Thursday, November 11, 2010

ಅಪೂರ್ವ ಪ್ರಸಂಗಕರ್ತ ಕೀರ್ತಿಶೇಷ ಹಲಸಿನಹಳ್ಳಿ ಶ್ರೀನರಸಿಂಹ ಶಾಸ್ತ್ರಿ..

ಪರಮ ಋಷಿ ಮಂಡಲದ ಮಧ್ಯದಿ  ಮೆರೆವ ಯಜ್ಞೇಶ್ವರನ ಪ್ರಭೆಯಲಿ |
ಮೆರೆವ ಜಟಾಮಂಡಲದಿ ಶೋಭಿಪ ಭಾರ್ಗವೇಶ್ವರನ | ಪರಕಿಸುತಲಭಿನಮಿಸಿ ಭೀಷ್ಮನು 
ಚರಣ ಪ್ರಕ್ಷಾಳನವ ಗೈಯ್ಯುತ  ಶಿರದಿ ತೀರ್ಥವ ಧರಿಸಿ |  ಮಧುಪರ್ಕಾದಿಗಳನಿತ್ತು  
ಕರ ಪಿಡಿದು ವರರತುನಮಯ ಪೀಠದಿ ಕುಳ್ಳಿರಿಸಲು | ಗುರು ನಮೋ ಎಂದೆನುತ ಶಿರವ  ಬಾಗುತ ದೈನ್ಯದಿ ನಿಂತಿರಲು ||

ಭೀಷ್ಮ ವಿಜಯ ಪ್ರಸಂಗದಲ್ಲಿ ಭೀಷ್ಮನು ತನ್ನ ಗುರುಗಳಾದ ಪರಶುರಾಮರನ್ನು ಕುರುಕ್ಷೇತ್ರದಲ್ಲಿ ಇದಿರ್ಗೊಳ್ಳುವ ಸನ್ನಿವೇಶದ  ಈ ಪದ್ಯ ಉಭಯ ತಿಟ್ಟುಗಳಲ್ಲೂ ಪ್ರಸಿದ್ಧ . ಯಕ್ಷಗಾನ ಕಲಾಸಕ್ತರೆಲ್ಲರೂ ಸವಿದಷ್ಟು ಅದರ ರುಚಿ ಹೆಚ್ಚುತ್ತಲೇ ಹೋಗುವ ಈ ಪದ್ಯವನ್ನು ಬರೆದವರಾರಿರಬಹುದು ? ಯಾವಾಗ ಬರೆದಿರಬಹುದು ? ಎಂದು ಯಾರೊಬ್ಬರೂ ಯೋಚಿಸಲು ಹೋಗುವುದಿಲ್ಲ ! ಒಂದು ಶತಮಾನದ ಹಿಂದೆ ರಚಿತವಾದ ಈ ಪ್ರಸಂಗ ಇಂದಿಗೂ ರಂಗದಲ್ಲಿ ಯಶಸ್ವೀ ಪ್ರಯೋಗವನ್ನು ಕಾಣುತ್ತಿದೆ ಎಂದರೆ ಅಚ್ಚರಿಯಾಗುತ್ತಿದೆಯೇ ?

ಈ ಪ್ರಸಿದ್ಧ ಪ್ರಸಂಗವನ್ನು ರಚಿಸಿದವರೇ  ಕೀರ್ತಿಶೇಷ ಹಲಸಿನಹಳ್ಳಿ ಶ್ರೀ ನರಸಿಂಹ ಶಾಸ್ತ್ರಿಗಳು . ಅವರ ಕುರಿತು ವಿಶೇಷವಾದ ಅಧ್ಯಯನಗಳು ನಡೆದಂತೆ ಕಂಡು ಬರುವುದಿಲ್ಲ .ಅವರ ಪ್ರತಿಯೊಂದು ಪ್ರಸಂಗ ಕೃತಿಯ ಕೊನೆಯಲ್ಲಿ ತನ್ನ ಕುರಿತು ಹಾಗೂ ಕೃತಿ ಕೊನೆಗೊಂಡ ಸಂವತ್ಸರ , ಮಾಸ, ಪಕ್ಷ , ತಿಥಿ , ವಾರಗಳನ್ನು ಹೇಳಿಕೊಂಡಿದ್ದು ವಿಷಯ ಸಂಗ್ರಹಕ್ಕೆ ಆಕರವಾಗಿದೆ.

