Friday, December 27, 2019

ಮರೆಯಲಾರದ ತಾಳಮದ್ದಳೆ

ಯಕ್ಷಗಾನದ ಸೆಳೆತವೇ ಹಾಗೆ.. ವೈವಿಧ್ಯಮಯ ವ್ಯಕ್ತಿತ್ವವುಳ್ಳ ಹಲವರನ್ನು ಒಂದೆಡೆ ಒಟ್ಟುಗೂಡಿಸುವ ಅಪೂರ್ವ ಶಕ್ತಿ  ಈ ಕಲಾಪ್ರಕಾರದ್ದು. ಬಹುಶ ಇನ್ಯಾವ ಕಲಾ ಪ್ರಕಾರದಲ್ಲೂ ಈ ರೀತಿಯ ಗುಣವನ್ನು ಕಾಣಸಿಗುವುದೇ ಅಪರೂಪ.
ಯಕ್ಷಗಾನ ತಾಳಮದ್ದಳೆ ಬುದ್ಧಿಮತ್ತೆಯನ್ನು ನಿರೀಕ್ಷಿಸುತ್ತದೆ.ತಾಳಮದ್ದಳೆ ಆಸ್ವಾದಿಸುವ ಪ್ರಬುದ್ಧ ಪ್ರೇಕ್ಷಕರೇ ಬೇರೆ. ಸದಾ ಹಸಿರಾಗಿರುವ ಮಹಾಭಾರತ, ರಾಮಾಯಣ ಭಾಗವತ ಮತ್ತು ಪುರಾಣಗಳ ಕಥಾ ನಿರೂಪವನ್ನು ಮಾತಿನ ಮಂಟಪದಲ್ಲೇ ಅನಾವರಣಗೊಳಿಸುವ ಅದ್ಭುತ  ಶಕ್ತಿ ತಾಳಮದ್ದಲೆಗಿದೆ .

ಅಂದು ನಮ್ಮ ಮನೆಯಲ್ಲಿ ಸುದರ್ಶನ ಕರಗ್ರಹಣ ತಾಳಮದ್ದಳೆ.  ಭೀಷ್ಮ ಸೇನಾಪತ್ಯದಿಂದ ತೊಡಗಿ ಕರ್ಮಬಂಧ ಸಹಿತವಾಗಿ ಸುದರ್ಶನ ಕರಗ್ರಹಣ. ಬಲಿಪ ನಾರಾಯಣ ಭಾಗವತರು ಮತ್ತು ಪ್ರಸಾದ್ ಬಲಿಪರ ಅದ್ಭುತ ಭಾಗವತಿಕೆ. ಕೊಂಕಣಾಜೆ ಶೇಖರಣ್ಣ ಹಾಗೂ ಗುರುಪ್ರಸಾದ ಬೊಳಿಂಜಡ್ಕರ ಚೆಂಡೆ ಮದ್ದಲೆ ಸಾಥ್. ಅರ್ಥಧಾರಿಗಳ ಸಹಿತ ಇಪ್ಪತ್ತನಾಲ್ಕು ಜನ ಪ್ರೇಕ್ಷಕರು.ಅನಾರೋಗ್ಯದ ನಡುವೆಯೂ ಪರಮಾನಂದ ಅನುಭವಿಸಿದ ನನ್ನ ಅಪ್ಪ. ಬಲಿಪರ ಪದ ನಮ್ಮ ಸಂಘದ ಎಲ್ಲಾ ಸದಸ್ಯರನ್ನು ಪುಳಕಿತಗೊಳಿಸಿತ್ತು. ಮನೆಯೊಳಗಿನ ಜಗಲಿಯಲ್ಲಿ ಮೈಕ್ ಇಲ್ಲದೆ ನಮ್ಮೆಲ್ಲರನ್ನೂ ತನ್ಮಯಗೊಳಿಸಿ ಅದರ ನೆನಪನ್ನು ಚಿರಸ್ಥಾಯಿಯಾಗಿ ಉಳಿಸಿದವರು ಬಲಿಪಜ್ಜ. ಆಮೇಲೆ ಅನೇಕ ತಾಳಮದ್ದಳೆಗಳಾಗಿವೆ.ಆಗ ಅಪ್ಪ ಇರಲಿಲ್ಲ.

ನನ್ನ ಕೃಷ್ಣ ನ ಪಾತ್ರ ನಮ್ಮ ಆತ್ಮೀಯ ವೇಣುಗೋಪಾಲ ಭಟ್ಟರ ಭೀಷ್ಮ. ಅನುಭವಿಗಳೂ ವಾದ ನಿಪುಣರು ಆದ ಅವರೊಂದಿಗೆ ನಾನು ಕೃಷ್ಣನಾಗಿ ಕಷ್ಟ ಪಟ್ಟೆ.
ಪದ್ಯಗಳಿಂದ ಒಟ್ಟು ಕೂಟವನ್ನು ಬಲಿಪಜ್ಜ ಮೇಲೆತ್ತಿಯಾಗಿತ್ತು!
ಸಂಘದ ಪಾತ್ರ ಪರಿಚಯ ಪಟ್ಟಿ ಸನ್ಮಿತ್ರರನ್ನು ಸ್ಮರಿಸುವಂತೆ ಮಾಡುತ್ತದೆ. 

ಕೂಟ ಕಳೆದು ವರುಷಗಳೆ ಸಂದರೂ ಅದರ ಸವಿನೆನಪು ಸದಾ ಹಸಿರು.

