Tuesday, February 17, 2009

ಹೀಗೊಂದು ಲಕ್ಷ್ಮೀ ಸ್ವಯಂವರ......


ಶ್ರೀಯುತ ನಿಡ್ಲೆ ಗೋವಿಂದ ಭಟ್ ಸಾರಥ್ಯದ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ,ನಿಡ್ಲೆ ಧರ್ಮಸ್ಥಳವು ಕಳೆದ ೨೫ ವರ್ಷಗಳಿಂದ ನಾನಾ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡಿ ಯಕ್ಷ ರಸಿಕರ ಮನ ತಣಿಸುವಲ್ಲಿ ಯಶಸ್ವಿಯಾಗಿದೆ. ಹಲವು ಏಳುಬೀಳುಗಳನ್ನು ಕಂಡ ಶ್ರೀಯುತ ನಿಡ್ಲೆ ಗೋವಿಂದ ಭಟ್ಟರು ಈ ಸಂಚಾರಿ ಮೇಳವನ್ನು ಕರ್ನಾಟಕದ ವಿವಿಧ ಭಾಗಗಳಲ್ಲದೆ ಮುಂಬೈ ,ಹೈದರಾಬಾದ್, ತಮಿಳುನಾಡು , ವಿಶಾಖಪಟ್ಟಣ ,ಮುಂತಾದ ದೂರದ ಊರುಗಳಲ್ಲೂ ತೆಂಕು ತಿಟ್ಟು ಯಕ್ಷಗಾನದ ಕಂಪನ್ನು ಪಸರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ .
ತಾವು ಮಾಡುವ ಎಲ್ಲ ಪಾತ್ರಕ್ಕೂ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ನ್ಯಾಯವನ್ನು ಒದಗಿಸುವ ಅನುಭವಿ ಕಲಾವಿದರಾದ ನಿಡ್ಲೆ ಗೋವಿಂದ ಭಟ್ಟರು, ಇತ್ತೀಚೆಗೆ ಒಂದು ಹೊಸ ಪ್ರಯೋಗವನ್ನು ಮಾಡಿ ಯಕ್ಷ ರಸಿಕರ ಮುಂದೆ ಸಮರ್ಪಿಸಿದ್ದಾರೆ. ಯಕ್ಷಗಾನ "ಸಮುದ್ರ ಮಥನ " ಪ್ರಸಂಗದಲ್ಲಿ ಬರುವ "ಲಕ್ಷ್ಮೀ ಸ್ವಯಂವರ" ಪ್ರಸಂಗವನ್ನು ಹೊರಾಂಗಣ ಚಿತ್ರೀಕರಣ ಮಾಡುವ ಮುಖೇನ ಹೊಸದೊಂದು ಪ್ರಯೋಗವನ್ನು ನಡೆಸಿದ್ದಾರೆ .


ಎಂಭತ್ತರ ದಶಕದಲ್ಲೇ ಹಗಲು ಯಕ್ಷಗಾನ ಕಾರ್ಯಕ್ರಮಗಳು ಆರಂಭವಾದಾಗ ಯಕ್ಷಪ್ರಿಯರ ಟೀಕೆಗೆ ಗುರಿಯಾಗಿದ್ದ ಇಂಥ ಪ್ರದರ್ಶನಗಳು ಇತ್ತೀಚಿಗೆ ಪ್ರೇಕ್ಷಕರಿಗಾಗಿ ,ಸಮಯಾನುಕೂಲಕ್ಕಾಗಿ ಅಥವಾ ಇನ್ನಿತರೆ ಕಾರಣಗಳಿಂದ ಹಗಲು ಯಕ್ಷಗಾನ ಕ್ರಮೇಣ ಪ್ರೇಕ್ಷಕರಿಂದ ಸ್ವೀಕರಿಸಲ್ಪಟ್ಟು ಪ್ರದರ್ಶನವಾಗುತ್ತಿವೆ.

ಈಗಿನ ದಿನಗಳಲ್ಲಿ ಸಿ.ಡಿ.ಗಳ ಭರಾಟೆಯಲ್ಲಿ ಹಲವಾರು ಸಿ.ಡಿ.ಗಳು ಮಂಗಳೂರಿನ ಕ್ಯಾಡ್ ಮೀಡಿಯಾದ೦ಥ ಸ್ಟುಡಿಯೊಗಳಲ್ಲಿ ಚಿತ್ರೀಕರಣಗೊಂದು ಮಾರುಕಟ್ಟೆಯಲ್ಲಿ ಲಭ್ಯವಿದೆ . ಇವುಗಳನ್ನು ನೋಡುವಾಗ ready to eat ಆಹಾರ ವಸ್ತುಗಳಂತೆ ಅನಿಸಿದರೂ ದೂರದ ಊರುಗಳಲ್ಲಿ ನೆಲೆಸಿರುವವರಿಗೆ ಒಮ್ಮೆಗೆ ಯಕ್ಷಗಾನ ನೋಡಬೇಕೆಂಬ ಸೆಳೆತವನ್ನು ತಣಿಸುವಲ್ಲಿ ಉಪಕಾರಿಗಳಾಗುತ್ತವೆ.


