Monday, June 30, 2008

ಚತುರ್ವೇದ ಸ೦ಹಿತಾ ಯಾಗ ...


ತುಮಕೂರಿನ ಬಳಿಯ ಗುಬ್ಬಿ ಎ೦ಬ ಊರು ವೀರಣ್ಣ ನವರಂಥ ಮಹಾನ್ ಕಲಾ ತಪಸ್ವಿಯನ್ನು ನಾಡಿಗೆ ಕೊಟ್ಟ ಸ್ಥಳ . ಇಲ್ಲಿಗೆ ಸಮೀಪದಲ್ಲಿ ಇಕ ಹಿಂದೆ ಸ್ಥಾಪಿತವಾದ "ಚಿದಂಬರಾಶ್ರಮ" ಪ್ರಕೃತಿಯ ಸುಂದರ ಮಡಿಲಲ್ಲಿ ಕಂಗೊಳಿಸುವ ಪುಟ್ಟ ಆಶ್ರಮ . ವಿದ್ಯಾಕಾಂಕ್ಷಿಗಳಾಗಿ ಬಂದ ಮಕ್ಕಳಿಗೆ ಸನಾತನೀಯವಾದ ಉತ್ತಮ ಸಂಸ್ಕಾರಯುತ ಶಿಕ್ಷಣವನ್ನು ಉಚಿತವಾಗಿ ನೀಡುತ್ತಾ ಬಂದಿದೆ. ಮೊನ್ನೆ ದೂರದರ್ಶನದಲ್ಲಿ ಈ ಆಶ್ರಮದ ಬಗ್ಗೆ ಒಂದು ಕಾರ್ಯಕ್ರಮ ಬಂದಿತ್ತು. ಇಲ್ಲಿ ಚತುರ್ವೇದ ಸಂಹಿತಾ ಯಾಗವು ನಡೆಯಲಿದ್ದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಇತ್ಯಾದಿ ವಿವರಣೆ ಸಿಕ್ಕಿದ ನನಗೆ ಸಹಜವಾಗಿ ಆ ಕಡೆ ಆಕರ್ಷಣೆ ಉಂಟಾದದ್ದು ನನ್ನ ಪ್ರೀತಿಯ "ಯಕ್ಷಗಾನ ತಾಳಮದ್ದಲೆ " ಬಲಿಪ ಪ್ರಸಾದ ಭಾಗವತರ ತಂಡದಿಂದ ನಡೆಸಿಕೊಡಲ್ಪಡುತ್ತದೆ ಎಂಬ ವಿಚಾರ ತಿಳಿದಾಗ !
ಜೂನ್ 28ನೆ ಶನಿವಾರ ಹಾಗೂ ೨೯ನೆ ರವಿವಾರ ಬಲಿಪ ಬಳಗದ ಯಕ್ಷಗಾನ ತಾಳಮದ್ದಲೆ ನೋಡಲು ಹೋದ ನನಗೆ ಆಶ್ರಮವನ್ನು ಪ್ರವೇಶಿಸುತ್ತಿದ್ದಂತೆ ಪೂಜ್ಯ ಭಾವನೆ ಉಂಟಾಯಿತು . ಯಾಗ ಶಾಲೆನಿರ್ಮಾಣ ಅದ್ಭುತವಾಗಿತ್ತು .

ನಾಲ್ಕು ವೇದಗಳ ಮಂತ್ರಗಳ ಸಹಿತ ನಡೆಯುತ್ತಿದ್ದ ಈ ಯಾಗದಲ್ಲಿ ಬಹಳ ಅಪೂರ್ವವಾದ ಸಾಮಗಾನ ಕೇಳಲು ಕರ್ಣಾನಂದವಾಗಿತ್ತು. ಬಳಿಕ ನಡೆದ ಅಷ್ಟಾವಧಾನ ಸೇವೆಯಲ್ಲಿ ಬಲಿಪ ಪ್ರಸಾದ ರ ಸ್ತುತಿಪದವಂತೂ ಬಲು ಸುಂದರವಾಗಿತ್ತು .
ಶೂರ್ಪನಖಾ ಮಾನಭಂಗ ಹಾಗೂ ಕೃಷ್ಣ ಸಂಧಾನ ತಳಮದ್ದಾಳೆ ೨ ದಿನಗಳಂದು ಕ್ರಮವಾಗಿ ನಡೆದವು . ಯಾಗದ ಪೂರ್ಣಾಹುತಿ ಇದೆ ಬರುವ ಜುಲೈ ೨ ರಂದು ನಡೆಯಲಿದ್ದು ಆಸಕ್ತರು ಭಾಗವಹಿಸಬಹುದು .
ಚಿದಂಬರಾಶ್ರಮದ ಬಗ್ಗೆ ತಿಳಿಯಲು http://www.chidambaraashrama.org/ ತಾಣವನ್ನು ನೋಡಿ .

