Thursday, November 11, 2010

ಅಪೂರ್ವ ಪ್ರಸಂಗಕರ್ತ ಕೀರ್ತಿಶೇಷ ಹಲಸಿನಹಳ್ಳಿ ಶ್ರೀನರಸಿಂಹ ಶಾಸ್ತ್ರಿ..

ಪರಮ ಋಷಿ ಮಂಡಲದ ಮಧ್ಯದಿ  ಮೆರೆವ ಯಜ್ಞೇಶ್ವರನ ಪ್ರಭೆಯಲಿ |
ಮೆರೆವ ಜಟಾಮಂಡಲದಿ ಶೋಭಿಪ ಭಾರ್ಗವೇಶ್ವರನ | ಪರಕಿಸುತಲಭಿನಮಿಸಿ ಭೀಷ್ಮನು 
ಚರಣ ಪ್ರಕ್ಷಾಳನವ ಗೈಯ್ಯುತ  ಶಿರದಿ ತೀರ್ಥವ ಧರಿಸಿ |  ಮಧುಪರ್ಕಾದಿಗಳನಿತ್ತು  
ಕರ ಪಿಡಿದು ವರರತುನಮಯ ಪೀಠದಿ ಕುಳ್ಳಿರಿಸಲು | ಗುರು ನಮೋ ಎಂದೆನುತ ಶಿರವ  ಬಾಗುತ ದೈನ್ಯದಿ ನಿಂತಿರಲು ||

ಭೀಷ್ಮ ವಿಜಯ ಪ್ರಸಂಗದಲ್ಲಿ ಭೀಷ್ಮನು ತನ್ನ ಗುರುಗಳಾದ ಪರಶುರಾಮರನ್ನು ಕುರುಕ್ಷೇತ್ರದಲ್ಲಿ ಇದಿರ್ಗೊಳ್ಳುವ ಸನ್ನಿವೇಶದ  ಈ ಪದ್ಯ ಉಭಯ ತಿಟ್ಟುಗಳಲ್ಲೂ ಪ್ರಸಿದ್ಧ . ಯಕ್ಷಗಾನ ಕಲಾಸಕ್ತರೆಲ್ಲರೂ ಸವಿದಷ್ಟು ಅದರ ರುಚಿ ಹೆಚ್ಚುತ್ತಲೇ ಹೋಗುವ ಈ ಪದ್ಯವನ್ನು ಬರೆದವರಾರಿರಬಹುದು ? ಯಾವಾಗ ಬರೆದಿರಬಹುದು ? ಎಂದು ಯಾರೊಬ್ಬರೂ ಯೋಚಿಸಲು ಹೋಗುವುದಿಲ್ಲ ! ಒಂದು ಶತಮಾನದ ಹಿಂದೆ ರಚಿತವಾದ ಈ ಪ್ರಸಂಗ ಇಂದಿಗೂ ರಂಗದಲ್ಲಿ ಯಶಸ್ವೀ ಪ್ರಯೋಗವನ್ನು ಕಾಣುತ್ತಿದೆ ಎಂದರೆ ಅಚ್ಚರಿಯಾಗುತ್ತಿದೆಯೇ ?

ಈ ಪ್ರಸಿದ್ಧ ಪ್ರಸಂಗವನ್ನು ರಚಿಸಿದವರೇ  ಕೀರ್ತಿಶೇಷ ಹಲಸಿನಹಳ್ಳಿ ಶ್ರೀ ನರಸಿಂಹ ಶಾಸ್ತ್ರಿಗಳು . ಅವರ ಕುರಿತು ವಿಶೇಷವಾದ ಅಧ್ಯಯನಗಳು ನಡೆದಂತೆ ಕಂಡು ಬರುವುದಿಲ್ಲ .ಅವರ ಪ್ರತಿಯೊಂದು ಪ್ರಸಂಗ ಕೃತಿಯ ಕೊನೆಯಲ್ಲಿ ತನ್ನ ಕುರಿತು ಹಾಗೂ ಕೃತಿ ಕೊನೆಗೊಂಡ ಸಂವತ್ಸರ , ಮಾಸ, ಪಕ್ಷ , ತಿಥಿ , ವಾರಗಳನ್ನು ಹೇಳಿಕೊಂಡಿದ್ದು ವಿಷಯ ಸಂಗ್ರಹಕ್ಕೆ ಆಕರವಾಗಿದೆ.

ಸಾರ್ವಕಾಲಿಕ ಸುಂದರ ಪದ್ಯಗಳು ಅವರ ಪ್ರಸಂಗದ ವೈಶಿಷ್ಟ್ಯ . ಪ್ರಸಂಗ ರಚಿಸಿ ಶತಮಾನವೇ ಕಳೆದರೂ ಇಂದಿಗೂ ಅವರ ಪ್ರಸಂಗಗಳು ಜೀವಂತವಾಗಿ ರಂಗ ಪ್ರಯೋಗದಲ್ಲಿದೆ .ಹಲಸಿನಹಳ್ಳಿಯವರು ಪ್ರತಿವರ್ಷ ಬೇರೆ ಬೇರೆ ಮೇಳದವರನ್ನು  ಕರೆಸಿ ತಮ್ಮ ಮನೆಯ ಮುಂದೆ ಬಯಲಾಟಗಳನ್ನು ಆಡಿಸುತ್ತಿದ್ದರಂತೆ .

ಹಲಸಿನಹಳ್ಳಿ ಶ್ರೀಯುತ ನರಸಿಂಹ ಶಾಸ್ತ್ರಿಗಳು  ತೀರ್ಥಹಳ್ಳಿ ಪರಿಸರದ ತುಂಗಾನದೀ ತೀರದ ಹಲಸಿನಹಳ್ಳಿಯವರು .ಅವರು ಅದನ್ನು ಪನಸಪುರವೆಂದು ಹೆಸರಿಸಿದ್ದಾರೆ .ಅವರ ತಂದೆಯವರ ಹೆಸರು ನಾಗೇಂದ್ರ ಶಾಸ್ತ್ರಿ (ಉರಗೇ೦ದ್ರ  ಶಾಸ್ತ್ರಿ ಎಂದು ಪದ್ಯದಲ್ಲಿ ಉಲ್ಲೇಖಿಸಿರುತ್ತಾರೆ ). ಶ್ರೀಯುತ ನರಸಿಂಹ ಶಾಸ್ತ್ರಿಗಳು ಸಂಸ್ಕೃತ  ಮತ್ತು ಕನ್ನಡ ಉಭಯ ಭಾಷಾ ವಿದ್ವಾಂಸರಾಗಿದ್ದು ಆಳವಾದ ಅಧ್ಯಯನ ಸಂಪನ್ನರೂ ಪೌರಾಣಿಕ ಜ್ಞಾನಿಗಳೂ ಆಗಿದ್ದರು .


ಸರಿಸುಮಾರು ೧೮೯೮ ರಿಂದ ೧೯೧೬ ರ ತನಕ ಅವರು ಕೃತಿ ರಚನೆ ಮಾಡಿರುತ್ತಾರೆ . ಕೆಲವು ಪ್ರಸಂಗಗಳಲ್ಲಿ ಅದು ಎಷ್ಟನೆ ಕೃತಿಯೆಂದು ಕೂಡ ಸೂಚಿಸಿರುತ್ತಾರೆ .ಅವರ ೧೩ನೆ ಕೃತಿ ರುಕ್ಮಾಂಗದ ಚರಿತ್ರೆ ಯು ಅವರು ವಿಧಿವಶರಾದ ಮೇಲೆ ೧೯೫೦ ರಲ್ಲಿ    ಶೀಗೆಹಳ್ಳಿ ಪರಮಾನ೦ದ ಮಠದ ಶ್ರೀ ಅತ್ಮಾರಾಮರೆಂಬ ಮಹಾನೀಯರಿಂದ ಶಿರಸಿಯಲ್ಲಿ ಪ್ರಕಟವಾಯಿತು.ಇವರ ಹೆಚ್ಚಿನ ಕೃತಿಗಳು ೧೯೩೧ ರಲ್ಲಿ ತೀರ್ಥ ಹಳ್ಳಿಯ ರಾಧಾಕೃಷ್ಣ ಮುದ್ರಣಾಲಯದಲ್ಲಿ ಅಚ್ಚಾಗಿ ಬೆಳಕು ಕಂಡಿವೆ. ಇವುಗಳನ್ನೆಲ್ಲ ಖ್ಯಾತ ಕನ್ನಡ ಪಂಡಿತರಾಗಿದ್ದ ಕಮೆಗೋಡು  ನರಸಿಂಹ ಶಾಸ್ತ್ರಿಗಳು ಪರಿಶೀಲಿಸಿದ್ದರೆಂದು ಮುದ್ರಿತ ಪ್ರತಿಗಳ ಮುಖ ಪುಟದಲ್ಲಿ ನಮೂದಿಸಲ್ಪಟ್ಟಿದೆ . ಅವರ ಕೃತಿಯ ಆರಂಭದಲ್ಲಿ ದುರ್ಗೆಯನ್ನು ಸ್ತುತಿಸುವ ಪದವನ್ನು ಕಾಣುತ್ತೇವೆ .ಆಗುಂಬೆಯ ವೇಣುಗೋಪಾಲ , ಕಮ್ಮರಡಿಯ ಗಣಪತಿ , ತೀರ್ಥರಾಜಪುರದ ದುರ್ಗಾಮ್ಬೆ ,ಶೃಂಗೇರಿಯ ಶಾರದಾಂಬೆಯ ಸ್ತುತಿಗಳೂ ಕೃತಿಗಳಲ್ಲಿ ಕಾಣಸಿಗುತ್ತವೆ .

ಹಲಸಿನಹಳ್ಳಿ ಶ್ರೀಯುತ ನರಸಿಂಹ ಶಾಸ್ತ್ರಿಗಳು ಶಶಿಕಲಾ ಸ್ವಯಂವರ (೧೮೯೯), ವಿಧ್ಯುನ್ಮತಿ ಕಲ್ಯಾಣ (೧೯೦೧) ,ಕೌಶಿಕ ಚರಿತ್ರೆ (೧೯೦೧), ರುಗ್ಮವತಿ ಕಲ್ಯಾಣ (೧೯೦೨), ಚಂದ್ರಹಾಸ ಚರಿತ್ರೆ (೧೯೦೪),ಭೀಷ್ಮೋತ್ಪತ್ತಿ(೧೯೦೪), ಭೀಷ್ಮ ವಿಜಯ (೧೯೦೫), ಕುಮುದ್ವತೀ ಕಲ್ಯಾಣ (೧೯೦೬), ಭೀಷ್ಮಾರ್ಜುನರ ಕಾಳಗ (೧೯೦೯), ವಾಮನ ಚರಿತ್ರೆ (೧೯೧೦), ರುಕ್ಮಾಂಗದ ಚರಿತ್ರೆ (೧೯೧೧) ದೇವಯಾನಿ ಕಲ್ಯಾಣ (೧೯೧೩) ಶ್ರೀಕೃಷ್ಣ ವಿವಾಹ (೧೯೧೪) ,ಪುಂಡರೀಕ ಚರಿತ್ರೆ (೧೯೧೬), ಶಲ್ಯ ಪರ್ವ (೧೯೧೬) ವೀರಮಣಿ ಕಾಳಗ (೧೯೧೬) ರಚಿಸಿದ್ದು ಇವೆಲ್ಲವೂ ಪ್ರಕಟವಾಗಿದೆ. ಇದಲ್ಲದೆ ನವನಂದನರ ಕಾಳಗ ,ಹಂಸಡಿಬಿಕರ ಕಾಳಗ , ಶಿಶುಪಾಲನ ಕಾಳಗ , ನರಸಿಂಹಾವತಾರ  ಪ್ರಸಂಗಗಳನ್ನು ರಚಿಸಿದ್ದು ಅವುಗಳು ಪ್ರಕಟವಾಗಿಲ್ಲ .ಇವರ ಎಲ್ಲ ರಚನೆಗಳೂ ಸ್ವತಂತ್ರ ರಚನೆಗಳಾಗಿದ್ದು ಪ್ರದರ್ಶನಕ್ಕೆ ಅನುಕೂಲವಾಗುವ ದೃಶ್ಯ ವಿನ್ಯಾಸ, ಚರ್ಚೆಗೆ ಆಸ್ಪದವಿರುವ  ವಿಷಯಾಧಾರಿತ ಪದಗಳು , ಮೌಲ್ಯಯುತ ಪದಗಳ ಸರಳ ಸುಲಲಿತ ಜೋಡಣೆ ಈ ಪ್ರಸಂಗಗಳ ವೈಶಿಷ್ಟ್ಯತೆ .

ಭೀಷ್ಮೋತ್ಪತ್ತಿ , ಭೀಷ್ಮಾರ್ಜುನರ ಕಾಳಗ ( ಭೀಷ್ಮ ಸೇನಾಪತ್ಯ -ವಿಶ್ವರೂಪ ದರ್ಶನ -ಕರ್ಮಬಂಧನ -ಸುದರ್ಶನ ಕರಗ್ರಹಣ - ಶರಶಯ್ಯೆ ಕಥಾನಕವನ್ನು ಒಳಗೊಂಡಿದೆ ), ಭೀಷ್ಮ ವಿಜಯ,ವೀರಮಣಿ ಕಾಳಗ ,ವಾಮನ ಚರಿತ್ರೆ  ಪ್ರಸಂಗಗಳು  ತಾಳಮದ್ದಲೆ ಕೂಟಗಳಿಗೆ ಹೇಳಿ ಮಾಡಿಸಿದಂತಿದೆ. ಈ ಎಲ್ಲ ಪ್ರಸಂಗಗಳು ಇಂದಿಗೂ ತಾಳಮದ್ದಲೆ ಕೂಟದ ಅಗ್ರ ಪ್ರಸಂಗಗಳ ಸಾಲಿನಲ್ಲಿ ಸ್ಥಾನ ಪಡೆದಿವೆ. 

