Tuesday, April 29, 2008

ಕೆರಳುವ ಪ್ರತಿಭೆಗಳು ........!!!!

ಅರಳುವ ಪ್ರತಿಭೆಗಳ ಬಗ್ಗೆ ನೀವೆಲ್ಲ ಕೇಳಿರುತ್ತಿರಿ.
ಆದರೆ ಇದೆಂತದ್ದು ಕೆರಳುವ ಪ್ರತಿಭೆ ? ಅಂತ ಹುಬ್ಬೆರಿಸಬೇಡಿ !
ಒಂದು ಒಳ್ಳೆಯ ಕಾರ್ಯಕ್ರಮ ನಡೆಯುತ್ತಿದ್ದಾಗ ಒಮ್ಮೆಲೇ ಉತ್ಸಾಹದಿಂದ ಕಿರುಚಿಕೊಳ್ಳುತ್ತಾರಲ್ಲ ಅವರೇ ನಮ್ಮ ಕೆರಳುವ ಪ್ರತಿಭೆಗಳು !
ಈ ಕೆರಳುವ ಪ್ರತಿಭೆ ಪ್ರಕಟವಾಗುವುದು ಗುಂಪಿನಲ್ಲಿದ್ದಾಗ ಮಾತ್ರ ! ಎಂಥ ಪೋಲಿಗಳೇ ಆಗಿರಲಿ ಒಬ್ಬರೇಇದ್ದರೆ ಸುಮ್ಮನಿರುತ್ತಾರೆ . ಆದರೆ ಅಂತವರ ಒಂದು ಗುಂಪು ಸೇರಿತೆಂದರೆ ಸಾಕು ಬೆಕ್ಕು , ನಾಯಿ , ಆಕ್ಷಿ .... ಆಕ್ಷಿ .... ಆಕ್ಷಿ .... ಮುಂತಾದ ವೈವಿಧ್ಯಮಯ ಶಬ್ದಗಳನ್ನು ಉಪಯೋಗಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡುತ್ತಾರೆ. ಕೆಲವರು ಇವರನ್ನು ಆಕ್ಷೇಪಿಸಬಹುದು. ಒಳ್ಳೆ ಕಾರ್ಯಕ್ರಮ ಕೆಡಿಸಿಬಿಟ್ಟರು ; ಇವರು ಇಲ್ಲದಿದ್ದರೆ ಇನ್ನು ಚೆನ್ನಾಗಿ ಮೂಡಿಬರುತ್ತಿತ್ತು , ಇವರಿಗೆ ಬುಧ್ಧಿ ಇಲ್ಲ ಇತ್ಯಾದಿ ಸಿಡುಕಬಹುದು. ಆದರೆ ಸಮಯದ ಅರಿವಿಲ್ಲದೆ ಭಾಷಣ ಮಾಡುವ ಮಹಾನುಭಾವರ ಭಾಷಣ ನಿಲ್ಲಿಸುವುದಕ್ಕೋ , ಅಸಂಬಧ್ಧ ವಾಗಿ ವೇದಿಕೆ ಮೇಲೆ ವರ್ತಿಸುವವರನ್ನು ಹತೋಟಿಗೆ ತರಲು ಇಂಥವರು ಎಷ್ಟೋ ಬಾರಿ ಸಹಾಯ ಮಾಡುತ್ತಾರೆ ! ಆಗ ಯಾರೂ ಇವರನ್ನು ಪ್ರಶಂಸಿಸುವವರಿರುವುದಿಲ್ಲ.ಕಾಲೇಜಿನ ಯಾವುದೇ ಕಾರ್ಯಕ್ರಮವಿರಲಿ ಈ ಕೆರಳುವ ಪ್ರತಿಭೆಗಳು ಇಲ್ಲದಿದ್ದರೆ ಅದು ಅಪೂರ್ಣ ಅಂತ ನನ್ನ ಭಾವನೆ . ಯಾರಿಗೆ ವೇದಿಕೆಯಲ್ಲಿ ಅವಕಾಶವಿಲ್ಲವೋ , ಅವರಿರುವ ಸ್ಥಳವನ್ನೇ ವೇದಿಕೆಯನ್ನಾಗಿ ಮಾಡುವ ಇವರು ಪುಕ್ಕಟೆ ಮನೋರಂಜನೆ ನೀಡುವುದಂತೂ ಸತ್ಯ .
ಕಾಲೇಜು ದಿನಗಳಲ್ಲಿ ಬಹುತೇಕ ಎಲ್ಲ ಹುಡುಗರೂ "ಕೆರಳುವ ಪ್ರತಿಭೆ" ಒಂದಲ್ಲ ಒಂದು ಸಂದರ್ಭದಲ್ಲಿ ಆಗಿಯೇ ಇರುತ್ತಾರೆ ! ಹುಡುಗರ ಗುಂಪಿನ ಸಿನಿಮಾ ಡ್ಯಾನ್ಸ್ ನಡುವೆ ಲಲನೆಯೊಬ್ಬಳು ಸುಳಿದಾಗ , ಕಾರ್ಯಕ್ರಮದ ಮಧ್ಯೆ ಪವರ್ ಕಟ್ ಆದರೆ , ಪ್ರಾಂಶುಪಾಲರು ಕಾಲೇಜಿಗೆ ಮರುದಿವಸ ರಜೆ ಘೋಷಣೆ ಮಾಡಿದಾಗ , ಹೀಗೆ ಹತ್ತು ಹಲವು ಸಂಧರ್ಭಗಳಲ್ಲಿ ತಮ್ಮ ಅಸ್ತಿತ್ವ ತೋರಿಸುವ ಇವರಲ್ಲಿ ನೀವೂ ಒಂದು ಕಾಲದಲ್ಲಿ ಒಂದು ಸಲ ಬಬ್ಬರಾಗಿದ್ದಿರಿ ತಾನೆ ??
ಈಗ ಹೇಳಿ ಕೆರಳುವ ಪ್ರತಿಭೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ??

Monday, April 28, 2008

ಖಾಸಗಿ ಬಸ್ ಪ್ರಯಾಣ ....

