ಯಕ್ಷಗಾನ ಬಯಲಾಟಗಳಲ್ಲಿ ಸನ್ನಿವೇಶ ನಿರ್ಮಾಣಕ್ಕೆ ದೊಂದಿ ಯಾ ದೀವಟಿಗೆಯನ್ನು ಬಳಸುವುದು ಪದ್ಧತಿ. ಕುಂಭಕರ್ಣ ,ವೀರಭದ್ರನ ಬಾರಣೆಗೆ , ಮಹಿಷಾಸುರನ ಪ್ರವೇಶಕ್ಕೆ , ರುದ್ರ ಭೀಮನ ಆವೇಶಕ್ಕೆ , ಚಂಡ-ಮುಂಡರ ಅಬ್ಬರಕ್ಕೆ , ಯಾವುದೇ ಬಣ್ಣದ ವೇಷಗಳು ಕಳೆಗಟ್ಟಬೇಕಾದರೆ ದೊಂದಿ ಬೇಕೇ ಬೇಕು . ಹಿಂದೆ ದೊಂದಿ ಬೆಳಕಿನ ಆಟಗಳು ನಡೆಯುತ್ತಿತ್ತು . ಆಗಲೂ ವೇಷಗಳ ಅಬ್ಬರ ಹೆಚ್ಚಿಸಲು ದೊಂದಿಯನ್ನು ಬಳಸುತ್ತಿದ್ದರು ಎಂದು ಹಿರಿಯರಿಂದ ತಿಳಿದು ಬರುತ್ತದೆ .
ಇಲ್ಲಿ ಬಳಸುವ ದೊಂದಿಯನ್ನು ಸಿದ್ದಪಡಿಸುವುದು ಒಂದು ಕಲೆ. ನಮ್ಮ ಊರಿನ ಕೆಳಗಿನ ಬೈಲಿನ ಸಂಕಪ್ಪಣ್ಣ ದೊಂದಿ ಕಟ್ಟುವುದರಲ್ಲಿ ನಿಪುಣರು. ನಮ್ಮೂರಿನ ಯಾವುದೇ ಆಟಗಳು ನಡೆಯುವುದಿದ್ದರೂ ಸಂಕಪ್ಪಣ್ಣನ ಸೇವೆ ಅತೀ ಅಗತ್ಯವಾಗಿತ್ತು. ಭೂತ ಕೋಲ, ಜಾತ್ರೆ , ಯಕ್ಷಗಾನಗಳಿಗೆ ಅವಶ್ಯವಿರುವ ಎಲ್ಲ ರೀತಿಯ ದೊಂದಿ ಸಿದ್ದಪಡಿಸುವುದರಲ್ಲಿ ನಿಷ್ಣಾತರಾದ ಅವರನ್ನು ದೊಂದಿ ಸಂಕಪ್ಪಣ್ಣ ಎಂದೇ ಎಲ್ಲರೂ ಕರೆಯುವುದು.
