Wednesday, October 13, 2010
ಬಯಲಾಟ ಮತ್ತು ಕಾಲಮಿತಿ ಯಕ್ಷಗಾನ ಪ್ರದರ್ಶನಗಳು
ಕರಾವಳಿಯಲ್ಲಿ ಬಯಲಾಟವೆಂದರೆ ರಾತ್ರಿಯಿಡೀ ಎಂಟರಿಂದ ಹತ್ತು ಗಂಟೆಗಳ ಪೂರ್ಣಪ್ರಮಾಣದ ಯಕ್ಷಗಾನ ಪ್ರದರ್ಶನ. ಕೋಡ೦ಗಿಯಿಂದ ತೊಡಗಿ ಬಾಲಗೋಪಾಲರೆ ಮೊದಲಾದ ಪೂರ್ವರಂಗ ಮುಗಿದು ಕೇಳಿ ಬಡಿದು ಪ್ರಸಂಗ ಆರಂಭವಾಗಿ ಬೆಳಗಿಯ ಜಾವ ಮಂಗಳ ಆಗುವವರೆಗೆ ಸುದೀರ್ಘ ಪ್ರದರ್ಶನ . ಚಿಕ್ಕವರಿದ್ದಾಗ ಆಟಕ್ಕೆ ಹೋಗುವುದೆಂದರೆ ಸಂಭ್ರಮ ! ಶಾಲಾ ಆಟದ ಮೈದಾನಿನಲ್ಲಿ ನಡೆಯುತ್ತಿದ್ದ ರಾತ್ರಿಯಿಡೀ ಪ್ರದರ್ಶನಕ್ಕೆ ಕಿಕ್ಕಿರಿದ ಜನ ಸಂದಣಿ ಇರುತ್ತಿತ್ತು. ದೂರದರ್ಶನದ೦ಥ ದೃಶ್ಯ ಮಾದ್ಯಮಗಳು ಇನ್ನು ಜನಸಾಮಾನ್ಯರ ಮನೆಗೆ ಲಗ್ಗೆ ಇಡದೆ ಇದ್ದ ಸಮಯವದು. ಬಹುತೇಕ ಜನ ಸಾಮಾನ್ಯರಿಗೆ ಇದ್ದ ಏಕೈಕ ಮನೋರಂಜನಾ ಸಾಧನ ಯಕ್ಷಗಾನ ಪ್ರದರ್ಶನ.
ದೂರದರ್ಶನವು ಜನ ಸಾಮಾನ್ಯರ ಜೀವನದ ಅವಿಭಾಜ್ಯ ಅಂಗವಾಗಿ ಸ್ಥಾಪಿತವಾದ ಮೇಲೆ ದೃಶ್ಯ ಮಾಧ್ಯಮಗಳ ಬೆಳವಣಿಗೆ ಹಾಗೂ ಚಲನ ಚಿತ್ರಗಳ ಭಾರಾಟೆ ಯಕ್ಷಗಾನ ಪ್ರದರ್ಶನಕ್ಕೆ ತೀವ್ರ ಹೊಡೆತ ನೀಡಿದ್ದಂತೂ ನಿಜ . ಜಾಗತೀಕರಣದ ಪರಿಣಾಮ ಹಾಗೂ ಯುವ ಜನತೆಯ ಪಾಶ್ಚಾತ್ಯ ಸಂಸ್ಕೃತಿಯ ಮೋಹ ನಮ್ಮ ಈ ಮಣ್ಣಿನ ಕಲೆಯ ಬಗ್ಗೆ ಅಸಡ್ಡೆಯೂ ಸೇರಿ ನಿಧಾನಕ್ಕೆ ಯಕ್ಷಗಾನವೂ ಕಾಲಗರ್ಭದಲ್ಲಿ ಅಡಗಿ ಹೋಗುವ ಅಪಾಯದ ಅಂಚಿಗೆ ಸರಿಯುತ್ತಿದೆ.
ಇಡೀ ರಾತ್ರಿ ಪ್ರದರ್ಶನ ಇತ್ತೀಚಿಗೆ ಕಳೆಗುಂದಿ ತಡರಾತ್ರಿಯ ಬಳಿಕ ಆಸನಗಳು ಬರಿದಾಗಿ ಬೆಳಗಿನ ಜಾವಕ್ಕೆ ಮೇಳದ ಕಲಾವಿದರು, ಆಟ ಆಡಿಸುವ ಸೇವಾಕರ್ತರು , ಧ್ವನಿವರ್ಧಕ ಮತ್ತು ಬೆಳಕಿನ ವ್ಯವಸ್ಥೆಯವರನ್ನು ಹೊರತುಪಡಿಸಿ ಬೆರಳೆಣಿಕೆಯ ಪ್ರೇಕ್ಷಕರು ಮಾತ್ರ ಉಳಿಯುತ್ತಿದ್ದು ಕಲಾವಿದರಿಗೆ ನಿರುತ್ಸಾಹ ಉಂಟಾಗುತ್ತಿದೆ.