ಹಲಸಿನಹಳ್ಳಿ ಶ್ರೀಯುತ ನರಸಿಂಹ ಶಾಸ್ತ್ರಿಯವರ ಬಹುತೇಕ ಎಲ್ಲ ಪ್ರಸಂಗಗಳೂ ಆಟ ಕೂಟಗಳಲ್ಲಿ ಇಂದಿಗೂ ಚಿರಂಜೀವಿಗಳಾಗಿವೆ. ಈಗಾಗಲೇ ಪಾರ್ತಿಸುಬ್ಬನ ಪ್ರಸಂಗಗಳು , ಹಟ್ಟಿಯಂಗಡಿ ರಾಮ ಭಟ್ಟರ ಪ್ರಸಂಗಗಳು, ಅಗರಿ ಶ್ರೀನಿವಾಸ ಭಾಗವತರ ಪ್ರಸಂಗಗಳು, ಹಿರಿಯ -ಕಿರಿಯ ಬಲಿಪ ಭಾಗವತರ ಪ್ರಸಂಗಗಳು ,ಜತ್ತಿ ಈಶ್ವರ ಭಾಗವತರ ಪ್ರಸಂಗಗಳು ,ಅಮೃತ ಸೋಮೇಶ್ವರರ ಪ್ರಸಂಗಗಳು , ಸಂಪುಟ ರೂಪದಲ್ಲಿ ಪ್ರಕಟವಾಗಿದ್ದು ಮುದ್ರಿತ ರೂಪದಲ್ಲಿ ಲಭ್ಯವಿರುತ್ತದೆ .ಆದರೆ ಹಿರಿಯರೂ ಮೇಧಾವಿಗಳೂ ,ವಿದ್ವಾಂಸರಾಗಿ ಮೆರೆದಿದ್ದ ಹಲಸಿನಹಳ್ಳಿ ಶ್ರೀಯುತ ನರಸಿಂಹ ಶಾಸ್ತ್ರಿಯವರ ಪ್ರಸಂಗಗಳ  ಮಹಾಸಂಪುಟವೊಂದು  ಪ್ರಕಟವಾಗಬೇಕಿದೆ . ಶ್ರೀಯುತರ ಎಲ್ಲ ಪ್ರಸಂಗಗಳೂ ಒಂದೇ ಪುಸ್ತಕದಲ್ಲಿ ದೊರೆತಲ್ಲಿ ಕಲಾಸಕ್ತರಿಗೆ , ಅಭ್ಯಾಸಿಗಳಿಗೆ , ಭಾಗವತರುಗಳಿಗೆ , ಕಲಾವಿದರಿಗೆ ಮಹಾದುಪಕಾರವಾಗುತ್ತದೆ.  ಅಂಥದ್ದೊಂದು ಕಾರ್ಯವು ಶೀಘ್ರವೇ  ಆಗಿ ಅವರ ಚಿರನೂತನ ಪ್ರಸಂಗಗಳು ಚಿರಸ್ಥಾಯಿಯಾಗಿ ಜನಮಾನಸದಲ್ಲಿ ಉಳಿಯಲಿ ಎಂದು ಹಾರೈಸುತ್ತೇನೆ ..



(ಹಲಸಿನಹಳ್ಳಿ ಶ್ರೀಯುತ ನರಸಿಂಹ ಶಾಸ್ತ್ರಿಯವರ ಬಗ್ಗೆ ಮಾಹಿತಿ ಕೃಪೆ : ಕ.ಪು. ಶ್ರೀನಿವಾಸ ಭಟ್, ಪಂಚವಟಿ , ಕಟೀಲು )

Sunday, October 31, 2010

ಬಲಿಪರಿಗೆ ರಾಜ್ಯೋತ್ಸವ ಪ್ರಶಸ್ತಿ

ಯಕ್ಷಗಾನ ಭಾಗವತ ಭೀಷ್ಮರೆನಿಸಿದ ಹಿರಿಯ ಕಲಾವಿದ ಬಲಿಪ ನಾರಾಯಣ ಭಾಗವತರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಲ್ಲುತ್ತಿರುವುದು ನಮಗೆಲ್ಲ ಸಂತೋಷದ ವಿಚಾರ . ತೆಂಕುತಿಟ್ಟಿನ ಭಾಗವತಿಕೆಯ ಸರ್ವಾಂಗೀಣ ಅಧ್ಯಯನ ಸಂಪನ್ನತೆಯುಳ್ಳ ಬಲಿಪರಿಗೆ ಈ ರಾಜ್ಯೋತ್ಸವ ಪ್ರಶಸ್ತಿ ಸಲ್ಲುತ್ತಿರುವುದು ತೆಂಕುತಿಟ್ಟಿನ ಅಭಿಮಾನಿಗಳೆಲ್ಲರಿಗೆ ಹೆಮ್ಮೆಯ ವಿಷಯ . ಬಲಿಪರ ಜೀವಮಾನದ ಸಾಧನೆಗೆ ಸಂದ ಗೌರವ ಇದು . ಬಹಳ ಹಿಂದೆಯೇ ಈ ಪ್ರಶಸ್ತಿ ಅವರಿಗೆ ಸಲ್ಲಬೇಕಿತ್ತು ಈಗಲಾದರೂ ಸರಕಾರ ರಾಜ್ಯೋತ್ಸವ ಪ್ರಶಸ್ತಿ ಕೊಡುತ್ತಿರುವುದು ತೃಪ್ತಿಯ ವಿಷಯ .


ಬಲಿಪರು ಇದರಿಂದ ಸ್ಫೂರ್ತಿ ಪಡೆದು ಇನ್ನು ಹೆಚ್ಚು ವರ್ಷ ನಮ್ಮೆಲರನ್ನು ತಮ್ಮ ಭಾಗವತಿಕೆಯ ಮೂಲಕ ರಂಜಿಸಲಿ ಎಂದು ಮನ:ಪೂರ್ವಕ ಹಾರೈಸುತ್ತೇನೆ.

Wednesday, October 13, 2010

ಬಯಲಾಟ ಮತ್ತು ಕಾಲಮಿತಿ ಯಕ್ಷಗಾನ ಪ್ರದರ್ಶನಗಳು


ಕರಾವಳಿಯಲ್ಲಿ ಬಯಲಾಟವೆಂದರೆ ರಾತ್ರಿಯಿಡೀ ಎಂಟರಿಂದ ಹತ್ತು ಗಂಟೆಗಳ ಪೂರ್ಣಪ್ರಮಾಣದ ಯಕ್ಷಗಾನ ಪ್ರದರ್ಶನ. ಕೋಡ೦ಗಿಯಿಂದ ತೊಡಗಿ ಬಾಲಗೋಪಾಲರೆ ಮೊದಲಾದ ಪೂರ್ವರಂಗ ಮುಗಿದು ಕೇಳಿ ಬಡಿದು ಪ್ರಸಂಗ ಆರಂಭವಾಗಿ ಬೆಳಗಿಯ ಜಾವ ಮಂಗಳ ಆಗುವವರೆಗೆ ಸುದೀರ್ಘ ಪ್ರದರ್ಶನ . ಚಿಕ್ಕವರಿದ್ದಾಗ ಆಟಕ್ಕೆ ಹೋಗುವುದೆಂದರೆ ಸಂಭ್ರಮ ! ಶಾಲಾ ಆಟದ ಮೈದಾನಿನಲ್ಲಿ ನಡೆಯುತ್ತಿದ್ದ ರಾತ್ರಿಯಿಡೀ ಪ್ರದರ್ಶನಕ್ಕೆ ಕಿಕ್ಕಿರಿದ ಜನ ಸಂದಣಿ ಇರುತ್ತಿತ್ತು. ದೂರದರ್ಶನದ೦ಥ ದೃಶ್ಯ ಮಾದ್ಯಮಗಳು ಇನ್ನು ಜನಸಾಮಾನ್ಯರ ಮನೆಗೆ ಲಗ್ಗೆ ಇಡದೆ ಇದ್ದ ಸಮಯವದು. ಬಹುತೇಕ ಜನ ಸಾಮಾನ್ಯರಿಗೆ ಇದ್ದ ಏಕೈಕ ಮನೋರಂಜನಾ ಸಾಧನ ಯಕ್ಷಗಾನ ಪ್ರದರ್ಶನ.

ದೂರದರ್ಶನವು ಜನ ಸಾಮಾನ್ಯರ ಜೀವನದ ಅವಿಭಾಜ್ಯ ಅಂಗವಾಗಿ ಸ್ಥಾಪಿತವಾದ ಮೇಲೆ ದೃಶ್ಯ ಮಾಧ್ಯಮಗಳ ಬೆಳವಣಿಗೆ  ಹಾಗೂ ಚಲನ ಚಿತ್ರಗಳ ಭಾರಾಟೆ ಯಕ್ಷಗಾನ ಪ್ರದರ್ಶನಕ್ಕೆ ತೀವ್ರ ಹೊಡೆತ ನೀಡಿದ್ದಂತೂ ನಿಜ . ಜಾಗತೀಕರಣದ ಪರಿಣಾಮ ಹಾಗೂ ಯುವ ಜನತೆಯ ಪಾಶ್ಚಾತ್ಯ ಸಂಸ್ಕೃತಿಯ ಮೋಹ  ನಮ್ಮ ಈ ಮಣ್ಣಿನ ಕಲೆಯ ಬಗ್ಗೆ ಅಸಡ್ಡೆಯೂ ಸೇರಿ ನಿಧಾನಕ್ಕೆ ಯಕ್ಷಗಾನವೂ ಕಾಲಗರ್ಭದಲ್ಲಿ ಅಡಗಿ ಹೋಗುವ ಅಪಾಯದ ಅಂಚಿಗೆ ಸರಿಯುತ್ತಿದೆ.

   ಇಡೀ ರಾತ್ರಿ ಪ್ರದರ್ಶನ ಇತ್ತೀಚಿಗೆ ಕಳೆಗುಂದಿ ತಡರಾತ್ರಿಯ ಬಳಿಕ ಆಸನಗಳು ಬರಿದಾಗಿ ಬೆಳಗಿನ ಜಾವಕ್ಕೆ ಮೇಳದ ಕಲಾವಿದರು, ಆಟ ಆಡಿಸುವ ಸೇವಾಕರ್ತರು , ಧ್ವನಿವರ್ಧಕ ಮತ್ತು ಬೆಳಕಿನ ವ್ಯವಸ್ಥೆಯವರನ್ನು ಹೊರತುಪಡಿಸಿ ಬೆರಳೆಣಿಕೆಯ ಪ್ರೇಕ್ಷಕರು  ಮಾತ್ರ ಉಳಿಯುತ್ತಿದ್ದು ಕಲಾವಿದರಿಗೆ ನಿರುತ್ಸಾಹ ಉಂಟಾಗುತ್ತಿದೆ.

ಇದಕ್ಕೊಂದು ಪರಿಹಾರ ಯತ್ನವಾಗಿ ಕಾಲಮಿತಿಯ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದು ಇಡೀ ರಾತ್ರೆಯ ಆಟದ ಸೊಗಸಿಲ್ಲದಿದ್ದರೂ ತಕ್ಷಣ ಸವಿಯಲು ಸಿಗುವ ಆಹಾರ ಪದಾರ್ಥದಂತೆ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ. ಮೂರು ನಾಲ್ಕು ತಾಸುಗಳ ಈ ಪ್ರದರ್ಶನದಲ್ಲಿ ಪೂರ್ವರಂಗವನ್ನು ಬಿಟ್ಟು ನೇರ ಕಥಾ ನಿರೂಪಣೆಗೆ ತೊಡಗುತ್ತಿದ್ದು  ಜನರಿಗೆ ಚುಟುಕಾಗಿ ಕಥೆಯನ್ನು ಅಭಿವ್ಯಕ್ತಿಗೊಳಿಸಲಾಗುತ್ತಿದೆ. ಕಾಲಮಿತಿಯ ಯಕ್ಷಗಾನದಲ್ಲಿ ಕಲಾವಿದನಿಗೆ ಸಾಕಷ್ಟು ವಿಶ್ರಾಂತಿ ದೊರೆಯುತ್ತದೆ. ಅನಾವಶ್ಯಕವಾಗಿ ನಿದ್ದೆಗೆಟ್ಟು ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗಬೇಕಿಲ್ಲವಾದರೂ ತನ್ನ ಪಾತ್ರದ ಅಭಿವ್ಯಕ್ತಿಗೆ ಕಾಲಾವಕಾಶ ಮಾತ್ರ ಕಡಿಮೆಯೇ ಸಿಗುತ್ತಿದ್ದು ಕಲಾವಿದನ ವೃತ್ತಿ ಜೀವನಕ್ಕೆ ಅದೊಂದು ಸವಾಲಾಗಿದೆ.


ಈ ಮಧ್ಯೆ ನಿರಂತರ ೨೪ ತಾಸುಗಳ ಯಕ್ಷಗಾನ ಪ್ರಯೋಗ , ಸಂಜೆ ಆರಂಭವಾಗಿ ಮರುದಿನ ಮಧ್ಯಾಹ್ನದ   ತನಕ ಪ್ರದರ್ಶನ ಅಲ್ಲೊಂದು ಇಲ್ಲೊಂದು ನಡೆಯುತ್ತಿದ್ದು ಈಗಲೂ ಅಷ್ಟು ಹೊತ್ತು ಪ್ರದರ್ಶನ ನೀಡುವ ಕಲಾವಿದರ ಸಾಮರ್ಥ್ಯವನ್ನು ತೋರಿಸುತ್ತಿದೆ.