Tuesday, August 12, 2014

ಗುಣಮಟ್ಟದ ಬ್ಲಾಗ್ ಬರವಣಿಗೆ ಮತ್ತು ಓದುಗನ ನಿರೀಕ್ಷೆಗಳು

ಅಂತರಜಾಲದಲ್ಲಿ ಅದೆಷ್ಟೋ ಬ್ಲಾಗ್ ಗಳು ಕಾಣ ಸಿಗುತ್ತದೆ. ಬ್ಲಾಗ್ ಗಳು ನಮ್ಮ ವಯುಕ್ತಿಕ ಅನಿಸಿಕೆಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವ ಉತ್ತಮವಾದ ಮಾಧ್ಯಮ. ಇದೊಂದು ನಿರಂತರ ಬರವಣಿಗೆಯಲ್ಲಿಯೇ  ಪ್ರವೃತ್ತಿ ಉಳ್ಳವರು ತಾವು ಕಾರ್ಯ ನಿರ್ವಹಿಸುವ ಪತ್ರಿಕೆಯ ವ್ಯಾಪ್ತಿಗೆ ಬರದಿರುವ ವಿಚಾರಗಳು ತಿಳಿಸಲು, ಹವ್ಯಾಸಕ್ಕಾಗಿ ಬರೆಯುವವರು, ಅಪರೂಪಕ್ಕೆ ಒಮ್ಮೆ ನಾನೂ ಒಂದು ಕೈ ನೋಡೇ ಬಿಡ್ತೇನೆ  ಎಂದು ಹುರುಪಿನಲ್ಲಿರುವ "ಉತ್ಸಾಹಿಗಳಿಗೆ" ಹೀಗೆ ಹತ್ತು ಹಲವು ಮಂದಿಗೆ ಅವಕಾಶವನ್ನು ಕಲ್ಪಿಸಿ ತಮ್ಮ ತಮ್ಮ ಚಿಂತನೆಗಳ ಪ್ರಸಾರಕ್ಕೆ ಅನುವು ಮಾಡಿ ಕೊಡುತ್ತದೆ .  ಬ್ಲಾಗ್ ಗಳಲ್ಲಿ ಹೊಸ ಹೊಸ ವಸ್ತು  ವಿಷಯಗಳು,  ವೈಜ್ಞಾನಿಕ ಅನ್ವೇಷಣೆಗಳು ,ಕಲಾತ್ಮಕ ಫೋಟೋಗಳು , ಒಮ್ಮೆ  ಓದಿ ನಕ್ಕು ಬಿಟ್ಟು ಹಗುರಾಗುವ  ತಮಾಷೆಗಳು , ಪ್ರವಾಸ ಕಥನಗಳು, ಯಕ್ಷಗಾನ , ನಾಟಕ , ಕಾದಂಬರಿ ವಿಮರ್ಶೆ , ಮಕ್ಕಳ ಕವನಗಳು ( ) ಹೀಗೆ ಅವರವರ ಆಸಕ್ತಿಗೆ ತಕ್ಕಂತೆ ಅವರರವರು ಕಂಡ ,ಕೇಳಿದ, ಭೇಟಿಮಾಡಿದ ಪ್ರದೇಶ, ವ್ಯಕ್ತಿ ಹೀಗೆ ವೈವಿಧ್ಯಮಯ ವಿಷಯಗಳ ಹೂರಣ  ನಮ್ಮ ಏಕತಾನತೆಯನ್ನು ಬಹುಮಟ್ಟಿಗೆ ಕಡಿಮೆ ಮಾಡುತ್ತವೆ.



ಇದರಲ್ಲೂ  ಬೆಂಗಳೂರಿನ ಕಟ್ಟಾ ರಾಜ್ ಕುಮಾರ್ ಅಭಿಮಾನಿ ಯಾ  ,ಕಟ್ಟಾ ಕನ್ನಡ ಅಭಿಮಾನಿ ಯಾ ಕಟ್ಟಾ ತೆಂಕುತಿಟ್ಟು ಯಕ್ಷಗಾನ ಅಭಿಮಾನಿಗಳಂತೆ ಕೆಲವರು ಕೆಲವು ಬರಹಗಾರರ ಅಭಿಮಾನಿಗಳೂ ಇರುತ್ತಾರೆ ! ಇಲ್ಲೂ  ನಿರಂತರ ಬ್ಲಾಗ್ ಬರೆಯುವವರೂ ಮತ್ತು ಅದನ್ನು ನಿರಂತರ ಓದಿ ಪ್ರತಿಕ್ರಯಿಸುವವರೂ ಇರುವುದು ಆ ಬ್ಲಾಗ್ ನ ಪ್ರಸಿದ್ಧಿಯನ್ನು ತೋರಿಸುತ್ತದೆ. ಇನ್ನು ಕೆಲವೊಮ್ಮೆ ನಮ್ಮ ಮಿತ್ರರೇ ಬರೆಯುವ ಲೇಖನಗಳನ್ನು ದಾಕ್ಷಿಣ್ಯಕ್ಕಾದರೂ ಓದಲೇ ಬೇಕಾದ ಅನಿವಾರ್ಯತೆ ಕೆಲವೊಮ್ಮೆ ಬಂದೇ ಬರುತ್ತದೆ ! ನಮ್ಮ ಮಿತ್ರರ ಪ್ರತಿಭೆ ಆಸಕ್ತಿಗಳು ನಮ್ಮ ಅಭಿರುಚಿಗೆ  ತಕ್ಕನಂತೆ  ಇದ್ದರೆ ಅವರ ಬರವಣಿಗೆ ನಮಗೆ ರುಚಿಸಿ ಅದನ್ನು ನಾವು ಅನುಸರಿಸತೊಡಗುತ್ತೇವೆ . ಒಬ್ಬ ಅಧ್ಯಾಪಕ  ತರಗತಿಯಲ್ಲಿರುವ ಒಳ್ಳೆಯ ವಿದ್ಯಾರ್ಥಿಯ ಬಗ್ಗೆ ಒಳ್ಳೆಯ ನಿರೀಕ್ಷೆ ಇಟ್ಟಂತೆ  ಯಾ ಓರ್ವ ಕ್ರೆಕೆಟ್ ಅಭಿಮಾನಿ ತನ್ನಿಷ್ಟದ ಕ್ರಿಕೆಟಿಗನ ಮೇಲೆ ನಿರೀಕ್ಷೆ ಇಟ್ಟಂತೆ ಓದುಗನಿಗೂ ಒಂದು " ಈ ಅಸಾಮಿ ಒಳ್ಳೆ ಬರೀತಾನೆ ಮಾರಾಯ " ಅಂತ ನಿರೀಕ್ಷೆ ಇದ್ದೆ ಇರುತ್ತದೆ .  ಆದರೆ ಕೆಲವೊಮ್ಮೆ  ಕ್ರಿಕೆಟಿಗ ಆಟದಲ್ಲಿ ಸೊನ್ನೆ ಸುತ್ತಿದಂತೆ ಲೇಖಕ ಕಳಪೆ ಬರಹವನ್ನು, ಪ್ರದರ್ಶಿಸಿದಾಗ ಸಹಜವಾಗಿ ಸಿಟ್ಟು ಬರುತ್ತದೆ. ಒಬ್ಬನಿಂದ ಎಲ್ಲ ಸಮಯದಲ್ಲೂ ಎಲ್ಲವನ್ನು ಒಳ್ಳೆಯದೇ ಆಗಿರಬೇಕೆಂದು ನಿರೀಕ್ಷಿಸುವುದು ತಪ್ಪಾದರೂ  ಬರೆಯುವ ಬರಹಗಾರ ಓದುಗನ ಆಸಕ್ತಿಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ನನಗನಿಸಿದಂತೆ ಕೆಲವೊಂದು ಮುನ್ನೆಚ್ಚರಿಕೆ  ಬರಹಗಾರ  ತೆಗೆದುಕೊಳ್ಳುವುದು ಒಳ್ಳೆಯ ಬರಹಕ್ಕೆ ಅಪೇಕ್ಷಣೀಯ .

