Thursday, January 22, 2009

ಓ ನನ್ನ ನಲ್ಲೆ .......



ಗಾಬರಿಯಾಗಬೇಡಿ ಭಟ್ಟರು ಏನು ಸಡನ್ನಾಗಿ ರಸಿಕರಾಗಿಬಿಟ್ಟರು ಅಂತ ....!!!!
ನಾನು ಇಲ್ಲಿ ಹೇಳಹೊರಟಿರುವುದು ಹೊಸತಾದ ಒಂದು ಕಥಾನಕವನ್ನು .
ಆಗಷ್ಟೇ ಬಿಡುಗಡೆಯಾಗಿ ಸೂಪರ್ ಹಿಟ್ ಅನಿಸಿದ ಒಂದು ಸಿನೆಮಾವನ್ನು "ಯಕ್ಷಗಾನ" ವಾಗಿ ಪರಿವರ್ತಿಸಿದ್ದು ಖ್ಯಾತ ಪ್ರಸಂಗಕರ್ತ , ಸೂಪರ್ ಹಿಟ್ ಪ್ರಸಂಗಗಳ ಜನಕ ಈ ಕಥಾನಕವನ್ನೂ ಬರೆದು ಮುಂದಿನ ತಿರುಗಾಟಕ್ಕೆ ಸಿದ್ಧತೆ ಮಾಡಿದ್ದಾರೆ. ಅದರ ಕಥಾ ಹಂದರ ಎಲ್ಲವೂ ಸಿನೆಮಾದಿಂದ ಪ್ರೇರಣೆ ಮಾತ್ರ ! ಅದೇ ಸಿನೆಮಾದ "ಶಿರೋಗೀತೆಯನ್ನು" ವಿಶೇಷ ಆಕರ್ಷಣೆಯಾಗಿ ಖ್ಯಾತ ಭಾಗವತರು ನೃತ್ಯ ಸಂಯೋಜಿಸಿ ಆಡಿಸಲಿದ್ದಾರೆ . ಇದರ ಕಥಾನಾಯಕ ಗಿಟಾರ್ ನುಡಿಸುವುದರಲ್ಲಿ ನಿಸ್ಸೀಮ . ಬೇಟೆಯ ದೃಶ್ಯ , ಬೆಳದಿಂಗಳ ಕುಣಿತ , ಮಳೆಯಲ್ಲಿ ನಾಟ್ಯ , ಕ್ಷಣ ಕ್ಷಣಕ್ಕೂ ನಕ್ಕು ನಗಿಸಲು ನಾಲ್ಕು ಜನ ಹಾಸ್ಯಗಾರರು , ಕುತೂಹಲ ಭರಿತ ಸನ್ನಿವೇಶಗಳು ಖ್ಯಾತ ಕಲಾವಿದರ ಸಮ್ಮಿಲನದೊಂದಿಗೆ ರಂಗಕ್ಕೆ ಬರಲಿದೆ ನಿರೀಕ್ಷಿಸಿ.....



ಅದರಲ್ಲಿ ಬರುವ ಪ್ರಧಾನ ಪಾತ್ರಗಳ ವೇಷದ ಜಲಕ್ ಇಲ್ಲಿದೆ ....
ನಿಮ್ಮ ಅನಿಸಿಕೆಗಳೇನು ?



















Wednesday, January 7, 2009

ಆಧುನಿಕ 'ಶ್ರೀನಿವಾಸ ಕಲ್ಯಾಣ'

ಇತ್ತೀಚಿಗೆ ಮೇಳಗಳು ಹೆಚ್ಚಾಗಿ ಆಡುತ್ತಿರುವ ಪ್ರಸಂಗಗಳಲ್ಲಿ "ಶ್ರೀನಿವಾಸ ಕಲ್ಯಾಣ" ವು ಒಂದು . ಅಗರಿ ಶ್ರೀನಿವಾಸ ಭಾಗವತರು ರಚಿಸಿದ "ಶ್ರೀ ವೆಂಕಟೇಶ ಮಹಾತ್ಮೆ " ಪ್ರಸಂಗದ ಒಂದು ಭಾಗ ಈ ಶ್ರೀನಿವಾಸ ಕಲ್ಯಾಣ. ಸುಲಲಿತವಾದ ಸುಂದರ ಪದಗಳಿಂದ ಕೂಡಿದ ಈ ಪ್ರಸಂಗವನ್ನು ಸುರತ್ಕಲ್ ಮೇಳದವರು "ತಿರುಪತಿ ಕ್ಷೇತ್ರ ಮಹಾತ್ಮೆ " ಎಂಬ ಹೆಸರಿನಿಂದ ಆಡುತ್ತಿದ್ದು ಶೇಣಿ ಅಜ್ಜ ಈ ಪ್ರಸಂಗದ ಮಾಧವ ಭಟ್ಟ ನ ಪಾತ್ರವನ್ನು ತಮ್ಮದೇ ಅದ ಪ್ರತಿಭೆಯಿಂದ ಮೆರೆಸುತ್ತಿದ್ದರು . ಆ ಸಮಯದಲ್ಲಿ ಶಿವರಾಮ ಜೋಗಿಯವರ ಕಿರಾತ - ವೇಣೂರು ಸುಂದರ ಆಚಾರ್ಯರ ವಿಜಯ ಜೋಡಿ ಅತ್ಯಂತ ಜನಪ್ರಿಯವಾಗಿತ್ತು .



