Monday, March 17, 2008

ಸಂಪಾಜೆ........

ಸಂಪಾಜೆ .... ಎಂದರೆ ಯಕ್ಷ ಪ್ರಿಯರಿಗೆ ಮೊದಲು ನೆನಪಾಗುವುದೇ ಶೀನಪ್ಪ ರೈ ಯವರು !

ಯಕ್ಷಗಾನ ಅಭಿಮಾನಿಗಳ ಹೃದಯದಲ್ಲಿ ವಿಶಿಷ್ಠ ಸ್ಥಾನ ಪಡೆದ ಸಜ್ಜನ ಕಲಾವಿದ ಶೀನಪ್ಪಣ್ಣ. ಪ್ರತಿಯೊ೦ದು ಪಾತ್ರದ ಬಗ್ಗೆ ಸ್ಪಷ್ಟ ಕಲ್ಪನೆಯುಳ್ಳ ಇವರ ವೇಷವನ್ನು ರಂಗದಲ್ಲಿ ನೋಡುವುದೇ ಚಂದ. ಮಾಡುವ ಕೆಲಸದ ಬಗ್ಗೆ ಅವರಿಗಿರುವ ಪ್ರೀತಿ ಅನನ್ಯ . ಶಿಸ್ತುಬದ್ಧ ಕುಣಿತ , ಅಭಿನಯ, ಸಮಯೋಚಿತ ಮಾತು ,ರ೦ಗವನ್ನು ತುಂಬುವ ಕ್ರಮ ಹಾಗೂ ದಣಿವರಿಯದ ಉತ್ಸಾಹದಿಂದ ಯಕ್ಷಗಾನ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದವರು ಇವರು . ಪ್ರೇಕ್ಷರ ಸಂಖ್ಯೆಗನುಗುಣವಾಗಿ " ಪಾತ್ರ " ನಿರ್ವಹಣೆ ಮಾಡುವ ಎಷ್ಟೋ ಕಲಾವಿದರನ್ನು ನಾವು ಆಗಾಗ ಕಾಣುತ್ತೇವೆ . ಆದರೆ ಶೀನಪ್ಪಣ್ಣ ಇದಕ್ಕೆ ಅಪವಾದ. ಜನರಿರಲಿ ಇಲ್ಲದೆ ಇರಲಿ ಇವರ ಪಾತ್ರ ರಂಗದಲ್ಲಿ ಒಂದೇ ತೆರನಾಗಿ ವಿಜ್ರಂಬಿಸುತ್ತಿರುತ್ತದೆ. ಇವರ ಹಿರಣ್ಯಾಕ್ಷ , ಇಂಧ್ರಜಿತು, ರಕ್ತಬೀಜ, ಜಾಂಬವಂತ, ಅರ್ಜುನ , ಕಾರ್ತವೀರ್ಯ, ಶಿಶುಪಾಲ ಮೊದಲಾದ ಪಾತ್ರಗಳು ಇವರಿಗೆ ಪ್ರಸಿದ್ದಿಯನ್ನು ತಂದು ಕೊಟ್ಟಿದೆ .ಏನ ಮಾಡುವದಿನ್ನು .......

ಇಂಧ್ರಜಿತು
ಶಿಶುಪಾಲ (ಏಣಿ ನಾಮ : ಒಂದು ವಿಶಿಷ್ಠ ಮುಖವರ್ಣಿಕೆ)
ಮುಖವರ್ಣಿಕೆ ಕಮ್ಮಟಗಳಿಗೆ ಇವರು ಅತೀ ಅವಶ್ಯ ಸ೦ಪನ್ಮೂಲ ವ್ಯಕ್ತಿ. ಇಳಿ ವಯಸ್ಸಿನಲ್ಲೂ ಇವರ ದಣಿವರಿಯದ ಅದ್ಭುತ ಅಭಿನಯ ಎಲ್ಲರನ್ನು ಬೆರಗುಗೊಳಿಸುವ೦ತದ್ದು !
ಸದಾ ಸ್ನೇಹಶೀಲರಾಗಿರುವ ಇವರು ಇನ್ನಷ್ಟು ಕಾಲ ಯಕ್ಷರಸಿಕರ ಮನಸ್ಸನ್ನು ರಂಜಿಸಲಿ ಎಂದು ತುಂಬು ಮನಸ್ಸಿನಿಂದ ಹಾರೈಸುತ್ತೇವೆ.
***

Wednesday, March 12, 2008

ಸಿನೆಮಾ ಹಾಡುಗಳ ಕುರಿತು ....