೧. ಪದೇ ಪದೇ ಒಂದೇ ಶಬ್ದವನ್ನು ಬಳಸುವುದು ( ಉದಾ: ಇಂಥ ಕಲಾವಿದರ ಅಂತ ವೇಷ "ಅತ್ಯದ್ಭುತ " "ಪರಮಾದ್ಭುತ " ! " ಅವರ್ಣನೀಯ " ಇತ್ಯಾದಿ ) ಬಿಡುವುದು
೨. ಯಾರೋ ಒಬ್ಬನನ್ನು ಭೇಟಿ ಮಾಡಿದಾಗ ನಮಗೆ ಆದ ಅನುಭವದಲ್ಲಿ ನಾನೊಬ್ಬನೇ ಹೀರೋ  (ಸ್ವಯಮ್ಪ್ರಶಂಸೆ)
೩. ನಮ್ಮ ಬರಹ "Judgmental" ಆಗದಿರುವಂತೆ ಎಚ್ಚರವಹಿಸುವುದು. ಇದು ಬಹಳ ಮುಖ್ಯ. ನಮ್ಮ ಅನಿಸಿಕೆಯೇ ಅಂತಿಮ ಅನ್ನುವ ಧ್ಯೇಯ ಇರಬಾರದು.
೪. ಬರೀ ಕೆಲವು ಭಾವನಾತ್ಮಕ ಶಬ್ದಗಳನ್ನು ಉಪಯೋಗಿಸುವುದರಿಂದ ಬ್ಲಾಗ್ ಓದುಗರ ಮನ ಮುಟ್ಟದು. ವಿಷಯಕ್ಕೆ ಅತ್ಯಂತ ಹೆಚ್ಚಿನ ಪ್ರಾಮುಖ್ಯ ನೀಡಬೇಕು.
೫. ಆದಷ್ಟೂ ಇತರರ ಮನಸ್ಸನ್ನು ನೋವುಗೊಳಿಸದಂತೆ ಎಚ್ಚರವಹಿಸುವುದು.
ಇನ್ನೂ  ಇದೆ..

Wednesday, May 14, 2014

ಸಾಮಾಜಿಕ ಜಾಲತಾಣಗಳು ಮತ್ತು ಬಡಪಾಯಿ ಕಲಾವಿದನ ಜೀವನ.

