ಕೆಲವು ವರ್ಷಗಳ ಹಿಂದೆ ಆರ್ಕುಟ್ ಸಂಪರ್ಕ ಜಾಲದಲ್ಲಿ ಯಕ್ಷಗಾನಾಸಕ್ತರ ಗುಂಪಿನಲ್ಲಿ "ಸಮಾನ ಶೀಲೇಶು ವ್ಯಸನೇಶು ಸಖ್ಯಂ " ಎಂಬಂತೆ ದೃಷ್ಟನಾದ ಮಹೇಶ ಮೊನ್ನೆಯಷ್ಟೇ ನೀಡಿದ ಪುಸ್ತಕ "ದೃಷ್ಟ-ಅದೃಷ್ಟ"ವೆಂಬ ಆತ್ಮ ವೃತ್ತಾಂತವನ್ನು ಸಾದ್ಯಂತವಾಗಿ ಓದಿದಾಗ ಸಹಜವಾಗಿ ಕೆಲವು ಅನಿಸಿಕೆಗಳು ಮನದಲ್ಲಿ ಮೂಡಿದವು. ಅವುಗಳನ್ನು ಲಿಪಿರೂಪಕ್ಕಿಳಿಸಿ ಇಲ್ಲಿ ಪ್ರಸ್ತುತಪಡಿಸಿದ್ದೇನೆ.
"ದೃಷ್ಟ-ಅದೃಷ್ಟ " ಎಂಬುದು ಎಲ್ಯಡ್ಕ ಶ್ರೀಯುತ ಈಶ್ವರ ಭಟ್ಟರ ಆತ್ಮವೃತ್ತಾಂತ . ಶ್ರೀಯುತರ ಷಷ್ಟ್ಯಬ್ಧ ಸಮಾರಂಭದ ಶುಭಾವಸರದಲ್ಲಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರಿಂದ ಅನಾವರಣಗೊಂಡ ಕೃತಿ ಕುಸುಮ.
ಸುಮಾರು ೧೯೪೦ ರಿಂದ ೧೯೭೦ರ ದಶಕದಲ್ಲಿ ದಕ್ಷಿಣ ಕನ್ನಡ, ಕಾಸರಗೋಡು ಮೂಲದ ಕೆಳ ಮಧ್ಯಮ ವರ್ಗದ ಹವ್ಯಕರ ಕುಟುಂಬಗಳ ಆರ್ಥಿಕ , ಸಾಮಾಜಿಕ ಹಾಗೂ ನೈತಿಕ ಜನ ಜೀವನಕ್ಕೆ ಹಿಡಿದ ಕೈಗನ್ನಡಿಯಂತೆ ಪುಸ್ತಕದ ಪೂರ್ವಾರ್ಧವಿದ್ದರೆ , ಪ್ರಾಮಾಣಿಕತೆ ,ಕಠಿಣ ದುಡಿಮೆಗೆ ಸಂದ ಪ್ರತಿಫಲವೇನೆಂಬ ಅಂಶವು ಕೊನೆಯ ಭಾಗದಲ್ಲಿ ಜೀವನ ಸಾರ್ಥಕ್ಯದೊಂದಿಗೆ ಉಲ್ಲೇಖಿಸಲಾಗಿದೆ .
ಪುಸ್ತಕದ ಆರಂಭದಲ್ಲಿ ಬಾಲಕ ಈಶ್ವರ ಭಟ್ಟರು ಬಾಲ್ಯದಲ್ಲಿಯೇ ಮಾತೃ ವಿಯೋಗವನ್ನು ಅನುಭವಿಸಿದ ಚಿತ್ರಣ ಮನಕಲಕುವಂತಿದೆ . ಪುಸ್ತಕ ಓದುತ್ತ ಮುಂದೆ ಸಾಗುತ್ತಿದ್ದಂತೆ ಹಳೆಯ ದಶಕಗಳ ಜೀವನ ಶೈಲಿಯ ಚಿತ್ರಣಗಳು ( ಮಳೆಯಿಂದ ರಕ್ಷಣೆ ಪಡೆಯಲು ಕೊಡೆಯ ಬದಲಾಗಿ ಮಡಲಿನ ಗೊರಬೆ....ಇತ್ಯಾದಿ ) ಮನೋಮಂಡಲದಲ್ಲಿ ಭಿತ್ತಿ ಚಿತ್ರಗಳಂತೆ ಹಾದುಹೋಗುತ್ತವೆ . ಇದರಿಂದ ನಮ್ಮ ಹಿರಿಯರು ಎಷ್ಟು ಕಷ್ಟ ಸಹಿಷ್ಣುಗಳು , ಅಶಾವಾದಿಗಳೂ , ನಿರಂತರ ಪ್ರಯತ್ನಶೀಲರು ಆಗಿದ್ದುದರಿಂದ ಇಂದಿನ ಯುವ ಪೀಳಿಗೆ ಭದ್ರ ಬುನಾದಿಯ ಮೇಲೆ ಸಮರ್ಥವಾಗಿ ನಿಂತು ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಎದೆಗಾರಿಕೆಯುಳ್ಳವರನ್ನಾಗಿ ಮಾಡಿದೆ ಎಂದು ತಿಳಿಯುತ್ತದೆ .
