Wednesday, September 2, 2009

ಯಕ್ಷಗಾನ ಛಂದೋ ಗ್ರಂಥಗಳು ...


ಯಕ್ಷಗಾನದ ವಿವಿಧ ಕಥೆಗಳನ್ನೊಳಗೊಂಡ ಕೃತಿಗೆ "ಪ್ರಸಂಗ" ವೆಂದು ಹೆಸರು . ಯಕ್ಷಗಾನದ ಪ್ರತಿಯೊಂದು ಕೃತಿಯೂ ಕನ್ನಡದ ನಾನಾ ಛಂದೋಬಂಧಗಳಿಂದ ಕೂಡಿದೆ . ಇಂಥ ಪ್ರಸಂಗಗಳನ್ನು ರಚಿಸಲು ಇರುವ ವ್ಯಾಕರಣ ಛನ್ಧಸ್ಸಿನ ನಿಯಮಗಳಿಗೆ ನಿರ್ಧಿಷ್ಟವಾದ ಆಧಾರ ಗ್ರಂಥವೊಂದನ್ನು ರಚಿಸಿದವರೆಂದರೆ ಪ್ರಸಿದ್ಧ ಜ್ಯೋತಿಷಿ ಶ್ರೀಯುತ ಕ.ಪು. ಸೀತಾರಾಮ ಕೆದಿಲಾಯರು . ಹಿಂದಿನ ಯಕ್ಷಗಾನ ಕವಿಗಳು ಯಕ್ಷಗಾನ ಪ್ರಸಂಗಗಳನ್ನು ಛಂದೋ ಬದ್ಧವಾಗಿಯೇ ರಚಿಸಿದ್ದರೂ ಯಕ್ಷಗಾನ ವ್ಯಾಕರಣವನ್ನು ಅಧಿಕೃತ ಗ್ರಂಥ ರೂಪದಲ್ಲಿ ಬರೆದವರಲ್ಲಿ ಶ್ರೀಯುತ ಕೆದಿಲಾಯರೇ ಮೊದಲಿಗರು .ಇತರ ಯಾವುದೇ ಕನ್ನಡ ಛಂದಸ್ಸು ಯಾ ವ್ಯಾಕರಣಗಳ ಅಧ್ಯಯನ ಮಾಡದೆ ಯಕ್ಷಗಾನ ಕೃತಿಗಳನ್ನು ರಚಿಸಲು ಅನುಕೂಲವಾಗುವಂತೆ ಶ್ರೀಯುತರು ರಚಿಸಿದ ಕೃತಿಯೇ "ಯಕ್ಷಗಾನ ಛಂದೋವಿವೇಕ " ಶ್ರೀ ವಿ.ಬಿ.ಹೊಸಮನೆಯವರ ಸಾರಥ್ಯದ ಭಾರಧ್ವಾಜ ಪ್ರಕಾಶನದವರು ಈ ಅಪೂರ್ವವಾದ ಕೃತಿಯನ್ನು ಮುದ್ರಿಸಿ ಯಕ್ಷಗಾನಾಸಕ್ತರಿಗೆ ಕಾಣಿಕೆಯಾಗಿ ನೀಡಿದ್ದಾರೆ .ಅಂತರ್ಜಾಲದಲ್ಲಿ ಇದರ scanned copy ಲಭ್ಯವಿದ್ದು ಆಸಕ್ತರು ಅದರ ಪ್ರಯೋಜನ ಪಡೆಯಬಹುದಾಗಿದೆ .ಯಕ್ಷಗಾನದಲ್ಲಿ ಹಾಡಲ್ಪಡುವ ವಿವಿಧ ರಾಗ , ತಾಳಗಳ ಪದ್ಯಗಳ ಛಂದಸ್ಸಿನ ಸ್ವರೂಪ , ಪ್ರಾಸಬೇಧ ,ವೃತ್ತಗಳು ,ರಗಳೆಗಳೇ ಮೊದಲಾದ ಛಂದೋ ಸಂಬಂಧಿ ವಿವರಣೆಗಳು ಈ ಕೃತಿಯಲ್ಲಿ ನಿದರ್ಶನಗಳ ಸಮೇತ ಉಪಲಬ್ಧವಿದೆ .