ಮೊನ್ನೆ ನಮ್ಮ ಅಕ್ಕನ ಮಗನ ಉಪನಯನಕ್ಕೆ ಹೋಗಲೇ ಬೇಕಾದ ಕಾರಣ ಮನೆಗೆ ಹೋಗಿದ್ದೆ .ಇತ್ತೀಚಿಗಿನ ದಿನಗಳಲ್ಲಿ ಬುಧವಾರ ಬಿಟ್ಟರೆ ಇನ್ನಾವ ದಿನವೂ ಬಸ್ ನಲ್ಲಿ ಮೊದಲೇ ಟಿಕೆಟ್ ಕಾದಿರಿಸದಿದ್ದರೆ ಮರಳಿ ಬರಲು ರಾತ್ರಿ ಬಸ್ ನಲ್ಲಿ ಸೀಟು ಸಿಗುವುದು ಸಾದ್ಯವೇ ಇಲ್ಲ . ಈ ಬಗ್ಗೆ ಚೆನ್ನಾಗಿ ಅರಿವಿದ್ದ ನಾನು ಹೋಗುವ ಮೊದಲೇ ಟಿಕೆಟ್ ಕಾದಿರಿಸಿದ್ದೆ . ಉಪನಯನ ಮುಗಿಸಿ ರಾತ್ರಿ ನಿಷ್ಮಿತಾ ಮೋಟರ್ಸ್ ನವರ "ಸುಗಮ " ಬಸ್ ನಲ್ಲಿ ರಾತ್ರಿ ೧೦ಕ್ಕೆ ಸರಿಯಾಗಿ ಹತ್ತಿದಾಗ "ಒಹ್ ಬೆಳಗ್ಗೆ ಬೇಗ ತಲುಪುತ್ತೇನಲ್ಲಾ" ಅಂದುಕೊಂಡು ಕುಳಿತೆ . ನಿಜವಾಗಿಯೂ ನಾನು ಬಸ್ ನಲ್ಲಿ ಕುಲಿತದ್ದಲ್ಲ ಏರ್ ಬಸ್ ನಲ್ಲಿ ಅಂತ ಗೊತ್ತಾಗಿದ್ದು ಬಸ್ ಹೋಗುವ ರೀತಿ ಕಂಡಾಗ ! ಬಸ್ ನ ಒಳಗೆ ೩೨ ಜನ ಪ್ರಯಾಣಿಕರಿದ್ದರೆ ಒಬ್ಬ ಕ್ಲೀನೆರ್ ಇದ್ದ. ಇವರೆಲ್ಲರಿಗೂ " ಪ್ರಾಣ " ಇದೆಯೆ೦ಬುದನ್ನು ಮರೆತಂತೆ ಆ ಡ್ರೈವರ್ ಬಸ್ಸನ್ನು ಓಡಿಸುತ್ತಿದ್ದ ! ನನಗೆ ನಿಜಕ್ಕೂ ಭಯವಾಗ ತೊಡಗಿತು .
ಒಂದೇ ಸಮನೆ ವೇಗವಾಗಿ ಹೋಗುತ್ತಿದ್ದ ಬಸ್ ಎಲ್ಲ ಹಳ್ಳ ಗಳನ್ನೂ ಹೈ ಜಂಪ್ ಮಾಡಿ ಸಾಗುತ್ತಿತ್ತು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ನನಗೆ ಸೀಟಿನಲ್ಲಿ ಕುಳಿತ ಅನುಭವವೇ ಇಲ್ಲ ! ಏಕೆಂದರೆ ಸದಾ ಹಾರುತ್ತ ಇದ್ದ ಬಸ್ ನಲ್ಲಿ ಕೂರುವುದೆಂತು ?
ಚಾರ್ಮಾಡಿ ಘಾಟಿ ಹತ್ತಿದ ಬಳಿಕ ಕೊಟ್ಟಿಗೆ ಹಾರದಿಂದ ಮುಂದೆ ಒಮ್ಮೆಲೇ ಬಸ್ ನಲ್ಲಿ ಮೇಲಿನ ಅಂಕಣದಲ್ಲಿ ಮಲಗಿದ್ದ ಪ್ರಯಾಣಿಕರು ಉದುರತೊಡಗಿದಾಗ ಕಣ್ಣು ಮುಚ್ಚಿ ಕೈಗೆ ಸಿಕ್ಕಿದ ಮುಂದಿನ ಸೀಟಿನ ರಾಡನ್ನು ಬಿಗಿಯಾಗಿ ಹಿಡಿದು ಕುಳಿತೆ. ಆದರೂ ಕಾಲಿನ ಮೇಲೆ ಯಾರದ್ದೋ ಒಂದು ಸೂಟಕೇಸ್ ರಪ್ಪನೆ ಬಂದು ಬಿದ್ದಿತು. ಚೀರಿಕೊಳ್ಳದೆ ಇನ್ನೇನ್ ಗೈಯಲಿ ?
ಅಷ್ಟು ಹೊತ್ತಿಗಾಗಲೇ ಒಂದು ಆಕ್ರಂದನ ಮುಂದಿನ ಸೀಟಿನಿಂದ ಕೇಳಿಸಿತು. ೪ ತಿಂಗಳು ತುಂಬಿದ ಗರ್ಭಿಣಿಯನ್ನು ಅವರ ಮನೆಯವರು ತವರು ಮನೆಗೆ ಕರೆದೊಯ್ಯಲು ಈ ಬಸ್ ಆರಾಮದಾಯಕ ಎಂದು ನಂಬಿ ಅದರಲ್ಲಿ ಬಂದಿದ್ದರು. ಆ ತಾಯಿಯ ಧ್ವನಿಯಾಗಿತ್ತದು! ಆ ತಾಯಿ ಮುಂದಕ್ಕೆ ಮುಗ್ಗರಿಸಿ ಹೊಟ್ಟೆಯ ಎಡ ಭಾಗಕ್ಕೆ ಏಟು ಬಿದ್ದಿತ್ತು. ಪಾಪ ಅವರ ನೋವು ಯಾರಿಗೆ ಬೇಕು . ಅಳುತ್ತಲೇ ಇದ್ದ ಆ ಹೆಂಗಸಿಗೆ ಏನಾಯಿತೋ ಎಂದು ಯಾರೂ ಕೇಳುವವರಿಲ್ಲ .

