗೆ ಬರೆದಿದ್ದೆ .                                                                                                              
      ಈ ಸಲ ಮುಸ್ಲಿಂ ಸಮುದಾಯಕ್ಕೆ ಸೇರಿದ ಗೃಹಸ್ಥರೊಬ್ಬರು ಕಟೀಲು ತಾಯಿಯ ಸೇವಾರೂಪದ ಶ್ರೀದೇವಿ ಮಹಾತ್ಮೆ ಆಟ ಆಡಿಸಿದ್ದು ನೋಡಿದಾಗ ಪಕ್ಕನೆ ನೆನಪಾದ್ದು "ಗೋಕುಲಾಷ್ಟಮಿಗೂ ಇಮಾಂ ಸಾಬಿಗೂ ಏನು ಸಂಬಂಧ " ಎಂದು ಓದಿದ ಗಾದೆ ಮಾತು. ಇಲ್ಲಿ ಗಾದೆ ಮಾತಿನಲ್ಲಿ ಸಂಬಂಧಗಳು ಇಲ್ಲದೆ ಇರಬಹುದು ಆದರೆ ಮಹಾಮಾತೆ ಕಟೀಲು ತಾಯಿಗೆ ಎಲ್ಲರೂ ಮಕ್ಕಳೇ ಅಲ್ಲವೇ ? ಗಾದೆಗಿಂತ ಮೀರಿದ ಭಾವನಾತ್ಮಕ ಸಂಬಂಧ ಅಲ್ಲಿತ್ತು.

ಶ್ರೀಮಾನ್ ಬಷೀರ್ ಸಾಹೇಬರು ಮಂಗಳೂರು ಸುತ್ತ ಮುತ್ತ ನಡೆಯುವ ಕಟೀಲು ಮೇಳದ ಆಟಗಳಿಗೆ ಸುಡುಮದ್ದು ಪೂರೈಕೆ ಮಾಡುವವರು . ಬಜಪೆ ಪರಿಸರದಲ್ಲಿ ಬಹಳಷ್ಟು ಜನ ಯಕ್ಷಗಾನದ ಅಭಿಮಾನಿಗಳು ಇದ್ದಾರೆ . ಕಟೀಲು ಮೇಳದ ಹೆಚ್ಚಿನ ಆಟಗಳು ಮಂಗಳೂರಿನ ಸುತ್ತ ಮುತ್ತಲಿನ ಪರಿಸರದಲ್ಲಿ ನಡೆಯುತ್ತಿದ್ದು ಹೆಚ್ಚಿನ ಆಟಗಳಿಗೆ ಬಷೀರ್ ಸಾಹೇಬರದ್ದೆ ಸುಡುಮದ್ದು. ಹಲವು ವರ್ಷಗಳಿಂದ ಕಟೀಲು ತಾಯಿಗೆ ಸುಡುಮದ್ದು ಸೇವೆ ಸಲ್ಲಿಸಿದ ಇವರು ಅವಕಾಶವಾದಾಗಲೆಲ್ಲ ಕಟೀಲು ಮೇಳದ ಆಟ ಆಡಿಸುತ್ತಾರೆಂದು ಮೇಳದ  ಕಲಾವಿದರೊಬ್ಬರು  ಹೇಳಿದರು.

ನಮಗೆಲ್ಲ ತಿಳಿದಂತೆ ಬಹಳ ಹಿಂದೆ ಬಪ್ಪನಾಡು ಕ್ಷೇತ್ರದಲ್ಲಿ ಅಮ್ಮನವರ ಗುಡಿಯನ್ನು ಬಪ್ಪ ಬ್ಯಾರಿ ಕಟ್ಟಿಸಿದನೆಂದು ಪ್ರಸಿದ್ದಿ.  ಈಗಿನ ಕಾಲದಲ್ಲೋ ಹೆಚ್ಚಿನ ಕಡೆ ಕ್ಷುಲ್ಲಕ ಕಾರಣಗಳಿಗೆ   ಕೋಮು ಗಲಭೆಗಳು  ನಡೆಯುವುದನ್ನು ಕಾಣುತ್ತೇವೆ. ಪತ್ರಿಕಾ ಮಾಧ್ಯಮದವರು ಹಿಂದೂ ಮುಸ್ಲಿಂ ಗಲಭೆ ಎಂದು ಬರೆಯುವ ಧೈರ್ಯವಿಲ್ಲದೆ "ಒಂದು ಕೋಮಿನ ಜನರು ಇನ್ನೊಂದು ಕೋಮಿನ ಜನರ ಮೇಲೆ ಹಲ್ಲೆ ನಡೆಸಿದ್ದರಿಂದ" ಎಂದು ಬರೆದು ತಾವು ಸಾಚಾ ಯಾರ ಪರವೂ ಅಲ್ಲ ! ಎಂದು ಸಾಬೀತು ಮಾಡಲು ಹೊರಟರೆ ,   ಟಿ.ವಿ. ಮಾಧ್ಯಮಗಳಂತೂ ಇದರ ಬಗ್ಗೆ ವರದಿ ಮಾಡಲು ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. "ಮಂಗಳೂರಿನಲ್ಲಿ ಕೋಮು ಗಲಭೆ" , "ಚರ್ಚ್ ಮೇಲೆ ಧಾಳಿ ... " ಇತ್ಯಾದಿಯಾಗಿ ಹಸಿ ಬಿಸಿಯಾಗಿ ವರದಿ ಮಾಡುವ ಇವರಿಗೆ  ಬಷೀರ್ ಸಾಹೇಬರಂಥವರು ಕಣ್ಣಿಗೆ ಬೀಳುವುದೇ ಇಲ್ಲ !

ಇವರೆಲ್ಲರಿಗೆ ಸಮಾಜದಲ್ಲಿ ಹಿತವಾಗಿ ಬದುಕುವುದು ಬೇಡ ! ಒಂದು ವೇಳೆ ಬದುಕಿದರೆ ತಮ್ಮ ಚಾನೆಲ್ ನೋಡುವವರಿಲ್ಲವಲ್ಲ ? ಎಂಬ ಭೀತಿ...!

ಒಳ್ಳೆಯ ವಿಚಾರಗಳು ನಡೆಯುವಾಗ ಅದರ ಬಗ್ಗೆ ಕನಿಷ್ಠ ಆಸಕ್ತಿಯನ್ನು ತಳೆಯದ ಜನ ಉತ್ತಮ ಸಮಾಜವನ್ನು ಹೇಗೆ ನಿರ್ಮಿಸಿಯಾರು ? ಸಮಾಜದ ಸ್ವಾಸ್ಥ್ಯದ ಸಮತೋಲನ ಹೇಗೆ ಕಾಪಾಡಿಯಾರು? ಅಷ್ಟಕ್ಕೂ ಸುದ್ದಿ ಮಾಧ್ಯಮದ ಪ್ರಾಥಮಿಕ  ಉದ್ದೇಶಗಳಲ್ಲಿ    ಸಾರ್ವಜನಿಕ ಸ್ವಾಸ್ಥ್ಯ ನಿರ್ವಹಣೆಯೂ ಒಂದು  ಅಲ್ಲವೇ?
ಯೋಚಿಸಿ...