ಇವೆಲ್ಲದಕ್ಕಿಂತ ಭಿನ್ನವಾಗಿ ನಿಡ್ಲೆ ಗೋವಿಂದ ಭಟ್ಟರು ಲಕ್ಷ್ಮೀ ಸ್ವಯಂವರ ಪ್ರಸಂಗವನ್ನು ಹೊರಾಂಗಣದಲ್ಲಿ ಸ್ವಾಭಾವಿಕ ಬೆಳಕಿನಲ್ಲಿ ಪ್ರದರ್ಶಿಸಿ ,ಅದನ್ನು ದಾಖಲಿಸಿ ಯಕ್ಷಪ್ರಿಯರಿಗಾಗಿ ಮಾರುಕಟ್ಟೆಗೆ ತಲುಪಿಸಿದ್ದಾರೆ. ಸಮುದ್ರ ಮಥನಕ್ಕೆ ರಾಕ್ಷಸರೂ ದೇವತೆಗಳೂ ಒಂದಾಗಿ ಮಂದರಾದ್ರಿಯನ್ನು ಕಡೆಗೋಲಾಗಿಸಿ ವಾಸುಕಿಯನ್ನು ಹಗ್ಗವಾಗಿ ತರುವ ಸನ್ನಿವೇಶ ನಿಜಕ್ಕೂ ಅದ್ಭುತವಾಗಿದೆhttp://www.youtube.com/watch?v=Uwu6uEsIzRs&feature=channel ಒಮ್ಮೆ ಇದನ್ನು ನೋಡಿದಾಗ ಉಳಿದ ಚಿತ್ರೀಕರಿಸಲ್ಪಟ್ಟ ಯಕ್ಷಗಾನಗಳಿಗಿಂತ ಬೇರೆ ಅನುಭವವನ್ನು ಕೊಡುವಲ್ಲಿ ಯಶಸ್ವಿಯಾಗಿದೆ.
ಏನಿದ್ದರೂ ಇನ್ನು ಮುಂದೆ "ಯಕ್ಷರಾತ್ರಿಗಳನ್ನು " ನಡುಗಿಸಿದ ಕಲಾವಿದರು "ಯಕ್ಷಹಗಲಿನಲ್ಲಿ" ಮೆರೆಯುತ್ತಿದ್ದಾರೆ ! ಎಂಬ ಹೊಸ ವಿಶೇಷಣವನ್ನು ಸೃಷ್ಟಿಸಿದ್ದಂತೂ ನಿಜ.
ನಿಮಗೋಸ್ಕರ ಕೆಲವು ತುಣುಕುಗಳು ಕೆಳಗಿನ ಕೊಂಡಿಯಲ್ಲಿ ಲಭ್ಯವಿದೆ . ನೋಡಿ ನಿಮ್ಮ ಅನಿಸಿಕೆ ತಿಳಿಸಿ .
Friday, February 6, 2009

ಮತಾಂತರ ..... ಯಕ್ಷಗಾನ ಮತ್ತು ಸೇವೆ ಆಟ....


ಕೆಲವೇ ತಿಂಗಳ ಹಿಂದೆ ಪ್ರಸಿದ್ದ ದಿನ ಪತ್ರಿಕೆಯೊಂದು ಭೈರಪ್ಪನವರ ವಿಚಾರಧಾರೆಯೊಂದಿಗೆ " ಮತಾಂತರ " ಕುರಿತ ಚರ್ಚೆಯನ್ನು ನಡೆಸಿತ್ತು . ಸಾಕಷ್ಟು ಹಿಗ್ಗಾಮುಗ್ಗಾ ಎಳೆದಾಡಿ ತಮ್ಮ ಅದ್ಬುತ ವಿಷಯ ಮಂಡನೆಯಿಂದ ಚುರುಕು ಮುಟ್ಟಿಸಿದ ಎಲ್ಲ ಬರಹಗಾರರೂ ತಮಗೆ ತೋಚಿದಂತೆ ಅಪ್ಪಣೆ ಕೊಡಿಸಿದರು. ಕೆಲವರಂತೂ ಚರ್ಚೆ ಆರಂಭಿಸಿದವರನ್ನು ಟೀಕಿಸಿ ಸಂತ್ರುಪ್ತಿಪಟ್ಟರು!
ಕುತೂಹಲದಿಂದ ದಿನವೂ ಬಿಡದೆ ಓದುತ್ತಿದ್ದ ನನಗೆ ಇತ್ತೀಚೆಗೆ ಕೌತುಕವಾದ ವಿಚಾರವೊಂದು ನನ್ನ ಕಲಾವಿದ ಮಿತ್ರರೊಬ್ಬರಿಂದ ತಿಳಿದು ಬಂತು .
ಕ್ರೈಸ್ತ ಬಾಂಧವರೊಬ್ಬರು ಕಟೀಲು ಮೇಳದ ಸೇವೆ ಆಟವನ್ನು ಮೊನ್ನೆ ಫೆಬ್ರವರಿ ಎರಡನೇ ತಾರೀಖಿನಂದು ಮಂಗಳೂರಿನ ಬಳಿ ಬಜಪೆಗೆ ಸಮೀಪ ಅದ್ಯಪಾಡಿ ಶ್ರೀ ಆಧಿನಾಥೇಶ್ವರ ದೇವಸ್ಥಾನದ ವಠಾರದಲ್ಲಿ ಆಡಿಸಿದರು. ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಒಂದನೇ ಮೇಳದವರು ಆಡಿ ತೋರಿಸಿದರು. ಈ ಸೇವೆ ಆಟ ಆಡಿಸಲು ಕಾರಣ ಪರಿಹಾರವಾಗದೆ ಇದ್ದ ವ್ಯಾಜ್ಯವೊಂದು ಕಟೀಲು ಮಹಾತಾಯಿ ಪರಿಹರಿಸಿ ಕೊಟ್ಟದ್ದೇ ಆಗಿತ್ತು.
ಮಂಗಳೂರಿನ ಪರಿಸರದಲ್ಲಿ ಆಗಾಗ ಇಂಥ ಸಾಮರಸ್ಯದ ಘಟನೆಗಳು ನಡೆಯುತ್ತಲೇ ಇದ್ದರೂ ಯಾವ ಒಬ್ಬ ಮಾಧ್ಯಮದವರೂ ಇದನ್ನು ತೋರಿಸದೇ ಬರೀ "ಹೊಡಿ ಮಗಾ.. ಹೊಡಿ " ದೃಶ್ಯಗಳನ್ನು ಮಾತ್ರ ವೈಭವೀಕರಿಸಿ ಯಾಕೆ ತೋರಿಸುತ್ತಾರೋ ? ಇನ್ನೂ ಅರ್ಥವಾಗದ ವಿಷಯ !
ನಾಡಿದ್ದು ೧೨ನೆ ತಾರೀಕು ಇದೇ ಆದ್ಯಪಾಡಿಯ ಪರಿಸರದಲ್ಲಿ ಕ್ಲೆಮೆಂಟ್ ಪಿರೆರಾ ಎಂಬ ಭಕ್ತರೊಬ್ಬರು ಕಟೀಲು ಮೇಳದ ಸೇವೆ ಆಟವನ್ನು ಆಡಿಸಲಿದ್ದಾರೆ . ಕುರಿಯ ಗಣಪತಿ ಶಾಸ್ತ್ರಿಯವರ ಸಾರಥ್ಯದಲ್ಲಿ ಈ ಸೇವೆ ಆಟ ನಡೆಯಲಿದೆ.
ಅನೇಕ ಹಿಂದೂ ಭಕ್ತರೂ ಚರ್ಚಗಳಿಗೆ ಹರಕೆ ,ಬೆಳೆ ಕಾಣಿಕೆ ಮತ್ತು ಹಸಿರುವಾಣಿ ಸಲ್ಲಿಸುವುದನ್ನು ನಾನು ಕಣ್ಣಾರೆ ನೋಡಿದ್ದೇನೆ.
ಹಸಿರುವಾಣಿ ಮೆರವಣಿಗೆಯಲ್ಲಿ "ಜೈ" ಕಾರ ಹಾಕುತ್ತ ಭಾಗವಹಿಸಿದ್ದೇನೆ.
ನಮ್ಮಲ್ಲಿ ಸಾಮರಸ್ಯ ಮೂಡಿಸುವುದಕ್ಕಿಂತ "ಒಡಕನ್ನು " ತರುವ ಕೆಲಸಗಳು ಹೆಚ್ಚಾಗುತ್ತಿರುವುದು ವಿಷಾದನೀಯ .
ಏನೇ ಇದ್ದರೂ ಎಲ್ಲೇ ಇದ್ದರೂ ಎಲ್ಲರೂ ಒಟ್ಟಿಗೆ ಈ ಭೂಮಿಯಲ್ಲೇ ಬಾಳಿ ಬದುಕಬೇಕೆಂಬ ಸಣ್ಣ ಸತ್ಯ ಯಾರ ಮನದಲ್ಲೂ ಮೂಡದೆ "ಬಿಸಿ ಬಿಸಿ " ಸುದ್ದಿ ಕೊಡುವುದೇ ನಮ್ಮ ಧ್ಯೇಯ ಎಂದು ವರ್ತಿಸುವುದು ಖಂಡನೀಯ .
ನಿಮಗೇನನಿಸುತ್ತದೆ ?