ಚಿಕ್ಕವನಿದ್ದಾಗ ಆಕಾಶವಾಣಿ ಮ೦ಗಳೂರು ಕೇಂದ್ರದಿಂದ ಪ್ರಸಾರವಾಗುತ್ತಿದ್ದ ಸಾಕ್ಷಾತ್ಕಾರ ಸಿನೆಮಾದ ಹಾಡು ಹೀಗಿತ್ತು ...

ಒಲವೆ ಜೀವನ ಸಾಕ್ಷಾತ್ಕಾರ
ಒಲವೆ ಮರೆಯದ ಮಮಕಾರ
ಒಲವೆ ಮರೆಯದ ಮಮಕಾರ . ಪಲ್ಲವಿ .

ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲು
ದುಂಬಿಯ ಹಾಡಿನ ಝೇಂಕಾರದಲ್ಲು
ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲು
ತುಂಬಿದೆ ಒಲವಿನ ಸಾಕ್ಷಾತ್ಕಾರ . ಒಲವೆ ...

ವಸಂತ ಕೋಗಿಲೆ ಪಂಚ ಮನೋಹರ
ಗಾಂಧಾರ ಭಾಷೆಯ ಹಕ್ಕಿಗಳಿಂಚರ
ಈ ಮಲೆನಾಡಿನ ಭೂರಮ್ಯ ಶೃಂಗಾರ
ಚೆಲುವಿನ ಒಲವಿನ ಸಾಕ್ಷಾತ್ಕಾರ . ಒಲವೆ ...

ಒಲವಿನ ಪೂಜೆಗೆ ಒಲವೆ ಮಂದಾರ
ಒಲವೆ ಬದುಕಿನ ಬಂಗಾರ
ಒಲವಿನ ನೆನಪೆ ಹೃದಯಕೆ ಮಧುರ
ಒಲವೆ ದೈವದ ಸಾಕ್ಷಾತ್ಕಾರ . ಒಲವೆ ....

ಮೊನ್ನೆ ಬೆಂಗಳೂರು ನಗರದ ಚಾಟ್ ಸೆಂಟರ್ ನಲ್ಲಿ ಕೇಳಿ ಬರುತ್ತಿದ್ದ ಹಾಡು...

ಹೊಡಿ ಮಗ ಹೊಡಿ ಮಗ ಹೊಡಿ ಮಗ ಬಿಡಬೇಡ ಅವನಾ ....

ಒಮ್ಮೆಲೇ ನನಗನಿಸಿದ್ದು " ಅಯ್ಯೋ ಎಂತ ಸಾಂಸ್ಕೃತಿಕ ದಿವಾಳಿತನ ನಮ್ಮವರನ್ನು ಆವರಿಸಿದೆ " ಎಂದು !

ಪ್ರಾಥಮಿಕ ಶಾಲೆಗೆ ಹೋಗುವ ಬಾಲಕನೋರ್ವ " ಈ ಪ್ರೀತಿ ಒಂಥರಾ ...... " ಹಾಡನ್ನು ಗುನುಗುನಿಸುತ್ತಾ ಹೋಗುತ್ತಿದ್ದರೆ ನಾಲ್ಕನೆ ತರಗತಿಯ ಬಾಲೆಯೊಬ್ಬಳು " ಅನಿಸುತಿದೆ ಯಾಕೊ ಇಂದು ನೀನೀನೆ ನನ್ನವನೆಂದು ...." ಎಂದು ತನ್ಮಯವಾಗಿ ಹಾಡುತ್ತಿದ್ದಳು !

