Tuesday, July 27, 2010

ಮನ ಮುಟ್ಟುವ ಶ್ಲೋಕ ...

ಹರಿ ಹರರಲ್ಲಿ ಬೇಧವಿಲ್ಲ ಎಂದು ಸಾರಲು ಕವಿಯೊಬ್ಬ ಹರಿಹರರನ್ನು ಒಟ್ಟಾಗಿ ಒಂದೇ ಶ್ಲೋಕದಲ್ಲಿ ಪ್ರಾರ್ಥಿಸಿದ್ದು ಹೀಗೆ..
ಪಾಯಾತ್ ಕುಮಾರಜನಕ: ಶಶಿಖಂಡಮೌಳಿ:
ಶಂಖಪ್ರಭಶ್ಚ  ನಿಧನಶ್ಚ ಗವೀಶಯಾನ:
ಗಂಗಾಂಚ ಪನ್ನಗಧರಶ್ಚ ಉಮಾವಿಲಾಸ:
ಆದ್ಯಕ್ಷರ ರಹಿತೋ ಸಹಿತೋಪಿ ದೇವ:

ಇದರಲ್ಲಿ ಮೊದಲ ಅಕ್ಷರ ಸೇರಿಸಿದರೆ ಶಿವನ ಸ್ತುತಿಯಾಗುತ್ತದೆ. ಮೊದಲ ಅಕ್ಷರ ಬಿಟ್ಟರೆ ವಿಷ್ಣುವಿನ ಸ್ತುತಿಯಾಗುತ್ತದೆ. ಮೊದಲ ಅಕ್ಷರವಿದ್ದರೂ ಇಲ್ಲದಿದ್ದರೂ ದೇವರನ್ನೇ ಸ್ತುತಿಸಿದಂತಾಗುತ್ತದೆ.

ಕುಮಾರಜನಕ:= ಕುಮಾರನ ತಂದೆ =ಶಿವ ; ಮಾರ ಜನಕ:= ಮನ್ಮಥನ ತಂದೆ =ವಿಷ್ಣು, ಶಶಿಖಂಡಮೌಳಿ:= ಚಂದ್ರಶೇಖರ , ಶಿಖಂಡಮೌಳಿ:=ನವಿಲುಗರಿಯನ್ನು ಧರಿಸಿದಾತ= ವಿಷ್ಣು/ಕೃಷ್ಣ , ಶಂಖಪ್ರಭ = ಬಿಳಿಬಣ್ಣದವ (ಶಿವ ) , ಖಪ್ರಭ=ಆಕಾಶ ಬಣ್ಣದವ =ವಿಷ್ಣು, ನಿಧನ=ಶಿವ, ಧನ=ವಿಷ್ಣು, ಗವೀಶಯಾನ: = ನಂದಿವಾಹನ , ವೀಶಯಾನ:=ಪಕ್ಷಿವಾಹನ , ಗಂಗಾಂಚ = ಗಂಗಾಧರ , ಗಾಂಚ =ಗೋಪಾಲ ಪನ್ನಗಧರ =ನಾಗಭೂಷಣ,ನಗಧರ = ವಿಷ್ಣು, ಉಮಾವಿಲಾಸ:= ಶಿವ , ಮಾವಿಲಾಸ: =ವಿಷ್ಣು
ಹಾಗಾಗಿ ಮೊದಲ ಅಕ್ಷರ ಸೇರಿಸಿದರೂ ಬಿಟ್ಟರೂ ದೇವರನ್ನು ನೆನೆದಂತೆಯೇ ಆಗುವುದು .

ಅರ್ಥಪೂರ್ಣವಾದ ಈ ಶ್ಲೋಕ ಎಷ್ಟು ಸೊಗಸಾಗಿದೆಯಲ್ಲವೇ ?

Wednesday, July 14, 2010

ಕೆಲವು ಅಪೂರ್ವ ಛಾಯಾಚಿತ್ರಗಳು ...