ಈ ವಿಚಾರವನ್ನು ನಾನು ಬರೆಯಲೇ ಬಾರದೆಂದು ಬಹಳ ದಿನಗಳಿಂದ ಅದುಮಿಟ್ಟುಕೊಂಡಿದ್ದೆ. ಆದರೆ ಕೆಲವು ವಿಷಾದಕರ ಬೆಳವಣಿಗೆಗಳು ನನಗೆ ವೇದನೆಯನ್ನು ಉಂಟು ಮಾಡಿದ್ದರಿಂದಲೇ ಏನೋ ಈ ಕಟು ವಿಚಾರಗಳನ್ನು ಬರೆಯಲು ತೊಡಗಿದ್ದೇನೆ. ಸಾಮಾಜಿಕ ಜಾಲತಾಣಗಳಾದ ಆರ್ಕುಟ್ , ಫೇಸ್ ಬುಕ್ ವಿದ್ಯಾವಂತರನ್ನು ಬಹುಬೇಗನೆ ತಲುಪಿ ಬೇಕಾದ ಮಾಹಿತಿಗಳನ್ನು ನೀಡುತ್ತಿರುವುದು ವರದಾನವೇ ಸರಿ. ಎಷ್ಟೋ ಬಾರಿ ನಮಗೆ ತಿಳಿಯದೆ ಇದ್ದ ಮಾಹಿತಿಗಳು , ಬಹಳ ದಿನಗಳಿಂದ ಕಾರ್ಯ ಕಾರಣಗಳಿಂದ ದೂರವಿರುವ ಮಿತ್ರರನ್ನು ಸಂಪರ್ಕಿಸಿ ಅವರೊಂದಿಗೆ ಸಂವಹನ ನಡೆಸಲು ಈ ಎಲ್ಲ ಜಾಲತಾಣಗಳು ಸಹಕಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ.
ಆದರೆ ಇತ್ತೀಚಿನ ದಿನಗಳಲ್ಲಿ ಈ ಜಾಲ ತಾಣಗಳಲ್ಲಿ ಸದಭಿರುಚಿಯ ಬಳಕೆಗಿಂತ ವಿಕೃತಿ, ಅತಿ ವೈಭವೀಕರಣ , ಪೂರ್ವಾಗ್ರಹ ಪೀಡಿತ ಮಾಹಿತಿಗಳೇ ರಂಜಿಸುತ್ತಾ ರಾರಾಜಿಸತೊಡಗುತ್ತಿರುವುದು ಬೇಸರದ ವಿಷಯ.
ಯಕ್ಷಗಾನಕ್ಕೆ ಸಂಬಂಧಿಸಿದಂತೆ ಹಲವಾರು ವೀಡಿಯೋಗಳು, ತುಣುಕುಗಳು ಯು ಟ್ಯೂಬ್ ನಲ್ಲಿ ಲಭ್ಯವಿದ್ದು ಅಭಿಮಾನಿಗಳಿಗೆ ರಂಜನೆ ನೀಡುತ್ತಿವೆ. ಮನೆಯನ್ನು ಬಿಟ್ಟು ವಿದೇಶಗಲ್ಲಿ, ಉದ್ಯೋಗ ನಿಮಿತ್ತ ದೂರದ ಊರುಗಳಲ್ಲಿ ನೆಲೆಸಿರುವ ಕಲಾರಸಿಕರಿಗೆ ತಮ್ಮ ಊರಿನ ಮಣ್ಣಿನ ಕಲೆ ಯಕ್ಷಗಾನದ ಸವಿ ಉಣ್ಣಲು ಇವುಗಳು ಸಹಕಾರಿ. ಪ್ರಸಿದ್ಧ ಮೇಳಗಳ ಬಯಲಾಟದ ಪೂರ್ಣ ಚಿತ್ರೀಕರಿತ ಮಾದರಿಗಳೂ ಇಲ್ಲಿ ಲಭ್ಯವಿದ್ದು ರಾತ್ರಿ ಇಡೀ ನಿದ್ದೆಗೆಡದೆ ಬೇಕಾದಾಗ ಆಸ್ವಾದಿಸಲು ಇವುಗಳು ಸಿದ್ಧ ತಿಂಡಿಗಳಂತೆ ಸಿಗುತ್ತದೆ.
ಕೆಲವೊಂದು ಜಾಲತಾಣಗಳಲ್ಲಿ ಅಭಿಮಾನೀ ಸಂಘ/ ಬಳಗ ಹುಟ್ಟಿಕೊಂಡು ಕೇವಲ ಆ ಕಲಾವಿದನ ಕಲಾ ಕೌಶಲ್ಯ ವಿವರಿಸುವದು ಮಾತ್ರವಲ್ಲದೆ ಇತರ ಕಲಾವಿದರೊಂದಿಗೆ ತುಲನೆ ಹಾಗೂ ಉಳಿದವರನ್ನು ಹೀನಾಯವಾಗಿ ಕಾಣುವ ಪ್ರವೃತ್ತಿ ನಿಜಕ್ಕೂ ನೋವನ್ನು ತರಿಸುತ್ತದೆ.ಇಂದು ಈ ಸಾಮಾಜಿಕ ಜಾಲತಾಣಗಳ ಪ್ರಭಾವ ಎಷ್ಟರ ಮಟ್ಟಿಗೆ ಪ್ರಭಾವ ಉಂಟುಮಾಡುತ್ತಿದೆ ಎಂಬುದಕ್ಕೆ ನನ್ನ ಗಮನಕ್ಕೆ ಬಂದ ಕೆಲವು ಘಟನೆಗಳನ್ನು ಹಂಚಿಕೊಳ್ಳ ಬಯಸುತ್ತಿದ್ದೇನೆ.
ಘಟನೆ-1
ಪ್ರಸಿದ್ಧ ಬಯಲಾಟ ಮೇಳವೊಂದರ  ದಕ್ಷಾಧ್ವರ-ದಮಯಂತಿ ಪುನ:ಸ್ವಯಂವರ ಪ್ರಸಂಗ.
ಪ್ರಧಾನ ಸ್ತ್ರೀ ವೇಷಧಾರಿಯ ತಾಯಿಗೆ ಅನಾರೋಗ್ಯವಿದ್ದ ಕಾರಣ ರಜೆಯ ಮೇಲೆ ತೆರಳಿದ್ದ. ರಾತ್ರಿ 9 ಗಂಟೆಗೆ ಚೌಕಿಯ ಬಳಿ 2 ಮಂದಿ ತರುಣರು ಲಾಪ್ ಟಾಪ್ ನಲ್ಲಿ ಏನನ್ನೋ ಹುಡುಕಾಡುತ್ತಿದ್ದರೆ ಇನ್ನೊಬ್ಬ ಮಿತ್ರರಿಗೆ ಕರೆ ಮಾಡಿ ಇವತ್ತು "ಆ ಕಲಾವಿದ " ರಜೆ ಹಾಗಾಗಿ ನಮ್ಮ " ಈ ಕಲಾವಿದ " ದಾಕ್ಷಾಯಿಣಿ ಪಾತ್ರ ಮಾಡುತ್ತಾನೆ ನೀವೆಲ್ಲ ಕೂಡಲೇ ಬನ್ನಿರಿ!  ಇವತ್ತು ಬಾರದಿದ್ದರೆ ನಾನು ನಾಳೆ ಫೇಸ್ ಬುಕ್ ನಲ್ಲಿ ಫೋಟೋ ಹಾಗೂ ವೀಡಿಯೊ ಅಪ್ ಲೋಡ್ ಮಾಡ್ತೇನೆ ಎಂದು ಎಲ್ಲರಿಗೂ ಕೇಳುವಂತೆ ಹೇಳುತ್ತಿದ್ದ.ಇದನ್ನು ಕೇಳಿಸಿ ಕೊಂಡ ಕೆಲವು ಕಲಾವಿದರು ಮುಖ್ಯ ಸ್ತ್ರೀ ವೇಷಧಾರಿಗೆ ಫೋನಾಯಿಸಿ ಕೂಡಲೇ ಬರುವಂತೆಯೂ ಆ ವೇಷವನ್ನು ಮಾಡುವಂತೆಯೂ ಹೇಳಿದರು.
ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಪೀಠಿಕೆ ಸ್ತ್ರೀವೇಶ ಕುಣಿತ ಮುಕ್ತಾಯವಾಗುತ್ತಿದ್ದಂತೆಯೇ ಮುಖ್ಯ ಸ್ತೀವೇಶಧಾರಿ ಓಡೋಡಿ ಬಂದು ತನ್ನ ಜಾಗದಲ್ಲಿ ಕುಳಿತ!

ತಾಯಿಯ ಅನಾರೋಗ್ಯ ಒಂದೆಡೆ... ತನ್ನ ಜೀವನದ ತುತ್ತಿಗೆ ಎಲ್ಲಿ ಸಂಚಕಾರ ಬರುತ್ತದೋ ಎಂಬ ಆತಂಕ ಒಂದು ಕಡೆ... ! ಭಯದಲ್ಲೇ ವೇಷವನ್ನು ಮಾಡಿ ರಂಗಸ್ಥಳವೇರಿದ.

ಘಟನೆ -2
ಆ ದಿನ ದೇವಿ ಮಹಾತ್ಮೆ.  ರಕ್ತಬೀಜನ ವೇಷಧಾರಿಗೆ ಲೋ ಬಿಪಿ ಆಗಿದ್ದ ಕಾರಣ ತಾನು ಸುಗ್ರೀವನ ವೇಷ ಮಾಡಿ ಧೂಮ್ರಾಕ್ಷ ಮಾಡುವ ವ್ಯಕ್ತಿ ಅಂದು ರಕ್ತಬೀಜ ಮಾಡಲಿ ಎಂದು ನಿರ್ಧಾರ ಮಾಡಿ ಆಗಿತ್ತು. ಮೊನ್ನೆ ನೋಡಿದ್ದ ಅದೇ 3 ತರುಣರು ಇಂದೂ ಪ್ರತ್ಯಕ್ಷ!
ಮತ್ತೆ ಫೋನಾಯಿಸುತ್ತಾ ಇವತ್ತು "ಇವರ" ರಕ್ತಬೀಜ ಇಲ್ಲ ನೀವು ಸುಮ್ಮನೆ ಬರಬೇಡಿ! ನಾವು ಅಷ್ಟು ದೂರದಿಂದ ರಜೆ ಮಾಡಿ ಇವರ ವೇಷ ನೋಡಲು ಬಂದರೆ ಅವರು ಉದಾಸೀನ ಮಾಡ್ತಿದ್ದಾರೆ .ಇದನ್ನೆಲ್ಲ ಫೇಸ್ ಬುಕ್ ನಲ್ಲಿ ಹಾಕ್ಬೇಕು. ಇವರಿಗೆ ಕೂಡದಿದ್ದರೆ ಮನೆಗೆ ಹೋಗಲಿ ಎಂದು ಘೋಷಿಸಿ ಬಿಟ್ಟ!

