Saturday, August 9, 2008

ಚಿಕನ್ ಗೂನ್ಯ ......

ಇಡೀ ದಿನ ಗೊಬ್ಬರ ಹೊತ್ತು ಕೆಳಗಿನ ತೋಟಕ್ಕೆ ಸಾಗಿಸಿ ಸಂಜೆ ಬಂದು ಕೈಕಾಲು ತೊಳೆಯುವಾಗ ಕಾಲಿನ ಗಂಟು ನೋಯಲು ಸುರು . ಗೊಬ್ಬರ ಹೊತ್ತು ಅದೂ ಕೆಳಗಿನ ತೋಟಕ್ಕೆ ಹಾಕಿದ್ದಲ್ಲವೇ ? ಹಾಗೆ ಸ್ವಲ್ಪ ನೋವು ಅಂತ ಉದಾಸೀನ ಮಾಡಿ ಬಂದು ಕುಳಿತು ಚಾ ಕುಡಿಯುತ್ತ " ವಿಜಯ ಕರ್ನಾಟಕದಲ್ಲಿ" ಬಾಂಬ್ ಸ್ಪೋಟ ಪ್ರಕರಣ ಇವತ್ತೇನಾಯಿತು? ಅಂತ ನೋಡುತ್ತಾ ಕುಳಿತೆ.
ರಾತ್ರಿ ಊಟ ಮಾಡಿ ಮಲಗುವಾಗ ಏಕೋ ಮೈ ಎಲ್ಲ ಬಿಸಿ ಏರಿ ಜ್ವರ ಬಂದು ಬಿಟ್ಟಿತು ಜೊತೆಗೆ ಅಸಾಧ್ಯ ಗಂಟು ನೋವು .ಮರುದಿನ ಬೆಳಗ್ಗೆ ಹಾಸಿಗೆ ಬಿಟ್ಟು ಮೇಲೆ ಏಳಲೂ ಆಗದಷ್ಟು ಜ್ವರ.
"ಅಯ್ಯೋ ಗ್ರಹಚಾರವೇ " ಅಂತ ನೋವನ್ನು ಅನುಭವಿಸುತ್ತಿದ್ದಾಗ ಕೆಳಗಿನ ಮನೆ ಪುಟ್ಟಣ್ಣ ಬಂದು ಬಿಟ್ಟರು .
" ಪುಟ್ಟಣ್ಣ ಎನಗೂ ಚಿಕನ್ ಗೂನ್ಯ ಹಿಡುದತ್ತು ಮಾರಾಯ " ಅನ್ನುವಾಗಲೇ ಪುಟ್ಟಣ್ಣ "ಅನು ಈಗ ಅಸ್ಪತ್ರೆಂದಲೇ ಬತ್ತಾ ಇಪ್ಪದು " ಹೇಳುತ್ತಾ ಕೆಲವು ಮಾತ್ರೆಗಳನ್ನು ನನಗೂ ಕೊಟ್ಟು ಉಪಕಾರ ಮಾಡಿದರು.
ಹೇಗೋ ಸಾವರಿಸಿಕೊಂಡು ಮಧ್ಯಾಹ್ನ ೩ ಗಂಟೆಗೆ ನಮ್ಮ ಸರಕಾರೀ ಆಸ್ಪತ್ರೆ ಬಳಿ ಬಂದರೆ ಮಾರುದ್ದದ ಕ್ಯೂ . ಎಲ್ಲರ ಮನೆಯಲ್ಲೂ ಇದೇ ಅವಸ್ಥೆ .ಮೊದಲೇ ಸರಕಾರಿ ಆಸ್ಪತ್ರೆ ಅಂದರೆ " ಸೇವೆ ಉಚಿತ ಸಾವು ಖಚಿತ " ಅಂತ ಗೊತ್ತಿದ್ದರೂ ಅಲ್ಲಿಗೆ ಹೋಗದೆ ಬೇರೆ ದಾರಿ ಇಲ್ಲ . ಆದಿತ್ಯವಾರ ಉಳಿದ ಮೂರು ಮಂದಿ ಖಾಸಗಿ ವೈದ್ಯರಿಗೂ ರಜೆ . ಹಾಗೆಂದು ರಜೆಯ ದಿವಸ ಜ್ವರ ಬರಬೇಡ ಅಂತ ಹೇಳಲಾಗುತ್ತದೆಯೇ ?ಅಂತೂ ನನ್ನ ಸರದಿ ಬಂದಾಗ ೫ ಗಂಟೆ .