ಯಕ್ಷಗಾನ ಛಂದಸ್ಸಿನ ಬಗ್ಗೆ ಇನ್ನೊದು ಆಕರ ಗ್ರಂಥವನ್ನು ಬರೆದವರು ಶ್ರೀ ಶಿಮಂತೂರು ನಾರಾಯಣ ಶೆಟ್ಟರು . ಇವರು ರಚಿಸಿದ "ಯಕ್ಷಗಾನದ ಅನರ್ಘ್ಯ ಛ೦ದೋರತ್ನಗಳು " ಕೃತಿಯಲ್ಲಿ ಯಕ್ಷಗಾನ ಪ್ರಸಂಗಗಳಲ್ಲಿ ಅಲಕ್ಷಿತ ಅಪೂರ್ವವಾದ ಛ೦ದೋಬಂಧಗಳ ಕುರಿತು ವಿವರವಾದ ಮಾಹಿತಿಗಳಿವೆ . ಯಕ್ಷಗಾನ ಸಾಹಿತ್ಯದ ಛಂದಸ್ಸಿನ ಕುರಿತು ಅಧ್ಯಯನನಡೆಸುವವರಿಗೆ , ಭಾಗವತರಿಗೆ ಹಾಗೂ ಯಕ್ಷಗಾನ ಪ್ರಸಂಗ ಕರ್ತರಿಗೆ ಇವೆರಡು ಗ್ರಂಥಗಳೂ ಅತ್ಯುಪಯುಕ್ತ ಗ್ರಂಥಗಳಾಗಿವೆ . ಸ್ನಾತಕೋತ್ತರ ಅಧ್ಯಯನದ ಪಠ್ಯಕ್ರಮಕ್ಕೆ ಸೇರಿಸಬಹುದಾದ ವ್ಯಾಕರಣ ಯಾ ಛಂದಸ್ಸಿನ ಆಕರ ಗ್ರಂಥಗಳಲ್ಲಿ ಮೇಲೆ ತಿಳಿಸಿದ ಎರಡೂ ಗ್ರಂಥಗಳು ಮಹತ್ವದ ಸ್ಥಾನವನ್ನು ಹೊಂದಿದೆ .

ಪಠ್ಯ ಕ್ರಮದಲ್ಲಿ ಯಕ್ಷಗಾನವನ್ನು ಅಳವಡಿಸುವ ಬಗೆಗೆ ಚಿಂತನೆ ನಡೆಸುತ್ತಿರುವ ಈ ಸಮಯದಲ್ಲಿ ಯಕ್ಷ ಛಂದಸ್ಸಿನ ಬಗೆಗೂ ಗಮನ ಹರಿಸಬೇಕಾದುದು ಎಲ್ಲರ ಕರ್ತವ್ಯ. ಇಲ್ಲದೆ ಹೋದರೆ ಸಿನಿಮೀಯ ,ಜಾನಪದ , ಕಂಸಾಳೆ ಹಾಡುಗಳು ಭೂತ ಬೇತಾಳಗಳ೦ತೆ ಕುಣಿದು , ಮೊತ್ತ ಮೊದಲ ಬಾರಿಗೆ ಯಕ್ಷಗಾನವನ್ನು ವೀಕ್ಷಿಸುವ ಕುತೂಹಲಿಗಳಿಗೆ "ಇದೇ ಸತ್ಯ " ಎಂಬ ಭಾವನೆ ತರುವುದರಲ್ಲಿ ಪರ್ಯಾಪ್ತವಾದೀತು ...
ನಿಮಗೇನನಿಸುತ್ತದೆ ?

3 comments:

YAKSHA CHINTANA said...

ಒಳ್ಳೆಯ ಮಾಹಿತಿಪೂರ್ಣ ಲೇಖನ. ಏನೋ ಒಂದು ಹಾಡು ಹೊಸೆದು ಪ್ರಸಂಗ ರಚಿಸುವ ಇಂದಿನ ಪ್ರಸಂಗ ಕರ್ತರು ಸ್ವಲ್ಪ ಇದರತ್ತ ಗಮನ ಹರಿಸಿ ಪ್ರಸಂಗ ರಚಿಸುವುದು ಸೂಕ್ತ. ಕೇವಲ ಜನಪ್ರಿಯತೆ ಮಾನದಂಡವಲ್ಲ. ಅದಕ್ಕಾಗಿ ವಕ್ರ ಮಾರ್ಗ ಹಿಡಿಯುವವರಿಗೆ ಈ ಲೇಖನ ಗಮನ ಹರಿಸುವಂತೆ ಮಾಡಲಿ. ಇನ್ನೊದು , ಅಂತರ್ಜಾಲದಲ್ಲಿ ಪ್ರಕಟವಾದ ಪುಸ್ತಕದ ಲಿಂಕ್ ಅನ್ನು ಒದಗಿಸಿ..

chirantana said...

good information :)

Ragu Kattinakere said...

ellide online? Link iddrare kodthira?

Yakshamitra Toronto