Friday, June 20, 2008

ಶಿಶು ಗೀತೆಗಳು ...

ಶಿಶು ಗೀತೆಗಳನ್ನು ರಚಿಸುವ ಕವಿಗಳಲ್ಲಿ ಗೋಪಾಲಕೃಷ್ಣ ಶಗ್ರಿತ್ತಾಯರು ಒಬ್ಬರು .
ಗೋಪಾಲಕೃಷ್ಣ ಶಗ್ರಿತ್ತಾಯರು ಹಲವಾರು ಶಿಶು ಗೀತೆಗಳನ್ನು ರಚಿಸಿ ಮಕ್ಕಳಿಗೆ ಹೇಳಿ ಕೊಟ್ಟವರು. ಅಧ್ಯಾಪಕನಾಗಿ ಹಲವು ವರುಷಗಳ ಅನುಭವದಿಂದ ರಚಿಸಿದ ಇವರ ಪದ್ಯಗಳು ಪ್ರಾಸಬದ್ಧವಾಗಿ ಮತ್ತು ಅರ್ಥಪೂರ್ಣವಾಗಿದ್ದು ಮಕ್ಕಳಿಗೆ ಹೇಳಲು ತುಂಬಾ ಸರಳವಾಗಿದೆ . ಅವರು ಮಕ್ಕಳ ಮೇಳವನ್ನು ಸ್ಥಾಪಿಸಿ ಹಲವು ಮಂದಿ ಮಕ್ಕಳಿಗೆ ಯಕ್ಷಗಾನ ಕಲಿಸಿ ಪ್ರದರ್ಶನಗಳನ್ನೂ ಕೊಡಿಸಿರುತ್ತಾರೆ. ಸಾಮಾನ್ಯವಾಗಿ ಎಲ್ಲ ಪ್ರಸಂಗಗಳಲ್ಲೂ ಬರುವ ಸನ್ನಿವೇಶವನ್ನು ಶಿಶು ಗೀತೆಯೊಂದರಲ್ಲಿ ಅವರು ಬರೆದುದು ಅನನ್ಯವಾಗಿದೆ .
ಈ ಪದ್ಯ ಶಗ್ರಿತ್ತಾಯರ "ಕಂದನ ಕವನಗಳು" ಪುಸ್ತಕದಲ್ಲಿ ಪ್ರಕಟವಾಗಿದೆ . ನಿಮಗೋಸ್ಕರ ಅದರ ಪೂರ್ಣ ಪಾಠ ಇಲ್ಲಿದೆ . ಓದಿ ಆನ೦ದಿಸಿ.......

ಮಕ್ಕಳ ಮೇಳ
ಮಕ್ಕಳ ಮೇಳ ಮದ್ದಲೆ ತಾಳ
ಚೆಂಡೆಯ ಬಡಿತ ಮಕ್ಕಳ ಕುಣಿತ
ಕೇಳಿಯ ಹೊಡೆದು ಜನರನು ಕರೆದು
ಬಣ್ಣದ ಮನೆಯಲಿ ಗಣಪತಿ ಪೂಜೆ
ಬಾಲಗೊಪಾಲರ ಸುಂದರ ವೇಷ
ಮೇಳದ ದೇವರ ಜೊತೆಗೆ ಪ್ರವೇಶ
ಸ್ಥ್ರೀವೇಶದ ಜತೆ ನಗೆಯವ ಬಂದ
ಥೈ ಧಿನ ಥಕಧಿನ ಕುಣಿಯುವ ಚಂದ
ಇಂದ್ರನ ಓಲಗ ದೂತನ ಲಾಗ
ಬಣ್ಣದ ವೇಷ ಬಲು ಸಂತೋಷ
ತಟ್ಟೆ ಕಿರೀಟದ ಆರ್ಭಟೆ ಕೇಳಿ
ರಕ್ಕಸ ರಾಜನು ಬರುವನು ತಾಳಿ
ದೀವಟಿ ಕೈಯಲಿ ಹಿಡಿಯುತ ಬಂದ
ರಾಳದ ಹುಡಿಯನು ಹಾರಿಸಿ ನಿಂದ
ಮುಗಿಲಿನ ತನಕ ಬೆಂಕಿಯ ಜ್ವಾಲೆ
ಸ್ವರ್ಗಕೆ ಧಾಳಿ ಸೇನೆಯು ಧೂಳಿ
ರಕ್ಕಸರಾಜಗೆ ಪರಾಕು ಹೇಳಿ
ಇಂದ್ರನ ಮೊರೆಯನು ಕೇಳುತ ಬಂದ
ಹಾಲುಗಡಲಿನ ಬಾಲ ಮುಕುಂದ
ಇಂದ್ರಗೆ ಅಭಯ ಇನ್ನಿಲ್ಲ ಭಯ
ದೈತ್ಯನ ತರಿದ ಪೌರುಷ ಮೆರೆದ
ಖಳ ಸಂಹಾರಿ ದಿವಿಜೋಧ್ಧಾರಿ
ಬೆಳಗಿನ ಜಾವ ಮೋಹನ ರಾಗ
ಮಂಗಳದಾರತಿ ಬೆಳಗುವ ಹೊತ್ತು
ಚೌಕಿಯ ಒಳಗಡೆ ಎಲ್ಲರು ನಿತ್ತು.

1 comment:

YAKSHA CHINTANA said...

ಇದೆ ಕವನ ಮಲೆಯಾಳದಲ್ಲಿ ಖಂಡಿತ ಅಲ್ಲಿನ ಶಾಲಾ ಪಠ್ಯ ಪುಸ್ತಕದಲ್ಲಿ ಬರುತ್ತಿತ್ತು.. ಸಾಂಸ್ಕೃತಿಕ ವಿಚಾರಗಳಿಗೆ ಅಲ್ಲಿನವರು ಒಳ್ಳೆ ಬೆಲೆ ಕೊಡುತ್ತಾರೆ.. ಆದರೆ ಇಲ್ಲಿ ನೋಡಿ.. ನಿಮ್ಮಂಥ ಅಭಿಮಾನಿಗಳು ಹುಡುಕಿ ಬೆಳಕಿಗೆ ತರಬೇಕು.cs