ನಮಗೆ ಆಪೀಸ್ನಲ್ಲಿ ಕೆಲಸದ ಒತ್ತಡವಿದೆ . ಬೇಗನೆ ತಲುಪಬೇಕು ನಿಜ . ಆದರೆ ನಮ್ಮ ಪ್ರಾಣಕ್ಕಿಂತ ನಾವು ತಲುಪಬೇಕಾದ ತಾಣ ಮುಖ್ಯವೇ ?
ಜನರ ಓಡಾಟ ಹೆಚ್ಚಾಗಿದೆ . ಅದರಂತೆ ಬಸ್ ಗಳ ಸಂಖ್ಯೆ ಹೆಚ್ಚಾಗಿದೆ . ಹಾಗೆಯೇ ಪೈಪೋಟಿಯೂ ಇದೆ ನಿಜ. ಆದರೆ ಪ್ರಯಾಣಿಕರ ಜೀವದ ಮೇಲೆ ಯಾವ ಭದ್ರತೆಯನ್ನು ಕೊಡದೆ ಹೋಗುವ ಇಂಥ ಬಸ್ ಗಳನ್ನೂ ನಿಲ್ಲಿಸುವವರಾರು ? ಬಸ್ ಗೆ ರೂ ೪೦೦/- ನ್ನು ತೆತ್ತ ಮೇಲೆ ನಮಗೆ ಯಾವುದೇ ರೀತಿಯಲ್ಲೂ ಒಳ್ಳೆಯ ಸೇವೆಯನ್ನು ಕೊಡದೆ ವಂಚಿಸುವ ಇಂಥವರಿಂದ ನಮಗೆ ಸೇವೆಯ ರೂಪದ ಹಿಂಸೆಯನ್ನು ಅನಿವಾರ್ಯವಾಗಿ ಅನುಭವಿಸಬೇಕಾಗಿದೆ . ಖಾಸಗೀ ಬಸ್ ನವರಿಗೆ ದುಡ್ಡು ಬೇಕು . ಆದರೆ ಸರಿಯಾದ ಜವಾಬ್ದಾರಿಯುತ ಡ್ರೈವರ್ ಒದಗಿಸುವಸ್ತು ಪ್ರಜ್ಞೆ ಇಲ್ಲ . ಪ್ರಯಾಣಿಕರ ಜೀವದ ಜೊತೆ ಮನ ಬಂದಂತೆ ಆಡುವ
ಖಾಸಗೀ ಬಸ್ ನ ಪ್ರಯಾಣವು ಯಾವ ರೀತಿಯಲ್ಲಿಯೂ ಸುಖಕರವಲ್ಲ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ .

Thursday, April 24, 2008

ಚುನಾವಣಾಧಿಕಾರಿಯಾಗಿ ನಾನು ...


ಚುನಾವಣೆ ಬಂತೆಂದರೆ ಸಾಕು . ರಾಜಕಾರಣಿಗಳು ನಿದ್ದೆಗೆಟ್ಟು ತಮ್ಮ ಪೀಠವನ್ನು ಭದ್ರ ಪಡಿಸಲು ಸರ್ವ ಸನ್ನಧ್ಧರಾಗುತ್ತಾರೆ. ಇದು ಎಲ್ಲರಿಗೂ ತಿಳಿದ ವಿಚಾರವೇ . ಆದರೆ ಇಲ್ಲಿ ನಾನು ಹೇಳ ಹೊರಟಿರುವುದು ರಾಜಕಾರಣಿಗಳ ಬಗೆಗಲ್ಲ . ಚುನಾವಣಾಧಿಕಾರಿ ನನ್ನ ಮೊದಲ ಅನುಭವದ ಕುರಿತು ಎರಡು ಮಾತುಗಳನ್ನು ಅಷ್ಟೆ.

ಚುನಾವಣೆ ಬಂತೆಂದರೆ ಸಾಕು ಎಲ್ಲ ಅಧ್ಯಾಪಕರಿಗೂ, ಉಪನ್ಯಾಸಕರಿಗೂ ಗ್ರಹಚಾರ ವಕ್ಕರಿಸಿತೆಂದೇ ಅರ್ಥ ! ಯಾಕೆ೦ದರೆ ತಿಪ್ಪರಲಾಗ ಹಾಕಿದರೂ ಚುನಾವಣಾ ಪ್ರಾತ ತಪ್ಪಿಸಿಕೊಳ್ಳಲು ಕಷ್ಟ . ಕಳೆದ ಸಲದ ಚುನಾವಣೆ ನಡೆದಾಗ ನಾನು ಸುಳ್ಯದಲ್ಲಿ ಉಪನ್ಯಾಸಕನಾಗಿ (೨೦೦೨) ಕೆಲಸ ಮಾಡುತ್ತಿದ್ದ ಸಮಯ. ಮೊದಲ ಬಾರಿಗೆ ಚುನಾವಣಾಧಿಕಾರಿ (ಪ್ರಿಸೈಡಿಂಗ್ ಆಫೀಸರ್ ) ಕಾರ್ಯ ನಿರ್ವಹಿಸಬೇಕೆಂಬ ಸರ್ಕಾರದ ಆದೇಶವನ್ನು ಹೊತ್ತ ಪತ್ರವೊಂದನ್ನು ನಮ್ಮ ಜವಾನ ತಂದು ಕೊಟ್ಟಾಗ ಸಂಭ್ರಮ ಪಟ್ಟವರಲ್ಲಿ ನಾನೂ ಒಬ್ಬ . ಒಂದು ದಿನಕ್ಕಾದರೂ ಜಿಲ್ಲಾ ದ೦ಡಾಧಿಕಾರಿಯ ಸಮಾನ ಅರ್ಹತೆಯ ಪದವಿ ಸಿಗುತ್ತದಲ್ಲ ಎಂಬ ಉತ್ಸಾಹ ;ಸಂತೋಷ , ಪುಳಕ ಒಂದು ಕಡೆ ! ಮೊದಲ ಬಾರಿಗೆ ದೊಡ್ಡ ಜವಾಬ್ದಾರಿ ಹೇಗೆ ನಿರ್ವಹಿಸುವುದೆಂಬ ಭೀತಿ ಒಂದೆಡೆ !

ಸರಿ. ೨೭ ನೇ ತಾರೀಕು ಬೆಳಗ್ಗೆ ೧೦ ಗಂಟೆಗೆ ಸರಿಯಾಗಿ ಸುಳ್ಯದ ಪುರಭವನದಲ್ಲಿ ತರಬೇತಿಗಾಗಿ ಒಹ್ಇದು ನನಗೆ


ಚುನಾವಣಾಧಿಕಾರಿ ಇರಬೀಕೆಂದು ಆದೇಶದ ಮೇರೆಗೆ ನಾನು ಹಾಗೂ ಭಕ್ತಿಯಿ೦ದ ಮಿತ್ರರೆಲ್ಲ (ನನ್ನಂತೆ ಗ್ರಹಚಾರ ಕೆಟ್ಟವರು! ) ಅಲ್ಲಿ ಸೇರಿದೆವು. ಮೊದಲ ಬಾರಿಗೆ ವಿಧಾನ ಸಭಾ ಹಾಗೂ ಲೋಕ ಸಭಾ ಚುನಾವಣೆಗೆ ವಿಧ್ಯುನ್ಮಾನ ಮತಯಂತ್ರಗಳನ್ನು ಬಳಸುತ್ತಿರುವುದರಿಂದ ಅದರ ಬಗ್ಗೆ ಸಾಕಷ್ಟು ತರಬೇತಿ /ಮಾಹಿತಿ ನೀಡಲು ಅಲ್ಲಿ ನಮ್ಮನ್ನೆಲ್ಲಾ ಒಟ್ಟು ಸೇರಿಸಿದ್ದರು.