ಅಗತ್ಯ ಬಿದ್ದಾಗ ಬಣ್ಣದ ವೇಷ , ಹಾಸ್ಯ , ಒತ್ತು ಮದ್ದಲೆಗಾರರಾಗಿಯೂ ಇವರು ಸಹಕರಿಸಿ ಪ್ರದರ್ಶನ ಸುಸೂತ್ರವಾಗಿ ನಡೆಯುವಂತೆ ಮಾಡುವ ಇವರೊಬ್ಬ ಆಪತ್ಭಾಂಧವ . ರಾತ್ರಿಯಿಡೀ ಪರದೆ ಹಿಡಿಯುವುದು , ವೇಷ ಕಟ್ಟುವುದು , ರಂಗಕ್ಕೆ ದೊಂದಿ ಬೇಕಾದಾಗ ಹಿಡಿಯುವುದು . ಒಟ್ಟಿನಲ್ಲಿ "ಸರ್ವ ಸುದರಿಕೆ" ಮಾಡುವ ಕಟ್ಟಾಳು ನಮ್ಮ ಸಂಕಪ್ಪಣ್ಣ . ಬೇಸಿಗೆಯಲ್ಲಿ ಏನಿಲ್ಲವೆಂದರೂ ಸುತ್ತ ಮುತ್ತಲ ಊರುಗಳಿಗೆ ಹೋಗಿ ೬೦-೭೦ ಆಟಗಳನ್ನು ಸುಧಾರಿಸಿ ಬರುವ ಇವರು ಮಳೆಗಾಲದಲ್ಲಿ ತೋಟಕ್ಕೆ ಮದ್ದು ಬಿಡುವುದರಲ್ಲಿ ನಿರತರಾಗುತ್ತಾರೆ . ಇಡೀ ಬೈಲಿನ ಒಂದು ಸುತ್ತು ಮದ್ದು ಬಿಟ್ಟಾಗ ಎರಡನೇ ಸಲಕ್ಕೆ ದಿನ ಹತ್ತಿರ ಬಂದೆ ಬಿಡುತ್ತದೆ. ಸಂಕಪ್ಪಣ್ಣ ಪತ್ನಿ. ಒಬ್ಬ ಮಗ ಶಾಂತಪ್ಪ , ಮಗಳು ಲೀಲಾವತಿಯೊಂದಿಗೆ ಸಂಸಾರ ಸಾಗಿಸುತ್ತಿದ್ದರು.
ಸಂಕಪ್ಪಣ್ಣ ದೊಂದಿ ಹಿಡಿಯುವ ಕ್ರಮ, ರಾಳದ ಹುಡಿಯನ್ನು ಅದಕ್ಕೆರಚಿದಾಗ ಮೈಗೆ ಅದರಿಂದ ಬೆಂಕಿಯ ಕಿಡಿಗಳು ಸಿಡಿಯದಂತೆ ತಪ್ಪಿಸಿಕೊಂಡು ವೇಷದ ರಭಸಕ್ಕೆ ಹೊಂದಿಕೊಂಡು ರಂಗಸ್ಥಳಕ್ಕೆ ಒಯ್ಯುವ ರೀತಿ ಬಹಳ ಅಂದ. ಪ್ರೇಕ್ಷಕರಿಗೆ ಒಂದಿನಿತೂ ಕಿರಿ ಕಿರಿ ಆಗದಂತೆ ಅವರು ಎಚ್ಚರವಹಿಸುವ ರೀತಿ ಅನುಸರಣೀಯ . ಸಾಮಾನ್ಯವಾಗಿ ಶ್ರೀದೇವಿ ಮಹಾತ್ಮೆ , ಶ್ರೀದೇವಿ ಲಲಿತೋಪಖ್ಯಾನ ಪ್ರಸಂಗಗಳಲ್ಲಿ ಬರುವ ಮಹಿಷಾಸುರನ ಪಾತ್ರಕ್ಕೆ ವೇಷಧಾರಿಯೂ ಬಳಸುವ ಮುಖ್ಯ ದೊಂದಿ ಅಲ್ಲದೆ ಅದರ ಹಿಂಬಾಲಕರು ಚೌಕಿಯಿಂದ ರಂಗಸ್ಥಳದ ವರೆಗೆ ಜೊತೆ ದೊಂದಿಯವರೂ ಸಾಥ್ ಕೊಡುತ್ತಾರೆ. ಇದರಲ್ಲಿ ಹೆಚ್ಚಾಗಿ ಮಕ್ಕಳೇ ಇದ್ದು , ಅವರಿಗೆ ಬೇಕಾದ ಸೂಟೆಯನ್ನು ನಾಜೂಕಾಗಿ ಕಟ್ಟಿ ಕೊಡುತ್ತಿದ್ದ ಸಂಕಪ್ಪಣ್ಣ, ( ಕೆಲವೊಮ್ಮೆ ಕಂಠಪೂರ್ತಿ ಕುಡಿದಿದ್ದರೂ ಸಹ !)