ಯಕ್ಷಗಾನ ಕ್ಷೇತ್ರದಲ್ಲಿ ಅದೆಷ್ಟೋ ಮಂದಿ ಕಲಾವಿದರು ಪ್ರಸಿದ್ಧಿಯನ್ನು ಪಡೆದು ರಂಗವನ್ನು ಬೆಳಗಿದವರಿದ್ದಾರೆ . ಕಲೆಯನ್ನು ತಮ್ಮದೇ ಆದ ಛಾಪಿನಿಂದ ಶ್ರೀಮಂತಗೊಳಿಸಿ ತೆರೆಗೆ ಸರಿದವರು ಹಾಗೂ ಅವರೊಂದಿಗೆ ಪರಿಶ್ರಮಿಸಿ ಈಗ ಹಿರಿಯರೆನಿಸಿಕೊಂಡ ಚೇತನಗಳ ಕೆಲವು ಅಪೂರ್ವ ಛಾಯಾಚಿತ್ರ ಯಕ್ಷ ರಸಿಕರಿಗಾಗಿ ಇಲ್ಲಿ ನೀಡುತ್ತಿದ್ದೇನೆ
ಮೊದಲ ಚಿತ್ರದಲ್ಲಿ ಎಪ್ಪತ್ತರ ತಲೆಮಾರಿನ "ಯಕ್ಷ ದಿಗ್ಗಜರು ಮತ್ತು ಯಕ್ಷ ಪೋಷಕರು "
ಕುಳಿತವರು (ಎಡದಿಂದ ಬಲಕ್ಕೆ ) ಶ್ರೀ ನಿಡ್ಲೆ ನರಸಿಂಹ ಭಟ್ , ಶ್ರೀ. ಬೋಳಾರ ನಾರಾಯಣ ಶೆಟ್ಟಿ ,ಶ್ರೀ ವಿಟ್ಲ ಗೋಪಾಲಕೃಷ್ಣ ಜೋಶಿ , ಶ್ರೀ.ಎಂ.ನಾರಾಯಣ ಭಟ್ (ಅಳಿಕೆ) ಶ್ರೀ ಬಲಿಪ ನಾರಾಯಣ ಭಾಗವತ , ಶ್ರೀ ಅಳಿಕೆ ರಾಮಯ್ಯ ರೈ ,ಶ್ರೀ ಕದ್ರಿ ವಿಷ್ಣು
ಮೊದಲ ಸಾಲಿನಲ್ಲಿ ನಿಂತವರು : ಶ್ರೀ ಎಂ.ವಾಸುದೇವ ಪ್ರಭು , ಶ್ರೀ.ಕೆ.ಸಂಜೀವ ಶೆಟ್ಟಿ , ಶ್ರೀ ಗೋಪಾಲಕೃಷ್ಣ ಕುರುಪ್ , ಶ್ರೀ ಬಣ್ಣದ ಕುಟ್ಯಪ್ಪು, ಶ್ರೀ ಕೋಳ್ಯುರ್ ರಾಮಚಂದ್ರ ರಾವ್ , ಶ್ರೀ ಕೆ.ವಿ. ಸುಬ್ಬಾ ರಾವ್ , ಶ್ರೀ ಅಡ್ಕಸ್ಥಳ ನಾರಾಯಣ ಶೆಟ್ಟಿ
ನಿಂತವರಲ್ಲಿ ಕೊನೆಯ ಸಾಲು : ಶ್ರೀ ಡೊಂಬ, ಶ್ರೀ ಯು. ಗಂಗಾಧರ ಭಟ್ , ಶ್ರೀ.ಕೇದಗಡಿ ಗುಡ್ಡಪ್ಪ ಗೌಡ , ಶ್ರೀ ಪಡ್ರೆ ಕುಮಾರ ಮತ್ತು ಶ್ರೀ ಪಡ್ರೆ ಚಂದುಎರಡನೇ ಚಿತ್ರದಲ್ಲಿ
ಶ್ರೀ ಪೆರ್ವೋಡಿ ನಾರಾಯಣ ಭಟ್ , ಶ್ರೀ ದೇಜು ಹಾಗೂ ಶ್ರೀ ಬಲಿಪ ನಾರಾಯಣ ಭಾಗವತ .
ಮೊತ್ತ ಮೊದಲ ಬಾರಿಗೆ ಶ್ರೀ ಬಲಿಪರನ್ನು ಮುಂಬೈಗೆ ಶ್ರೀ ದೇಜುರವರು ಕರೆದುಕೊಂಡು ಹೋದಾಗ ತೆಗೆದ ಛಾಯಾ ಚಿತ್ರವಿದು .ಕೊನೆಯ ಚಿತ್ರದಲ್ಲಿ ಶ್ರೀ ಬಲಿಪರ ಭಾಗವತಿಕೆಯಲ್ಲಿ ಶ್ರೀ ಅಳಿಕೆ ರಾಮಯ್ಯ ರೈಗಳ ಪೀಠಿಕೆ ವೇಷ

ಹಳೆಯ ಕಪ್ಪು ಬಿಳುಪು ಚಿತ್ರಗಳನ್ನು ನೋಡುವಾಗ ಮನಸ್ಸಿಗೆ ಮುದವಾಗುತ್ತದಲ್ಲವೇ ?