Friday, June 27, 2008

ದಿವಾಣ ಶಿವಶಂಕರ ಭಟ್

ಧರ್ಮಸ್ಥಳ ಮೇಳದ ಕಲಾವಿದ ಶ್ರೀ ದಿವಾಣ ಶಿವಶಂಕರ ಭಟ್ ಈ ಸಲ ಮೇಳ ಬಿಡುವ ನಿರ್ಧಾರ ಮಾಡಿದ್ದು ಯಕ್ಷಗಾನ ಪ್ರಿಯರಿಗೊಂದು ಬೇಸರದ ವಿಚಾರವೇ . ಎಲ್ಲ ರೀತಿಯ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ ಇವರ ಅನುಪಸ್ಥಿತಿ ಯಸ್ಕ ಪ್ರಿಯರಿಗೆ ಮುಂದಿನ ತಿರುಗಾಟದಲ್ಲಿ ಧರ್ಮಸ್ಥಳ ಮೇಳದ ಆಟದಲ್ಲಿ ಅನುಭವಕ್ಕೆ ಬರಲಿದೆ .
ಅವರ ಒಂದು ಪ್ರವೇಶ ಇಲ್ಲಿ ನೋಡಬಹುದು .
http://www.youtube.com/watch?v=eHaIb0C60aQ

Friday, June 20, 2008

ಶಿಶು ಗೀತೆಗಳು ...

ಶಿಶು ಗೀತೆಗಳನ್ನು ರಚಿಸುವ ಕವಿಗಳಲ್ಲಿ ಗೋಪಾಲಕೃಷ್ಣ ಶಗ್ರಿತ್ತಾಯರು ಒಬ್ಬರು .
ಗೋಪಾಲಕೃಷ್ಣ ಶಗ್ರಿತ್ತಾಯರು ಹಲವಾರು ಶಿಶು ಗೀತೆಗಳನ್ನು ರಚಿಸಿ ಮಕ್ಕಳಿಗೆ ಹೇಳಿ ಕೊಟ್ಟವರು. ಅಧ್ಯಾಪಕನಾಗಿ ಹಲವು ವರುಷಗಳ ಅನುಭವದಿಂದ ರಚಿಸಿದ ಇವರ ಪದ್ಯಗಳು ಪ್ರಾಸಬದ್ಧವಾಗಿ ಮತ್ತು ಅರ್ಥಪೂರ್ಣವಾಗಿದ್ದು ಮಕ್ಕಳಿಗೆ ಹೇಳಲು ತುಂಬಾ ಸರಳವಾಗಿದೆ . ಅವರು ಮಕ್ಕಳ ಮೇಳವನ್ನು ಸ್ಥಾಪಿಸಿ ಹಲವು ಮಂದಿ ಮಕ್ಕಳಿಗೆ ಯಕ್ಷಗಾನ ಕಲಿಸಿ ಪ್ರದರ್ಶನಗಳನ್ನೂ ಕೊಡಿಸಿರುತ್ತಾರೆ. ಸಾಮಾನ್ಯವಾಗಿ ಎಲ್ಲ ಪ್ರಸಂಗಗಳಲ್ಲೂ ಬರುವ ಸನ್ನಿವೇಶವನ್ನು ಶಿಶು ಗೀತೆಯೊಂದರಲ್ಲಿ ಅವರು ಬರೆದುದು ಅನನ್ಯವಾಗಿದೆ .
ಈ ಪದ್ಯ ಶಗ್ರಿತ್ತಾಯರ "ಕಂದನ ಕವನಗಳು" ಪುಸ್ತಕದಲ್ಲಿ ಪ್ರಕಟವಾಗಿದೆ . ನಿಮಗೋಸ್ಕರ ಅದರ ಪೂರ್ಣ ಪಾಠ ಇಲ್ಲಿದೆ . ಓದಿ ಆನ೦ದಿಸಿ.......

ಮಕ್ಕಳ ಮೇಳ
ಮಕ್ಕಳ ಮೇಳ ಮದ್ದಲೆ ತಾಳ
ಚೆಂಡೆಯ ಬಡಿತ ಮಕ್ಕಳ ಕುಣಿತ
ಕೇಳಿಯ ಹೊಡೆದು ಜನರನು ಕರೆದು
ಬಣ್ಣದ ಮನೆಯಲಿ ಗಣಪತಿ ಪೂಜೆ
ಬಾಲಗೊಪಾಲರ ಸುಂದರ ವೇಷ
ಮೇಳದ ದೇವರ ಜೊತೆಗೆ ಪ್ರವೇಶ
ಸ್ಥ್ರೀವೇಶದ ಜತೆ ನಗೆಯವ ಬಂದ
ಥೈ ಧಿನ ಥಕಧಿನ ಕುಣಿಯುವ ಚಂದ
ಇಂದ್ರನ ಓಲಗ ದೂತನ ಲಾಗ
ಬಣ್ಣದ ವೇಷ ಬಲು ಸಂತೋಷ
ತಟ್ಟೆ ಕಿರೀಟದ ಆರ್ಭಟೆ ಕೇಳಿ
ರಕ್ಕಸ ರಾಜನು ಬರುವನು ತಾಳಿ
ದೀವಟಿ ಕೈಯಲಿ ಹಿಡಿಯುತ ಬಂದ
ರಾಳದ ಹುಡಿಯನು ಹಾರಿಸಿ ನಿಂದ
ಮುಗಿಲಿನ ತನಕ ಬೆಂಕಿಯ ಜ್ವಾಲೆ
ಸ್ವರ್ಗಕೆ ಧಾಳಿ ಸೇನೆಯು ಧೂಳಿ
ರಕ್ಕಸರಾಜಗೆ ಪರಾಕು ಹೇಳಿ
ಇಂದ್ರನ ಮೊರೆಯನು ಕೇಳುತ ಬಂದ
ಹಾಲುಗಡಲಿನ ಬಾಲ ಮುಕುಂದ
ಇಂದ್ರಗೆ ಅಭಯ ಇನ್ನಿಲ್ಲ ಭಯ
ದೈತ್ಯನ ತರಿದ ಪೌರುಷ ಮೆರೆದ
ಖಳ ಸಂಹಾರಿ ದಿವಿಜೋಧ್ಧಾರಿ
ಬೆಳಗಿನ ಜಾವ ಮೋಹನ ರಾಗ
ಮಂಗಳದಾರತಿ ಬೆಳಗುವ ಹೊತ್ತು
ಚೌಕಿಯ ಒಳಗಡೆ ಎಲ್ಲರು ನಿತ್ತು.