ಇನ್ನು  ಬಯಲಾಟಗಳ ಗುಣಮಟ್ಟದಲ್ಲೂ  ಬಹಳ ಬದಲಾವಣೆಗಳಾಗಿವೆ. ಹಿಂದೆ ಹರಕೆಯ ಆಟವಾದರೂ ಕಲಾವಿದರು ತಮ್ಮ ಪಾತ್ರದ ಗುಣಮಟ್ಟವನ್ನು ಕಾಯ್ದುಕೊಂಡು ಬರುತ್ತಿದ್ದರು. ಈಗಿನ ವಾತಾವರಣವನ್ನು ಗಮನಿಸಿದಾಗ ಅದರಲ್ಲೂ ಬದಲಾವಣೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ .ಇದರೊಂದಿಗೆ ಸಾಮಾನ್ಯವಾಗಿ ಬಯಲಾಟ ಆಡಿಸುವವರು ಆಟದ ರಂಗೇರಿಸಲು ಬ್ಯಾಂಡ್ , ವಾದ್ಯ , ಕೊಂಬು ಕಹಳೆ ಇತ್ಯಾದಿ ಹೆಚ್ಚುವರಿ "ಹೊರೆ" ಯನ್ನು ದೇವರ ಪ್ರೀತ್ಯರ್ಥವಾಗಿ ? ತನ್ನ  ಪ್ರತಿಷ್ಠೆಯನ್ನು ಮೆರೆಸಲು ಬಳಸುವುದನ್ನು ಎಲ್ಲರೂ ನೋಡಿ ಅನುಭವಿಸಿರುವ ವಿಷಯವೇ ! ಇಲ್ಲಿ ಯಾವುದೊಂದು ಯಕ್ಷಗಾನದ ಆವರಣಕ್ಕೆ ಪೂರಕವಾಗಿರದೆ ಆಟದ ಕಳೆಯನ್ನೇ ಹಾಳುಗೆಡಹುತ್ತದೆ ಎಂದು ಎಷ್ಟು ಬಾರಿ ತಿಳಿ ಹೇಳಿದರೂ ನಮ್ಮೂರ ಜನಕ್ಕೆ "ಬ್ಯಾಂಡ್  ಇಜ್ಜಿಂಡ ಎಂಚ ?" ಅಂತ ಮುಖ ಸಿ೦ಡರಿಸುವುದು ಅಭ್ಯಾಸ !.  ಆಟದಲ್ಲಿ ದೇವಿ ಪ್ರತ್ಯಕ್ಷವಾಗುವಾಗ "ಕರಿಯ ಐ   ಲವ್ ಯೂ " ಹಾಡನ್ನು ರಸವತ್ತಾಗಿ ಬ್ಯಾಂಡ್ ಸೆಟ್ ನವರು ನುಡಿಸಿದ್ದನ್ನು ನೋಡಬೇಕಾದ ದುರ್ಧೈವೂ  ಈಗಿನ ಪ್ರೇಕ್ಷಕರಿಗಿದೆ !

ಹರಕೆ ಮೇಳಗಳು ಇಂದಿಗೂ ಪೂರ್ಣ ರಾತ್ರಿಯ ಪ್ರದರ್ಶನವನ್ನು ನೀಡುತ್ತಿದೆ. ಆದರೆ ಜನರನ್ನು ಸೆಳೆಯುವಲ್ಲಿ ಅದು ನಿಧಾನವಾಗಿ ವಿಫಲವಾಗುತ್ತಿರುವುದು ಒಂದು ದುರಂತವೇ ಸರಿ. ಹೀಗಾಗಿ ಕಲಾವಿದರ ಹಿತದೃಷ್ಟಿಯಿಂದ ಹರಕೆಯ ಆಟಗಳನ್ನು ಕಾಲಮಿತಿಯ ಪರಿಮಿತಿಗೆ ಒಳಪಡಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ.

ಫೋಟೋ ಕೃಪೆ : ಶ್ರೀ.ಸಂತೋಷ್ ಪೈ.

Tuesday, July 27, 2010

ಮನ ಮುಟ್ಟುವ ಶ್ಲೋಕ ...

ಹರಿ ಹರರಲ್ಲಿ ಬೇಧವಿಲ್ಲ ಎಂದು ಸಾರಲು ಕವಿಯೊಬ್ಬ ಹರಿಹರರನ್ನು ಒಟ್ಟಾಗಿ ಒಂದೇ ಶ್ಲೋಕದಲ್ಲಿ ಪ್ರಾರ್ಥಿಸಿದ್ದು ಹೀಗೆ..
ಪಾಯಾತ್ ಕುಮಾರಜನಕ: ಶಶಿಖಂಡಮೌಳಿ:
ಶಂಖಪ್ರಭಶ್ಚ  ನಿಧನಶ್ಚ ಗವೀಶಯಾನ:
ಗಂಗಾಂಚ ಪನ್ನಗಧರಶ್ಚ ಉಮಾವಿಲಾಸ:
ಆದ್ಯಕ್ಷರ ರಹಿತೋ ಸಹಿತೋಪಿ ದೇವ:

ಇದರಲ್ಲಿ ಮೊದಲ ಅಕ್ಷರ ಸೇರಿಸಿದರೆ ಶಿವನ ಸ್ತುತಿಯಾಗುತ್ತದೆ. ಮೊದಲ ಅಕ್ಷರ ಬಿಟ್ಟರೆ ವಿಷ್ಣುವಿನ ಸ್ತುತಿಯಾಗುತ್ತದೆ. ಮೊದಲ ಅಕ್ಷರವಿದ್ದರೂ ಇಲ್ಲದಿದ್ದರೂ ದೇವರನ್ನೇ ಸ್ತುತಿಸಿದಂತಾಗುತ್ತದೆ.

ಕುಮಾರಜನಕ:= ಕುಮಾರನ ತಂದೆ =ಶಿವ ; ಮಾರ ಜನಕ:= ಮನ್ಮಥನ ತಂದೆ =ವಿಷ್ಣು, ಶಶಿಖಂಡಮೌಳಿ:= ಚಂದ್ರಶೇಖರ , ಶಿಖಂಡಮೌಳಿ:=ನವಿಲುಗರಿಯನ್ನು ಧರಿಸಿದಾತ= ವಿಷ್ಣು/ಕೃಷ್ಣ , ಶಂಖಪ್ರಭ = ಬಿಳಿಬಣ್ಣದವ (ಶಿವ ) , ಖಪ್ರಭ=ಆಕಾಶ ಬಣ್ಣದವ =ವಿಷ್ಣು, ನಿಧನ=ಶಿವ, ಧನ=ವಿಷ್ಣು, ಗವೀಶಯಾನ: = ನಂದಿವಾಹನ , ವೀಶಯಾನ:=ಪಕ್ಷಿವಾಹನ , ಗಂಗಾಂಚ = ಗಂಗಾಧರ , ಗಾಂಚ =ಗೋಪಾಲ ಪನ್ನಗಧರ =ನಾಗಭೂಷಣ,ನಗಧರ = ವಿಷ್ಣು, ಉಮಾವಿಲಾಸ:= ಶಿವ , ಮಾವಿಲಾಸ: =ವಿಷ್ಣು
ಹಾಗಾಗಿ ಮೊದಲ ಅಕ್ಷರ ಸೇರಿಸಿದರೂ ಬಿಟ್ಟರೂ ದೇವರನ್ನು ನೆನೆದಂತೆಯೇ ಆಗುವುದು .

ಅರ್ಥಪೂರ್ಣವಾದ ಈ ಶ್ಲೋಕ ಎಷ್ಟು ಸೊಗಸಾಗಿದೆಯಲ್ಲವೇ ?

Wednesday, July 14, 2010

ಕೆಲವು ಅಪೂರ್ವ ಛಾಯಾಚಿತ್ರಗಳು ...

ಯಕ್ಷಗಾನ ಕ್ಷೇತ್ರದಲ್ಲಿ ಅದೆಷ್ಟೋ ಮಂದಿ ಕಲಾವಿದರು ಪ್ರಸಿದ್ಧಿಯನ್ನು ಪಡೆದು ರಂಗವನ್ನು ಬೆಳಗಿದವರಿದ್ದಾರೆ . ಕಲೆಯನ್ನು ತಮ್ಮದೇ ಆದ ಛಾಪಿನಿಂದ ಶ್ರೀಮಂತಗೊಳಿಸಿ ತೆರೆಗೆ ಸರಿದವರು ಹಾಗೂ ಅವರೊಂದಿಗೆ ಪರಿಶ್ರಮಿಸಿ ಈಗ ಹಿರಿಯರೆನಿಸಿಕೊಂಡ ಚೇತನಗಳ ಕೆಲವು ಅಪೂರ್ವ ಛಾಯಾಚಿತ್ರ ಯಕ್ಷ ರಸಿಕರಿಗಾಗಿ ಇಲ್ಲಿ ನೀಡುತ್ತಿದ್ದೇನೆ
ಮೊದಲ ಚಿತ್ರದಲ್ಲಿ ಎಪ್ಪತ್ತರ ತಲೆಮಾರಿನ "ಯಕ್ಷ ದಿಗ್ಗಜರು ಮತ್ತು ಯಕ್ಷ ಪೋಷಕರು "
ಕುಳಿತವರು (ಎಡದಿಂದ ಬಲಕ್ಕೆ ) ಶ್ರೀ ನಿಡ್ಲೆ ನರಸಿಂಹ ಭಟ್ , ಶ್ರೀ. ಬೋಳಾರ ನಾರಾಯಣ ಶೆಟ್ಟಿ ,ಶ್ರೀ ವಿಟ್ಲ ಗೋಪಾಲಕೃಷ್ಣ ಜೋಶಿ , ಶ್ರೀ.ಎಂ.ನಾರಾಯಣ ಭಟ್ (ಅಳಿಕೆ) ಶ್ರೀ ಬಲಿಪ ನಾರಾಯಣ ಭಾಗವತ , ಶ್ರೀ ಅಳಿಕೆ ರಾಮಯ್ಯ ರೈ ,ಶ್ರೀ ಕದ್ರಿ ವಿಷ್ಣು
ಮೊದಲ ಸಾಲಿನಲ್ಲಿ ನಿಂತವರು : ಶ್ರೀ ಎಂ.ವಾಸುದೇವ ಪ್ರಭು , ಶ್ರೀ.ಕೆ.ಸಂಜೀವ ಶೆಟ್ಟಿ , ಶ್ರೀ ಗೋಪಾಲಕೃಷ್ಣ ಕುರುಪ್ , ಶ್ರೀ ಬಣ್ಣದ ಕುಟ್ಯಪ್ಪು, ಶ್ರೀ ಕೋಳ್ಯುರ್ ರಾಮಚಂದ್ರ ರಾವ್ , ಶ್ರೀ ಕೆ.ವಿ. ಸುಬ್ಬಾ ರಾವ್ , ಶ್ರೀ ಅಡ್ಕಸ್ಥಳ ನಾರಾಯಣ ಶೆಟ್ಟಿ
ನಿಂತವರಲ್ಲಿ ಕೊನೆಯ ಸಾಲು : ಶ್ರೀ ಡೊಂಬ, ಶ್ರೀ ಯು. ಗಂಗಾಧರ ಭಟ್ , ಶ್ರೀ.ಕೇದಗಡಿ ಗುಡ್ಡಪ್ಪ ಗೌಡ , ಶ್ರೀ ಪಡ್ರೆ ಕುಮಾರ ಮತ್ತು ಶ್ರೀ ಪಡ್ರೆ ಚಂದು



ಎರಡನೇ ಚಿತ್ರದಲ್ಲಿ
ಶ್ರೀ ಪೆರ್ವೋಡಿ ನಾರಾಯಣ ಭಟ್ , ಶ್ರೀ ದೇಜು ಹಾಗೂ ಶ್ರೀ ಬಲಿಪ ನಾರಾಯಣ ಭಾಗವತ .
ಮೊತ್ತ ಮೊದಲ ಬಾರಿಗೆ ಶ್ರೀ ಬಲಿಪರನ್ನು ಮುಂಬೈಗೆ ಶ್ರೀ ದೇಜುರವರು ಕರೆದುಕೊಂಡು ಹೋದಾಗ ತೆಗೆದ ಛಾಯಾ ಚಿತ್ರವಿದು .



ಕೊನೆಯ ಚಿತ್ರದಲ್ಲಿ ಶ್ರೀ ಬಲಿಪರ ಭಾಗವತಿಕೆಯಲ್ಲಿ ಶ್ರೀ ಅಳಿಕೆ ರಾಮಯ್ಯ ರೈಗಳ ಪೀಠಿಕೆ ವೇಷ

ಹಳೆಯ ಕಪ್ಪು ಬಿಳುಪು ಚಿತ್ರಗಳನ್ನು ನೋಡುವಾಗ ಮನಸ್ಸಿಗೆ ಮುದವಾಗುತ್ತದಲ್ಲವೇ ?

Thursday, July 8, 2010

ಯಕ್ಷಗಾನ ಸಂಗೀತ ವೈಭವ ಕಾರ್ಯಕ್ರಮ



ಕರಾವಳಿ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಜನಾಕರ್ಷಣೆ ಪಡೆದುಕೊಳ್ಳುತ್ತಿರುವ ಒಂದು ಕಾರ್ಯಕ್ರಮವೆಂದರೆ ಯಕ್ಷಗಾನ ಸಂಗೀತ ವೈಭವ . ಇಬ್ಬರು , ಮೂವರು ಯಾ ಹಲವು ಜನ ಭಾಗವತರು ಸೇರಿ ವಿವಿಧ ಪ್ರಸಂಗಗಳಿಂದ ಆಯ್ದ ಪದ್ಯಗಳನ್ನು ಹಾಡಿ ರಸವತ್ತಾಗಿ ನಡೆಸಿಕೊಡುವ ಒಂದು ಕಾರ್ಯಕ್ರಮ . ಇದರಲ್ಲಿ ಏಕತಾನತೆ ಕಳೆಯಲೋ ಎಂಬಂತೆ ಒಬ್ಬ ನಿರೂಪಕ ತನ್ನ ಹಾಸ್ಯ ಮಿಶ್ರಿತ ಮಾತುಗಳಲ್ಲಿ ಕಾರ್ಯಕ್ರಮ ನಿರ್ವಹಣೆ ಮಾಡುತ್ತಾನೆ .

ಕಳೆದ ಕೆಲವು ವರ್ಷಗಳಿಂದ ಈ ಕಾರ್ಯಕ್ರಮದ ಸ್ವರೂಪ ಬಹಳಷ್ಟು ಬದಲಾಗಿದೆ (ಕೆಲವರು ಇದನ್ನು ಬೆಳೆದಿದೆ ಅಂತಲೂ ವ್ಯಾಖ್ಯಾನಿಸುತ್ತಾರೆ ಬಿಡಿ !) ಯಕ್ಷಗಾನಕ್ಕೆ ಪಿಟೀಲು ,ಕೊಳಲು , ತಬಲಾ , ಶಂಖ , ಸೆಕ್ಷಫೋನ್ ಇತ್ಯಾದಿ ಅಳವಡಿಸಿ ಅದೂ ಅಲ್ಲ ಇದೂ ಅಲ್ಲ ಎಂಬ ಯಾವುದೊ ಒಂದು ಮಿಶ್ರಣವನ್ನು ಮಾಡಿ ಹೊಸತನ ಎನ್ನಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದವರೂ ಇದ್ದಾರೆ . ಮೊದ ಮೊದಲು ಬೇರೆ ಬೇರೆ ಪ್ರಯೋಗಗಗಳನ್ನು ಯಕ್ಷಗಾನ ಸಂಗೀತ ವೈಭವ ಕಾರ್ಯಕ್ರಮ ನೆಪದಲ್ಲಿ ಮಾಡಿದ್ದು ಅವುಗಳು ಕೇವಲ ಮನೋರಂಜನಾ ದೃಷ್ಟಿಯಲ್ಲಿ ತೆಗೆದು ಅಸ್ವಾದಿಸ ಬೇಕಾದ್ದು ಎಂಬ ನೆಲೆಗೆ ಮಾತ್ರ ಸೀಮಿತವಾಗಿತ್ತು.

ಇತ್ತೀಚಿಗೆ ಯಕ್ಷಗಾನ ಸಂಗೀತ ವೈಭವ ಕಾರ್ಯಕ್ರಮಗಳಲ್ಲಿ ಈ ವಿಚಿತ್ರ ವಾದ್ಯಗಳ ಬಳಕೆ ಕಡಿಮೆಯಾಗತೊಡಗಿ ಕೇವಲ ಯಕ್ಷಗಾನೀಯ ಹಿಮ್ಮೆಳದಲ್ಲೇ ಪದ್ಯಗಳು ಜನರಂಜಿಸತೊಡಗಿದೆ . ವಿವಿಧ ಪ್ರಸಂಗಗಳಿಂದ , ವಿವಿಧ ರಾಗಗಳ , ವಿವಿಧ ರಸಭಾವವನ್ನು ಪ್ರಕಟಿಸಬಲ್ಲ ಹಾಡುಗಳನ್ನು ಆಯ್ದು ಸರಿ ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾರ್ಯಕ್ರಮ ಹೆಚ್ಚು ಜನಪ್ರಿಯವಾಗುತ್ತಿದೆ. ಇಡೀ ರಾತ್ರಿ ಕುಳಿತು ಆಟ ನೋಡಲು ಅಲ್ಲಿ ಬರುವ ವಿವಿಧ ಸನ್ನಿವೇಶಗಳ ವಿವಿಧ ಪದಗಳನ್ನು ಸವಿಯಲು ಅಸಾಧ್ಯವಾದ ಪ್ರೇಕ್ಷಕನಿಗೆ ಇದೊಂದು ಅನುಕೂಲಕರ ಹಾಗೂ ಆಹ್ಲಾದಕರ ಕಾರ್ಯಕ್ರಮವೆನಿಸುತ್ತದೆ.

ಇಲ್ಲಿ ಪರಂಪರೆಯ ಮಟ್ಟುಗಳು , ಹೊಸತನದ ಪೆಟ್ಟುಗಳು , ಆಶು ಸಾಹಿತ್ಯಗಳು ಮುಂತಾದ ವೈವಿಧ್ಯಮಯ ಹಾಡುಗಳು ಕೇಳಲು ಸಿಗುತ್ತವೆ .ಕಾರ್ಯಕ್ರಮದ ಸಂಘಟನಾ ದೃಷ್ಟಿಯಿಂದಲೂ ಇದೊಂದು ಸುಲಭದ ಹೆಚ್ಚು ಹೊರೆಯನ್ನು ನೀಡದ ಕಾರ್ಯಕ್ರಮ .ಎರಡು ಜನ ಭಾಗವತರು ಒಬ್ಬೊಬ್ಬ ಚೆಂಡೆ ಮದ್ದಲೆ ಸಹಕಲಾವಿದರು ಹೀಗೆ ನಾಲ್ಕು ಜನರಿದ್ದರೆ ಒಂದು ಸರಳ ಸುಂದರ ಕಾರ್ಯಕ್ರಮ ಸವಿಯಲು ಸಿಗುತ್ತದೆ !

ಮನೆಗಳಲ್ಲಿ , ಚಿಕ್ಕ-ಪುಟ್ಟ ಸಮಾರಂಭಗಳನ್ನು ನಡೆಸುವಾಗ ಇಂಥ ಕಾರ್ಯಕ್ರಮವನ್ನು ಆಯೋಜಿಸಲು ಹೆಚ್ಚು ಶ್ರಮವಿರುವುದಿಲ್ಲ . ಮಾತ್ರವಲ್ಲ ದೊಡ್ಡ ದೊಡ್ಡ ಕಲಾವಿದರಿಗೆ ಹೇಳಿ ಅವರು ಕೈ ಕೊಡುವ ಹಾಗೂ ಸಂಘಟಕನಿಗೆ ತಲೆಬಿಸಿಯಾಗಲು ಅವಕಾಶವೂ ಇಲ್ಲ ! ಇದರಿಂದ ಕಲಾವಿದರಿಗೆ ಪ್ರೋತ್ಸಾಹ ನೀಡಿದಂತೆಯೂ ಆಗುತ್ತದೆ. ಒಟ್ಟಿನಲ್ಲಿ ಮಳೆಗಾಲದಲ್ಲಿ ಹಾಗೂ ಸರಳ ಹಾಗೂ ಸಂಕ್ಷಿಪ್ತ ಕಾರ್ಯಕ್ರಮ ಮಾಡಲು ಯೋಚಿಸುವವರಿಗೆ ಇಂಥ "ಗಾನ-ವೈಭವ" ಅನುಕೂಲಕರವಾಗಿದೆ.

Thursday, June 17, 2010

ಛಪ್ಪನ್ನೈವತ್ತಾರು ದೇಶಗಳು


ಯಕ್ಷಗಾನದಲ್ಲಿ ಹಲವು ಪ್ರಸಂಗಗಳಲ್ಲಿ ದಿಗ್ವಿಜಯಕ್ಕೆ ಹೊರಟ ರಾಜರು ಸುತ್ತಿ ಗೆದ್ದು ಬರುವ ಯಾ ಹೆಸರಿಸುವ ಛಪ್ಪನ್ನೈವತ್ತಾರು ದೇಶಗಳು ಕೆಳಗಿನಂತಿವೆ


ಅಂಗ

ವಂಗ

ಕಳಿಂಗ

ಕರ್ಣಾಟ

ಕೇರಳ

ಕಾಮರೂಪ

ಗೌಡ

ವನವಾಸ (ಬನವಾಸಿ )

ಕುಂತಲ

ಕೊಂಕಣ

ಮಗಧ

ಸೌರಾಷ್ಟ್ರ

ಮಾಳವ

ಲಾಟ

ಭೋಜ

ವಿರಾಟ

ಶಬರ

ಕಕುರ

ಕುರು

ಅವಂತಿ

ಪಾಂಡ್ಯ

ಮದ್ರ

ಸಿಂಹಲ

ಗುರ್ಜರ

ಪಾರಸಿಕ

ಮಿಥಿಲ

ಪಾಂಚಾಲ

ಕ್ರೂರಸೇನಿ

ಗಾಂಧಾರ

ಬಾಹ್ಲಿಕ

ಹೈಹಯ

ತೌಳವ

ಸಾಲ್ವ

ಪುಂಡ್ರಕ

ಪ್ರಾಗ್ಜೋತಿಷ್ಯ

ಮತ್ಸ್ಯ

ಚೇದಿ

ಬರ್ಬರ

ನೇಪಾಳ

ಗೌಳ

ಕಾಶ್ಮೀರ

ಕನ್ಯಾಕುಬ್ಜ

ವಿದರ್ಭ

ಖುರಸಾಣ

ಮಹಾರಾಷ್ಟ್ರ

ಕೋಸಲ

ಕೇಕಯ

ಅಹಿಚ್ಛತ್ರ

ತ್ರಿಲಿಂಗ

ಪ್ರಯಾಗ

ಕರಹಂಟಕ

ಕಾಂಭೋಜ

ಭೋಟ

ಚೋಳ

ಹೂಣ

ಕಾಶಿ



ಎಲ್ಲ ನೆನಪಿಟ್ಟು ರಂಗಸ್ಥಳದಲ್ಲಿ ಹೇಳಲು ಕಷ್ಟ ಮಾರಾಯರೇ ಅಲ್ವಾ ?

Wednesday, June 2, 2010

ಯಕ್ಷಗಾನದಲ್ಲಿ ವಿದ್ವತ್












ಸರ್ಕಾರವು ಯಕ್ಷಗಾನದಲ್ಲಿ ವಿದ್ವತ್ ಪರೀಕ್ಷೆಯನ್ನು ನಡೆಸಲು ಉದ್ದೇಶಿಸಿರುವುದು ಸ್ವಾಗತಾರ್ಹ. ತಡವಾಗಿಯಾದರೂ ಎಚ್ಚೆತ್ತಿರುವ ಅಕಾಡೆಮಿಗಳು ಅವಸಾನದ ಅಂಚಿಗೆ ಸರಿಯುತ್ತಿರುವ ಯಕ್ಷಗಾನದಂಥ ಸಮರ್ಥ ಕಲಾಪ್ರಕಾರಗಳಿಗೆ ಸೂಕ್ತ ಪ್ರೋತ್ಸಾಹ ನೀಡಲು ಉದ್ದೇಶಿಸಿರುವುದು ಯಕ್ಷ ಪ್ರಿಯರಿಗೆ ಸಂತಸ ಉಂಟುಮಾಡಿದೆ . ಇನ್ನು ಸರಿಯಾದ ಪ್ರಸಂಗ ಪ್ರಯೋಗ ಪುಸ್ತಕವನ್ನು ಹಾಗೂ ಅದಕ್ಕೆ ಸಂಬಂಧಿಸಿದ ಆಕರ ಗ್ರಂಥಗಳನ್ನು ಸೇರಿಸಿ ಅನುಭವಿಗಳ ಅಭಿಮತದೊಂದಿಗೆ ಪಾಠ ಪುಸ್ತಕವನ್ನು ಸಿದ್ದಗೊಳಿಸಿ ಆಸಕ್ತರಿಗೆ ಕಲಿಯಲು ವ್ಯವಸ್ಥಿತವಾದ ಅಸ್ತಿವಾರ ಒದಗಿಸಿದಲ್ಲಿ ಈ ಪ್ರಯತ್ನಗಳು ಸಫಲವಾಗಬಹುದು .

ಏನಿದ್ದರೂ ಒಳ್ಳೆಯ ಪ್ರಯತ್ನಕ್ಕೆ ಸರಕಾರವು ಹೊರಟಿರುವುದು ಎಲ್ಲರಿಗೂ ಹೆಮ್ಮೆಯ ವಿಷಯ .