ಮಾತ್ರೆಗಳನ್ನು ಪಡೆದು ರಿಕ್ಷಾ ಹತ್ತಿ ಮನೆಗೆ ಬಂದು ಕುಳಿತಾಗ "ಮದ್ದು ಬಿಡ್ಲೆ ಪಂಪು ಕೊಂಡು ಹೊಪೋ ಹೇಳಿ ಇತ್ತೆ ಬಂದೆ " ಎನ್ನುತ್ತಾ ಪುಟ್ಟಣ್ಣ ಒಳಗೆ ಬಂದರು.
"ಮದ್ದು ನೀರಿಂಗೆ ಹಾಕಿದ್ದಾ? " ಅಣ್ಣ ಕೇಳಿದ .
"ಅಪ್ಪು"
"ಹಾಂಗಾರೆ ಇನ್ನು ಒಂದು ವಾರಕ್ಕೆ ಅದರ ಬಿಟ್ಟಕ್ಕು ಹೇಳಿ ಆಶೆ ಬಿಡು " ಹೇಳಿದ ಅಣ್ಣ .
ನೋಡಿದರೆ ಮದ್ದು ಬಿಡುವ ಸಂಜೀವನಿಗೂ "ಚಿಕನ್ ಗೂನ್ಯ "!
ಒಟ್ಟಿನಲ್ಲಿ ಈ ಮಹಾಮಾರಿಯಿಂದಾಗಿ ಬೆಳೆ ಬೆಳೆಯಲಿಲ್ಲ , ತೋಟಕ್ಕೆ ಮದ್ದು ಬಿಡದೆ ಇದ್ದ ಫಸಲೂ ರೋಗಕ್ಕೆ ತುತ್ತಾಗಿ ಮರದ ಬುಡದಲ್ಲಿ ಬಿದ್ದದ್ದನ್ನು ನೋಡುವಾಗ ಮುಂದೆ ಏನು ? ತೋಚುವುದಿಲ್ಲ .
ಈಗಾಗಲೇ ಅಕ್ಕಿಗೆ ಕೆ.ಜಿ.ಗೆ ೧೪ ರೂಪಾಯಿ ಇದ್ದದ್ದು ೧೯ಕ್ಕೆ ಏರಿದೆ . ಉಳಿದೆಲ್ಲ ದಿನಸಿಗಳಿಗೆ ಕನಿಷ್ಠ ೨೦ ರಿಂದ ೨೫% ಬೆಲೆ ಏರಿಕೆಯಾಗಿದೆ .ದುಡಿಯಲು ಚೈತನ್ಯವಿಲ್ಲ ತಿನ್ನಲು ಅನ್ನವಿಲ್ಲ ಬಹುಶ ಪ್ರಳಯ ಅಂದರೆ ಇದೇ ಇರಬೇಕೇನೋ?
ಎಲ್ಲ ಕಡೆಯೂ ಒಂದಲ್ಲ ಒಂದು ಕಾರಣಕ್ಕೆ ಜನರು ಪ್ರಾಣ ಬಿಡುತ್ತಲೇ ಇದ್ದಾರೆ.
ಇದೇ ರೀತಿ ಮುಂದುವರಿದರೆ ಮುಂದೊಂದು ದಿನ "ಅನ್ನಕ್ಕಾಗಿ" ಹೋರಾಟ ನಡೆಯುವುದು ಖಂಡಿತ .
ಆ ದಿನ ಬಹಳ ದೂರವಿಲ್ಲ ಅಂತ ಮನಸ್ಸು ಸಾರಿ ಹೇಳುತ್ತಿದೆ .
ನಿಮಗೇನನಿಸುತ್ತದೆ ?