ಇದಕ್ಕೊಂದು ಪರಿಹಾರ ಯತ್ನವಾಗಿ ಕಾಲಮಿತಿಯ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದು ಇಡೀ ರಾತ್ರೆಯ ಆಟದ ಸೊಗಸಿಲ್ಲದಿದ್ದರೂ ತಕ್ಷಣ ಸವಿಯಲು ಸಿಗುವ ಆಹಾರ ಪದಾರ್ಥದಂತೆ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ. ಮೂರು ನಾಲ್ಕು ತಾಸುಗಳ ಈ ಪ್ರದರ್ಶನದಲ್ಲಿ ಪೂರ್ವರಂಗವನ್ನು ಬಿಟ್ಟು ನೇರ ಕಥಾ ನಿರೂಪಣೆಗೆ ತೊಡಗುತ್ತಿದ್ದು ಜನರಿಗೆ ಚುಟುಕಾಗಿ ಕಥೆಯನ್ನು ಅಭಿವ್ಯಕ್ತಿಗೊಳಿಸಲಾಗುತ್ತಿದೆ. ಕಾಲಮಿತಿಯ ಯಕ್ಷಗಾನದಲ್ಲಿ ಕಲಾವಿದನಿಗೆ ಸಾಕಷ್ಟು ವಿಶ್ರಾಂತಿ ದೊರೆಯುತ್ತದೆ. ಅನಾವಶ್ಯಕವಾಗಿ ನಿದ್ದೆಗೆಟ್ಟು ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗಬೇಕಿಲ್ಲವಾದರೂ ತನ್ನ ಪಾತ್ರದ ಅಭಿವ್ಯಕ್ತಿಗೆ ಕಾಲಾವಕಾಶ ಮಾತ್ರ ಕಡಿಮೆಯೇ ಸಿಗುತ್ತಿದ್ದು ಕಲಾವಿದನ ವೃತ್ತಿ ಜೀವನಕ್ಕೆ ಅದೊಂದು ಸವಾಲಾಗಿದೆ.
ಈ ಮಧ್ಯೆ ನಿರಂತರ ೨೪ ತಾಸುಗಳ ಯಕ್ಷಗಾನ ಪ್ರಯೋಗ , ಸಂಜೆ ಆರಂಭವಾಗಿ ಮರುದಿನ ಮಧ್ಯಾಹ್ನದ ತನಕ ಪ್ರದರ್ಶನ ಅಲ್ಲೊಂದು ಇಲ್ಲೊಂದು ನಡೆಯುತ್ತಿದ್ದು ಈಗಲೂ ಅಷ್ಟು ಹೊತ್ತು ಪ್ರದರ್ಶನ ನೀಡುವ ಕಲಾವಿದರ ಸಾಮರ್ಥ್ಯವನ್ನು ತೋರಿಸುತ್ತಿದೆ.