Saturday, May 29, 2010

ಯಕ್ಷಲೋಕದ ಮಹಾಪ್ರಸಂಗ "ಐದು ದಿನದ ಶ್ರೀದೇವಿ ಮಹಾತ್ಮೆ "




ಕರಾವಳಿ ಕರ್ನಾಟಕದ ಗಂಡು ಕಲೆ ಯಕ್ಷಗಾನವು ಹಲವಾರು ಕವಿಗಳ ವಿಶಿಷ್ಟ ಪ್ರಸಂಗ ರಚನೆಗಳಿಂದ ಸಮೃದ್ಧವಾಗಿದೆ .ಯಕ್ಷಗಾನ ಸಾಹಿತ್ಯವು ಕನ್ನಡ ಸಾರಸ್ವತ ಲೋಕದ ಒಂದು ವಿಶಿಷ್ಟ ಕಾವ್ಯ ಪ್ರಕಾರ. ಸರಿಯಾದ ಯಕ್ಷಗಾನ ಪ್ರಸಂಗ ರಚನೆ ಮಾಡಬೇಕಾದರೆ ವ್ಯಾಕರಣ ಛ೦ದಸ್ಸುಗಳ ಆಳವಾದ ಜ್ಞಾನ ಹಾಗೂ ರಂಗ ಪ್ರಯೋಗದ ಅಪಾರವಾದ ಅನುಭವಗಳು ಇದ್ದರೆಮಾತ್ರ ಸಾಧ್ಯ. ಯಕ್ಷಗಾನದ ಆದಿ ಕವಿ ಪಾರ್ತಿಸುಬ್ಬನಿಂದ ಹಿಡಿದು ಇಂದಿನವರೆಗೆ ಸರಿಯಾದ ಯಕ್ಷಗಾನ ಪ್ರಸಂಗ ರಚನೆ ಮಾಡಬೇಕಾದರೆ ವ್ಯಾಕರಣ ಛ೦ದಸ್ಸುಗಳ ಆಳವಾದ ಜ್ಞಾನ ಹಾಗೂ ರಂಗ ಪ್ರಯೋಗದ ಅಪಾರವಾದ ಅನುಭವಗಳು ಇದ್ದರೆಮಾತ್ರ ಸಾಧ್ಯ. ಯಕ್ಷಗಾನದ ಆದಿ ಕವಿ ಪಾರ್ತಿಸುಬ್ಬನಿಂದ ಹಿಡಿದು ಇಂದಿನವರೆಗೆ ಹಲವಾರು ಪ್ರಸಂಗಕರ್ತರು ಪುರಾಣ , ಚಾರಿತ್ರಿಕ, ಸಾಮಾಜಿಕ ಹಾಗೂ ಕಾಲ್ಪನಿಕ ಕಥೆಗಳನ್ನು ಆಧರಿಸಿ ಪ್ರಸಂಗ ರಚನೆಯನ್ನು ಮಾಡುತ್ತಾ ಬಂದಿದ್ದಾರೆ .

ತೆಂಕುತಿಟ್ಟು ಯಕ್ಷಗಾನವನ್ನು ಪರಿಷ್ಕರಿಸಿ ಪುನರುಜ್ಜೀವನ ನೀಡಿದ ಶಕಪುರುಷ ಹಿರಿಯ ಬಲಿಪ ನಾರಾಯಣ ಭಾಗವತರುಎಂಬುದು ಯಕ್ಷಪ್ರಿಯರೆಲ್ಲರೂ ತಿಳಿದಿರುವ ವಿಚಾರ . ಪರಂಪರೆಯನ್ನು ಯಶಸ್ವಿಯಾಗಿ ಮುಂದುವರಿಸಿದವರು ಈಗಿನ ಕಿರಿಯ ಶ್ರೀಬಲಿಪ ನಾರಾಯಣ ಭಾಗವತರು. ಯಕ್ಷಗಾನ ಕಲಾಲೋಕವನ್ನು ತಮ್ಮ ಕಲಾಸೇವೆಯಿಂದ ಸಮೃದ್ದಗೊಳಿಸಿದ ಬಲಿಪರು ಮೂವತ್ತಕ್ಕೂ ಮಿಕ್ಕಿ ಪ್ರಸಂಗಗಳನ್ನು ರಚಿಸಿ ರಂಗದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿ ವಿದ್ವಜ್ಜನರ ಮನ್ನಣೆಗೆ ಪಾತ್ರರಾದವರು. ಶ್ರೀಬಲಿಪರು ಹಿಂದಿನ ಯಾವ ಯಕ್ಷಕವಿಗಳೂ ಮಾಡದೆ ಇರುವ ಸಾಹಸವನ್ನು ಐದು ದಿನದ ಶ್ರೀದೇವಿ ಮಹಾತ್ಮೆ ಪ್ರಸಂಗವನ್ನು ರಚಿಸುವ ಮೂಲಕ ಮಾಡಿ ಯಕ್ಷಲೋಕದಲ್ಲೊಂದು ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ . ಐದು ರಾತ್ರಿಗಳಿಗಾಗುವ ಕಥೆಯನ್ನು ಶ್ರೀದೇವಿ ಭಾಗವತದಿಂದ ಆಯ್ದು ಮಹಾಪ್ರಸಂಗವನ್ನು ರಚಿಸಿ ನೂತನ ದಾಖಲೆ ನಿರ್ಮಿಸಿದ್ದಾರೆ .


ಪ್ರಸ್ತುತ ಯಕ್ಷಗಾನ ರಂಗದಲ್ಲಿ ಶ್ರೀದೇವಿ ಮಹಾತ್ಮೆಯ ಎರಡು ಪ್ರಸಂಗ ಕೃತಿಗಳು ಚಾಲ್ತಿಯಲ್ಲಿವೆ . ಅವುಗಳಲ್ಲಿ ಹಿರಿಯ ಬಲಿಪನಾರಾಯಣ ಭಾಗವತರು ರಚಿಸಿದ ಕೃತಿಯನ್ನು "ಬಲಿಪ ಪ್ರತಿ" ಎಂದೂ ಅಗರಿ ಶ್ರೀನಿವಾಸ ಭಾಗವತರು ರಚಿಸಿದ ಕೃತಿಯನ್ನು"ಅಗರಿ ಪ್ರತಿ"ಯೆಂದೂ ಪ್ರಸಿದ್ದಿ ಪಡೆದಿವೆ . ಅಗರಿಯವರು ಬರೆದ ಪ್ರಸಂಗವು ಗೇಯಗುಣ ಸಂಪನ್ನವೂ ಅತ್ಯಂತ ಸರಳವೂ ಆಗಿರುವ ಕಾರಣ ಬಹುತೇಕ ಎಲ್ಲ ಕಲಾವಿದರೂ ಪ್ರತಿಯನ್ನು ಅನುಸರಿಸುತ್ತಿದ್ದು ಅದರಲ್ಲಿನ ಪದ್ಯಗಳು ಪ್ರೇಕ್ಷಕರಿಗೂ ಬಾಯಿಪಾಠಬರುವಷ್ಟು ಪ್ರಖ್ಯಾತವಾಗಿದೆ. ( ಜಯತು ಜಯತು ಆದಿ ಮಾಯೆ ...., ಏಳಿರೇಳಿರಿ ಹರಿ ಹರಾದ್ಯರು , ವೀಣೆಯ ಪಿಡಿದಿರ್ಪ ವಾಣಿಯೀ ಪರಿಯಿಂದ , ದನುಜೇಶ ಕೇಳೆನ್ನ ಮಾತಾ , ಚಂಡ ಮುಂಡರ ಶಿರವ ಚೆಂಡನಾಡಿದ ವಾರ್ತೆ ... ಮುಂತಾದ ಪದ್ಯಗಳು ಅಗರಿಪ್ರತಿಯವು )
ಹಿರಿಯ ಬಲಿಪರ ಪ್ರತಿಯು ಕ್ಲಿಷ್ಟಕರ ಪದ್ಯಗಳನ್ನು ಒಳಗೊಂಡರೂ ಗೇಯಗುಣ ಸಂಪನ್ನವಾಗಿದ್ದು ಕಟೀಲು ಮೇಳದ ಎರಡನೇತಂಡದಲ್ಲಿ ( ಬಲಿಪರ ಮೇಳ ) ಇತ್ತೀಚಿನ ಕೆಲವು ವರ್ಷಗಳ ಹಿಂದೆಯವರೆಗೂ ಪೂರ್ಣ ಪ್ರಮಾಣದಲ್ಲಿ ಪ್ರದರ್ಶನವಾಗುತ್ತಿತ್ತು . (ಸಿಕ್ಕಿದಿರೆನ್ನಯ ಕೈಗೆ .... , ಓರ್ವನೇ ಮಲಗಿರಲು , ತೂಗಿದಳುಯ್ಯಲೆಯ , ಕಂಡನಾಗ ಚೆಲುವೆಯ .., ನಿದ್ದೆಯಲಿ ಮೈಮರೆತ ದಾನವ ..., ಏನೆಂಬೆ ದೈವಗತಿ ಮಾನಿನಿಯ ದೆಸೆಯಿಂದ ... ಮುಂತಾದ ಪದ್ಯಗಳು ಬಲಿಪ ಪ್ರತಿಯವು.) ಯುವ ಭಾಗವತರೊಬ್ಬರು ಬಲಿಪರ ಹಿರಿತನವನ್ನು ಧಿಕ್ಕರಿಸಿ ಕಟೀಲಿನ ಎರಡನೇ ಮೇಳದ ಪ್ರಧಾನ ಭಾಗವತರಾದ ಮೇಲೆ ಬಲಿಪ ಪ್ರತಿಯನ್ನು ರಂಗದಿಂದ ನಿವೃತ್ತಿಗೊಳಿಸುವ ಪ್ರಯತ್ನದಲ್ಲಿ ತೊಡಗಿರುವುದು ವಿಷಾದನೀಯ ಹಾಗೂ ಹೇಯಕರ. ಮೇಲೆ ಹೇಳಿದಎರಡೂ ಪ್ರತಿಗಳು ಒಂದು ರಾತ್ರೆಯಲ್ಲಿ ಆಡಿ ಮುಗಿಸಬಹುದಾದ ರಚನೆಗಳು.



ಹಿಂದೆ ನಮ್ಮ ಪೂರ್ವಿಕರು ದೇವಿ ಮಹಾತ್ಮೆಯನ್ನು ಮೂರು ದಿನ , ಐದು ದಿನ , ಏಳುದಿನ , ಒಂಭತ್ತು ದಿನ ಹೀಗೆಲ್ಲ ವಿಭಾಗಿಸಿ ಆಡುತ್ತಿದ್ದರಂತೆ . ಆದರೆ ಇದಕ್ಕೆ ಬೇಕಾಗುವ ಪ್ರಸಂಗ ಪದ್ಯಗಳನ್ನು ಆಶು ಕವಿಗಳಾದ ಅವರು ರಂಗದಲ್ಲೇ ರಚಿಸಿ ಆಡಿಸುತ್ತಿದ್ದು ಈಗ ಪದ್ಯಗಳು ಲಭ್ಯವಿಲ್ಲ . ನಮಗೆ ಹಿರಿಯರಿಂದ ತಿಳಿಯುವಂತೆ ಅಗರಿ ಭಾಗವತರು ,ಅಜ್ಜ ಬಲಿಪರು ಇಂಥ ಸಾಹಸ ಮಾಡಿದ್ದುತಿಳಿದು ಬರುತ್ತದೆ.



ಪ್ರಸ್ತುತ ಬಲಿಪರು ಬರೆದ ಮಹಾಪ್ರಸಂಗದಲ್ಲಿ ಶ್ರೀದೇವಿ ಭಾಗವತದ ಕಥೆಯನ್ನು ಆಧರಿಸಿ ಶ್ರೀ ಬಲಿಪರು ಐದು ಕಥಾನಕಗಳಾಗಿ ವಿಂಗಡಿಸಿ ಮೊದಲನೇ ದಿನ ಸುರಥ ವೈಶ್ಯರ ಕಥೆ , ಎರಡನೇ ದಿನ ಮಧುಕೈಟಭರ ವಧೆ - ಶಂಖ ದುರ್ಗರಪರಾಭವ , ಮೂರನೇ ದಿನ ರಂಭ-ಕರಂಭರ ವಧೆ , ನಾಲ್ಕನೆ ದಿನ ಮಹಿಷ ವಧೆ ಹಾಗೂ ಐದನೇ ದಿನ ಶುಂಭ -ನಿಶುಂಭರವಧೆಗಳೆಂಬ ಪ್ರಸಂಗ ಪದ್ಯಗಳನ್ನು ರಚಿಸಿದ್ದಾರೆ . ಓದುಗರಿಗೆ ಹಾಗೂ ಕಲಾವಿದರಿಗೆ ಅನುಕೂಲವಾಗಲೆಂದು ಪ್ರತಿ ಪ್ರಸಂಗದ ಆರಂಭದಲ್ಲಿ ಕಥಾ ಸಾರಾಂಶವನ್ನು ನೀಡಿದ್ದು ಪೂರ್ಣ ಕಥೆಯ ಅರಿವು ಕಲಾವಿದರಿಗೆ ಉಂಟಾಗಲು ಸಹಕಾರಿಯಾಗಿದೆ . ತಮ್ಮ ದೀರ್ಘ ಕಾಲದ ರಂಗಾನುಭಾವದಿಂದ ಪ್ರಸಂಗ ರಚಿಸಿದ ಕಾರಣ ಬಹುತೇಕ ಎಲ್ಲ ರಾಗಗಳ , ಎಲ್ಲ ತಾಳಗಳ ಪದ್ಯಗಳನ್ನು ಸಮಯೋಚಿತವಾಗಿ ಹದವರಿತು ಬಳಸಿರುವುದರಿಂದ ರಂಗ ಪ್ರಯೋಗದಲ್ಲಿ ಆಟವು ಕಳೆಗಟ್ಟಲು ಅನುಕೂಲವಾಗಿದೆ.
ಇಡೀ ಪ್ರಸಂಗವನ್ನು ಬರೆಯಲು ಶ್ರೀಬಲಿಪರು ಆರು ತಿಂಗಳಿಗೂ ಮಿಕ್ಕಿ ಸಮಯವನ್ನು ವಿನಿಯೋಗಿಸಿದ್ದು , ಹಸ್ತ ಪ್ರತಿಯ ಕರಡು ತಿದ್ದುವಿಕೆಯನ್ನು ಹಾಗೂ ಶುದ್ಧ ಪ್ರತಿಯನ್ನು ಬರೆದು ಕೊಟ್ಟವರು ಮಂಗಳೂರಿನ ಶ್ರೀ ಎಸ್.ನಾರಾಯಣರು . ಶ್ರೀಯುತರುಹಿರಿಯ ಬಲಿಪರ ಪ್ರಸಂಗ ಸಂಪುಟ ಮುದ್ರಿತವಾಗುವ ಸಮಯದಲ್ಲೂ ಅಂದವಾದ ಹಸ್ತ ಪ್ರತಿಯನ್ನು ಮಾಡಿ ಕೊಟ್ಟಿರುವುದು ಅವರಬಲಿಪರ ಮೇಲಿನ ಅಭಿಮಾನಕ್ಕೆ ಸಾಕ್ಷಿ .


