Tuesday, August 12, 2014

ಗುಣಮಟ್ಟದ ಬ್ಲಾಗ್ ಬರವಣಿಗೆ ಮತ್ತು ಓದುಗನ ನಿರೀಕ್ಷೆಗಳು

ಅಂತರಜಾಲದಲ್ಲಿ ಅದೆಷ್ಟೋ ಬ್ಲಾಗ್ ಗಳು ಕಾಣ ಸಿಗುತ್ತದೆ. ಬ್ಲಾಗ್ ಗಳು ನಮ್ಮ ವಯುಕ್ತಿಕ ಅನಿಸಿಕೆಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವ ಉತ್ತಮವಾದ ಮಾಧ್ಯಮ. ಇದೊಂದು ನಿರಂತರ ಬರವಣಿಗೆಯಲ್ಲಿಯೇ  ಪ್ರವೃತ್ತಿ ಉಳ್ಳವರು ತಾವು ಕಾರ್ಯ ನಿರ್ವಹಿಸುವ ಪತ್ರಿಕೆಯ ವ್ಯಾಪ್ತಿಗೆ ಬರದಿರುವ ವಿಚಾರಗಳು ತಿಳಿಸಲು, ಹವ್ಯಾಸಕ್ಕಾಗಿ ಬರೆಯುವವರು, ಅಪರೂಪಕ್ಕೆ ಒಮ್ಮೆ ನಾನೂ ಒಂದು ಕೈ ನೋಡೇ ಬಿಡ್ತೇನೆ  ಎಂದು ಹುರುಪಿನಲ್ಲಿರುವ "ಉತ್ಸಾಹಿಗಳಿಗೆ" ಹೀಗೆ ಹತ್ತು ಹಲವು ಮಂದಿಗೆ ಅವಕಾಶವನ್ನು ಕಲ್ಪಿಸಿ ತಮ್ಮ ತಮ್ಮ ಚಿಂತನೆಗಳ ಪ್ರಸಾರಕ್ಕೆ ಅನುವು ಮಾಡಿ ಕೊಡುತ್ತದೆ .  ಬ್ಲಾಗ್ ಗಳಲ್ಲಿ ಹೊಸ ಹೊಸ ವಸ್ತು  ವಿಷಯಗಳು,  ವೈಜ್ಞಾನಿಕ ಅನ್ವೇಷಣೆಗಳು ,ಕಲಾತ್ಮಕ ಫೋಟೋಗಳು , ಒಮ್ಮೆ  ಓದಿ ನಕ್ಕು ಬಿಟ್ಟು ಹಗುರಾಗುವ  ತಮಾಷೆಗಳು , ಪ್ರವಾಸ ಕಥನಗಳು, ಯಕ್ಷಗಾನ , ನಾಟಕ , ಕಾದಂಬರಿ ವಿಮರ್ಶೆ , ಮಕ್ಕಳ ಕವನಗಳು ( ) ಹೀಗೆ ಅವರವರ ಆಸಕ್ತಿಗೆ ತಕ್ಕಂತೆ ಅವರರವರು ಕಂಡ ,ಕೇಳಿದ, ಭೇಟಿಮಾಡಿದ ಪ್ರದೇಶ, ವ್ಯಕ್ತಿ ಹೀಗೆ ವೈವಿಧ್ಯಮಯ ವಿಷಯಗಳ ಹೂರಣ  ನಮ್ಮ ಏಕತಾನತೆಯನ್ನು ಬಹುಮಟ್ಟಿಗೆ ಕಡಿಮೆ ಮಾಡುತ್ತವೆ.ಇದರಲ್ಲೂ  ಬೆಂಗಳೂರಿನ ಕಟ್ಟಾ ರಾಜ್ ಕುಮಾರ್ ಅಭಿಮಾನಿ ಯಾ  ,ಕಟ್ಟಾ ಕನ್ನಡ ಅಭಿಮಾನಿ ಯಾ ಕಟ್ಟಾ ತೆಂಕುತಿಟ್ಟು ಯಕ್ಷಗಾನ ಅಭಿಮಾನಿಗಳಂತೆ ಕೆಲವರು ಕೆಲವು ಬರಹಗಾರರ ಅಭಿಮಾನಿಗಳೂ ಇರುತ್ತಾರೆ ! ಇಲ್ಲೂ  ನಿರಂತರ ಬ್ಲಾಗ್ ಬರೆಯುವವರೂ ಮತ್ತು ಅದನ್ನು ನಿರಂತರ ಓದಿ ಪ್ರತಿಕ್ರಯಿಸುವವರೂ ಇರುವುದು ಆ ಬ್ಲಾಗ್ ನ ಪ್ರಸಿದ್ಧಿಯನ್ನು ತೋರಿಸುತ್ತದೆ. ಇನ್ನು ಕೆಲವೊಮ್ಮೆ ನಮ್ಮ ಮಿತ್ರರೇ ಬರೆಯುವ ಲೇಖನಗಳನ್ನು ದಾಕ್ಷಿಣ್ಯಕ್ಕಾದರೂ ಓದಲೇ ಬೇಕಾದ ಅನಿವಾರ್ಯತೆ ಕೆಲವೊಮ್ಮೆ ಬಂದೇ ಬರುತ್ತದೆ ! ನಮ್ಮ ಮಿತ್ರರ ಪ್ರತಿಭೆ ಆಸಕ್ತಿಗಳು ನಮ್ಮ ಅಭಿರುಚಿಗೆ  ತಕ್ಕನಂತೆ  ಇದ್ದರೆ ಅವರ ಬರವಣಿಗೆ ನಮಗೆ ರುಚಿಸಿ ಅದನ್ನು ನಾವು ಅನುಸರಿಸತೊಡಗುತ್ತೇವೆ . ಒಬ್ಬ ಅಧ್ಯಾಪಕ  ತರಗತಿಯಲ್ಲಿರುವ ಒಳ್ಳೆಯ ವಿದ್ಯಾರ್ಥಿಯ ಬಗ್ಗೆ ಒಳ್ಳೆಯ ನಿರೀಕ್ಷೆ ಇಟ್ಟಂತೆ  ಯಾ ಓರ್ವ ಕ್ರೆಕೆಟ್ ಅಭಿಮಾನಿ ತನ್ನಿಷ್ಟದ ಕ್ರಿಕೆಟಿಗನ ಮೇಲೆ ನಿರೀಕ್ಷೆ ಇಟ್ಟಂತೆ ಓದುಗನಿಗೂ ಒಂದು " ಈ ಅಸಾಮಿ ಒಳ್ಳೆ ಬರೀತಾನೆ ಮಾರಾಯ " ಅಂತ ನಿರೀಕ್ಷೆ ಇದ್ದೆ ಇರುತ್ತದೆ .  ಆದರೆ ಕೆಲವೊಮ್ಮೆ  ಕ್ರಿಕೆಟಿಗ ಆಟದಲ್ಲಿ ಸೊನ್ನೆ ಸುತ್ತಿದಂತೆ ಲೇಖಕ ಕಳಪೆ ಬರಹವನ್ನು, ಪ್ರದರ್ಶಿಸಿದಾಗ ಸಹಜವಾಗಿ ಸಿಟ್ಟು ಬರುತ್ತದೆ. ಒಬ್ಬನಿಂದ ಎಲ್ಲ ಸಮಯದಲ್ಲೂ ಎಲ್ಲವನ್ನು ಒಳ್ಳೆಯದೇ ಆಗಿರಬೇಕೆಂದು ನಿರೀಕ್ಷಿಸುವುದು ತಪ್ಪಾದರೂ  ಬರೆಯುವ ಬರಹಗಾರ ಓದುಗನ ಆಸಕ್ತಿಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ನನಗನಿಸಿದಂತೆ ಕೆಲವೊಂದು ಮುನ್ನೆಚ್ಚರಿಕೆ  ಬರಹಗಾರ  ತೆಗೆದುಕೊಳ್ಳುವುದು ಒಳ್ಳೆಯ ಬರಹಕ್ಕೆ ಅಪೇಕ್ಷಣೀಯ .