Friday, August 8, 2008

ಬನ್ನ ಬಡುವೀ ಬಾಳು....

" ಮಕರಾಕ್ಷ ಮಡಿದ ವಾರ್ತೆಯ ಕೇಳಿ ......" ಎಂದು ಸುಶ್ರಾವ್ಯವಾಗಿ ಕಡತೋಕರ
ಪದ್ಯಗಳು ತೇಲಿ ಬರುತ್ತಿದ್ದರೆ ತನ್ಮಯವಾಗಿ ರ೦ಗದ ಮೇಲೆ ಅಭಿನಯಿಸುತ್ತಿದ್ದ
ಪಕಳಕುಂಜರ ರಾವಣ ಇಂದು ಮರಣಶಯ್ಯೆಯಲ್ಲಿ ದಿನವೆಣಿಸುತ್ತಿದ್ದಾನೆ ಎಂದು ತಿಳಿದಾಗ
ಮನಸ್ಸಿಗೆ ಬಹಳ ಖೇದವಾಗುತ್ತದೆ. ಪಕಳಕುಂಜರ ಅಂತರಂಗದ ಮಾತನ್ನು ಉದಯವಾಣಿಯಲ್ಲಿ ಓದಿದಾಗ ಎಂಥವರಿಗೂ ಮನಕಲಕುತ್ತದೆ .

ಚಿಕ್ಕವನಿದ್ದಾಗಲೇ ಪಕಳಕುಂಜರ ರಾವಣ, ಮೈರಾವಣ , ರುದ್ರಭೀಮ ,ಅಜಮುಖಿ, ಶೂರ್ಪನಖಿ, ಕುಕ್ಕಿತ್ತಾಯ , ಶು೦ಭಾಸುರ ,ಹಿಡಿಂಬ ಮುಂತಾದ ಬಣ್ಣದ ವೇಷಗಳನ್ನು ಎವೆಯಿಕ್ಕದೆ ನೋಡುತ್ತಿದ್ದವರಲ್ಲಿ ನಾನೂ ಒಬ್ಬ. ಶಿಸ್ತುಧ್ಧವಾದ ಕುಣಿತ, ತೆರೆಪೊರಪ್ಪಾಟು, ಚುಟ್ಟಿ ಇಡುವ ಕ್ರಮಗಳಿಗೆ ಹೆಸರಾದ ಕೃಷ್ಣ ನಾಯ್ಕರು ಅತೀವ ಶ್ರಧ್ಧೆಯಿಂದ ಪಾತ್ರ ನಿರ್ವಹಣೆ ಮಾಡುತ್ತಿದ್ದರು.
ಅದುವರೆಗೆ ಬಣ್ಣದ ಕುಟ್ಯಪ್ಪು , ಬಣ್ಣದ ಮಾಲಿಂಗ, ಚಂದ್ರಗಿರಿ ಅಂಬು , ತ್ರಿವಿಕ್ರಮ ಶೆಣೈ ಮುಂತಾದ ದಿಗ್ಗಜರು ತಮ್ಮ ಬಣ್ಣದ ವೇಷದ ಭೀಕರತೆಗೆ ಹೆಸರಾದರೆ ಪಕಳಕುಂಜ ಕೃಷ್ಣ ನಾಯ್ಕರು ಬಣ್ಣದ ವೇಷಕ್ಕೆ "ಲಾಲಿತ್ಯವನ್ನು" ನೀಡಿ ರಂಗದಲ್ಲಿ ಮೆರೆಸಿದವರು. ಅವರ ಕತ್ತರಿ ಕುಣಿತ ನೋಡುವುದೇ ಕಣ್ಣಿಗೆ ಹಬ್ಬ.
ಪಕಳಕುಂಜರ ದುಶ್ಯಾಸನ ವಧೆಯ ದುಶ್ಯಾಸನ ವೇಷದ ಪ್ರವೇಶವನ್ನು ಕೆಳಗಿನ ಕೊಂಡಿಯಲ್ಲಿ ಕಾಣಬಹುದು. (ರುದ್ರ ಭೀಮನ ಪಾತ್ರದಲ್ಲಿ ಬಣ್ಣದ ಮಾಲಿಂಗ .)
http://www.youtube.com/watch?v=aDjpL_UslZk