ಇನ್ನು ಬಯಲಾಟಗಳ ಗುಣಮಟ್ಟದಲ್ಲೂ ಬಹಳ ಬದಲಾವಣೆಗಳಾಗಿವೆ. ಹಿಂದೆ ಹರಕೆಯ ಆಟವಾದರೂ ಕಲಾವಿದರು ತಮ್ಮ ಪಾತ್ರದ ಗುಣಮಟ್ಟವನ್ನು ಕಾಯ್ದುಕೊಂಡು ಬರುತ್ತಿದ್ದರು. ಈಗಿನ ವಾತಾವರಣವನ್ನು ಗಮನಿಸಿದಾಗ ಅದರಲ್ಲೂ ಬದಲಾವಣೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ .ಇದರೊಂದಿಗೆ ಸಾಮಾನ್ಯವಾಗಿ ಬಯಲಾಟ ಆಡಿಸುವವರು ಆಟದ ರಂಗೇರಿಸಲು ಬ್ಯಾಂಡ್ , ವಾದ್ಯ , ಕೊಂಬು ಕಹಳೆ ಇತ್ಯಾದಿ ಹೆಚ್ಚುವರಿ "ಹೊರೆ" ಯನ್ನು ದೇವರ ಪ್ರೀತ್ಯರ್ಥವಾಗಿ ? ತನ್ನ ಪ್ರತಿಷ್ಠೆಯನ್ನು ಮೆರೆಸಲು ಬಳಸುವುದನ್ನು ಎಲ್ಲರೂ ನೋಡಿ ಅನುಭವಿಸಿರುವ ವಿಷಯವೇ ! ಇಲ್ಲಿ ಯಾವುದೊಂದು ಯಕ್ಷಗಾನದ ಆವರಣಕ್ಕೆ ಪೂರಕವಾಗಿರದೆ ಆಟದ ಕಳೆಯನ್ನೇ ಹಾಳುಗೆಡಹುತ್ತದೆ ಎಂದು ಎಷ್ಟು ಬಾರಿ ತಿಳಿ ಹೇಳಿದರೂ ನಮ್ಮೂರ ಜನಕ್ಕೆ "ಬ್ಯಾಂಡ್ ಇಜ್ಜಿಂಡ ಎಂಚ ?" ಅಂತ ಮುಖ ಸಿ೦ಡರಿಸುವುದು ಅಭ್ಯಾಸ !. ಆಟದಲ್ಲಿ ದೇವಿ ಪ್ರತ್ಯಕ್ಷವಾಗುವಾಗ "ಕರಿಯ ಐ ಲವ್ ಯೂ " ಹಾಡನ್ನು ರಸವತ್ತಾಗಿ ಬ್ಯಾಂಡ್ ಸೆಟ್ ನವರು ನುಡಿಸಿದ್ದನ್ನು ನೋಡಬೇಕಾದ ದುರ್ಧೈವೂ ಈಗಿನ ಪ್ರೇಕ್ಷಕರಿಗಿದೆ !
ಹರಕೆ ಮೇಳಗಳು ಇಂದಿಗೂ ಪೂರ್ಣ ರಾತ್ರಿಯ ಪ್ರದರ್ಶನವನ್ನು ನೀಡುತ್ತಿದೆ. ಆದರೆ ಜನರನ್ನು ಸೆಳೆಯುವಲ್ಲಿ ಅದು ನಿಧಾನವಾಗಿ ವಿಫಲವಾಗುತ್ತಿರುವುದು ಒಂದು ದುರಂತವೇ ಸರಿ. ಹೀಗಾಗಿ ಕಲಾವಿದರ ಹಿತದೃಷ್ಟಿಯಿಂದ ಹರಕೆಯ ಆಟಗಳನ್ನು ಕಾಲಮಿತಿಯ ಪರಿಮಿತಿಗೆ ಒಳಪಡಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ.
ಫೋಟೋ ಕೃಪೆ : ಶ್ರೀ.ಸಂತೋಷ್ ಪೈ.
Subscribe to:
Post Comments (Atom)
3 comments:
its really painful to listen that whole night performances gradually vanishing.
somehow i feel these 'kaalamithi' shows are a welcome move because:
-they are main reasons why yakshagana still attracts lot of audience in urban areas(may be in rural areas too) while many other similar art forms(like doddata sannata etc) have almost have gone extinct
- they are really good for artists because they need not lose sleep and spoil their health. in today's date, there are very few artists who can perform full night roles, even in full night shows, same characters will e played by 2 different artists these days
ಶೇಣಿ, ಸಾಮಗ, ಕುಂಬ್ಳೆ ಯಂತಹ ಮಾತಿನಲ್ಲೇ ಪಾತ್ರವನ್ನು ಚಿತ್ರಿಸುವ ಕಲಾವಿದರ ಸೇವೆಯಿಂದ ಯಕ್ಷಗಾನ ಎಂದಿಗೆ ವಂಚಿತವಾಯಿತೋ ಮಾತ್ರವಲ್ಲ ಇಂದು ಕೇವಲ ಕುಣಿತ ಮತ್ತು ಅಭಿನಯಕ್ಕೆ ಮಹತ್ವ ಕೊಡುವಾಗ ಅರ್ಥಗಾರಿಕೆ ಇಲ್ಲದ ಇಂದು ಕಾಲಮಿತಿ ಯಕ್ಷಗಾನ ಅರ್ಥಪೂರ್ಣವೆನಿಸಿದೆ. ಇದು ಯಕ್ಷಗಾನ ಪ್ರಸಂಗ ಕರ್ತರಿಗೂ ಒಂದು ಸವಾಲಾಗಿ ಪರಿಣಮಿಸಿದೆ. ರಾಗ ತಾಳಗಳನ್ನು ಹೊಂದಿಸುವಲ್ಲಿ ಹರಸಾಹಸ ಪಡುವುದು ಅನಿವಾರ್ಯವೆನಿಸಿದೆ.
Post a Comment