ಮೊದಲಿಗೆ ಮತದಾನ ಯಂತ್ರದ ಮಾಹಿತಿ ಪುಸ್ತಕ ಕನ್ನಡ/ ಇಂಗ್ಲಿಷ್ ಭಾಷೆಯಲ್ಲಿ ನಮಗೆಲ್ಲ ಒದಗಿಸಲಾಯಿತು.


ನಿಜವಾಗಿ ಒಂದು ಸರಕಾರೀ ಸಭೆ ಹೇಗಿರುತ್ತದೆ ಎಂಬ ಸ್ಪಷ್ಟ ಚಿತ್ರಣ ನನಗೆ ದೊರಕಿದ್ದು ಅದೇ ಮೊದಲು .


ಒಂದು ಹನಿ ನೀರನ್ನೂ ಕೊಡದೆ ಮದ್ಯಾಹ್ನ ೧.೨೦ರ ವರೆಗೆ ನಿರಂತರ ಕೊರೆತ !



ನಡು ನಡುವೆ ಮೇಲಧಿಕಾರಿಗಳನ್ನು ವಿಶೇಷವಾಗಿ ಹೊಗಳಿ ಅವರ ಕೃಪಾ ಕಾರುಣ್ಯ ಪಡೆಯಲು ಹಾತೊರೆಯುವ ಕಿರಿಯ ಅಧಿಕಾರಿಗಳು , ಆಗ ತಾನೆ ಮೈಕ್ ಕೈಗೆ ಸಿಕ್ಕಿ ಸಿಕ್ಕಿದ್ದೇ ಅವಕಾಶ ಎಂದು ಕೊರೆಯುವ ಕೆಲ ಹಿರಿ ಕೂಗಿದಾಗಇನ್ನೊಂದು ಕಡೆ ತಮ್ಮನ್ನು ಬಿಟ್ಟು ಬಿಡಿ ಎಂದು ಗೋಗರೆಯುತ್ತಿದ್ದ ಮಧ್ಯ ವಯಸ್ಕ ಶಿಕ್ಷಕಿಯರು ! ಇದನ್ನೆಲ್ಲಾ ನೋಡಿದಾಗ ಇದೊಂದು ಭಯಂಕರ ಕೆಲಸವೇ ಇರಬೆಕೆ೦ಬುದು ಎಂಥವನಿಗೂ ಅರ್ಥವಾಗುತ್ತಿತ್ತು !


ಬಂದದ್ದೆಲ್ಲ ಬರಲಿ ನೋಡೇ ಬಿಡೋಣ ಎಂದು ಬೆಳಗ್ಗಿನಿಂದ ಸಂಜೆಯವರೆಗೆ ಚೆನ್ನಾಗಿ "ತರಬೇತಿ " ಪಡೆದು ಮರಳಿದೆವು .


***

ಚುನಾವಣೆಯ ಮೊದಲು ನಮ್ಮನ್ನೆಲ್ಲಾ ನೆಹರೂ ಸ್ಮಾರಕ ಕೊಡಬೇಕು ಕರೆಸಿದ ಮುಖ್ಯ ಚುನಾವಣಾಧಿಕಾರಿ ಒಬ್ಬೊಬ್ಬರನ್ನಾಗಿ ಸರಕಾರೀ ಬಸ್ ಗೆ ಲೋಡ್ ಮಾಡ ತೊಡಗಿದರು. ಮೊದಲನೆ ಬ್ಯಾಚ್ ನಲ್ಲಿ ನಾನಿದ್ದ ಕಾರಣ ಮಡಿಕೇರಿ ವಿಧಾನ ಸಭೆ/ಲೋಕ ಸಭಾ ಕ್ಷೇತ್ರಕ್ಕೆ ಕರ್ತವ್ಯ ನಿರ್ವಹನೆಗೆಂದು ಮಡಿಕೇರಿಯ ಜ ಕಾರಿಯಪ್ಪ ಸ್ಮಾರಕ ಮಹಾವಿದ್ಯಾಲಯಕ್ಕೆ ತಲುಪಿಸಲಾಯಿತು. ಮಡಿಕೇರಿಯ ಸೊಳ್ಳೆಗಳ ಸಂಪೂರ್ಣ ಪರಿಚಯ ಮಾಡಿದ ನಂತರ ಮರುದಿವಸ ಬೆಳಗ್ಗೆ ನನ್ನೊಂದಿಗೆ ಸಹಾಯಕರಾಗಿ ನಮ್ಮ ಗುಂಪಿನ ಇತರರು (ಫರ್ಸ್ಟ್ ಪೋಲಿಂಗ್, ಸೆಕೆಂಡ್ ಪೋಲಿಂಗ್ , ಥರ್ಡ್ ಹೋಗುವ ಆಫೀಸೆರ್ಸ್ , ಒಬ್ಬ ಪೊಲೀಸ್ ಕಾನ್ಸ್ಟೇಬಲ್ ) ಸೇರಿಕೊಂಡರು . ನಮಗೆ ಕದಗದಾಳು ಎಂಬ ಮತದಾನ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲು ಸೂಚಿಸಿದ್ದರು . ಅಂತೆಯೇ ಮತದಾನದ ಮುನ್ನ ದಿನ ಆ ಮತದಾನ ಕೇಂದ್ರ ಸೇರಿಕೊಂಡೆವು.


ಅಲ್ಲಿನ ಪರಿಸ್ಥಿತಿಯನ್ನು ನೋಡಿದಾಗ ನಾವೆಲ್ಲ ಹೌಹಾರಿ ಹೋದೆವು !