ಊರಿಗೆ ತೆರಳಿದ್ದಾಗಲೆಲ್ಲ ಹಿರಿಯರಾದ
ಬಲಿಪರನ್ನು ಮಾತಾಡಿಸಿಕೊಂಡು ಬರುವುದು ನನ್ನ ಕ್ರಮ . ನಮ್ಮ ಮನೆಯಿಂದ ಬಲಿಪರಲ್ಲಿಗೆ ಮೈಲಿ ದೂರ . ನಮ್ಮ ತಂದೆಯವರಾದ ಎನ್ .ಎಚ್. ರಾಮಕೃಷ್ಣ ಭಟ್ಟರು ಬಲಿಪರ ಕಟ್ಟಾ ಅಭಿಮಾನಿಗಳಲ್ಲಿ ಒಬ್ಬರು. ಒಂದು ದಿನ ಅವರಲ್ಲಿ ಹೋಗಿದ್ದಾಗ ಐದು ದಿನದ ಪ್ರಸಂಗ ಬರೆಯುತ್ತಿರುವ ಬಗ್ಗೆ ಪ್ರಸ್ತಾವಿಸಿದರು . "ಈ ಪ್ರಸಂಗವನ್ನು ನೀವು ಪ್ರಿಂಟ್ ಮಾಡಿಸಿ , ನಿಮ್ಮ ಮನೆಯಲ್ಲೇ ನಿಮ್ಮ ತಂದೆಯವರ ಸಂಸ್ಮರಣೆ ದಿವಸ ಬಿಡುಗಡೆ ಮಾಡುವ " ಎಂದು ಬಲಿಪರು ಹೇಳಿದಾಗ ನಗೆ ಪರಮಾನಂದವಾಯಿತು. ಚಿಕ್ಕಂದಿನಿಂದ ಬಲಿಪರ ಹಾಡುಗಾರಿಕೆಯ ಸೆಳೆತಕ್ಕೆ ಒಳಗಾದವರಲ್ಲಿ ನಾನೊಬ್ಬನಾದುದರಿಂದ ಬಲಿಪರ ಜೀವಮಾನದ ಸಾಧನೆಯನ್ನು ಶಾಶ್ವತವಾಗಿ ದಾಖಲೀಕರಿಸಿ ಇಡುವ ಗುರುತರ ಜವಾಬ್ದಾರಿಯನ್ನು ಹಿರಿಯರಾದ ಬಲಿಪರು ಸದುದ್ದೆಶಪೂರ್ವಕವಾಗಿ ನೀಡಿದಾಗ ಹಿಂದೆ ಮುಂದೆ ಯೋಚಿಸದೆ ಮುದ್ರಣಕಾರ್ಯಪ್ರವೃತ್ತನಾದೆ. ಸರಿ ಸುಮಾರು ಒಂದು ವರುಷಗಳ ಕಾಲ ಸಮಯ ಸಿಕ್ಕಾಗಲೆಲ್ಲ ಮಹಾಪ್ರಸಂಗವನ್ನು ಗಣಕೀಕರಿಸಿಒಂದೊಂದು ಕಥಾನಕ ಮುಗಿದಂತೆ ಪ್ರಿಂಟ್ ತೆಗೆದು ಕರಡು ತಿದ್ದಲು ಬಲಿಪರಲ್ಲಿಗೆ ಕಳುಹಿಸುತ್ತಾ ಬಂದೆ. ಬಲಿಪರು ಅತ್ಯಂತ ಶ್ರದ್ಧೆಯಿಂದ ಅದನ್ನು ತಿದ್ದುಪಡಿ ಮಾಡಿ ತಮ್ಮಲ್ಲಿ ಇರಿಸಿಕೊಂಡಿದ್ದು ನಾನು ಮನೆಗೆ ತೆರಳಿದ್ದಾಗ ಮರಳಿ ಅದನ್ನು ಸಂಗ್ರಹಿಸಿ ತಂದು ಪುನರ್ ತಿದ್ದುಪಡಿ ಮಾಡಿ ಇಟ್ಟುಕೊಂಡೆ . ಇಡೀ ಪ್ರಸಂಗ ಗಣಕೀಕರಿಸಿದಾಗ ಸುಮಾರು ೨೪೫ ಪುಟಗಳು ತುಂಬಿದವು . ಈ ಮಧ್ಯೆ ಶ್ರೀಬಲಿಪರ ಬಳಿ ಪ್ರಸಂಗಕ್ಕೊಂದು "ಮುನ್ನುಡಿ" ಆಗಬೇಕು ಎಂದಾಗ ಯಕ್ಷಗಾನ ಕಲಾವಿದ , ಸಂಶೋಧಕ ವಿಮರ್ಶಕರಾದ ಡಾ.ಪ್ರಭಾಕರ ಜೋಷಿ ಯವರು ಬರೆದು ಕೊಡುತ್ತಾರೆ ಎಂದು ತಿಳಿಸಿದರು. ಅಂತೆಯೇ ಮುನ್ನುಡಿ ತಯಾರಾಗಿ ನನ್ನ ಕೈಸೇರಿ ಅದೂ ಗಣಕ ಯಂತ್ರದೊಳಗೆ ಸೇರಿತು.
ಎಲ್ಲ ತಿದ್ದುಪಡಿ ಆದ ಮೇಲೆ ಮುದ್ರಣಕ್ಕಾಗಿ ಮುದ್ರಣಾಲಯವನ್ನು ಸಂಪರ್ಕಿಸಿದಾಗ ಮುದ್ರಣ ಖರ್ಚು ಬೃಹತ್ ಮೊತ್ತವಾಗುವ ಬಗ್ಗೆ ಪೂರ್ವಸೂಚನೆ ದೊರೆಯಿತು . ಅಲ್ಲಿಗೆ ಕಡಿಮೆ ಆದಾಯದ ವೃತ್ತಿ ಪಂಗಡಕ್ಕೆ ಸೇರಿದ ನಾನು ಶ್ರೀಬಲಿಪರ ಈ ಜೀವಮಾನದ ಸಾಧನೆಯ ಕೃತಿ ಬಿಡುಗಡೆಯ ಕನಸನ್ನು ಕೈಗೂಡಿಸಬಲ್ಲೆನೆ ? ಎಂಬ ಸಂಶಯ ಮನದಲ್ಲಿ ಮನೆ ಮಾಡಿತು. ಆತ್ಮಾಭಿಮಾನ ಹಿಂದೇಟು ಹಾಕಿದರೂ ನೇರವಾಗಿ ಆತ್ಮೀಯ ಮಿತ್ರರಾದ ಚೆಮ್ಬಾರ್ಪು ಭಾವನಲ್ಲೂ , ನಮಗೆಲ್ಲ ಅನುಭವದಲ್ಲಿ ಹಿರಿಯಣ್ಣನಂತಿರುವ ಪೈವಳಿಕೆ ರಾಜಣ್ಣನವರಲ್ಲಿ ಹಾಗೂ ಅಶೋಕಣ್ಣನವರಲ್ಲಿ ಬಲಿಪರ ಮಹಾಪ್ರಸಂಗದ ಮುದ್ರಣ ಕುರಿತು ವಿಚಾರ ವಿನಿಮಯ ಮಾಡಿದಾಗ ಮಿತ್ರರೆಲ್ಲರೂ ಸೇರಿ ಮುದ್ರಣಕ್ಕೆ ಸಹಕಾರ ನೀಡುವುದೆಂಬ ನಿರ್ಣಯಕ್ಕೆ ಬರಲಾಯಿತು . ಅಂತೆಯೇ ನನ್ನ ಇತರ ಮಿತ್ರರಿಗೂ ವಿಚಾರ ತಿಳಿಸಿದಾಗ ಒಬ್ಬರು " ನಿನಗೆ ಮರುಳಲ್ಲದ ? ಆಟ ನೋಡಲೇ ಜನ ಈಗ ಹೊವ್ತವಿಲ್ಲೇ . ಇನ್ನು ನಿನ್ನ ಪ್ರಸಂಗ ಪುಸ್ತಕ ಆರು ತೆಕ್ಕೊಳ್ತವು ? " ಎಂದು ನೇರವಾಗಿ ಮುಖಕ್ಕೆ ಮಂಗಳಾರತಿ ಮಾಡಿ ಬಿಟ್ಟರು. ಅವರವರ ಅಭಿಪ್ರಾಯ ಅವರವರಿಗೆ ಎಂದು ಮರುಮಾತನಾಡದೆ ಉಳಿದ ಮಿತ್ರರೆಲ್ಲರಲ್ಲಿ ವಿಚಾರ ತಿಳಿಸಿದಾಗ ಸ್ವಯಂಸ್ಪೂರ್ತಿಯಿಂದ ಎಲ್ಲರೂ ಯಥಾಸಾಧ್ಯ ಸಹಕರಿಸಿ ವಾರದೊಳಗಾಗಿ ಮುದ್ರಣ ವೆಚ್ಚ ನನ್ನ ಉಳಿತಾಯ ಖಾತೆಗೆ ಜಮೆಯಾಯಿತು.

ಏನಿದ್ದರೂ ಒಳ್ಳೆಯ ಕೆಲಸಕ್ಕೆ ಹೊರಟಾಗ ಎಲ್ಲರ ಸಹಕಾರ ಸಹಾಯವಿದ್ದೇ ಇರುತ್ತದೆ ಎಂಬುದು ದೃಢವಾಯಿತು .
ಈ ಮಧ್ಯೆ ಸೆಮೆಸ್ಟರ್ ಕೆಲಸದ ಒತ್ತಡ ಹೆಚ್ಚಾಗಿ ಸುಮಾರು ಒಂದು ತಿಂಗಳು ಪ್ರಸಂಗವು ಗಣಕಯಂತ್ರದೊಳಗೆ ಬೆಚ್ಚಗೆ ಮಲಗಿತು .
ಮತ್ತೆ ಎಚ್ಚೆತ್ತು ಮುದ್ರಣಾಲಯಕ್ಕೆ ಹೋಗಿ ದರ ಪರಿಶೀಲನೆ ಹಾಗೂ ವ್ಯವಹಾರ ಕುದುರಿಸುವ ಕೆಲಸಕ್ಕೆ ವಾರಗಳ ಕಾಲ ಸಂದಿತು .
ಈ ಮಧ್ಯೆ ಬಲಿಪರು "ಇದು ದಾಸ್ತಾನಿಗೆ ಇರುವ ಪುಸ್ತಕ . ಆದ ಕಾರಣ ಪುಸ್ತಕ ಸ್ವಲ್ಪ ಚಂದ ಮಾಡಿ ಆಯ್ತಾ ? " ಎಂದು ಹೇಳಿದರು. ಮರಳಿ ತುಮಕೂರಿಗೆ ಬಂದ ನಾನು ಮುಖಪುಟ ವಿನ್ಯಾಸದ ಬಗ್ಗೆ ಚಿಂತಿಸತೊಡಗಿದೆ.

