Wednesday, February 10, 2010

ವಿಪಂಚಿ ಬಳಗದ ಪಂಚವೀಣೆ ....


ಸಂಗೀತ ಪರಿಕರಗಳಲ್ಲಿ ಅಪೂರ್ವವೆನಿಸಿದ ತಂತಿ ವಾದ್ಯವಾದ ವೀಣಾವಾದನ ಕಾರ್ಯಕ್ರಮ ಆಸ್ವಾದಿಸಲು ಸಿಗುವುದು ಸಂಗೀತ ರಸಿಕರಿಗೆ ಅಪರೂಪ . ಅದರಲ್ಲೂ ಐದು ಮಂದಿ ಏಕ ಕಾಲದಲ್ಲಿ ವೀಣಾವಾದನ ನಡೆಸಿಕೊಡುವುದಂತೂ ತೀರಾ ವಿರಳ . ಇಂಥ ಅಪೂರ್ವವಾದ ವೀಣಾವಾದನ ಕಾರ್ಯಕ್ರಮವನ್ನು ಸವಿಯುವ ಅವಕಾಶವೊಂದು ಸಿಕ್ಕಿದ್ದು ನನಗೆ ಬಲು ಸಂತಸವುಂಟು ಮಾಡಿತ್ತು.


. "ವಿಪಂಚಿ" ಎಂದರೆ ವಿಧ್ಯಾಧಿದೇವತೆಯಾದ ಸರಸ್ವತಿ ದೇವಿಯ ವೀಣೆಯ ಹೆಸರು. ಇದರಿಂದಲೇ "ವೀಣಾಪಾಣಿ ಮಾತೆ ..." ಎಂಬುದಾಗಿ ಶಾರದಾದೇವಿ ಪ್ರಸಿದ್ಧಳು. ಬಹಳ ಮಂದಿಗೆ ಚಿರಪರಿಚಿತವಾಗಿರುವ "ವರವೀಣಾ ಮೃದು ಪಾಣಿ ವನರುಹಲೋಚನ ರಾಣಿ ...." ಪದ್ಯದಲ್ಲಿ ಬರುವುದು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀದೇವಿ ತನ್ನ ಕರಗಳಲ್ಲಿ ಹಿಡಿದಿರುವ "ವರವೀಣಾ " ನಾಮಕ ವೀಣೆಯ ಬಗ್ಗೆ ಎಂಬ ವಿಚಾರ ಕುತೂಹಲಕರ ವಿಷಯವೇ.


ಇತ್ತೀಚಿಗೆ ಕಾಸರಗೋಡು ಜಿಲ್ಲೆಯ ಪಳ್ಳತ್ತಡ್ಕದ ಮುದ್ದುಮಂದಿರದಲ್ಲಿ ಅಂತರಾಷ್ಟ್ರೀಯ ಸಸ್ಯ ವಿಜ್ಞಾನಿ ಡಾ.ಪಳ್ಳತ್ತಡ್ಕ ಕೇಶವ ಭಟ್ಟರ "ಭೀಮರಥ ಶಾಂತಿ " ಸಂಭ್ರಮಾವಸರದಲ್ಲಿ ಕಿರು ಪಂಚವೀಣಾವಾದನ ಕಛೇರಿಯನ್ನು ಮಣಿಪಾಲದ ಶ್ರೀಮತಿ ಪವನಾ ಬಿ. ಆಚಾರ್ಯರ ನೇತೃತ್ವದ "ವಿಪಂಚಿ" ಬಳಗ ಅಂದವಾಗಿ ನಡೆಸಿ ಕೊಟ್ಟು ಪ್ರೇಕ್ಷಕರ ಮನಗೆಲ್ಲುವಲ್ಲಿ ಸಫಲವಾಯಿತು. ಇದುವರೆಗೆ ದೇಶದ ನಾನಾ ಭಾಗಗಳಲ್ಲಿ ಹಲವು ಯಶಸ್ವೀ ಕಾರ್ಯಕ್ರಮ ನಡೆಸಿ ಕೊಟ್ಟ ಈ ತಂಡವು ಸಿಕ್ಕ ಸಮಯಾವಕಾಶದ ಮಿತಿಯಲ್ಲಿ ಚೊಕ್ಕದಾಗಿ ಪ್ರಸ್ತುತ ಪಡಿಸಿದ ಕಾರ್ಯಕ್ರಮವು ಹಂಸಧ್ವನಿ ರಾಗದ "ವಾತಾಪಿ ಗಣಪತಿಂ ಭಜೆ ..." ಕೃತಿಯಿಂದ ಆರಂಭಗೊಂಡು ಸಾದಿಂಚಿನೆ , ಲಿಂಗಾಷ್ಟಕವೆ ಮೊದಲಾದ ಕೃತಿಗಳಿಂದ ಮುಂದುವರಿದು ಶ್ರೀರಾಗದ ಭಾಗ್ಯದ ಲಕ್ಷ್ಮಿ.. ಕೃತಿಯೊಂದಿಗೆ ಸಮಾಪ್ತಿಗೊಂಡಿತು . ಸುಮಾರು ೫೨ ನಿಮಿಷಗಳ ಈ ಕಾರ್ಯಕ್ರಮ ಬಹಳ ಶಿಸ್ತುಬದ್ಧವಾಗಿ ಮೂಡಿ ಬಂದಿದ್ದು ಕಲಾವಿದರ ಸಾಧನಾ ಪರಿಶ್ರಮವು ಅಭಿನಂದನೀಯ.

***