Friday, June 6, 2008

ಮರೆಯಾಗುತ್ತಿರುವ ಪೂರ್ವರಂಗ ...

ಮೊನ್ನೆ ಬೆಂಗಳೂರಿನ ಎ.ಡಿ.ಎ. ರಂಗಮಂದಿರದಲ್ಲಿ ಜಾಂಬವತಿ ಕಲ್ಯಾಣ ಪ್ರಸಂಗದ ಆರಂಭಕ್ಕೆ ಪರಂಪರೆಯ ಕೃಷ್ಣನ ಒಡ್ಡೋಲಗವನ್ನು ಹೊಳ್ಳರು ನಡೆಸಿಕೊಟ್ಟಾಗ ಸಂಭ್ರಮದಿಂದ ನೋಡಿದವರಲ್ಲಿ ನಾನೂ ಒಬ್ಬ .
ಯಾಕೆ ಇತ್ತೀಚೆಗೆ ಇಂಥ ಉತ್ತಮ ಸಂಪ್ರದಾಯಗಳು ಯಕ್ಷಗಾನದಿಂದ ಮರೆಯಾಗುತ್ತಿವೆ? ತಲೆ ಕೆರೆದುಕೊಂಡು ಬಲಿಪಜ್ಜರಿಗೆ ಪೋನಾಯಿಸಿದಾಗ ಅವರು ಹೇಳಿದ್ದು ಕೇಳಿ ನಿಜಕ್ಕೂ ನಾವೆಂಥಾ ವೈಭವವನ್ನು ಕಳೆದು ಕೊಳ್ಳುತ್ತ ಬರುತ್ತಿದ್ದೇವೆ ಎಂಬುದು ಅರ್ಥವಾಯಿತು.
ಯಕ್ಹಗಾನದಲ್ಲಿ ಪೂರ್ವರಂಗವೆಂಬುದು ಮೂಲ ಪಾಠ . ಅದನ್ನು ಚೆನ್ನಾಗಿ ಬಲ್ಲವನಿಗೆ ಯಾವುದೇ ಪ್ರಸಂಗವನ್ನೂ ನಿರರ್ಗಳವಾಗಿ ಆಡಿ ತೋರಿಸುವ ಸಾಮರ್ಥ್ಯ ಬರುತ್ತದೆ . ಸ್ತುತಿ ಪದ್ಯಗಳು , ಕೋಡಂಗಿ, ಬಾಲಗೊಪಾಲ ,ಷಣ್ಮುಖಸುಬ್ರಾಯ , ಅರ್ಧ ನಾರಿ, ಮುಖ್ಯ ಸ್ತ್ರೀವೇಶ, ಹಾಸ್ಯ , ಬಣ್ಣದ ವೇಷ , ರಾಮನ ಒಡ್ಡೋಲಗ , ಕೃಷ್ಣನ ಒಡ್ಡೋಲಗ , ಪಾಂಡವರ ಒಡ್ಡೋಲಗ, ಹೊಗಳಿಕೆ ಪ್ರಸಂಗ ಪೀಠಿಕೆ , ಮಂಗಳ ಪದಗಳು , ಸಭಾಲಕ್ಷಣ ಮುಂತಾದ ಎಲ್ಲ ವಿಚಾರಗಳ ಬಗ್ಗೆ ಪೂರ್ಣ ಮಾಹಿತಿ ಇದೆ .
ಬರ ಬರುತ್ತಾ ಸಮಯಾಭಾವವೋ,ಅವುಗಳನ್ನು ಕಲಿಯುವುದು ಯಾಕೆ ಎಂಬ ತಿರಸ್ಕಾರವೋ , ಅಂತೂ ಈಗ ನಾವು ನೋಡುವ ಪೂರ್ವ ರಂಗವು ನಿಜವಾಗಿ ಇರುವ ಪೂರ್ವ ರಂಗದ ಶೇ .೧೦ ಮಾತ್ರ .
ಇನ್ನು ಕಾಲ ಮಿತಿ ಆಡುವ ಮೇಳಗಳು ಪೂರ್ವರಂಗವನ್ನು ಪೂರ್ಣ ಕಡೆಗಣಿಸಿವೆ ಎಂದರೂ ತಪ್ಪಲ್ಲ . ಕೆಲವೊಮ್ಮೆ ಪ್ರಸಿದ್ದ ಭಾಗವರತರೂ ಸಣ್ಣ ಸಣ್ಣ ವಿಚಾರಗಳನ್ನ ತಪ್ಪು ಮಾಡುವಾಗ ನೋಡುಗರಿಗೆ ಕಿರಿ ಕಿರಿಯಾಗುತ್ತದೆ.
ಪೂರ್ವರಂಗದ ಬಗ್ಗೆ ಹಲವು ಕಮ್ಮಟಗಳೂ, ವಿಚಾರ ಸಂಕಿರಣಗಳೂ ನಡೆದರೂ ಏನೂ ಪ್ರಯೋಜನ ಮಾತ್ರ ಆಗಲಿಲ್ಲ .
ತೆಂಕು ತಿಟ್ಟು ಹಿತರಕ್ಷಣಾ ವೇದಿಕೆ ಸುಳ್ಯ ದವರು ಬಿಡುಗಡೆ ಮಾಡಿದ ಪೂರ್ವ ರಂಗ ದ್ವನಿ ಸುರುಳಿಯಲ್ಲಿ ಪೂರ್ವ ರಂಗದ ಹಲವು ಅಪರೂಪದ ಪದಗಳು ಕೇಳಬಹುದು.
ಸದ್ಯ ತೆಂಕು ತಿಟ್ಟಿನಲ್ಲಿ ಪೂರ್ವರಂಗದ ಕ್ರಮಗಳು ಸರಿಯಾಗಿ ಗೊತ್ತಿರುವ ಏಕೈಕ ಭಾಗವತರೆಂದರೆ ಬಲಿಪ ನಾರಾಯಣ ಭಾಗವತರು ಮಾತ್ರ . ಉಳಿದವರೆಲ್ಲ ಅಲ್ಪ ಸ್ವಲ್ಪ ಸಮಯ ಸಿಕ್ಕಾಗ ಅವರಲ್ಲಿ ಹೋಗಿ ಕಲಿತರೆ ಕಲಾಭಿಮಾನಿಗಳಿಗೆ ಅದನ್ನು ಆಸ್ವಾದಿಸುವ ಅವಕಾಶ ಸಿಗಬಹುದೇನೋ?
ಏನಿದ್ದರೂ ನಾವು ಸಮೃಧ್ಧ ಪರಂಪರೆಯ ವಿಶಿಷ್ಟ ಭಾಗವನ್ನು ಕಳೆದು ಕೊಳ್ಳುತ್ತಿರುವುದಂತೂ ಸತ್ಯ .
ಇದನ್ನು ಉಳಿಸುವಲ್ಲಿ ಏನು ಮಾಡಬಹುದು ? ನಿಮಗೇನನಿಸುತ್ತದೆ ?

