Wednesday, June 19, 2013

ನೋವಿನಲ್ಲೂ ಹಾಡಿದ ಬಲಿಪ ಪ್ರಸಾದ

ಮಿತ್ರ ರಂಗನಾಥ್ ರಿಗೆ ಒಂದು ಮದ್ದಲೆಯ ಅಗತ್ಯ ಇದ್ದು ನನ್ನಲ್ಲಿ ಕೇಳಿದಾಗ ಕೊಂಕಣಾಜೆ ಶೇಖರಣ್ಣ ಒಳ್ಳೆಯ ಮದ್ದಳೆಯನ್ನು ಹುಡುಕಿ ತಂದಿದ್ದರು. ಆ ದಿನ ಮಧ್ಯಾಹ್ನ ಪ್ರಸಾದ್ ಬಲಿಪಾರಿಗೆ ಫೋನಾಯಿಸಿದಾಗ ಅವರಿಗೆ ಆಕ್ಸಿಡೆಂಟ್ ಆದ ವಿಚಾರ ತಿಳಿದು ಸಂಕಟವಾಯಿತು. " ಈಗ ತೊಂದರೆ ಇಲ್ಲ ಕೈ ನೋವು ಕಮ್ಮಿ ಆಗ್ತಾ ಇದೆ " ಎಂದು ಪ್ರಸಾದರು ಹೇಳಿದಾಗ ಅವರ ಪದ ಕೇಳಲೇ ಬೇಕೆಂಬ ತುಡಿತ ಹೆಚ್ಚಾಗ ತೊಡಗಿ ಕೂಡಲೇ ಇವತ್ತು ಸಂಜೆ ಮನೆಗೆ ಬರಬಹುದಾ ಅಂತ ಕೇಳಿದಾಗ ನನ್ನ ಮೇಲಿನ ಸ್ನೇಹದ ದಾಕ್ಷಿಣ್ಯಕ್ಕೆ ಒಪ್ಪಿ ಬಂದೆ ಬಿಟ್ಟರು. ಅವರು ಮನೆಗೆ ಬಂದಾಗ ಅವರ ಮೈಮೇಲಿದ್ದ ಮಾಸುತ್ತಿದ್ದ ಗಾಯಗಳು ನೋಡಿದಾಗ ಎಂಥವಾರಿಗಾದರೂ ಮನಸ್ಸು ಕರಗುವಂತೆ ಇತ್ತು. ಯುದ್ಧರಂಗದಲ್ಲಿ ಗಾಯವಾದೆದು ಬಂದ ಧೀರ ಸೈನಿಕನ ತೆರ ಅಲ್ಲಲ್ಲಿ ನೋವಿನ ಗಾಯಗಳು ಮಾಸಲೋ ಬೇಡವೋ ಎಂಬಂಥ ಸ್ಥಿತಿ. ಬೇರೆ ಯಾರೇ ಆಗಿದ್ದರೂ ಒಂದು ತಿಂಗಳು ರೆಸ್ಟ್ ಅಂತ ತಪ್ಪ್ಪಿಸಿಕೊಳ್ಳುತ್ತಿದ್ದರು. ಪ್ರಸಾದ್ ಬಂದು ಹಾಡಿದ ಹಾಡುಗಳು ನಿಜಕ್ಕೂ ರೋಮಾಂಚನ ಉಂಟುಮಾಡಿತ್ತು. ಒಂದೂವರೆ ಗಂಟೆಗಳ ಕಾಲ ಬೇರೆ ಬೇರೆ ಪ್ರಸಂಗದ ಮದ್ದಳೆ ಪದಗಳನ್ನು ಸುಲಲಿತವಾಗಿ ಹಾಡಿ ತಮ್ಮ ನೋವಿನಲ್ಲೂ ನಮ್ಮ ನೋವನ್ನು ಮರೆಸಿದರು!

ಪ್ರಸಾದರ ಪದಗಳನ್ನು ಕೊಂಕಣಾಜೆ ಶೇಖರಣ್ಣ ಮದ್ದಳೆಯಲ್ಲಿ ಸಾಥ್ ನೀಡಿ ಮೆರೆಯಿಸಿದರು.ಯುವ ಭಾಗವತನಾಗಿ ಪ್ರಸಾದರ ಶ್ರದ್ಧೆ, ವೃತ್ತಿಪರತೆ ಹಾಗೂ ಬದ್ಧತೆ ಶ್ಲಾಘನೀಯ. ಒಂದು ಅಪೂರ್ವ ಅನುಭವ ನೀಡಿದ ಅವರಿಗೆ ನಾನು ಆಭಾರಿ.