ಸಾರ್ವಕಾಲಿಕ ಸುಂದರ ಪದ್ಯಗಳು ಅವರ ಪ್ರಸಂಗದ ವೈಶಿಷ್ಟ್ಯ . ಪ್ರಸಂಗ ರಚಿಸಿ ಶತಮಾನವೇ ಕಳೆದರೂ ಇಂದಿಗೂ ಅವರ ಪ್ರಸಂಗಗಳು ಜೀವಂತವಾಗಿ ರಂಗ ಪ್ರಯೋಗದಲ್ಲಿದೆ .ಹಲಸಿನಹಳ್ಳಿಯವರು ಪ್ರತಿವರ್ಷ ಬೇರೆ ಬೇರೆ ಮೇಳದವರನ್ನು  ಕರೆಸಿ ತಮ್ಮ ಮನೆಯ ಮುಂದೆ ಬಯಲಾಟಗಳನ್ನು ಆಡಿಸುತ್ತಿದ್ದರಂತೆ .

ಹಲಸಿನಹಳ್ಳಿ ಶ್ರೀಯುತ ನರಸಿಂಹ ಶಾಸ್ತ್ರಿಗಳು  ತೀರ್ಥಹಳ್ಳಿ ಪರಿಸರದ ತುಂಗಾನದೀ ತೀರದ ಹಲಸಿನಹಳ್ಳಿಯವರು .ಅವರು ಅದನ್ನು ಪನಸಪುರವೆಂದು ಹೆಸರಿಸಿದ್ದಾರೆ .ಅವರ ತಂದೆಯವರ ಹೆಸರು ನಾಗೇಂದ್ರ ಶಾಸ್ತ್ರಿ (ಉರಗೇ೦ದ್ರ  ಶಾಸ್ತ್ರಿ ಎಂದು ಪದ್ಯದಲ್ಲಿ ಉಲ್ಲೇಖಿಸಿರುತ್ತಾರೆ ). ಶ್ರೀಯುತ ನರಸಿಂಹ ಶಾಸ್ತ್ರಿಗಳು ಸಂಸ್ಕೃತ  ಮತ್ತು ಕನ್ನಡ ಉಭಯ ಭಾಷಾ ವಿದ್ವಾಂಸರಾಗಿದ್ದು ಆಳವಾದ ಅಧ್ಯಯನ ಸಂಪನ್ನರೂ ಪೌರಾಣಿಕ ಜ್ಞಾನಿಗಳೂ ಆಗಿದ್ದರು .


ಸರಿಸುಮಾರು ೧೮೯೮ ರಿಂದ ೧೯೧೬ ರ ತನಕ ಅವರು ಕೃತಿ ರಚನೆ ಮಾಡಿರುತ್ತಾರೆ . ಕೆಲವು ಪ್ರಸಂಗಗಳಲ್ಲಿ ಅದು ಎಷ್ಟನೆ ಕೃತಿಯೆಂದು ಕೂಡ ಸೂಚಿಸಿರುತ್ತಾರೆ .ಅವರ ೧೩ನೆ ಕೃತಿ ರುಕ್ಮಾಂಗದ ಚರಿತ್ರೆ ಯು ಅವರು ವಿಧಿವಶರಾದ ಮೇಲೆ ೧೯೫೦ ರಲ್ಲಿ    ಶೀಗೆಹಳ್ಳಿ ಪರಮಾನ೦ದ ಮಠದ ಶ್ರೀ ಅತ್ಮಾರಾಮರೆಂಬ ಮಹಾನೀಯರಿಂದ ಶಿರಸಿಯಲ್ಲಿ ಪ್ರಕಟವಾಯಿತು.ಇವರ ಹೆಚ್ಚಿನ ಕೃತಿಗಳು ೧೯೩೧ ರಲ್ಲಿ ತೀರ್ಥ ಹಳ್ಳಿಯ ರಾಧಾಕೃಷ್ಣ ಮುದ್ರಣಾಲಯದಲ್ಲಿ ಅಚ್ಚಾಗಿ ಬೆಳಕು ಕಂಡಿವೆ. ಇವುಗಳನ್ನೆಲ್ಲ ಖ್ಯಾತ ಕನ್ನಡ ಪಂಡಿತರಾಗಿದ್ದ ಕಮೆಗೋಡು  ನರಸಿಂಹ ಶಾಸ್ತ್ರಿಗಳು ಪರಿಶೀಲಿಸಿದ್ದರೆಂದು ಮುದ್ರಿತ ಪ್ರತಿಗಳ ಮುಖ ಪುಟದಲ್ಲಿ ನಮೂದಿಸಲ್ಪಟ್ಟಿದೆ . ಅವರ ಕೃತಿಯ ಆರಂಭದಲ್ಲಿ ದುರ್ಗೆಯನ್ನು ಸ್ತುತಿಸುವ ಪದವನ್ನು ಕಾಣುತ್ತೇವೆ .ಆಗುಂಬೆಯ ವೇಣುಗೋಪಾಲ , ಕಮ್ಮರಡಿಯ ಗಣಪತಿ , ತೀರ್ಥರಾಜಪುರದ ದುರ್ಗಾಮ್ಬೆ ,ಶೃಂಗೇರಿಯ ಶಾರದಾಂಬೆಯ ಸ್ತುತಿಗಳೂ ಕೃತಿಗಳಲ್ಲಿ ಕಾಣಸಿಗುತ್ತವೆ .