 ಇದನ್ನು ಕೇಳಿ ಫೇಸ್ ಬುಕ್ ಅಂದರೆ ಏನು ಎಂದು ಅರಿಯದ ಆ ಹಿರಿಯ ಕಲಾವಿದ  ಬಹಳ ಸಂಕಟಪಟ್ಟು ನನ್ನಲ್ಲಿ ಹೇಳಿದ " ತೂಲೆ ಅಣ್ಣೆರೆ ಎಂಚ ಪನ್ಪೆರ್ ಎಂಕ್ ತೀರ್ದುಂಡ ಯಾನೆ ಮಲ್ಪೆದೆ". ಆ ಕಲಾವಿದ ಪ್ರಾಮಾಣಿಕವಾಗಿ ಹಲವು ವರ್ಷಗಳಿಂದ ಮುಖ್ಯ ಪಾತ್ರಗಳನ್ನು ಮೆರೆಯಿಸಿದವರು. ಅವರ ರಕ್ತಬೀಜ, ತಾಮ್ರಧ್ವಜ, ಇಂದ್ರಜಿತು, ಕೌರವ ಮುಂತಾದ ವೇಷಗಳನ್ನು ಎವೆಯಿಕ್ಕದೆ ನೋಡಿ ನಾನು ಆನಂದಿಸಿದ್ದೇನೆ. ಆ ದಿನ ಮಾತ್ರ ಈ ತರುಣರ ವರ್ತನೆಯಿಂದ ಬಹಳ ಬೇಸರೆವೆನಿಸಿತು.

ಘಟನೆ-3
ಅದು ಪ್ರಸಿದ್ದ ಮೇಳವಾದರೂ ಆ ಮೇಳಕ್ಕೆ ಈ ತರುಣರ ಬಾಧೆ ಇಲ್ಲ!! ಅವರು ಆ ಸೆಟ್ ನ ಆಟಕ್ಕೆ ಹೋಗುವುದೇ ಇಲ್ಲ !  ಯಾರೂ ಒಬ್ಬ ಟೆಕ್ಕಿ ಯಕ್ಷಗಾನ ಅಭಿಮಾನಿ ಈ ಮೇಳದ ಆಟಕ್ಕೆ ಆಕಸ್ಮಿಕವಾಗಿ ಬಂದಿದ್ದ. ಅವನಿಗೆ ಈ ಮೇಳದಲ್ಲಿದ್ದ ಸ್ತ್ರೀ ವೇಷ ಹಾಗೂ ಮುಖ್ಯ ವೇಷ ಬಹಳ ಇಷ್ಟವಾಗಿ ಅದನ್ನು ವೀಡಿಯೊ ಚಿತ್ರೀಕರಿಸಿ ಯೂ ಟ್ಯೂಬ್ ಗೆ ಅಪ್ ಲೋಡ್ ಮಾಡಿದ.
ಅದಾದ 2 ನೇ ದಿನ ಅದಕ್ಕೆ ಹಲವಾರು ಕಾಮೆಂಟ್ ಬಂದವು.

ಅದರಲ್ಲಿ ಒಬ್ಬನ ಉವಾಚ :
 ನೀವು ನಾವು ಹೋಗುವ ಈ ಸೆಟ್ ನ ಆಟಕ್ಕೆ ಬರಬೇಕಿತ್ತು. ಇವರಷ್ಟು ಚಂದ ಅವರು ಮಾಡುವುದೇ ಇಲ್ಲ. ನಾನು ಬೇಕಾದರೆ ಎಲ್ಲಿಯಾದರೂ ಬೆಟ್ ಮಾಡ್ತೇನೆ!

ಇದನ್ನೆಲ್ಲ ನೋಡಿದ ಒಬ್ಬ ಯುವ ಕಲಾವಿದ  ಆ ಟೆಕ್ಕಿಗೆ ಫೋನ್ ಮಾಡಿ ನೀವು ನಮ್ಮ ಮೇಳದ ಅಭಿಮಾನಿ ಬೇರೆ ಮೇಳವನ್ನು ಹೇಗೆ ಹೋಗಳ್ತೀರಿ ? ಇದರಿಂದ ನಮಗೆ ತೊಂದರೆ ಆಗ್ತದೆ ಎಂದು ಜೋರಾಗಿ ಕೂಗಾಡಿದನಂತೆ.

ನಾನು ಆ ಟೆಕ್ಕಿ ಬಳಿ ನಮ್ಮಲ್ಲಿ ಒಂದು ಮೇಳದ ಸಪ್ತಾಹ ನಡೆಯುತ್ತಾ ಇದೆ ಬರುತ್ತೀರಾ ಎಂದಾಗ ಈ ವಿಚಾರವನ್ನು ಪರಿಚಿತನಾದ ಆ ಟೆಕ್ಕಿ ಹೇಳಿದ!