ಕಾಲನ ಹೊಡೆತಕ್ಕೆ ಸಿಕ್ಕು ಜರ್ಜರಿತರಾಗಿ ಜೀವಂತ ದಂತಕತೆಯಾಗಿರುವ ಇವರಿಗೆ ಸಹಾಯಹಸ್ತ ನೀಡಬೇಕಾದ್ದು ಯಕ್ಷಪ್ರೀಮಿಗಳೆಲ್ಲರ ಕರ್ತವ್ಯ .Friday, August 1, 2008

ಮೌಲ್ಯಮಾಪನ ......

ಇಂಜಿನಿಯರಿಂಗ್ ವಿದ್ಯಾರ್ಥಿಗಳ ಚತುರ್ಮಾನ ಮಾಸಿಕ ಪರೀಕ್ಷೆಯ ಮೌಲ್ಯಮಾಪನ ಮಾಡಲು ಗುಲ್ಬರ್ಗ ದ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಮೌಲ್ಯಮಾಪನ ಕೇಂದ್ರಕ್ಕೆ ಹೋದಾಗ ನಮ್ಮ ತಂಡದಲ್ಲಿ ಇದ್ದದ್ದು ೪ ಜನ. ನಾವು ಉತ್ತರ ಪತ್ರಿಕೆಯ ಪುಟಗಳನ್ನು ತಿರುಗಿಸುತ್ತಿದ್ದಂತೆ ಸಿಕ್ಕ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ಬರೆಯಲೇ ಬೇಡವೇ ? ಎಂಬ ಶಂಕೆಯೊಂದಿಗೆ ಬರೆಯುತ್ತಿರುವೆ.
ಉತ್ತರ ಪತ್ರಿಕೆಯ ಕೊನೆಯಲ್ಲಿ ವಿದ್ಯಾರ್ಥಿಗಳ ನಾನಾ ಬೇಡಿಕೆಗಳು ಇಂತಿವೆ ..
ತಾನು ಇಂಟರ್ನಲ್ ಮಾರ್ಕ್ಸ್ ೧೫ಕ್ಕಿ೦ತ ಕಡಿಮೆ ಹೊಂದಿದ್ದಲ್ಲಿ ಉತ್ತರ ಪತ್ರಿಕೆಯ ಕೊನೆಯಲ್ಲಿ ಸಿಗುವ ಸಾಮಾನ್ಯ ಸಮೀಕರಣ
X+12=50
(ವಿದ್ಯಾರ್ಥಿಯು ಉತ್ತಿರ್ಣನಾಗಬೇಕಾದರೆ ಕನಿಷ್ಠ ೧೨೫ಕ್ಕೆ ೫೦ ಅಂಕಗಳು ಪಡೆಯಲೇಬೇಕು . ಮೇಲಿನ ಸಮೀಕರಣದ ಅರ್ಥ ನೀವು ಮೌಲ್ಯ ಮಾಪಕರಾಗಿದ್ದರೆ X ನೀವು ನೀಡಬೇಕೆಂದು ವಿದ್ಯಾರ್ಥಿ ಅಪೇಕ್ಷಿಸುವ ಅಂಕ !! )

ಇನ್ನು ಕೆಲವು ವಿವರಣೆಗಳು ಹೀಗಿವೆ .

dear sir/Madam
this is my 4th attempt. kindly pass me in this subject. if i loose this subject i am going to detain in this year. so please pass me. please............

ಇನ್ನು ಕೆಲವು ಮನ ಕಲಕುವಂಥ ವಾಕ್ಯಗಳು ..

dear sir
as my father expired last month i couldnot able to concentrate to this subject kindly pass me please.
ಈ ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ನೋಡಿದಾಗ ಯಾವರೀತಿ ಅಂಕ ನೀಡಿದರೂ ೧೦೦ಕ್ಕೆ ಕೇವಲ ೩೩ ಬರುತ್ತಿತ್ತು . ಕನಿಷ್ಠ ೩೫ ಸಿಗಲೇ ಬೇಕು . ಈಗ "ಏನ ಮಾಡುವುದಿನ್ನು ಈ ಹುಡುಗ ಬರೆದಿಹನು...... " ಎನ್ನುವ ಸರದಿ ನನ್ನದಾಗಿತ್ತು!! ತಂದೆಯ ಅವಸಾನದ ನೋವನ್ನು ನಾನು ಬಲ್ಲೆ. ಹಾಗೆಂದು ೩೩ಕ್ಕಿನ್ತ ಹೆಚ್ಚಿನ ಅಂಕ ನೀಡಲು ಉತ್ತರ ಪತ್ರಿಕೆಯಲ್ಲಿ ಅವಕಾಶವಿಲ್ಲ ! ವಿಚಿತ್ರ ಸಂಕಷ್ಟ ಇದಲ್ಲವೇ ?

ಇನ್ನೊಂದು ವಿದ್ಯಾರ್ಥಿಯ ವಾಕ್ಯ ನಿಜಕ್ಕೂ ಮೊಜೆನಿಸುತ್ತದೆ ನೋಡಿ

dear sir
please think me as your own daughter and pass me. i struggled a lot but i couldn't recall the concepts. please help me ......
ಅರರೆ ನನಗಿನ್ನೂ ಮದುವೆನೇ ಆಗಿಲ್ಲ ! ಇನ್ನಿವಳು ಹೇಗೆ ಮಗಳಾದಾಳು!

ಇನ್ನು ಅನೇಕ ಮೋಜಿನ ವಾಕ್ಯಗಳು ಮೌಲ್ಯ ಮಾಪನ ಮಾಡುವಾಗ ಬರುವ ಏಕತಾನತೆಯನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗುತ್ತದೆ .
ಈ ವಿದ್ಯಾರ್ಥಿಗಳು ಬರೆದ ವಾಕ್ಯಗಳನ್ನು ನೋಡಿದರೆ ಒಂದು ಮಾತಂತೂ ಸ್ಪಷ್ಟವಾಗುವುದೇನೆ೦ದರೆ ಪರೀಕ್ಷೆ ಎದುರಿಸುವ ಮಾನಸಿಕ ಸಿದ್ದತೆಯಲ್ಲಿ ಇವರೆಲ್ಲ ಸೋತಿದ್ದಾರೆ ! ಇದಕ್ಕೆ ಕಾರಣ ಹಲವಿರಬಹುದು .
ಇಂತ ಹತಾಶೆಯ ವಾಕ್ಯವನ್ನು ಬರೆಯದಂತೆ ಮಾಡುವುದು ಹೇಗೆ ? ನಿಜಕ್ಕೂ ಉಪನ್ಯಾಸಕ ಸಮುದಾಯ ಈ ಬಗ್ಗೆ ಗಂಭೀರ ಗಮನ ಹರಿಸಲೇ ಬೇಕು ... ಈ ದಾರಿಯ ಹುಡುಕಾಟದಲ್ಲಿರುವೆ..... ನಿಮಗೆ ಗೊತ್ತಿದ್ದರೆ ತಿಳಿಸುವಿರಾ?