ಹಲಸಿನಹಳ್ಳಿ ಶ್ರೀಯುತ ನರಸಿಂಹ ಶಾಸ್ತ್ರಿಗಳು ಶಶಿಕಲಾ ಸ್ವಯಂವರ (೧೮೯೯), ವಿಧ್ಯುನ್ಮತಿ ಕಲ್ಯಾಣ (೧೯೦೧) ,ಕೌಶಿಕ ಚರಿತ್ರೆ (೧೯೦೧), ರುಗ್ಮವತಿ ಕಲ್ಯಾಣ (೧೯೦೨), ಚಂದ್ರಹಾಸ ಚರಿತ್ರೆ (೧೯೦೪),ಭೀಷ್ಮೋತ್ಪತ್ತಿ(೧೯೦೪), ಭೀಷ್ಮ ವಿಜಯ (೧೯೦೫), ಕುಮುದ್ವತೀ ಕಲ್ಯಾಣ (೧೯೦೬), ಭೀಷ್ಮಾರ್ಜುನರ ಕಾಳಗ (೧೯೦೯), ವಾಮನ ಚರಿತ್ರೆ (೧೯೧೦), ರುಕ್ಮಾಂಗದ ಚರಿತ್ರೆ (೧೯೧೧) ದೇವಯಾನಿ ಕಲ್ಯಾಣ (೧೯೧೩) ಶ್ರೀಕೃಷ್ಣ ವಿವಾಹ (೧೯೧೪) ,ಪುಂಡರೀಕ ಚರಿತ್ರೆ (೧೯೧೬), ಶಲ್ಯ ಪರ್ವ (೧೯೧೬) ವೀರಮಣಿ ಕಾಳಗ (೧೯೧೬) ರಚಿಸಿದ್ದು ಇವೆಲ್ಲವೂ ಪ್ರಕಟವಾಗಿದೆ. ಇದಲ್ಲದೆ ನವನಂದನರ ಕಾಳಗ ,ಹಂಸಡಿಬಿಕರ ಕಾಳಗ , ಶಿಶುಪಾಲನ ಕಾಳಗ , ನರಸಿಂಹಾವತಾರ  ಪ್ರಸಂಗಗಳನ್ನು ರಚಿಸಿದ್ದು ಅವುಗಳು ಪ್ರಕಟವಾಗಿಲ್ಲ .ಇವರ ಎಲ್ಲ ರಚನೆಗಳೂ ಸ್ವತಂತ್ರ ರಚನೆಗಳಾಗಿದ್ದು ಪ್ರದರ್ಶನಕ್ಕೆ ಅನುಕೂಲವಾಗುವ ದೃಶ್ಯ ವಿನ್ಯಾಸ, ಚರ್ಚೆಗೆ ಆಸ್ಪದವಿರುವ  ವಿಷಯಾಧಾರಿತ ಪದಗಳು , ಮೌಲ್ಯಯುತ ಪದಗಳ ಸರಳ ಸುಲಲಿತ ಜೋಡಣೆ ಈ ಪ್ರಸಂಗಗಳ ವೈಶಿಷ್ಟ್ಯತೆ .