ಉದ್ಯಮ ಸಾಹಸಂ ಧೈರ್ಯಂ
ಬುದ್ಧಿ ಶಕ್ತಿ ಪರಾಕ್ರಮ:
ಷಡೇತೇ ಯತ್ರ ವರ್ತಂತೆ
ತತ್ರ ದೈವಂ ಪ್ರಸೀದತಿ
ಎಂಬ ಸೂಕ್ತಿಯಂತೆ ತಮ್ಮ ಜೀವನವೆಂಬ ಉದ್ಯೋಗದಲ್ಲಿ ಸಾಹಸ ಧೈರ್ಯ ಬುದ್ಧಿವಂತಿಕೆಯಿಂದ ಮುನ್ನುಗ್ಗುವ ಪ್ರವೃತ್ತಿ ಇದ್ದುದರಿಂದ ಕಾಲ ಕಾಲಕ್ಕೆ ದೈವ ಸಹಾಯವೂ ನಾನಾ ಸ್ವರೂಪದಿಂದ ದೊರೆತುದರಿಂದ ಸಮಾಜದಲ್ಲಿ ಉತ್ತಮ ಸ್ಥಾನ ಮಾನಗಳನ್ನು ಪಡೆಯಲು ಅವಕಾಶವಾದುದು ಸಂತಸದ ವಿಚಾರ.
ಜೀವನದ ಸಂಕಷ್ಟದ ದಿನಗಳಲ್ಲಿ ಸ್ಥಿತಪ್ರಜ್ಞರಾಗಿ ಸರ್ವ ರೀತಿಯ ಸಮಸ್ಯೆಗಳಿಗೆ ಎದೆಗೊಟ್ಟು ಪ್ರತಿಯೊಂದು ಸನ್ನಿವೇಶಗಳನ್ನು ಅನಿವಾರ್ಯವಾಗಿ ಸವಾಲಾಗಿ ಸ್ವೀಕರಿಸಿ ಅಧ್ಯಾಪಕರಾದ ಶ್ರೀಯುತರು ಬದುಕಿನ ಸಾರ್ಥಕತೆಯನ್ನು ಪ್ರಯತ್ನಶೀಲತೆಯಿಂದ ಸಾಧಿಸಿದ್ದು "ದೃಷ್ಟ -ಅದೃಷ್ಟ "ದಲ್ಲಿ ಮನೋಜ್ಞವಾಗಿ ವಿವರಿಸಲಾಗಿದೆ.
ಆತ್ಮ ವೃತ್ತಾಂತವನ್ನು ಬರೆಯುವುದು ನಿಜಕ್ಕೂ ಸವಾಲಿನ ಕೆಲಸವೇ . ಸಮಕಾಲೀನ ಸಾಮಾಜಿಕ ಸ್ಥಿತಿಗತಿಗಳನ್ನು , ತಾನು ಜೀವನದಲ್ಲಿ ಅನುಭವಿಸಿದ ಹಾಗೂ ಎದುರಿಸಿದ ವಿವಿಧ ಅವಕಾಶರೂಪೀ ಸವಾಲುಗಳನ್ನು ಯಥಾವತ್ತಾಗಿ ನೆನಪಿಸಿಕೊಂಡು ಬರೆಯುವಾಗ ನೇರ ಪ್ರಸ್ತುತಿಯೇ ಸಮಂಜಸವಾದರೂ ಕೆಲವೊಂದು ಕಡೆ ಆಗಿನ ಕಾಲದ ವೈಶಿಷ್ಟ್ಯಗಳು , ಆಚರಣೆಗಳು , ಸಾಂಸ್ಕೃತಿಕ ವಿಚಾರಗಳು ವಿಶೇಷ ಘಟನೆಗಳು ಮತ್ತು ಶಿಕ್ಷಣ ಕ್ರಮಗಳನ್ನು ಸವಿಸ್ತಾರವಾಗಿ ವಿವರಿಸಿದಲ್ಲಿ ಹೊತ್ತಗೆಯು ಇನ್ನೂ ಪರಿಣಾಮಕಾರಿಯಾಗಿ ಮೂಡಿಬರುತ್ತಿತ್ತೇನೋ ? ಈ ವಿಚಾರವನ್ನು ಗಮನಿಸಿದಾಗ "ದೃಷ್ಟ -ಅದೃಷ್ಟ " ದಲ್ಲಿ ಏನೋ ಕಳಕೊಂಡ ಅನುಭವ ಯಾ "ಅತೃಪ್ತ " ಭಾವನೆ ಓದುಗನಿಗೆ ಬರದೆ ಇರಲಾರದು .