ಇತ್ತೀಚಿಗೆ ಕಟೀಲು ಮೇಳದವರು ಆಡಿದ 'ಪಂಚಕಲ್ಯಾಣ ' ಹಾಗೂ ಧರ್ಮಸ್ಥಳ ಮೇಳದವರು ಆಡಿದ 'ಶ್ರೀನಿವಾಸ ಕಲ್ಯಾಣ' ವನ್ನು ನೋಡುವ ಅವಕಾಶ ನನಗೆ ದೊರೆಯಿತು . ಕಟೀಲು ಮೇಳದ ಆಟದಲ್ಲಿ 'ಅನಾಮಿಕ' ವೇಷಧಾರಿಗಳು (ನನಗೆ ಕಲಾವಿದರ ಹೆಸರು ತಿಳಿದಿಲ್ಲ ) ಕಿರಾತನ -ಪದ್ಮಾವತಿ ಪಾತ್ರಗಳನ್ನು ನಿರ್ವಹಿಸಿದ್ದು ಸಭ್ಯ ಅಭಿನಯದಿಂದ ಮನಮುಟ್ಟುವಲ್ಲಿ ಯಶಸ್ವಿಯಾಯಿತು .



ಧರ್ಮಸ್ಥಳ ಮೇಳದ ಪ್ರಸಿದ್ಧ ಪುಂಡು ವೇಷಧಾರಿಯವರ ಕಿರಾತನ ಅಸಭ್ಯ ವರ್ತನೆಯನ್ನು ನೋಡಿದಾಗ ನಾನು ಧರ್ಮಸ್ಥಳ ಮೇಳದ ಆಟ ನೋಡುತ್ತಿದ್ದೇನೆಯೇ ? ಎಂಬ ಸಂದೇಹ ನನ್ನನ್ನು ಕಾಡಿತ್ತು!! ಸಹಕಲಾವಿದರ ಮೈ ಮುಟ್ಟಿ ಚೇಷ್ಟೆ ಮಾಡುವುದು , ಒದೆಯುವುದು, ಕುಣಿಯುವಾಗ ಅಡ್ಡಗಾಲಿಡುವುದು ಮುಂತಾದ ವರ್ತನೆ ಪ್ರೇಕ್ಷಕರಿಗೆ ಮುಜುಗರ ಕಿರಿಕಿರಿಯುಂಟು ಮಾಡುತ್ತಿತ್ತು. ಉಳಿದ ಪಾತ್ರಧಾರಿಗಳು ಎಷ್ಟೇ ಪ್ರಯತ್ನಿಸಿದರೂ ಪ್ರಧಾನ ಪಾತ್ರ ಕಿರಾತ ನಾದುದರಿಂದ ಒಟ್ಟು ಪ್ರದರ್ಶನ ಮನಮುಟ್ಟುವಲ್ಲಿ ವಿಫಲವಾಯಿತು.


ಈ ಎರಡೂ ಮೇಳದ ಆಟವನ್ನು ಬೆಳಗ್ಗಿನ ವರೆಗೆ ನೋಡಿದ ಬಳಿಕ ನನಗೆ ಅನಿಸಿದ್ದು 'ಶ್ರೀನಿವಾಸ ಕಲ್ಯಾಣ ' ಕೊನೆಯ ಕಥಾಭಾಗವಾಗಿ ಆಡಲು ಸೂಕ್ತವಾದ ಪ್ರಸಂಗವಲ್ಲ ! ಬೆಳಗ್ಗಿನ ಜಾವ ೪ ಗಂಟೆಯ ಬಳಿಕ ಬರೀ ಮದ್ದಳೆಯ ಪದಗಳನ್ನು ಕೇಳಲು ಹಿತವಾಗುವುದಿಲ್ಲ. ಈ ಪ್ರಸಂಗದಲ್ಲಿ ಕೊನೆಯ ಭಾಗಕ್ಕೆ ಚೆಂಡೆಯ ಪದ್ಯಗಳೇ ಇಲ್ಲ. ಒಟ್ಟಿನಲ್ಲಿ ಈ ಪ್ರಸಂಗವನ್ನು ಕೊನೆಗೆ ಆಡಿದಲ್ಲಿ ಆಟವು ನೀರಸವಾಗಿ ಕೊನೆಗೊಳ್ಳುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ .