ಸೂರಿಕುಮೇರಿ ಕೆ. ಗೋವಿಂದ ಭಟ್ ತೆಂಕು ತಿಟ್ಟು ಯಕ್ಷಗಾನ ರಂಗದ ಚಿರಪರಿಚಿತ ಹೆಸರು. ಪ್ರಬುದ್ಧ ಕಲಾವಿದ , ನಾಟ್ಯ ಗುರು, ದಶಾವತಾರಿ ಗೋವಿಂದ ಭಟ್ ಸರಿ ಸುಮಾರು ಅರುವತ್ತು ವರುಷಗಳಿಂದ ಯಕ್ಷರಂಗದಲ್ಲಿ ವ್ಯವಸಾಯಿಯಾಗಿದ್ದು ತನ್ನ ಸಹಜ ಅಭಿನಯ, ಶಿಸ್ತುಬದ್ಧ ನಾಟ್ಯ ಮತ್ತು ಚುಟುಕಾದ ಸಮಯಪ್ರಜ್ಞೆಯಿಂದ ಕೂಡಿದ ಪಾಂಡಿತ್ಯ ಪೂರ್ಣ ವಚೋ ವೈಖರಿಯಿಂದ ತಮ್ಮದೇ ಆದ ಛಾಪನ್ನು ಒತ್ತಿ ಜನಮಾನಸದಲ್ಲಿ ಪ್ರೀತಿಯನ್ನು ಗಳಿಸಿದವರು. ಕನ್ನಡದ ಅತ್ಯಂತ ಉತ್ಕೃಷ್ಟ ಶಬ್ದ ಸಾಹಿತ್ಯ (vocabulary) ವಿರುವ ಮೇರು ಕಲಾವಿದ ಕೆ.ಗೋವಿಂದ ಭಟ್.
ಉಜಿರೆಯ ಶ್ರೀ ಜನಾರ್ಧನ ಸ್ವಾಮೀ ದೇವಳದ ಆಶ್ರಯದಲ್ಲಿ ಶ್ರೀಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ಉಜಿರೆಯವರು ಆಯೋಜಿಸಿರುವ ತಾಳಮದ್ದಲೆ ಸಪ್ತಾಹದಲ್ಲಿ ಈ ವರ್ಷ ಕೆ.ಗೋವಿಂದ ಭಟ್ಟರ ವಿವಿಧ ಪಾತ್ರಗಳ ವಾಗ್ವೈಭವ. ಇಂದು ಸಂಜೆ ಆರಂಭಗೊಳ್ಳುವ ಈ ಕಾರ್ಯಕ್ರಮ ನಿರಂತರ ೭ ದಿನಗಳು ಕೆ.ಗೋವಿಂದ ಭಟ್ರ ಅರ್ಥವನ್ನು ಸವಿಯುವ ಸುವರ್ಣಾವಕಾಶವನ್ನು ಆಯೋಜಕರು ಕಲ್ಪಿಸಿದ್ದಾರೆ . ಒಂದು ವಾರದ ಈ ಕಾರ್ಯಕ್ರಮದಲ್ಲಿ ಕೆ.ಗೋವಿಂದ ಭಟ್ಟರ ಶ್ರೀರಾಮ , ಕೌಶಿಕ ,ಭಸ್ಮಾಸುರ,ಹಿರಣ್ಯ ಕಶಿಪು , ಇಂದ್ರಜಿತು ,ಶೂರ್ಪನಖಾ, ಭೀಷ್ಮ ಮತ್ತು ದುರ್ಯೋದನ ಪಾತ್ರಗಳ ಅನಾವರಣಗೊಳ್ಳಲಿದೆ. ಕಾರ್ಯಕ್ರಮವು ಯಶಸ್ವಿಯಾಗಲೆಂದು ಹಾರೈಸೋಣ .