ಹಾಗಾದರೆ ಹಣ ಗಳಿಕೆಯೊಂದೇ ಸಿನಿಮಾದವರ ಧ್ಯೇಯವೇ ? ಇವರಿಗೆ ಸಾಮಾಜಿಕ ಕಳಕಳಿ ಸ್ವಲ್ಪವೂ ಇಲ್ಲವೇ ?? ಮಕ್ಕಳು ತಮ್ಮ ಪರಿಸರಕ್ಕನುಗುಣವಾಗಿ ಬೆಳೆಯುತ್ತಾರೆ . ಬೆಳೆಯುವ ಸಿರಿ ಮೊಳಕೆಗೆ ಈ ರೀತಿ "ರಾಸಾಯನಿಕ ಗೊಬ್ಬರ"ವನ್ನು ಹಾಕುವುದು ಯಾಕೆ ? ಯಾರಿಗೆ ಇದರಿಂದ ಏನು ಲಾಭ??

ನೀವು ಈ ಬಗ್ಗೆ ಯೋಚಿಸಿದ್ದಿರಾ ????

Sunday, March 9, 2008

ಅಡ್ಡ ಹೆಸರುಗಳು....

ಹೆತ್ತವರು ಇಟ್ಟ ಹೆಸರು ಇರುವ ತನಕ ; ಮಕ್ಕಳು ಇಡುವ ಹೆಸರು ಕೊನೆ ತನಕ ! ಎಂಬ ನಿಜಾಂಶ ನಮ್ಮ ಅನುಭವಕ್ಕೆ ಬಂದ ವಿಷಯ. ಹಾಗೆಂದು ನಾವೂ ವಿದ್ಯಾರ್ಥಿ ಜೀವನದಲ್ಲಿ ನಮ್ಮ ಗುರುಗಳನ್ನು ಬಿಟ್ಟಿಲ್ಲ ! ಯಾಕೆಂದರೆ ಅದೊಂದು ಪರಂಪರೆಯನ್ನು ಬಿಡಲು ಹೇಗೆ ಸಾಧ್ಯ ? ವಿದ್ಯಾರ್ಥಿ ಜೀವನದಲ್ಲಿ ಅದು ನಮ್ಮ ಆದ್ಯ ಅಭಿರುಚಿಗಳಲ್ಲಿ ಒಂದಾಗಿತ್ತು !

ಸುಳ್ಯದಲ್ಲಿ ತಾಂತ್ರಿಕ ಪದವಿ ಕಲಿಯುತ್ತಿದ್ದಾಗ, ಗಣಿತದ ವಿಭಾಗ ಮುಖ್ಯಸ್ಥರು ಪಾಠದ ನಡು ನಡುವೆ ಗಂಟಲು ಸರಿಪಡಿಸಿ ಕೊಳ್ಳುತ್ತಿದ್ದ ಕಾರಣ ಅವರಿಗೆ "ತುಪ್ಪ" ಎಂಬ ಅಡ್ಡ ಹೆಸರನ್ನು ಪ್ರೀತಿಯಿಂದ ಇಟ್ಟಿದ್ದೆವು !


ರಸಾಯನ ಶಾಸ್ತ್ರದ ಉಪನ್ಯಾಸಕರೋರ್ವರು ತರಗತಿಯುದ್ದಕ್ಕೂ "If suppose the case on that time" ಎಂಬ ವಾಕ್ಯವನ್ನು ನೂರಕ್ಕೆ ಕಡಿಮೆ ಇಲ್ಲದಂತೆ ಒಂದು ಗಂಟೆಯಲ್ಲಿ ಹೇಳುತ್ತಿದ್ದುದರಿಂದ ಅದೇ ಹೆಸರು ಹೆಸರು ಸೂಕ್ತವೆನಿಸಿತು !!