ಒಂದು ಚಿಕ್ಕ ಅಂಗನವಾಡಿ ಶಾಲೆಯಲ್ಲಿ ಬೂಥನ್ನು ನಿರ್ಮಿಸಬೇಕಾಗಿತ್ತು . ನಮ್ಮ ಕೈಯ್ಯಲ್ಲಿ ೨ ವಿಧ್ಯುನ್ಮಾನ ಮತಯಂತ್ರ , ಇತರ ಕಡತಗಳು ಇದ್ದುವು. ಎಲ್ಲವನ್ನು ಜತನದಿಂದ ನೋಡಿಕೊಳ್ಳ ಬೇಕೆ೦ಬ ಕಟ್ಟಪ್ಪಣೆ ಇದ್ದುದರಿಂದ ಕೈಯಲ್ಲೇ ಹಿದಿದುಕೊ೦ದು ಅದರೊಳಗೆ ನಾವೆಲ್ಲ ಹೊಕ್ಕೆವು . ಸರಿಯಾಗಿ ೪ ಜನರಿಗೆ ಕಾಲು ನೀಡಿ ಕೂರಲೂ ಜಾಗವಿಲ್ಲದ ಆ ರೂಮಿನಲ್ಲಿ ಹೇಗೆ ನಿಭಾಯಿಸುವುದು ಎಂದೇ ನನಗೆ ಯೋಚನೆಯಾಗ ಹತ್ತಿತು. ನನ್ನೊ೦ದಿಗಿದ್ದ ಫರ್ಸ್ಟ್ ಪೋಲಿಂಗ್ ಆಫೀಸರ್ ಈ ಹಿಂದೆ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ ಅನುಭವದಿಂದ ನನ್ನನ್ನು ಚೆನ್ನಾಗಿ ಹೆದರಿಸ ತೊಡಗಿದರು !! ಅನಿವಾರ್ಯವಾಗಿ ಆ ರಾತ್ರೆಯನ್ನು ಆ ೩ ಮಂದಿ ಸಹೋದ್ಯೋಗಿಗಳೊಂದಿಗೆ ಆ ಪುಟ್ಟ ಕೋಣೆಯಲ್ಲಿ ಸೊಳ್ಳೆಗಳ ಸಂಗೀತದೊಂದಿಗೆ ಮಲಗಿ ಕಳೆದದ್ದಾಯಿತು . ಬೆಳಗ್ಗೆ ಎದ್ದು ಪ್ರಾತ: ಕರ್ಮಕ್ಕೆ ಶೌಚಾಲಯ ಹುಡುಕಿದರೆ ಬಾಗಿಲಿಲ್ಲದ ಶೌಚಾಲಯ ನಮ್ಮನ್ನು ಸ್ವಾಗತಿಸುತ್ತಿತ್ತು !!
ಯಾವುದನ್ನಾದರೂ ತಡೆದುಕೊಳ್ಳಬಹುದು ದೇಹಭಾದೆಯನ್ನಲ್ಲ ಎಂಬ ಸತ್ಯ ನನಗೆ ಅಲ್ಲಿ ಸ್ಪಷ್ಟವಾಗಿ ತಿಳಿಯಿತು !! ಬೆಳಗಿನ್ನೂ ಬೆಳಕು ಹರಿಯದಿದ್ದ ಕಾರಣ ಹೇಗೋ ಸುಧಾರಿಸಿಕೊಂಡೆವು ! ೬.೩೦ಕ್ಕೆ ಸರಿಯಾಗಿ ಸಿದ್ದರಾದ ನಾವು ಕುರುಕ್ಷೇತ್ರದಲ್ಲಿ ಯುದ್ದಕ್ಕೆ ಸಿದ್ದರಾದವರಂತೆ ವಿಧ್ಯುನ್ಮಾನ ಮತ ಯಂತ್ರವನ್ನು ಸಿದ್ದಗೊಳಿಸಿ ಮತದಾರ ಮಹಾ ಪ್ರಭುಗಳಿಗೆ ತಮ್ಮ ಮೂಲಭೂತ ಹಕ್ಕನ್ನು ಚಲಾಯಿಸಲು ಅನುವು ಮಾಡಿ ಕೊಟ್ಟೆವು. ಆಗ ಒಬ್ಬ ವ್ಯಕ್ತಿ ಕೈಯಲ್ಲಿ ಒಂದು ಹೂವಿನ ಹಾರ, ಊದುಕಡ್ಡಿ , ಹಿಡಿದುಕೊ೦ಡು ಬಂದು ಮತ ಯಂತ್ರಕ್ಕೆ ಅದನ್ನಿಟ್ಟು ಭಕ್ತಿಯಿ೦ದ (?) ನಮಸ್ಕರಿಸಿ ತನ್ನ ಆಯ್ಕೆಯ ಅಭ್ಯರ್ಥಿಗೆ ಮತ ನೀಡಿದ ಬಳಿಕ ಒಬ್ಬೊಬ್ಬರಾಗಿ ಜನ ಸಂದೋಹ ಸೇರತೊಡಗಿತು .
ಇಷ್ಟು ಹೊತ್ತಿಗಾಗಲೇ ೯ ಬೆಳಗ್ಗೆ ಗಂಟೆ . ಹೊಟ್ಟೆ ಒಂದೇ ಸಮನೆ ತಾಳ ಹಾಕ ತೊಡಗಿತು . ಹಿಂದಿನ ದಿನ ನಮ್ಮ ಅವಸ್ಥೆಯನ್ನು ಗಮನಿಸಿದ ಪುಣ್ಯಾತ್ಮರೊಬ್ಬರು ನಮಗೆಲ್ಲ ಇಡ್ಲಿ ಸಾಂಬಾರ್ ವ್ಯವಸ್ಥೆ ಮಾಡಿದರು. ಆ ಪ್ರದೇಶದಲ್ಲಿ ಒಂದು ಹೋಟೆಲ್ ಆಗಲೀ , ಕನಿಷ್ಠ ಒಂದು ಗೂದಂಗಡಿಯಾಗಲೀ ಇಲ್ಲದ್ದು ನಮ್ಮ ದುರ್ದೈವ !
ಪ್ರಿಸಿದಿಂಗ್ ಆಫೀಸರ್ ಕರ್ತವ್ಯ , ಜವಾಬ್ದಾರಿ ತುಂಬಾ ಗುರುತರವಾದದ್ದು .
ಎಸ್ಟು ಜನ ಮತದಾನ ಮಾಡಿದರು ? ಗಂಡಸರೆಷ್ಟು ? ಹೆಂಗಸರೆಷ್ಟು ? ಅಂಗವಿಕಲರು , ಅಶಕ್ತರು ಇವರೆಲ್ಲರ ಪಟ್ಟಿಯನ್ನು ಪ್ರತ್ಯೇಕವಾಗಿ ಕೊಡಬೇಕು . ಒಟ್ಟು ೬೭೮ ಸಹಿ ಹಾಕಬೇಕು. ಎಲ್ಲ ಕೆಲಸ ಮಡಿದ ಮೇಲೆ ತಲೆ ಚಿತ್ರಾನ್ನ್ನ ವಾಗಿ ಬಿಡುವಷ್ಟು ಕೆಲಸ ಇದೆ. ಏನೇ ಸಮಸ್ಯೆ ಬಂದರೂ ಕೂಡಲೇ ಪರಿಹಾರ ಮಾಡಬೇಕು . ಪೋಲಿಂಗ್ ಏಜೆಂಟ್ ಕೇಳುವ ಅವನ್ನು ಕಂಟ್ರೋಲ್ ಮಾಡುವ ಕೆಲಸವೂ ಕೆಲವೊಮ್ಮೆ ಬರುತ್ತದೆ. ಒಬ್ಬ ಪೊಲೀಸ್ ನಮಗೆ ಮೂವರಿಗೆ ರಕ್ಷಣೆ ಕೊಡಲು ಇರುತ್ತಾರೆ. ಒಂದು ಗುಂಪು ಜನ ಬಂದು ಧಾಳಿ ಮಾಡಿದರೆ ಮೊದಲು escape ಆಗುವುದೂ ಅವರೇ!
ಅಂತೂ ಸಾ೦ಗವಾಗಿ ಮತದಾನ ಮುಗಿಸಿ ಮರಳಿ ಮತ ಯಂತ್ರಗಳನ್ನು ಒಪ್ಪಿಸಲು ಬಂದಾಗ ಅಲ್ಲಿನ ನೂಕು ನುಗ್ಗಲು ನೋಡಿ ನಮ್ಮ ತಲೆ ತಿರುಗಿತು . ಒಮ್ಮೆ ಇಲ್ಲಿಂದ ಪಾರು ಮಾಡು ಶಿವನೇ ... ಎಂದು ದೇವರಲ್ಲಿ ಬೇಡಿಕೊಂಡೆ. ಭಗವಂತನಿಗೆ ನನ್ನ ಕೂಗು ಕೇಳಿಸಿತು ; ನನ್ನ ಹೆಸರನ್ನು ಮೈಕ್ ನಲ್ಲಿ ಕೂಗಿದಾಗ " ಬದುಕಿದೆಯಾ ಬಡ ಜೀವವೇ " ಎಂದು ಮರಳಿ ಕೊಟ್ಟು ಬಂದೆ . ಒಟ್ಟಿನಲ್ಲಿ
ಅನುಭವವು ಸಿಹಿಯಲ್ಲ ಎಂಬುದು ೧೦೦% ಖಚಿತವಾಯಿತು.
ಈಗ ಮತ್ತೆ ಬಂದಿದೆ ಚುನಾವಣೆ ! ಮತ್ತೆ ಪುನಾ ಬಂದಿದೆ ಚುನಾವಣಾಧಿಕಾರಿ ಕರೆಯೋಲೆ !!
ಈ ಸಲ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ . ಎಲ್ಲಿದೆಯೋ ಗೊತ್ತಿಲ್ಲ ; ಪುನ: ಯಾರು ಸಹಾಯಕರಾಗಿ ಸಿಗುವರೋ ?
ಭಯ ಮಿಶ್ರಿತ ಕುತೂಹಲದಲ್ಲಿದ್ದೇನೆ.
ಹೋಗಿ ಬಂದ ಮೇಲೆ ಹೀಗಾಯಿತು ಅಂತ ವಿವರಿಸುತ್ತೇನೆ . ಅಲ್ಲಿವರೆಗೆ ನಮಸ್ಕಾರ....

