Friday, December 27, 2019

ಮರೆಯಲಾರದ ತಾಳಮದ್ದಳೆ

ಯಕ್ಷಗಾನದ ಸೆಳೆತವೇ ಹಾಗೆ.. ವೈವಿಧ್ಯಮಯ ವ್ಯಕ್ತಿತ್ವವುಳ್ಳ ಹಲವರನ್ನು ಒಂದೆಡೆ ಒಟ್ಟುಗೂಡಿಸುವ ಅಪೂರ್ವ ಶಕ್ತಿ  ಈ ಕಲಾಪ್ರಕಾರದ್ದು. ಬಹುಶ ಇನ್ಯಾವ ಕಲಾ ಪ್ರಕಾರದಲ್ಲೂ ಈ ರೀತಿಯ ಗುಣವನ್ನು ಕಾಣಸಿಗುವುದೇ ಅಪರೂಪ.
ಯಕ್ಷಗಾನ ತಾಳಮದ್ದಳೆ ಬುದ್ಧಿಮತ್ತೆಯನ್ನು ನಿರೀಕ್ಷಿಸುತ್ತದೆ.ತಾಳಮದ್ದಳೆ ಆಸ್ವಾದಿಸುವ ಪ್ರಬುದ್ಧ ಪ್ರೇಕ್ಷಕರೇ ಬೇರೆ. ಸದಾ ಹಸಿರಾಗಿರುವ ಮಹಾಭಾರತ, ರಾಮಾಯಣ ಭಾಗವತ ಮತ್ತು ಪುರಾಣಗಳ ಕಥಾ ನಿರೂಪವನ್ನು ಮಾತಿನ ಮಂಟಪದಲ್ಲೇ ಅನಾವರಣಗೊಳಿಸುವ ಅದ್ಭುತ  ಶಕ್ತಿ ತಾಳಮದ್ದಲೆಗಿದೆ .

ಅಂದು ನಮ್ಮ ಮನೆಯಲ್ಲಿ ಸುದರ್ಶನ ಕರಗ್ರಹಣ ತಾಳಮದ್ದಳೆ.  ಭೀಷ್ಮ ಸೇನಾಪತ್ಯದಿಂದ ತೊಡಗಿ ಕರ್ಮಬಂಧ ಸಹಿತವಾಗಿ ಸುದರ್ಶನ ಕರಗ್ರಹಣ. ಬಲಿಪ ನಾರಾಯಣ ಭಾಗವತರು ಮತ್ತು ಪ್ರಸಾದ್ ಬಲಿಪರ ಅದ್ಭುತ ಭಾಗವತಿಕೆ. ಕೊಂಕಣಾಜೆ ಶೇಖರಣ್ಣ ಹಾಗೂ ಗುರುಪ್ರಸಾದ ಬೊಳಿಂಜಡ್ಕರ ಚೆಂಡೆ ಮದ್ದಲೆ ಸಾಥ್. ಅರ್ಥಧಾರಿಗಳ ಸಹಿತ ಇಪ್ಪತ್ತನಾಲ್ಕು ಜನ ಪ್ರೇಕ್ಷಕರು.ಅನಾರೋಗ್ಯದ ನಡುವೆಯೂ ಪರಮಾನಂದ ಅನುಭವಿಸಿದ ನನ್ನ ಅಪ್ಪ. ಬಲಿಪರ ಪದ ನಮ್ಮ ಸಂಘದ ಎಲ್ಲಾ ಸದಸ್ಯರನ್ನು ಪುಳಕಿತಗೊಳಿಸಿತ್ತು. ಮನೆಯೊಳಗಿನ ಜಗಲಿಯಲ್ಲಿ ಮೈಕ್ ಇಲ್ಲದೆ ನಮ್ಮೆಲ್ಲರನ್ನೂ ತನ್ಮಯಗೊಳಿಸಿ ಅದರ ನೆನಪನ್ನು ಚಿರಸ್ಥಾಯಿಯಾಗಿ ಉಳಿಸಿದವರು ಬಲಿಪಜ್ಜ. ಆಮೇಲೆ ಅನೇಕ ತಾಳಮದ್ದಳೆಗಳಾಗಿವೆ.ಆಗ ಅಪ್ಪ ಇರಲಿಲ್ಲ.

ನನ್ನ ಕೃಷ್ಣ ನ ಪಾತ್ರ ನಮ್ಮ ಆತ್ಮೀಯ ವೇಣುಗೋಪಾಲ ಭಟ್ಟರ ಭೀಷ್ಮ. ಅನುಭವಿಗಳೂ ವಾದ ನಿಪುಣರು ಆದ ಅವರೊಂದಿಗೆ ನಾನು ಕೃಷ್ಣನಾಗಿ ಕಷ್ಟ ಪಟ್ಟೆ.
ಪದ್ಯಗಳಿಂದ ಒಟ್ಟು ಕೂಟವನ್ನು ಬಲಿಪಜ್ಜ ಮೇಲೆತ್ತಿಯಾಗಿತ್ತು!
ಸಂಘದ ಪಾತ್ರ ಪರಿಚಯ ಪಟ್ಟಿ ಸನ್ಮಿತ್ರರನ್ನು ಸ್ಮರಿಸುವಂತೆ ಮಾಡುತ್ತದೆ. 

ಕೂಟ ಕಳೆದು ವರುಷಗಳೆ ಸಂದರೂ ಅದರ ಸವಿನೆನಪು ಸದಾ ಹಸಿರು.