ಮ೦ಗಳೂರು ವಿ.ವಿ.ಯಲ್ಲಿ ತಾಂತ್ರಿಕ ಪದವಿಗೆ "Technical ಇಂಗ್ಲಿಷ್" ಎಂಬ ವಿಷಯವು ಎರಡನೆ ಚತುರ್ಮಾನ ಮಾಸಿಕದಲ್ಲಿದ್ದು ಅದನ್ನು ಪಾಠದ ಮಾಡುತ್ತಿದ್ದ ಶ್ರೀಕೃಷ್ಣಾನಂದ ಎಂಬವರು ನಮ್ಮ ಬಾಯಿಯಲ್ಲಿ "ಟೆಕ್ನಾನಂದ " ಆದರೆ ಆಪೀಸ್ ಸೂಪರಿ೦ಡೆ೦ಟ ನ್ನು ಹಾಯ್ ಬೆಂಗಳೂರ್ ಪತ್ರಿಕೆಯ ಸಂಪಾದಕರು "ಸ್ವಯಂ ಗೋಷಿತ ಜಾಣೆ " ಎಂದು ಕರೆದು ನಮ್ಮ ಕೆಲಸವನ್ನು ಕಡಿಮೆ ಮಾಡಿದ್ದಾರೆ !

ರಸಾಯನ ಶಾಸ್ತ್ರದ ಮುಖ್ಯಸ್ಥರು "if ದಿ" ಎಂದು ಪದೇ ಪದೇ ಹೇಳುತ್ತಿದ್ದು ಅದೇ ಹೆಸರು ಅವರಿಗೊಪ್ಪುತ್ತಿತ್ತು !!

ಇನ್ನೂ ಹಲವು ಹೆಸರು ಆಯಾ ವಿಬಾಗದ ಮಕ್ಕಳ ಪೇಟೆ೦ಟ ಆಗಿದ್ದು ನಾನಿಲ್ಲಿ ಬರೆಯಲಾಗುತ್ತಿಲ್ಲ.

ಈಗ ನಾನೂ ವೃತ್ತಿಯಲ್ಲಿ ಉಪನ್ಯಾಸಕ . ನನ್ನ ಶಿಷ್ಯರೂ ನನ್ನ ಪರಂಪರೆಯನ್ನು ಮುಂದುವರಿಸಿದ್ದರೆ???
ನಿಜಕ್ಕೂ ಭಯವಾಗುತ್ತಿದೆ.......

Saturday, March 8, 2008

ಒಂದು ಗುಟುಕು ...

ವೇತನ
ತಿಂಗಳಿಗೊಮ್ಮೆ ಮಿಂಚಿ ಮಾಯವಾಗುವ
ಚೇತನ!

***

ಬೆಗುಡ (ದಕ್ಷಿಣ ಕನ್ನಡ ಹವ್ಯಕರ ಬೈಗುಳದ ಒಂದು ಪದ) = ಪೆದ್ದ , ಮೂರ್ಖ

***
ನಮ ಒಯಿತ್ತ್ ನಾಡೆಗ್ ಎರು ಬತ್ತಿಜ್ಜಿಂಡ ಎರು ಒಯಿತ್ತ್ ನಾಡೆಗ್ ನಮ ಪೋವೋಡು - ತುಳು ಗಾದೆ
(ನಾವು ಎಳೆದಲ್ಲಿಗೆ ಎತ್ತು ಬರದಿದ್ದರೆ ಎತ್ತು ಎಳೆದಲ್ಲಿಗೆ ನಾವು ಹೋಗಬೇಕು )
***

Thursday, March 6, 2008

ಏಕ ಶ್ಲೋಕೀ ರಾಮಾಯಣ ಮತ್ತು ಬಾಗವತ ...