Wednesday, April 23, 2008

ಬಲಿಪರಿಗೆ ಪ್ರಶಸ್ತಿಯೂ ಕರ್ನಾಟಕದ ಸರಕಾರವೂ ....


ಕೇರಳ ಸರಕಾರದಿ೦ದ ಬಲಿಪರಿಗೆ ಪ್ರಶಸ್ತಿ ಪ್ರಕಟವಾದಾಗ ಅಭಿಮಾನಿಗಳಿಗೆ ಸಂತಸವಾದದ್ದು ಬಲಿಪರನ್ನು ಆ ಸಂಮಾನಕ್ಕೆ ಆಯ್ಕೆ ಮಾಡಿದ್ದಕ್ಕಿಂತಲೂ ಆ ಪ್ರಶಸ್ತಿಯ ಆಯ್ಕೆ ಮಂಡಳಿಯ ಬಗ್ಗೆ !

ಬಹುತೇಕ ಕೇರಳಿಗರೇ ಇರುವ ಆಯ್ಕೆ ಮಂಡಳಿಯ ಸದಸ್ಯರಿಗೆ ದೂರದ ಕರ್ಣಾಟಕದ ಮೂಡಬಿದರೆಯ ಬಳಿಯ ನೂಯಿ ಮನೆಯಲ್ಲಿ ವಾಸವಾಗಿರುವ ಬಲಿಪರನ್ನು ಗುರುತಿಸುವುದಕ್ಕಾಗುತ್ತದೆ.ಬಲಿಪ ಭಾಗವತರು ಕಾಸರಗೋಡು ಜಿಲ್ಲೆಯ ಪೆರ್ಲ ಸಮೀಪದ ಪಡ್ರೆಯಲ್ಲಿ ಜನಿಸಿದ್ದಾರೆ ಎಂಬುದನ್ನು ಹೊರತು ಪಡಿಸಿದರೆ ಅವರು ತಮ್ಮ ಸುದೀರ್ಘ ವರ್ಷಗಳ ಯಕ್ಷಗಾನ ಕಲಾ ಸೇವೆಯನ್ನು ನಡೆಸಿದ್ದು ನಮ್ಮ ಈ ಕನ್ನಡ ನಾಡಿನಲ್ಲಿ ! ಆದರೆ ನಮ್ಮ ಸರಕಾರಕ್ಕಾಗಲೀ ಸ್ಥಾಪಿತ ಹಿತಾಸಕ್ತಿಯ ಮುಖಂಡರಿಗಾಗಲೀ ಇವರ ಈ ಸೇವೆಯ ಬಗ್ಗೆ ಒಂದಿಷ್ಟು ಮಾಹಿತಿಯೂ ಇಲ್ಲ ! ಕನ್ನಡಿಗರಾದ ನಮಗೆ ಇದು "ಎಮ್ಮೆಯ" ವಿಷಯವಲ್ಲವೇ ?