Thursday, July 8, 2010

ಯಕ್ಷಗಾನ ಸಂಗೀತ ವೈಭವ ಕಾರ್ಯಕ್ರಮಕರಾವಳಿ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಜನಾಕರ್ಷಣೆ ಪಡೆದುಕೊಳ್ಳುತ್ತಿರುವ ಒಂದು ಕಾರ್ಯಕ್ರಮವೆಂದರೆ ಯಕ್ಷಗಾನ ಸಂಗೀತ ವೈಭವ . ಇಬ್ಬರು , ಮೂವರು ಯಾ ಹಲವು ಜನ ಭಾಗವತರು ಸೇರಿ ವಿವಿಧ ಪ್ರಸಂಗಗಳಿಂದ ಆಯ್ದ ಪದ್ಯಗಳನ್ನು ಹಾಡಿ ರಸವತ್ತಾಗಿ ನಡೆಸಿಕೊಡುವ ಒಂದು ಕಾರ್ಯಕ್ರಮ . ಇದರಲ್ಲಿ ಏಕತಾನತೆ ಕಳೆಯಲೋ ಎಂಬಂತೆ ಒಬ್ಬ ನಿರೂಪಕ ತನ್ನ ಹಾಸ್ಯ ಮಿಶ್ರಿತ ಮಾತುಗಳಲ್ಲಿ ಕಾರ್ಯಕ್ರಮ ನಿರ್ವಹಣೆ ಮಾಡುತ್ತಾನೆ .

ಕಳೆದ ಕೆಲವು ವರ್ಷಗಳಿಂದ ಈ ಕಾರ್ಯಕ್ರಮದ ಸ್ವರೂಪ ಬಹಳಷ್ಟು ಬದಲಾಗಿದೆ (ಕೆಲವರು ಇದನ್ನು ಬೆಳೆದಿದೆ ಅಂತಲೂ ವ್ಯಾಖ್ಯಾನಿಸುತ್ತಾರೆ ಬಿಡಿ !) ಯಕ್ಷಗಾನಕ್ಕೆ ಪಿಟೀಲು ,ಕೊಳಲು , ತಬಲಾ , ಶಂಖ , ಸೆಕ್ಷಫೋನ್ ಇತ್ಯಾದಿ ಅಳವಡಿಸಿ ಅದೂ ಅಲ್ಲ ಇದೂ ಅಲ್ಲ ಎಂಬ ಯಾವುದೊ ಒಂದು ಮಿಶ್ರಣವನ್ನು ಮಾಡಿ ಹೊಸತನ ಎನ್ನಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದವರೂ ಇದ್ದಾರೆ . ಮೊದ ಮೊದಲು ಬೇರೆ ಬೇರೆ ಪ್ರಯೋಗಗಗಳನ್ನು ಯಕ್ಷಗಾನ ಸಂಗೀತ ವೈಭವ ಕಾರ್ಯಕ್ರಮ ನೆಪದಲ್ಲಿ ಮಾಡಿದ್ದು ಅವುಗಳು ಕೇವಲ ಮನೋರಂಜನಾ ದೃಷ್ಟಿಯಲ್ಲಿ ತೆಗೆದು ಅಸ್ವಾದಿಸ ಬೇಕಾದ್ದು ಎಂಬ ನೆಲೆಗೆ ಮಾತ್ರ ಸೀಮಿತವಾಗಿತ್ತು.