Thursday, June 5, 2008

ವಿಷಕ್ರಿಮಿ ನ್ಯಾಯ ......

ಹಂಸ ಕ್ಷೀರ ನ್ಯಾಯ , ಬೀಜ ವೃಕ್ಷ ನ್ಯಾಯ ಮುಂತಾದವುಗಳ ಬಗ್ಗೆ ಅಗಾಗ ಕೇಳುತ್ತ ಇರುತ್ತೇವೆ . ಹಾಲಿಗೆ ನೀರನ್ನು ಬೆರೆಸಿ ಹಂಸಕ್ಕೆ ಕೊಟ್ಟರೆ ಹಾಲನ್ನು ಮಾತ್ರ ಕುಡಿದು ನೀರನ್ನು ಬಿಡುತ್ತದೆ ಎಂಬುದಾಗಿ ಹಿರಿಯರು ಹೇಳುವುದನ್ನು ಕೇಳಿದ್ದೇನೆ ( ಖುದ್ದಾಗಿ ನಾನು ನೋಡಿಲ್ಲ !) . ಇದರ ಮರ್ಮವೇನೆಂದರೆ "ಯಾವುದೇ ವಿಚಾರದಲ್ಲಿ ಒಳ್ಳೆಯದನ್ನು ಮಾತ್ರ ಸ್ವೀಕರಿಸಿ " ಎಂದು.
ಹಾಗೆಯೇ ಬೀಜ ವೃಕ್ಷ ನ್ಯಾಯದ ಪ್ರಕಾರ " ಬೀಜ ಮೊದಲೋ ? ವೃಕ್ಷ ಮೊದಲೋ ? ಇನ್ನೂ ನಿರ್ಧಾರವಾಗಿಲ್ಲ !!