ಮುಖ ಪುಟ ವರ್ಣರಂಜಿತವಾಗಿ ಮಾಡಬೇಕೆಂಬ ಕಲ್ಪನೆಯಿಂದ ದೇವಿ ಮಹಾತ್ಮೆಯ ಫೋಟೋಗಳಿಗಾಗಿ ಹುಡುಕಾಟ ನಡೆಸಿದೆ . ಸಾಮಾನ್ಯವಾಗಿ ಎಲ್ಲ ಆಟಗಳಿಗೆ ಹಾಜರಾತಿ ಹಾಕುವ ನನ್ನ ಮಿತ್ರರಾದ ಉಲ್ಲಾಸ , ಲಕ್ಷ್ಮಿನಾರಾಯಣ ( ಲ. ನ .) ಹಾಗೂ ಪಡೀಲು ಶಿವಣ್ಣ ನಲ್ಲಿ ಫೋಟೋಗಳಿಗೆ ಬೇಡಿಕೆ ಇಟ್ಟಾಗ ಅವರು ತಮ್ಮ ತಮ್ಮ ಬತ್ತಳಿಕೆಯಲ್ಲಿದ್ದ ಫೋಟೋಗಳನ್ನು ಮಿಂಚಂಚೆ ಮೂಲಕ ಕಳುಹಿಸಿ ಕೊಟ್ಟರು . ಶಿವಣ್ಣ ಮಂಗಳೂರಿನಲ್ಲಿ ತೆಗೆದ ಶ್ರೀದೇವಿ ಫೋಟೋ ಒಮ್ಮತದಿಂದ ಮುಖ ಪುಟಕ್ಕೆ ಆಯ್ಕೆಯಾಯಿತು . ಇನ್ನು ನಮಗೆ ಹಿಂದಿನ ರಕ್ಷಾಪುಟಕ್ಕೆ ಮಹಿಷಾಸುರನ ಅಗತ್ಯವಿತ್ತು . ಯಾರಲ್ಲೂ ಸರಿಯಾದ ಮಹಿಷಾಸುರ ಸಿಗದಿದ್ದಾಗ ಮಿತ್ರ ಉಲ್ಲಾಸ ಮದ್ಯರಾತ್ರಿ ಮಂಗಳೂರಿನ ಡಾ . ಮನೋಹರ ಉಪಾಧ್ಯಾಯರಿಂದ ಮಹಿಷಾಸುರನನ್ನು ಸಂಗ್ರಹಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದ. ಆ ರಾತ್ರಿಯೇ " ದೇವಿಯ ಕೃಪೆ ಏನೆಂದು ಜೀ ಮೇಲ್ ನೋಡಿದವರಿಗೆ ತಿಳಿಯುತ್ತದೆ " ಎಂಬ ಸಂದೇಶ ನನ್ನ ಚರವಾಣಿಗೆ ೨.೧೯ ನಿಮಿಷಕ್ಕೆ ಬಂದಾಗ ಮಹಿಷಾಸುರ ಬಂದೇ ಬಿಟ್ಟ ಎಂಬಷ್ಟು ನೆಮ್ಮದಿಯಾಯಿತು. ಡಾ. ಜೋಷಿಯವರು ಬರೆದ ಮುನ್ನುಡಿಯ ತುಣುಕನ್ನು ಬಲಿಪರ ಭಾವಚಿತ್ರ ಸಮೇತ ಹಿಂದಿನ ರಕ್ಷಾಪುಟಕ್ಕೆ ಹಾಗೂ ಮಹಿಷಾಸುರ ಕೆಳಭಾಗಕ್ಕೆ ಹಾಗೂ ಮುಖಪುಟಕ್ಕೆ ಶ್ರೀದೇವಿ ಫೋಟೋ ಎಂದು ಅಂತಿಮಗೊಳಿಸಿ ಪುಟ ವಿನ್ಯಾಸಕಾರ ಶ್ರೀಯುತ ದಿನಕರ್ ರವರ ಬಳಿಗೆ ನಡೆದೆ. ನಿರ್ದೇಶಕರ ಕಚೇರಿಯಲ್ಲಿ ಬಿಡುವಿಲ್ಲದ ಕೆಲಸದಲ್ಲಿ ತಾವು ತೊಡಗಿದ್ದರೂ ಸಂಜೆಯ ಸಮಯ ಬಿಸಿ ಬಿಸಿ ಚಹಾ ಕುಡಿದು " ನೋಡುವ ಬನ್ನಿ ಭಟ್ರೇ " ಎಂದು ತಮ್ಮ ಬಳಿ ಕೂರಿಸಿ ನಾಲ್ಕು ವೈವಿಧ್ಯಮಯ ರಕ್ಷಾಕವಚ ವಿನ್ಯಾಸಗೊಳಿಸಿ ನನ್ನ ಕೈಗಿತ್ತರು .

ನಾಲ್ಕರಲ್ಲಿ ಯಾವುದು ಉತ್ತಮ? ಎಂಬುದು ಮುಂದಿನ ಪ್ರಶ್ನೆಯಾದಾಗ ಕೇಶವಣ್ಣ ಹಾಗೂ ಆಪ್ತ ಮಿತ್ರ ರಮೇಶ ಮೊದಲನೇ ವಿನ್ಯಾಸಕ್ಕೆ ನಾಲ್ಕನೇ ವಿನ್ಯಾಸದ ಬರೆಗಳನ್ನು ಸೇರಿಸಿದರೆ ಒಳ್ಳೆಯದು ಎಂದು ತೀರ್ಮಾನವಿತ್ತರು. ಚೆಮ್ಬಾರ್ಪು ಭಾವ ಹಾಗೂ ರಾಜಣ್ಣ ನೇರಳೆ- ನೀಲಿ ಬಣ್ಣವೇ ಸೂಕ್ತ ಎಂದು ಅಭಿಮತವಿತ್ತರು . ಅಲ್ಲಿಗೆ ಅದೇ ವಿನ್ಯಾಸ ಅಂತಿಮಗೊಳಿಸಲ್ಪಪಟ್ಟಿತು .

ಕೊನೆಗೆ ಮುಖ ಪುಟ ಮುದ್ರಣಕ್ಕೆ ಬೆಂಗಳೂರಿಗೆ ಹೊರಡುವ ಮುನ್ನ ಕೇಶವಣ್ಣನವರಲ್ಲಿ ನ್ಯಾಯ ಬೆಲೆಯ ಮುದ್ರಣಾಲಯ ಹುಡುಕಿಡುವ ಬಗ್ಗೆ ತಿಳಿಸಿದೆ . ಅದಾಗಲೇ ಹನುಮಂತನಗರದಲ್ಲಿ ಇರುವ ಮುದ್ರಣಾಲಯಕ್ಕೆ ಹಾಗೂ ಡಿಜಿಗೋ ಮುದ್ರಣದವರಲ್ಲಿ ಬೆಲೆ ವಿಚಾರಿಸಿ ನಮ್ಮ ಅವಶ್ಯಕತೆಗೆ ಹನುಮಂತನಗರದಲ್ಲಿ ಇರುವ ಮುದ್ರಣಾಲಯ ಸೂಕ್ತವೆಂದು ಕೇಶವಣ್ಣ ನಿರ್ಧರಿಸಿ, ಸೂಚನೆ ಇತ್ತಂತೆ ಅವರನ್ನೊಡಗೂಡಿ ಮುದ್ರಿಸಿ ಊರಿಗೆ ಸಾಗಿಸಿ ಒಳಪುಟಗಳನ್ನು ಮುದ್ರಿಸುವ ತೀರ್ಥಂಕರ ಪ್ರಿಂಟರ್ಸ್ ಮಾಲಿಕ ರಾಜೇಂದ್ರರಿಗೆ ತಲುಪಿಸಿದೆ .ಅವರು ಬೇರೆ ಬೇರೆ ತರಹದ ಪುಸ್ತಕ ಕೆಲಸವನ್ನು ತಮ್ಮ ಮುದ್ರಣಾಲಯದಲ್ಲಿ ಮಾಡುತ್ತಿದ್ದು , ನಮ್ಮದು ದೊಡ್ಡ ಪುಸ್ತಕವೆಂದು ನಿಧಾನಿಸಿದರು . ಪದೇ ಪದೇ ಫೋನಾಯಿಸಿ ಅವರ ಬೆನ್ನು ಹಿಡಿದು ಕೆಲಸ ಮಾಡಿಸುವ ಕೆಲಸ ನನ್ನ ಅಣ್ಣ ಶ್ರೀ ಉದನೇಶ್ವರ ಭಟ್ಟರು ಮಾಡಿದ್ದು , ಕೊನೆಗೂ ಅಚ್ಚಾಗಿ ಪುಸ್ತಕ ಹೊರಬಂದಾಗ "ಗಜ ಪ್ರಸವ" ದ ಅನುಭವ ನಮಗಾಯ್ತು !

ಈ ಮಧ್ಯೆ ಬಲಿಪರು ನಾಲ್ಕಾರು ಬಾರಿ ಫೋನಾಯಿಸಿ ಪುಸ್ತಕ ತಯಾರಾಯಿತಾ ? ಅಂತ ಉತ್ಸುಕರಾಗಿ ವಿಚಾರಿಸುತ್ತಾ ಇದ್ದು ಪುಸ್ತಕ ಪ್ರಕಟಣೆಯ ಪ್ರತಿ ಹಂತವನ್ನು ಅವರಿಗೆ ವಿವರಿಸುತ್ತ ಕೊನೆಗೊಂದು ದಿನ ಪುಸ್ತಕ ತಯಾರಾದಾಗ ೪ ಪ್ರತಿಗಳನ್ನು ತೆಗೆದುಕೊಂಡು ಅವರ ಮನೆಗೆ ತೆರಳಿ ಬಲಿಪರ ಕೈಗಿತ್ತಾಗ ಬಹಳ ಸಂತಸಪಟ್ಟು " ಕೊನೆಗೂ ಆಯ್ತಲ್ಲ . ಇನ್ನು ಹೆದರಿಕೆಯಿಲ್ಲ " ಎಂದರು .

ಇವೆಲ್ಲದರ ನಡುವೆ ಅವರಿಗೆ ಉಡುಪಿ ಬಳಿ ಕಟಪಾಡಿಯಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಸನ್ಮಾನ ಕಾರ್ಯಕ್ರಮವಿತ್ತು .ಅಲ್ಲಿ ಶ್ರೀಬಲಿಪರ ಅಭಿನಂದನಾ ಭಾಷಣ ಮಾಡುತ್ತಾ ಡಾ.ಪ್ರಭಾಕರ ಜೋಷಿಯವರು "ಬಲಿಪರು ೫ ದಿನದ ದೇವಿ ಮಹಾತ್ಮೆ ಪ್ರಸಂಗ ರಚಿಸಿದ್ದು ಅದು ಮುದ್ರಣ ಹಂತದಲ್ಲಿದೆ " ಎಂದು ಹೇಳಿದ್ದನ್ನು ಕೇಳಿಸಿಕೊಂಡ ಶೀರೂರು ಮಠದ ಶ್ರೀಪಾದಂಗಳವರು"ಅದನ್ನು ತನ್ನಿ ಉಡುಪಿ ರಾಜಾಂಗಣದಲ್ಲಿ ಬಿಡುಗಡೆ ಮಾಡೋಣ ಮಾತ್ರವಲ್ಲ ನಾನು ೫ ದಿನದ ಆಟ ಅಡಿಸ್ತೇನೆ" ಎಂದು ತುಂಬಿದ ಸಭೆಯಲ್ಲಿ ಘೋಷಿಸಿ ಬಿಟ್ಟರು . ಬಲಿಪರಿಗೆ ೫ ದಿನದ ಆಟ ಆಡಿಸುತ್ತಾರಲ್ಲಾ ಎಂದು ಸಂತಸ ಒಂದೆಡೆಯಾದರೆ ಬಿಡುಗಡೆ ಮಾಡುದು ನಮ್ಮ ಮನೆಯಲ್ಲಿ ಎಂದು ಮೊದಲೇ ನಿಶ್ಚಯಿಸಿ ಆಗಿದೆಯಲ್ಲ ? ಎಂಬ ಮಾನಸಿಕ ತುಮುಲ ಇನ್ನೊಂದೆಡೆ !

ಆ ದಿನ ಮನೆಗೆ ಬಂದವರೇ ಬಲಿಪರು ನೇರವಾಗಿ ನನಗೆ ಫೋನಾಯಿಸಿ ಸ್ವಾಮೀಜಿ ಹೀಗೆ ಹೇಳಿದ್ದಾರಲ್ಲ? ಏನು ಮಾಡುದು ಈಗ ? ಅಂತ ಕೇಳಿದರು. ನಾವು ಹೊರಟ ಉದ್ದೇಶ ಮತ್ತು ಬಲಿಪರು ಸಂಕಲ್ಪಿಸಿದ್ದು ನಮ್ಮ ಮನೆಯಲ್ಲಿ ಬಿಡುಗಡೆ ಮಾಡಲು. ಒಂದು ಕ್ಷಣ ನನಗೂ ಏನು ಮಾಡುದು ? ಎಂಬ ಗೊಂದಲ ಉಂಟಾಯಿತು. ಪ್ರಸಂಗ ಪುಸ್ತಕ ಬಿಡುಗಡೆ ನಮ್ಮ ಮನೆಯಲ್ಲಿ ಮಾಡಿದರೆ ಹೆಚ್ಚೆಂದರೂ ೧೦೦ ಮಂದಿ ಪ್ರೇಕ್ಷಕರಿದಾರಷ್ಟೇ.. ಉಡುಪಿ ರಾಜಾಂಗಣದಲ್ಲಾದರೆ ಕನಿಷ್ಠ ೫೦೦ ಜನವಾದರೂ ಇದ್ದಾರು .ಇದರಿಂದ ಪ್ರಸಂಗಕ್ಕೆ ಪ್ರಚಾರ ಹೆಚ್ಚು ಸಿಕ್ಕೇ ಸಿಗುತ್ತದೆ ಎಂಬುದು ಸಾಮಾನ್ಯ ಲೆಕ್ಕಾಚಾರ . ಬಲಿಪರ ಕಟ್ಟಾ ಅಭಿಮಾನಿಯಾಗಿದ್ದ ನಮ್ಮ ತೀರ್ಥರೂಪರ ಸ್ಮರಣಾರ್ಥ ನಡೆಸುವ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಬೇಕೆಂಬುದು ನಮ್ಮ ಸದಾಶಯ. ಹೇಗಿದ್ದರೂ ಪ್ರಸಂಗವನ್ನು ಪ್ರಕಟಿಸುವ ಅಂತಿಮ ಉದ್ದೇಶವೇ ಜನರಿಗೆ ಅದನ್ನು ತಲುಪಿಸಿ ಪ್ರಚುರಪಡಿಸಬೇಕೆಂಬುದು ಆಗಿರುವುದರಿಂದ, ನನ್ನ ಅಣ್ಣ ಉದನೇಶ್ವರ ಭಟ್ಟರು ನಮ್ಮ ಮನೆಯಲ್ಲಿ ಕೃತಿ ಬಿಡುಗಡೆಯೆಂದೂ ಉಡುಪಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಯೆಂದೂ ಎರಡು ಕಾರ್ಯಕ್ರಮ ಮಾಡೋಣ ಎಂದು ಹೇಳಿ ನಮ್ಮ ಸಂಕಟವನ್ನು ತಿಳಿಗೊಳಿಸಿದರು! ಕೂಡಲೇ ಬಲಿಪರಿಗೆ ಫೋನಾಯಿಸಿ ಹೀಗೆ ಮಾಡೋಣ ಆಗ ಅವರಿಗೂ ಬೇಸರವಾಗಲಾರದು ಎಂದೆ . ಬಲಿಪರಿಗೂ ಸಮಾಧಾನವಾಯಿತು .