ಇದನ್ನೆಲ್ಲ ನೋಡಿದಾಗ ನನಗೆ ಅನಿಸಿದ್ದು
1. ಪ್ರತಿಯೊಬ್ಬನಿಗೂ ಪ್ರಾಮಾಣಿಕವಾಗಿ ದುಡಿದು ತಿನ್ನುವ ಹಂಬಲವಿರುತ್ತದೆ ಹಾಗೆಯೇ ಸಮಸ್ಯೆಗಳೂ ಅನಿವಾರ್ಯತೆಗಳೂ ಕಾಡುತ್ತಿರುತ್ತವೆ. ಅದಕ್ಕಾಗಿ ಅತಿರೇಕದ ಪ್ರಚಾರ ಮಾಡಿ ಅವರ ಹೊಟ್ಟೆಗೆ , ತಿನ್ನುವ ಅನ್ನಕ್ಕೆ ಕಲ್ಲು ಹಾಕುವ ಪ್ರಯತ್ನ ಮಾಡಕೂಡದು.
2. ಎಲ್ಲರಿಗೂ ಅವರದ್ದೇ ಆದ ಸಾಮರ್ಥ್ಯವಿರುತ್ತದೆ. ಪ್ರಜ್ಞಾವಂತರೇ ಮೂರ್ಖರಂತೆ ವರ್ತಿಸಿದರೆ , ಪ್ರಭಾವಿ ಜಾಲತಾಣಗಳನ್ನು ಬಳಸುವ ಮೂಲಕ ಸದಭಿರುಚಿಯ ಪ್ರೋತ್ಸಾಹ ಕೊಡುವ ಬದಲು ಓರ್ವ ಕಲಾವಿದನ ಜೀವನಕ್ಕೆ ಮುಳುವಾಗಕೂಡದು
ನಮ್ಮಿಂದ ಸಾಧ್ಯವಿದ್ದರೆ ಸಹಕರಿಸೋಣ ಇಲ್ಲದಿದ್ದರೆ ಸುಮ್ಮನಿರೋಣ. ಯಾರ ಕಣ್ಣಲ್ಲೂ ನೀರು ತರಿಸುವ ಕಟುಕತನ ಮಾತ್ರ ಅಕ್ಷಮ್ಯ.
ಏನಂತೀರಿ...?

Saturday, April 12, 2014

ಈ ಸಲ ಗೇರುಬೀಜವೇಕೆ ಕಾಣೆಯಾಗುತ್ತಿಲ್ಲ ??!!

ಬೇಸಿಗೆಯಲ್ಲಿ ಪ್ರತಿ ವರ್ಷವೂ ನಮ್ಮ ಗುಡ್ಡದಿಂದ  ಗೇರುಬೀಜಗಳು (ಗೋಡಂಬಿ) ನಾಪತ್ತೆಯಾಗುತ್ತಿದ್ದವು. ಸ್ಥಳೀಯ ಮರಿ ಕಳ್ಳರು ರಜಾ ಸಮಯದಲ್ಲಿ ಗೇರುಬೀಜ ಕದಿಯುತ್ತಿದ್ದು ಅವರಿಗೂ ಕಿಸೆ ಖರ್ಚಿಗೆ ಪುಡಿಗಾಸು ಆದಾಯ ಬರುತ್ತಿತ್ತು... ಆದರೆ ಈ ಸಲ ಗುಡ್ಡೆಗೆ ಹೋಗಿ ಮರದ ಕೆಳಗೆ ನೋಡಿದರೆ ಒಂದು ಬೀಜವೂ ಮಾಯವಾಗಿಲ್ಲ !! ಎಲ್ಲ ಬೀಜಗಳೂ ಮರದ ಬುಡದಲ್ಲೇ ಇವೆ..!!! ಏನಿದಾಶ್ಚರ್ಯ??!!! ಯಾಕೆ ಹೀಗೆ ?????!!!!  why?? why?? why??!!!

ಇದಕ್ಕೆ ಕಾರಣ ಹುಡುಕಿದಾಗ ಸಿಕ್ಕ ಉತ್ತರ
ಕಾಂಗ್ರೇಸ್ ಪಕ್ಷ ಪರ ಪ್ರಚಾರಕ್ಕೆ ಹೋದರೆ ಊಟ ತಿಂಡಿ ಸಹಿತ ರೂ750/- + ಒಂದು ಬಾಟ್ಲಿ, ಬಿಜೆಪಿ ಪರ ಹೋದರೆ ಊಟ ತಿಂಡಿ ಸಹಿತ ರೂ650/- , ಜೆಡಿಯಸ್ ಪರ ಹೋದರೆ ಊಟ ತಿಂಡಿ ಸಹಿತ ರೂ450/- ಸಿಗುತ್ತದೆ.!!!!
ಬೆಳಗ್ಗಿಂದ ಸಂಜೆವರೆಗೆ ಮನೆಯಿಂದ ಮನೆಗೆ ಕರಪತ್ರ ತಲುಪಿಸಿದರೆ ಮುಗಿಯಿತು.  ಹೇಗೂ ಬೇಸಿಗೆ ರಜೆ...ಹಳ್ಳಿಗಳಲ್ಲಿ ಹೋದ ಮನೆಗಳಲ್ಲಿ ಕುಡಿಯುದಕ್ಕೆ ಮಜ್ಜಿಗೆ/ ನೀರು ತಿನ್ನಲು ಮಾವಿನ ಹಣ್ಣು, ಪೇರಳೆ, ಜಂಬುನೇರಳೆ ಯಾವುದಾದರೊಂದು ಹಣ್ಣು ಸಿಕ್ಕೇ ಸಿಗುತ್ತದೆ!
ಇಡೀ ದಿನ ಗೇರುಬೀಜ ಕದ್ದರೂ ದಿನಕ್ಕೆ ಎರಡರಿಂದ ಮೂರು ಕಿಲೋ ಮಾತ್ರ ಸಿಗುವುದು.. ಒಂದು ಕಿಲೋ ಬೀಜಕ್ಕೆ ಕೇವಲ 80/-  ಒಟ್ಟಿನಲ್ಲಿ ದಿನದ ಆದಾಯ ಕೇವಲ 200-300 ಮಾತ್ರ ! ಇನ್ನು ಕದಿಯುವಾಗ ಯಾರ ಕೈಗೂ ಸಿಕ್ಕಿ ಬೀಳಕೂಡದು ! ( ಆಡಿ ತಪ್ಪಲುಬಹುದೇ... ಓಡಿ ಸಿಕ್ಕಲುಬಹುದೇ...?? ) ಅದಕ್ಕೇ.......

ಇನ್ನು ಯಾರಿಗೆ ಬೇಕ್ರೀ ನಿಮ್ಮ ಬೀಜ....????!!! 

Wednesday, June 19, 2013

ನೋವಿನಲ್ಲೂ ಹಾಡಿದ ಬಲಿಪ ಪ್ರಸಾದ

ಮಿತ್ರ ರಂಗನಾಥ್ ರಿಗೆ ಒಂದು ಮದ್ದಲೆಯ ಅಗತ್ಯ ಇದ್ದು ನನ್ನಲ್ಲಿ ಕೇಳಿದಾಗ ಕೊಂಕಣಾಜೆ ಶೇಖರಣ್ಣ ಒಳ್ಳೆಯ ಮದ್ದಳೆಯನ್ನು ಹುಡುಕಿ ತಂದಿದ್ದರು. ಆ ದಿನ ಮಧ್ಯಾಹ್ನ ಪ್ರಸಾದ್ ಬಲಿಪಾರಿಗೆ ಫೋನಾಯಿಸಿದಾಗ ಅವರಿಗೆ ಆಕ್ಸಿಡೆಂಟ್ ಆದ ವಿಚಾರ ತಿಳಿದು ಸಂಕಟವಾಯಿತು. " ಈಗ ತೊಂದರೆ ಇಲ್ಲ ಕೈ ನೋವು ಕಮ್ಮಿ ಆಗ್ತಾ ಇದೆ " ಎಂದು ಪ್ರಸಾದರು ಹೇಳಿದಾಗ ಅವರ ಪದ ಕೇಳಲೇ ಬೇಕೆಂಬ ತುಡಿತ ಹೆಚ್ಚಾಗ ತೊಡಗಿ ಕೂಡಲೇ ಇವತ್ತು ಸಂಜೆ ಮನೆಗೆ ಬರಬಹುದಾ ಅಂತ ಕೇಳಿದಾಗ ನನ್ನ ಮೇಲಿನ ಸ್ನೇಹದ ದಾಕ್ಷಿಣ್ಯಕ್ಕೆ ಒಪ್ಪಿ ಬಂದೆ ಬಿಟ್ಟರು. ಅವರು ಮನೆಗೆ ಬಂದಾಗ ಅವರ ಮೈಮೇಲಿದ್ದ ಮಾಸುತ್ತಿದ್ದ ಗಾಯಗಳು ನೋಡಿದಾಗ ಎಂಥವಾರಿಗಾದರೂ ಮನಸ್ಸು ಕರಗುವಂತೆ ಇತ್ತು. ಯುದ್ಧರಂಗದಲ್ಲಿ ಗಾಯವಾದೆದು ಬಂದ ಧೀರ ಸೈನಿಕನ ತೆರ ಅಲ್ಲಲ್ಲಿ ನೋವಿನ ಗಾಯಗಳು ಮಾಸಲೋ ಬೇಡವೋ ಎಂಬಂಥ ಸ್ಥಿತಿ. ಬೇರೆ ಯಾರೇ ಆಗಿದ್ದರೂ ಒಂದು ತಿಂಗಳು ರೆಸ್ಟ್ ಅಂತ ತಪ್ಪ್ಪಿಸಿಕೊಳ್ಳುತ್ತಿದ್ದರು. ಪ್ರಸಾದ್ ಬಂದು ಹಾಡಿದ ಹಾಡುಗಳು ನಿಜಕ್ಕೂ ರೋಮಾಂಚನ ಉಂಟುಮಾಡಿತ್ತು. ಒಂದೂವರೆ ಗಂಟೆಗಳ ಕಾಲ ಬೇರೆ ಬೇರೆ ಪ್ರಸಂಗದ ಮದ್ದಳೆ ಪದಗಳನ್ನು ಸುಲಲಿತವಾಗಿ ಹಾಡಿ ತಮ್ಮ ನೋವಿನಲ್ಲೂ ನಮ್ಮ ನೋವನ್ನು ಮರೆಸಿದರು!

ಪ್ರಸಾದರ ಪದಗಳನ್ನು ಕೊಂಕಣಾಜೆ ಶೇಖರಣ್ಣ ಮದ್ದಳೆಯಲ್ಲಿ ಸಾಥ್ ನೀಡಿ ಮೆರೆಯಿಸಿದರು.ಯುವ ಭಾಗವತನಾಗಿ ಪ್ರಸಾದರ ಶ್ರದ್ಧೆ, ವೃತ್ತಿಪರತೆ ಹಾಗೂ ಬದ್ಧತೆ ಶ್ಲಾಘನೀಯ. ಒಂದು ಅಪೂರ್ವ ಅನುಭವ ನೀಡಿದ ಅವರಿಗೆ ನಾನು ಆಭಾರಿ.

Friday, May 18, 2012

ಯಕ್ಷಗಾನ ಭಾಗವತರಿಗೆ ಬೀಳ್ಕೊಡುಗೆ

ವೃತ್ತಿರಂಗದಿಂದ ನಿವೃತ್ತರಾಗುವವರಿಗೆ ಬೀಳ್ಕೊಡುಗೆ ಮಾಡುವ ಸತ್ಸಂಪ್ರದಾಯ ಹೆಚ್ಚಿನ ಎಲ್ಲ ಕ್ಷೇತ್ರದಲ್ಲಿ ಕಾಣುತ್ತೇವೆ . ಆದರೆ ಹಲವಾರು ವರ್ಷಗಳಿಂದ ಯಕ್ಷಗಾನದಲ್ಲಿ ದುಡಿದ ಕಲಾವಿದರು ನಿವೃತ್ತರಾಗುವಾಗ ಅವರು ಪಡಕೊಂಡು ಹೋಗುವುದು ಅನಾರೋಗ್ಯ, ಬಡತನದ ಬೇಗೆ ಮಾತ್ರ! 
ಬಡಗು ತಿಟ್ಟಿನ ಖ್ಯಾತ ಪ್ರಯೋಗಶೀಲ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರು ಸ್ವಯಂನಿವೃತ್ತರಾಗುವ ಸಂಧರ್ಭ ಅವರು ಇಷ್ಟು ವರ್ಷಗಳ ಸೇವೆ ಸಲ್ಲಿಸಿದ ಮೇಳ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿರುವುದು ನಿಜಕ್ಕೂ ಸಂತಸದ ವಿಚಾರ . ಇದು ಇತರ ಮೇಳದವರಿಗೆ ಅನುಸರಣೀಯ ಕಾರ್ಯ .
ಕಾರ್ಯಕ್ರಮಕ್ಕೆ ಶುಭಕೋರೋಣ ..

Wednesday, November 16, 2011

ಸೇವೆ ಇವೆ.... ಕಲಾವಿದರೆಲ್ಲಿ ....?


    
ದಿನ ಪತ್ರಿಕೆಯಲ್ಲಿನ ಸುದ್ದಿ ಓದಿದಾಗ ನಿಜವಾಗಿಯೂ ಯಕ್ಷಾಭಿಮಾನಿಗಲ್ಸಂತಸ ಪಡಬೇಕಾದ ವಿಚಾರ . ಯಕ್ಷಗಾನವು ಯಾವ ರಾಜಾಶ್ರಯವಿಲ್ಲದೆ , ಸರಕಾರದ ಕೃಪಾಶ್ರಯವಿಲ್ಲದೆ, ಬರಿಯ ಅಭಿಮಾನಿ ಸೇವಾರ್ಥಿ ಸಜ್ಜನ ಬಂಧುಗಳಿಂದ ಇಂದಿಗೂ ತನ್ನ ಸತ್ವವನ್ನು  ಉಳಿಸಿಕೊಂಡು  ವಿಕಾರತೆಗಳಿದ್ದರೂ ತನ್ನ ಕಂಪನ್ನು ಬೀರುತ್ತ ಜೀವಂತವಾಗಿ  ಇದೆ.ಬೇರೆ ಬೇರೆ ದೇವಳದ ಆಶ್ರಯದಲ್ಲಿ ಹಲವಾರು ಮೇಳಗಳಿವೆ. ವರ್ಷಾನುಗಟ್ಟಲೆ ಸೇವಾರೂಪದ ಯಕ್ಷಗಾನ ಆಖ್ಯಾನಗಳನ್ನು ಆಡಿಸುವ ಸೇವಾರ್ಥಿಗಳು, ಪ್ರಾಯೋಜಕರು ಇದ್ದಾರೆ . ಆದರೆ ಸೇವಾರ್ಥಿಗಳು ನಡೆಸುವ ಪ್ರದರ್ಶನದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಕಲಾವಿದರಿದ್ದಾರೆಯೇ ? ಎಂಬುದು ದೊಡ್ಡ ಪ್ರಶ್ನೆ . ಮುಂದೆ ಈಗಿರುವ ಪ್ರದರ್ಶನದ ಗುಣಮಟ್ಟವನ್ನಾದರು ಉಳಿಸಿಕೊಂಡು ಹೋಗಬಲ್ಲ ಯುವಕಲಾವಿದರು ರೂಪುಗೊಳ್ಳುತ್ತಿದ್ದಾರೆಯೇ ? 
ಇಂದು ಎಲ್ಲ ಕ್ಷೇತ್ರಗಳಲ್ಲೂ ನುರಿತ ವೃತ್ತಿಪರರ ಕೊರತೆ ಇದೆ .ಯಕ್ಷರಂಗವನ್ನಂತೂ ಇದು ತೀವ್ರವಾಗಿ ಬಾಧಿಸುತ್ತಿರುವ ಸಮಸ್ಯೆ . ಇತ್ತೀಚಿಗೆ ತೆಂಕಿನ ಪ್ರಖ್ಯಾತ ಮೇಳದ ಯಜಮಾನರು ಹಿಮ್ಮೇಳ ಕಲಾವಿದರ ಕೊರತೆ ಬಗ್ಗೆ  ಪ್ರಸ್ತಾಪಿಸುತ್ತಾ ಮುಂದೆ ಇದು ದೊಡ್ಡ ಸಮಸ್ಯೆಯಾಗಿ ಮುಂದುವರಿದಲ್ಲಿ ಸೇವೆಯನ್ನು ನಡೆಸುವುದು ಹೇಗೆ ? ಎಂದು ಯೋಚಿಸಬೇಕಾಗುತ್ತದೆ ಎಂದದ್ದು ಇದರ ತೀವ್ರತೆಯನ್ನು ತಿಳಿಸುತ್ತದೆ . ಹಲವು ದಶಕಗಳಿಂದ ಮೇಳ ನಡೆಸುತ್ತಿದ್ದ ಓರ್ವ ಯಜಮಾನರು ಇದ್ದದ್ದನ್ನೆಲ್ಲ ಉದಾರವಾಗಿ ಒಂದು ಸಂಸ್ಥೆಗೆ ದಾನವಿತ್ತು ಇನ್ನು ನನ್ನಿಂದ ಅಸಾಧ್ಯ ಎಂದು ದಿನಸಿ ಅಂಗಡಿ ತೆರೆದದ್ದು ವಿಷಾದಕರವಾದರೂ ಕಾಟು ಸತ್ಯ !

ಈಗಿನ ಹಿರಿಯ ಕಲಾವಿದರನ್ನು ನೋಡಿದಾಗ ಮುಂದೆ ಇಂಥ ಪ್ರದರ್ಶನಗಳನ್ನು ನೀಡುವ ಚೈತನ್ಯ ಯುವ ಕಲಾವಿದರು ಹೊಂದಿರುವರೆ ಅನುಮಾನ ಮೂಡುತ್ತದೆ ! 
ಹಾಗೆಂದು ತಾಳಮದ್ದಲೆ ಕ್ಷೇತ್ರಕ್ಕೆ ಇದೊಂದು ಅಪವಾದ . ಇಲ್ಲಿ ಹೆಚ್ಚಿನ ಎಲ್ಲರೂ ಹವ್ಯಾಸಿಗಳೇ ಕಲಾಪ್ರಕಾರ ಉಳಿಸಿಕೊಂಡು ಬರುತ್ತಿದ್ದಾರೆ. 
ಆದಾಯ ಕಡಿಮೆ, ನಿದ್ದೆ ಕೆಡುವಿಕೆ, ಆಹಾರ ವೆತ್ಯಾಸಗಳು ಪ್ರಮುಖ ಸಮಸ್ಯೆಗಳೆಂದು ಹೇಳಿದರೂ ಈಗ ಅವಕಾಶಗಳು ಹಲವಾರಿದೆ, ಕಡಿಮೆ ಕಲಿತವನಿಗೂ ಉದ್ಯೋಗ ಖಾತ್ರಿ ಇದೆ ! ಹಾಗಾಗಿ ಆತಕ್ಕೆಕೆ ಹೋಗಬೇಕು ? ಊರೂರೇಕೆ ಸುತ್ತಬೇಕು? ಎಂಬ ಭಾವ ಹೆಚ್ಚಾಗತೊಡಗಿ ಸಮಸ್ಯೆ ಉಲ್ಬಣಗೊಳ್ಳುತ್ತಿದೆ .

ಕಲೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸುವ ಯುವ ಜನತೆ ತೀವ್ರವಾಗಿ ಕ್ಷೀಣಿಸುತ್ತಿರುವ ಈ ಕಾಲದಲ್ಲಿ ಸೇವೆ ಆಟಗಳು ಬೇಕಾದಷ್ಟಿವೆ ... ಕಲಾವಿದರೆಲ್ಲಿದ್ದಾರೆ ? ಅಲ್ಲವೇ !