ಈಗ ನಾನಿಲ್ಲಿ ಹೇಳಹೊರಟದ್ದು ಇನ್ನೊ೦ದು ಸ್ವಾರಸ್ಯಕರ ನ್ಯಾಯದ ಬಗ್ಗೆ. ಅದೇ ವಿಷಕ್ರಿಮಿ ನ್ಯಾಯ . ವೆಂಕಣ್ಣಯ್ಯನೆಂಬ ಒಬ್ಬಾತ ದೇಶ ಸಂಚಾರಕ್ಕೆ ಹೊರಟಿರುತ್ತಾನೆ . ಹೀಗೇ ಹಲವು ಗ್ರಾಮಗಳನ್ನು ಕಳೆದು ಮುಂದುವರಿಯುವ ವೇಳೆ ಒಂದು ಪುಟ್ಟ ಗ್ರಾಮಕ್ಕೆ ಬರುವಾಗ ಕತ್ತಲೆಯಾಗತೊಡಗಿತು . ಆಗ ಆ ಗ್ರಾಮದಲ್ಲಿ ಉಳಕೊಳ್ಳಲು ಏನಾದರೂ ಆಗಬೇಕಲ್ಲ ಎಂದು ಯೋಚಿಸಿ ಎದುರಿಗೆ ಸಿಕ್ಕ ಗ್ರಾಮಸ್ಥನೊಬ್ಬನನ್ನು ಕುರಿತು ವಿಚಾರಿಸುತ್ತಾನೆ .
ವೆ೦ : " ಅಯ್ಯಾ ಈ ಊರಿನಲ್ಲಿ ದೊಡ್ಡವರು ಯಾರಿದ್ದಾರೆ ?"
ಗ್ರಾಮಸ್ಥ :(ಏನೋ ಯೋಚಿಸುತ್ತಾ) " ತಾಳೆ ಮರಕ್ಕಿಂತ ದೊಡ್ಡವರು ಯಾರೂ ಇಲ್ಲ ".
ವೆ೦: "ಹೋಗಲಿ ಯಾರು ದಾನಿಗಳಿದ್ದಾರೆ ?"
ಗ್ರಾ.: "ಬಾಯಿ ಮಾತಿನಲ್ಲಿ ಎಲ್ಲರೂ ದಾನಿಗಳೇ "
ವೆ೦: ಹೋಗಲಿ ಯಾರು ದಕ್ಷರಿದ್ದಾರೆ ?"
ಗ್ರಾ.: "ಇನ್ನೊಬ್ಬರ ಸಂಪತ್ತನ್ನು ಅಪಹರಿಸುವುದರಲ್ಲಿ ಎಲ್ಲರೂ ದಕ್ಷರೆ "
ಇಷ್ಟು ಹೊತ್ತಿಗೆ ತಲೆಬಿಸಿಯಾಗಿ ವೆಂಕಣ್ಣಯ್ಯಕೇಳುತ್ತಾನೆ " ಅಯ್ಯಾ ಇಲ್ಲಿ ನೀವು ಹೇಗಪ್ಪಾ ಬದುಕುತ್ತೀರಿ ??"
ಗ್ರಾ: "ವಿಷ ಕ್ರಿಮಿ ನ್ಯಾಯದಂತೆ "
ವೆ೦: ಅದೇನು ವಿಷಕ್ರಿಮಿ ನ್ಯಾಯ ಅಂದರೆ !!??"
ಗ್ರಾ:" ಅಯ್ಯಾ ಉಪ್ಪಿನಕಾಯಿ ಕಣ್ಣಿಗೆ ಬಿದ್ದರೆ ಏನಾಗುತ್ತದೆ ಹೇಳು ?"
ವೆ೦: " ಕಣ್ಣು ಉರಿಯುತ್ತದೆ "
ಗ್ರಾ: " ಆದರೆ ಉಪ್ಪಿನಕಾಯಿಯಲ್ಲಿಯೇ ಹುಟ್ಟಿದ ಹುಳಕ್ಕೆ ಕಣ್ಣು ಉರಿಯುತ್ತದೆಯೇ ?? "
ವೆ೦: "ಇಲ್ಲ !!!!"
ಹಾಗೆಯೇ ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದ ನನಗೆ ಇದು ಅಭ್ಯಾಸವಾಗಿ ಹೋಗಿದೆ . ನಿನಗೆ ಮಾತ್ರ ಇದು ಹೊಸತು ಅಷ್ಟೆ !!
ಅಂತ ನಿರಾಳವಾಗಿ ಹೇಳಿದ .

ಈಗಿನ ಹೆಚ್ಚಿನ ಎಲ್ಲ ರಾಜಕಾರಣಿಗಳೂ "ವಿಷಕ್ರಿಮಿ ನ್ಯಾಯದ " ಹಾಗೆಯೇ ನಡೆಯುತ್ತಿರುವುದರಿಂದ ಹೆಚ್ಚಿನ ಪ್ರಗತಿಯಾದೀತು ಎಂಬ ಭ್ರಮೆ ಮಾತ್ರ ಸಾಮಾನ್ಯ ನಾಗರೀಕರಾದ ನಮಗೆ ಬೇಡ ಅಂತ ನನಗನಿಸುತ್ತದೆ.
ನೀವೇನಂತೀರಿ?

Wednesday, June 4, 2008

ಯುದ್ದ ಕಾಲೇ ಶಸ್ತ್ರಾಭ್ಯಾಸ ......!

ಮತ್ತೆ ಬಂದಿದೆ ಸೆಮಿಸ್ಟರ್ ಪರೀಕ್ಷೆಗಳು . ಎಲ್ಲ ತಾಂತ್ರಿಕ ವಿಧ್ಯಾರ್ಥಿಗಳಿಗೂ ಬಿಸಿ ಏರಲು ಸುರು ಆಗಿದೆ !
ಸೆಮಿಸ್ಟರ್ ಆದಿಯಲ್ಲಿ ವಿವಿಧ ಕಂಪೆನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ತರಾತುರಿಯಲ್ಲಿ ಪುಸ್ತಕ ಹಿಡಿಯಲೂ ಸಮಯವಿಲ್ಲ ; ಸೆಮಿಸ್ಟರ್ ಮಧ್ಯದಲ್ಲಿ ಕೆಲಸ ಸಿಕ್ಕಿದ ಸಂತೋಷಾಚರಣೆಯಲ್ಲಿ ತರಗತಿಗೆ ಬರಲು ಹೇಗೆ ಸಾಧ್ಯ ? ಒಟ್ಟಿನಲ್ಲಿ ಕೊನೆಯ ಮೂರು ನಾಲ್ಕು ವಾರ ತರಗತಿಗೆ ಮುಖ ತೋರಿಸಿ ಈಗ ಪುಸ್ತಕ ಹಿಡಿದಾಗ "ಏನೋ ಹೊಸತನ್ನು " ನೋಡಿದ ಅನುಭವ ! ಒಂದೂ ತಲೆ ಬುಡ ಗೊತ್ತಾಗದು !

ಇಂಜಿನಿಯರಿಂಗ್ ವಿಷಯಗಳೆಲ್ಲ ಪರಸ್ಪರ ಪೂರಕವಾಗಿರುವಂಥದ್ದು (structured) ; ಒಂದನ್ನು ಅರ್ಥೈಸದೆ ಇನ್ನೊಂದನ್ನು ಕಲಿಯಲು ಸಾಧ್ಯವಿಲ್ಲ . ಒಂದು ರೀತಿಯಲ್ಲಿ ಏಣಿಯಿದ್ದ೦ತೆ.ಎಲ್ಲ ಮೆಟ್ಟಿಲುಗಳನ್ನು ಮೆಟ್ಟಲೇಬೇಕು ಇಲ್ಲದಿದ್ದರೆ ಮೇಲೇರಲು ಆಗದು .

ಇನ್ನು ಕೇವಲ ಬೆರಳೆಣಿಕೆಯ ದಿನಗಳು ಉಳಿದಿವೆ . ಏನು ಮಾಡೋದ್ ಮಗಾ "ಯುದ್ದ ಕಾಲೇ ಶಸ್ತ್ರಾಭ್ಯಾಸ" ಮಾಡಲೇ ಬೇಕು . ಎಲ್ಲಿ ಗೈಡುಗಳು, as per revised V.T.U.book ಗಳು , ಸುಲಭ ದಾರಿಯನ್ನು ನೋಡಲೇ ಬೇಕು .
ಪರೀಕ್ಷೆಯಲ್ಲಿ ನಪಾಸಾದರೆ ನಾಳೆ ತಮ್ಮ ಕಿಸೆಗೆ ಬರುವ ಹಣಕ್ಕೆ ಕೋತಾ! ಮನೆಯಲ್ಲಿ ಅಪ್ಪ ಅಮ್ಮನ ಮುಂದೆ ನಿಲ್ಲುವುದು ಹೇಗೆ ?
ಅದಕ್ಕಿಂತಲೂ ಮುಖ್ಯವಾಗಿ ತಮ್ಮ "ಗೆಳತಿ" ಎಲ್ಲಿ ಕೈತಪ್ಪಿ ಹೋಗುವಳೋ ಎಂಬ ಭಯ ಬೇರೆ !
ಒಟ್ಟಿನಲ್ಲಿ ಇಷ್ಟ ಇದೆಯೋ ಇಲ್ಲವೊ ಓದಲೇ ಬೇಕು.

ಮೊದಲು ಇಂಟರ್ನಲ್ ಮಾರ್ಕ್ಸ್ ಎಲ್ಲ ಲೆಕ್ಕ ಹಾಕಿ , ಇನ್ನು ಎಸ್ಟು ಮಾರ್ಕ್ಸ್ ತೆಗೆಯಬೇಕೆಂಬ ಸ್ಕೆಚ್ ಹಾಕಿದ ಬಳಿಕ ಓದಲು ಆರಂಭ . ಯಾವತ್ತು ಭೇಟಿ ನೀಡದ ಅರಳೀ ಕಟ್ಟೆ ಗಣಪತಿ ದೇವಸ್ಥಾನಕ್ಕೆ ಜನ ಬರುವುದೇ ಪರೀಕ್ಷಾ ಸಮಯದಲ್ಲಿ ; ಅಲ್ಲಿ ಭಕ್ತಿ ಉಕ್ಕಿ ಹರಿಯುವುದನ್ನು ಕಂಡಾಗ ಸ್ವತ: ಗಣಪ್ಪಣ್ಣನಿಗೇ ಕರುಣೆ ಮೂಡಬೇಕು !
ಈಗ ಓದುವ ಸರದಿ.....
ರಾತ್ರಿ ಇಡೀ night out...
ಯಾರು ಹೆಚ್ಚು ನೈಟ್ ಔಟ್ ಮಾಡುತ್ತಾರೋ ಅವರು ವೀರಾಧಿವೀರರು ಅಂತ ಸಾಮಾನ್ಯ ಭಾವನೆ !
ಇನ್ನು ಕೆಲವರು ರಾತ್ರಿ ಮೂರರ ವರೆಗೆ ಓದಿ ಮಲಗಿದ್ದ ತಮ್ಮ ಮಿತ್ರರನ್ನು ಎಬ್ಬಿಸಿ ನಿದ್ದೆಗೆ ಜಾರುವುದು ; ಅಮೇಲೆ ಬೆಳಗ್ಗೆ ಐದರ ಸುಮಾರಿಗೆ ಪುನ ಮುಂದುವರಿಸುವುದು ..... ಇತ್ಯಾದಿ ಇತ್ಯಾದಿ ....
ಈ ಮಧ್ಯೆ ಕೆಲವರು "ವಾರ್ತಾವಾಹಕರು" 'ಆ' ಕಾಲೇಜಿನಲ್ಲಿ 'ಈ' ಪೇಪರ್ ಔಟ್ ಆಗಿದೆಯಂತೆ ಅಂತ ಸುದ್ದಿ ತಂದು ಕುತೂಹಲ ಕೆರಳಿಸುವುದು.......
ಮತ್ತೆ ಓದು ...... ಹೀಗೆ ಸಾಗುತ್ತದೆ ಯುದ್ದ ಕಾಲೇ ಶಸ್ತ್ರಾಭ್ಯಾಸ.....
ಇನ್ನು ಕೆಲವರು ಯುದ್ಧವೇ ಶಸ್ತ್ರಭ್ಯಾಸ ಮಾಡುವವರೂ ಇದ್ದಾರೆ ; ಆದರೆ ಇದು ತೀರಾ ಅಪಾಯಕಾರಿ ..
***
ಮೇಲಿನದ್ದು ಕಾಲೇಜು ಜೀವನದಲ್ಲಾದರೆ ಕೊನೆ ಕ್ಷಣದಲ್ಲಿ ತಯಾರಿ ಮಾಡಲು ಹೊರಡುವುದನ್ನು ಒಂದೇ ಮಾತಿನಲ್ಲಿ "ಯುದ್ದ ಕಾಲೇ ಶಸ್ತ್ರಾಭ್ಯಾಸ " ಅನ್ನುವುದಷ್ಟೆ. ಈಗಲೂ ನಾವು ಅದನ್ನು ಕೆಲವೊಮ್ಮೆ ಮಾಡುತ್ತೇವೆ .ಅಮೇಲೆ ಬೈಸಿಕೊಳ್ಳುತ್ತೇವೆ ಅಷ್ಟೆ !
ಕೆಲವರಿಗಂತೂ ಇದು ಅಭ್ಯಾಸವಾಗಿ ಬಿಟ್ಟಿದೆ . "ಯಾರೇ ಕೂಗಾಡಲಿ , ಊರೇ ಓರಾಡಲಿ.... ನನ್ನ ನೆಮ್ಮದಿಗೆ ಭಂಗವಿಲ್ಲ ... ಅಂತ ಯುದ್ದ ಕಾಲೇ ಶಸ್ತ್ರಾಭ್ಯಾಸ ಮಾಡುತ್ತಲೇ ಇರುತ್ತಾರೆ .
ಏನೇ ಇದ್ದರೂ ಎಲ್ಲರೂ ಒಂದಲ್ಲ ಒಂದು ಸಲ ಈ ಅನುಪಮ ಅನುಭವದ ಭಾಗವಾಗಿದ್ದರೂ ಅದನ್ನು ಪುನಃ ನೆನಪಿಸಿ ಕೊಂಡಾಗ ಮಾತ್ರ ಅವರ್ಣನೀಯ ಆನಂದ ಆಗುವುದು ಖಂಡಿತ ...
"ಅನುಭವವು ಸಿಹಿಯಲ್ಲ ಅದರ ನೆನಪೇ ಸಿಹಿ "... ಅಲ್ಲವೇ ???

Monday, June 2, 2008

ಚಿಲ್ಲರೆ ಸಮಸ್ಯೆ .....

ಬೆಳಗ್ಗೆ ಬೇಗ ೬ ಗಂಟೆ ಬಸ್ಸಿಗೆ ಹೋಗಬೇಕು ; ಅವಸರದ ಕೆಲಸ ಹಾಗೂ ಹೀಗೂ ಮಾಡಿ ಮಾರ್ಗದ ಬದಿಗೆ ಬಂದು ನಿಂತಾಗ ಮಾಮೂಲಿನಂತೆ "ನವದುರ್ಗ" ಬಸ್ಸು ಬಂದಾಗ ಬೇಗನೆ ಹತ್ತಿ ಕಿಟಕಿ ಬದಿಯ ಸೀಟನ್ನು ಆಕ್ರಮಿಸಿ ಕುಳಿತು ಟಿಕೇಟು ತೆಗೆಯಲೆಂದು ಕಿಸೆಗೆ ಕೈ ಹಾಕಿದಾಗಲೇ ಗೊತ್ತಾದದ್ದು ಚಿಲ್ಲರೆ ತೆಗೆದು ಮೇಜಿನ ಮೇಲೆ ಇಟ್ಟದ್ದು ಅಲ್ಲೇ ಬಾಕಿ ಆಗಿದೆ ಅಂತ ! ಏನು ಮಾಡುವುದು? ನೂರು ರೂಪಾಯಿ ನೋಟು ಕೊಟ್ಟರೆ ಕಂಡಕ್ಟರ್ " ಏಳು ರೂಪಾಯಿ ಟಿಕೆಟ್ ಗೆ " ನೂರು ರೂಪಾಯಿ ಕೊಟ್ರೆ ಚಿಲ್ಲರೆ ಎಲ್ಲಿಂದ ಕೊಡೋದು? ಅಂತ ಬೆಳಗ್ಗೆ ಬೆಳಗ್ಗೆ "ಚಿಲ್ಲರೆ" ಸಮಸ್ಯೆ ಸುರು ಮಾಡ್ತಾನೆ .

ಹೌದು . ಈ ಚಿಲ್ಲರೆ ಸಮಸ್ಯೆ ನೀವೆನಿಸಿದಷ್ಟು "ಚಿಲ್ಲರೆ"ಏನಲ್ಲ !!