ಚಿಕ್ಕವನಿದ್ದಾಗ ಅಮ್ಮ ಹೇಳಿ ಕೊಟ್ಟ ಏಕ ಶ್ಲೋಕೀ ರಾಮಾಯಣ ಮತ್ತು ಭಾಗವತ ಹೀಗಿದೆ...ರಾಮಾಯಣ

ಆದೌ ರಾಮ ತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ

ವೈದೆಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ

ವಾಲೀ ನಿಗ್ರಹಣಂ ಸಮುದ್ರ ತರಣಂ ಲಂಕಾಪುರೀ ದಾಹನಂ

ಪಶ್ಚಾದ್ರಾವಣ ಕುಂಭಕರ್ಣ ಹನನಂ ಏತದ್ದಿ ರಾಮಾಯಣಂ ೧


ಭಾಗವತ

ಆದೌ ದೇವಕಿ ದೇವಿ ಗರ್ಭ ಜನನಂ ಗೋಪೀ ಗೃಹೇ ವರ್ಧನ೦

ಮಾಯಾ ಪೂತನಿ ಜೀವಿತಾಪಹಾರಣಂ ಗೋವರ್ಧನೋದ್ಧಾರಣಂ

ಕಂಸ ಛೇದನ ಕೌರವಾದಿ ಮಥನ೦ ಕುಂತೀ ಸುತ: ಪಾಲನಂ

ಏತದ್ಭಾಗವತ ಪುರಾಣ ಪುಣ್ಯ ಕಥಿತಂ ಶ್ರೀಕೃಷ್ಣ ಲೀಲಾಮೃತಂ ೧
ವೇದಮೂರ್ತಿ ಸತ್ಯೇಶ್ವರ ಭಟ್ಟರು....ಪೆರಡಾಲ ಉದನೇಶ್ವರ ದೇವಸ್ಥಾನದಲ್ಲಿ ವಸಂತ ವೇದ ಪಾಠ ಶಾಲೆಯನ್ನು ಶ್ರೀ ನವಕಾನ ಶಂಕರನಾರಾಯಣ ಭಟ್ಟರು ಹುಟ್ಟು ಹಾಕಿ ಇಂದಿಗೆ ೫ ದಶಕಗಳೇ ಸಂದವು . ಉಪನೀತರಾದ ಮಕ್ಕಳನ್ನು ವೇದ ಪಾಠ ಕಲಿಯಲು ಇಲ್ಲಿಗೆ ಕಳಿಸುವುದು ಹವ್ಯಕ ಸಮುದಾಯದವರ ಪರಿಪಾಠ. ಇಲ್ಲಿನ ಮುಖ್ಯ ಗುರುಗಳೇ ವೇದಮೂರ್ತಿ ಶ್ರೀ ಸತ್ಯೇಶ್ವರ ಭಟ್ಟರು. ಕಿಳಿಂಗಾರು ವೈದಿಕ ಮನೆತನದಲ್ಲಿ ಜನಿಸಿದ ಇವರು ಸರಳ, ಸಜ್ಜನ ಹಾಗೂ ಸಂಪ್ರದಾಯಸ್ಥ ವೈದಿಕರು.ಭಟ್ಟರು ಹಲವು ಮಂದಿ ಶಿಷ್ಯ ವರ್ಗಕ್ಕೆ ಆಪ್ತರೂ ಹೌದು. ಕಳೆದ ಹಲವಾರು ವರ್ಷಗಳಿಂದ ಗುರುಗಳಾಗಿ ಸೇವೆ ಸಲ್ಲಿಸುತ್ತಾಬಂದಿರುವ ಇವರು ವೇದಾಭ್ಯಾಸದ ಪ್ರಾಥಮಿಕ ಪಾಠಗಳನ್ನು ಕ್ರಮಬದ್ಧವಾಗಿ ಕಲಿಸುವುದರಲ್ಲಿ ನಿಷ್ಣಾತರು.