ಭೀಷ್ಮೋತ್ಪತ್ತಿ , ಭೀಷ್ಮಾರ್ಜುನರ ಕಾಳಗ ( ಭೀಷ್ಮ ಸೇನಾಪತ್ಯ -ವಿಶ್ವರೂಪ ದರ್ಶನ -ಕರ್ಮಬಂಧನ -ಸುದರ್ಶನ ಕರಗ್ರಹಣ - ಶರಶಯ್ಯೆ ಕಥಾನಕವನ್ನು ಒಳಗೊಂಡಿದೆ ), ಭೀಷ್ಮ ವಿಜಯ,ವೀರಮಣಿ ಕಾಳಗ ,ವಾಮನ ಚರಿತ್ರೆ  ಪ್ರಸಂಗಗಳು  ತಾಳಮದ್ದಲೆ ಕೂಟಗಳಿಗೆ ಹೇಳಿ ಮಾಡಿಸಿದಂತಿದೆ. ಈ ಎಲ್ಲ ಪ್ರಸಂಗಗಳು ಇಂದಿಗೂ ತಾಳಮದ್ದಲೆ ಕೂಟದ ಅಗ್ರ ಪ್ರಸಂಗಗಳ ಸಾಲಿನಲ್ಲಿ ಸ್ಥಾನ ಪಡೆದಿವೆ. 

ಹಲಸಿನಹಳ್ಳಿ ಶ್ರೀಯುತ ನರಸಿಂಹ ಶಾಸ್ತ್ರಿಯವರ ಬಹುತೇಕ ಎಲ್ಲ ಪ್ರಸಂಗಗಳೂ ಆಟ ಕೂಟಗಳಲ್ಲಿ ಇಂದಿಗೂ ಚಿರಂಜೀವಿಗಳಾಗಿವೆ. ಈಗಾಗಲೇ ಪಾರ್ತಿಸುಬ್ಬನ ಪ್ರಸಂಗಗಳು , ಹಟ್ಟಿಯಂಗಡಿ ರಾಮ ಭಟ್ಟರ ಪ್ರಸಂಗಗಳು, ಅಗರಿ ಶ್ರೀನಿವಾಸ ಭಾಗವತರ ಪ್ರಸಂಗಗಳು, ಹಿರಿಯ -ಕಿರಿಯ ಬಲಿಪ ಭಾಗವತರ ಪ್ರಸಂಗಗಳು ,ಜತ್ತಿ ಈಶ್ವರ ಭಾಗವತರ ಪ್ರಸಂಗಗಳು ,ಅಮೃತ ಸೋಮೇಶ್ವರರ ಪ್ರಸಂಗಗಳು , ಸಂಪುಟ ರೂಪದಲ್ಲಿ ಪ್ರಕಟವಾಗಿದ್ದು ಮುದ್ರಿತ ರೂಪದಲ್ಲಿ ಲಭ್ಯವಿರುತ್ತದೆ .ಆದರೆ ಹಿರಿಯರೂ ಮೇಧಾವಿಗಳೂ ,ವಿದ್ವಾಂಸರಾಗಿ ಮೆರೆದಿದ್ದ ಹಲಸಿನಹಳ್ಳಿ ಶ್ರೀಯುತ ನರಸಿಂಹ ಶಾಸ್ತ್ರಿಯವರ ಪ್ರಸಂಗಗಳ  ಮಹಾಸಂಪುಟವೊಂದು  ಪ್ರಕಟವಾಗಬೇಕಿದೆ . ಶ್ರೀಯುತರ ಎಲ್ಲ ಪ್ರಸಂಗಗಳೂ ಒಂದೇ ಪುಸ್ತಕದಲ್ಲಿ ದೊರೆತಲ್ಲಿ ಕಲಾಸಕ್ತರಿಗೆ , ಅಭ್ಯಾಸಿಗಳಿಗೆ , ಭಾಗವತರುಗಳಿಗೆ , ಕಲಾವಿದರಿಗೆ ಮಹಾದುಪಕಾರವಾಗುತ್ತದೆ.  ಅಂಥದ್ದೊಂದು ಕಾರ್ಯವು ಶೀಘ್ರವೇ  ಆಗಿ ಅವರ ಚಿರನೂತನ ಪ್ರಸಂಗಗಳು ಚಿರಸ್ಥಾಯಿಯಾಗಿ ಜನಮಾನಸದಲ್ಲಿ ಉಳಿಯಲಿ ಎಂದು ಹಾರೈಸುತ್ತೇನೆ ..(ಹಲಸಿನಹಳ್ಳಿ ಶ್ರೀಯುತ ನರಸಿಂಹ ಶಾಸ್ತ್ರಿಯವರ ಬಗ್ಗೆ ಮಾಹಿತಿ ಕೃಪೆ : ಕ.ಪು. ಶ್ರೀನಿವಾಸ ಭಟ್, ಪಂಚವಟಿ , ಕಟೀಲು )