Thursday, May 29, 2008

ಗೋ೦ಕುರು ಕಪ್ಪೆ ....


ಕಪ್ಪೆಯನ್ನು ಕುರಿತ ಪಾಠಗಳು ಎಲ್ಲರೂ ಒಂದಲ್ಲ ಒಂದು ತರಗತಿಯಲ್ಲಿ ಅಲ್ಪ ಸ್ವಲ್ಪವಾದರೂ ಓದಿಯೇ ಇರುತ್ತೇವೆ . ಮಳೆಗಾಲ ಆರಂಭವಾಯಿತೆಂದರೆ ಸಾಕು ಕಪ್ಪೆಗಳ ಸಂಗೀತ ಆರಂಭವಾಗುತ್ತದೆ . ಸಣ್ಣ ಸಣ್ಣ ಚೊಂದಗಪ್ಪೆಯಿಂದ ಹಿಡಿದು ದೊಡ್ಡ ಗಾತ್ರದ ಗೋ೦ಕುರು ಕಪ್ಪೆ ವರೆಗೆ ನಾನಾ ಗಾತ್ರದ ಕಪ್ಪೆಗಳು ಹರ್ಷದಿಂದ ಮಳೆಗಾಲವನ್ನು ಸ್ವಾಗತಿಸುತ್ತವೆ .
ಹೈ ಸ್ಕೂಲ್ ನಲ್ಲಿದ್ದಾಗ ದೇವಸ್ಥಾನದ ಭಜನೆ ಕಾರ್ಯಕ್ರಮ ಮುಗಿಸಿ ರಾತ್ರಿ ಸುಮಾರು ಏಳೂವರೆ ಸುಮಾರಿಗೆ ಮಲೆನಾಡಿನ ನೀರವ ಮೌನ ತುಂಬಿದ ಕಾಡಿನ ದಾರಿಯಲ್ಲಿ ಮನೆಗೆ ಬರುವಾಗ ದಾರಿ ಬದಿಯ ತೋಡಿನಲ್ಲಿ ಆನಂದದಿಂದ ಸರದಿ ಪ್ರಕಾರ ಕೇಳಿ ಬರುತ್ತಿದ್ದ ಗೋ೦ಕುರು ಕಪ್ಪೆಗಳ ಸುಮಧುರ ಸಂಗೀತ ಕೇಳಿದಾಗ ಒಂದು ರೀತಿಯ ಅಹ್ಲಾದಕರ ಅನುಭವ ಆಗುತ್ತಿತ್ತು.
ನಾವು ಚಿಕ್ಕವರಿದ್ದಾಗ ಮನೆಗೆ ತೋಟದ ಕೆಲಸಕ್ಕೆ ಬರುತ್ತಿದ್ದ ಕುಂಟ ಈಸುಬ್ಬು ಕಾಕ ಆಗಾಗ ಹೇಳುತ್ತಿದ್ದರು " ಅಮೆರಿಕೊಡು ಗೋ೦ಕುರು ಕಪ್ಪೆನ್ ಮಾತ ತಿನ್ಪೆರ್ಗೆ !!" (ಅಮೆರಿಕಾದಲ್ಲಿ ಗೋ೦ಕುರು ಕಪ್ಪೆಯನ್ನು ತಿನ್ನುತ್ತರಂತೆ !). ಆಗ ನಾವೆಲ್ಲ ಛೀ ......
ಎಂದು ಹೇಸಿಗೆ ಪಡುತ್ತಿದ್ದೆವು . ಕಪ್ಪೆಯ ಮೂತ್ರ ಮೈಮೇಲೆ ಬಿದ್ದರೆ "ಕೆಡು " ಆಗುತ್ತದೆ ಎಂಬ ನಂಬಿಕೆ ಆಗಲೂ ಜನರ ಮನದಲ್ಲಿದೆ !