ಪೆರಡಾಲ ಉದನೇಶ್ವರ ದೇವರ ಸನ್ನಿಧಿ ಎಂಬುದು ನಿಸರ್ಗ ಸೊಬಗಿನ ತಾಣ . ಇಲ್ಲಿ ವೇದ ಪಾಠ ಕಲಿಯುವುದೆಂದರೆ ಎಲ್ಲ ಮಕ್ಕಳಿಗೂ ಎಲ್ಲಿಲ್ಲದ ಉತ್ಸಾಹ . ಶ್ರೀ ಸತ್ಯೇಶ್ವರ ಭಟ್ಟರು ಒಂದನೇ ತರಗತಿಗೆ ಸಂಧ್ಯಾವಂದನೆ , ಸೂಕ್ತಗಳು, ಅಗ್ನಿ ಕಾರ್ಯ , ಮುಂತಾದ ಪಾಠಗಳನ್ನು ಸ್ವರಯುಕ್ತವಾಗಿ ಕಲಿಸುತ್ತಾರೆ. ಮಂತ್ರಗಳನ್ನು ಹೇಳುವಾಗ ತಪ್ಪಿದರೆ " ಸರಿ ಹೇಳೋ˘ ಮಜಡ" ಎ೦ದು ಗದರಿಸಿ ಮಕ್ಕಳನ್ನು ಸರಿ ದಾರಿಗೆ ತರುವ ಕ್ರಮ ನಿಜಕ್ಕೂ ಅನನ್ಯ .


ಪೆರಡಾಲದಲ್ಲಿ ವೇದ ಪಾಠ ಕಲಿತ ಎಲ್ಲ ಮಕ್ಕಳ ಮನಸ್ಸಿನ ಮೇಲೆ ಗಾಢವಾದ ಪ್ರಭಾವ ಬೀರಿದವರೆಂದರೆ ಶ್ರೀ ಸತ್ಯೇಶ್ವರ ಭಟ್ಟರು . ಅವರ ಕಲಿಸುವ ಕ್ರಮವನ್ನು ಮಕ್ಕಳು ಅನುಕರಿಸುವುದು ನೋಡಲು ತು೦ಬಾ ಮಜವಾಗಿರುತ್ತದೆ !
ಸದಾ ಸ್ಪೂರ್ತಿಯ ಸೆಲೆಯಾಗಿರುವ ಭಟ್ಟರು ಸದ್ಯ ಕು೦ಬಳೆ ಸಮೀಪದ ಬೇಳದಲ್ಲಿ ವಾಸಿಸುತ್ತಿದ್ದು ಎಲ್ಲರಿಗೂ ಮಾರ್ಗದರ್ಶಕರಾಗಿದ್ದರೆ.

ಶಿಷ್ಯರೊಬ್ಬರ ಮನೆಯಲ್ಲಿ ನಾಂದಿ ಕಾರ್ಯಕ್ರಮ ಮಾಡಿಸುತ್ತಿರುವುದು ...

Monday, March 3, 2008

ಚೂರ್ಣಿಕೆ ......

ಬ್ರಾಹ್ಮಣರಿಗೆ ಭೋಜನ ವಿಧಿ ಕಡ್ಡಾಯ . ಬ್ರಾಹ್ಮಣರು ಉಣ್ಣುವ ಮೊದಲು ದೇಹದಲ್ಲಿರುವ ಪಂಚಾಗ್ನಿಗಳಿಗೆ ಆಹುತಿ ನೀಡುವುದು ಪದ್ಧತಿ. ಬಾಳೆ ಎಲೆಯಲ್ಲಿ ಬಡಿಸಿದ ಅನ್ನಕ್ಕೆ ಗಾಯತ್ರಿಯಿಂದ ಪ್ರೋಕ್ಷಣೆ ಮಾಡಿ ಪರಿಷಿ೦ಚನೆ ಗೈದ ಮೇಲೆ ಕೈಯ್ಯಲ್ಲಿ ನೀರನ್ನು ತುಂಬಿ ಅತೀ ..... ಮಂತ್ರವನ್ನುಚ್ಚರಿಸಿ ಆ ನೀರನ್ನು ಕುಡಿದ ಬಳಿಕ ಪ್ರಾಣ , ಅಪಾನ , ವ್ಯಾನ , ಉದಾನ ಮತ್ತು ಸಮಾನಗಳೆಂಬ ವಚನ ಆಹುತಿಗಳನ್ನು ಮಾಡಿ ಬಳಿಕ ಭೋಜನ ಸ್ವೀಕರಿಸುತ್ತಾರೆ . ಆದುದರಿಂದ ಬ್ರಾಹ್ಮಣ ಭೋಜನವೆಂಬುದು ದೇವ ಕಾರ್ಯವೆನಿಸಿಕೊಂಡಿದ್ದು ಪುಣ್ಯ ಕ್ಷೇತ್ರ ಗಳಲ್ಲಿ " ಮಡೆ ಸ್ನಾನ " ವೆಂಬ ಸೇವೆಗೆ ಅವಕಾಶವಿರುತ್ತದೆ. (ಅಂದರೆ ಬ್ರಾಹ್ಮಣ ಭೋಜನದ ಬಳಿಕ ಅವರುಂಡ ಬಾಳೆಯ ಮೇಲೆ ಉರುಳು ಸೇವೆ ಮಾಡಿ ಬಳಿಕ ಸ್ನಾನ ಮಾಡಿ ದೇವರ ದರ್ಶನ ಮಾಡುವುದು.)

ಸಾಮಾನ್ಯವಾಗಿ ಶುಭ ಕಾರ್ಯಕ್ರಮಗಳಲ್ಲಿ ಊಟ ಮಾಡುವಾಗ ದೇವರ ಸ್ಮರಣೆ ಮಾಡಲು ಶ್ಲೋಕಗಳನ್ನು ಹೇಳುವ ಪರಿಪಾಠ ಹಿರಿಯರಿಂದ ಬೆಳೆದು ಬಂದ ಸಂಪ್ರದಾಯ . ಶ್ಲೋಕವೊಂದನ್ನು ಊಟದ ವೇಳೆ ಹೇಳಿ ಕೊನೆಗೆ " ಭೋಜನ ಕಾಲೇ ನಮ: ಪಾರ್ವತಿ ಪತೆ ಹರ ಹರಾ " ಎಂದು ಹೇಳಿದಾಗ ಊಟದ ಸಾಲಿನಲ್ಲಿ ಕುಳಿತವರು " ಮಹಾದೇವ " ಎಂದುಪ್ರತಿ ವಚನ ನುಡಿಯುತ್ತಾರೆ . ಈ ಶ್ಲೋಕವನ್ನು ವಾಡಿಕೆಯಲ್ಲಿ " ಚೂರ್ಣಿಕೆ" ಎಂದು ಕರೆಯುತ್ತಾರೆ . ಮದುವೆ, ಉಪನಯನ ಮುಂತಾದ ಶುಭ ಸಮಾರಂಭ ಗಳಲ್ಲಿ ಸಾಮಾನ್ಯವಾಗಿ ಕೇಳ ಸಿಗುವ ಚೂರ್ಣಿಕೆಗಳೆಂದರೆ "ನಿತ್ಯಾನಂದಕರೀ ವರಾ ಭಯಕರೀ ...... " , " ಕಸ್ತೂರೀ ತಿಲಕೇ ...... " , "ವ೦ದೇ ಶಂಬ್ಹುಂ ...." ಇತ್ಯಾದಿ . " ಸುದರಿಕೆಯಲ್ಲಿ " ಪಳಗಿದ ಹಿರಿಯರು ಈ ಶ್ಲೋಕದ ಕೊನೆಯನ್ನೇ ಕಾಯುತ್ತಿದ್ದು ಒಮ್ಮೆಲೇ " ಭೋಜನ ಕಾಲೇ ನಮ: ಪಾರ್ವತಿ ಪತೆ ಹರ ಹರಾ " ಎಂದು ಉತ್ಸಾಹದಿಂದ ಘೋಷಿಸುತ್ತಾರೆ ! ಕೂಡಲೇ ಸಾಲಿನಲ್ಲಿ ಕುಳಿತವರು " ಮಹಾದೇವ " ಎಂದು ಹೇಳಿದರೆ ಉತ್ಸಾಹಿ ಯುವಕರ ದನಿ ಇನ್ನೂ ಮುಗಿಯದೆ " ಮಹಾ ದೇ......................................... ..........ವ " ಎಂದಾಗಿರುತ್ತದೆ. ಭೋಜನದ ಕೊನೆಗೆ "ಭೋಜನಾಂತೇ ಗೋವಿಂದ ನಾಮ ಸಂಕೀರ್ತನಂ " ಗೋವಿ೦ದಾನಿ ಗೋವಿಂದ " ಎಂದಾಗ "ಗೋವಿಂದ " ಎನ್ನುತ್ತ ಮೆಲೇಳುವುದು ಕ್ರಮ . ಹೀಗೆ ಭೋಜನ ಮದ್ಯೆ ಚೂರ್ಣಿಕೆ ಹೇಳುವವರ ಸ೦ಖ್ಯೆ ದಿನೇ ದಿನೇ ಕ್ಷೀಣವಾಗುತ್ತಿದೆ. ಕಾಲ ಕ್ರಮೇಣ ಯಾಂತ್ರಿಕ ಬದುಕಿನ ಒತ್ತಡದಿಂದಾಗಿ ಈ ಸಂಪ್ರದಾಯವೂ ನಶಿಸಿ ಹೋಗುವುದರಲ್ಲಿ ಅನುಮಾನವಿಲ್ಲ.