ಅರುವತ್ತು ವರುಷಗಳ ಸುದೀರ್ಘ ಜೀವನಾನುಭವಗಳನ್ನು ಅತ್ಯಂತ ಸಂಕ್ಷಿಪ್ತವಾಗಿ ೬೪ ಪುಟಗಳಲ್ಲಿ ವಿವರಿಸಲು ಕಷ್ಟವೇ ಆದರೂ ಅತ್ಯಂತ ಚೊಕ್ಕವಾಗಿ ಚುಟುಕಾಗಿ ಪ್ರಸ್ತುತ ಪಡಿಸಿದ್ದು ಒಂದು ಈ ಪುಸ್ತಕದ ಉತ್ತಮಾಂಶ . ಸಮೃದ್ಧ ಜೀವನಾನುಭಾವಿಗಳಾದ ಶ್ರೀಯುತ ಈಶ್ವರ ಭಟ್ಟರ "ಜೀವನದ ರಸನಿಮಿಷಗಳ " ಬಗೆಗೆ ಸವಿಸ್ತಾರವಾದ ಪುಸ್ತಕವೊಂದನ್ನು ಹೊರತಂದಲ್ಲಿ ವಾಚಕರಿಗೆ ಮಹದುಪಕಾರವಾಗುತ್ತದೆ.
ಶ್ರೀಯುತರು ಬರೆದ ಟಿಪ್ಪಣಿಗಳನ್ನು ಪುಸ್ತಕ ರೂಪಾಂತರಿಸುವಲ್ಲಿ ಸಹಕರಿಸಿದ ಕು . ಮನೋರಮಾ ಬಿ. ಏನ್. ರವರ ಪರಿಶ್ರಮ , ಲಿಪಿ ಗಣಕೀಕರಿಸಿದ ಕು.ಅಕ್ಷತಾ , ಅಂದವಾದ ಮತ್ತು ಅರ್ಥಪೂರ್ಣವಾದ ಮುಖಪುಟ ವಿನ್ಯಾಸಗೊಳಿಸಿದ ಅಕ್ಷರೋದ್ಯಮದ ಸುನಿಲ್ ಕುಲಕರ್ಣಿಯವರ ಅನುಭವ , ಸುಂದರವಾಗಿ ಮುದ್ರಿಸಿದ ದಿಗಂತ ಮುದ್ರಣಾಲಯದವರ ಕಾರ್ಯ ದಕ್ಷತೆಗಳೆಲ್ಲ ಅಭಿನಂದನೀಯ .
ಒಟ್ಟಿನಲ್ಲಿ ಕನಿಷ್ಠ ಮುದ್ರಾ ರಾಕ್ಷಸನ ಹಾವಳಿಗೆ ತುತ್ತಾದರೂ ಸಂಗ್ರಹ ಯೋಗ್ಯವಾದ ಮಾಹಿತಿಪೂರ್ಣ ಅನುಭವದ ರಸ ಪಾಕ ಈ "ದೃಷ್ಟ -ಅದೃಷ್ಟ".
2 comments:
"ಕನಿಷ್ಠ ಮುದ್ರಾ ರಾಕ್ಷಸನ ಹಾವಳಿಗೆ ತುತ್ತಾದರೂ "ಇದು ಸತ್ಯ ...
ಕೆಲವೊಮ್ಮೆ ನಾವು ಬಳಸುವ ತಂತ್ರಾಂಶವೇ ಸರಿ ಇಲ್ಲದಿದ್ದರೂ ಮುದ್ರಾ ರಾಕ್ಷಸ ಒಳ ಪ್ರವೇಶಿಸುತ್ತಾನೆ. ಉದಾಹರಣೆಗೆ ಕೆಲವೊಂದು ಕನ್ನಡ ಅಕ್ಷರಗಳು ಬ್ಲಾಗ್ ಸ್ಪಾಟ್ ನಲ್ಲಿ ಸರಿಯಾಗಿ ಬರುವುದಿಲ್ಲ (moorti=ಮೂರ್ತಿ ಎಂದಾಗುತ್ತದೆ !)
ಹೀಗೆ ಇರುವ ನಾನಾ ಕಾರಣಗಳಲ್ಲಿ ಇದೂ ಒಂದಿರಬಹುದೇನೋ?
ಸುಬ್ರಮಣ್ಯಣ್ಣಾ..
ಒಳ್ಳೆಯ ವಿಮರ್ಶೆ ಕೊಟ್ಟದಕ್ಕೆ ತುಂಬಾ ಧನ್ಯವಾದ.
ಓದುಗರ ನೆಲೆಯಲ್ಲಿ ನಿಂತು, ಪುಸ್ತಕದಲ್ಲಿ ಬರುವ ಜೀವನದ ರೇಖೆಯನ್ನು ವಿಮರ್ಶಿಸಿ ಬರೆದ ರೀತಿ ಹಿಡಿಸಿತು.
ಇನ್ನೂ ವಿಮರ್ಶೆಗಳು ನಿಮ್ಮಿಂದ ಬರಲಿ.
ನಮಸ್ತೇ.
Post a Comment