ಪುಸ್ತಕವೇನೋ ತಯಾರಾಗಿ ಕೈಸೇರಿತು. ಈಗ ಬಿಡುಗಡೆಯ ದಿನ ನಿರ್ಣಯ ಮಾಡಬೇಕಿತ್ತು. ಮೊದಲೇ ನಿರ್ಧರಿಸಿದಂತೆ ಹೆಚ್ಚು ಜನ ಉದ್ದ ಉದ್ದ ಭಾಷಣ ಮಾಡುವುದು ಬೇಡವೆಂದು ಸರಳ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ ಗಮನ ನೀಡಲಾಯಿತು. ಎಲ್ಲರ ಬರುವಿಕೆಯ ಅನುಕೂಲ ನೋಡಿಕೊಂಡು ಇದೇ ಏಪ್ರಿಲ್ ೧೮ನೆ ಭಾನುವಾರ ನಮ್ಮ ವೇಣೂರಿನ ಕಜೆ ಮನೆಯಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಸುವುದೆಂದು ನಿಶ್ಚಯಿಸಲಾಯಿತು .ಅಧ್ಯಕ್ಷ ಸ್ಥಾನಕ್ಕೆ ವಿಮರ್ಶಕ ಹಾಗೂ ಮುನ್ನುಡಿ ಬರೆದ ಡಾ. ಜೋಶಿಯವರೂ , ಪ್ರಸಂಗಕರ್ತ ಬಲಿಪರೂ , ವೇಣೂರಿನ ನಮ್ಮ ಯಕ್ಷಗಾನ ಸಂಘದ ಅಧ್ಯಕ್ಷರಾದ ಶ್ರೀ.ಪಿ.ಮೋಹನ ರಾವ್ ಅವರು ನಮ್ಮಲ್ಲಿ ನಡೆಯುವ ಎಲ್ಲ ಯಕ್ಷಗಾನ ಕಾರ್ಯಕ್ರಮಕ್ಕೂ ಸೂತ್ರಧಾರರೂ ಅತ್ಯಂತ ಸ್ನೇಹಜೀವಿಯಾದ ಅವರನ್ನು ವೇದಿಕೆಯಲ್ಲಿ ಅಲಂಕರಿಸುವುದು ಎಂದು ನಿರ್ಧರಿಸಲಾಯಿತು. ಎಡೆಬಿಡದ ಕಾರ್ಯಕ್ರಮದ ನಡುವೆಯೂ ಈ ಪುಟ್ಟ ಸರಳ ಕಾರ್ಯಕ್ರಮಕ್ಕೆ ಬರಲೊಪ್ಪಿದ ಡಾ.ಜೋಷಿಯವರು ಮಧ್ಯೆ ಫೋನಾಯಿಸಿ ಈ ಕಾರ್ಯಕ್ರಮ ಬೇಕೋ ? ಉಡುಪಿಯಲ್ಲೇ ಮಾಡಿದರೆ ಸಾಕಿತ್ತಲ್ಲ ? ಎಂದರೂ "ಇಲ್ಲ " ನಮ್ಮಲ್ಲೇ ಮಾಡುದು ಮಾಡುದೇ ಎಂದು ಖಂಡಿತವಾಗಿ ಹೇಳಿದೆ .ಅದೇ ದಿನ ಬೇರೆ ಅನಿವಾರ್ಯ ಕಾರ್ಯಕ್ರಮ ಇದೆ ನನ್ನನ್ನು ೪ ಗಂಟೆಗೆ ಬಿ.ಸಿ.ರೋಡ್ ಗೆ ಹೋಗಲು ಅವಕಾಶ ಮಾಡಿಕೊಡಬೇಕೆಂಬ ಶರತ್ತಿನ ಮೇಲೆ ಸಂತಸದಿಂದ ಒಪ್ಪಿದ ಅವರು ೨.೩೦ಕ್ಕೆ ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮವನ್ನು ೨ ಗಂಟೆಗೆ ನಡೆಸಲು ಸೂಚಿಸಿದರು.

ಇದಕ್ಕೂ ಮೊದಲು ಕೃತಿ ಬಿಡುಗಡೆ ಬಳಿಕ ತಾಳಮದ್ದಲೆ ನಡೆಸುವುದೆಂದು ಯೋಚಿಸಿದ್ದೆವಾದರೂ ಅದೇ ಪ್ರಸಂಗದ ಆಯ್ದ ಪದ್ಯಗಳನ್ನು ಹಾಡಿಸುವುದು ಸೂಕ್ತವೆಂದು ಹಲವರು ಅಭಿಪ್ರಾಯಪಟ್ಟದ್ದರಿಂದ , ಮತ್ತು ಪ್ರಸಂಗದ ಪದ್ಯಗಳನ್ನು ಹೇಳಬೇಕಾದ ಕ್ರಮವನ್ನು ಪ್ರಸಂಗ ಕರ್ತರಿಂದಲೇ ಹಾಡಿಸಿದರೆ ಉತ್ತಮವೆಂಬ ನೆಲೆಯಿಂದ ಬಲಿಪ ತ್ರಯರಿಂದ ಆಯ್ದ ಹಾಡುಗಳ ಕಾರ್ಯಕ್ರಮವೆಂದು ನಿಶ್ಚಯಿಸಿದೆವು . ಅದಕ್ಕಾಗಿ ಬಲಿಪರಿಗೂ, ಅವರ ಚಿರಂಜೀವಿಗಳಾದ ಶ್ರೀ ಪ್ರಸಾದ ಬಲಿಪ ಮತ್ತು ಶ್ರೀ ಶಿವಶಂಕರ ಬಲಿಪರಿಗೆ ಯಕ್ಷ ಸಂಗೀತದ ಬಗ್ಗೆ ತಿಳಿಸಿದಾಗ ಅವರು ಸಂತೋಷದಿಂದ ಒಪ್ಪಿಕೊಂಡರು . ಹಿಮ್ಮೇಳ ಸಹಕಾರಕ್ಕೆ ಕುದ್ರೆಕ್ಕೊಡ್ಲು ರಾಮಮೂರ್ತಿ ಹಾಗೂ ಕೊಂಕಣಾಜೆ ಚಂದ್ರ ಶೇಖರಣ್ಣರನ್ನು ವಿನಂತಿಸಿಕೊಂಡು ಕಾರ್ಯಕ್ರಮದ ರೂಪುರೇಷೆಗಳನ್ನು ಅಂತಿಮಗೊಳಿಸಿದೆವು.
ಎಪ್ರಿಲ್ ೧೮ ರಂದು ಕಾರ್ಯಕ್ರಮದ ದಿನದಂದು ಸಮಯಕ್ಕೆ ಮೊದಲೇ ಎಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಸಮಯಕ್ಕೆ ಸರಿಯಾಗಿ ಆರಂಭಿಸಲು ಸಹಕರಿಸಿದರು. ಬೆಂಗಳೂರು ಮಿತ್ರರು , ಉಡುಪಿ ಮಿತ್ರರು ನೆರೆಕರೆಯ ಹಿತೈಷಿಗಳು ಎಲ್ಲರೂ ಸೇರಿ ಭೋಜನದ ಬಳಿಕ ಸರಿಯಾಗಿ ೨.೧೩ ನಿಮಿಷಕ್ಕೆ ನಿತಿನ್ ಗಣೇಶ ನ ವೈದಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭ , ಸ್ವಾಗತ, ಪುಸ್ತಕ ಬಿಡುಗಡೆ, ಡಾ. ಜೋಷಿಯವರ ಶುಭಾ೦ಸನೆ , ಪ್ರಸಂಗಕರ್ತರ ಮಾತು ಹಾಗೂ ವಂದನಾರ್ಪಣೆಯೊಂದಿಗೆ ಚುಟುಕಾಗಿ ಕಾರ್ಯಕ್ರಮ ಮುಗಿಸಿ ಬಳಿಕ ಯಕ್ಷ ಸಂಗೀತ ಬಲಿಪತ್ರಯರಿಂದ ಸಂಪನ್ನಗೊಂಡಿತು .











ಡಾ. ಜೋಷಿಯವರು ತಮ್ಮ ಭಾಷಣದಲ್ಲಿ ತಿಳಿಸಿದಂತೆ ಉಡುಪಿಯ ರಾಜಾಂಗಣದಲ್ಲಿ ಈ ಕೃತಿಯ ಮೊದಲ ಪ್ರಯೋಗ ಶ್ರೀ ಹೊಸನಗರ ಮೇಳದವರಿಂದ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟಿತು. ಆದರೆ ಉಡುಪಿಯಲ್ಲಿ ದೊಡ್ಡ ಮಟ್ಟಿನ ಸಭೆಯಲ್ಲಿ ಈ ಕೃತಿ ಬಿಡುಗಡೆಗೊಂಡು ಜನ ಪ್ರಚಾರ ಪಡೆದೀತೆಂಬ ನಮ್ಮ ಕಲ್ಪನೆ ಮಾತ್ರ ಕನಸಾಗಿಯೇ ಉಳಿಯಿತು !

ಬಲಿಪ ಭಾಗವತರು ತಮ್ಮ ಸುದೀರ್ಘ ಜೀವನಾನುಭವ ಹಾಗೂ ರಂಗಾನುಭಾವಗಳಿಂದ ಬರೆದ ಈ ಕೃತಿಯನ್ನು ಶಾಶ್ವತವಾಗಿ ಉಳಿಸಬೇಕಾದ ಗುರುತರ ಹೊಣೆಗಾರಿಕೆ ಯಕ್ಷಪ್ರಿಯರಾದ ನಿಮ್ಮ ನಮ್ಮೆಲ್ಲರ ಆದ್ಯ ಕರ್ತವ್ಯ. ಒಂದು ಮಹಾ ಕಾವ್ಯದಂತೆ ಒಂದು ಮಹಾಪ್ರಸಂಗವನ್ನು ಬಲಿಪರು ಬರೆದಿದ್ದು ಯಕ್ಷರಂಗದ ಅಪೂರ್ವ ದಾಖಲೆ ಇದು ಎಂದರೆ ಅತಿಶಯೋಕ್ತಿಯಲ್ಲ. ಕುವೆಂಪುರವರು ರಾಮಾಯಣ ದರ್ಶನಂ ಬರೆದಂತೆ, ಹಲವು ರಾಗ ತಾಳ ವೈವಿಧ್ಯತೆಯಿಂದ ಕೂಡಿದ ಒಂದು ಮಹಾ ಪ್ರಸಂಗವನ್ನು ಬಲಿಪರು ಬರೆದು ಸಮಕಾಲೀನ ಪ್ರಪಂಚದಲ್ಲಿ ತಮ್ಮ ವಿದ್ವತ್ತನ್ನು ಮೆರೆದಿದ್ದಾರೆ. ಸರಳ ಸಜ್ಜನಿಕೆಗಳ ಸಾರ್ವತ್ರಿಕ ಅಂಗೀಕಾರ ಹೊಂದಿದ ಬಹು ಅಪೂರ್ವ ಕಲಾವಿದ ಬಲಿಪರು ಮುಂದಿನ ಕಲಾವಿದರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಈ ಕೃತಿ ರಚಿಸಿದ್ದಾರೆ. ಇದನ್ನು ೫ ದಿನ , ೭ ದಿನ , ೧ ದಿನ ಅಥವಾ ಕಾಲಮಿತಿ ಪ್ರಯೋಗಕ್ಕೂ ಅಳವಡಿಸಿಕೊಳ್ಳಬಹುದಾದ ರೀತಿಯಲ್ಲಿ ರಚಿಸಿರುವುದರಿಂದ ಎಲ್ಲ ರೀತಿಯ ಯಕ್ಷ ಕಲಾಸಕ್ತರಿಗೆ ,ಹವ್ಯಾಸಿ ತಂಡದವರಿಗೆ , ಮಕ್ಕಳ ಯಕ್ಷಗಾನಕ್ಕೂ ಹಿತವಾಗಿ ಬಳಸಬಹುದಾಗಿದೆ.

ಐದು ದಿನದ ಈ ಕೃತಿಯು ಶಾಶ್ವತವಾಗಿ ಉಳಿಯಲಿ , ಅದನ್ನು ರಂಗದಲ್ಲಿ ಪ್ರಯೋಗಿಸಿ ಜನಪ್ರಿಯಗೊಳಿಸಿ ಯಕ್ಷರಸಿಕರೆಲ್ಲರೂ ಸವಿಯುವಂತೆ ಮಾಡಬೇಕಾದ ಹೊಣೆಗಾರಿಕೆ ಈಗಾಗಲೇ ಇರುವ ವೃತ್ತಿಪರ ಮೇಳಗಳು, ಹವ್ಯಾಸಿ ಕಲಾವಿದರು , ಮಕ್ಕಳ ಯಕ್ಷಗಾನ ತಂಡದವರು , ಹಾಗೂ ಸಂಘ ಸಂಸ್ಥೆ ಗಳ ಮೇಲಿದೆ. ಆ ಕಾರ್ಯದಲ್ಲಿ ನಾವೆಲ್ಲರೂ ಒಂದಾಗಿ ಸೇರೋಣ ಎನ್ನುವುದೇ ಈ ಲೇಖನದ ಉದ್ದೇಶ.

ನಿಮಗೇನನಿಸುತ್ತದೆ ?