Saturday, March 1, 2008

ವಾನರರ ಹೆಂಡತಿಯರಿಗೇಕೆ ಬಾಲವಿರುವುದಿಲ್ಲ ?

ಯಕ್ಷಗಾನದಲ್ಲಿ ಪಾರ್ತಿ ಸುಬ್ಬನ " ಪಂಚವಟಿ- ವಾಲಿ ಸುಗ್ರೀವರ ಕಾಳಗ " ಬಹಳ ಪ್ರಸಿದ್ದ ಕೃತಿ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ " ಇಂದ್ರ ನಂದನ - ವಾಲಿ" , ವೀರ ಮಾರುತಿ , ಹನುಮದ್ವಿಲಾಸ , ಮೈಂದ-ದ್ವಿವಿದ ಕಾಳಗ ಮುಂತಾದ ಪ್ರಸಂಗಗಳಲ್ಲಿ ವಾನರರ ಪಾತ್ರಗಳು ಬರುತ್ತವೆ. ವಾನರ ಶ್ರೇಷ್ಠ ಹನುಮಂತನ ವೇಷವನ್ನು ಪರಂಪರೆಯ ಹನುಮಂತ ಹಾಗು " ಮಲೆ ಮಂಗ " ಎರಡು ತೆರನಾಗಿ ನಾವು ಅಗಾಗ ನೋಡುತ್ತಿರುತ್ತೇವೆ.


ಪರಂಪರೆಯ ಹನುಮಂತ
ಮಲೆ ಮಂಗ ( see also http://youtube.com/watch?v=lNqBpkF9axY )


ಯಕ್ಷಗಾನದ ವಾಲಿ ಸುಗ್ರೀವರದ್ದು ಬಣ್ಣದ ವೇಷ. ಕೇಸರಿ ಕಿರೀಟದ ಈ ಜೋಡಿ ವೇಷಗಳು ನೋಡಲು ರಮ್ಯಾದ್ಭುತವಾಗಿರುತ್ತದೆ ವಾಲಿ- ಸುಗ್ರೀವವಾಲಿ - ತಾರೆ

ಆದರೆ ವಾಲಿಯ ಪತ್ನಿ ತಾರೆಯ ವೇಷ ರಂಗದಲ್ಲಿ ಬರುವುದು ಸುಂದರ ಸ್ತ್ರೀ ವೇಷವಾಗಿ !! ಸುಗ್ರೀವನ ಮಡದಿ ರುಮೆಯ ಪಾತ್ರವೂ ಸಾಮಾನ್ಯ ಸ್ತ್ರೀ ವೇಷವೆ ! ವಾನರ ಹೆಂಡತಿಯರಿಗೆ ವಾನರರಂತೆ ಮೂತಿ ಏಕಿಲ್ಲ ?
ಬಲ್ಲಿರೇನಯ್ಯ........????
***