ಇತ್ತೀಚಿಗೆ ಯಕ್ಷಗಾನ ಸಂಗೀತ ವೈಭವ ಕಾರ್ಯಕ್ರಮಗಳಲ್ಲಿ ಈ ವಿಚಿತ್ರ ವಾದ್ಯಗಳ ಬಳಕೆ ಕಡಿಮೆಯಾಗತೊಡಗಿ ಕೇವಲ ಯಕ್ಷಗಾನೀಯ ಹಿಮ್ಮೆಳದಲ್ಲೇ ಪದ್ಯಗಳು ಜನರಂಜಿಸತೊಡಗಿದೆ . ವಿವಿಧ ಪ್ರಸಂಗಗಳಿಂದ , ವಿವಿಧ ರಾಗಗಳ , ವಿವಿಧ ರಸಭಾವವನ್ನು ಪ್ರಕಟಿಸಬಲ್ಲ ಹಾಡುಗಳನ್ನು ಆಯ್ದು ಸರಿ ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾರ್ಯಕ್ರಮ ಹೆಚ್ಚು ಜನಪ್ರಿಯವಾಗುತ್ತಿದೆ. ಇಡೀ ರಾತ್ರಿ ಕುಳಿತು ಆಟ ನೋಡಲು ಅಲ್ಲಿ ಬರುವ ವಿವಿಧ ಸನ್ನಿವೇಶಗಳ ವಿವಿಧ ಪದಗಳನ್ನು ಸವಿಯಲು ಅಸಾಧ್ಯವಾದ ಪ್ರೇಕ್ಷಕನಿಗೆ ಇದೊಂದು ಅನುಕೂಲಕರ ಹಾಗೂ ಆಹ್ಲಾದಕರ ಕಾರ್ಯಕ್ರಮವೆನಿಸುತ್ತದೆ.

ಇಲ್ಲಿ ಪರಂಪರೆಯ ಮಟ್ಟುಗಳು , ಹೊಸತನದ ಪೆಟ್ಟುಗಳು , ಆಶು ಸಾಹಿತ್ಯಗಳು ಮುಂತಾದ ವೈವಿಧ್ಯಮಯ ಹಾಡುಗಳು ಕೇಳಲು ಸಿಗುತ್ತವೆ .ಕಾರ್ಯಕ್ರಮದ ಸಂಘಟನಾ ದೃಷ್ಟಿಯಿಂದಲೂ ಇದೊಂದು ಸುಲಭದ ಹೆಚ್ಚು ಹೊರೆಯನ್ನು ನೀಡದ ಕಾರ್ಯಕ್ರಮ .ಎರಡು ಜನ ಭಾಗವತರು ಒಬ್ಬೊಬ್ಬ ಚೆಂಡೆ ಮದ್ದಲೆ ಸಹಕಲಾವಿದರು ಹೀಗೆ ನಾಲ್ಕು ಜನರಿದ್ದರೆ ಒಂದು ಸರಳ ಸುಂದರ ಕಾರ್ಯಕ್ರಮ ಸವಿಯಲು ಸಿಗುತ್ತದೆ !

ಮನೆಗಳಲ್ಲಿ , ಚಿಕ್ಕ-ಪುಟ್ಟ ಸಮಾರಂಭಗಳನ್ನು ನಡೆಸುವಾಗ ಇಂಥ ಕಾರ್ಯಕ್ರಮವನ್ನು ಆಯೋಜಿಸಲು ಹೆಚ್ಚು ಶ್ರಮವಿರುವುದಿಲ್ಲ . ಮಾತ್ರವಲ್ಲ ದೊಡ್ಡ ದೊಡ್ಡ ಕಲಾವಿದರಿಗೆ ಹೇಳಿ ಅವರು ಕೈ ಕೊಡುವ ಹಾಗೂ ಸಂಘಟಕನಿಗೆ ತಲೆಬಿಸಿಯಾಗಲು ಅವಕಾಶವೂ ಇಲ್ಲ ! ಇದರಿಂದ ಕಲಾವಿದರಿಗೆ ಪ್ರೋತ್ಸಾಹ ನೀಡಿದಂತೆಯೂ ಆಗುತ್ತದೆ. ಒಟ್ಟಿನಲ್ಲಿ ಮಳೆಗಾಲದಲ್ಲಿ ಹಾಗೂ ಸರಳ ಹಾಗೂ ಸಂಕ್ಷಿಪ್ತ ಕಾರ್ಯಕ್ರಮ ಮಾಡಲು ಯೋಚಿಸುವವರಿಗೆ ಇಂಥ "ಗಾನ-ವೈಭವ" ಅನುಕೂಲಕರವಾಗಿದೆ.