ಅಥವಾ ಬಲಿಪರ ಸೇವೆಯನ್ನು ಗುರುತಿಸಬಲ್ಲಷ್ಟು ಹಿರಿದಾದ ಪ್ರಶಸ್ತಿಯ ಕೊರತೆಯಿರಬಹುದೇ ?

ಏನಿದ್ದರೂ ನಮ್ಮ ಸರಕಾರೀ ಅಧಿಕಾರಿಗಳು "ನುಂಗು"ವುದನ್ನು ಬಿಟ್ಟು ಇನ್ನೇನನ್ನೂ ಮಾಡುವುದಿಲ್ಲ ಎಂಬ ಸತ್ಯ ಎಲ್ಲರಿಗೂ ತಿಳಿದೇ ಇದೆ .

ಪ್ರತಿಭೆಯನ್ನು ಗುರುತಿಸುವಲ್ಲಿ ಕೇರಳ ಸರಕಾರವು ಮುಂದಾದದ್ದು ಅಲ್ಲಿನವರ ನಿಜವಾದ ಅಭಿಮಾನವನ್ನು ತೋರಿಸುತ್ತದೆ. ಬಲಿಪರ ಅಭಿಮಾನಿಗಳಿಗೆಲ್ಲ ಕೇರಳ ಸರಕಾರವು ಸಂತಸವನ್ನುಂಟು ಮಾಡಿದೆ.

ವಿದ್ವಾನ್ ಸರ್ವತ್ರ ಪೂಜ್ಯತೆ ಎಂಬುದು ಸಾರ್ವಕಾಲಿಕ ಸತ್ಯ .

Friday, April 18, 2008

ಸರಪಾಡಿ ಶಂಕರನಾರಾಯಣ ಕಾರಂತರು



ಯಕ್ಷಗಾನವು ಹಲವು ಮಂದಿ ಭಾಗವತರ ಕೊಡುಗೆಯಿಂದ ಸಂಪನ್ನವಾಗಿದೆ . ಸರಪಾಡಿ ಶಂಕರನಾರಾಯಣ ಕಾರಂತರು ಸಂಗೀತ ಶೈಲಿಯ ಭಾಗವತಿಕೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು . ಧರ್ಮಸ್ಥಳ , ಕಟೀಲು ಮೇಳಗಳಲ್ಲಿ ತಿರುಗಾಟ ನಡೆಸಿದ ಇವರು ಸದ್ಯ ಮಂಗಳೂರಿನ ಬಳಿ ಕುಳಾಯಿಯಲ್ಲಿ ವಾಸವಾಗಿದ್ದಾರೆ. ವೃತ್ತಿ ಮೇಳವನ್ನು ಬಿಟ್ಟು ೧೨ ವರ್ಷಗಳಿಂದ ಪುರೋಹಿತ್ಯವನ್ನು ಮಾಡುತ್ತಿದ್ದಾರೆ .

ಹಳೆಯ ಶೈಲಿಯ ಒಳ್ಳೆಯ ಹಾಡನ್ನು ಕೇಳಬೀಕಿದ್ದರೆ ಇವರ ಹಾಡನ್ನು ಕೇಳಿ ಆನಂದಿಸಬಹುದು.



Wednesday, April 16, 2008

ಮಹಿಳಾ ಭಾಗವತರು ..


ಶ್ರೀಮತಿ ಲೀಲಾವತಿ ಬೈಪಡಿತ್ತಾಯರು ನಮ್ಮ ಮನೆಗೆ ಬಂದಿದ್ದಾಗ ಹೇಳಿದ್ದು "ಇತ್ತೀಚೆಗೆ ಮಾಡಿದ್ದೇ ಯಕ್ಷಗಾನ ಅಂತ ಆಗಿದೆ. ಯಾವಾಗ ಯಕ್ಷಗಾನವು ವ್ಯಾಪರೀಕರಣವಾಗತೊಡಗಿತೋ ಬೈಪಾಡಿತ್ತಾಯ ಯಕ್ಷಗಾನದ ಒಂದೊಂದೇ ಕ್ರಮಗಳು ಗಾಳಿಗೆ ತೂರಲ್ಪಟ್ಟು ಈಗ ಮಾಡಿದ್ದೆಲ್ಲ ಯಕ್ಷಗಾನ ಅನ್ನುವಂತಾಗಿದೆ !!"


ಪಟ ಪಟ ಗಾಳಿ ಪಟ ....... ಪದ್ಯವೂ ಬಡಗಿನ ರಂಗಸ್ಥಳದಲ್ಲಿ ಕಂಡಾಗ ನನಗೂ ಮೇಲಿನ ಮಾತುಗಳು ಸತ್ಯ ಅನಿಸಿತ್ತು.

ತೆಂಕು ತಿಟ್ಟಿನಲ್ಲಿ ಮೊದಲ ಮಹಿಳಾ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಡಿತ್ತಾಯರು ತಮ್ಮ ಪತಿ ಶ್ರೀ ಹರಿನಾರಾಯಣ ಬೈಪಡಿತ್ತಾಯರಿಂದ ಬಾಗವತಿಕೆಯನ್ನು ಕಲಿತು ಸುಬ್ರಮಣ್ಯ , ಮದೂರು , ಅಳದಂಗಡಿ ಮೇಳಗಳಲ್ಲಿ ತಿರುಗಾಟ ನಡೆಸಿ ಅನುಭವ ಸಂಪನ್ನರಾಗಿದ್ದಾರೆ. ಯಾವುದೇ ಪುರಾಣಿಕ ಪ್ರಸ೦ಗವನ್ನು ಆಡಿಸಲು ಸಮರ್ಥ ರಾಗಿರುವ ಇವರು ಯಕ್ಷಗಾನ ಬಾಗವತಿಕೆಯನ್ನು ಕಲಿಸುತ್ತಿದ್ದು ಹಲವಾರು ಶಿಷ್ಯವರ್ಗ ಹೊಂದಿದ್ದಾರೆ .
ಇವರ ಹಾಡನ್ನು ಇಲ್ಲಿ ಕೇಳಿ ಆನಂದಿಸಬಹುದು.
http://oyakshagana.googlepages.com/audios.htm

Saturday, April 5, 2008

ಬ್ಯಾನರ್ ಬಾಬಣ್ಣ ....

ಮೊನ್ನೆ ತಾಳಮದ್ದಲೆಯೊಂದರಲ್ಲಿ ಶ್ರುತಿ ಹಿಡಿದಿದ್ದ ಬಾಬಣ್ಣನನ್ನು ಕಂಡಾಗ ನನಗೆ ಆಶ್ಚರ್ಯವಾಯಿತು . ಒಂದು ದಿನವು ಬಿಡುವಿಲ್ಲದೆ ಸದಾ ಬ್ಯಾನರ್ ಬರೆಯುತಿದ್ದ ಬಾಬಣ್ಣ ಇವರೆಯಾ ? ಕುರುಚಲು ಗಡ್ಡ , ಕಂದಿಹೋದ ಕಣ್ಣು , ಪೇಲವ ಮುಖವನ್ನು ಹೊಂದಿದ್ದ ಅವರನ್ನು ನಿಜಕ್ಕೂ ನಾನು ಅಲ್ಲಿ ನಿರೀಕ್ಷಿಸಿರಲಿಲ್ಲ !
ಯಾವುದೇ ಸಭೆ ಸಮಾರಂಭಗಳಿಗೆ ಹೋದರು ಕೂಡಲೇ ಅಲ್ಲಿ ಮನ ಸೆಳೆಯುವುದು ಬಾಬಣ್ಣನ ಬ್ಯಾನರ್ ! ಕಾರ್ಯಕ್ರಮಕ್ಕೆ ಕಳೆ ನೀಡುತ್ತಿದ್ದ ಅವರ ವಿವಿಧ ಶೈಲಿಯ ಬರಹಗಳನ್ನೋಳಗೊಂಡ ಬ್ಯಾನರ್ ಗಳಿಗೆ ಬಹಳ ಬೇಡಿಕೆ . ಚುನಾವಣೆ ಬಂತೆಂದರೆ ಸಾಕು ನಮ್ಮ ಬಾಬಣ್ಣನಿಗೆ ತಲೆ ಕೆರೆದುಕೊಳ್ಳುಲೂ ಪುರುಸೋತ್ತಿರದಷ್ಟು ಕೆಲಸ . ಎಷ್ಟೇ ಒತ್ತದವಿದ್ದರೂ ಸಮಯಕ್ಕೆ ಸರಿಯಾಗಿ ಬಾಬಣ್ಣನ ಬ್ಯಾನರ್ ರೆಡಿ ! ಸ್ವಂತಕ್ಕೆ ಹೇಳಿಕೊಳ್ಳುವವರಾರೂ ಬಾಬಣ್ಣನಿಗೆ ಇಲ್ಲ. ಮೊದ ಮೊದಲು ಮಹಾಲಿ೦ಗೇಶ್ವರ ದೇವಸ್ಥಾನ ದ ಬಡಗು ಗೋಪುರದಲ್ಲಿ ಮಲಗುತ್ತಿದ್ದ ಅವರಲ್ಲಿ ಒಂದು ಪೆಟ್ಟಿಗೆ ತುಂಬ ಬಣ್ಣ , ಬ್ರಶ್ ಇತ್ಯಾದಿ ಪರಿಕರ ಇತ್ತು. ಯಕ್ಷಗಾನದಲ್ಲಿ ಬಣ್ಣದ ವೇಷ ಮಾಡುತ್ತಿದ್ದುದರಿಂದ ನಮಗೆಲ್ಲ ಬಾಬಣ್ಣ ಚಿರಪರಿಚಿತ ವ್ಯಕ್ತಿ . ಅವರ ವೇಷ ನೋಡಲು ಭಯಾನಕ ವಾಗಿರುತ್ತಿತ್ತು.

" ದಾನೆ ಬಾಬಣ್ಣ ಎಂಚ ಉಲ್ಲರ್ ? "

"ಮಿತ್ತ್ ಪೋಪುನ ಏಪ ಅಂದ್ ಲೆಕ್ಕ ಪಾದೊಂದುಲ್ಲೇ "
"ಅಂಚಲಾ ಇತ್ತೆ ದಾದ ಅಂಡ್ ?" ಕುತೂಹಲ ತಡೆಯದೆ ಕೇಳಿಯೇ ಬಿಟ್ಟೆ .
ನಾನಾ ದಾನೆ ಅವರ ಬಾಕಿ ಸ್ವಾಮೀ ? ೫ ಪ್ಲೆಕ್ಷ್ ಅಂಗಡಿ ಈ ಊರುದ್ ಆಯಿಬುಕ್ಕ ನನ್ ದಾನೆ ಆವೋದು ?

ತಲೆಗೆ ಹೊಡೆದ ಹಾಗೆ ಆಯಿತು .
ಅರ್ಧ ತಾಸಿನ ಒಳಗೆ ಕಂಪ್ಯೂಟರ್ ನಲ್ಲಿ ಪ್ಲೆಕ್ಷ್ ಬ್ಯಾನರ್ ತಯಾರಾಗುವಾಗ ದಿನವಿಡೀ ಯಾರು ಕಾಯುತ್ತಾರೆ ?

ಬಾಬಣ್ಣ ನ ಹಾಗೆ ಹಲವು ಮಂದಿ ಮೂಲೆ ಗುಂಪಾಗಿ ಹೋಗುತ್ತಿದ್ದಾರೆ . ಹೊಟ್ಟೆ ಪಾಡಿಗೆ ಬೇರೆ ಕೆಲಸವನ್ನದರೂ ಮಾಡಲು ಕೆಲಸ ಸಿಗುತ್ತಿಲ್ಲ . ಜಾಗತೀಕರಣ ಇಂದು ಜನರನ್ನು " ವಿಶ್ವ ಮಾನವ " ನನ್ನಾಗಿಸುತ್ತಿದೆ .
ಬೇಕಿತ್ತೆ ಈ ಕಂಪ್ಯೂಟರ್ ?
ಬಡವನ ಸಮಾಧಿಯ ಮೇಲೆ ಕುಳಿತು ಹೋಳಿಗೆ ತಿನ್ನುತ್ತಾ " ತುಪ್ಪ ರಜ್ಜ ವಾಸನೆ ಬತ್ತೋ ಬಾವಯ್ಯ ? " ಅಂತ ಕೇಳುವ ಹಾಗೆ ಆಯ್ತಲ್ಲಾ ?
ಎಲ್ಲ ಗುಡಿ ಕೈಗಾರಿಕೆಗಲೂ ಪರಮಾತ್ಮನ ಅಡಿ ಸೇರುತ್ತಿದೆ .
ಏನು ಮಾಡಲಿ ಎಂದು ಯೋಚಿಸುತ್ತಿರುವಾಗಲೇ ಬಲಿಪಜ್ಜ ತೆಗೆದ ಪದ್ಯ
" ಹರನೆ ಶಂಕರನೇ ಮುಂದೆನ್ ಗೈಯಲಿ ........."