ಎಂದೂ ಯಾರ ಮೇಲೂ ರೇಗಾಡಿದವರಲ್ಲ .ತೋಟದಲ್ಲಿ ಅಡಿಕೆ ಮರಕ್ಕೆ ಮದ್ದು ಬಿಡುವಾಗಲೂ ಯಾವುದಾದರೊಂದು ಪ್ರಸಂಗದ ಪದ್ಯವನ್ನು ಗುನುಗುನಿಸುತ್ತಾ " ಆಯೇ ಕೈ ತಿರ್ಗಾವುನ ಇಂಚ ಅಣ್ಣೆರೆ " ಅಂತ ಕಂಟ್ರೋಲರ್ ತಿರುಗಿಸಿ ತೋರಿಸುತ್ತಿದ್ದರು!. ಹೆಚ್ಚಿನ ಎಲ್ಲ ಪ್ರಸಂಗದ ನಡೆ, ಯಾವ ಹೊತ್ತಿನಲ್ಲಿ ರಂಗದಲ್ಲಿ ಏನಿರಬೇಕು ಎಂಬ ಮಾಹಿತಿ , ಯಾವ ಪದಕ್ಕೆ ಮದ್ದಲೆ ಮಾತ್ರ ಸಾಕು , ಚೆಂಡೆ ಪದಗಳು ಯಾವುದು ? (ಈಗ ಪ್ರಸಿದ್ದ ಚೆಂಡೆ-ಮದ್ದಲೆವಾದಕರೂ ಕರುಣಾರಸಭರಿತ ದುಃಖದ ಪದಗಳಿಗೂ ತಮ್ಮ ಚೆಂಡೆಯನ್ನು "ಭಾರಿಸಿ" ಕುಲಗೆಡಿಸುತ್ತಾರೆ ಬಿಡಿ !) , ಯಾವ ಭಾಗವತರಿಗೆ ಎಷ್ಟು ಹೊತ್ತಿಗೆ ಯಾವ ರೀತಿಯ ಚಾ ಬೇಕು. ಹೊಗೆಸೊಪ್ಪು "ಕುಣಿಯವೋ" ಬೇಜವಾಡವೋ ಸಮಗ್ರ ಮಾಹಿತಿ ಕಣಜ ನಮ್ಮ ಸಂಕಪ್ಪಣ್ಣ.
ಮೊನ್ನೆ ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ತರಗತಿಯಲ್ಲಿ ಪಾಠ ಮುಗಿಸಿ ಹೊರಬರುತ್ತಿದ್ದಾಗ ಒಂದು ಅನಿರೀಕ್ಷಿತ ದೂರವಾಣಿ ಕರೆ ಬಂತು . ಯಾರೆಂದು ನೋಡಿದರೆ "ಎಂದೂ ಯಾವ ಕಾರಣಕ್ಕೂ " ತಮ್ಮ ಸ್ವಂತ ಹಣದಿಂದ ಫೋನ್ ಮಾಡದ ಗೋಪಣ್ಣನ ಕರೆ " ಮದ್ದು ಬಿಡ್ತ ದೊಂದಿ ಸಂಕಪ್ಪಂಗೆ ಆಕ್ಸಿಡೆಂಟ್ ಅತು ; ಈಗ ಮಣಿಪಾಲಕ್ಕೆ ಕೊಂಡು ಹೋದವು ; ಬದ್ಕುದು ಸಂಶಯವೇ " . ನನಗೆ ಅರೆಕ್ಷಣ ಏನು ಮಾಡಬೇಕೆಂದೇ ತೋಚಲಿಲ್ಲ . ದಿನವೂ ಲವಲವಿಕೆಯಲ್ಲಿ ಇರುತ್ತಿದ್ದ ಸಂಕಪ್ಪಣ್ಣ ಅನಿರೀಕ್ಷಿತವಾಗಿ ಹೀಗೆ ಆಸ್ಪತ್ರೆ ಸೇರಿದ್ದು , ಚಿಕ್ಕಂದಿನಿಂದಲೂ ಅವರೊಂದಿಗೆ ಒಡನಾಟವಿದ್ದ ನನಗೆ ಎಲ್ಲವೂ ಅಯೋಮಯವಾದಂತಾಗಿ ಚಲನಚಿತ್ರದ ದೃಶ್ಯಗಳಂತೆ ಕಣ್ಣಮುಂದೆ ಬಂದು ನಿಂತಿತು. ಸಂಜೆಯ ಸುಮಾರಿಗೆ ಇಹಲೋಕ ಯಾತ್ರೆ ಮುಗಿಸಿದ ಅವರನ್ನು ನೋಡಲು ಯಾವೊಬ್ಬ ಕಲಾವಿದನೂ, ಯಕ್ಷಗಾನ ಅಕಾಡೆಮಿಯ ಸದಸ್ಯನೂ , ಬಾರದೆ ಅಂತ್ಯಕ್ರಿಯೆ ಮುಗಿಯಿತು. ಮರುದಿನ ಪತ್ರಿಕೆಯಲ್ಲೂ "ರಾಕಿ ಸಾವಂತ್ ಸ್ವಯಂವರ " ವಿಷಯ ಮುಖಪುಟದಲ್ಲಿ ರಾರಾಜಿಸುತ್ತಿದ್ದು , ಕೊನೆ ಪಕ್ಷ ಹನ್ನೊಂದನೇ ಪುಟದಲ್ಲಾದರೂ ಈ ವರ್ತಮಾನ ಬಾರದೆ , ಒಬ್ಬ ಉತ್ತಮ ರಂಗಕರ್ಮಿಯ ಅಂತ್ಯ ಸುದ್ದಿ ಇಲ್ಲದೆ ಆಗಿ ಹೋಯಿತು.
ಏನಿದ್ದರೂ ಇಡೀ ಊರಿನವರ ಮನದಲ್ಲಿ , ಮುಂದೆ ನಡೆಯುವ ಆಟಗಳಲ್ಲಿ ಸದಾ ನೆನಪಿಗೆ ಬರುವ ವ್ಯಕ್ತಿತ್ವ ದೊಂದಿ ಸಂಕಪ್ಪಣ್ಣನದ್ದು . ಅವರಿಗಿದೋ ಮನ:ಪೂರ್ವಕ ಶ್ರದ್ಧಾಂಜಲಿ .
***
2 comments:
sannaagippaga daksha yajna prasangalli nodida dondi vesha nenappaatu enage. nice memories..
ಸಂಕಪ್ಪಣ್ಣನಂತವರು ಎಲೆಮರೆಯ ಕಾಯಿ ಇದ್ದ ಹಾಗೆ. ಬರೀ ಜಾಹೀರಾತು ಯುಗದಲ್ಲಿ ಜೀವಿಸುವ ನಾವು ನಮ್ಮತನವನ್ನು ಪರಾಮರ್ಶಿಸಬೇಕಾಗಿದೆ. ಇದ್ದುದಕ್ಕಿಂತ ಜಾಸ್ತಿ ಪ್ರದರ್ಶನಕ್ಕಿಡುವ ಇಂದಿನ ಕಲಾವಿದರು ಎರಡು ಮೂರು ತಾಳ ಕಲಿತಕೂಡಲೇ ಚೆಂಡೆ ಮದ್ದಲೆಗಾರರಗುವ ( ಇಂದಿನ ಕೆಲವು ಭಾಗವತ ಅಂತ ಜಾಹಿರಾತು ಮಾಡುವ ಭಾಗವತರಿಗೆ ಅಷ್ಟು ತಾಳ ಕೂಡ ಜಾಸ್ತಿ ಏನೋ?) ಇಂತಹ ಪ್ರಥಮಿಕರಿಂದ ಕಲಿಯುವಂತಹುದು ತುಂಬಾ ಇದೆ. ಮುಖ್ಯವಾಗಿ ಕಲೆಯ ಮೇಲಿರುವ ಅರ್ಪಣಾ ಭಾವ ಮತ್ತು ಅದರಲ್ಲಿ ಇರುವ ನಿಸ್ವಾರ್ಥ ಭಾವ.. ಅಗಲಿದ ಆತ್ಮಕ್ಕೆ ಭಗವಂತನು ಶಾಂತಿಯನ್ನು ಕರುಣಿಸಲಿ.
Post a Comment