ಎಷ್ಟೋ ಬಾರಿ ಬಿ.ಟಿ.ಎಸ್ ಬಸ್ ನಲ್ಲಿ ಒ೦ಭತ್ತು ರೂಪಾಯಿ ಟಿಕೆಟ್ ಗೆ ಹತ್ತು ರೂಪಾಯಿ ಕೊಟ್ಟಾಗ ಕಂಡಕ್ಟರ್ ಟಿಕೇಟಿನ ಹಿಂಬಾಗದಲ್ಲಿ ಒಂದು ಗೆರೆ ಎಳೆದು ನಿಮ್ಮ ಕೈಗೆ ತುರುಕುತ್ತಾನೆ . ನಾವು ಇಳಿಯುವ ಅವಸರದಲ್ಲಿ ಆ ಒಂದು ರೂಪಾಯನ್ನು ಮರೆತು ಜಾಣರಾಗುತ್ತೇವೆ ! ಇದು ಕಂಡಕ್ಟರ್ ಭಾ೦ಧವರಿಗೂ ಗೊತ್ತಿರುತ್ತದೆ ! ನಾವು ಈ ರೀತಿ ಹಲವು ಸಲ ಕಳೆದುಕೊಂಡ ಮೇಲೆ ಚಿಲ್ಲರೆ ಬಗ್ಗೆ ಜಾಗೃತರಾಗುತ್ತೇವೆ. ಅಂಗಡಿಗಳಲ್ಲಿ , ಹೋಟೆಲ್ಗಳಲ್ಲಿ , ತರಕಾರಿ ಮಾರುವ ಗಾಡಿಗಳಲ್ಲಿಗಳಿಂದ ಹಿಡಿದು ದೇವಸ್ಥಾನದಲ್ಲಿ "ಪುರೋಹಿತರ ತಟ್ಟೆ"ಗೆ ಹಾಕುವಲ್ಲಿವರೆಗೆ "ಚಿಲ್ಲರೆ " ಅತೀ ಅವಶ್ಯವಾಗಿರುತ್ತದೆ .ಇದು ಪರಿಹರಿಸಬಹುದಾದ ಆದರೆ ನಮ್ಮ ಉದಾಸೀನತೆಯ ಫಲವಾಗಿ ಉದ್ಭವಿಸುವ ಸಮಸ್ಯೆ ಅಂತ ನನಗನಿಸುತ್ತದೆ.
ಕಳೆದ ತಿಂಗಳು ಆದಾಯ ತೆರಿಗೆ ಕಚೇರಿಯಿಂದ ನನ್ನ ಮಿತ್ರರೊಬ್ಬರಿಗೆ ಮೂರು ರೂಪಾಯಿ ಎಪ್ಪತ್ತೈದು ಪೈಸೆ ಬಾಕಿ ಸಂದಾಯ ಮಾಡಬೇಕೆಂದು ರಿಜಿಸ್ಟರ್ದ ಪೋಸ್ಟ್ ಬಂದಾಗ "ಚಿಲ್ಲರೆ" ವಸೂಲಿಗಾಗಿ ನಮ್ಮ ಸರಕಾರ ಎಷ್ಟು ಮುತುವರ್ಜಿ ವಹಿಸುತ್ತದೆ ಎಂದು ಅರ್ಥವಾಗಿತ್ತು !

ಅಂತೂ ಎಲ್ಲರೂ ಒಂದಲ್ಲ ಒಂದು ಸಲ "ಚಿಲ್ಲರೆ ಸಮಸ್ಯೆ"ಯಿಂದ ಬಳಲಿರುತ್ತೇವೆ .
ಕೆಲವೊಂದು ಸಲ ಚಿಲ್ಲರೆ ಇಲ್ಲ ಎಂಬುದು ಭಿಕ್ಶುಕರನ್ನು ಸಾಗ ಹಾಕಲು , ದುಡ್ಡು ಕೊಡಲು ಮನಸಿಲ್ಲದೆ ಇರುವಾಗ ! ಅತ್ಯಂತ ಸಹಕಾರಿಯಾಗುತ್ತದೆ ಎಂಬುದನ್ನೂ ಮರೆಯಬಾರದು !

ಇನ್ನು ನಮ್ಮ ವ್ಯವಹಾರಗಳಲ್ಲೂ ಅಗಾಗ "ಚಿಲ್ಲರೆ ಸಮಸ್ಯೆ " ಎದುರಾಗುವುದಿದೆ .
ಮಾತು ಬಲ್ಲವನಿಗೆ ಜಗಳವಿಲ್ಲ ; ಊಟ ಬಲ್ಲವನಿಗೆ ರೋಗವಿಲ್ಲ ಆದುದರಿಂದ ವ್ಯಾವಹಾರಿಕ ಚಿಲ್ಲರೆ ಸಮಸ್ಯೆಗಳನ್ನೂ ಪರಿಹರಿಸಲು ಸಾದ್ಯವಿದೆ .

****
ಅಂದ ಹಾಗೆ ....
ಮೊನ್ನೆ ಯಡಿಯೂರಪ್ಪನವರಿಗೂ ಸರಕಾರ ರಚಿಸಲು ಉಂಟಾದದ್ದು ಚಿಲ್ಲರೆ ಸಮಸ್ಯೆಯೇ !!
ನೂರಹತ್ತು ಜನ ಗೆದ್ದು ಬಂದರೂ ಚಿಲ್ಲರೆ ಆರು ಜನ ಬೆಂಬಲವಿಲ್ಲದೆ ಏನೂ ಮಾಡುವ ಹಾಗಿರಲಿಲ್ಲ . ಹಾಗಾದರೆ ಚಿಲ್ಲರೆಯೂ ಕೆಲವೊಮ್ಮೆ "ನಿರ್ಣಾಯಕ" ಪಾತ್ರ ವಹಿಸುತ್ತದೆ ಅಲ್ಲವೇ ??!!
***