೧. ಪದೇ ಪದೇ ಒಂದೇ ಶಬ್ದವನ್ನು ಬಳಸುವುದು ( ಉದಾ: ಇಂಥ ಕಲಾವಿದರ ಅಂತ ವೇಷ "ಅತ್ಯದ್ಭುತ " "ಪರಮಾದ್ಭುತ " ! " ಅವರ್ಣನೀಯ " ಇತ್ಯಾದಿ ) ಬಿಡುವುದು
೨. ಯಾರೋ ಒಬ್ಬನನ್ನು ಭೇಟಿ ಮಾಡಿದಾಗ ನಮಗೆ ಆದ ಅನುಭವದಲ್ಲಿ ನಾನೊಬ್ಬನೇ ಹೀರೋ  (ಸ್ವಯಮ್ಪ್ರಶಂಸೆ)
೩. ನಮ್ಮ ಬರಹ "Judgmental" ಆಗದಿರುವಂತೆ ಎಚ್ಚರವಹಿಸುವುದು. ಇದು ಬಹಳ ಮುಖ್ಯ. ನಮ್ಮ ಅನಿಸಿಕೆಯೇ ಅಂತಿಮ ಅನ್ನುವ ಧ್ಯೇಯ ಇರಬಾರದು.
೪. ಬರೀ ಕೆಲವು ಭಾವನಾತ್ಮಕ ಶಬ್ದಗಳನ್ನು ಉಪಯೋಗಿಸುವುದರಿಂದ ಬ್ಲಾಗ್ ಓದುಗರ ಮನ ಮುಟ್ಟದು. ವಿಷಯಕ್ಕೆ ಅತ್ಯಂತ ಹೆಚ್ಚಿನ ಪ್ರಾಮುಖ್ಯ ನೀಡಬೇಕು.
೫. ಆದಷ್ಟೂ ಇತರರ ಮನಸ್ಸನ್ನು ನೋವುಗೊಳಿಸದಂತೆ ಎಚ್ಚರವಹಿಸುವುದು.
ಇನ್ನೂ  ಇದೆ..

3 comments:

Vinod Kumar Bangalore said...

ಅರ್ಥಗರ್ಭಿತ ಲೇಖನ , ಇಷ್ಟವಾಯಿತು

ಸುಬ್ರಹ್ಮಣ್ಯ ಭಟ್ said...

thank you

YAKSHA CHINTANA said...

ಓದಿ ಓದಿ ಕೆಲವು ಶಬ್ದಗಳನ್ನು ನಾನು ಬರೆಯುವುದನ್ನೇ ಬಿಟ್ಟಿದ್ದೇನೆ. ಕೆಲವು ಉಪಯುಕ್ತ ಮಾಹಿತಿಗಳನ್ನು ಸಲಹೆಗಳನ್ನು ಈ ಪುಟ್ಟ ಲೇಖನದಲ್ಲಿ ನೀಡಿದ್ದೀರಿ ಧನ್ಯವಾದಗಳು.