Friday, January 1, 2010

ಹಿರಿಯಣ್ಣನಿಗೊಂದು ನುಡಿ ನಮನ .....


ಸುಗಮ ಸಂಗೀತದ ಭೀಷ್ಮ ಅಶ್ವಥ್ ರವರು ಅಸ್ವಸ್ಥರಾಗಿದ್ದರೆಂದು ತಿಳಿದಾಗಲೇ ಮನಸ್ಸೇಕೋ ಮ್ಲಾನವಾಗಿತ್ತು . ಒಂದು ದೊಡ್ಡ ಅಶ್ವತ್ಥ ಮರದಂತೆ ಬೆಳೆದು ವಿಶಾಲವಾದ ವ್ಯಕ್ತಿತ್ವ ರೂಪಿಸಿದ್ದ ಮುಗ್ಧ ಮನಸಿನ ಹಿರಿಯ ಅಣ್ಣನಂತಿದ್ದ ಅವರ ನಿಧನ ನಿಜಕ್ಕೂ ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ದೊಡ್ಡ ನಿರ್ವಾತವನ್ನೇ ಸೃಷ್ಟಿಸಿದೆ .



ಅತ್ಯಂತ ಭಾವಪೂರ್ಣವಾಗಿ ಹಾಡುವ ಇವರ ರೆ ರೇ ರಾ.... ಆಲಾಪನೆ ಕೇಳುವುದೇ ಸೊಗಸು. ಕನ್ನಡವೇ ಸತ್ಯ ಎಂಬ ಕಾರ್ಯಕ್ರಮದ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದ ಹಾಗೆ ನೆಲೆ ನಿಂತಿರುವ ಸ್ವರ ಮಾಂತ್ರಿಕ ಜೀವನ ಯಾತ್ರೆ ಮುಗಿಸಿ ಪರಮಾತ್ಮನಲ್ಲಿ ಲೀನವಾದರೂ ಸಂಗೀತ ರಸಿಕರ ಮನದಲ್ಲಿ ಸದಾ ಚಿರಂಜೀವಿಯಾಗಿರುವ ಇವರು ಮತ್ತೆ ಉದಿಸಿ ಬರಲಿ ಎಂಬುದು ನಮ್ಮ ಹಾರೈಕೆ.

ಶಿಶುನಾಳ ಷರೀಪರ ಹಾಡುಗಳನ್ನು ಕೇಳಬೇಕು ಎಂದಿದ್ದರೆ ಅದು ಶ್ರೀಯುತ ಅಶ್ವಥ್ ರವರ ದನಿಯಲ್ಲೇ ಕೇಳಬೇಕು. ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅವರ ಆತ್ಮ ವಿಶ್ವಾತ್ಮಕನಲ್ಲಿ ಲೀನವಾಗಿದ್ದರೂ ಅವರ ಹಾಡುಗಳ ಮೂಲಕ ಎಲ್ಲರಿಗೂ ಸದಾ ಸ್ಪೂರ್ತಿಯಾಗಿ ನಮ್ಮ ನಡುವೆ ಚಿರಕಾಲ ಜೀವಂತವಾಗಿರುವ ಮಹಾ ಚೇತನ ಶ್ರೀಯುತ ಅಶ್ವಥ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ.