Sunday, August 30, 2009

ಪ್ರೇಕ್ಷಕರಿಗೆ ಸಭಾ ಸಂಹಿತೆ .....




ಉಡುಪಿಯಲ್ಲಿ ನಡೆದ ಅರ್ಥಧಾರಿ - ಸಂಘಟಕರ ಸಮಾವೇಶದಲ್ಲಿ ಕೆಲವೊಂದು ಉತ್ತಮ ನಿರ್ಣಯಗಳನ್ನು ಕೈಗೊಂಡಿದ್ದು, ಅದರಲ್ಲಿ ಗಮನ ಸೆಳೆಯುವ ಅಂಶವೆಂದರೆ ಪ್ರೇಕ್ಷಕರಿಗೂ ಕೆಲವು ನಿಬಂಧನೆಗಳನ್ನು ನಿರ್ಣಯರೂಪದಲ್ಲಿ ಅಂಗೀಕರಿಸಿದ್ದು . ಅವು ಈ ಕೆಳಗಿನಂತಿವೆ




ಸಭಿಕರು
೧. ಕ್ಲಪ್ತ ಸಮಯಕ್ಕೆ ಬಂದು ಕಾರ್ಯಕ್ರಮದ ಕೊನೆಯವರೆಗೆ ಇರಬೇಕು .

೨. ಮಧ್ಯದಲ್ಲಿ ಎದ್ದು ಹೋಗಬೇಕಾದ ಅನಿವಾರ್ಯತೆ ಇರುವವರು ಎದುರು ಸಾಲುಗಳಲ್ಲಿ ಕುಳಿತುಕೊಳ್ಳಬಾರದು.

೩. ಮಂಗಳ ಪದ್ಯ ಆಗುತ್ತಿರುವಾಗ ಎದ್ದು ಹೊರಡುವುದು ಸೂಕ್ತವಲ್ಲ.

೪. ಬೇರೆ ಮಾತುಗಳನ್ನಾಡುತ್ತ ಉಳಿದ ಶ್ರೋತೃಗಳಿಗೆ ತೊಂದರೆ ಕೊಡಬಾರದು.

೫. ಸಿಳ್ಳೆ ನಿಷೇಧಿಸಬೇಕು . ಚಪ್ಪಾಳೆ ಮಿತಿಯಲ್ಲಿರಲಿ .

೬. ಒಬ್ಬ ಕಲಾವಿದ ವೇದಿಕೆಗೆ ಬಂದಾಗ ಚಪ್ಪಾಳೆ ತಟ್ಟಿ ಸ್ವಾಗತಿಸುವುದು ಉಳಿದ ಕಲಾವಿದರಿಗೆ ಅಗೌರವ ತೋರಿಸಿದಂತೆ. ಕಲಾವಿದ ವೇದಿಕೆಗೆ ಬಂದಾಗ ಚಪ್ಪಾಳೆ ಬೇಡ.

೭. ಕಾರ್ಯಕ್ರಮದ ಧನಾತ್ಮಕ ಹಾಗೂ ಋಣಾತ್ಮಕ ಸಂಗತಿಗಳನ್ನು ಸಕಾರಣವಾಗಿ ಸಂಘಟಕರಿಗೆ ತಿಳಿಸುವ ಅಭ್ಯಾಸವಿರಲಿ .

೮. ಮೊಬೈಲ್ ಫೋನ್ ಸೈಲೆಂಟ್ ಮೋಡನಲ್ಲಿರಲಿ . ಮೊಬೈಲ್ನಲ್ಲಿ ಮಾತಾಡಲೇ ಬೇಕೆಂಬ ಅನಿವಾರ್ಯತೆ ಇದ್ದಾಗ ಸಭೆಯಿಂದ ಹೊರಗೆ ಹೋಗಿ ಮಾತಾಡಿ ಬನ್ನಿ .


ಇಂಥದ್ದೊಂದು ನಿರ್ಣಯ ನಿಜಕ್ಕೂ ಸ್ವಾಗತಾರ್ಹ . ಇದನ್ನು ಪಾಲಿಸುವ ಪ್ರೇಕ್ಷಕರೂ ಸುಸಂಸ್ಕೃತರಾಗಿರಬೇಕು.
ಹಲವಾರು ಬಾರಿ ತಾಳಮದ್ದಲೆ ಕಾರ್ಯಕ್ರಮಗಳಿಗೆ ಆರಂಭದಲ್ಲಿ ಪ್ರೇಕ್ಷಕರೇ ಇರುವುದಿಲ್ಲ . ಯಕ್ಷಗಾನ ಸಂಘಗಳ ವಾರ್ಷಿಕೋತ್ಸವ ಆದರಂತೂ ಸಭಾ ಕಾರ್ಯಕ್ರಮ ಮುಗಿದ ಮೇಲೆ ಜನ ಜಮಾಯಿಸತೊಡಗುತ್ತಾರೆ . ಇದರಿಂದಾಗಿಯೇ ಆಯೋಜಕರು "ಒಂತೆ ಜನ ಬರಡ್ ಮಾರಾಯರೇ ಬುಕ್ಕನೆ ಸುರು ಮಲ್ಪುಗ " ಅಂತ ಕಾರ್ಯಕ್ರಮ ಆರಂಭಿಸುವುದನ್ನೇ ತಡ ಮಾಡಿ ಕೆಲವೊಮ್ಮೆ ಸ್ವಾರಸ್ಯಕರ ಸನ್ನಿವೇಶಗಳಿಗೆ , ಸರಿಯಾದ ಚರ್ಚೆಗಳಿಗೆ ಕಲಾವಿದರಿಗೆ ಸಮಯಾವಕಾಶ ಸಿಗದೇ ತರಾತುರಿಯಲ್ಲಿ ಮುಗಿಸುವುದನ್ನು ನೋಡುತ್ತೇವೆ .

ಇನ್ನು ಕೆಲವರಂತೂ ಕಾರ್ಯಕ್ರಮದ ಮಧ್ಯೆ ಎದ್ದು ಹೋಗುವುದು ಸಾಮಾನ್ಯ . ಬಹುಶ ಮೇಲೆ ತೆಗೆದುಕೊಂಡ ನಿರ್ಣಯ "ಅತೀ ಗಣ್ಯ ಅತಿಥಿಗಳಿಗೆ " ಅನ್ವಯ ಮಾಡಲು ಕಷ್ಟವೇನೂ ? ರಾಜಕಾರಣಿಗಳು , ಮಠಾಧಿಪತಿಗಳು , ದೊಡ್ಡ ದೊಡ್ಡ ವ್ಯಾಪಾರಸ್ಥರು ಮುಂತಾದವರಿಗೆ ಪೂರ್ಣ ಅವಧಿ ಕುಳಿತುಕೊಳ್ಳಲು ಸಮಯವೆಲ್ಲಿದೆ ? ಅಂಥವರು ಬಂದಾಗ ಅವರನ್ನು ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಹೇಳಲಿಕ್ಕೂ ಆಗದೆ "ಧರ್ಮ ಸಂಕಟ " ಅನುಭವಿಸಬೇಕಾದ ಪ್ರಮೇಯ ಬಂದರೂ ಮೇಲಿನ ನಿರ್ಣಯದಲ್ಲಿ "ಅತೀ ಗಣ್ಯರನ್ನು ಹೊರತುಪಡಿಸಿ " ಅಂತ ನಾವು -ನೀವು ಜನ ಸಾಮಾನ್ಯರು ಸ್ವತಹ ಅರ್ಥೈಸಬೇಕು .

ಮಂಗಳ ಪದ್ಯ "ಮಜ್ಜಿಗೆ ಊಟದಂತೆ " ಅದನ್ನು ಕೇಳದೆ ಹೋಗುವುದು ಒಳ್ಳೆಯದಲ್ಲ . ಚುಟುಕಾಗಿ , ಚುರುಕಾಗಿ ಮುಗಿಯುವ ಪದ್ಯ ಕೇಳಲು ಆಕರ್ಷಕ .ವಾರಿಜದಳಾ೦ಬಕಾಯ ಜಯ ಮಂಗಳಂ ....., ಶ್ರೀಮಂಜುನಾಥ .... ಮುಂತಾದ ಅದ್ಭುತ ಪದ್ಯಗಳು ಕೊನೆಯಲ್ಲಿ ಕೊಡುವ ಪರಿಣಾಮವೇ ಬೇರೆ . ಅದನ್ನು ಅನುಭವಿಸಿದರೆ ಸವಿ ತಿಳಿಯುವುದು ...


ಎಷ್ಟೋ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರ ಹಲವು ರೀತಿಯ ಕೀಳಭಿರುಚಿಗಳು ಕಾರ್ಯಕ್ರಮ ಅಂದಗೆಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆಧುನಿಕ ಜಗತ್ತಿನಲ್ಲಿ ತಾಂತ್ರಿಕ ಬೆಳವಣಿಗೆಗಳು ಜನರ ಬದುಕಿಗೆ ಅತ್ಯುಪಯುಕ್ತವಾದರೂ, ಅದರ ಬಳಕೆಯ ಬಗ್ಗೆ ಸರಿಯಾದ ಜ್ಞಾನವಿಲ್ಲದೇ ಹೋದರೆ ಇಂಥದ್ದೊಂದು ನಿರ್ಣಯವನ್ನು ಸಮಾವೇಶದಲ್ಲಿ ಕೈಗೊಳ್ಳಬೇಕಾದ ಅನಿವಾರ್ಯತೆ ಬರುತ್ತದೆ ಎಂಬುದುವಿಷಾದನೀಯವಾದರೂ ಸತ್ಯ .

ಇಂದು ನಡೆಯುವ ಹಲವು ಕಾರ್ಯಕ್ರಮಗಳಲ್ಲಿ ಮೊಬೈಲ್ ಹಾವಳಿ ಹೆಚ್ಚಾಗಿದ್ದು , ಪಾತ್ರಧಾರಿ ತಲ್ಲೀನನಾಗಿ ಅಭಿನಯಿಸುತ್ತಿರುವಾಗ , ಅರ್ಥಧಾರಿ ಅರ್ಥ ಹೇಳುತ್ತಿರುವಾಗ ಹಲವು ವೈವಿಧ್ಯಮಯ ಶಬ್ಧಗಳೊಂದಿಗೆ ಧ್ವನಿಸುವ ಮೊಬೈಲ್ಗಳು ಇತರ ಪ್ರೇಕ್ಷಕರಿಗೆ ಕಿರಿ ಕಿರಿ ಉಂಟು ಮಾಡುತ್ತಿರುವುದು ಸಾಮನ್ಯ ವಿಷಯ . ಈ ನಿಟ್ಟಿನಲ್ಲಿ ಕಾರ್ಯಕ್ರಮ ಸಂಘಟಕರು ಕಾರ್ಯಕ್ರಮದ ಮೊದಲೇ ಪ್ರೇಕ್ಷಕರಿಗೆ ಸೂಚನಾರೂಪದಲ್ಲಿ ಮೇಲಿನ ನಿರ್ಣಯಗಳನ್ನು ಹೇಳುವುದು ಇಂದಿನ ಅನಿವಾರ್ಯತೆ ಅಂದರೂ ತಪ್ಪಲ್ಲ !

ಏನಿದ್ದರೂ ಈ ನಿರ್ಣಯಗಳಿಂದಲಾಗಿಯಾದರೂ ಪ್ರೇಕ್ಷಕ ಪ್ರಭುಗಳಿಗೆ ಸ್ವಯಂಪ್ರಜ್ಞೆ ಬೆಳೆಯಬೇಕೆಂಬ ಸಂದೇಶ ಮಾತ್ರ ಸಮಯೋಚಿತ ..

ನಿಮಗೇನನಿಸುತ್ತದೆ ?

Tuesday, August 25, 2009

ಚೌತಿಯ ಗಣಪನಿಗೊಂದು ತಾಳಮದ್ದಲೆ ಸೇವೆ ...



ರಾಜ್ಯ ಹೆದ್ದಾರಿಯ ಬಳಿ ಮೊನ್ನೆ ಒಂದು ಗಣೇಶೋತ್ಸವ .ಮದ್ಯಾಹ್ನ ಚೌತಿ ಹಬ್ಬದ ಸಿಹಿಯೂಟವನ್ನು ಮಾಡಿ ಎಲ್ಲರೂ ತುಸು ವಿಶ್ರಾಂತಿ ಪಡೆಯುವ ಸಮಯ , ಪ್ರೇಕ್ಷಕ ಸಮುದಾಯ ಯಾರೂ ೨ ಗಂಟೆಗೆ ಸೇರದಿದ್ದರೂ ಪ್ರತಿಷ್ಠಾಪಿಸಿದ ನಮ್ಮ "ಗಣಪಣ್ಣನಿಗೆ " ಸುಮ್ಮನೆ ಕೂರಲು ಬೋರ್ ಆಗಬಾರದೆಂದು ಪ್ರಸಿದ್ದ ಹಿಮ್ಮೇಳ ಹಾಗೂ ಸ್ಥಳೀಯ ಕಲಾವಿದರ ಕೂಡುವಿಕೆಯಿಂದ ಅಲ್ಲೊಂದು ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಏರ್ಪಾಡಾಗಿತ್ತು . ತಾಳಮದ್ದಲೆ ಆರಂಭಕ್ಕೆ ಮಾತೆಯರು , ಮಕ್ಕಳು ಊರಿನ ಸಭ್ಯ ಹಿರಿಯರು ಎಲ್ಲ ಮುಂದಿನ ಕೆಲ ಸಾಲುಗಳಲ್ಲಿ ಲೋಕಾಭಿರಾಮ ಮಾತಾಡುತ್ತ ಕುಳಿತಿದ್ದರೆ, ಹಿಂದೆ ನಿಷ್ಠಾವಂತ ಕಾರ್ಯಕರ್ತರು "ಜಮೆ" ಲೆಕ್ಕಾಚಾರದಲ್ಲಿ ಮುಳುಗಿದ್ದರು . ಸ್ಥಳೀಯ ಕಲಾವಿದರು ಹುರುಪಿನಿಂದ ಕಾರ್ಯಕ್ರಮ ಮುಂದುವರಿಸುತ್ತಿದ್ದಂತೆ , ಮುಂದಿನ ಕಾರ್ಯಕ್ರಮವಾದ ಸಂಗೀತ ರಸ (ಕಸ?) ಮಂಜರಿಗೆ ಬೇಕಾದ ದೊಡ್ಡ ಗಾತ್ರದ ಧ್ವನಿ ಪೆಟ್ಟಿಗೆಗಳು ಮಿನಿ ಲಾರಿಯಲ್ಲಿ ಬಂದಿಳಿದವು . "ಕೂಟ ಮಲ್ತೊಂದಿಪ್ಪಡಿಯ ನಮ ಸೆಟ್ ಮಲ್ಪುಗ , ಬೊಕ್ಕ ತಡ ಅಪುಂಡು " ಅಂತ ನಿರ್ಧರಿಸಿ ಒಂದೊಂದೇ ಸಾಮಾನುಗಳನ್ನು ಬಿಚ್ಚತೊಡಗಿದರು. ಈ ಮಧ್ಯೆ ರಾಜ್ಯ ಹೆದ್ದಾರಿಯ ವಾಹನಗಳು ಗಣೇಶನಿಂಗೆ ನಮಿಸಲೋ ಎಂಬಂತೆ ಪೆಂಡಾಲ್ ಸಮೀಪ ಬಂದಾಗ ಜೋರಾಗಿ ಹಾರ್ನ್ ಮೊಳಗಿಸಿ ಭಕ್ತಿ ಪ್ರದರ್ಶನ ಮಾಡಿ ಸಾಗುತ್ತಿದ್ದರೂ ಸ್ಥಿತ ಪ್ರಜ್ಞರಾದ ಸ್ಥಳೀಯ ಕಲಾವಿದರು , ಹಿರಿಯ ಕಲಾವಿದರು ರಂಗದಲ್ಲಿ ತಮ್ಮ ಸೇವೆಯನ್ನು ಮುಂದರಿಸುತ್ತಲೇ ಇದ್ದರು .

ಸುಮಾರು ನಾಲ್ಕು ಗಂಟೆಯ ಸಮಯವಾಗುತ್ತಿದ್ದಂತೆ ಮಾತೆಯರಿಗೆ ಮನೆ ನೆನಪಾಗಿ , ಹಾಲು ಕರೆಯುವ ಹೊತ್ತಾದ್ದರಿಂದ ಗಣಪನಿಗೆ ನಮಿಸಿ ತಮ್ಮ ಮಕ್ಕಳು ಮರಿಗಳೊಂದಿಗೆ ಮೆಲ್ಲನೆ ಜಾಗ ಖಾಲಿ ಮಾಡತೊಡಗಿದರು .

ಈಗ ನವ ಯುವಕರ ಜಮಾವಣೆಯಾಗಲು ಆರಂಭವಾಯಿತು . ಸ್ಥಳೀಯ ಕಲಾವಿದರಲ್ಲಿ ಕೆಲವರಿಗಂತೂ ಸ್ಫೂರ್ತಿ ಬಂದು ಯಥಾಸಾಧ್ಯ ಧ್ವನಿ ಏರಿಸಿ ತಮ್ಮ ಅರ್ಥ ಪಾಂಡಿತ್ಯ ಮೆರೆಯತೊಡಗಿದರು . ಸಂಜೆ ಐದಾಗುತ್ತಿದ್ದಂತೆ ತಾಳಮದ್ದಲೆಯ ರಸನಿಮಿಷಗಳ ಕುತೂಹಲ ಘಟ್ಟಕ್ಕೆ ಏರಲು ಆರಂಭಿಸಿದಾಗ ಯುವಕರು ರೋಮಾಂಚನಗೊಳ್ಳತೊಡಗಿದರು . ಇದೇನು ಇಷ್ಟು ಉತ್ಸಾಹ ಇವರಿಗೆ ಬಂತು ಎಂದು ಗಮನಿಸಿದಾಗ ತಿಳಿದದ್ದು ಇವರೆಲ್ಲ "ತೀರ್ಥ" ಸೇವಿಸಿಯೇ ಕೂಟ ಸವಿಯಲು ಬಂದಿದ್ದಾರೆಂದು !

ಕಲಾವಿದರೊಬ್ಬರು " ಕೃಷ್ಣಾ ನಾನು ವಜ್ರ ಸ್ಥಂಭ ಇದ್ದ ಹಾಗೆ , ಬಗ್ಗಿಸಿದರೆ ಮುರಿದೇನೆ ಹೊರತು ಬಾಗುವುದಿಲ್ಲ " ಎಂದು ಹೇಳಿದಾಗ ನವ ಯುವಕನೊಬ್ಬ " ಯಾನ್ಲಾ ಅಂಚನೆ ಯೇರೆಗ್ಲಾ ಬಗ್ಗಾಯೆ!! " ಅನ್ನುತ್ತಾ ರಂಗದೆಡೆಗೆ ಧಾವಿಸಿ ಬರತೊಡಗಿದ . ಅದನ್ನು ಕಂಡ ಕಾರ್ಯಕರ್ತರು ಅವನನ್ನು ತಡೆಯುವಲ್ಲಿ ಹರ ಸಾಹಸ ಮಾಡಿ ಸಫಲರಾದರು !

ನಿಧಾನಕ್ಕೆ ಸೂರ್ಯ ಇಳಿಯುತ್ತಿದ್ದಂತೆ ಅರ್ಧ ನಶೆಯೇರಿದ ಯುವಕರು ಚೆಂಡೆಯ ಪೆಟ್ಟಿಗೆ ಕುಣಿಯತೊಡಗಿದರು . ಇನ್ನು ಎಲ್ಲರೂ ಕುಣಿಯುವ ಮೊದಲೇ ಬೇಗನೆ ಮುಗಿಸಿ ಎಂದು ಮೆಲ್ಲನೆ ಸಂಘದ ಕಲಾವಿದರು ಹಿರಿಯ ಭಾಗವತರಿಗೆ ತಿಳಿಸಿದಾಗ ಕಾರ್ಯಕ್ರಮವನ್ನು ಒಂದಿನಿತೂ ಕೊರತೆ ಇಲ್ಲದಂತೆ ಮುಗಿಸಿಕೊಟ್ಟರು.ಅಂತೂ ಚೌತಿಯ ಗಣಪನಿಗೆ ತಾಳಮದ್ದಲೆ ಸೇವೆಯನ್ನು ಸ್ಥಳೀಯ ಕಲಾವಿದರು ಭಕ್ತಿಯಿಂದಲೇ ನೆರವೇರಿಸಿ ಕೃತಾರ್ಥರಾದರು . ಅಷ್ಟು ಹೊತ್ತಿಗಾಗಲೇ ಮುಂದಿನ ಆಕರ್ಷಣೀಯ ಕಾರ್ಯಕ್ರಮದ ಸವಿಯನ್ನು ಸವಿಯಲು ಯುವಕರ ಗುಂಪು ಹೆಚ್ಚಾಗತೊಡಗಿತು . ಅದುವರೆಗೆ ತಾಳಮದ್ದಲೆ ಕೇಳುತ್ತಿದ್ದ "ಗಣಪಣ್ಣ" ಮುಂದೆ ನಡೆಯಲಿರುವ ಕಾರ್ಯಕ್ರಮದ ನಿರೀಕ್ಷೆಯಲ್ಲೋ ಎಂಬಂತೆ ಗಂಭೀರ ಮೌನವಾಗಿ , ಮಂದಹಾಸ ಸೂಸುತ್ತ ಕುಳಿತಿದ್ದ .
ಕತ್ತಲಾಗುತ್ತಿದ್ದಂತೆ ನಾನೂ ಗಣಪಣ್ಣನನ್ನು ಬಿಟ್ಟು ಮನೆ ಸೇರಬೇಕೆಂಬ ತವಕದಿಂದ ಚೀಲ ಹಿಡಿದು ಮನೆಯ ಕಡೆಗೆ ಹೊರಟೇ ಬಿಟ್ಟೆ.
ಹೇಳಲು ಮರೆತೆ ನೋಡಿ .. ....
ಹೆದ್ದಾರಿಯ ಬಳಿಯ ಗಣೇಶನ ಪೆಂಡಾಲ್ ಗಿಂತ ೫೦ ಅಡಿ ದೂರದಲ್ಲಿ, ಕಾರ್ಯಕ್ರಮದ ಸಮಸ್ತ ಉಸ್ತುವಾರಿ ವಹಿಸಿದ್ದ ಕೊಡುಗೈ ದಾನಿಯೋಬ್ಬರಿಗೆ ಸೇರಿದ " ವೈನ್ ಶಾಪ್ " ಇತ್ತು . ಅಲ್ಲಿ ಆ ದಿನದ ಧಾರ್ಮಿಕ ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ "ನೆನಪಿನ ಕಾಣಿಕೆ " ಜೋಡಿಸುತ್ತಿದ್ದ ದೃಶ್ಯ ಕಣ್ಣಿಗೆ ಬಿತ್ತು !
ಯಾರಲ್ಲೂ ಇದನ್ನು ಹೇಳಬೇಡಿ .. ನಮ್ಮಲ್ಲೇ ಇರಲಿ . ಯಾಕೆ ಸುಮ್ಮನೆ ?

ಅವರವರ ಭಕ್ತಿ , ಅವರವರ ಭಾವನೆ ನಮಗೇಕೆ ಅಲ್ಲವೇ ?


ಏಕದ೦ತನೇ ನಮೋನ್ನಮಃ !
***

Tuesday, August 18, 2009

ವಿಜ್ರ೦ಭಿಸಿದ ವಿರಾಟ ಪರ್ವ -ಸಂಜಯ ರಾಯಭಾರ ...


ಮೈಸೂರಿನ ಗಾನ ಭಾರತೀ ವೀಣೆ ಶೇಷಣ್ಣ ಭವನದಲ್ಲಿ ನಡೆದ ಜಿ.ಟಿ.ಯನ್. ಸಂಸ್ಮರಣಾ ವಿಶೇಷ ಕಾರ್ಯಕ್ರಮದಲ್ಲಿ ನಿಡ್ಲೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ನಡೆದ ವಿರಾಟ ಪರ್ವ - ಸಂಜಯ ರಾಯಭಾರ ಪ್ರದರ್ಶನ ಅತ್ಯುತ್ತಮವಾಗಿ ಪ್ರದರ್ಶಿಲ್ಪಟ್ಟಿತು. ಸಾಮಾನ್ಯವಾಗಿ ಬಡಗು ತಿಟ್ಟಿನಲ್ಲಿ ಹೆಚ್ಚಾಗಿ ಕಾಣುವ ಕೀಚಕ ವಧೆ - ಉತ್ತರ ಗೋಗ್ರಹಣ ತೆಂಕು ತಿಟ್ಟಿನಲ್ಲಿ ಅಪರೂಪಕ್ಕೊಮ್ಮೆ ಪ್ರದರ್ಶಿಸಲ್ಪಡುವ ಕಾರಣ ಅಪೂರ್ವ ಪ್ರಸಂಗವೆಂದು ಹೇಳಬಹುದು
ವಿರಾಟ ಪರ್ವ-ಸಂಜಯ ರಾಯಭಾರ ಪ್ರಸಂಗ ಬಲಿಪರ ನಿರ್ದೇಶನದಲ್ಲಿ ತೆಂಕು ತಿಟ್ಟಿನ ಕ್ರಮದಲ್ಲಿ ಸಾಂಪ್ರದಾಯಿಕವಾಗಿ ನಡೆಯಿತು .ಆರಂಭದಲ್ಲಿ ಬಾಲ ಗೋಪಾಲ ಕುಣಿತ , ಸ್ತ್ರೀ ವೇಷ , ಹೊಗಳಿಕೆ ಹಾಸ್ಯ ದೊಂದಿಗೆ ಆರಂಭಗೊಂಡ ಪ್ರದರ್ಶನದಲ್ಲಿ ಮೊದಲಿಗೆ ಬಲಿಪ ಪ್ರಸಾದರ ಭಾಗವತಿಕೆಯಿಂದ ಕಳೆಯೇರಿತು . ನಂತರ ಬಂದ ಶ್ರೀ ರಾಮಕೃಷ್ಣ ಮಯ್ಯರು ಶೀತ ದಿಂದ ಬಳಲುತ್ತಿದ್ದರೂ
ಸುಶ್ರಾವ್ಯವಾಗಿ ಭಾಗವತಿಕೆ ಮುಂದುವರಿಸಿದರು.

ಈ ಪ್ರಸಂಗದಲ್ಲಿ ಮನಸೆಳೆದ ಪಾತ್ರ ನಿಡ್ಲೆ ಗೋವಿಂದ ಭಟ್ಟರ ವಲಲ ಭೀಮನದ್ದು. ಮೊದಲ ಪ್ರಸಂಗ ವಿರಾಟ ಪರ್ವದಲ್ಲಿ ನಿಡ್ಲೆ ಗೋವಿಂದ ಭಟ್ಟರ ವಲಲ, ಮೋಹನ ಕುಮಾರ್ ಅಮ್ಮುಂಜೆಯವರ ಕೀಚಕ , ಕೆದಿಲರ ಸೈರಂಧ್ರಿ , ಜಯಪ್ರಕಾಶ್ ಪೆರ್ಮುದೆ ಅರ್ಜುನ / ಬೃಹನ್ನಳೆ , ಗಂಗಾಧರದ ವಿರಾಟರಾಯ,ಕುಂಬ್ಳೆ ಶ್ರೀಧರ ರಾಯರ ಧರ್ಮರಾಯ , ವಸಂತ ಗೌಡ ಉತ್ತರ ಕುಮಾರ , ಸುಬ್ರಾಯ ಹೊಳ್ಳರ ಕೌರವ , ಶಿವಪ್ರಸಾದರ ಸುಶರ್ಮ , ಈಶ್ವರ ಪ್ರಸಾದರ ಸುದೇಷ್ಣೆ ,ಸದಾಶಿವ ಕುಲಾಲರ ಕರ್ಣ , ಮಹೇಶ ಮಣಿಯಾಣಿ ಹಾಸ್ಯ ಪಾತ್ರಗಳಲ್ಲಿ ಮಿಂಚಿದರು . ಕಲಾವಿದರೆಲ್ಲ ಈ ಪ್ರಸಂಗದಲ್ಲಿ ಸಾಕಷ್ಟು ಶ್ರಮ ವಹಿಸಿ ಯಶಸ್ವಿಯಾಗಿಸುವಲ್ಲಿ ಸಫಲರಾದರು.

ಕೌರವನ ಪಾತ್ರಧಾರಿ " ಹಿಂದೆ ಒಬ್ಬ ಬ್ರಾಹ್ಮಣ ದಾರಿಯಲ್ಲಿ ನಡೆಯುತ್ತಿದ್ದಾಗ ಕಾಲಿಗೆ ಮುಳ್ಳು ಚುಚ್ಚಿದಾಗ ಮುಳ್ಳನ್ನು ತೆಗೆದುದಲ್ಲದೆ , ಮುಳ್ಳಿನ ಗಿಡವನ್ನರಸಿ ಅದನ್ನು ಬೇರು ಸಮೇತ ಕಿತ್ತು ಸುತ್ತು ಹಾಕಿ ತನ್ನ ಸಿಟ್ಟನ್ನು ಶಮನ ಮಾಡಿದ ಹಾಗೆಯೇ ಈ ಪಾಂಡವರನ್ನು ಸಮೂಲವಾಗಿ ನಾಶ ಮಾಡುವುದೇ ನನ್ನ ಉದ್ದೇಶ " ಎಂಬುದಾಗಿ ಹೇಳಿದ್ದು ಪಕ್ಕನೆ ಚಾಣಕ್ಯನ ನೆನಪನ್ನು ತರಿಸಿತು !!

ವರ್ಷದಿಂದ ವರ್ಷಕ್ಕೆ ಭಾಗವತಿಕೆಯಲ್ಲಿ ಪಕ್ವತೆಯನ್ನು ಪಡೆಯುತ್ತಿರುವ ಶ್ರೀ ರಾಮಕೃಷ್ಣ ಮಯ್ಯರು ಯಾವುದೇ ಹಳೆಯ ಪ್ರಸಂಗಗಳಿಗೆ ಬಲಿಪರಂಥ ಹಿರಿಯ ಕಲಾವಿದರಿಂದ ಮಾಹಿತಿ ಪಡೆದು ಪ್ರಯೋಗಿಸಿ ಪ್ರದರ್ಶನದಲ್ಲಿ ಯಶಸ್ಸನ್ನು ಕಾಣುತ್ತಿರುವುದು ಸಂತಸದ ಸಂಗತಿ. ಪ್ರಸಂಗದ ನಡೆಗಳನ್ನು , ಆಡುವ ಕ್ರಮವನ್ನು ಹಿರಿಯ ಕಲಾವಿದರಿಂದ ಕಲಿತು ಅದನ್ನು ಮುದುವರಿಸುವ ಅವಕಾಶ ನಿಡ್ಲೆ ಯಕ್ಷಗಾನ ಮಂಡಳಿಯಲ್ಲಿ ಇರುವುದರಿಂದ ಉದಯೋನ್ಮುಖ ಕಲಾವಿದರಿಗೆ ವೃತ್ತಿಯಲ್ಲಿ ಬೆಳವಣಿಗೆ ಹೊಂದಲು ಅವಕಾಶವಿದೆ .ಕಾಲಮಿತಿ ಪ್ರದರ್ಶನದಲ್ಲೂ ಇಂಥ ಒಳ್ಳೆಯ ಪ್ರಸಂಗಗಳನ್ನು ಯಾವುದೇ ಲೋಪ ಬರದಂತೆ ಆಡುವ ಸವಾಲನ್ನು ಸಮರ್ಥ ಹಿಮ್ಮೇಳ ಹೊಂದಿದ ನಿಡ್ಲೆ ತಂಡ ಸ್ವೀಕರಿಸಿ ಯಶಸ್ವಿಯಾಗಿದ್ದು ಸಂತಸದ ವಿಚಾರ .

ಇಂಥ ಪುರಾಣಿಕ ಪ್ರಸಂಗಗಳನ್ನು ಆಯೋಜಿಸಲು ಸಂಘಟಕರಿಗೆ ನಿಜವಾದ ಯಕ್ಷಗಾನದ ಅಭಿರುಚಿ ಇರಬೇಕಾದ್ದು ಮುಖ್ಯ .ಕೆಲವೊಮ್ಮೆ ಬಹಳಷ್ಟು ಹಣ ವ್ಯಯ ಮಾಡಿ ಗತ ವೈಭವ ಮೆರೆದು ದಂತ ಕಥೆಯಾಗಿರುವ ಕೆಲವೇ ಕಲಾವಿದರನ್ನೇ ಕರೆಸಿ ಅದೇ ಚರ್ವಿತ ಚರ್ವಣ ಪ್ರಸಂಗಗಳನ್ನು ಮಹಾನಗರಗಳಲ್ಲಿ ಪ್ರದರ್ಶಿಸುತ್ತಿರುವ ಇಂದಿನ ಈ ದಿನಗಳಲ್ಲಿ ಒಳ್ಳೆಯ ಹಿಮ್ಮೇಳವನ್ನು ಆರಿಸಿ , ಯಾವುದೇ ಪೂರ್ವಾಗ್ರಹಕ್ಕೆ ಒಳಗಾಗದೆ , ಸಮಯೋಚಿತವಾಗಿ ನಡೆಸಿದ ಇಂಥ ಕಾರ್ಯಕ್ರಮಗಳು ಸ್ವಾಭಾವಿಕವಾಗಿಯೇ ಯಶಸ್ಸನ್ನು ಕಾಣುತ್ತವೆ ಎಂಬುದಕ್ಕೆ ಮೈಸೂರಿನ ಯಕ್ಷಗಾನ ಪ್ರದರ್ಶನಗಲೇ ಸಾಕ್ಷಿ. ಒಟ್ಟಿನಲ್ಲಿ ಒಂದು ಒಳ್ಳೆಯ ಪುರಾಣಿಕ ಪ್ರಸಂಗದ ಪ್ರದರ್ಶನದ ರಸಗವಳವನ್ನು ನೀಡಿದ ಸಂಘಟಕರು ಅಭಿನಂದನಾರ್ಹರು.
***

Monday, August 17, 2009

ಮೈಸೂರಿನಲ್ಲಿ ಮೆರೆದ ಯಕ್ಷಗಾನ ರೇವತಿ ಕಲ್ಯಾಣ




ಮೊನ್ನೆ ಶನಿವಾರ ೧೬-೦೮-೨೦೦೯ ರಂದು ಸಂಜೆ ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ನಿಡ್ಲೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ಪ್ರದರ್ಶಿಸಲ್ಪಟ್ಟ "ರೇವತಿ ಕಲ್ಯಾಣ " ಪ್ರಸಂಗ ಉತ್ತಮವಾಗಿ ಮೂಡಿ ಬಂತು . ಶ್ರೀ ಬಲಿಪ ನಾರಾಯಣ ಭಾಗವತರ ಸಮರ್ಥ ನಿರ್ದೇಶನದಲ್ಲಿ ನಡೆದ ಈ ಪ್ರದರ್ಶನದಲ್ಲಿ ಅತ್ಯಂತ ಹಳೆಯ ಪ್ರಸಂಗವೊಂದನ್ನು ಹೊಸ ತಲೆಮಾರಿನ ಕಲಾವಿದರು ಯಶಸ್ವಿಯಾಗಿ ನಡೆಸಿಕೊಟ್ಟದ್ದು ಅಭಿನದನಾರ್ಹ .


ಶ್ರೀಯುತ ವಾಮಂಜೂರು ಪರಮೇಶ್ವರಯ್ಯ ವಿರಚಿತ "ರೇವತಿ ಕಲ್ಯಾಣ " ಪ್ರಸಂಗವು ಶ್ರೀಮಧ್ಬಾಗವತ ಆಧಾರಿತ ಕಥೆ . ಕೃತಯುಗದಲ್ಲಿ ರೈವತ ರಾಜನು ತನ್ನ ಮಗಳಾದ ರೇವತಿಗೆ ವಿವಾಹ ಮಾಡಿಸಬೇಕೆಂದು ಯೋಗ್ಯ ವರನನ್ನು ಅರಸುತ್ತಿರುತ್ತಾನೆ . ಸರಿಯಾದ ಸಂಬಂಧ ಸಿಗದೇ ಇರಲು ತನ್ನ ಮಂತ್ರಿಯನ್ನು ಕರೆದು ಏನು ಮಾಡೋಣ ಎಂಬುದಾಗಿ ಅಭಿಪ್ರಾಯ ಕೇಳಿದಾಗ, ಮಂತ್ರಿ ಸುಮತಿಯು ಸೃಷ್ಟಿಕರ್ತ ನಾದ ಬ್ರಹ್ಮನನ್ನೇ ಕೇಳಿ ರೇವತಿಗೆ ತಕ್ಕ ವರ ಯಾರೆಂದು ತಿಳಿಯುವುದೇ ಸೂಕ್ತ ಎಂಬ ಸಲಹೆಯ ಮೇರೆಗೆ ರೈವತನು ಮಗಳ ಸಮೇತ ಸತ್ಯಲೋಕವನ್ನು ಸೇರುತ್ತಾನೆ. ಆ ಸಮಯದಲ್ಲಿ ಬ್ರಹ್ಮ ಲೋಕದ ಸಭೆಯಲ್ಲಿ ಕಲಾಪಗಳು ಮುಗಿದು ನರ್ತನ ಕಾರ್ಯಕ್ರಮ ನಡೆಯುತ್ತಿರುತ್ತದೆ. ಬ್ರಹ್ಮಲೋಕದ ಆ ನರ್ತನವನ್ನು ಕಂಡು ರೈವತನೂ ಅವನ ಮಗಳು ರೇವತಿಯೂ ನೃತ್ಯ ವೀಕ್ಷಣೆಯಲ್ಲಿ ಮೈಮರೆತಿರುತ್ತಾರೆ .


ಇತ್ತ ಭೂಲೋಕದಲ್ಲಿ ಬ್ರಹ್ಮದತ್ತನ ಮಕ್ಕಳಾದ ಹಂಸ ಡಿಬಿಕರು ತಂದೆಯ ಅಪ್ಪಣೆ ಮೇರೆಗೆ ಶಿವನನ್ನು ಮೆಚ್ಚಿಸಲು ತಪಸ್ಸಿಗೆ ತೆರಳಿ ಶಿವನಿಂದ ಅನುಗ್ರಹ ಪೂರ್ವಕವಾಗಿ "ಹಾ ಹಾ " ಹೀಹೀ " ಎಂಬ ಎರಡು ಭೂತಗಳನ್ನು ತಮ್ಮ ರಕ್ಷಣೆಗಾಗಿ ವರವಾಗಿ ಪಡೆಯುತ್ತಾರೆ .


ಈ ಮಧ್ಯೆ ಕೃಷ್ಣ ಬಲರಾಮರು ವಿಧ್ಯಾಭ್ಯಾಸಕ್ಕಾಗಿ ಆವಂತಿ ನಗರದ ಸಾಂದೀಪನಿ ಗುರುಗಳಲ್ಲಿ ಆಗಮಿಸಿ , ಅರುವತ್ತನಾಲ್ಕು ವಿದ್ಯೆಗಳಲ್ಲೂ ಪಾರಂಗತರೆನಿಸಿ , ಗುರುವಿನಲ್ಲಿ ಗುರುದಕ್ಷಿಣೆ ಏನು ಬೇಕೆಂದು ಬೇಡಿದಾಗ ಪ್ರಭಾಸ ತೀರ್ಥದಲ್ಲಿ ಅಳಿದು ಹೋದ ತನ್ನ ಮಗನಾದ ಮಣಿಕರ್ಣನನ್ನು ತಂದು ಕೊಡಬೇಕೆಂದು ಹೇಳುತ್ತಾನೆ. ಗುರುವಿನಿಂದ ಆಜ್ಞಪ್ತರಾದ ಬಲರಾಮ ಕೃಷ್ಣರು ಸಾಗರ ತಳದಲ್ಲಿದ್ದ ಪಂಚಜನ ಎಂಬ ರಕ್ಕಸನನ್ನು ಕೊಂದು ಅವನ ಕೋರಿಕೆಯಂತೆ ಅವನ ಅಸ್ಥಿಯಿಂದ ಪಾಂಚಜನ್ಯ ವೆಂಬ ಶಂಖವನ್ನು ಮಾಡಿ , ಅವನ ಸೂಚನೆಯಂತೆ ಯಮಲೋಕಕ್ಕೆ ತೆರಳಿ ಯಮನನ್ನು ಸಂದರ್ಶಿಸಿ ಗುರು ಕಾಣಿಕೆ ತಂದು ಒಪ್ಪಿಸುತ್ತಾರೆ .


ಬಳಿಕ ಕಾಲಾಂತರದಲ್ಲಿ ಕಾಲಯವನ ದ್ವಾರಕೆಗೆ ಧಾಳಿಯಿಟ್ಟಾಗ ಅವನಿಗೆ ಹೆದರಿದಂತೆ ನಟಿಸಿ ಕೃಷ್ಣನು ಮುಚುಕುಂದನೆಂಬ ರಾಜರ್ಷಿ ನಿದ್ರಿಸುತ್ತಿದ್ದ ಗುಹೆಯೊಳಗೆ ಹೋಗಿ ಮುಚುಕುಂದನ ಮೂಲಕ ಕಾಲಯವನನ ಸಂಹಾರ ಮಾಡಿ ಮುಚುಕುಂದನಿಗೆ ದರ್ಶನವಿತ್ತು ಬರುತ್ತಾನೆ.

ಮುಂದೆ ಹಂಸ ಡಿಬಿಕರ ಉಪಟಳ ಹೆಚ್ಚಾದಾಗ ಕೃಷ್ಣನಲ್ಲಿ ದುರ್ವಾಸರ ದೂರು .ಈ ಮಧ್ಯೆ ಬ್ರಹ್ಮ ದತ್ತನು ಯಾಗಕ್ಕಾಗಿ ಕಪ್ಪ ಸಂಗ್ರಹಿಸಿ , ಯಾದವರಿಂದ ಕಪ್ಪವಾಗಿ ಉಪ್ಪನ್ನು ಹೊತ್ತು ತರಲು ಬ್ರಹ್ಮ ದತ್ತನ ಆಸ್ಥಾನ ಪುರೋಹಿತ ಜನಾರ್ಧನ ಭಟ್ಟನ ನ್ನು ದ್ವಾರಕೆಗೆ ಕಳಿಸುತ್ತಾನೆ . ಅವನ ದೂರಿನನ್ವಯ ಕೃಷ್ಣನು ಸಾತ್ಯಕಿಯನ್ನು ಬ್ರಹ್ಮದತ್ತನಲ್ಲಿ ಸಂಧಾನದ ನಾಟಕವಾಡಲು ಕಳಿಸುತ್ತಾನೆ. ಸಂಧಾನ ಮುರಿದು ಬಂದ ಸಾತ್ಯಕಿ, ಕೃಷ್ಣ ಬಲರಾಮರು ಬ್ರಹ್ಮದತ್ತ, ಹಂಸ ದಿಬಿಕರಲ್ಲಿ ಯುದ್ಧ ಮಾಡಿ ಬಲರಾಮ ಬ್ರಹ್ಮದತ್ತನನ್ನು ಕೊಲ್ಲುತ್ತಾನೆ . ಬ್ರಹ್ಮ ಸಭೆಯಲ್ಲಿ ಸೋಲಿಸಿದಾಗ ಅವರು ತಮ್ಮ ಭೂತ ಗಳನ್ನೂ ಕರೆದು ಕೃಷ್ಣನಲ್ಲಿಗೆ ಕಳಿಸುವರು . ಕೃಷ್ಣ ಅವನ್ನು ಓಡಿಸುವನು.ಸೋತ ಹಂಸನು ಪಲಾಯನ ಗೈದಾಗ ಅವನನ್ನು ಬೆನ್ನತಿದ ಕೃಷ್ಣನು ಹಂಸನು ಯಮುನೆಗೆ ಹಾರಿ ಪ್ರಾಣ ಕಳೆದುಕೊಳ್ಳುವಂತೆ ಮಾಡುವನು . ಅಣ್ಣನನ್ನು ಕಾಣದ ಡಿಬಿಕನು ಕೃಷ್ಣನಲ್ಲಿ ಅಣ್ಣನೆಲ್ಲಿ ಎಂದು ಕೇಳಿದಾಗ "ಅವನು ಆಗಲೇ ಯಮುನೆಗೆ ಹಾರಿ ಸತ್ತ " ಎಂದಾಗ ವೇದನೆ ತಾಳಲಾರದೆ ಡಿಬಿಕನು ನಾಲಿಗೆ ಸೀಳಿ ಪ್ರಾಣ ಕಳೆದುಕೊಳ್ಳುವನು .


ಇತ್ತ ಬ್ರಹ್ಮ ಸಭೆಯಲ್ಲಿ ನೃತ್ಯ ಮುಗಿದಾಗ ರೈವತನು ಮಗಳ ಸಮೇತ ಬ್ರಹ್ಮನಿಗೆ ಎರಗಿ ಬಂದ ವಿಚಾರ ತಿಳಿಸುತ್ತಾರೆ .ಆಗ ಬ್ರಹ್ಮನು ನಕ್ಕು ಈಗಾಗಲೇ ಭೂಲೋಕದಲ್ಲಿ ಒಂದು ಯುಗವೇ ಕಳೆದು ದ್ವಾಪರ ಯುಗ ಆರಂಭವಾಗಿದೆಯೆಂದೂ ದ್ವಾರಕೆಯಲ್ಲಿ ಬಲರಾಮನಿದ್ದು ಅವನೇ ರೇವತಿಗೆ ಸೂಕ್ತ ವರನೆ೦ದಾಗ ರೈವತನು ಮಗಳ ಸಮೇತ ದ್ವಾರಕೆಗೆ ಬಂದು ಕೃಷ್ಣನಿಗೆ ಬಿನ್ನೈಸಿ ಬಲರಾಮನಿಗೆ ರೇವತಿಯನ್ನಿತ್ತು ಮದುವೆ ಮಾಡುತ್ತಾನೆ.


ಕಾಲಮಿತಿಗೆ ಹೊಂದುವಂತೆ ಗುರುದಕ್ಷಿಣೆ, ಕಾಲಯವನ ಪ್ರಕರಣಗಳನ್ನು ಬಿಟ್ಟು ಉಳಿದ ಭಾಗವನ್ನು ಮಾತ್ರ ಅಭಿನಯಿಸಿ ತೋರಿಸಿದರೂ ಅತ್ಯಂತ ಉತ್ತಮ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ .


ಹಂಸ ಡಿಬಿಕರಾಗಿ ನಿಡ್ಲೆ ಗೋವಿಂದ ಭಟ್ - ಸುಬ್ರಾಯ ಹೊಳ್ಳ , ಬ್ರಹ್ಮದತ್ತನಾಗಿ ಶಿವಪ್ರಸಾದ್ ಪೆರುವಾಜೆ , ರೈವತನಾಗಿ ಕುಂಬ್ಳೆ ಶ್ರೀಧರ ರಾವ್ , ಕೃಷ್ಣ ನಾಗಿ ಪೆರ್ಮುದೆ ಜಯಪ್ರಕಾಶ್ , ಬಲರಾಮನಾಗಿ ಸದಾಶಿವ ಕುಲಾಲ್ , ಜನಾರ್ಧನ ಭಟ್ಟ ನಾಗಿ ಮಹೇಶ್ ಮಣಿಯಾಣಿ ರೇವತಿಯಾಗಿ ಕೆದಿಲ ಜಯರಾಂ ಭಟ್ ಉತ್ತಮ ಪ್ರದರ್ಶನ ನೀಡಿರುತ್ತಾರೆ. ಬಲರಾಮನ ಪಾತ್ರಕ್ಕೆ ಪಗಡಿಯ ಬದಲು ಕೋಲು ಕಿರೀಟವಿಟ್ಟಿದ್ದರೆ ಇನ್ನೂ ಉತ್ತಮವಾಗುತ್ತಿತ್ತು.

ಪೌರಣಿಕ ಪ್ರಸಂಗಗಳು ಹಲವಾರಿದ್ದರೂ ಇಂಥ ಅಪೂರ್ವ ಪ್ರಸಂಗವನ್ನು ಯಶಸ್ವಿಯಾಗಿ ಪ್ರದರ್ಶಿಸಿದ ನಿಡ್ಲೆ ತಂಡಕ್ಕೂ , ಆಟವನ್ನು ಆಯೋಜಿಸಿದ ಸಂಘಟಕರಾದ ಕೆ.ಎಂ . ಪ್ರವೀಣ್ ಕುಮಾರ್ ಟ್ರಸ್ಟ್ ನ ವರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು .


***

Wednesday, August 12, 2009

ದೊಂದಿ ಸಂಕಪ್ಪಣ್ಣ ..


ಯಕ್ಷಗಾನ ಬಯಲಾಟಗಳಲ್ಲಿ ಸನ್ನಿವೇಶ ನಿರ್ಮಾಣಕ್ಕೆ ದೊಂದಿ ಯಾ ದೀವಟಿಗೆಯನ್ನು ಬಳಸುವುದು ಪದ್ಧತಿ. ಕುಂಭಕರ್ಣ ,ವೀರಭದ್ರನ ಬಾರಣೆಗೆ , ಮಹಿಷಾಸುರನ ಪ್ರವೇಶಕ್ಕೆ , ರುದ್ರ ಭೀಮನ ಆವೇಶಕ್ಕೆ , ಚಂಡ-ಮುಂಡರ ಅಬ್ಬರಕ್ಕೆ , ಯಾವುದೇ ಬಣ್ಣದ ವೇಷಗಳು ಕಳೆಗಟ್ಟಬೇಕಾದರೆ ದೊಂದಿ ಬೇಕೇ ಬೇಕು . ಹಿಂದೆ ದೊಂದಿ ಬೆಳಕಿನ ಆಟಗಳು ನಡೆಯುತ್ತಿತ್ತು . ಆಗಲೂ ವೇಷಗಳ ಅಬ್ಬರ ಹೆಚ್ಚಿಸಲು ದೊಂದಿಯನ್ನು ಬಳಸುತ್ತಿದ್ದರು ಎಂದು ಹಿರಿಯರಿಂದ ತಿಳಿದು ಬರುತ್ತದೆ .


ಇಲ್ಲಿ ಬಳಸುವ ದೊಂದಿಯನ್ನು ಸಿದ್ದಪಡಿಸುವುದು ಒಂದು ಕಲೆ. ನಮ್ಮ ಊರಿನ ಕೆಳಗಿನ ಬೈಲಿನ ಸಂಕಪ್ಪಣ್ಣ ದೊಂದಿ ಕಟ್ಟುವುದರಲ್ಲಿ ನಿಪುಣರು. ನಮ್ಮೂರಿನ ಯಾವುದೇ ಆಟಗಳು ನಡೆಯುವುದಿದ್ದರೂ ಸಂಕಪ್ಪಣ್ಣನ ಸೇವೆ ಅತೀ ಅಗತ್ಯವಾಗಿತ್ತು. ಭೂತ ಕೋಲ, ಜಾತ್ರೆ , ಯಕ್ಷಗಾನಗಳಿಗೆ ಅವಶ್ಯವಿರುವ ಎಲ್ಲ ರೀತಿಯ ದೊಂದಿ ಸಿದ್ದಪಡಿಸುವುದರಲ್ಲಿ ನಿಷ್ಣಾತರಾದ ಅವರನ್ನು ದೊಂದಿ ಸಂಕಪ್ಪಣ್ಣ ಎಂದೇ ಎಲ್ಲರೂ ಕರೆಯುವುದು.

ಅಗತ್ಯ ಬಿದ್ದಾಗ ಬಣ್ಣದ ವೇಷ , ಹಾಸ್ಯ , ಒತ್ತು ಮದ್ದಲೆಗಾರರಾಗಿಯೂ ಇವರು ಸಹಕರಿಸಿ ಪ್ರದರ್ಶನ ಸುಸೂತ್ರವಾಗಿ ನಡೆಯುವಂತೆ ಮಾಡುವ ಇವರೊಬ್ಬ ಆಪತ್ಭಾಂಧವ . ರಾತ್ರಿಯಿಡೀ ಪರದೆ ಹಿಡಿಯುವುದು , ವೇಷ ಕಟ್ಟುವುದು , ರಂಗಕ್ಕೆ ದೊಂದಿ ಬೇಕಾದಾಗ ಹಿಡಿಯುವುದು . ಒಟ್ಟಿನಲ್ಲಿ "ಸರ್ವ ಸುದರಿಕೆ" ಮಾಡುವ ಕಟ್ಟಾಳು ನಮ್ಮ ಸಂಕಪ್ಪಣ್ಣ . ಬೇಸಿಗೆಯಲ್ಲಿ ಏನಿಲ್ಲವೆಂದರೂ ಸುತ್ತ ಮುತ್ತಲ ಊರುಗಳಿಗೆ ಹೋಗಿ ೬೦-೭೦ ಆಟಗಳನ್ನು ಸುಧಾರಿಸಿ ಬರುವ ಇವರು ಮಳೆಗಾಲದಲ್ಲಿ ತೋಟಕ್ಕೆ ಮದ್ದು ಬಿಡುವುದರಲ್ಲಿ ನಿರತರಾಗುತ್ತಾರೆ . ಇಡೀ ಬೈಲಿನ ಒಂದು ಸುತ್ತು ಮದ್ದು ಬಿಟ್ಟಾಗ ಎರಡನೇ ಸಲಕ್ಕೆ ದಿನ ಹತ್ತಿರ ಬಂದೆ ಬಿಡುತ್ತದೆ. ಸಂಕಪ್ಪಣ್ಣ ಪತ್ನಿ. ಒಬ್ಬ ಮಗ ಶಾಂತಪ್ಪ , ಮಗಳು ಲೀಲಾವತಿಯೊಂದಿಗೆ ಸಂಸಾರ ಸಾಗಿಸುತ್ತಿದ್ದರು.



ಸಂಕಪ್ಪಣ್ಣ ದೊಂದಿ ಹಿಡಿಯುವ ಕ್ರಮ, ರಾಳದ ಹುಡಿಯನ್ನು ಅದಕ್ಕೆರಚಿದಾಗ ಮೈಗೆ ಅದರಿಂದ ಬೆಂಕಿಯ ಕಿಡಿಗಳು ಸಿಡಿಯದಂತೆ ತಪ್ಪಿಸಿಕೊಂಡು ವೇಷದ ರಭಸಕ್ಕೆ ಹೊಂದಿಕೊಂಡು ರಂಗಸ್ಥಳಕ್ಕೆ ಒಯ್ಯುವ ರೀತಿ ಬಹಳ ಅಂದ. ಪ್ರೇಕ್ಷಕರಿಗೆ ಒಂದಿನಿತೂ ಕಿರಿ ಕಿರಿ ಆಗದಂತೆ ಅವರು ಎಚ್ಚರವಹಿಸುವ ರೀತಿ ಅನುಸರಣೀಯ . ಸಾಮಾನ್ಯವಾಗಿ ಶ್ರೀದೇವಿ ಮಹಾತ್ಮೆ , ಶ್ರೀದೇವಿ ಲಲಿತೋಪಖ್ಯಾನ ಪ್ರಸಂಗಗಳಲ್ಲಿ ಬರುವ ಮಹಿಷಾಸುರನ ಪಾತ್ರಕ್ಕೆ ವೇಷಧಾರಿಯೂ ಬಳಸುವ ಮುಖ್ಯ ದೊಂದಿ ಅಲ್ಲದೆ ಅದರ ಹಿಂಬಾಲಕರು ಚೌಕಿಯಿಂದ ರಂಗಸ್ಥಳದ ವರೆಗೆ ಜೊತೆ ದೊಂದಿಯವರೂ ಸಾಥ್ ಕೊಡುತ್ತಾರೆ. ಇದರಲ್ಲಿ ಹೆಚ್ಚಾಗಿ ಮಕ್ಕಳೇ ಇದ್ದು , ಅವರಿಗೆ ಬೇಕಾದ ಸೂಟೆಯನ್ನು ನಾಜೂಕಾಗಿ ಕಟ್ಟಿ ಕೊಡುತ್ತಿದ್ದ ಸಂಕಪ್ಪಣ್ಣ, ( ಕೆಲವೊಮ್ಮೆ ಕಂಠಪೂರ್ತಿ ಕುಡಿದಿದ್ದರೂ ಸಹ !)ಎಂದೂ ಯಾರ ಮೇಲೂ ರೇಗಾಡಿದವರಲ್ಲ .ತೋಟದಲ್ಲಿ ಅಡಿಕೆ ಮರಕ್ಕೆ ಮದ್ದು ಬಿಡುವಾಗಲೂ ಯಾವುದಾದರೊಂದು ಪ್ರಸಂಗದ ಪದ್ಯವನ್ನು ಗುನುಗುನಿಸುತ್ತಾ " ಆಯೇ ಕೈ ತಿರ್ಗಾವುನ ಇಂಚ ಅಣ್ಣೆರೆ " ಅಂತ ಕಂಟ್ರೋಲರ್ ತಿರುಗಿಸಿ ತೋರಿಸುತ್ತಿದ್ದರು!. ಹೆಚ್ಚಿನ ಎಲ್ಲ ಪ್ರಸಂಗದ ನಡೆ, ಯಾವ ಹೊತ್ತಿನಲ್ಲಿ ರಂಗದಲ್ಲಿ ಏನಿರಬೇಕು ಎಂಬ ಮಾಹಿತಿ , ಯಾವ ಪದಕ್ಕೆ ಮದ್ದಲೆ ಮಾತ್ರ ಸಾಕು , ಚೆಂಡೆ ಪದಗಳು ಯಾವುದು ? (ಈಗ ಪ್ರಸಿದ್ದ ಚೆಂಡೆ-ಮದ್ದಲೆವಾದಕರೂ ಕರುಣಾರಸಭರಿತ ದುಃಖದ ಪದಗಳಿಗೂ ತಮ್ಮ ಚೆಂಡೆಯನ್ನು "ಭಾರಿಸಿ" ಕುಲಗೆಡಿಸುತ್ತಾರೆ ಬಿಡಿ !) , ಯಾವ ಭಾಗವತರಿಗೆ ಎಷ್ಟು ಹೊತ್ತಿಗೆ ಯಾವ ರೀತಿಯ ಚಾ ಬೇಕು. ಹೊಗೆಸೊಪ್ಪು "ಕುಣಿಯವೋ" ಬೇಜವಾಡವೋ ಸಮಗ್ರ ಮಾಹಿತಿ ಕಣಜ ನಮ್ಮ ಸಂಕಪ್ಪಣ್ಣ.

ಮೊನ್ನೆ ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ತರಗತಿಯಲ್ಲಿ ಪಾಠ ಮುಗಿಸಿ ಹೊರಬರುತ್ತಿದ್ದಾಗ ಒಂದು ಅನಿರೀಕ್ಷಿತ ದೂರವಾಣಿ ಕರೆ ಬಂತು . ಯಾರೆಂದು ನೋಡಿದರೆ "ಎಂದೂ ಯಾವ ಕಾರಣಕ್ಕೂ " ತಮ್ಮ ಸ್ವಂತ ಹಣದಿಂದ ಫೋನ್ ಮಾಡದ ಗೋಪಣ್ಣನ ಕರೆ " ಮದ್ದು ಬಿಡ್ತ ದೊಂದಿ ಸಂಕಪ್ಪಂಗೆ ಆಕ್ಸಿಡೆಂಟ್ ಅತು ; ಈಗ ಮಣಿಪಾಲಕ್ಕೆ ಕೊಂಡು ಹೋದವು ; ಬದ್ಕುದು ಸಂಶಯವೇ " . ನನಗೆ ಅರೆಕ್ಷಣ ಏನು ಮಾಡಬೇಕೆಂದೇ ತೋಚಲಿಲ್ಲ . ದಿನವೂ ಲವಲವಿಕೆಯಲ್ಲಿ ಇರುತ್ತಿದ್ದ ಸಂಕಪ್ಪಣ್ಣ ಅನಿರೀಕ್ಷಿತವಾಗಿ ಹೀಗೆ ಆಸ್ಪತ್ರೆ ಸೇರಿದ್ದು , ಚಿಕ್ಕಂದಿನಿಂದಲೂ ಅವರೊಂದಿಗೆ ಒಡನಾಟವಿದ್ದ ನನಗೆ ಎಲ್ಲವೂ ಅಯೋಮಯವಾದಂತಾಗಿ ಚಲನಚಿತ್ರದ ದೃಶ್ಯಗಳಂತೆ ಕಣ್ಣಮುಂದೆ ಬಂದು ನಿಂತಿತು. ಸಂಜೆಯ ಸುಮಾರಿಗೆ ಇಹಲೋಕ ಯಾತ್ರೆ ಮುಗಿಸಿದ ಅವರನ್ನು ನೋಡಲು ಯಾವೊಬ್ಬ ಕಲಾವಿದನೂ, ಯಕ್ಷಗಾನ ಅಕಾಡೆಮಿಯ ಸದಸ್ಯನೂ , ಬಾರದೆ ಅಂತ್ಯಕ್ರಿಯೆ ಮುಗಿಯಿತು. ಮರುದಿನ ಪತ್ರಿಕೆಯಲ್ಲೂ "ರಾಕಿ ಸಾವಂತ್ ಸ್ವಯಂವರ " ವಿಷಯ ಮುಖಪುಟದಲ್ಲಿ ರಾರಾಜಿಸುತ್ತಿದ್ದು , ಕೊನೆ ಪಕ್ಷ ಹನ್ನೊಂದನೇ ಪುಟದಲ್ಲಾದರೂ ಈ ವರ್ತಮಾನ ಬಾರದೆ , ಒಬ್ಬ ಉತ್ತಮ ರಂಗಕರ್ಮಿಯ ಅಂತ್ಯ ಸುದ್ದಿ ಇಲ್ಲದೆ ಆಗಿ ಹೋಯಿತು.

ಏನಿದ್ದರೂ ಇಡೀ ಊರಿನವರ ಮನದಲ್ಲಿ , ಮುಂದೆ ನಡೆಯುವ ಆಟಗಳಲ್ಲಿ ಸದಾ ನೆನಪಿಗೆ ಬರುವ ವ್ಯಕ್ತಿತ್ವ ದೊಂದಿ ಸಂಕಪ್ಪಣ್ಣನದ್ದು . ಅವರಿಗಿದೋ ಮನ:ಪೂರ್ವಕ ಶ್ರದ್ಧಾಂಜಲಿ .

***