ನಿಜವಾಗಿಯೂ ಇತ್ತೀಚೆಗೆ ಗೋ೦ಕುರು ಕಪ್ಪೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕಪ್ಪೆಗಳನ್ನು ಸೂಪ್ ಮಾಡಿ ತಿನ್ನುವ ವರ್ಗ ಬೆಂಗಳೂರಿನಲ್ಲಿಯೇ ಇದ್ದಾರೆ ಎಂದು ತಿಳಿದಾಗ ಮಾತ್ರ ಅಚ್ಚರಿಯಾಯಿತು !
ಹಿಂದೆ ನಮ್ಮಲ್ಲಿಗೆ ಕೆಲಸಕ್ಕೆ ಬರುತ್ತಿದ್ದ ಸಂಕಪ್ಪ , ಅಣ್ನು, ಬೂಬ ಕಪ್ಪೆಗಳನ್ನು ಹಿಡಿದು ಕಾಲೇಜಿನ ಜೀವಶಾಸ್ತ್ರ ವಿಭಾಗಕ್ಕೆ ಕೊಟ್ಟು ಕಪ್ಪೆಯೊಂದಕ್ಕೆ ತಲಾ ಒಂದು ರೂಪಾಯಿ ಪಡೆಯುತ್ತಿದ್ದುದನ್ನು ಕಂಡಿದ್ದೇನೆ . ಬಹಳಷ್ಟು ಕಪ್ಪೆಗಳನ್ನು ಹಿಡಿದು ವಿದೇಶಕ್ಕೆ ರವಾನಿಸಿದ ಬಗ್ಗೆ ಪತ್ರಿಕೆಯಲ್ಲಿ ಅಂಕಣವೊಂದನ್ನು ಓದಿದ್ದೆ . ಸುಮ್ಮನೆ ಪ್ರಚಾರಕ್ಕೊಸ್ಕರ ಈ ರೀತಿ ಬರೆದಿದ್ದರೆನ್ದುಕೊಂಡಿದ್ದ ನಾನು ಇದು ಸತ್ಯ ಎಂದು ತಿಳಿಯುವ ವೇಳೆಗೆ ಅದೆಷ್ಟು ಕಪ್ಪೆಗಳು ಯಾರ್ಯಾರ ಹೊಟ್ಟೆ ಸೇರಿದ್ದವೋ ತಿಳಿಯೆ!
ಈಗ ಊರಿನಲ್ಲಿ "ಕಪ್ಪೆಗಳ ಸಮ್ಮೇಳನ " ಕೇಳುವುದಕ್ಕೆ ಸಿಗುತ್ತಿಲ್ಲ . ಅಲ್ಲೊಂದು ಇಲ್ಲೊಂದು ಕಪ್ಪೆ ಕ್ಷೀಣ ದ್ವನಿಯಲ್ಲಿ ಹರ್ಷಾಚರಣೆ ಮಾಡುವುದನ್ನು ಬಿಟ್ಟರೆ ಬೇರೇನೂ ಇಲ್ಲ . ಆಹಾರ ಸರಪಣಿ ಕಡಿದು ಹೋಗುತ್ತಿದೆ ; ಪ್ರಕೃತಿ ಸಮತೋಲನ ಏರುಪೇರಾಗುತ್ತಿದೆ.
ಆದರೆ ನಾವಿನ್ನೂ " ಇದೆಲ್ಲ ನಮಗ್ಯಾಕೆ?? " ಎಂಬ ಭಾವನೆಯಲ್ಲೇ ಇದ್ದೇವೆ !!
ಮು೦ದೊಂದು ದಿನ "ಮಗಾ ಇದಾ ನೋಡು ಕೆಪ್ಪೆ " ಅಂತ ಚಿತ್ರದಲ್ಲಿ ಮಕ್ಕಳಿಗೆ ತೋರಿಸಿ ತೃಪ್ತಿ ಪಡಬೇಕು ಅಷ್ಟೆ !

No comments: