Sunday, November 30, 2008

ಗಣಪತಿ ಕೌತುಕ

ಯಕ್ಷಗಾನ ಪೂರ್ವ ರಂಗದಲ್ಲಿ ಬರುವ ಗಣಪತಿ ಕೌತುಕವನ್ನು ಕೇಳುವುದೆಂದರೆ ಕಿವಿಗಳಿಗೆ ಹಬ್ಬ .

ಮಂಗಳೂರು ಆಕಾಶವಾಣಿಯಲ್ಲಿ ಕೃಷಿರಂಗ ಕಾರ್ಯಕ್ರಮದಲ್ಲಿ ಶ್ರೀ ದಾಮೋದರ ಮಂಡೆಚ್ಚರು ಹಾಡಿದ ಗಣಪತಿ ಕೌತುಕ ಸಣ್ಣವನಿದ್ದಾಗ ಕೇಳಿದ್ದೆ . ನಂತರ ತೆಂಕುತಿಟ್ಟು ಹಿತರಕ್ಷಣಾ ವೇದಿಕೆ ,ಸುಳ್ಯದವರು ಬಿಡುಗಡೆ ಮಾಡಿದ 'ಯಕ್ಷಗಾನ ಪೂರ್ವರಂಗ' ಧ್ವನಿ ಸುರುಳಿಯಲ್ಲಿ ಬಲಿಪ ಭಾಗವತರ ಗಣಪತಿ ಕೌತುಕ ಅದ್ಭುತವಾಗಿ ಮೂಡಿ ಬಂದಿದೆ . ಗಣಪತಿ ಕೌತುಕ ಪೂರ್ಣ ಪಾಠ ಬಾಯಿಪಾಠ ಬಂದರೆ ಮಾತ್ರ ಅದಕ್ಕೆ ಮದ್ದಲೆ ಸಾಥ್ ನೀಡುವುದಕ್ಕೆ ಸಾಧ್ಯ . ಹಾಗಾಗಿ ಪೂರ್ವರಂಗದಲ್ಲಿ ಅದನ್ನು ಹೇಳಬೇಕೆಂದರೆ ಭಾಗವತರಿಗೆ ಹಾಗೂ ಮದ್ದಲೆಗಾರನಿಗೆ ಅದು ಗೊತ್ತಿರಲೇ ಬೇಕು !


ಮತ್ತೆ ಮತ್ತೆ ನನ್ನನ್ನು ಕಾಡುತ್ತಿರುವ ಗಣಪತಿ ಕೌತುಕದ ಆರಂಭ ಹೀಗಿದೆ

" ಕಿಡ್ತಕ ಥೈ ಧಿಧ್ಧಿ ಥೈ ತಾಂ ಕಿಡ್ತಕ ತತ್ತರಿ ತತ್ತಾಂ , ತತ್ತೊಂ ಕಿಡ್ತಕ ತರಿಕಿಟ ಕಿಟತಕ ಅರುದಿನ ಮರುಮಗ ವಿಘ್ನ ವಿನಾಶಕ ......."

ಇತ್ತೀಚಿಗೆ ಮರೆಗೆ ಸಂದಿರುವ ಪೂರ್ವ ರಂಗದ ಒಂದು ವಿಶಿಷ್ಟ ಹಾಡು ಮುಂದಿನ ಪೀಳಿಗೆಗೆ " ಕೌತುಕ "ವಾಗಿಯೇ ಉಳಿಯಲಿದೆಯೇನೋ ?

Monday, October 20, 2008

ಟೆಂಟಿನ ಆಟ .....

ಆಗಿನ್ನೂ ನಾನು ೪ನೆ ತರಗತಿಯಲ್ಲಿದ್ದೆ . ವೇಣೂರು ಶಾಲಾ ಮೈದಾನದಲ್ಲಿ ಧರ್ಮಸ್ಥಳ ಮೇಳದವರು "ಸಮುದ್ರ ಮಥನ " ಆಟ ಆಡಲಿದ್ದಾರೆ ಎಂಬ ವಿಚಾರ ಒಂದು ತಿಂಗಳ ಮೊದಲೇ ರಾಘವೇಂದ್ರ ಪೈಗಳ ಅಂಗಡಿ ಮುಂದೆ ಅಂಟಿಸಿದ್ದ ಭಿತ್ತಿ ಪತ್ರಿಕೆ ನೋಡಿ ನಮಗೆಲ್ಲ ಅದೇನೋ ಒಂದು ರೀತಿಯ ಆನಂದ ! ದಿನವೂ ಶಾಲೆಗೆ ಹೋಗುವಾಗ ಮತ್ತು ಶಾಲೆಯಿಂದ ಬರುವಾಗ ಆ ಪೋಸ್ಟರನ್ನು ಒಂದು ಸಲ ನೋಡದಿದ್ದರೆ ಮನಸ್ಸಿಗೆ ಸಮಾಧಾನವಿಲ್ಲ !
ತುಳು ಆಟಕ್ಕೆ ಹೋಗಬಾರದೆನ್ನುವ ಅಲಿಖಿತ ಕಟ್ಟಪ್ಪಣೆ ಮನೆಯಲ್ಲಿ ಇದ್ದದ್ದರಿಂದ ಕನ್ನಡ ಆಟಕ್ಕೆ ಖಂಡಿತ ಒಪ್ಪಿಗೆ ಸಿಗುತ್ತದೆಯೆಂಬ ಆಸೆ !ಯಾವಾಗ ಮಾರ್ಚ್ ೧೮ ಶನಿವಾರ ಬರುತ್ತದೋ ಎಂದು ಕಾಯುತ್ತ ಇದ್ದ ನಾನು , ಇನ್ನೇನು ಆಟಕ್ಕೆ ಮೂರು ದಿನ ಮೊದಲೇ ಮನೆಯಲ್ಲಿ ಅಪ್ಪನಿಗೆ "ಬೆಣ್ಣೆ" ಹಾಕಲು ಸುರುಮಾಡಿದ್ದೆ!

ಆಟದ ಮುನ್ನಾದಿನ ಶಾಲಾ ಮಕ್ಕಳಿಗೆ ಶಾಲೆಯಿಂದ ಆಟಕ್ಕೆ ಹೋಗುವವರಿಗಾಗಿ ಗುರುತಿನ ಚೀಟಿ (ಶಾಲೆಯ ಸೀಲ್ ಇರುವ ಚೀಟಿ ) ವಿತರಣಾ ವ್ಯವಸ್ಥೆ ಇತ್ತು . ಶಾಲೆಯಿಂದ ತಂದ ಚೀಟಿ ತೋರಿಸಿದರೆ ಟೆಂಟ್ ನ ಆಟಕ್ಕೆ ಟಿಕೇಟಿನಲ್ಲಿ ಅರ್ಧ ಭಾಗ ವಿನಾಯಿತಿ ಸಿಗುತ್ತಿತ್ತು . ಆ ಚೀಟಿಯನ್ನು ಪಡೆಯಲು ನಿಂತ ಸಾಲಿನಲ್ಲಿ ಮೊದಲಿಗನಾಗಿ ಶೀಲ ಟೀಚರ್ ಕೊಟ್ಟ ಚೀಟಿಯನ್ನು ಭದ್ರವಾಗಿ ಕಿಸೆಯಲ್ಲಿರಿಸಿಕೊಂಡು ಮನೆಗೆ ತಂದು ಅಪ್ಪನಲ್ಲಿ "ಜಾಗ್ರತೆ " ತೆಗೆದಿಡಲು ಹೇಳಿ ಮರುದಿವಸ ಶಾಲೆಗೆ ನಡೆದೆ. ಶನಿವಾರ ಅರ್ಧ ದಿನ ಶಾಲೆ . ತರಗತಿಯಲ್ಲಿ ಕುಳಿತಿದ್ದರೂ ಮನಸ್ಸೆಲ್ಲ ರಾತ್ರಿಯ ಆಟದ ಮೇಲೆ !

೧೧ ಗಂಟೆಗೆ ೨ ನೆ ಬೆಲ್ ಅದ ತಕ್ಷಣ ಮೂತ್ರ ವಿಸರ್ಜನೆಗೆ ಓಡಿ ಹೋಗುತ್ತಿದ್ದುದು ಶಾಲಾ ಮೈದಾನದ ಬದಿಯ ಕುರುಚಲು ಪೊದೆಯ ಬಳಿಗೆ ! ಆಗ ನಮ್ಮ ದೃಷ್ಟಿ ಎಲ್ಲ ಮೈದಾನದ ಮದ್ಯೆ . "ಮೇಳದವರು ಬಂದಿದ್ದರೋ ಇಲ್ಲವೊ?" ಎಂಬ ಕಾತರ !

ಅಲ್ಲಿ ಟೆಂಟ್ ನ ಸಾಮಗ್ರಿಗಳನ್ನು ಇಳಿಸುತ್ತಿದ್ದ ಲಾರಿಯನ್ನು ನೋಡಿದಾಗ ಮನಸ್ಸಿಗೆ ನೆಮ್ಮದಿ !

ಮಧ್ಯಾಹ್ನ ಆಗುವುದನ್ನೇ ಕಾಯುತ್ತಿದ್ದ ನಾವು ಶಾಲೆ ಬಿಟ್ಟೊಡನೆ ಮನೆಯತ್ತ ಒಂದೇ ಓಟ .

ಮನೆಗೆ ಬಂದು ಊಟ ಮಾಡಿ ರೇಡಿಯೋ ದಲ್ಲಿ ಬರುತ್ತಿದ್ದ " ಆಕಾಶದಿಂದ ಧರೆಗಿಳಿದ ರಂಭೆ ......" ಹಾಡನ್ನು ಕೇಳುತ್ತಾ ರಾತ್ರಿಯ ಆಟಕ್ಕೆ ಕಾಯುತ್ತ ಕುಳಿತಿರುತ್ತಿದ್ದೆ .

ಆ ಹೊತ್ತಿನಲ್ಲಿ ಮನೆಯವರು ಹೇಳಿದ ಯಾವ ಕೆಲಸವನ್ನಾದರೂ ಮಾಡಲು ರೆಡಿ !

" ಒಪ್ಪದ ನೀತಿಯ ಮಾತುಗಳೆಲ್ಲ ತಟ್ಟನೆ ದಾರಿಯ ಹಿಡಿಯುವುವು " ಅಂತ ಕೆ.ಎಸ್.ನ . ಹೇಳಿದ ಮಾತು ನೂರು ಪ್ರತಿಶತ ಸತ್ಯವಾಗಿತ್ತು !

ಸಂಜೆಯಾಗುತ್ತಿದ್ದಂತೆಯೇ ಸ್ನಾನ ಮಾಡಿ ಅಪ್ಪನ ಪೂಜೆ ಮುಗಿಯುದನ್ನೇ ಕಾಯುತ್ತಿದ್ದೆ . ಎಂಟು ಗಂಟೆಯಾಗುತ್ತಿದ್ದ೦ತೆ ಏನೋ ಒಂದುರೀತಿಯ ತಳಮಳ ! ಎಲ್ಲಿ ಆಟ ಆರಂಭವಾಗಿ ಬಿಡುತ್ತದೋ , ನಮಗೆಲ್ಲಿ ಮಿಸ್ ಆಗುತ್ತದೋ ಎಂಬ ಭಯ !

ಬಟ್ಟಲಲ್ಲಿ ಬಡಿಸಿದ ಅನ್ನ ಹೊಟ್ಟೆಗಿಳಿಯದು !
"ಬಳುಸಿದ್ದೆಲ್ಲ ಉಂಡಿಕ್ಕಿ ಏಳೆಕ್ಕು " ಎಂಬ ದೊಡ್ಡಕ್ಕನ ಹುಕುಂ ಬೇರೆ ! ಅಂತೂ ಬೇಗ ಬೇಗನೆ ಊಟ ಮುಗಿಸಿ ಶಾಲನ್ನು ಹಿಡಿದುಕೊಂಡು ಅಪ್ಪನೊಂದಿಗೆ ಶಾಲಾ ಮೈದಾನದ ಕಡೆಗೆ ಅತ್ಯುತ್ಸಾಹದಿಂದ ಹೊರಟಾಗ ದೂರದಿಂದ ಮೈಕ್ನಲ್ಲಿ ಕೇಳುತ್ತಿದ್ದ "ಶರಣು ಶರಣಯ್ಯ... " ಪದ್ಯ ಇನ್ನೂ ಆಟ ಸುರುವಾಗಿಲ್ಲ ಎಂಬ ಸಮಾಧಾನ ನೀಡಿತ್ತು . ಹೋಗುವಾಗಲೇ ದಾರಿಯಲ್ಲಿ ರಾಘವೇಂದ್ರರ ಅಂಗಡಿಯಿಂದಲೇ ೧೦೦ ಗ್ರಾಂ . ನೆಲಕಡಲೆಯನ್ನು ತೆಗೆದು ಕೊಟ್ಟು "ಆಟದ ಹತ್ರೆ ಸಿಕ್ಕುದರ ತಿನ್ನೆಡ " ಅಂತ ಹಿತೋಪದೇಶ ನೀಡಿದಾಗ "ಹುಂ" ಅಂತ ತಲೆಯಾಡಿಸಿ ಬೇಗನೆ ಮೈದಾನಕ್ಕೆ ನಡೆದಾಗ ಆಗಲೇ ಜನ ಜಮಾಯಿಸಿತ್ತು . ಟಿಕೆಟ್ ಕೌಂಟರ್ ಬಳಿ ಬಂದಾಗಲೇ ನನಗೆ ಗೊತ್ತಾದದ್ದು ಶೀಲ ಟೀಚರ್ ಕೊಟ್ಟ ಚೀಟಿ "ಜಾಗ್ರತೆ" ತೆಗೆದಿಡಲು ಅಪ್ಪನ ಬಳಿ ಕೊಟ್ಟದ್ದು ಮನೆಯಲ್ಲೇ ಬಾಕಿ ಅಂತ !
ಛೆ ! ಹೀಗಾಯಿತಲ್ಲ ಅಂತ ಯೋಚಿಸುತ್ತಿದ್ದಾಗಲೆ ಎದುರಿನಲ್ಲಿ ದಿನಕರ ಮಾಸ್ತರು ದೇವರಂತೆ ಬಂದು ವಿನಾಯಿತಿ ಟಿಕೆಟ್ ಕೊಡಿಸುವಲ್ಲಿ ಸಹಕರಿಸಿದರು .ಟಿಕೆಟ್ ಪಡೆದ ನಾನು ಮತ್ತು ಅಪ್ಪ ನೇರವಾಗಿ ಚೌಕಿಯತ್ತ ನಡೆದೆವು . ಅಲ್ಲಿ ದೇವರ ಪ್ರಸಾದ ಪಡೆದ ಮೇಲೆ ಕಲಾವಿದರು ವೇಷ ಹಾಕುವುದನ್ನು ಅಪ್ಪ ತೋರಿಸಿದರು . ನಮ್ಮ ಊರಿನ ಸಮೀಪದವರೇ ಅದ ಎಂಪೆಕಟ್ಟೆ ರಾಮಯ್ಯ ರೈಗಳು ಅಪ್ಪನನ್ನು ಕಂಡು "ನಮಸ್ಕಾರ ಅಣ್ಣೆರೆ ಎಂಚ ಉಲ್ಲರ್ ?" ಅಂತ ಕೇಳಿದರು. ಅವರ ಪೆಟ್ಟಿಗೆಯ ಮೇಲೆ ಕುಳಿತು ಸ್ವಲ್ಪ ಹೊತ್ತು ಕುಶಲೋಪರಿ ಮಾತನಾಡಿದ ಬಳಿಕ ಅಪ್ಪ ಅವರನ್ನು ತೋರಿಸಿ ಇವತ್ತು ದೇವೇಂದ್ರನ ವೇಷ ರಾಮಯ್ಯಂದು ಎಂದು ಹೇಳಿದರು. ಬಳಿಕ ಉಳಿದ ಪರಿಚಯದ ಕಲಾವಿದರಿಗೆ ಕಿರು ನಗೆ ಬೀರಿ ನನ್ನನು ಕರೆದುಕೊಂಡು ಟೆಂಟಿನ ಒಳಗೆ ಕಬ್ಬಿಣದ ಕುರ್ಚಿಯಲ್ಲಿ ದಿನಕರ ಮಾಸ್ತರ ಪಕ್ಕ ಕುಳ್ಳಿರಿಸಿ "ಉದಿಯಪ್ಪಗ ಮಾಸ್ತರೊಟ್ಟಿ೦ಗೆ ಬಾ " ಹೇಳಿ ಆದೇಶಿಸಿ ಅಪ್ಪ ಬೀಳ್ಗೊಟ್ಟರು.
ಅಷ್ಟೊತ್ತಿಗಾಗಲೇ ಕೇಳಿ ಬಡಿಯಲು ಆರಂಭಿಸಿದ್ದ ಮೇಳದವರು ಮುಕ್ತಾಯ ಮಾಡಿದಾಗ ಸಂಗೀತಗಾರ ಸಂಗೀತ ಆರಂಭಿಸಿದ್ದರು.
ಸರಿಯಾಗಿ ಹತ್ತು ಗಂಟೆಗೆ ಪುತ್ತಿಗೆ ರಘುರಾಮ ಹೊಳ್ಳರು ರಂಗಸ್ಥಳಕ್ಕೆ ಬಂದು ದೇವೇಂದ್ರನ ಒಡ್ಡೋಲಗ ಆರಂಭಿಸಿದರು . ನಿಜಕ್ಕೂ ಯಕ್ಷಲೋಕದ ಅನಾವರಣ ಆರಂಭಗೊಂಡಿತ್ತು !
ಆ ದಿವಸ ಸಮುದ್ರ ಮಥನ ಪ್ರಸಂಗದ ವಿಶೇಷ ಆಕರ್ಷಣೆಯಾಗಿ ಉಜಿರೆಯ "ಕೃಷ್ಣ " ಆನೆಯನ್ನು ಸಿಂಗರಿಸಿ ತರಲಾಗಿತ್ತು . ದೇವೇಂದ್ರನ ಒಡ್ಡೋಲಗದ ಬಳಿಕ ದೇವೇಂದ್ರ -ದೇವತೆಗಳೆಲ್ಲ ವಿಹಾರಕ್ಕೆ ಐರಾವತ ಏರಿ ಹೊರಡುವ ದೃಶ್ಯದ ಸಮಯಕ್ಕೆ ಟೆಂಟಿನ ಒಂದು ಬದಿಯನ್ನು ಬಿಡಿಸಿ ಆನೆಯ ಮೇಲೆ ನಮ್ಮ ಎಂಪೆಕಟ್ಟೆಯವರು ದೇವೆಂದ್ರನಾಗಿ ಬರುವಾಗ ಸಿಡಿಮದ್ದು ಬ್ಯಾಂಡು ಸಮೇತ ರಂಗದ ಬದಿಗೆ ಬರುವಾಗ ಕುತೂಹಲದಿಂದ ನೋಡುತ್ತಿದ್ದ ನಾನು ಕುರ್ಚಿಯಿಂದ ಜಾರಿ ನೆಲಕ್ಕೆ ಬಿದ್ದೆ ! ಮಾಸ್ತರರು ಕೂಡಲೇ ಕೈ ಹಿಡಿದು ಎತ್ತಿ ಸ್ವಸ್ಥಾನಕ್ಕೆ ಕೂರಿಸಿದರು. ರಾತ್ರಿ ೨ ರ ಸಮಯ ಪುತ್ತೂರು ನಾರಾಯಣ ಹೆಗಡೆಯವರ ಬಲಿ ಯ ಪಾತ್ರದ ಜೊತೆಗೆ ಕಡತೋಕ ಮಂಜುನಾಥ ಭಾಗವತರ ಪದ್ಯ !
ಜೊತೆಗೆ ಮೂಕಾಸುರನ ಪ್ರವೇಶ !
ನಿಜಕ್ಕೂ ಅದೊಂದು ಅವಿಸ್ಮರಣೀಯ ಕ್ಷಣ .
ವಿಚಿತ್ರ ಬಣ್ಣಗಾರಿಕೆ ಹಾಗೂ ಮಾತಿನ ಮೋಡಿಯಿಂದ ಮೂಕಾಸುರನಾಗಿ ಕಾಣಿಸಿಕೊಂಡ ನಯನ ಕುಮಾರ್ ಅದ್ಬುತವಾಗಿ ಅಭಿನಯಿಸಿದ್ದರು . ಕುಂಬಳೆ ಸುಂದರ ರಾವ್ ಅವರ ವಿಷ್ಣು ,ಶ್ರೀಧರ ರಾಯರ ಲಕ್ಷ್ಮಿ ಇಂದಿಗೂ ಕಣ್ಣ ಮುಂದೆ ಕಾಣುತ್ತಿದೆ.
ಬೆಳಗಿನ ವರೆಗೂ ಕಣ್ಣು ಮುಚ್ಚದೆ ಆಟ ನೋಡಿದ್ದೇ ನೋಡಿದ್ದು !
ಮಂಗಳ ಪದ ಹಾಡುತ್ತಿದ್ದಂತೆ ಮಾಸ್ತರರು " ಇನ್ನು ಮನೆಗೆ ಹೊಪೋ " ಹೇಳಿ ನನ್ನನ್ನು ಹೊರಡಿಸಿದರು .
ರಾತ್ರಿ ಬರುವಾಗ ಇದ್ದ ಉತ್ಸಾಹ ಬೆಳಗಾದಾಗ ನಿದ್ದೆಯ ಝಳದಲ್ಲಿ ಇರಲಿಲ್ಲ . ಹೇಗೂ ರವಿವಾರ ಮನೆಗೆ ಬಂದವನೇ ಮುಖ ತೊಳೆದು ತಿಂಡಿ ತಿಂದು ಚಾಪೆಯಲ್ಲಿ ಮಲಗಿದಗಲೂ ಕಿವಿಯಲ್ಲಿ ಚೆಂಡೆ ಶಬ್ದ ಕೇಳಿದ ಅನುಭವ !
ಅಹಾ !
ಮಲಗಿ ಚೆನ್ನಾಗಿ ನಿದ್ದೆ ಹೊಡೆದ ನನಗೆ ಮದ್ಯಾನ ಊಟಕ್ಕೆ ಅಮ್ಮ ಎಚ್ಚರಿಸಿದಾಗಲೇ ಎಚ್ಚರವಾದದ್ದು. ಆಮೇಲೆ ಸ್ನಾನ ಮಾಡಿ ಊಟ
ಮುಗಿಸಿ ಮರಳಿ ನಿದ್ದೆ !
ನಾಲ್ಕುವರೆಗೆ ವಸಂತ ಮೂಲ್ಯ ಬಂದು ಆಟ ಅದಲು ಕರೆದಾಗಲೇ ಎಚ್ಚರ .
ಮುಳಿ ಗುಡ್ಡೆಗೆ ಹೋಗಿ ನಿನ್ನೆ ನೋಡಿದ ಆಟವನ್ನೇ ಮರುಪ್ರದರ್ಶನ !
ನಾನೆ ದೇವೇಂದ್ರ , ವಸಂತನೇ ಬಲಿ . ಬೂಬನೆ ಭಾಗವತ , ತೂತಾದ ಡಬ್ಬಿಯೇ ಚೆಂಡೆ !
ನಾಯಿ ಬಟ್ಟಲೆ ಜಾಗಟೆ !
ಕೊತ್ತಲಿಗೆಯನ್ನು ಹಿಡಿದುಕೊಂಡು ನಮ್ಮ ಯುದ್ಧ !

ಇಂದಿಗೂ ನನಗಿಂತ ಆಟ ಮರಳಿ ಸಿಕ್ಕಿಲ್ಲ .
ಎಲ್ಲಿ ಹೋಯಿತೋ ಆ ಯಕ್ಷಲೋಕದ ವಿಹಾರದ ಸಿಹಿ ದಿನಗಳು ??
ಇನ್ನು ಸಿಗಲಾರವೇ?
ತವಕದಲ್ಲಿ ಕಾಯುತ್ತಿರುವೆ .......


***



Sunday, September 7, 2008

ನೆರೆ ಬಂದ ಬಳಿಕ .......

"ಇಪ್ಪತ್ತು ವರ್ಷಗಳಿಂದ ಇಂಥ ಮಳೆ ಬಂದಿರಲಿಲ್ಲ ; ನಾನು ಶಾಲೆಗೆ ಹೋಗುತ್ತಿದ್ದಾಗ ಒಮ್ಮೆ ಇಂಥ ಮಳೆ ಬಂದು ಕೆಳಗಿನ ಪೇಟೆ ಪೂರ್ತಿ ಮುಳುಗಿ ಹೋಗಿ ಮೇಲಿನ ಪೇಟೆ ಯಾ ಅರ್ಧಕ್ಕೇ ನೀರು ಬಂದಿತ್ತು " ಎಂದು ಅಣ್ಣಪ್ಪ ಮೂಲ್ಯರು ನೆನಪಿಸಿಕೊಂಡರು. ಆ ದಿನ ನಿಜವಾಗಿಯೂ ಭಾರೀ ಮಳೆ ಸುರಿದಿತ್ತು .ಮುಸಲಧಾರೆಯ ಮಳೆ ನಿರಂತರ ಹದಿನೆಂಟು ಗಂಟೆಗಳ ಕಾಲ ಸುರಿದದ್ದರಿಂದ ಊರಿಗೆ ಊರೇ ಅಲ್ಲೋಲಕಲ್ಲೋಲವಾಗಿತ್ತು. ಫಲ್ಗುಣಿ ನದಿ ಉಕ್ಕೇರಿ ಹರಿಯುತ್ತಿತ್ತು. ಹಲವಾರು ಕುಟುಂಬಗಳು ನೀರುಪಾಲಾಗಿದ್ದವು .ಶಾಲೆಗಳಿಗೆ ಅಘೋಷಿತ ರಜೆ ಮುಂದುವರೆದಿತ್ತು . ಮಾಧ್ಯಮಗಳಲ್ಲಿ ಸಮೀಕ್ಷೆ , ಮಂತ್ರಿಗಳ ವೈಮಾನಿಕ ವೀಕ್ಷಣೆ ಎಲ್ಲವೂ ಆಗಿ ಪತ್ರಿಕೆಗಳ ಮುಖ ಪುಟಗಳಲ್ಲಿ " ಭಾರೀ ಮಳೆ ; ಇಪ್ಪತ್ತು ಸಾವು " ರಾರಾಜಿಸುತ್ತಿತ್ತು.
ನಿನ್ನೆಯಿಂದ ಮಳೆ ಇಳಿಮುಖವಾಗುತ್ತಿದ್ದಂತೆಯೇ ಆಳುವ ಪಕ್ಷದ ಶಾಸಕರು ತಮ್ಮ ಪಟಾಲಮ್ಮಿನೊಂದಿಗೆ ಊರಿಗೆ ಭೀತಿ ನೀಡಿ ನೊಂದ ಜನರಿಗೆ ಸಾಂತ್ವನ ನೀಡುವ ಕಾರ್ಯದಲ್ಲಿ ತೊಡಗುವವರಿದ್ದರು . ನದೀ ತೀರದ ಜನರಲ್ಲಿ ತೊಂಭತ್ತು ಪ್ರತಿಶತ ಜನರು ಬಡವರು. ತಮ್ಮ ಗುಡಿಸಲು ಮನೆಗಳನ್ನು ಕಳೆದುಕೊಂಡು ಶಾಲೆಯಲ್ಲಿ ಆಶ್ರಯ ಪಡೆದಿದ್ದರು . ಜನಾನುರಾಗಿಯೂ ಆಡ್ಯರೂ ಆದ ವೆಂಕಪ್ಪ ಶೆಟ್ಟರು ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಸ್ವಂತ ಖರ್ಚಿನಲ್ಲಿ ಮಾಡಿದ್ದರು . ಮಂತ್ರಿ ಮಂಡಲದಲ್ಲಿ ಚರ್ಚೆ ನಡೆದು ಎರಡು ಕೋಟಿ ರೂಪಾಯಿ ಪರಿಹಾರ ಧನ ಬಿಡುಗಡೆ ಮಾಡಲಾಗಿದೆ ಎಂಬ ವಿಚಾರ ಜನರಲ್ಲಿ ಸ್ವಲ್ಪ ಸಮಾಧಾನ ತಂದಿತ್ತು .
ಆ ದಿನ ಭೇಟಿ ನೀಡಿದ ಶಾಸಕರಾದ ಸಂಕಪ್ಪ ಬ೦ಗೇರರು ಮನೆ ಕಳೆದುಕೊಂಡವರಿಗೆ ಸಾಂತ್ವನ ಹೇಳಿದರು . ಕಾರ್ಯದಕ್ಶತೆಗೆ ಹೆಸರಾದ ಬ೦ಗೇರರು ಜನರ ಕಷ್ಟಗಳಿಗೆ ಕೂಡಲೇ ಸ್ಪಂದಿಸುತ್ತಿದ್ದುದರಿಂದ ಎರಡನೇ ಬಾರಿಯೂ ಚುನಾವಣೆಯಲ್ಲಿ ಭರ್ಜರಿ ಅಂತರದ ಗೆಲುವು ಸಾಧಿಸಿದ್ದರು .
ಇಡೀ ದಿನ ತಮ್ಮ ಪಟಾಲಮ್ಮಿನೊಂದಿಗೆ ನಷ್ಟದ ಅಂದಾಜು ಮಾಡಿದ ಶಾಸಕರು ಜನರಿಗೆ ಭರವಸೆ ನೀಡಿ ತಮ್ಮ ಕಾರನ್ನೇರಿದರು.
ಭಾರೀ ನಷ್ಟ ಸಂಭವಿಸಿದ್ದರಿಂದ ತಮ್ಮ ಕ್ಷೇತ್ರಕ್ಕೆ ಪೂರ್ತಿ ಎರಡು ಕೋಟಿ ರೂಗಳು ಬೇಕೆಂದು ವಿವರಣೆ ಬರೆದ ಶಾಸಕರು ಮರುದಿನವೇ ಪತ್ರಿಕಾಗೋಷ್ಠಿಯಲ್ಲಿ ನಿರ್ಧಾರ ಪ್ರಕಟಿಸಿದರು . ಮರುದಿವಸ ನಿರೀಕ್ಷೆಯಂತೆ ಹಣವೂ ಬಂತು .
ಸೋಮವಾರ ಪರಿಹಾರ ವಿತರಣಾ ಕಾರ್ಯಕ್ರಮ .
ರವಿವಾರ ರಾತ್ರಿ ಎರಡು ಘಂಟೆಯ ಸಮಯ ....
ಶಾಸಕರ ಆಪ್ತ ಸಹಾಯಕ ಕೇಶವ ಸುವರ್ಣರ ಮೊಬೈಲ್ ಒಂದೇ ಸಮನೆ ಮೊಳಗಿದಾಗ ನಿದ್ದೆಗಣ್ಣಲ್ಲೂ ಫೋನ್ ಎತ್ತಿದಾಗ
ಆ ಕಡೆಯಿಂದ ಶಾಸಕರು " ಕೇಶವ ನಾಳೆ ಕೊಡುವ ಪರಿಹಾರದಲ್ಲಿ "ನಮ್ಮ " ಖಾತೆಗೆ ಬರಬೇಕಾದ್ದು ಬಂದಿದೆ ತಾನೆ ??"
ಕೇಶವ : ಹೌದು ಸಾರ್
ಸಂಜೆಯೇ ಎಲ್ಲ ವ್ಯವಸ್ಥೆ ಮಾಡಿ ಬಂದಿದ್ದೇನೆ .
ನೂರುಲ್ ದರ್ಗಾದ ಹಾಜಿಯವರ ಮನೆಗೆ ಬರ್ತದೆ .!!
***

Saturday, August 9, 2008

ಚಿಕನ್ ಗೂನ್ಯ ......

ಇಡೀ ದಿನ ಗೊಬ್ಬರ ಹೊತ್ತು ಕೆಳಗಿನ ತೋಟಕ್ಕೆ ಸಾಗಿಸಿ ಸಂಜೆ ಬಂದು ಕೈಕಾಲು ತೊಳೆಯುವಾಗ ಕಾಲಿನ ಗಂಟು ನೋಯಲು ಸುರು . ಗೊಬ್ಬರ ಹೊತ್ತು ಅದೂ ಕೆಳಗಿನ ತೋಟಕ್ಕೆ ಹಾಕಿದ್ದಲ್ಲವೇ ? ಹಾಗೆ ಸ್ವಲ್ಪ ನೋವು ಅಂತ ಉದಾಸೀನ ಮಾಡಿ ಬಂದು ಕುಳಿತು ಚಾ ಕುಡಿಯುತ್ತ " ವಿಜಯ ಕರ್ನಾಟಕದಲ್ಲಿ" ಬಾಂಬ್ ಸ್ಪೋಟ ಪ್ರಕರಣ ಇವತ್ತೇನಾಯಿತು? ಅಂತ ನೋಡುತ್ತಾ ಕುಳಿತೆ.
ರಾತ್ರಿ ಊಟ ಮಾಡಿ ಮಲಗುವಾಗ ಏಕೋ ಮೈ ಎಲ್ಲ ಬಿಸಿ ಏರಿ ಜ್ವರ ಬಂದು ಬಿಟ್ಟಿತು ಜೊತೆಗೆ ಅಸಾಧ್ಯ ಗಂಟು ನೋವು .ಮರುದಿನ ಬೆಳಗ್ಗೆ ಹಾಸಿಗೆ ಬಿಟ್ಟು ಮೇಲೆ ಏಳಲೂ ಆಗದಷ್ಟು ಜ್ವರ.
"ಅಯ್ಯೋ ಗ್ರಹಚಾರವೇ " ಅಂತ ನೋವನ್ನು ಅನುಭವಿಸುತ್ತಿದ್ದಾಗ ಕೆಳಗಿನ ಮನೆ ಪುಟ್ಟಣ್ಣ ಬಂದು ಬಿಟ್ಟರು .
" ಪುಟ್ಟಣ್ಣ ಎನಗೂ ಚಿಕನ್ ಗೂನ್ಯ ಹಿಡುದತ್ತು ಮಾರಾಯ " ಅನ್ನುವಾಗಲೇ ಪುಟ್ಟಣ್ಣ "ಅನು ಈಗ ಅಸ್ಪತ್ರೆಂದಲೇ ಬತ್ತಾ ಇಪ್ಪದು " ಹೇಳುತ್ತಾ ಕೆಲವು ಮಾತ್ರೆಗಳನ್ನು ನನಗೂ ಕೊಟ್ಟು ಉಪಕಾರ ಮಾಡಿದರು.
ಹೇಗೋ ಸಾವರಿಸಿಕೊಂಡು ಮಧ್ಯಾಹ್ನ ೩ ಗಂಟೆಗೆ ನಮ್ಮ ಸರಕಾರೀ ಆಸ್ಪತ್ರೆ ಬಳಿ ಬಂದರೆ ಮಾರುದ್ದದ ಕ್ಯೂ . ಎಲ್ಲರ ಮನೆಯಲ್ಲೂ ಇದೇ ಅವಸ್ಥೆ .ಮೊದಲೇ ಸರಕಾರಿ ಆಸ್ಪತ್ರೆ ಅಂದರೆ " ಸೇವೆ ಉಚಿತ ಸಾವು ಖಚಿತ " ಅಂತ ಗೊತ್ತಿದ್ದರೂ ಅಲ್ಲಿಗೆ ಹೋಗದೆ ಬೇರೆ ದಾರಿ ಇಲ್ಲ . ಆದಿತ್ಯವಾರ ಉಳಿದ ಮೂರು ಮಂದಿ ಖಾಸಗಿ ವೈದ್ಯರಿಗೂ ರಜೆ . ಹಾಗೆಂದು ರಜೆಯ ದಿವಸ ಜ್ವರ ಬರಬೇಡ ಅಂತ ಹೇಳಲಾಗುತ್ತದೆಯೇ ?ಅಂತೂ ನನ್ನ ಸರದಿ ಬಂದಾಗ ೫ ಗಂಟೆ .
ಮಾತ್ರೆಗಳನ್ನು ಪಡೆದು ರಿಕ್ಷಾ ಹತ್ತಿ ಮನೆಗೆ ಬಂದು ಕುಳಿತಾಗ "ಮದ್ದು ಬಿಡ್ಲೆ ಪಂಪು ಕೊಂಡು ಹೊಪೋ ಹೇಳಿ ಇತ್ತೆ ಬಂದೆ " ಎನ್ನುತ್ತಾ ಪುಟ್ಟಣ್ಣ ಒಳಗೆ ಬಂದರು.
"ಮದ್ದು ನೀರಿಂಗೆ ಹಾಕಿದ್ದಾ? " ಅಣ್ಣ ಕೇಳಿದ .
"ಅಪ್ಪು"
"ಹಾಂಗಾರೆ ಇನ್ನು ಒಂದು ವಾರಕ್ಕೆ ಅದರ ಬಿಟ್ಟಕ್ಕು ಹೇಳಿ ಆಶೆ ಬಿಡು " ಹೇಳಿದ ಅಣ್ಣ .
ನೋಡಿದರೆ ಮದ್ದು ಬಿಡುವ ಸಂಜೀವನಿಗೂ "ಚಿಕನ್ ಗೂನ್ಯ "!
ಒಟ್ಟಿನಲ್ಲಿ ಈ ಮಹಾಮಾರಿಯಿಂದಾಗಿ ಬೆಳೆ ಬೆಳೆಯಲಿಲ್ಲ , ತೋಟಕ್ಕೆ ಮದ್ದು ಬಿಡದೆ ಇದ್ದ ಫಸಲೂ ರೋಗಕ್ಕೆ ತುತ್ತಾಗಿ ಮರದ ಬುಡದಲ್ಲಿ ಬಿದ್ದದ್ದನ್ನು ನೋಡುವಾಗ ಮುಂದೆ ಏನು ? ತೋಚುವುದಿಲ್ಲ .
ಈಗಾಗಲೇ ಅಕ್ಕಿಗೆ ಕೆ.ಜಿ.ಗೆ ೧೪ ರೂಪಾಯಿ ಇದ್ದದ್ದು ೧೯ಕ್ಕೆ ಏರಿದೆ . ಉಳಿದೆಲ್ಲ ದಿನಸಿಗಳಿಗೆ ಕನಿಷ್ಠ ೨೦ ರಿಂದ ೨೫% ಬೆಲೆ ಏರಿಕೆಯಾಗಿದೆ .ದುಡಿಯಲು ಚೈತನ್ಯವಿಲ್ಲ ತಿನ್ನಲು ಅನ್ನವಿಲ್ಲ ಬಹುಶ ಪ್ರಳಯ ಅಂದರೆ ಇದೇ ಇರಬೇಕೇನೋ?
ಎಲ್ಲ ಕಡೆಯೂ ಒಂದಲ್ಲ ಒಂದು ಕಾರಣಕ್ಕೆ ಜನರು ಪ್ರಾಣ ಬಿಡುತ್ತಲೇ ಇದ್ದಾರೆ.
ಇದೇ ರೀತಿ ಮುಂದುವರಿದರೆ ಮುಂದೊಂದು ದಿನ "ಅನ್ನಕ್ಕಾಗಿ" ಹೋರಾಟ ನಡೆಯುವುದು ಖಂಡಿತ .
ಆ ದಿನ ಬಹಳ ದೂರವಿಲ್ಲ ಅಂತ ಮನಸ್ಸು ಸಾರಿ ಹೇಳುತ್ತಿದೆ .
ನಿಮಗೇನನಿಸುತ್ತದೆ ?

Friday, August 8, 2008

ಬನ್ನ ಬಡುವೀ ಬಾಳು....

" ಮಕರಾಕ್ಷ ಮಡಿದ ವಾರ್ತೆಯ ಕೇಳಿ ......" ಎಂದು ಸುಶ್ರಾವ್ಯವಾಗಿ ಕಡತೋಕರ
ಪದ್ಯಗಳು ತೇಲಿ ಬರುತ್ತಿದ್ದರೆ ತನ್ಮಯವಾಗಿ ರ೦ಗದ ಮೇಲೆ ಅಭಿನಯಿಸುತ್ತಿದ್ದ
ಪಕಳಕುಂಜರ ರಾವಣ ಇಂದು ಮರಣಶಯ್ಯೆಯಲ್ಲಿ ದಿನವೆಣಿಸುತ್ತಿದ್ದಾನೆ ಎಂದು ತಿಳಿದಾಗ
ಮನಸ್ಸಿಗೆ ಬಹಳ ಖೇದವಾಗುತ್ತದೆ. ಪಕಳಕುಂಜರ ಅಂತರಂಗದ ಮಾತನ್ನು ಉದಯವಾಣಿಯಲ್ಲಿ ಓದಿದಾಗ ಎಂಥವರಿಗೂ ಮನಕಲಕುತ್ತದೆ .

ಚಿಕ್ಕವನಿದ್ದಾಗಲೇ ಪಕಳಕುಂಜರ ರಾವಣ, ಮೈರಾವಣ , ರುದ್ರಭೀಮ ,ಅಜಮುಖಿ, ಶೂರ್ಪನಖಿ, ಕುಕ್ಕಿತ್ತಾಯ , ಶು೦ಭಾಸುರ ,ಹಿಡಿಂಬ ಮುಂತಾದ ಬಣ್ಣದ ವೇಷಗಳನ್ನು ಎವೆಯಿಕ್ಕದೆ ನೋಡುತ್ತಿದ್ದವರಲ್ಲಿ ನಾನೂ ಒಬ್ಬ. ಶಿಸ್ತುಧ್ಧವಾದ ಕುಣಿತ, ತೆರೆಪೊರಪ್ಪಾಟು, ಚುಟ್ಟಿ ಇಡುವ ಕ್ರಮಗಳಿಗೆ ಹೆಸರಾದ ಕೃಷ್ಣ ನಾಯ್ಕರು ಅತೀವ ಶ್ರಧ್ಧೆಯಿಂದ ಪಾತ್ರ ನಿರ್ವಹಣೆ ಮಾಡುತ್ತಿದ್ದರು.
ಅದುವರೆಗೆ ಬಣ್ಣದ ಕುಟ್ಯಪ್ಪು , ಬಣ್ಣದ ಮಾಲಿಂಗ, ಚಂದ್ರಗಿರಿ ಅಂಬು , ತ್ರಿವಿಕ್ರಮ ಶೆಣೈ ಮುಂತಾದ ದಿಗ್ಗಜರು ತಮ್ಮ ಬಣ್ಣದ ವೇಷದ ಭೀಕರತೆಗೆ ಹೆಸರಾದರೆ ಪಕಳಕುಂಜ ಕೃಷ್ಣ ನಾಯ್ಕರು ಬಣ್ಣದ ವೇಷಕ್ಕೆ "ಲಾಲಿತ್ಯವನ್ನು" ನೀಡಿ ರಂಗದಲ್ಲಿ ಮೆರೆಸಿದವರು. ಅವರ ಕತ್ತರಿ ಕುಣಿತ ನೋಡುವುದೇ ಕಣ್ಣಿಗೆ ಹಬ್ಬ.
ಪಕಳಕುಂಜರ ದುಶ್ಯಾಸನ ವಧೆಯ ದುಶ್ಯಾಸನ ವೇಷದ ಪ್ರವೇಶವನ್ನು ಕೆಳಗಿನ ಕೊಂಡಿಯಲ್ಲಿ ಕಾಣಬಹುದು. (ರುದ್ರ ಭೀಮನ ಪಾತ್ರದಲ್ಲಿ ಬಣ್ಣದ ಮಾಲಿಂಗ .)
http://www.youtube.com/watch?v=aDjpL_UslZk

ಕಾಲನ ಹೊಡೆತಕ್ಕೆ ಸಿಕ್ಕು ಜರ್ಜರಿತರಾಗಿ ಜೀವಂತ ದಂತಕತೆಯಾಗಿರುವ ಇವರಿಗೆ ಸಹಾಯಹಸ್ತ ನೀಡಬೇಕಾದ್ದು ಯಕ್ಷಪ್ರೀಮಿಗಳೆಲ್ಲರ ಕರ್ತವ್ಯ .



Friday, August 1, 2008

ಮೌಲ್ಯಮಾಪನ ......

ಇಂಜಿನಿಯರಿಂಗ್ ವಿದ್ಯಾರ್ಥಿಗಳ ಚತುರ್ಮಾನ ಮಾಸಿಕ ಪರೀಕ್ಷೆಯ ಮೌಲ್ಯಮಾಪನ ಮಾಡಲು ಗುಲ್ಬರ್ಗ ದ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಮೌಲ್ಯಮಾಪನ ಕೇಂದ್ರಕ್ಕೆ ಹೋದಾಗ ನಮ್ಮ ತಂಡದಲ್ಲಿ ಇದ್ದದ್ದು ೪ ಜನ. ನಾವು ಉತ್ತರ ಪತ್ರಿಕೆಯ ಪುಟಗಳನ್ನು ತಿರುಗಿಸುತ್ತಿದ್ದಂತೆ ಸಿಕ್ಕ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ಬರೆಯಲೇ ಬೇಡವೇ ? ಎಂಬ ಶಂಕೆಯೊಂದಿಗೆ ಬರೆಯುತ್ತಿರುವೆ.
ಉತ್ತರ ಪತ್ರಿಕೆಯ ಕೊನೆಯಲ್ಲಿ ವಿದ್ಯಾರ್ಥಿಗಳ ನಾನಾ ಬೇಡಿಕೆಗಳು ಇಂತಿವೆ ..
ತಾನು ಇಂಟರ್ನಲ್ ಮಾರ್ಕ್ಸ್ ೧೫ಕ್ಕಿ೦ತ ಕಡಿಮೆ ಹೊಂದಿದ್ದಲ್ಲಿ ಉತ್ತರ ಪತ್ರಿಕೆಯ ಕೊನೆಯಲ್ಲಿ ಸಿಗುವ ಸಾಮಾನ್ಯ ಸಮೀಕರಣ
X+12=50
(ವಿದ್ಯಾರ್ಥಿಯು ಉತ್ತಿರ್ಣನಾಗಬೇಕಾದರೆ ಕನಿಷ್ಠ ೧೨೫ಕ್ಕೆ ೫೦ ಅಂಕಗಳು ಪಡೆಯಲೇಬೇಕು . ಮೇಲಿನ ಸಮೀಕರಣದ ಅರ್ಥ ನೀವು ಮೌಲ್ಯ ಮಾಪಕರಾಗಿದ್ದರೆ X ನೀವು ನೀಡಬೇಕೆಂದು ವಿದ್ಯಾರ್ಥಿ ಅಪೇಕ್ಷಿಸುವ ಅಂಕ !! )

ಇನ್ನು ಕೆಲವು ವಿವರಣೆಗಳು ಹೀಗಿವೆ .

dear sir/Madam
this is my 4th attempt. kindly pass me in this subject. if i loose this subject i am going to detain in this year. so please pass me. please............

ಇನ್ನು ಕೆಲವು ಮನ ಕಲಕುವಂಥ ವಾಕ್ಯಗಳು ..

dear sir
as my father expired last month i couldnot able to concentrate to this subject kindly pass me please.
ಈ ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ನೋಡಿದಾಗ ಯಾವರೀತಿ ಅಂಕ ನೀಡಿದರೂ ೧೦೦ಕ್ಕೆ ಕೇವಲ ೩೩ ಬರುತ್ತಿತ್ತು . ಕನಿಷ್ಠ ೩೫ ಸಿಗಲೇ ಬೇಕು . ಈಗ "ಏನ ಮಾಡುವುದಿನ್ನು ಈ ಹುಡುಗ ಬರೆದಿಹನು...... " ಎನ್ನುವ ಸರದಿ ನನ್ನದಾಗಿತ್ತು!! ತಂದೆಯ ಅವಸಾನದ ನೋವನ್ನು ನಾನು ಬಲ್ಲೆ. ಹಾಗೆಂದು ೩೩ಕ್ಕಿನ್ತ ಹೆಚ್ಚಿನ ಅಂಕ ನೀಡಲು ಉತ್ತರ ಪತ್ರಿಕೆಯಲ್ಲಿ ಅವಕಾಶವಿಲ್ಲ ! ವಿಚಿತ್ರ ಸಂಕಷ್ಟ ಇದಲ್ಲವೇ ?

ಇನ್ನೊಂದು ವಿದ್ಯಾರ್ಥಿಯ ವಾಕ್ಯ ನಿಜಕ್ಕೂ ಮೊಜೆನಿಸುತ್ತದೆ ನೋಡಿ

dear sir
please think me as your own daughter and pass me. i struggled a lot but i couldn't recall the concepts. please help me ......
ಅರರೆ ನನಗಿನ್ನೂ ಮದುವೆನೇ ಆಗಿಲ್ಲ ! ಇನ್ನಿವಳು ಹೇಗೆ ಮಗಳಾದಾಳು!

ಇನ್ನು ಅನೇಕ ಮೋಜಿನ ವಾಕ್ಯಗಳು ಮೌಲ್ಯ ಮಾಪನ ಮಾಡುವಾಗ ಬರುವ ಏಕತಾನತೆಯನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗುತ್ತದೆ .
ಈ ವಿದ್ಯಾರ್ಥಿಗಳು ಬರೆದ ವಾಕ್ಯಗಳನ್ನು ನೋಡಿದರೆ ಒಂದು ಮಾತಂತೂ ಸ್ಪಷ್ಟವಾಗುವುದೇನೆ೦ದರೆ ಪರೀಕ್ಷೆ ಎದುರಿಸುವ ಮಾನಸಿಕ ಸಿದ್ದತೆಯಲ್ಲಿ ಇವರೆಲ್ಲ ಸೋತಿದ್ದಾರೆ ! ಇದಕ್ಕೆ ಕಾರಣ ಹಲವಿರಬಹುದು .
ಇಂತ ಹತಾಶೆಯ ವಾಕ್ಯವನ್ನು ಬರೆಯದಂತೆ ಮಾಡುವುದು ಹೇಗೆ ? ನಿಜಕ್ಕೂ ಉಪನ್ಯಾಸಕ ಸಮುದಾಯ ಈ ಬಗ್ಗೆ ಗಂಭೀರ ಗಮನ ಹರಿಸಲೇ ಬೇಕು ... ಈ ದಾರಿಯ ಹುಡುಕಾಟದಲ್ಲಿರುವೆ..... ನಿಮಗೆ ಗೊತ್ತಿದ್ದರೆ ತಿಳಿಸುವಿರಾ?

Thursday, July 3, 2008

ಯಕ್ಷ ದಿಗ್ಗಜರ ಸಮ್ಮಿಲನ ...

ಬಲಿಪ ನಾರಾಯಣ ಭಾಗವತರು , ದಿವಾಣ ಭೀಮ ಭಟ್ ಹಾಗೂ ನೆಡ್ಲೆ ನರಸಿಂಹ ಭಟ್ಟರದ್ದು ಒಂದು ಅಪೂರ್ವ ಸಮ್ಮಿಲನ .
http://www.youtube.com/watch?v=z9frEiHBvzk
ದಿವಾಣ ಭೀಮಜ್ಜ ವಿಷಮ ಪೆಟ್ಟು ಬಾರಿಸುವುದರಲ್ಲಿ ಎತ್ತಿದ ಕೈ ಆಗಿದ್ದರಂತೆ . ಚೆಂಡೆ ಮದ್ದಲೆಗಳಲ್ಲದೆ ಭಾಗವತಿಕೆಯನ್ನು ಕೂಡ ಅಮೂಲಾಗ್ರವಾಗಿ ತಿಳಿದಿದ್ದ ಭೀಮಜ್ಜ ವೇಷಧಾರಿಗಳನ್ನು ತಿದ್ದುವುದರಲ್ಲಿ ಪರಿಣತರಾಗಿದ್ದರಂತೆ . ಕೋಪ ಮೂಗಿನ ಮೇಲೆ ಇದ್ದ ಇವರಿಗೆ ಅಷ್ಟೆ ಮುಗ್ಧತೆಯೂ ಮೈಗೂಡಿತ್ತು ಎಂದು ಅಪ್ಪ ಆಗಾಗ ಮನೆಯಲ್ಲಿ ಹೇಳುತ್ತಿದ್ದುದುಂಟು .
ಇದನ್ನು ನೋಡುವಾಗ ಎಂಥ ಕಲಾವಿದರು ಕಾಲಗರ್ಭಕ್ಕೆ ಸಂದು ಹೋದರು ಎಂಬುದು ನಮಗರಿವಾಗುತ್ತದೆ .
ಮೇಲಿನ ಕೊಂಡಿಯಲ್ಲಿ ಈ ಅಪರೂಪದ ಕಲಾವಿದರಾದ ದಿವಾಣ ಭೀಮ ಭಟ್ ಹಾಗೂ ನೆಡ್ಲೆ ನರಸಿಂಹ ಭಟ್ ಬಲಿಪಜ್ಜರಿಗೆ ಸಾಥ್ ನೀಡಿದ್ದರು ನೋಡಿ ಆನಂದಿಸಿ...

Monday, June 30, 2008

ಚತುರ್ವೇದ ಸ೦ಹಿತಾ ಯಾಗ ...


ತುಮಕೂರಿನ ಬಳಿಯ ಗುಬ್ಬಿ ಎ೦ಬ ಊರು ವೀರಣ್ಣ ನವರಂಥ ಮಹಾನ್ ಕಲಾ ತಪಸ್ವಿಯನ್ನು ನಾಡಿಗೆ ಕೊಟ್ಟ ಸ್ಥಳ . ಇಲ್ಲಿಗೆ ಸಮೀಪದಲ್ಲಿ ಇಕ ಹಿಂದೆ ಸ್ಥಾಪಿತವಾದ "ಚಿದಂಬರಾಶ್ರಮ" ಪ್ರಕೃತಿಯ ಸುಂದರ ಮಡಿಲಲ್ಲಿ ಕಂಗೊಳಿಸುವ ಪುಟ್ಟ ಆಶ್ರಮ . ವಿದ್ಯಾಕಾಂಕ್ಷಿಗಳಾಗಿ ಬಂದ ಮಕ್ಕಳಿಗೆ ಸನಾತನೀಯವಾದ ಉತ್ತಮ ಸಂಸ್ಕಾರಯುತ ಶಿಕ್ಷಣವನ್ನು ಉಚಿತವಾಗಿ ನೀಡುತ್ತಾ ಬಂದಿದೆ. ಮೊನ್ನೆ ದೂರದರ್ಶನದಲ್ಲಿ ಈ ಆಶ್ರಮದ ಬಗ್ಗೆ ಒಂದು ಕಾರ್ಯಕ್ರಮ ಬಂದಿತ್ತು. ಇಲ್ಲಿ ಚತುರ್ವೇದ ಸಂಹಿತಾ ಯಾಗವು ನಡೆಯಲಿದ್ದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಇತ್ಯಾದಿ ವಿವರಣೆ ಸಿಕ್ಕಿದ ನನಗೆ ಸಹಜವಾಗಿ ಆ ಕಡೆ ಆಕರ್ಷಣೆ ಉಂಟಾದದ್ದು ನನ್ನ ಪ್ರೀತಿಯ "ಯಕ್ಷಗಾನ ತಾಳಮದ್ದಲೆ " ಬಲಿಪ ಪ್ರಸಾದ ಭಾಗವತರ ತಂಡದಿಂದ ನಡೆಸಿಕೊಡಲ್ಪಡುತ್ತದೆ ಎಂಬ ವಿಚಾರ ತಿಳಿದಾಗ !
ಜೂನ್ 28ನೆ ಶನಿವಾರ ಹಾಗೂ ೨೯ನೆ ರವಿವಾರ ಬಲಿಪ ಬಳಗದ ಯಕ್ಷಗಾನ ತಾಳಮದ್ದಲೆ ನೋಡಲು ಹೋದ ನನಗೆ ಆಶ್ರಮವನ್ನು ಪ್ರವೇಶಿಸುತ್ತಿದ್ದಂತೆ ಪೂಜ್ಯ ಭಾವನೆ ಉಂಟಾಯಿತು . ಯಾಗ ಶಾಲೆನಿರ್ಮಾಣ ಅದ್ಭುತವಾಗಿತ್ತು .





ನಾಲ್ಕು ವೇದಗಳ ಮಂತ್ರಗಳ ಸಹಿತ ನಡೆಯುತ್ತಿದ್ದ ಈ ಯಾಗದಲ್ಲಿ ಬಹಳ ಅಪೂರ್ವವಾದ ಸಾಮಗಾನ ಕೇಳಲು ಕರ್ಣಾನಂದವಾಗಿತ್ತು. ಬಳಿಕ ನಡೆದ ಅಷ್ಟಾವಧಾನ ಸೇವೆಯಲ್ಲಿ ಬಲಿಪ ಪ್ರಸಾದ ರ ಸ್ತುತಿಪದವಂತೂ ಬಲು ಸುಂದರವಾಗಿತ್ತು .
ಶೂರ್ಪನಖಾ ಮಾನಭಂಗ ಹಾಗೂ ಕೃಷ್ಣ ಸಂಧಾನ ತಳಮದ್ದಾಳೆ ೨ ದಿನಗಳಂದು ಕ್ರಮವಾಗಿ ನಡೆದವು . ಯಾಗದ ಪೂರ್ಣಾಹುತಿ ಇದೆ ಬರುವ ಜುಲೈ ೨ ರಂದು ನಡೆಯಲಿದ್ದು ಆಸಕ್ತರು ಭಾಗವಹಿಸಬಹುದು .
ಚಿದಂಬರಾಶ್ರಮದ ಬಗ್ಗೆ ತಿಳಿಯಲು http://www.chidambaraashrama.org/ ತಾಣವನ್ನು ನೋಡಿ .

Friday, June 27, 2008

ದಿವಾಣ ಶಿವಶಂಕರ ಭಟ್

ಧರ್ಮಸ್ಥಳ ಮೇಳದ ಕಲಾವಿದ ಶ್ರೀ ದಿವಾಣ ಶಿವಶಂಕರ ಭಟ್ ಈ ಸಲ ಮೇಳ ಬಿಡುವ ನಿರ್ಧಾರ ಮಾಡಿದ್ದು ಯಕ್ಷಗಾನ ಪ್ರಿಯರಿಗೊಂದು ಬೇಸರದ ವಿಚಾರವೇ . ಎಲ್ಲ ರೀತಿಯ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ ಇವರ ಅನುಪಸ್ಥಿತಿ ಯಸ್ಕ ಪ್ರಿಯರಿಗೆ ಮುಂದಿನ ತಿರುಗಾಟದಲ್ಲಿ ಧರ್ಮಸ್ಥಳ ಮೇಳದ ಆಟದಲ್ಲಿ ಅನುಭವಕ್ಕೆ ಬರಲಿದೆ .
ಅವರ ಒಂದು ಪ್ರವೇಶ ಇಲ್ಲಿ ನೋಡಬಹುದು .
http://www.youtube.com/watch?v=eHaIb0C60aQ

Friday, June 20, 2008

ಶಿಶು ಗೀತೆಗಳು ...

ಶಿಶು ಗೀತೆಗಳನ್ನು ರಚಿಸುವ ಕವಿಗಳಲ್ಲಿ ಗೋಪಾಲಕೃಷ್ಣ ಶಗ್ರಿತ್ತಾಯರು ಒಬ್ಬರು .
ಗೋಪಾಲಕೃಷ್ಣ ಶಗ್ರಿತ್ತಾಯರು ಹಲವಾರು ಶಿಶು ಗೀತೆಗಳನ್ನು ರಚಿಸಿ ಮಕ್ಕಳಿಗೆ ಹೇಳಿ ಕೊಟ್ಟವರು. ಅಧ್ಯಾಪಕನಾಗಿ ಹಲವು ವರುಷಗಳ ಅನುಭವದಿಂದ ರಚಿಸಿದ ಇವರ ಪದ್ಯಗಳು ಪ್ರಾಸಬದ್ಧವಾಗಿ ಮತ್ತು ಅರ್ಥಪೂರ್ಣವಾಗಿದ್ದು ಮಕ್ಕಳಿಗೆ ಹೇಳಲು ತುಂಬಾ ಸರಳವಾಗಿದೆ . ಅವರು ಮಕ್ಕಳ ಮೇಳವನ್ನು ಸ್ಥಾಪಿಸಿ ಹಲವು ಮಂದಿ ಮಕ್ಕಳಿಗೆ ಯಕ್ಷಗಾನ ಕಲಿಸಿ ಪ್ರದರ್ಶನಗಳನ್ನೂ ಕೊಡಿಸಿರುತ್ತಾರೆ. ಸಾಮಾನ್ಯವಾಗಿ ಎಲ್ಲ ಪ್ರಸಂಗಗಳಲ್ಲೂ ಬರುವ ಸನ್ನಿವೇಶವನ್ನು ಶಿಶು ಗೀತೆಯೊಂದರಲ್ಲಿ ಅವರು ಬರೆದುದು ಅನನ್ಯವಾಗಿದೆ .
ಈ ಪದ್ಯ ಶಗ್ರಿತ್ತಾಯರ "ಕಂದನ ಕವನಗಳು" ಪುಸ್ತಕದಲ್ಲಿ ಪ್ರಕಟವಾಗಿದೆ . ನಿಮಗೋಸ್ಕರ ಅದರ ಪೂರ್ಣ ಪಾಠ ಇಲ್ಲಿದೆ . ಓದಿ ಆನ೦ದಿಸಿ.......

ಮಕ್ಕಳ ಮೇಳ
ಮಕ್ಕಳ ಮೇಳ ಮದ್ದಲೆ ತಾಳ
ಚೆಂಡೆಯ ಬಡಿತ ಮಕ್ಕಳ ಕುಣಿತ
ಕೇಳಿಯ ಹೊಡೆದು ಜನರನು ಕರೆದು
ಬಣ್ಣದ ಮನೆಯಲಿ ಗಣಪತಿ ಪೂಜೆ
ಬಾಲಗೊಪಾಲರ ಸುಂದರ ವೇಷ
ಮೇಳದ ದೇವರ ಜೊತೆಗೆ ಪ್ರವೇಶ
ಸ್ಥ್ರೀವೇಶದ ಜತೆ ನಗೆಯವ ಬಂದ
ಥೈ ಧಿನ ಥಕಧಿನ ಕುಣಿಯುವ ಚಂದ
ಇಂದ್ರನ ಓಲಗ ದೂತನ ಲಾಗ
ಬಣ್ಣದ ವೇಷ ಬಲು ಸಂತೋಷ
ತಟ್ಟೆ ಕಿರೀಟದ ಆರ್ಭಟೆ ಕೇಳಿ
ರಕ್ಕಸ ರಾಜನು ಬರುವನು ತಾಳಿ
ದೀವಟಿ ಕೈಯಲಿ ಹಿಡಿಯುತ ಬಂದ
ರಾಳದ ಹುಡಿಯನು ಹಾರಿಸಿ ನಿಂದ
ಮುಗಿಲಿನ ತನಕ ಬೆಂಕಿಯ ಜ್ವಾಲೆ
ಸ್ವರ್ಗಕೆ ಧಾಳಿ ಸೇನೆಯು ಧೂಳಿ
ರಕ್ಕಸರಾಜಗೆ ಪರಾಕು ಹೇಳಿ
ಇಂದ್ರನ ಮೊರೆಯನು ಕೇಳುತ ಬಂದ
ಹಾಲುಗಡಲಿನ ಬಾಲ ಮುಕುಂದ
ಇಂದ್ರಗೆ ಅಭಯ ಇನ್ನಿಲ್ಲ ಭಯ
ದೈತ್ಯನ ತರಿದ ಪೌರುಷ ಮೆರೆದ
ಖಳ ಸಂಹಾರಿ ದಿವಿಜೋಧ್ಧಾರಿ
ಬೆಳಗಿನ ಜಾವ ಮೋಹನ ರಾಗ
ಮಂಗಳದಾರತಿ ಬೆಳಗುವ ಹೊತ್ತು
ಚೌಕಿಯ ಒಳಗಡೆ ಎಲ್ಲರು ನಿತ್ತು.

Friday, June 6, 2008

ಮರೆಯಾಗುತ್ತಿರುವ ಪೂರ್ವರಂಗ ...

ಮೊನ್ನೆ ಬೆಂಗಳೂರಿನ ಎ.ಡಿ.ಎ. ರಂಗಮಂದಿರದಲ್ಲಿ ಜಾಂಬವತಿ ಕಲ್ಯಾಣ ಪ್ರಸಂಗದ ಆರಂಭಕ್ಕೆ ಪರಂಪರೆಯ ಕೃಷ್ಣನ ಒಡ್ಡೋಲಗವನ್ನು ಹೊಳ್ಳರು ನಡೆಸಿಕೊಟ್ಟಾಗ ಸಂಭ್ರಮದಿಂದ ನೋಡಿದವರಲ್ಲಿ ನಾನೂ ಒಬ್ಬ .
ಯಾಕೆ ಇತ್ತೀಚೆಗೆ ಇಂಥ ಉತ್ತಮ ಸಂಪ್ರದಾಯಗಳು ಯಕ್ಷಗಾನದಿಂದ ಮರೆಯಾಗುತ್ತಿವೆ? ತಲೆ ಕೆರೆದುಕೊಂಡು ಬಲಿಪಜ್ಜರಿಗೆ ಪೋನಾಯಿಸಿದಾಗ ಅವರು ಹೇಳಿದ್ದು ಕೇಳಿ ನಿಜಕ್ಕೂ ನಾವೆಂಥಾ ವೈಭವವನ್ನು ಕಳೆದು ಕೊಳ್ಳುತ್ತ ಬರುತ್ತಿದ್ದೇವೆ ಎಂಬುದು ಅರ್ಥವಾಯಿತು.
ಯಕ್ಹಗಾನದಲ್ಲಿ ಪೂರ್ವರಂಗವೆಂಬುದು ಮೂಲ ಪಾಠ . ಅದನ್ನು ಚೆನ್ನಾಗಿ ಬಲ್ಲವನಿಗೆ ಯಾವುದೇ ಪ್ರಸಂಗವನ್ನೂ ನಿರರ್ಗಳವಾಗಿ ಆಡಿ ತೋರಿಸುವ ಸಾಮರ್ಥ್ಯ ಬರುತ್ತದೆ . ಸ್ತುತಿ ಪದ್ಯಗಳು , ಕೋಡಂಗಿ, ಬಾಲಗೊಪಾಲ ,ಷಣ್ಮುಖಸುಬ್ರಾಯ , ಅರ್ಧ ನಾರಿ, ಮುಖ್ಯ ಸ್ತ್ರೀವೇಶ, ಹಾಸ್ಯ , ಬಣ್ಣದ ವೇಷ , ರಾಮನ ಒಡ್ಡೋಲಗ , ಕೃಷ್ಣನ ಒಡ್ಡೋಲಗ , ಪಾಂಡವರ ಒಡ್ಡೋಲಗ, ಹೊಗಳಿಕೆ ಪ್ರಸಂಗ ಪೀಠಿಕೆ , ಮಂಗಳ ಪದಗಳು , ಸಭಾಲಕ್ಷಣ ಮುಂತಾದ ಎಲ್ಲ ವಿಚಾರಗಳ ಬಗ್ಗೆ ಪೂರ್ಣ ಮಾಹಿತಿ ಇದೆ .
ಬರ ಬರುತ್ತಾ ಸಮಯಾಭಾವವೋ,ಅವುಗಳನ್ನು ಕಲಿಯುವುದು ಯಾಕೆ ಎಂಬ ತಿರಸ್ಕಾರವೋ , ಅಂತೂ ಈಗ ನಾವು ನೋಡುವ ಪೂರ್ವ ರಂಗವು ನಿಜವಾಗಿ ಇರುವ ಪೂರ್ವ ರಂಗದ ಶೇ .೧೦ ಮಾತ್ರ .
ಇನ್ನು ಕಾಲ ಮಿತಿ ಆಡುವ ಮೇಳಗಳು ಪೂರ್ವರಂಗವನ್ನು ಪೂರ್ಣ ಕಡೆಗಣಿಸಿವೆ ಎಂದರೂ ತಪ್ಪಲ್ಲ . ಕೆಲವೊಮ್ಮೆ ಪ್ರಸಿದ್ದ ಭಾಗವರತರೂ ಸಣ್ಣ ಸಣ್ಣ ವಿಚಾರಗಳನ್ನ ತಪ್ಪು ಮಾಡುವಾಗ ನೋಡುಗರಿಗೆ ಕಿರಿ ಕಿರಿಯಾಗುತ್ತದೆ.
ಪೂರ್ವರಂಗದ ಬಗ್ಗೆ ಹಲವು ಕಮ್ಮಟಗಳೂ, ವಿಚಾರ ಸಂಕಿರಣಗಳೂ ನಡೆದರೂ ಏನೂ ಪ್ರಯೋಜನ ಮಾತ್ರ ಆಗಲಿಲ್ಲ .
ತೆಂಕು ತಿಟ್ಟು ಹಿತರಕ್ಷಣಾ ವೇದಿಕೆ ಸುಳ್ಯ ದವರು ಬಿಡುಗಡೆ ಮಾಡಿದ ಪೂರ್ವ ರಂಗ ದ್ವನಿ ಸುರುಳಿಯಲ್ಲಿ ಪೂರ್ವ ರಂಗದ ಹಲವು ಅಪರೂಪದ ಪದಗಳು ಕೇಳಬಹುದು.
ಸದ್ಯ ತೆಂಕು ತಿಟ್ಟಿನಲ್ಲಿ ಪೂರ್ವರಂಗದ ಕ್ರಮಗಳು ಸರಿಯಾಗಿ ಗೊತ್ತಿರುವ ಏಕೈಕ ಭಾಗವತರೆಂದರೆ ಬಲಿಪ ನಾರಾಯಣ ಭಾಗವತರು ಮಾತ್ರ . ಉಳಿದವರೆಲ್ಲ ಅಲ್ಪ ಸ್ವಲ್ಪ ಸಮಯ ಸಿಕ್ಕಾಗ ಅವರಲ್ಲಿ ಹೋಗಿ ಕಲಿತರೆ ಕಲಾಭಿಮಾನಿಗಳಿಗೆ ಅದನ್ನು ಆಸ್ವಾದಿಸುವ ಅವಕಾಶ ಸಿಗಬಹುದೇನೋ?
ಏನಿದ್ದರೂ ನಾವು ಸಮೃಧ್ಧ ಪರಂಪರೆಯ ವಿಶಿಷ್ಟ ಭಾಗವನ್ನು ಕಳೆದು ಕೊಳ್ಳುತ್ತಿರುವುದಂತೂ ಸತ್ಯ .
ಇದನ್ನು ಉಳಿಸುವಲ್ಲಿ ಏನು ಮಾಡಬಹುದು ? ನಿಮಗೇನನಿಸುತ್ತದೆ ?

Thursday, June 5, 2008

ವಿಷಕ್ರಿಮಿ ನ್ಯಾಯ ......

ಹಂಸ ಕ್ಷೀರ ನ್ಯಾಯ , ಬೀಜ ವೃಕ್ಷ ನ್ಯಾಯ ಮುಂತಾದವುಗಳ ಬಗ್ಗೆ ಅಗಾಗ ಕೇಳುತ್ತ ಇರುತ್ತೇವೆ . ಹಾಲಿಗೆ ನೀರನ್ನು ಬೆರೆಸಿ ಹಂಸಕ್ಕೆ ಕೊಟ್ಟರೆ ಹಾಲನ್ನು ಮಾತ್ರ ಕುಡಿದು ನೀರನ್ನು ಬಿಡುತ್ತದೆ ಎಂಬುದಾಗಿ ಹಿರಿಯರು ಹೇಳುವುದನ್ನು ಕೇಳಿದ್ದೇನೆ ( ಖುದ್ದಾಗಿ ನಾನು ನೋಡಿಲ್ಲ !) . ಇದರ ಮರ್ಮವೇನೆಂದರೆ "ಯಾವುದೇ ವಿಚಾರದಲ್ಲಿ ಒಳ್ಳೆಯದನ್ನು ಮಾತ್ರ ಸ್ವೀಕರಿಸಿ " ಎಂದು.
ಹಾಗೆಯೇ ಬೀಜ ವೃಕ್ಷ ನ್ಯಾಯದ ಪ್ರಕಾರ " ಬೀಜ ಮೊದಲೋ ? ವೃಕ್ಷ ಮೊದಲೋ ? ಇನ್ನೂ ನಿರ್ಧಾರವಾಗಿಲ್ಲ !!


ಈಗ ನಾನಿಲ್ಲಿ ಹೇಳಹೊರಟದ್ದು ಇನ್ನೊ೦ದು ಸ್ವಾರಸ್ಯಕರ ನ್ಯಾಯದ ಬಗ್ಗೆ. ಅದೇ ವಿಷಕ್ರಿಮಿ ನ್ಯಾಯ . ವೆಂಕಣ್ಣಯ್ಯನೆಂಬ ಒಬ್ಬಾತ ದೇಶ ಸಂಚಾರಕ್ಕೆ ಹೊರಟಿರುತ್ತಾನೆ . ಹೀಗೇ ಹಲವು ಗ್ರಾಮಗಳನ್ನು ಕಳೆದು ಮುಂದುವರಿಯುವ ವೇಳೆ ಒಂದು ಪುಟ್ಟ ಗ್ರಾಮಕ್ಕೆ ಬರುವಾಗ ಕತ್ತಲೆಯಾಗತೊಡಗಿತು . ಆಗ ಆ ಗ್ರಾಮದಲ್ಲಿ ಉಳಕೊಳ್ಳಲು ಏನಾದರೂ ಆಗಬೇಕಲ್ಲ ಎಂದು ಯೋಚಿಸಿ ಎದುರಿಗೆ ಸಿಕ್ಕ ಗ್ರಾಮಸ್ಥನೊಬ್ಬನನ್ನು ಕುರಿತು ವಿಚಾರಿಸುತ್ತಾನೆ .
ವೆ೦ : " ಅಯ್ಯಾ ಈ ಊರಿನಲ್ಲಿ ದೊಡ್ಡವರು ಯಾರಿದ್ದಾರೆ ?"
ಗ್ರಾಮಸ್ಥ :(ಏನೋ ಯೋಚಿಸುತ್ತಾ) " ತಾಳೆ ಮರಕ್ಕಿಂತ ದೊಡ್ಡವರು ಯಾರೂ ಇಲ್ಲ ".
ವೆ೦: "ಹೋಗಲಿ ಯಾರು ದಾನಿಗಳಿದ್ದಾರೆ ?"
ಗ್ರಾ.: "ಬಾಯಿ ಮಾತಿನಲ್ಲಿ ಎಲ್ಲರೂ ದಾನಿಗಳೇ "
ವೆ೦: ಹೋಗಲಿ ಯಾರು ದಕ್ಷರಿದ್ದಾರೆ ?"
ಗ್ರಾ.: "ಇನ್ನೊಬ್ಬರ ಸಂಪತ್ತನ್ನು ಅಪಹರಿಸುವುದರಲ್ಲಿ ಎಲ್ಲರೂ ದಕ್ಷರೆ "
ಇಷ್ಟು ಹೊತ್ತಿಗೆ ತಲೆಬಿಸಿಯಾಗಿ ವೆಂಕಣ್ಣಯ್ಯಕೇಳುತ್ತಾನೆ " ಅಯ್ಯಾ ಇಲ್ಲಿ ನೀವು ಹೇಗಪ್ಪಾ ಬದುಕುತ್ತೀರಿ ??"
ಗ್ರಾ: "ವಿಷ ಕ್ರಿಮಿ ನ್ಯಾಯದಂತೆ "
ವೆ೦: ಅದೇನು ವಿಷಕ್ರಿಮಿ ನ್ಯಾಯ ಅಂದರೆ !!??"
ಗ್ರಾ:" ಅಯ್ಯಾ ಉಪ್ಪಿನಕಾಯಿ ಕಣ್ಣಿಗೆ ಬಿದ್ದರೆ ಏನಾಗುತ್ತದೆ ಹೇಳು ?"
ವೆ೦: " ಕಣ್ಣು ಉರಿಯುತ್ತದೆ "
ಗ್ರಾ: " ಆದರೆ ಉಪ್ಪಿನಕಾಯಿಯಲ್ಲಿಯೇ ಹುಟ್ಟಿದ ಹುಳಕ್ಕೆ ಕಣ್ಣು ಉರಿಯುತ್ತದೆಯೇ ?? "
ವೆ೦: "ಇಲ್ಲ !!!!"
ಹಾಗೆಯೇ ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದ ನನಗೆ ಇದು ಅಭ್ಯಾಸವಾಗಿ ಹೋಗಿದೆ . ನಿನಗೆ ಮಾತ್ರ ಇದು ಹೊಸತು ಅಷ್ಟೆ !!
ಅಂತ ನಿರಾಳವಾಗಿ ಹೇಳಿದ .

ಈಗಿನ ಹೆಚ್ಚಿನ ಎಲ್ಲ ರಾಜಕಾರಣಿಗಳೂ "ವಿಷಕ್ರಿಮಿ ನ್ಯಾಯದ " ಹಾಗೆಯೇ ನಡೆಯುತ್ತಿರುವುದರಿಂದ ಹೆಚ್ಚಿನ ಪ್ರಗತಿಯಾದೀತು ಎಂಬ ಭ್ರಮೆ ಮಾತ್ರ ಸಾಮಾನ್ಯ ನಾಗರೀಕರಾದ ನಮಗೆ ಬೇಡ ಅಂತ ನನಗನಿಸುತ್ತದೆ.
ನೀವೇನಂತೀರಿ?

Wednesday, June 4, 2008

ಯುದ್ದ ಕಾಲೇ ಶಸ್ತ್ರಾಭ್ಯಾಸ ......!

ಮತ್ತೆ ಬಂದಿದೆ ಸೆಮಿಸ್ಟರ್ ಪರೀಕ್ಷೆಗಳು . ಎಲ್ಲ ತಾಂತ್ರಿಕ ವಿಧ್ಯಾರ್ಥಿಗಳಿಗೂ ಬಿಸಿ ಏರಲು ಸುರು ಆಗಿದೆ !
ಸೆಮಿಸ್ಟರ್ ಆದಿಯಲ್ಲಿ ವಿವಿಧ ಕಂಪೆನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ತರಾತುರಿಯಲ್ಲಿ ಪುಸ್ತಕ ಹಿಡಿಯಲೂ ಸಮಯವಿಲ್ಲ ; ಸೆಮಿಸ್ಟರ್ ಮಧ್ಯದಲ್ಲಿ ಕೆಲಸ ಸಿಕ್ಕಿದ ಸಂತೋಷಾಚರಣೆಯಲ್ಲಿ ತರಗತಿಗೆ ಬರಲು ಹೇಗೆ ಸಾಧ್ಯ ? ಒಟ್ಟಿನಲ್ಲಿ ಕೊನೆಯ ಮೂರು ನಾಲ್ಕು ವಾರ ತರಗತಿಗೆ ಮುಖ ತೋರಿಸಿ ಈಗ ಪುಸ್ತಕ ಹಿಡಿದಾಗ "ಏನೋ ಹೊಸತನ್ನು " ನೋಡಿದ ಅನುಭವ ! ಒಂದೂ ತಲೆ ಬುಡ ಗೊತ್ತಾಗದು !

ಇಂಜಿನಿಯರಿಂಗ್ ವಿಷಯಗಳೆಲ್ಲ ಪರಸ್ಪರ ಪೂರಕವಾಗಿರುವಂಥದ್ದು (structured) ; ಒಂದನ್ನು ಅರ್ಥೈಸದೆ ಇನ್ನೊಂದನ್ನು ಕಲಿಯಲು ಸಾಧ್ಯವಿಲ್ಲ . ಒಂದು ರೀತಿಯಲ್ಲಿ ಏಣಿಯಿದ್ದ೦ತೆ.ಎಲ್ಲ ಮೆಟ್ಟಿಲುಗಳನ್ನು ಮೆಟ್ಟಲೇಬೇಕು ಇಲ್ಲದಿದ್ದರೆ ಮೇಲೇರಲು ಆಗದು .

ಇನ್ನು ಕೇವಲ ಬೆರಳೆಣಿಕೆಯ ದಿನಗಳು ಉಳಿದಿವೆ . ಏನು ಮಾಡೋದ್ ಮಗಾ "ಯುದ್ದ ಕಾಲೇ ಶಸ್ತ್ರಾಭ್ಯಾಸ" ಮಾಡಲೇ ಬೇಕು . ಎಲ್ಲಿ ಗೈಡುಗಳು, as per revised V.T.U.book ಗಳು , ಸುಲಭ ದಾರಿಯನ್ನು ನೋಡಲೇ ಬೇಕು .
ಪರೀಕ್ಷೆಯಲ್ಲಿ ನಪಾಸಾದರೆ ನಾಳೆ ತಮ್ಮ ಕಿಸೆಗೆ ಬರುವ ಹಣಕ್ಕೆ ಕೋತಾ! ಮನೆಯಲ್ಲಿ ಅಪ್ಪ ಅಮ್ಮನ ಮುಂದೆ ನಿಲ್ಲುವುದು ಹೇಗೆ ?
ಅದಕ್ಕಿಂತಲೂ ಮುಖ್ಯವಾಗಿ ತಮ್ಮ "ಗೆಳತಿ" ಎಲ್ಲಿ ಕೈತಪ್ಪಿ ಹೋಗುವಳೋ ಎಂಬ ಭಯ ಬೇರೆ !
ಒಟ್ಟಿನಲ್ಲಿ ಇಷ್ಟ ಇದೆಯೋ ಇಲ್ಲವೊ ಓದಲೇ ಬೇಕು.

ಮೊದಲು ಇಂಟರ್ನಲ್ ಮಾರ್ಕ್ಸ್ ಎಲ್ಲ ಲೆಕ್ಕ ಹಾಕಿ , ಇನ್ನು ಎಸ್ಟು ಮಾರ್ಕ್ಸ್ ತೆಗೆಯಬೇಕೆಂಬ ಸ್ಕೆಚ್ ಹಾಕಿದ ಬಳಿಕ ಓದಲು ಆರಂಭ . ಯಾವತ್ತು ಭೇಟಿ ನೀಡದ ಅರಳೀ ಕಟ್ಟೆ ಗಣಪತಿ ದೇವಸ್ಥಾನಕ್ಕೆ ಜನ ಬರುವುದೇ ಪರೀಕ್ಷಾ ಸಮಯದಲ್ಲಿ ; ಅಲ್ಲಿ ಭಕ್ತಿ ಉಕ್ಕಿ ಹರಿಯುವುದನ್ನು ಕಂಡಾಗ ಸ್ವತ: ಗಣಪ್ಪಣ್ಣನಿಗೇ ಕರುಣೆ ಮೂಡಬೇಕು !
ಈಗ ಓದುವ ಸರದಿ.....
ರಾತ್ರಿ ಇಡೀ night out...
ಯಾರು ಹೆಚ್ಚು ನೈಟ್ ಔಟ್ ಮಾಡುತ್ತಾರೋ ಅವರು ವೀರಾಧಿವೀರರು ಅಂತ ಸಾಮಾನ್ಯ ಭಾವನೆ !
ಇನ್ನು ಕೆಲವರು ರಾತ್ರಿ ಮೂರರ ವರೆಗೆ ಓದಿ ಮಲಗಿದ್ದ ತಮ್ಮ ಮಿತ್ರರನ್ನು ಎಬ್ಬಿಸಿ ನಿದ್ದೆಗೆ ಜಾರುವುದು ; ಅಮೇಲೆ ಬೆಳಗ್ಗೆ ಐದರ ಸುಮಾರಿಗೆ ಪುನ ಮುಂದುವರಿಸುವುದು ..... ಇತ್ಯಾದಿ ಇತ್ಯಾದಿ ....
ಈ ಮಧ್ಯೆ ಕೆಲವರು "ವಾರ್ತಾವಾಹಕರು" 'ಆ' ಕಾಲೇಜಿನಲ್ಲಿ 'ಈ' ಪೇಪರ್ ಔಟ್ ಆಗಿದೆಯಂತೆ ಅಂತ ಸುದ್ದಿ ತಂದು ಕುತೂಹಲ ಕೆರಳಿಸುವುದು.......
ಮತ್ತೆ ಓದು ...... ಹೀಗೆ ಸಾಗುತ್ತದೆ ಯುದ್ದ ಕಾಲೇ ಶಸ್ತ್ರಾಭ್ಯಾಸ.....
ಇನ್ನು ಕೆಲವರು ಯುದ್ಧವೇ ಶಸ್ತ್ರಭ್ಯಾಸ ಮಾಡುವವರೂ ಇದ್ದಾರೆ ; ಆದರೆ ಇದು ತೀರಾ ಅಪಾಯಕಾರಿ ..
***
ಮೇಲಿನದ್ದು ಕಾಲೇಜು ಜೀವನದಲ್ಲಾದರೆ ಕೊನೆ ಕ್ಷಣದಲ್ಲಿ ತಯಾರಿ ಮಾಡಲು ಹೊರಡುವುದನ್ನು ಒಂದೇ ಮಾತಿನಲ್ಲಿ "ಯುದ್ದ ಕಾಲೇ ಶಸ್ತ್ರಾಭ್ಯಾಸ " ಅನ್ನುವುದಷ್ಟೆ. ಈಗಲೂ ನಾವು ಅದನ್ನು ಕೆಲವೊಮ್ಮೆ ಮಾಡುತ್ತೇವೆ .ಅಮೇಲೆ ಬೈಸಿಕೊಳ್ಳುತ್ತೇವೆ ಅಷ್ಟೆ !
ಕೆಲವರಿಗಂತೂ ಇದು ಅಭ್ಯಾಸವಾಗಿ ಬಿಟ್ಟಿದೆ . "ಯಾರೇ ಕೂಗಾಡಲಿ , ಊರೇ ಓರಾಡಲಿ.... ನನ್ನ ನೆಮ್ಮದಿಗೆ ಭಂಗವಿಲ್ಲ ... ಅಂತ ಯುದ್ದ ಕಾಲೇ ಶಸ್ತ್ರಾಭ್ಯಾಸ ಮಾಡುತ್ತಲೇ ಇರುತ್ತಾರೆ .
ಏನೇ ಇದ್ದರೂ ಎಲ್ಲರೂ ಒಂದಲ್ಲ ಒಂದು ಸಲ ಈ ಅನುಪಮ ಅನುಭವದ ಭಾಗವಾಗಿದ್ದರೂ ಅದನ್ನು ಪುನಃ ನೆನಪಿಸಿ ಕೊಂಡಾಗ ಮಾತ್ರ ಅವರ್ಣನೀಯ ಆನಂದ ಆಗುವುದು ಖಂಡಿತ ...
"ಅನುಭವವು ಸಿಹಿಯಲ್ಲ ಅದರ ನೆನಪೇ ಸಿಹಿ "... ಅಲ್ಲವೇ ???

Monday, June 2, 2008

ಚಿಲ್ಲರೆ ಸಮಸ್ಯೆ .....

ಬೆಳಗ್ಗೆ ಬೇಗ ೬ ಗಂಟೆ ಬಸ್ಸಿಗೆ ಹೋಗಬೇಕು ; ಅವಸರದ ಕೆಲಸ ಹಾಗೂ ಹೀಗೂ ಮಾಡಿ ಮಾರ್ಗದ ಬದಿಗೆ ಬಂದು ನಿಂತಾಗ ಮಾಮೂಲಿನಂತೆ "ನವದುರ್ಗ" ಬಸ್ಸು ಬಂದಾಗ ಬೇಗನೆ ಹತ್ತಿ ಕಿಟಕಿ ಬದಿಯ ಸೀಟನ್ನು ಆಕ್ರಮಿಸಿ ಕುಳಿತು ಟಿಕೇಟು ತೆಗೆಯಲೆಂದು ಕಿಸೆಗೆ ಕೈ ಹಾಕಿದಾಗಲೇ ಗೊತ್ತಾದದ್ದು ಚಿಲ್ಲರೆ ತೆಗೆದು ಮೇಜಿನ ಮೇಲೆ ಇಟ್ಟದ್ದು ಅಲ್ಲೇ ಬಾಕಿ ಆಗಿದೆ ಅಂತ ! ಏನು ಮಾಡುವುದು? ನೂರು ರೂಪಾಯಿ ನೋಟು ಕೊಟ್ಟರೆ ಕಂಡಕ್ಟರ್ " ಏಳು ರೂಪಾಯಿ ಟಿಕೆಟ್ ಗೆ " ನೂರು ರೂಪಾಯಿ ಕೊಟ್ರೆ ಚಿಲ್ಲರೆ ಎಲ್ಲಿಂದ ಕೊಡೋದು? ಅಂತ ಬೆಳಗ್ಗೆ ಬೆಳಗ್ಗೆ "ಚಿಲ್ಲರೆ" ಸಮಸ್ಯೆ ಸುರು ಮಾಡ್ತಾನೆ .

ಹೌದು . ಈ ಚಿಲ್ಲರೆ ಸಮಸ್ಯೆ ನೀವೆನಿಸಿದಷ್ಟು "ಚಿಲ್ಲರೆ"ಏನಲ್ಲ !!

ಎಷ್ಟೋ ಬಾರಿ ಬಿ.ಟಿ.ಎಸ್ ಬಸ್ ನಲ್ಲಿ ಒ೦ಭತ್ತು ರೂಪಾಯಿ ಟಿಕೆಟ್ ಗೆ ಹತ್ತು ರೂಪಾಯಿ ಕೊಟ್ಟಾಗ ಕಂಡಕ್ಟರ್ ಟಿಕೇಟಿನ ಹಿಂಬಾಗದಲ್ಲಿ ಒಂದು ಗೆರೆ ಎಳೆದು ನಿಮ್ಮ ಕೈಗೆ ತುರುಕುತ್ತಾನೆ . ನಾವು ಇಳಿಯುವ ಅವಸರದಲ್ಲಿ ಆ ಒಂದು ರೂಪಾಯನ್ನು ಮರೆತು ಜಾಣರಾಗುತ್ತೇವೆ ! ಇದು ಕಂಡಕ್ಟರ್ ಭಾ೦ಧವರಿಗೂ ಗೊತ್ತಿರುತ್ತದೆ ! ನಾವು ಈ ರೀತಿ ಹಲವು ಸಲ ಕಳೆದುಕೊಂಡ ಮೇಲೆ ಚಿಲ್ಲರೆ ಬಗ್ಗೆ ಜಾಗೃತರಾಗುತ್ತೇವೆ. ಅಂಗಡಿಗಳಲ್ಲಿ , ಹೋಟೆಲ್ಗಳಲ್ಲಿ , ತರಕಾರಿ ಮಾರುವ ಗಾಡಿಗಳಲ್ಲಿಗಳಿಂದ ಹಿಡಿದು ದೇವಸ್ಥಾನದಲ್ಲಿ "ಪುರೋಹಿತರ ತಟ್ಟೆ"ಗೆ ಹಾಕುವಲ್ಲಿವರೆಗೆ "ಚಿಲ್ಲರೆ " ಅತೀ ಅವಶ್ಯವಾಗಿರುತ್ತದೆ .ಇದು ಪರಿಹರಿಸಬಹುದಾದ ಆದರೆ ನಮ್ಮ ಉದಾಸೀನತೆಯ ಫಲವಾಗಿ ಉದ್ಭವಿಸುವ ಸಮಸ್ಯೆ ಅಂತ ನನಗನಿಸುತ್ತದೆ.
ಕಳೆದ ತಿಂಗಳು ಆದಾಯ ತೆರಿಗೆ ಕಚೇರಿಯಿಂದ ನನ್ನ ಮಿತ್ರರೊಬ್ಬರಿಗೆ ಮೂರು ರೂಪಾಯಿ ಎಪ್ಪತ್ತೈದು ಪೈಸೆ ಬಾಕಿ ಸಂದಾಯ ಮಾಡಬೇಕೆಂದು ರಿಜಿಸ್ಟರ್ದ ಪೋಸ್ಟ್ ಬಂದಾಗ "ಚಿಲ್ಲರೆ" ವಸೂಲಿಗಾಗಿ ನಮ್ಮ ಸರಕಾರ ಎಷ್ಟು ಮುತುವರ್ಜಿ ವಹಿಸುತ್ತದೆ ಎಂದು ಅರ್ಥವಾಗಿತ್ತು !

ಅಂತೂ ಎಲ್ಲರೂ ಒಂದಲ್ಲ ಒಂದು ಸಲ "ಚಿಲ್ಲರೆ ಸಮಸ್ಯೆ"ಯಿಂದ ಬಳಲಿರುತ್ತೇವೆ .
ಕೆಲವೊಂದು ಸಲ ಚಿಲ್ಲರೆ ಇಲ್ಲ ಎಂಬುದು ಭಿಕ್ಶುಕರನ್ನು ಸಾಗ ಹಾಕಲು , ದುಡ್ಡು ಕೊಡಲು ಮನಸಿಲ್ಲದೆ ಇರುವಾಗ ! ಅತ್ಯಂತ ಸಹಕಾರಿಯಾಗುತ್ತದೆ ಎಂಬುದನ್ನೂ ಮರೆಯಬಾರದು !

ಇನ್ನು ನಮ್ಮ ವ್ಯವಹಾರಗಳಲ್ಲೂ ಅಗಾಗ "ಚಿಲ್ಲರೆ ಸಮಸ್ಯೆ " ಎದುರಾಗುವುದಿದೆ .
ಮಾತು ಬಲ್ಲವನಿಗೆ ಜಗಳವಿಲ್ಲ ; ಊಟ ಬಲ್ಲವನಿಗೆ ರೋಗವಿಲ್ಲ ಆದುದರಿಂದ ವ್ಯಾವಹಾರಿಕ ಚಿಲ್ಲರೆ ಸಮಸ್ಯೆಗಳನ್ನೂ ಪರಿಹರಿಸಲು ಸಾದ್ಯವಿದೆ .

****
ಅಂದ ಹಾಗೆ ....
ಮೊನ್ನೆ ಯಡಿಯೂರಪ್ಪನವರಿಗೂ ಸರಕಾರ ರಚಿಸಲು ಉಂಟಾದದ್ದು ಚಿಲ್ಲರೆ ಸಮಸ್ಯೆಯೇ !!
ನೂರಹತ್ತು ಜನ ಗೆದ್ದು ಬಂದರೂ ಚಿಲ್ಲರೆ ಆರು ಜನ ಬೆಂಬಲವಿಲ್ಲದೆ ಏನೂ ಮಾಡುವ ಹಾಗಿರಲಿಲ್ಲ . ಹಾಗಾದರೆ ಚಿಲ್ಲರೆಯೂ ಕೆಲವೊಮ್ಮೆ "ನಿರ್ಣಾಯಕ" ಪಾತ್ರ ವಹಿಸುತ್ತದೆ ಅಲ್ಲವೇ ??!!
***

Thursday, May 29, 2008

ಗೋ೦ಕುರು ಕಪ್ಪೆ ....


ಕಪ್ಪೆಯನ್ನು ಕುರಿತ ಪಾಠಗಳು ಎಲ್ಲರೂ ಒಂದಲ್ಲ ಒಂದು ತರಗತಿಯಲ್ಲಿ ಅಲ್ಪ ಸ್ವಲ್ಪವಾದರೂ ಓದಿಯೇ ಇರುತ್ತೇವೆ . ಮಳೆಗಾಲ ಆರಂಭವಾಯಿತೆಂದರೆ ಸಾಕು ಕಪ್ಪೆಗಳ ಸಂಗೀತ ಆರಂಭವಾಗುತ್ತದೆ . ಸಣ್ಣ ಸಣ್ಣ ಚೊಂದಗಪ್ಪೆಯಿಂದ ಹಿಡಿದು ದೊಡ್ಡ ಗಾತ್ರದ ಗೋ೦ಕುರು ಕಪ್ಪೆ ವರೆಗೆ ನಾನಾ ಗಾತ್ರದ ಕಪ್ಪೆಗಳು ಹರ್ಷದಿಂದ ಮಳೆಗಾಲವನ್ನು ಸ್ವಾಗತಿಸುತ್ತವೆ .
ಹೈ ಸ್ಕೂಲ್ ನಲ್ಲಿದ್ದಾಗ ದೇವಸ್ಥಾನದ ಭಜನೆ ಕಾರ್ಯಕ್ರಮ ಮುಗಿಸಿ ರಾತ್ರಿ ಸುಮಾರು ಏಳೂವರೆ ಸುಮಾರಿಗೆ ಮಲೆನಾಡಿನ ನೀರವ ಮೌನ ತುಂಬಿದ ಕಾಡಿನ ದಾರಿಯಲ್ಲಿ ಮನೆಗೆ ಬರುವಾಗ ದಾರಿ ಬದಿಯ ತೋಡಿನಲ್ಲಿ ಆನಂದದಿಂದ ಸರದಿ ಪ್ರಕಾರ ಕೇಳಿ ಬರುತ್ತಿದ್ದ ಗೋ೦ಕುರು ಕಪ್ಪೆಗಳ ಸುಮಧುರ ಸಂಗೀತ ಕೇಳಿದಾಗ ಒಂದು ರೀತಿಯ ಅಹ್ಲಾದಕರ ಅನುಭವ ಆಗುತ್ತಿತ್ತು.
ನಾವು ಚಿಕ್ಕವರಿದ್ದಾಗ ಮನೆಗೆ ತೋಟದ ಕೆಲಸಕ್ಕೆ ಬರುತ್ತಿದ್ದ ಕುಂಟ ಈಸುಬ್ಬು ಕಾಕ ಆಗಾಗ ಹೇಳುತ್ತಿದ್ದರು " ಅಮೆರಿಕೊಡು ಗೋ೦ಕುರು ಕಪ್ಪೆನ್ ಮಾತ ತಿನ್ಪೆರ್ಗೆ !!" (ಅಮೆರಿಕಾದಲ್ಲಿ ಗೋ೦ಕುರು ಕಪ್ಪೆಯನ್ನು ತಿನ್ನುತ್ತರಂತೆ !). ಆಗ ನಾವೆಲ್ಲ ಛೀ ......
ಎಂದು ಹೇಸಿಗೆ ಪಡುತ್ತಿದ್ದೆವು . ಕಪ್ಪೆಯ ಮೂತ್ರ ಮೈಮೇಲೆ ಬಿದ್ದರೆ "ಕೆಡು " ಆಗುತ್ತದೆ ಎಂಬ ನಂಬಿಕೆ ಆಗಲೂ ಜನರ ಮನದಲ್ಲಿದೆ !
ನಿಜವಾಗಿಯೂ ಇತ್ತೀಚೆಗೆ ಗೋ೦ಕುರು ಕಪ್ಪೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕಪ್ಪೆಗಳನ್ನು ಸೂಪ್ ಮಾಡಿ ತಿನ್ನುವ ವರ್ಗ ಬೆಂಗಳೂರಿನಲ್ಲಿಯೇ ಇದ್ದಾರೆ ಎಂದು ತಿಳಿದಾಗ ಮಾತ್ರ ಅಚ್ಚರಿಯಾಯಿತು !
ಹಿಂದೆ ನಮ್ಮಲ್ಲಿಗೆ ಕೆಲಸಕ್ಕೆ ಬರುತ್ತಿದ್ದ ಸಂಕಪ್ಪ , ಅಣ್ನು, ಬೂಬ ಕಪ್ಪೆಗಳನ್ನು ಹಿಡಿದು ಕಾಲೇಜಿನ ಜೀವಶಾಸ್ತ್ರ ವಿಭಾಗಕ್ಕೆ ಕೊಟ್ಟು ಕಪ್ಪೆಯೊಂದಕ್ಕೆ ತಲಾ ಒಂದು ರೂಪಾಯಿ ಪಡೆಯುತ್ತಿದ್ದುದನ್ನು ಕಂಡಿದ್ದೇನೆ . ಬಹಳಷ್ಟು ಕಪ್ಪೆಗಳನ್ನು ಹಿಡಿದು ವಿದೇಶಕ್ಕೆ ರವಾನಿಸಿದ ಬಗ್ಗೆ ಪತ್ರಿಕೆಯಲ್ಲಿ ಅಂಕಣವೊಂದನ್ನು ಓದಿದ್ದೆ . ಸುಮ್ಮನೆ ಪ್ರಚಾರಕ್ಕೊಸ್ಕರ ಈ ರೀತಿ ಬರೆದಿದ್ದರೆನ್ದುಕೊಂಡಿದ್ದ ನಾನು ಇದು ಸತ್ಯ ಎಂದು ತಿಳಿಯುವ ವೇಳೆಗೆ ಅದೆಷ್ಟು ಕಪ್ಪೆಗಳು ಯಾರ್ಯಾರ ಹೊಟ್ಟೆ ಸೇರಿದ್ದವೋ ತಿಳಿಯೆ!
ಈಗ ಊರಿನಲ್ಲಿ "ಕಪ್ಪೆಗಳ ಸಮ್ಮೇಳನ " ಕೇಳುವುದಕ್ಕೆ ಸಿಗುತ್ತಿಲ್ಲ . ಅಲ್ಲೊಂದು ಇಲ್ಲೊಂದು ಕಪ್ಪೆ ಕ್ಷೀಣ ದ್ವನಿಯಲ್ಲಿ ಹರ್ಷಾಚರಣೆ ಮಾಡುವುದನ್ನು ಬಿಟ್ಟರೆ ಬೇರೇನೂ ಇಲ್ಲ . ಆಹಾರ ಸರಪಣಿ ಕಡಿದು ಹೋಗುತ್ತಿದೆ ; ಪ್ರಕೃತಿ ಸಮತೋಲನ ಏರುಪೇರಾಗುತ್ತಿದೆ.
ಆದರೆ ನಾವಿನ್ನೂ " ಇದೆಲ್ಲ ನಮಗ್ಯಾಕೆ?? " ಎಂಬ ಭಾವನೆಯಲ್ಲೇ ಇದ್ದೇವೆ !!
ಮು೦ದೊಂದು ದಿನ "ಮಗಾ ಇದಾ ನೋಡು ಕೆಪ್ಪೆ " ಅಂತ ಚಿತ್ರದಲ್ಲಿ ಮಕ್ಕಳಿಗೆ ತೋರಿಸಿ ತೃಪ್ತಿ ಪಡಬೇಕು ಅಷ್ಟೆ !

Tuesday, May 27, 2008

ನಾನಿಲ್ಲದೇ ಅದ್ ಹೇಗೆ ಮಾಡ್ತೀರಿ ನೋಡ್ತೇನೆ ....!!!

ದೇವೇಗೌಡ ಹೇಳಿದ ಮಾತು ಮಾರಾಯರೇ ...
ಎಂತ ಕೊಬ್ಬು ನೋಡಿ ಮುದುಕನಿಗೆ !
ನಾನು ಮಾಡುವುದು "ದಿಲ್ಲಿ ರಾಜಕೀಯ ಅಲ್ಲ ; ಹಳ್ಳಿ ರಾಜಕೀಯ " ಅಂತ ಪತ್ರಿಕಾ ಹೇಳಿಕೆ ಕೊಟ್ಟಾಗಲೇ ಮುದುಕನಿಗೆ ಮಂಡೆ ಸರಿ ಇಲ್ಲ ಎಂಬುದು ಎಲ್ಲ ಜನಕ್ಕೂ ಗೊತ್ತಾಗಿತ್ತು . ಅದಕ್ಕೆ ಸರಿಯಾಗಿ ಮತದಾರ ಪ್ರಭು ಈ ಸಲ ಕಲಿಸಿದ ನೋಡಿ !
ಈಗ ಮಗ ಹೇಳುವುದು ನಮ್ಮದು "ಪಿತೃ ಪಕ್ಷ !!" ಅಪ್ಪ ಹೇಳುವುದು ನಮ್ಮದು " ಪುತ್ರ ಪಕ್ಷ " !!
ಹೊಂಡಕ್ಕೆ ಬಿದ್ದ ಮೇಲೂ ಮಂಡೆ ಆಡಿಸಿದರು ಅಂತ ಆಗಿದೆ ಈಗ !!

ಅತ್ತ ಕಡೆ ಬಂಗಾರಪ್ಪ ಅಂಡ್ ಕೋ. ಎಲ್ಲ ಮನೆಯಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ " ನಮೋ ನಮೋ ಶನಿರಾಯಾ .... " ಭಜನೆ ಮಾಡುವಂತೆ ಮಾಡಿದ ಮತಭಾಂಧವರಿಗೆ ಕೋಟಿ ನಮನಗಳು ..
ಆಸೆ ಇರ್ಬೇಕು ದುರಾಸೆ ಅಲ್ಲ !!
ಇನ್ನು ನಮ್ಮ ಜೇವರ್ಗಿ ಆನೆ " ಘರಂ ಸಿಂಗ್ " ಪೋಸ್ಟಲ್ ವೋಟು ತೆರೆದಾಗ ಸೋತದ್ದು !!!
ಪಾಪ ಈ ಸಲನೂ ಗೆದ್ದು ಎಲ್ಲ ಜಿಲ್ಲಾ ಕೇಂದ್ರಗಳಲ್ಲು ಒಂದೊಂದು ಸ್ವಂತ ಮನೆ ಕಟ್ಟಿಸಿಕೊಳ್ಳುವ ತವಕದಲ್ಲಿದ್ದ ಸಾಯೀಬ್ರಿಗೆ ಮತದಾರ ಹಾಕಿದ ಬಾಂಬು ನೋಡಿ !!!
ಭಾ.ಜ.ಪ. ದ ಬಸವರಾಜ ಯಥ್ನಾಲ್ ಮತ ಎಣಿಕೆ ಮುನ್ನ ದಿನ ತಮ್ಮ " ಮುರ ಎಮ್ಮೆ " ಗಳಿಗೆ ಹುಲ್ಲು ಹಾಕಿ ಬಂದಿದ್ದಂತೆ !(ವಿಜಯ ಕರ್ನಾಟಕ ಸುದ್ದಿ) ನಿನಗೆ ಅದೇ ಬೆಸ್ಟು ಮಗನೆ ಅಂತ ಅವರನ್ನು ಮನೆಯಲೇ ಕುಳ್ಳಿರಿಸಿದ ಆ ಕ್ಷೇತ್ರದ ಎಲ್ಲ ಮತದಾರರೂ ಅಭಿನಂದನಾರ್ಹರು !
ಮಿರಾಜುದ್ದೀನ್ ಪಟೀಲರ ಬಗ್ಗೆ " ಅರುಹಿ ಪಲವೇನ್ ಅಂತ್ಯ ಕಾಲದಿ....." !!

ಅಂತೂ ಈ ಸಲದ್ದು ನೋಡಿ ಚುಣಾವಣೆ ಅಂದ್ರೆ !
ಈಗ ಪಕ್ಷೆತರರು ಹೇಳಬಹುದು "ನಾನಿಲ್ಲದೇ ಅದ್ ಹೇಗೆ ಮಾಡ್ತೀರಿ ನೋಡ್ತೇನೆ ....!!! "

ಎಲ್ಲ ನಿನ್ನ ಲೀಲೆ ಪ್ರಬ್ಹೋ ಸಂಭುಲಿಂಗಾ........

Tuesday, May 20, 2008

ಪುರಾಣ ಲೋಕದ ಬಾಲರು .....

ನಾವು ಚಿಕ್ಕವರಿದ್ದಾಗ ಮಲಗುವ ಮುನ್ನ ಅಮ್ಮ ಹೇಳುತ್ತಿದ್ದ ಕುತೂಹಲಭರಿತ ಸ್ವಾರಸ್ಯಪೂರ್ಣ ಕಥೆಗಳು ನಮ್ಮನ್ನು ಪುರಾಣ ಲೋಕಕ್ಕೆ ಕೊಂಡೊಯ್ಯುತ್ತಿದ್ದವು . ಕ್ರಮೇಣ ಪೌರಾಣಿಕ ಯಕ್ಷಗಾನಗಳು ಪೌರಾಣಿಕ ಕಥೆಗಳಲ್ಲಿರುವ ಮೌಲ್ಯಗಳನ್ನು ನವರಸಭರಿತವಾಗಿ ಕಣ್ಣ ಮುಂದೆ ತೆರೆದಿಡುತ್ತಿದ್ದ ರೀತಿ ಅನನ್ಯ .

ಇತ್ತೀಚೆಗೆ ಪುರಾಣ ಕಥೆಗಳನ್ನು ಹೇಳುವ ಅಮ್ಮಂದಿರ ಸಂಖ್ಯೆ ಕ್ಷೀಣಿಸುತ್ತಿದ್ದು ಮಕ್ಕಳು ದೂರದರ್ಶನವನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಉಂಟಾಗುತ್ತಿದೆ. ಇದಕ್ಕೆ ಪುರಾಣ ಕಥೆಗಳ ಪುಸ್ತಕದ ಕೊರತೆಯೂ ಒಂದು ಕಾರಣವಿರಬಹುದು . ಹಲವು ಸಮಯ ಹಿಂದೆ ವಾರಕ್ಕೊಮ್ಮೆ ಉದಯವಾಣಿ ದಿನ ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ " ಪುರಾಣ ಬಾಲರು " ಎಂಬ ಕಥಾಮಾಲಿಕೆಯನ್ನು ಧರ್ಮಸ್ಥಳ ಮೇಳದ ಕಲಾವಿದರಾದ ಶ್ರೀ ತಾರಾನಾಥ ಬಲ್ಯಾಯರು ಬರೆಯುತ್ತಿದ್ದು ಅದೀಗ "ಪುರಾಣ ಲೋಕದ ಬಾಲರು" ಎಂಬ ಪುಸ್ತಕವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಸುಮಾರು ೧೫೦ ವಿವಿಧ ಪುರಾಣದ ಬಾಲಕರ ಕುರಿತ ಕಥೆಗಳು ಇದರಲ್ಲಿ ಸ್ವಾರಸ್ಯಪೂರ್ಣವಾಗಿ ವಿವರಿಸುವುದರ ಜೊತೆಗೆ ಅವರ ಜೀವನದಿಂದ ಕಲಿಯಬಹುದಾದ ನೀತಿಯನ್ನು ಕೊನೆಯಲ್ಲಿ ಕೊಡಲಾಗಿದೆ . ಇದೊಂದು ಸಂಗ್ರಹಯೋಗ್ಯ ಪುಸ್ತಕವಾಗಿದ್ದು ಎಲ್ಲ ವಯೋಮಾನದವರಿಗೂ ಓದಿ ತಿಳಿದುಕೊಳ್ಳಲು ಸಹಕಾರಿಯಾಗಿದೆ . ಇದನ್ನು ಓದಿದಲ್ಲಿ ಮಕ್ಕಳಿಗೆ ಕಥೆ ಹೇಳಲು ತುಂಬ ಅನುಕೂಲ . ಕೇವಲ ಕಥೆಯನ್ನು ಕೇಳುವುದು ಮಾತ್ರವಲ್ಲ ಅಮ್ಮನೊಂದಿಗೆ ಆತ್ಮೀಯ ಕ್ಷಣಗಳನ್ನು ಸವಿಯಲು ಮಕ್ಕಳಿಗೆ ಅನುವು ಮಾಡಿ ಕೊಟ್ಟ೦ತಾಗುತ್ತದೆ.
ಬರಿಯ ದೂರದರ್ಶನವನ್ನೇ ನೋಡುತ್ತ ಅಮ್ಮನ ಮಡಿಲಿನ ಸುಖಕಥೆಗಳಿ೦ದ ಪುಳಕಿತರಾಗಲು ಪುಸ್ತಕವನ್ನು ಪ್ರಕಟಿಸಿ ಎಲ್ಲರಿಗೂ ದೊರೆಯುವಂತೆ ಮಾಡಿದ ಶ್ರೀ ತಾರಾನಾಥ ಬಲ್ಯಾಯರು ನಿಜಕ್ಕೂ ಅಭಿನ೦ದನಾರ್ಹರು . ಈ ಪುಸ್ತಕವು ದಕ್ಷಿಣಕನ್ನಡದ ಬಹುತೇಕ ಎಲ್ಲ ಪುಸ್ತಕದ ಅಂಗಡಿಗಳಲ್ಲೂ ದೊರೆಯುತ್ತದೆ. ಅವಕಾಶವಿದ್ದಲ್ಲಿ ಅವಶ್ಯ ಕೊಂಡು ಓದಿ ಆನಂದಿಸಿ....

Tuesday, May 13, 2008

ಮದ್ದಲೆ ಮಾಂತ್ರಿಕನಿಗೆ ನುಡಿ- ನಮನ ...


ಶಿರಂಕಲ್ಲು ನಾರಾಯಣ ಭಟ್ ನಿಧನ ಎಂಬ ವರ್ತಮಾನ ಯಕ್ಷಗಾನ ಅಭಿಮಾನಿಗಳಿಗೆ ಅತ್ಯಂತ ದು:ಖದ ವಿಚಾರ . ತಾನಾಯಿತು ತನ್ನ ಕೆಲಸವಾಯಿತು ಎಂಬಷ್ಟು ತೀರಾ ಮೃದು ಸ್ವಭಾವದ ನಾರಾಯಣಣ್ಣ ಹಳೆ ತಲೆಮಾರಿನ ಮದ್ದಲೆಗಾರರು . ತೆಂಕು ತಿಟ್ಟಿನ ಹಿರಿಯ ಮಹಾನ್ ಕಲಾವಿದರನ್ನೆಲ್ಲ ಕುಣಿಸಿದ ಇವರು ಅಗರಿ ಭಾಗವತರಿಂದ ಹಿಡಿದು ನಿನ್ನೆ ಮೊನ್ನೆ ಭಾಗವತರಾದವವರ ವರೆಗೆ ಎಲ್ಲರಿಗೂ ಮದ್ದಲೆ ಸಾಥ್ ನೀಡಿದವರು .
ಸುರತ್ಕಲ್ ಮೇಳದಲ್ಲಿ "ಬಪ್ಪನಾಡು ಕ್ಷೇತ್ರ ಮಹಾತ್ಮೆ " ಅಗರಿ ಶ್ರೀನಿವಾಸ ಭಾಗವತರ ಭಾಗವತಿಕೆಯಲ್ಲಿ ಶೇಣಿ -ಜೋಶಿ ಜೋಡಿಯನ್ನು ಕುಣಿಸಿದ
ಇವರು ಹಲವು ದೊಡ್ಡ ಕಲಾವಿದರ ಒಡನಾಟದಿಂದ ಅನುಭವಸಂಪನ್ನರಾಗಿದ್ದರು .
ಇಡೀ ರಾತ್ರೆ ದಣಿವರಿಯದೆ "ತುಳಸಿ ಜಲಂಧರ" ಪ್ರಸಂಗಕ್ಕೆ ಮದ್ದಲೆ ಸಾಥ್ ನೀಡಿದ್ದನ್ನು ೬ ನೆ ತರಗತಿಯಲ್ಲಿರುವಾಗಲೇ ನೋಡಿ ಆನ೦ದಿಸಿದ್ದೇನೆ. ಇವರ ನಿಧನದಿ೦ದ ಯಕ್ಷಗಾನ ಅಭಿಮಾನಿಗಳುಹಳೆಯ ಕೊಂಡಿಯೊಂದನ್ನು ಕಳೆದುಕೊಂಡು ಬಹು ದೊಡ್ಡ ನಷ್ಟವನ್ನು ಅನುಭವಿಸುವಂತಾಯಿತು. ದೇವರು ಅವರಿಗೆ ಸದ್ಗತಿಯನ್ನು ನೀಡಲಿ ಎಂದು ಹೃನ್ಮನಪೂರ್ವಕ ಹಾರೈಸುತ್ತಿದ್ದೇವೆ .

Monday, May 12, 2008

159- ಪುಲಕೇಶಿ ನಗರ (ಪ. ಜಾ.), ಮತಗಟ್ಟೆ ಸ೦ಖ್ಯೆ - 39A


ಈ ಸಲ ಚುನಾವಣಾ ಕಾರ್ಯಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರದೇಶಕ್ಕೆ ತೆರಳಬೇಕೆಂದು ಮುಖ್ಯ ಚುನಾವಣಾಧಿಕಾರಿಯವರ ಆದೇಶ ಬಂದಾಗ ನಿಜಕ್ಕೂ ಸಮಾಧಾನದ ಉಸಿರು ಬಿಟ್ಟಿದ್ದೆ. ಯಾಕೆಂದರೆ ಕೊನೆ ಪಕ್ಷ ಮಹಾನಗರಕ್ಕೆ ಹೋಗುವುದು ; ಅಲ್ಲಿನ ಶಾಲೆಗಳು ತಕ್ಕ ಮಟ್ಟಿಗೆ ಉತ್ತಮವಾಗಿರುತ್ತದೆ ಎಂಬ ಕಲ್ಪನೆ (!) ಮನದಲ್ಲಿತ್ತು. ನಾಗರಿಕ ಜನ ಮೇಲಾಗಿ ವಿದ್ಯಾವಂತರು ಇರುವುದರಿಂದ ನಮ್ಮ ಕರ್ತವ್ಯ ಪಾಲನೆ ಮಾಡಲು ಅನುಕೂಲವಾಗುತ್ತದೆ ಎಂದು ಯೋಚಿಸುತ್ತಾ ಮಹಾನಗರ ಪಾಲಿಕೆ ಸರಕಾರೀ ಪದವಿ ಪೂರ್ವ ಕಾಲೇಜು , ಪುಲಕೇಶಿ ನಗರ , ಪ್ರೇಝರ ಟೌನ್ ಸೇರಿದೆ .ನನ್ನಂತೆ ಹಲವು ಮಂದಿ "ಮತಿಗೆಟ್ಟ ಅಧಿಕಾರಿಗಳು " ಅಲ್ಲಲ್ಲ ... ಮತಗಟ್ಟೆ ಅಧಿಕಾರಿಗಳು !! ಅಲ್ಲಿ ಸೇರಿದ್ದರು .
ಈ ಸಲ ನನಗೆ ದೊರೆತದ್ದು ಪುಲಕೇಶಿ ನಗರ ಮೀಸಲು ಕ್ಷೇತ್ರ .ನಾನು ತೆರಳಿದವನೇ ನನ್ನ ಗುಂಪಿನ ಸದಸ್ಯರೆಲ್ಲರೂ ಒಂದೆಡೆ ಸೇರಿರುವಲ್ಲಿ ಹೋಗಿ ಅವರೊಂದಿಗೆ ಚುನಾವಣೆಗೆ ಬೇಕಾದ ಮತಯಂತ್ರ , ಇತರ ಪರಿಕರಗಳನ್ನು ಪಡೆಯಲು ಸಾಲಿನಲ್ಲಿ ನಿಂತೆ .
"159- ಪುಲಕೇಶಿ ನಗರ (ಪ. ಜಾ.), ಮತಗಟ್ಟೆ ಸ೦ಖ್ಯೆ - 39A" ಸುಬ್ರಹ್ಮಣ್ಯ ಭಟ್ ಎಂದು ಜೋರಾಗಿ ಮೈಕನಲ್ಲಿ ಘೋಷಿಸಿದಾಗ ಪರಿಕರಗಳನ್ನು ಪಡೆಯಲು ಧಾವಿಸಿದೆ . ಮತಯನ್ತ್ರದ ವಿಳಾಸ ಮುದ್ರಿಕೆಯನ್ನು ನೋಡಿ ನನಗೆ ವಹಿಸಲಾದ ಮತಗಟ್ಟೆ ಯಾವುದಿರಬಹುದು ? ಎಂಬ ಸಹಜ ಕುತೂಹಲದಿಂದ ನೋಡಿದಾಗ " ಅಮರ್ ಸ್ಕೂಲ್ ", ಅಯೋಧ್ಯಾದಾಸ್ ನಗರ್ , ಮಾಲಿಕ ಸಾಬ್ ರೋಡ್ " ಎಂದು ನಮೂದಗಿದ್ದು ನನಗೆ ಸ್ವಲ್ಪ ಸಮಾಧಾನವಾಯಿತು . ಯಾವುದೊ ಕ್ರಿಸ್ಚನ್ನರ ಶಾಲೆ ಇರಬೇಕು . ಅದು ಅಯೋಧ್ಯಾದಾಸ ನಗರದಲ್ಲಿದೆ . ಒಳ್ಳೆ ಏರಿಯಾವೇ ಇರಬಹುದೆಂದು ತರ್ಕಿಸಿಕೊಂಡು ನನ್ನ ಗುಂಪಿನವರೊಂದಿಗೆ ಮಿನಿ ಬಸ್ ಏರಿ ಕುಳಿತೆ .
ಬಸ್ ಮತಗಟ್ಟೆ ಇರುವ ಪ್ರದೇಶವನ್ನು ತಲುಪಿದಾಗಲೇ ನನಗೆ ತಿಳಿದದ್ದು ನಾನು ಬಂದದ್ದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರದೇಶಕ್ಕೆ ಸೇರಿದ " ಅನಾಗರಿಕ ಸ್ಥಳಕ್ಕೆ " ನಾನು ತಲುಪಿದೆ ಎಂದು !!
"ಅಮ್ಮಾರ್ ಸ್ಕೂಲ್ " ಎಂಬುದು ಬರವಣಿಗೆ ದೋಷದಿಂದ "ಅಮರ್ ಸ್ಕೂಲ್ " ಎಂದು ವಿಳಾಸ ಪತ್ರದಲ್ಲಿ ನಮೂದಾಗಿತ್ತು !!
ಆ ಪ್ರದೇಶ ಈ ರೀತಿ ಇರಬಹುದೆಂಬ ಕಲ್ಪನೆ ನನಗೆ ಕನಸಿನಲ್ಲಿಯೂ ಇರಲಿಲ್ಲ !! ಎಲ್ಲಿ ನೋಡಿದರಲ್ಲಿ ಮಟನ್ ಅಂಗಡಿಗಳು , ಮುಸ್ಲಿಮರ ಮನೆಗಳನ್ನು ಬಿಟ್ಟು ಒಂದೇ ಒಂದು ಮನೆ ಕಣ್ಣಿಗೂ ಕಾಣಿಸುತ್ತಿರಲಿಲ್ಲ ! ತೆರೆದ ಚರಂಡಿ ತುಂಬಾ ರಕ್ತ , ಹಂದಿಗಳ ಕೇಕೆ
ಭಯಂಕರ ವಾಸನೆ . ರಾಜಧಾನಿಯಾದ ಬೆಂಗಳೂರಿನಲ್ಲಿ ಅದೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರದೇಶಕ್ಕೆ ಒಳಪಟ್ಟ ಜಾಗದಲ್ಲಿ ನಾನು ನಿಂತಿದ್ದೆನೆಯೇ ? ಎಂದು ಸಂದೇಹ ಹುಟ್ಟಿಸುವ ಅಲ್ಲಿ ಇರುವ ಜನರ ಜೀವನ ಶೈಲಿ ನೋಡಿದಾಗ ಇವರೂ ನಾಗರಿಕರೆ ?? ಪ್ರಶ್ನಿಸುವಂತಿತ್ತು .
ಒಬ್ಬ ಸಾತ್ವಿಕ ಮನುಷ್ಯ ಒಂದು ಕ್ಷಣಕ್ಕೂ ನಿಲ್ಲಲು ಸಾಧ್ಯವಾಗದ ಆ ಸ್ಥಳದಲ್ಲಿ ಒಂದು ಇಡೀ ದಿನ ಚುನಾವಣಾ ಕಾರ್ಯ ಹೇಗೆ ಯಶಸ್ವಿಯಾಗಿ ಪೂರೈಸಿ ಜೀವಂತ ಮರಳಿ ನನ್ನ ಸ್ವಸ್ಥಾನ ಸೇರಿದೆ ಎಂಬುದು ಇನ್ನು ಸೋಜಿಗದ ಸಂಗತಿಯೇ !!
ಅಲ್ಪ ಸಂಖ್ಯಾತರೆಂದು ಹೇಳಿಕೊಂಡು ಶಾಲೆಗೆ ಪರವಾನಿಗೆ ಗಿಟ್ಟಿಸಿಕೊಂಡು ಕೋಳಿ ಗೂಡಿನಂಥ (ನಮ್ಮ ಊರ ಕಡೆ ಅಡಿಕೆ ಒಣಗಿಸುವ ಗೊದಾಮಿನಂತಿರುವ ) ಕಟ್ಟಡದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಎಂದು ರಾಜಧಾನಿಯಲ್ಲೇ ರಾಜಾರೋಷವಾಗಿ ಇವರು ನಡೆಸುತ್ತಿರುವ ಉದ್ಯಮ ನೋಡಿದರೆ ಯಾರೇ ಆದರೂ ಬೆಚ್ಚಿ ಬೀಳುವನ್ತಿದ್ದ ಆ ಕಟ್ಟಡದಲ್ಲಿ ಬಹಳ ಸಂಕಟಪಟ್ಟುಕೊ೦ಡು ಮತಗಟ್ಟೆ ಸ್ಥಾಪಿಸಿಕೊಂಡು ಕುಳಿತೆವು . ರಾತ್ರೆ ಊಟವಿಲ್ಲ ; ಕುಡಿಯಲು ಒಳ್ಳೆ ನೀರಿಲ್ಲ . ಜೊತೆಯಲ್ಲಿ ತಂದಿದ್ದ ನೀರೆಲ್ಲ ಖಾಲಿಯಾಗಿ ಹೋಗಿತ್ತು . ಮನ ಮುದುಡಿ ಹೋಗಿದ್ದರೂ ಕರ್ತವ್ಯ ಪಾಲಿಸದೇ ವಿಧಿ ಇಲ್ಲ .
ಮರುದಿನ ಬೆಳಗ್ಗೆ ೬ ಗಂಟೆಗೆ ಸರಿಯಾಗಿ ಅಣಕು ಮತದಾನ ಮಾಡಿ ತೋರಿಸಿ ೭ಕ್ಕೆ ಸರಿಯಾಗಿ ಮತದಾನಕ್ಕೆ ಅನುವು ಮಾಡಿ ಕೊಟ್ಟೆವು . 1042 ಮತದಾರರಿದ್ದ ಅಲ್ಲಿ ಶೇ. ೯೦ ಮುಸ್ಲಿಂ ಮತದಾರರೂ ; ಅಲ್ಪಸಂಖ್ಯಾತ ಹಿಂದೂ ಮತದಾರರೂ ಮತದಾನ ಮಾಡಿದ್ದರು. ೧೧.೪೦ ರ ಸುಮಾರಿಗೆ ಯುವಕರ ಗುಂಪೊಂದು ಗಲಭೆ ಎಬ್ಬಿಸುವ ಪ್ರಯತ್ನ ಮಾಡಿದಾಗ ತಕ್ಷಣ ಪೊಲೀಸರಿಗೆ ಸುದ್ದಿ ತಲುಪಿಸಿದಾಗ ೧೦ ನಿಮಿಶದೊಳಗಾಗಿ BSF ತಂಡ ಸ್ಥಳಕ್ಕೆ ಬಂದು ಲಘು ಲಾಠಿ ಪ್ರಹಾರ ನಡೆಸಿ ವಾತಾವರಣ ತಿಳಿಗೊಳಿಸಿದರು . ಸಂಜೆ ೫ಕ್ಕೆ ಮತದಾನ ಮುಕ್ತಾಯಗೊಳಿಸಿ " ಗೂಡಿನಿಂದ ಬಿಟ್ಟ ಮಂಗನಂತೆ " ಬದುಕಿದೆಯಾ ಬಡ ಜೀವವೇ ಎಂದು ಚುನಾವಣಾ ಸಾಮಾಗ್ರಿ ವಿತರಣಾ ಕೇಂದ್ರ ಕ್ಕೆ ಮರಳಿ ಎಲ್ಲವನ್ನು ಹಿಂದಿರುಗಿಸಿ ಸ್ವೀಕೃತಿ ರಶೀದಿ ಪಡೆದು ನಮ್ಮ ನಮ್ಮ ಮನೆ ಕಡೆ ತೆರಳಿದೆವು .
ಅನ್ನ ನೀರು ಸಿಗದ ಆ ತಾಣಕ್ಕೆ ಸಕಾಲದಲ್ಲಿ ನಮಗೆ ಮತದಾನದ ದಿನ ಊಟವನ್ನು ಸಪತ್ನೀಕರಾಗಿ ಬಂದು ಒದಗಿಸಿದ ಚೆಮ್ಬಾರ್ಪು ಮುರಳಿ ಮನೋಹರ (ಮುರಳಿ ಭಾವ) ರ ಉಪಕಾರವನ್ನು ಮರೆಯಲು ಸಾಧ್ಯವೇ ಇಲ್ಲ . ಮೇಲೆ ವರ್ಣಿಸಿದ ಸ್ಥಳಕ್ಕೆ ಅವರು ತಲುಪಿದ ; ಅಲ್ಲಿನ ಪ್ರತ್ಯಕ್ಷ ಅನುಭವ ಅವರ ಮಾತಲ್ಲೇ ಕೇಳುವುದು ಸೂಕ್ತ !

ಇದು ನನ್ನ ೩ ನೆ ಚುನಾವಣಾ ಕರ್ತವ್ಯ . ಮೂರು ಬಾರಿಯೂ ವಿವಿಧ ಅನುಭವ ನೀಡಿದ ಚುನಾವಣಾ ಆಯೋಗಕ್ಕೆ ನಾನು ಅಭಾರಿ.

Monday, May 5, 2008

ಮುದ ನೀಡುವ ಕಿರುಗವನಗಳು...

ಇದು ನಮಗೆ ೮ನೇ ತರಗತಿಯ ಪಾಠ ಪುಸ್ತಕದಲ್ಲಿತ್ತು . ಕಡೆಂಗೋಡ್ಲು ಶ೦ಕರ ಭಟ್ ಬರೆದದ್ದೆಂದು ನೆನಪು ..

-1-


ಕತ್ತೆಯು ಎಂದಾದರೂ ನಿನ್ನನ್ನು ಒದ್ದರೆ
ಮರಳಿ ನೀನೊದೆಯದಿರದಕೆ
ಕತ್ತೆಯ ಒದೆಯನು ಹಿಂದಿರುಗಿಸಿದರೆ
ನೋವಿನ ಬಹು ಪಾಲು ನಿನಗೆ .

-2-

ಹತ್ತೆಡೆಯೊಳು ತೋಡಿ ಒಂದಡಿಯಷ್ಟನು
ಬರಲಿಲ್ಲ ನೀರೆನ್ನಬೇಡ
ಒಂದೆಡೆಯೊಳು ತೋಡು ಹತ್ತಡಿಯಷ್ಟನು
ಚಿಮ್ಮುವುದುದಕವು ನೋಡ !


***



Tuesday, April 29, 2008

ಕೆರಳುವ ಪ್ರತಿಭೆಗಳು ........!!!!

ಅರಳುವ ಪ್ರತಿಭೆಗಳ ಬಗ್ಗೆ ನೀವೆಲ್ಲ ಕೇಳಿರುತ್ತಿರಿ.
ಆದರೆ ಇದೆಂತದ್ದು ಕೆರಳುವ ಪ್ರತಿಭೆ ? ಅಂತ ಹುಬ್ಬೆರಿಸಬೇಡಿ !
ಒಂದು ಒಳ್ಳೆಯ ಕಾರ್ಯಕ್ರಮ ನಡೆಯುತ್ತಿದ್ದಾಗ ಒಮ್ಮೆಲೇ ಉತ್ಸಾಹದಿಂದ ಕಿರುಚಿಕೊಳ್ಳುತ್ತಾರಲ್ಲ ಅವರೇ ನಮ್ಮ ಕೆರಳುವ ಪ್ರತಿಭೆಗಳು !
ಈ ಕೆರಳುವ ಪ್ರತಿಭೆ ಪ್ರಕಟವಾಗುವುದು ಗುಂಪಿನಲ್ಲಿದ್ದಾಗ ಮಾತ್ರ ! ಎಂಥ ಪೋಲಿಗಳೇ ಆಗಿರಲಿ ಒಬ್ಬರೇಇದ್ದರೆ ಸುಮ್ಮನಿರುತ್ತಾರೆ . ಆದರೆ ಅಂತವರ ಒಂದು ಗುಂಪು ಸೇರಿತೆಂದರೆ ಸಾಕು ಬೆಕ್ಕು , ನಾಯಿ , ಆಕ್ಷಿ .... ಆಕ್ಷಿ .... ಆಕ್ಷಿ .... ಮುಂತಾದ ವೈವಿಧ್ಯಮಯ ಶಬ್ದಗಳನ್ನು ಉಪಯೋಗಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡುತ್ತಾರೆ. ಕೆಲವರು ಇವರನ್ನು ಆಕ್ಷೇಪಿಸಬಹುದು. ಒಳ್ಳೆ ಕಾರ್ಯಕ್ರಮ ಕೆಡಿಸಿಬಿಟ್ಟರು ; ಇವರು ಇಲ್ಲದಿದ್ದರೆ ಇನ್ನು ಚೆನ್ನಾಗಿ ಮೂಡಿಬರುತ್ತಿತ್ತು , ಇವರಿಗೆ ಬುಧ್ಧಿ ಇಲ್ಲ ಇತ್ಯಾದಿ ಸಿಡುಕಬಹುದು. ಆದರೆ ಸಮಯದ ಅರಿವಿಲ್ಲದೆ ಭಾಷಣ ಮಾಡುವ ಮಹಾನುಭಾವರ ಭಾಷಣ ನಿಲ್ಲಿಸುವುದಕ್ಕೋ , ಅಸಂಬಧ್ಧ ವಾಗಿ ವೇದಿಕೆ ಮೇಲೆ ವರ್ತಿಸುವವರನ್ನು ಹತೋಟಿಗೆ ತರಲು ಇಂಥವರು ಎಷ್ಟೋ ಬಾರಿ ಸಹಾಯ ಮಾಡುತ್ತಾರೆ ! ಆಗ ಯಾರೂ ಇವರನ್ನು ಪ್ರಶಂಸಿಸುವವರಿರುವುದಿಲ್ಲ.ಕಾಲೇಜಿನ ಯಾವುದೇ ಕಾರ್ಯಕ್ರಮವಿರಲಿ ಈ ಕೆರಳುವ ಪ್ರತಿಭೆಗಳು ಇಲ್ಲದಿದ್ದರೆ ಅದು ಅಪೂರ್ಣ ಅಂತ ನನ್ನ ಭಾವನೆ . ಯಾರಿಗೆ ವೇದಿಕೆಯಲ್ಲಿ ಅವಕಾಶವಿಲ್ಲವೋ , ಅವರಿರುವ ಸ್ಥಳವನ್ನೇ ವೇದಿಕೆಯನ್ನಾಗಿ ಮಾಡುವ ಇವರು ಪುಕ್ಕಟೆ ಮನೋರಂಜನೆ ನೀಡುವುದಂತೂ ಸತ್ಯ .
ಕಾಲೇಜು ದಿನಗಳಲ್ಲಿ ಬಹುತೇಕ ಎಲ್ಲ ಹುಡುಗರೂ "ಕೆರಳುವ ಪ್ರತಿಭೆ" ಒಂದಲ್ಲ ಒಂದು ಸಂದರ್ಭದಲ್ಲಿ ಆಗಿಯೇ ಇರುತ್ತಾರೆ ! ಹುಡುಗರ ಗುಂಪಿನ ಸಿನಿಮಾ ಡ್ಯಾನ್ಸ್ ನಡುವೆ ಲಲನೆಯೊಬ್ಬಳು ಸುಳಿದಾಗ , ಕಾರ್ಯಕ್ರಮದ ಮಧ್ಯೆ ಪವರ್ ಕಟ್ ಆದರೆ , ಪ್ರಾಂಶುಪಾಲರು ಕಾಲೇಜಿಗೆ ಮರುದಿವಸ ರಜೆ ಘೋಷಣೆ ಮಾಡಿದಾಗ , ಹೀಗೆ ಹತ್ತು ಹಲವು ಸಂಧರ್ಭಗಳಲ್ಲಿ ತಮ್ಮ ಅಸ್ತಿತ್ವ ತೋರಿಸುವ ಇವರಲ್ಲಿ ನೀವೂ ಒಂದು ಕಾಲದಲ್ಲಿ ಒಂದು ಸಲ ಬಬ್ಬರಾಗಿದ್ದಿರಿ ತಾನೆ ??
ಈಗ ಹೇಳಿ ಕೆರಳುವ ಪ್ರತಿಭೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ??

Monday, April 28, 2008

ಖಾಸಗಿ ಬಸ್ ಪ್ರಯಾಣ ....

ಮೊನ್ನೆ ನಮ್ಮ ಅಕ್ಕನ ಮಗನ ಉಪನಯನಕ್ಕೆ ಹೋಗಲೇ ಬೇಕಾದ ಕಾರಣ ಮನೆಗೆ ಹೋಗಿದ್ದೆ .ಇತ್ತೀಚಿಗಿನ ದಿನಗಳಲ್ಲಿ ಬುಧವಾರ ಬಿಟ್ಟರೆ ಇನ್ನಾವ ದಿನವೂ ಬಸ್ ನಲ್ಲಿ ಮೊದಲೇ ಟಿಕೆಟ್ ಕಾದಿರಿಸದಿದ್ದರೆ ಮರಳಿ ಬರಲು ರಾತ್ರಿ ಬಸ್ ನಲ್ಲಿ ಸೀಟು ಸಿಗುವುದು ಸಾದ್ಯವೇ ಇಲ್ಲ . ಈ ಬಗ್ಗೆ ಚೆನ್ನಾಗಿ ಅರಿವಿದ್ದ ನಾನು ಹೋಗುವ ಮೊದಲೇ ಟಿಕೆಟ್ ಕಾದಿರಿಸಿದ್ದೆ . ಉಪನಯನ ಮುಗಿಸಿ ರಾತ್ರಿ ನಿಷ್ಮಿತಾ ಮೋಟರ್ಸ್ ನವರ "ಸುಗಮ " ಬಸ್ ನಲ್ಲಿ ರಾತ್ರಿ ೧೦ಕ್ಕೆ ಸರಿಯಾಗಿ ಹತ್ತಿದಾಗ "ಒಹ್ ಬೆಳಗ್ಗೆ ಬೇಗ ತಲುಪುತ್ತೇನಲ್ಲಾ" ಅಂದುಕೊಂಡು ಕುಳಿತೆ . ನಿಜವಾಗಿಯೂ ನಾನು ಬಸ್ ನಲ್ಲಿ ಕುಲಿತದ್ದಲ್ಲ ಏರ್ ಬಸ್ ನಲ್ಲಿ ಅಂತ ಗೊತ್ತಾಗಿದ್ದು ಬಸ್ ಹೋಗುವ ರೀತಿ ಕಂಡಾಗ ! ಬಸ್ ನ ಒಳಗೆ ೩೨ ಜನ ಪ್ರಯಾಣಿಕರಿದ್ದರೆ ಒಬ್ಬ ಕ್ಲೀನೆರ್ ಇದ್ದ. ಇವರೆಲ್ಲರಿಗೂ " ಪ್ರಾಣ " ಇದೆಯೆ೦ಬುದನ್ನು ಮರೆತಂತೆ ಆ ಡ್ರೈವರ್ ಬಸ್ಸನ್ನು ಓಡಿಸುತ್ತಿದ್ದ ! ನನಗೆ ನಿಜಕ್ಕೂ ಭಯವಾಗ ತೊಡಗಿತು .
ಒಂದೇ ಸಮನೆ ವೇಗವಾಗಿ ಹೋಗುತ್ತಿದ್ದ ಬಸ್ ಎಲ್ಲ ಹಳ್ಳ ಗಳನ್ನೂ ಹೈ ಜಂಪ್ ಮಾಡಿ ಸಾಗುತ್ತಿತ್ತು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ನನಗೆ ಸೀಟಿನಲ್ಲಿ ಕುಳಿತ ಅನುಭವವೇ ಇಲ್ಲ ! ಏಕೆಂದರೆ ಸದಾ ಹಾರುತ್ತ ಇದ್ದ ಬಸ್ ನಲ್ಲಿ ಕೂರುವುದೆಂತು ?
ಚಾರ್ಮಾಡಿ ಘಾಟಿ ಹತ್ತಿದ ಬಳಿಕ ಕೊಟ್ಟಿಗೆ ಹಾರದಿಂದ ಮುಂದೆ ಒಮ್ಮೆಲೇ ಬಸ್ ನಲ್ಲಿ ಮೇಲಿನ ಅಂಕಣದಲ್ಲಿ ಮಲಗಿದ್ದ ಪ್ರಯಾಣಿಕರು ಉದುರತೊಡಗಿದಾಗ ಕಣ್ಣು ಮುಚ್ಚಿ ಕೈಗೆ ಸಿಕ್ಕಿದ ಮುಂದಿನ ಸೀಟಿನ ರಾಡನ್ನು ಬಿಗಿಯಾಗಿ ಹಿಡಿದು ಕುಳಿತೆ. ಆದರೂ ಕಾಲಿನ ಮೇಲೆ ಯಾರದ್ದೋ ಒಂದು ಸೂಟಕೇಸ್ ರಪ್ಪನೆ ಬಂದು ಬಿದ್ದಿತು. ಚೀರಿಕೊಳ್ಳದೆ ಇನ್ನೇನ್ ಗೈಯಲಿ ?
ಅಷ್ಟು ಹೊತ್ತಿಗಾಗಲೇ ಒಂದು ಆಕ್ರಂದನ ಮುಂದಿನ ಸೀಟಿನಿಂದ ಕೇಳಿಸಿತು. ೪ ತಿಂಗಳು ತುಂಬಿದ ಗರ್ಭಿಣಿಯನ್ನು ಅವರ ಮನೆಯವರು ತವರು ಮನೆಗೆ ಕರೆದೊಯ್ಯಲು ಈ ಬಸ್ ಆರಾಮದಾಯಕ ಎಂದು ನಂಬಿ ಅದರಲ್ಲಿ ಬಂದಿದ್ದರು. ಆ ತಾಯಿಯ ಧ್ವನಿಯಾಗಿತ್ತದು! ಆ ತಾಯಿ ಮುಂದಕ್ಕೆ ಮುಗ್ಗರಿಸಿ ಹೊಟ್ಟೆಯ ಎಡ ಭಾಗಕ್ಕೆ ಏಟು ಬಿದ್ದಿತ್ತು. ಪಾಪ ಅವರ ನೋವು ಯಾರಿಗೆ ಬೇಕು . ಅಳುತ್ತಲೇ ಇದ್ದ ಆ ಹೆಂಗಸಿಗೆ ಏನಾಯಿತೋ ಎಂದು ಯಾರೂ ಕೇಳುವವರಿಲ್ಲ .

ನಮಗೆ ಆಪೀಸ್ನಲ್ಲಿ ಕೆಲಸದ ಒತ್ತಡವಿದೆ . ಬೇಗನೆ ತಲುಪಬೇಕು ನಿಜ . ಆದರೆ ನಮ್ಮ ಪ್ರಾಣಕ್ಕಿಂತ ನಾವು ತಲುಪಬೇಕಾದ ತಾಣ ಮುಖ್ಯವೇ ?
ಜನರ ಓಡಾಟ ಹೆಚ್ಚಾಗಿದೆ . ಅದರಂತೆ ಬಸ್ ಗಳ ಸಂಖ್ಯೆ ಹೆಚ್ಚಾಗಿದೆ . ಹಾಗೆಯೇ ಪೈಪೋಟಿಯೂ ಇದೆ ನಿಜ. ಆದರೆ ಪ್ರಯಾಣಿಕರ ಜೀವದ ಮೇಲೆ ಯಾವ ಭದ್ರತೆಯನ್ನು ಕೊಡದೆ ಹೋಗುವ ಇಂಥ ಬಸ್ ಗಳನ್ನೂ ನಿಲ್ಲಿಸುವವರಾರು ? ಬಸ್ ಗೆ ರೂ ೪೦೦/- ನ್ನು ತೆತ್ತ ಮೇಲೆ ನಮಗೆ ಯಾವುದೇ ರೀತಿಯಲ್ಲೂ ಒಳ್ಳೆಯ ಸೇವೆಯನ್ನು ಕೊಡದೆ ವಂಚಿಸುವ ಇಂಥವರಿಂದ ನಮಗೆ ಸೇವೆಯ ರೂಪದ ಹಿಂಸೆಯನ್ನು ಅನಿವಾರ್ಯವಾಗಿ ಅನುಭವಿಸಬೇಕಾಗಿದೆ . ಖಾಸಗೀ ಬಸ್ ನವರಿಗೆ ದುಡ್ಡು ಬೇಕು . ಆದರೆ ಸರಿಯಾದ ಜವಾಬ್ದಾರಿಯುತ ಡ್ರೈವರ್ ಒದಗಿಸುವಸ್ತು ಪ್ರಜ್ಞೆ ಇಲ್ಲ . ಪ್ರಯಾಣಿಕರ ಜೀವದ ಜೊತೆ ಮನ ಬಂದಂತೆ ಆಡುವ
ಖಾಸಗೀ ಬಸ್ ನ ಪ್ರಯಾಣವು ಯಾವ ರೀತಿಯಲ್ಲಿಯೂ ಸುಖಕರವಲ್ಲ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ .

Thursday, April 24, 2008

ಚುನಾವಣಾಧಿಕಾರಿಯಾಗಿ ನಾನು ...


ಚುನಾವಣೆ ಬಂತೆಂದರೆ ಸಾಕು . ರಾಜಕಾರಣಿಗಳು ನಿದ್ದೆಗೆಟ್ಟು ತಮ್ಮ ಪೀಠವನ್ನು ಭದ್ರ ಪಡಿಸಲು ಸರ್ವ ಸನ್ನಧ್ಧರಾಗುತ್ತಾರೆ. ಇದು ಎಲ್ಲರಿಗೂ ತಿಳಿದ ವಿಚಾರವೇ . ಆದರೆ ಇಲ್ಲಿ ನಾನು ಹೇಳ ಹೊರಟಿರುವುದು ರಾಜಕಾರಣಿಗಳ ಬಗೆಗಲ್ಲ . ಚುನಾವಣಾಧಿಕಾರಿ ನನ್ನ ಮೊದಲ ಅನುಭವದ ಕುರಿತು ಎರಡು ಮಾತುಗಳನ್ನು ಅಷ್ಟೆ.

ಚುನಾವಣೆ ಬಂತೆಂದರೆ ಸಾಕು ಎಲ್ಲ ಅಧ್ಯಾಪಕರಿಗೂ, ಉಪನ್ಯಾಸಕರಿಗೂ ಗ್ರಹಚಾರ ವಕ್ಕರಿಸಿತೆಂದೇ ಅರ್ಥ ! ಯಾಕೆ೦ದರೆ ತಿಪ್ಪರಲಾಗ ಹಾಕಿದರೂ ಚುನಾವಣಾ ಪ್ರಾತ ತಪ್ಪಿಸಿಕೊಳ್ಳಲು ಕಷ್ಟ . ಕಳೆದ ಸಲದ ಚುನಾವಣೆ ನಡೆದಾಗ ನಾನು ಸುಳ್ಯದಲ್ಲಿ ಉಪನ್ಯಾಸಕನಾಗಿ (೨೦೦೨) ಕೆಲಸ ಮಾಡುತ್ತಿದ್ದ ಸಮಯ. ಮೊದಲ ಬಾರಿಗೆ ಚುನಾವಣಾಧಿಕಾರಿ (ಪ್ರಿಸೈಡಿಂಗ್ ಆಫೀಸರ್ ) ಕಾರ್ಯ ನಿರ್ವಹಿಸಬೇಕೆಂಬ ಸರ್ಕಾರದ ಆದೇಶವನ್ನು ಹೊತ್ತ ಪತ್ರವೊಂದನ್ನು ನಮ್ಮ ಜವಾನ ತಂದು ಕೊಟ್ಟಾಗ ಸಂಭ್ರಮ ಪಟ್ಟವರಲ್ಲಿ ನಾನೂ ಒಬ್ಬ . ಒಂದು ದಿನಕ್ಕಾದರೂ ಜಿಲ್ಲಾ ದ೦ಡಾಧಿಕಾರಿಯ ಸಮಾನ ಅರ್ಹತೆಯ ಪದವಿ ಸಿಗುತ್ತದಲ್ಲ ಎಂಬ ಉತ್ಸಾಹ ;ಸಂತೋಷ , ಪುಳಕ ಒಂದು ಕಡೆ ! ಮೊದಲ ಬಾರಿಗೆ ದೊಡ್ಡ ಜವಾಬ್ದಾರಿ ಹೇಗೆ ನಿರ್ವಹಿಸುವುದೆಂಬ ಭೀತಿ ಒಂದೆಡೆ !

ಸರಿ. ೨೭ ನೇ ತಾರೀಕು ಬೆಳಗ್ಗೆ ೧೦ ಗಂಟೆಗೆ ಸರಿಯಾಗಿ ಸುಳ್ಯದ ಪುರಭವನದಲ್ಲಿ ತರಬೇತಿಗಾಗಿ ಒಹ್ಇದು ನನಗೆ


ಚುನಾವಣಾಧಿಕಾರಿ ಇರಬೀಕೆಂದು ಆದೇಶದ ಮೇರೆಗೆ ನಾನು ಹಾಗೂ ಭಕ್ತಿಯಿ೦ದ ಮಿತ್ರರೆಲ್ಲ (ನನ್ನಂತೆ ಗ್ರಹಚಾರ ಕೆಟ್ಟವರು! ) ಅಲ್ಲಿ ಸೇರಿದೆವು. ಮೊದಲ ಬಾರಿಗೆ ವಿಧಾನ ಸಭಾ ಹಾಗೂ ಲೋಕ ಸಭಾ ಚುನಾವಣೆಗೆ ವಿಧ್ಯುನ್ಮಾನ ಮತಯಂತ್ರಗಳನ್ನು ಬಳಸುತ್ತಿರುವುದರಿಂದ ಅದರ ಬಗ್ಗೆ ಸಾಕಷ್ಟು ತರಬೇತಿ /ಮಾಹಿತಿ ನೀಡಲು ಅಲ್ಲಿ ನಮ್ಮನ್ನೆಲ್ಲಾ ಒಟ್ಟು ಸೇರಿಸಿದ್ದರು.

ಮೊದಲಿಗೆ ಮತದಾನ ಯಂತ್ರದ ಮಾಹಿತಿ ಪುಸ್ತಕ ಕನ್ನಡ/ ಇಂಗ್ಲಿಷ್ ಭಾಷೆಯಲ್ಲಿ ನಮಗೆಲ್ಲ ಒದಗಿಸಲಾಯಿತು.


ನಿಜವಾಗಿ ಒಂದು ಸರಕಾರೀ ಸಭೆ ಹೇಗಿರುತ್ತದೆ ಎಂಬ ಸ್ಪಷ್ಟ ಚಿತ್ರಣ ನನಗೆ ದೊರಕಿದ್ದು ಅದೇ ಮೊದಲು .


ಒಂದು ಹನಿ ನೀರನ್ನೂ ಕೊಡದೆ ಮದ್ಯಾಹ್ನ ೧.೨೦ರ ವರೆಗೆ ನಿರಂತರ ಕೊರೆತ !



ನಡು ನಡುವೆ ಮೇಲಧಿಕಾರಿಗಳನ್ನು ವಿಶೇಷವಾಗಿ ಹೊಗಳಿ ಅವರ ಕೃಪಾ ಕಾರುಣ್ಯ ಪಡೆಯಲು ಹಾತೊರೆಯುವ ಕಿರಿಯ ಅಧಿಕಾರಿಗಳು , ಆಗ ತಾನೆ ಮೈಕ್ ಕೈಗೆ ಸಿಕ್ಕಿ ಸಿಕ್ಕಿದ್ದೇ ಅವಕಾಶ ಎಂದು ಕೊರೆಯುವ ಕೆಲ ಹಿರಿ ಕೂಗಿದಾಗಇನ್ನೊಂದು ಕಡೆ ತಮ್ಮನ್ನು ಬಿಟ್ಟು ಬಿಡಿ ಎಂದು ಗೋಗರೆಯುತ್ತಿದ್ದ ಮಧ್ಯ ವಯಸ್ಕ ಶಿಕ್ಷಕಿಯರು ! ಇದನ್ನೆಲ್ಲಾ ನೋಡಿದಾಗ ಇದೊಂದು ಭಯಂಕರ ಕೆಲಸವೇ ಇರಬೆಕೆ೦ಬುದು ಎಂಥವನಿಗೂ ಅರ್ಥವಾಗುತ್ತಿತ್ತು !


ಬಂದದ್ದೆಲ್ಲ ಬರಲಿ ನೋಡೇ ಬಿಡೋಣ ಎಂದು ಬೆಳಗ್ಗಿನಿಂದ ಸಂಜೆಯವರೆಗೆ ಚೆನ್ನಾಗಿ "ತರಬೇತಿ " ಪಡೆದು ಮರಳಿದೆವು .


***

ಚುನಾವಣೆಯ ಮೊದಲು ನಮ್ಮನ್ನೆಲ್ಲಾ ನೆಹರೂ ಸ್ಮಾರಕ ಕೊಡಬೇಕು ಕರೆಸಿದ ಮುಖ್ಯ ಚುನಾವಣಾಧಿಕಾರಿ ಒಬ್ಬೊಬ್ಬರನ್ನಾಗಿ ಸರಕಾರೀ ಬಸ್ ಗೆ ಲೋಡ್ ಮಾಡ ತೊಡಗಿದರು. ಮೊದಲನೆ ಬ್ಯಾಚ್ ನಲ್ಲಿ ನಾನಿದ್ದ ಕಾರಣ ಮಡಿಕೇರಿ ವಿಧಾನ ಸಭೆ/ಲೋಕ ಸಭಾ ಕ್ಷೇತ್ರಕ್ಕೆ ಕರ್ತವ್ಯ ನಿರ್ವಹನೆಗೆಂದು ಮಡಿಕೇರಿಯ ಜ ಕಾರಿಯಪ್ಪ ಸ್ಮಾರಕ ಮಹಾವಿದ್ಯಾಲಯಕ್ಕೆ ತಲುಪಿಸಲಾಯಿತು. ಮಡಿಕೇರಿಯ ಸೊಳ್ಳೆಗಳ ಸಂಪೂರ್ಣ ಪರಿಚಯ ಮಾಡಿದ ನಂತರ ಮರುದಿವಸ ಬೆಳಗ್ಗೆ ನನ್ನೊಂದಿಗೆ ಸಹಾಯಕರಾಗಿ ನಮ್ಮ ಗುಂಪಿನ ಇತರರು (ಫರ್ಸ್ಟ್ ಪೋಲಿಂಗ್, ಸೆಕೆಂಡ್ ಪೋಲಿಂಗ್ , ಥರ್ಡ್ ಹೋಗುವ ಆಫೀಸೆರ್ಸ್ , ಒಬ್ಬ ಪೊಲೀಸ್ ಕಾನ್ಸ್ಟೇಬಲ್ ) ಸೇರಿಕೊಂಡರು . ನಮಗೆ ಕದಗದಾಳು ಎಂಬ ಮತದಾನ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲು ಸೂಚಿಸಿದ್ದರು . ಅಂತೆಯೇ ಮತದಾನದ ಮುನ್ನ ದಿನ ಆ ಮತದಾನ ಕೇಂದ್ರ ಸೇರಿಕೊಂಡೆವು.


ಅಲ್ಲಿನ ಪರಿಸ್ಥಿತಿಯನ್ನು ನೋಡಿದಾಗ ನಾವೆಲ್ಲ ಹೌಹಾರಿ ಹೋದೆವು !

ಒಂದು ಚಿಕ್ಕ ಅಂಗನವಾಡಿ ಶಾಲೆಯಲ್ಲಿ ಬೂಥನ್ನು ನಿರ್ಮಿಸಬೇಕಾಗಿತ್ತು . ನಮ್ಮ ಕೈಯ್ಯಲ್ಲಿ ೨ ವಿಧ್ಯುನ್ಮಾನ ಮತಯಂತ್ರ , ಇತರ ಕಡತಗಳು ಇದ್ದುವು. ಎಲ್ಲವನ್ನು ಜತನದಿಂದ ನೋಡಿಕೊಳ್ಳ ಬೇಕೆ೦ಬ ಕಟ್ಟಪ್ಪಣೆ ಇದ್ದುದರಿಂದ ಕೈಯಲ್ಲೇ ಹಿದಿದುಕೊ೦ದು ಅದರೊಳಗೆ ನಾವೆಲ್ಲ ಹೊಕ್ಕೆವು . ಸರಿಯಾಗಿ ೪ ಜನರಿಗೆ ಕಾಲು ನೀಡಿ ಕೂರಲೂ ಜಾಗವಿಲ್ಲದ ಆ ರೂಮಿನಲ್ಲಿ ಹೇಗೆ ನಿಭಾಯಿಸುವುದು ಎಂದೇ ನನಗೆ ಯೋಚನೆಯಾಗ ಹತ್ತಿತು. ನನ್ನೊ೦ದಿಗಿದ್ದ ಫರ್ಸ್ಟ್ ಪೋಲಿಂಗ್ ಆಫೀಸರ್ ಈ ಹಿಂದೆ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ ಅನುಭವದಿಂದ ನನ್ನನ್ನು ಚೆನ್ನಾಗಿ ಹೆದರಿಸ ತೊಡಗಿದರು !! ಅನಿವಾರ್ಯವಾಗಿ ಆ ರಾತ್ರೆಯನ್ನು ಆ ೩ ಮಂದಿ ಸಹೋದ್ಯೋಗಿಗಳೊಂದಿಗೆ ಆ ಪುಟ್ಟ ಕೋಣೆಯಲ್ಲಿ ಸೊಳ್ಳೆಗಳ ಸಂಗೀತದೊಂದಿಗೆ ಮಲಗಿ ಕಳೆದದ್ದಾಯಿತು . ಬೆಳಗ್ಗೆ ಎದ್ದು ಪ್ರಾತ: ಕರ್ಮಕ್ಕೆ ಶೌಚಾಲಯ ಹುಡುಕಿದರೆ ಬಾಗಿಲಿಲ್ಲದ ಶೌಚಾಲಯ ನಮ್ಮನ್ನು ಸ್ವಾಗತಿಸುತ್ತಿತ್ತು !!
ಯಾವುದನ್ನಾದರೂ ತಡೆದುಕೊಳ್ಳಬಹುದು ದೇಹಭಾದೆಯನ್ನಲ್ಲ ಎಂಬ ಸತ್ಯ ನನಗೆ ಅಲ್ಲಿ ಸ್ಪಷ್ಟವಾಗಿ ತಿಳಿಯಿತು !! ಬೆಳಗಿನ್ನೂ ಬೆಳಕು ಹರಿಯದಿದ್ದ ಕಾರಣ ಹೇಗೋ ಸುಧಾರಿಸಿಕೊಂಡೆವು ! ೬.೩೦ಕ್ಕೆ ಸರಿಯಾಗಿ ಸಿದ್ದರಾದ ನಾವು ಕುರುಕ್ಷೇತ್ರದಲ್ಲಿ ಯುದ್ದಕ್ಕೆ ಸಿದ್ದರಾದವರಂತೆ ವಿಧ್ಯುನ್ಮಾನ ಮತ ಯಂತ್ರವನ್ನು ಸಿದ್ದಗೊಳಿಸಿ ಮತದಾರ ಮಹಾ ಪ್ರಭುಗಳಿಗೆ ತಮ್ಮ ಮೂಲಭೂತ ಹಕ್ಕನ್ನು ಚಲಾಯಿಸಲು ಅನುವು ಮಾಡಿ ಕೊಟ್ಟೆವು. ಆಗ ಒಬ್ಬ ವ್ಯಕ್ತಿ ಕೈಯಲ್ಲಿ ಒಂದು ಹೂವಿನ ಹಾರ, ಊದುಕಡ್ಡಿ , ಹಿಡಿದುಕೊ೦ಡು ಬಂದು ಮತ ಯಂತ್ರಕ್ಕೆ ಅದನ್ನಿಟ್ಟು ಭಕ್ತಿಯಿ೦ದ (?) ನಮಸ್ಕರಿಸಿ ತನ್ನ ಆಯ್ಕೆಯ ಅಭ್ಯರ್ಥಿಗೆ ಮತ ನೀಡಿದ ಬಳಿಕ ಒಬ್ಬೊಬ್ಬರಾಗಿ ಜನ ಸಂದೋಹ ಸೇರತೊಡಗಿತು .
ಇಷ್ಟು ಹೊತ್ತಿಗಾಗಲೇ ೯ ಬೆಳಗ್ಗೆ ಗಂಟೆ . ಹೊಟ್ಟೆ ಒಂದೇ ಸಮನೆ ತಾಳ ಹಾಕ ತೊಡಗಿತು . ಹಿಂದಿನ ದಿನ ನಮ್ಮ ಅವಸ್ಥೆಯನ್ನು ಗಮನಿಸಿದ ಪುಣ್ಯಾತ್ಮರೊಬ್ಬರು ನಮಗೆಲ್ಲ ಇಡ್ಲಿ ಸಾಂಬಾರ್ ವ್ಯವಸ್ಥೆ ಮಾಡಿದರು. ಆ ಪ್ರದೇಶದಲ್ಲಿ ಒಂದು ಹೋಟೆಲ್ ಆಗಲೀ , ಕನಿಷ್ಠ ಒಂದು ಗೂದಂಗಡಿಯಾಗಲೀ ಇಲ್ಲದ್ದು ನಮ್ಮ ದುರ್ದೈವ !
ಪ್ರಿಸಿದಿಂಗ್ ಆಫೀಸರ್ ಕರ್ತವ್ಯ , ಜವಾಬ್ದಾರಿ ತುಂಬಾ ಗುರುತರವಾದದ್ದು .
ಎಸ್ಟು ಜನ ಮತದಾನ ಮಾಡಿದರು ? ಗಂಡಸರೆಷ್ಟು ? ಹೆಂಗಸರೆಷ್ಟು ? ಅಂಗವಿಕಲರು , ಅಶಕ್ತರು ಇವರೆಲ್ಲರ ಪಟ್ಟಿಯನ್ನು ಪ್ರತ್ಯೇಕವಾಗಿ ಕೊಡಬೇಕು . ಒಟ್ಟು ೬೭೮ ಸಹಿ ಹಾಕಬೇಕು. ಎಲ್ಲ ಕೆಲಸ ಮಡಿದ ಮೇಲೆ ತಲೆ ಚಿತ್ರಾನ್ನ್ನ ವಾಗಿ ಬಿಡುವಷ್ಟು ಕೆಲಸ ಇದೆ. ಏನೇ ಸಮಸ್ಯೆ ಬಂದರೂ ಕೂಡಲೇ ಪರಿಹಾರ ಮಾಡಬೇಕು . ಪೋಲಿಂಗ್ ಏಜೆಂಟ್ ಕೇಳುವ ಅವನ್ನು ಕಂಟ್ರೋಲ್ ಮಾಡುವ ಕೆಲಸವೂ ಕೆಲವೊಮ್ಮೆ ಬರುತ್ತದೆ. ಒಬ್ಬ ಪೊಲೀಸ್ ನಮಗೆ ಮೂವರಿಗೆ ರಕ್ಷಣೆ ಕೊಡಲು ಇರುತ್ತಾರೆ. ಒಂದು ಗುಂಪು ಜನ ಬಂದು ಧಾಳಿ ಮಾಡಿದರೆ ಮೊದಲು escape ಆಗುವುದೂ ಅವರೇ!
ಅಂತೂ ಸಾ೦ಗವಾಗಿ ಮತದಾನ ಮುಗಿಸಿ ಮರಳಿ ಮತ ಯಂತ್ರಗಳನ್ನು ಒಪ್ಪಿಸಲು ಬಂದಾಗ ಅಲ್ಲಿನ ನೂಕು ನುಗ್ಗಲು ನೋಡಿ ನಮ್ಮ ತಲೆ ತಿರುಗಿತು . ಒಮ್ಮೆ ಇಲ್ಲಿಂದ ಪಾರು ಮಾಡು ಶಿವನೇ ... ಎಂದು ದೇವರಲ್ಲಿ ಬೇಡಿಕೊಂಡೆ. ಭಗವಂತನಿಗೆ ನನ್ನ ಕೂಗು ಕೇಳಿಸಿತು ; ನನ್ನ ಹೆಸರನ್ನು ಮೈಕ್ ನಲ್ಲಿ ಕೂಗಿದಾಗ " ಬದುಕಿದೆಯಾ ಬಡ ಜೀವವೇ " ಎಂದು ಮರಳಿ ಕೊಟ್ಟು ಬಂದೆ . ಒಟ್ಟಿನಲ್ಲಿ
ಅನುಭವವು ಸಿಹಿಯಲ್ಲ ಎಂಬುದು ೧೦೦% ಖಚಿತವಾಯಿತು.
ಈಗ ಮತ್ತೆ ಬಂದಿದೆ ಚುನಾವಣೆ ! ಮತ್ತೆ ಪುನಾ ಬಂದಿದೆ ಚುನಾವಣಾಧಿಕಾರಿ ಕರೆಯೋಲೆ !!
ಈ ಸಲ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ . ಎಲ್ಲಿದೆಯೋ ಗೊತ್ತಿಲ್ಲ ; ಪುನ: ಯಾರು ಸಹಾಯಕರಾಗಿ ಸಿಗುವರೋ ?
ಭಯ ಮಿಶ್ರಿತ ಕುತೂಹಲದಲ್ಲಿದ್ದೇನೆ.
ಹೋಗಿ ಬಂದ ಮೇಲೆ ಹೀಗಾಯಿತು ಅಂತ ವಿವರಿಸುತ್ತೇನೆ . ಅಲ್ಲಿವರೆಗೆ ನಮಸ್ಕಾರ....

Wednesday, April 23, 2008

ಬಲಿಪರಿಗೆ ಪ್ರಶಸ್ತಿಯೂ ಕರ್ನಾಟಕದ ಸರಕಾರವೂ ....


ಕೇರಳ ಸರಕಾರದಿ೦ದ ಬಲಿಪರಿಗೆ ಪ್ರಶಸ್ತಿ ಪ್ರಕಟವಾದಾಗ ಅಭಿಮಾನಿಗಳಿಗೆ ಸಂತಸವಾದದ್ದು ಬಲಿಪರನ್ನು ಆ ಸಂಮಾನಕ್ಕೆ ಆಯ್ಕೆ ಮಾಡಿದ್ದಕ್ಕಿಂತಲೂ ಆ ಪ್ರಶಸ್ತಿಯ ಆಯ್ಕೆ ಮಂಡಳಿಯ ಬಗ್ಗೆ !

ಬಹುತೇಕ ಕೇರಳಿಗರೇ ಇರುವ ಆಯ್ಕೆ ಮಂಡಳಿಯ ಸದಸ್ಯರಿಗೆ ದೂರದ ಕರ್ಣಾಟಕದ ಮೂಡಬಿದರೆಯ ಬಳಿಯ ನೂಯಿ ಮನೆಯಲ್ಲಿ ವಾಸವಾಗಿರುವ ಬಲಿಪರನ್ನು ಗುರುತಿಸುವುದಕ್ಕಾಗುತ್ತದೆ.ಬಲಿಪ ಭಾಗವತರು ಕಾಸರಗೋಡು ಜಿಲ್ಲೆಯ ಪೆರ್ಲ ಸಮೀಪದ ಪಡ್ರೆಯಲ್ಲಿ ಜನಿಸಿದ್ದಾರೆ ಎಂಬುದನ್ನು ಹೊರತು ಪಡಿಸಿದರೆ ಅವರು ತಮ್ಮ ಸುದೀರ್ಘ ವರ್ಷಗಳ ಯಕ್ಷಗಾನ ಕಲಾ ಸೇವೆಯನ್ನು ನಡೆಸಿದ್ದು ನಮ್ಮ ಈ ಕನ್ನಡ ನಾಡಿನಲ್ಲಿ ! ಆದರೆ ನಮ್ಮ ಸರಕಾರಕ್ಕಾಗಲೀ ಸ್ಥಾಪಿತ ಹಿತಾಸಕ್ತಿಯ ಮುಖಂಡರಿಗಾಗಲೀ ಇವರ ಈ ಸೇವೆಯ ಬಗ್ಗೆ ಒಂದಿಷ್ಟು ಮಾಹಿತಿಯೂ ಇಲ್ಲ ! ಕನ್ನಡಿಗರಾದ ನಮಗೆ ಇದು "ಎಮ್ಮೆಯ" ವಿಷಯವಲ್ಲವೇ ?

ಅಥವಾ ಬಲಿಪರ ಸೇವೆಯನ್ನು ಗುರುತಿಸಬಲ್ಲಷ್ಟು ಹಿರಿದಾದ ಪ್ರಶಸ್ತಿಯ ಕೊರತೆಯಿರಬಹುದೇ ?

ಏನಿದ್ದರೂ ನಮ್ಮ ಸರಕಾರೀ ಅಧಿಕಾರಿಗಳು "ನುಂಗು"ವುದನ್ನು ಬಿಟ್ಟು ಇನ್ನೇನನ್ನೂ ಮಾಡುವುದಿಲ್ಲ ಎಂಬ ಸತ್ಯ ಎಲ್ಲರಿಗೂ ತಿಳಿದೇ ಇದೆ .

ಪ್ರತಿಭೆಯನ್ನು ಗುರುತಿಸುವಲ್ಲಿ ಕೇರಳ ಸರಕಾರವು ಮುಂದಾದದ್ದು ಅಲ್ಲಿನವರ ನಿಜವಾದ ಅಭಿಮಾನವನ್ನು ತೋರಿಸುತ್ತದೆ. ಬಲಿಪರ ಅಭಿಮಾನಿಗಳಿಗೆಲ್ಲ ಕೇರಳ ಸರಕಾರವು ಸಂತಸವನ್ನುಂಟು ಮಾಡಿದೆ.

ವಿದ್ವಾನ್ ಸರ್ವತ್ರ ಪೂಜ್ಯತೆ ಎಂಬುದು ಸಾರ್ವಕಾಲಿಕ ಸತ್ಯ .

Friday, April 18, 2008

ಸರಪಾಡಿ ಶಂಕರನಾರಾಯಣ ಕಾರಂತರು



ಯಕ್ಷಗಾನವು ಹಲವು ಮಂದಿ ಭಾಗವತರ ಕೊಡುಗೆಯಿಂದ ಸಂಪನ್ನವಾಗಿದೆ . ಸರಪಾಡಿ ಶಂಕರನಾರಾಯಣ ಕಾರಂತರು ಸಂಗೀತ ಶೈಲಿಯ ಭಾಗವತಿಕೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು . ಧರ್ಮಸ್ಥಳ , ಕಟೀಲು ಮೇಳಗಳಲ್ಲಿ ತಿರುಗಾಟ ನಡೆಸಿದ ಇವರು ಸದ್ಯ ಮಂಗಳೂರಿನ ಬಳಿ ಕುಳಾಯಿಯಲ್ಲಿ ವಾಸವಾಗಿದ್ದಾರೆ. ವೃತ್ತಿ ಮೇಳವನ್ನು ಬಿಟ್ಟು ೧೨ ವರ್ಷಗಳಿಂದ ಪುರೋಹಿತ್ಯವನ್ನು ಮಾಡುತ್ತಿದ್ದಾರೆ .

ಹಳೆಯ ಶೈಲಿಯ ಒಳ್ಳೆಯ ಹಾಡನ್ನು ಕೇಳಬೀಕಿದ್ದರೆ ಇವರ ಹಾಡನ್ನು ಕೇಳಿ ಆನಂದಿಸಬಹುದು.



Wednesday, April 16, 2008

ಮಹಿಳಾ ಭಾಗವತರು ..


ಶ್ರೀಮತಿ ಲೀಲಾವತಿ ಬೈಪಡಿತ್ತಾಯರು ನಮ್ಮ ಮನೆಗೆ ಬಂದಿದ್ದಾಗ ಹೇಳಿದ್ದು "ಇತ್ತೀಚೆಗೆ ಮಾಡಿದ್ದೇ ಯಕ್ಷಗಾನ ಅಂತ ಆಗಿದೆ. ಯಾವಾಗ ಯಕ್ಷಗಾನವು ವ್ಯಾಪರೀಕರಣವಾಗತೊಡಗಿತೋ ಬೈಪಾಡಿತ್ತಾಯ ಯಕ್ಷಗಾನದ ಒಂದೊಂದೇ ಕ್ರಮಗಳು ಗಾಳಿಗೆ ತೂರಲ್ಪಟ್ಟು ಈಗ ಮಾಡಿದ್ದೆಲ್ಲ ಯಕ್ಷಗಾನ ಅನ್ನುವಂತಾಗಿದೆ !!"


ಪಟ ಪಟ ಗಾಳಿ ಪಟ ....... ಪದ್ಯವೂ ಬಡಗಿನ ರಂಗಸ್ಥಳದಲ್ಲಿ ಕಂಡಾಗ ನನಗೂ ಮೇಲಿನ ಮಾತುಗಳು ಸತ್ಯ ಅನಿಸಿತ್ತು.

ತೆಂಕು ತಿಟ್ಟಿನಲ್ಲಿ ಮೊದಲ ಮಹಿಳಾ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಡಿತ್ತಾಯರು ತಮ್ಮ ಪತಿ ಶ್ರೀ ಹರಿನಾರಾಯಣ ಬೈಪಡಿತ್ತಾಯರಿಂದ ಬಾಗವತಿಕೆಯನ್ನು ಕಲಿತು ಸುಬ್ರಮಣ್ಯ , ಮದೂರು , ಅಳದಂಗಡಿ ಮೇಳಗಳಲ್ಲಿ ತಿರುಗಾಟ ನಡೆಸಿ ಅನುಭವ ಸಂಪನ್ನರಾಗಿದ್ದಾರೆ. ಯಾವುದೇ ಪುರಾಣಿಕ ಪ್ರಸ೦ಗವನ್ನು ಆಡಿಸಲು ಸಮರ್ಥ ರಾಗಿರುವ ಇವರು ಯಕ್ಷಗಾನ ಬಾಗವತಿಕೆಯನ್ನು ಕಲಿಸುತ್ತಿದ್ದು ಹಲವಾರು ಶಿಷ್ಯವರ್ಗ ಹೊಂದಿದ್ದಾರೆ .
ಇವರ ಹಾಡನ್ನು ಇಲ್ಲಿ ಕೇಳಿ ಆನಂದಿಸಬಹುದು.
http://oyakshagana.googlepages.com/audios.htm

Saturday, April 5, 2008

ಬ್ಯಾನರ್ ಬಾಬಣ್ಣ ....

ಮೊನ್ನೆ ತಾಳಮದ್ದಲೆಯೊಂದರಲ್ಲಿ ಶ್ರುತಿ ಹಿಡಿದಿದ್ದ ಬಾಬಣ್ಣನನ್ನು ಕಂಡಾಗ ನನಗೆ ಆಶ್ಚರ್ಯವಾಯಿತು . ಒಂದು ದಿನವು ಬಿಡುವಿಲ್ಲದೆ ಸದಾ ಬ್ಯಾನರ್ ಬರೆಯುತಿದ್ದ ಬಾಬಣ್ಣ ಇವರೆಯಾ ? ಕುರುಚಲು ಗಡ್ಡ , ಕಂದಿಹೋದ ಕಣ್ಣು , ಪೇಲವ ಮುಖವನ್ನು ಹೊಂದಿದ್ದ ಅವರನ್ನು ನಿಜಕ್ಕೂ ನಾನು ಅಲ್ಲಿ ನಿರೀಕ್ಷಿಸಿರಲಿಲ್ಲ !
ಯಾವುದೇ ಸಭೆ ಸಮಾರಂಭಗಳಿಗೆ ಹೋದರು ಕೂಡಲೇ ಅಲ್ಲಿ ಮನ ಸೆಳೆಯುವುದು ಬಾಬಣ್ಣನ ಬ್ಯಾನರ್ ! ಕಾರ್ಯಕ್ರಮಕ್ಕೆ ಕಳೆ ನೀಡುತ್ತಿದ್ದ ಅವರ ವಿವಿಧ ಶೈಲಿಯ ಬರಹಗಳನ್ನೋಳಗೊಂಡ ಬ್ಯಾನರ್ ಗಳಿಗೆ ಬಹಳ ಬೇಡಿಕೆ . ಚುನಾವಣೆ ಬಂತೆಂದರೆ ಸಾಕು ನಮ್ಮ ಬಾಬಣ್ಣನಿಗೆ ತಲೆ ಕೆರೆದುಕೊಳ್ಳುಲೂ ಪುರುಸೋತ್ತಿರದಷ್ಟು ಕೆಲಸ . ಎಷ್ಟೇ ಒತ್ತದವಿದ್ದರೂ ಸಮಯಕ್ಕೆ ಸರಿಯಾಗಿ ಬಾಬಣ್ಣನ ಬ್ಯಾನರ್ ರೆಡಿ ! ಸ್ವಂತಕ್ಕೆ ಹೇಳಿಕೊಳ್ಳುವವರಾರೂ ಬಾಬಣ್ಣನಿಗೆ ಇಲ್ಲ. ಮೊದ ಮೊದಲು ಮಹಾಲಿ೦ಗೇಶ್ವರ ದೇವಸ್ಥಾನ ದ ಬಡಗು ಗೋಪುರದಲ್ಲಿ ಮಲಗುತ್ತಿದ್ದ ಅವರಲ್ಲಿ ಒಂದು ಪೆಟ್ಟಿಗೆ ತುಂಬ ಬಣ್ಣ , ಬ್ರಶ್ ಇತ್ಯಾದಿ ಪರಿಕರ ಇತ್ತು. ಯಕ್ಷಗಾನದಲ್ಲಿ ಬಣ್ಣದ ವೇಷ ಮಾಡುತ್ತಿದ್ದುದರಿಂದ ನಮಗೆಲ್ಲ ಬಾಬಣ್ಣ ಚಿರಪರಿಚಿತ ವ್ಯಕ್ತಿ . ಅವರ ವೇಷ ನೋಡಲು ಭಯಾನಕ ವಾಗಿರುತ್ತಿತ್ತು.

" ದಾನೆ ಬಾಬಣ್ಣ ಎಂಚ ಉಲ್ಲರ್ ? "

"ಮಿತ್ತ್ ಪೋಪುನ ಏಪ ಅಂದ್ ಲೆಕ್ಕ ಪಾದೊಂದುಲ್ಲೇ "
"ಅಂಚಲಾ ಇತ್ತೆ ದಾದ ಅಂಡ್ ?" ಕುತೂಹಲ ತಡೆಯದೆ ಕೇಳಿಯೇ ಬಿಟ್ಟೆ .
ನಾನಾ ದಾನೆ ಅವರ ಬಾಕಿ ಸ್ವಾಮೀ ? ೫ ಪ್ಲೆಕ್ಷ್ ಅಂಗಡಿ ಈ ಊರುದ್ ಆಯಿಬುಕ್ಕ ನನ್ ದಾನೆ ಆವೋದು ?

ತಲೆಗೆ ಹೊಡೆದ ಹಾಗೆ ಆಯಿತು .
ಅರ್ಧ ತಾಸಿನ ಒಳಗೆ ಕಂಪ್ಯೂಟರ್ ನಲ್ಲಿ ಪ್ಲೆಕ್ಷ್ ಬ್ಯಾನರ್ ತಯಾರಾಗುವಾಗ ದಿನವಿಡೀ ಯಾರು ಕಾಯುತ್ತಾರೆ ?

ಬಾಬಣ್ಣ ನ ಹಾಗೆ ಹಲವು ಮಂದಿ ಮೂಲೆ ಗುಂಪಾಗಿ ಹೋಗುತ್ತಿದ್ದಾರೆ . ಹೊಟ್ಟೆ ಪಾಡಿಗೆ ಬೇರೆ ಕೆಲಸವನ್ನದರೂ ಮಾಡಲು ಕೆಲಸ ಸಿಗುತ್ತಿಲ್ಲ . ಜಾಗತೀಕರಣ ಇಂದು ಜನರನ್ನು " ವಿಶ್ವ ಮಾನವ " ನನ್ನಾಗಿಸುತ್ತಿದೆ .
ಬೇಕಿತ್ತೆ ಈ ಕಂಪ್ಯೂಟರ್ ?
ಬಡವನ ಸಮಾಧಿಯ ಮೇಲೆ ಕುಳಿತು ಹೋಳಿಗೆ ತಿನ್ನುತ್ತಾ " ತುಪ್ಪ ರಜ್ಜ ವಾಸನೆ ಬತ್ತೋ ಬಾವಯ್ಯ ? " ಅಂತ ಕೇಳುವ ಹಾಗೆ ಆಯ್ತಲ್ಲಾ ?
ಎಲ್ಲ ಗುಡಿ ಕೈಗಾರಿಕೆಗಲೂ ಪರಮಾತ್ಮನ ಅಡಿ ಸೇರುತ್ತಿದೆ .
ಏನು ಮಾಡಲಿ ಎಂದು ಯೋಚಿಸುತ್ತಿರುವಾಗಲೇ ಬಲಿಪಜ್ಜ ತೆಗೆದ ಪದ್ಯ
" ಹರನೆ ಶಂಕರನೇ ಮುಂದೆನ್ ಗೈಯಲಿ ........."

Monday, March 17, 2008

ಸಂಪಾಜೆ........

ಸಂಪಾಜೆ .... ಎಂದರೆ ಯಕ್ಷ ಪ್ರಿಯರಿಗೆ ಮೊದಲು ನೆನಪಾಗುವುದೇ ಶೀನಪ್ಪ ರೈ ಯವರು !





ಯಕ್ಷಗಾನ ಅಭಿಮಾನಿಗಳ ಹೃದಯದಲ್ಲಿ ವಿಶಿಷ್ಠ ಸ್ಥಾನ ಪಡೆದ ಸಜ್ಜನ ಕಲಾವಿದ ಶೀನಪ್ಪಣ್ಣ. ಪ್ರತಿಯೊ೦ದು ಪಾತ್ರದ ಬಗ್ಗೆ ಸ್ಪಷ್ಟ ಕಲ್ಪನೆಯುಳ್ಳ ಇವರ ವೇಷವನ್ನು ರಂಗದಲ್ಲಿ ನೋಡುವುದೇ ಚಂದ. ಮಾಡುವ ಕೆಲಸದ ಬಗ್ಗೆ ಅವರಿಗಿರುವ ಪ್ರೀತಿ ಅನನ್ಯ . ಶಿಸ್ತುಬದ್ಧ ಕುಣಿತ , ಅಭಿನಯ, ಸಮಯೋಚಿತ ಮಾತು ,ರ೦ಗವನ್ನು ತುಂಬುವ ಕ್ರಮ ಹಾಗೂ ದಣಿವರಿಯದ ಉತ್ಸಾಹದಿಂದ ಯಕ್ಷಗಾನ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದವರು ಇವರು . ಪ್ರೇಕ್ಷರ ಸಂಖ್ಯೆಗನುಗುಣವಾಗಿ " ಪಾತ್ರ " ನಿರ್ವಹಣೆ ಮಾಡುವ ಎಷ್ಟೋ ಕಲಾವಿದರನ್ನು ನಾವು ಆಗಾಗ ಕಾಣುತ್ತೇವೆ . ಆದರೆ ಶೀನಪ್ಪಣ್ಣ ಇದಕ್ಕೆ ಅಪವಾದ. ಜನರಿರಲಿ ಇಲ್ಲದೆ ಇರಲಿ ಇವರ ಪಾತ್ರ ರಂಗದಲ್ಲಿ ಒಂದೇ ತೆರನಾಗಿ ವಿಜ್ರಂಬಿಸುತ್ತಿರುತ್ತದೆ. ಇವರ ಹಿರಣ್ಯಾಕ್ಷ , ಇಂಧ್ರಜಿತು, ರಕ್ತಬೀಜ, ಜಾಂಬವಂತ, ಅರ್ಜುನ , ಕಾರ್ತವೀರ್ಯ, ಶಿಶುಪಾಲ ಮೊದಲಾದ ಪಾತ್ರಗಳು ಇವರಿಗೆ ಪ್ರಸಿದ್ದಿಯನ್ನು ತಂದು ಕೊಟ್ಟಿದೆ .







ಏನ ಮಾಡುವದಿನ್ನು .......

ಇಂಧ್ರಜಿತು








ಶಿಶುಪಾಲ (ಏಣಿ ನಾಮ : ಒಂದು ವಿಶಿಷ್ಠ ಮುಖವರ್ಣಿಕೆ)
ಮುಖವರ್ಣಿಕೆ ಕಮ್ಮಟಗಳಿಗೆ ಇವರು ಅತೀ ಅವಶ್ಯ ಸ೦ಪನ್ಮೂಲ ವ್ಯಕ್ತಿ. ಇಳಿ ವಯಸ್ಸಿನಲ್ಲೂ ಇವರ ದಣಿವರಿಯದ ಅದ್ಭುತ ಅಭಿನಯ ಎಲ್ಲರನ್ನು ಬೆರಗುಗೊಳಿಸುವ೦ತದ್ದು !
ಸದಾ ಸ್ನೇಹಶೀಲರಾಗಿರುವ ಇವರು ಇನ್ನಷ್ಟು ಕಾಲ ಯಕ್ಷರಸಿಕರ ಮನಸ್ಸನ್ನು ರಂಜಿಸಲಿ ಎಂದು ತುಂಬು ಮನಸ್ಸಿನಿಂದ ಹಾರೈಸುತ್ತೇವೆ.
***

Wednesday, March 12, 2008

ಸಿನೆಮಾ ಹಾಡುಗಳ ಕುರಿತು ....

ಚಿಕ್ಕವನಿದ್ದಾಗ ಆಕಾಶವಾಣಿ ಮ೦ಗಳೂರು ಕೇಂದ್ರದಿಂದ ಪ್ರಸಾರವಾಗುತ್ತಿದ್ದ ಸಾಕ್ಷಾತ್ಕಾರ ಸಿನೆಮಾದ ಹಾಡು ಹೀಗಿತ್ತು ...

ಒಲವೆ ಜೀವನ ಸಾಕ್ಷಾತ್ಕಾರ
ಒಲವೆ ಮರೆಯದ ಮಮಕಾರ
ಒಲವೆ ಮರೆಯದ ಮಮಕಾರ . ಪಲ್ಲವಿ .

ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲು
ದುಂಬಿಯ ಹಾಡಿನ ಝೇಂಕಾರದಲ್ಲು
ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲು
ತುಂಬಿದೆ ಒಲವಿನ ಸಾಕ್ಷಾತ್ಕಾರ . ಒಲವೆ ...

ವಸಂತ ಕೋಗಿಲೆ ಪಂಚ ಮನೋಹರ
ಗಾಂಧಾರ ಭಾಷೆಯ ಹಕ್ಕಿಗಳಿಂಚರ
ಈ ಮಲೆನಾಡಿನ ಭೂರಮ್ಯ ಶೃಂಗಾರ
ಚೆಲುವಿನ ಒಲವಿನ ಸಾಕ್ಷಾತ್ಕಾರ . ಒಲವೆ ...

ಒಲವಿನ ಪೂಜೆಗೆ ಒಲವೆ ಮಂದಾರ
ಒಲವೆ ಬದುಕಿನ ಬಂಗಾರ
ಒಲವಿನ ನೆನಪೆ ಹೃದಯಕೆ ಮಧುರ
ಒಲವೆ ದೈವದ ಸಾಕ್ಷಾತ್ಕಾರ . ಒಲವೆ ....

ಮೊನ್ನೆ ಬೆಂಗಳೂರು ನಗರದ ಚಾಟ್ ಸೆಂಟರ್ ನಲ್ಲಿ ಕೇಳಿ ಬರುತ್ತಿದ್ದ ಹಾಡು...

ಹೊಡಿ ಮಗ ಹೊಡಿ ಮಗ ಹೊಡಿ ಮಗ ಬಿಡಬೇಡ ಅವನಾ ....

ಒಮ್ಮೆಲೇ ನನಗನಿಸಿದ್ದು " ಅಯ್ಯೋ ಎಂತ ಸಾಂಸ್ಕೃತಿಕ ದಿವಾಳಿತನ ನಮ್ಮವರನ್ನು ಆವರಿಸಿದೆ " ಎಂದು !

ಪ್ರಾಥಮಿಕ ಶಾಲೆಗೆ ಹೋಗುವ ಬಾಲಕನೋರ್ವ " ಈ ಪ್ರೀತಿ ಒಂಥರಾ ...... " ಹಾಡನ್ನು ಗುನುಗುನಿಸುತ್ತಾ ಹೋಗುತ್ತಿದ್ದರೆ ನಾಲ್ಕನೆ ತರಗತಿಯ ಬಾಲೆಯೊಬ್ಬಳು " ಅನಿಸುತಿದೆ ಯಾಕೊ ಇಂದು ನೀನೀನೆ ನನ್ನವನೆಂದು ...." ಎಂದು ತನ್ಮಯವಾಗಿ ಹಾಡುತ್ತಿದ್ದಳು !

ಹಾಗಾದರೆ ಹಣ ಗಳಿಕೆಯೊಂದೇ ಸಿನಿಮಾದವರ ಧ್ಯೇಯವೇ ? ಇವರಿಗೆ ಸಾಮಾಜಿಕ ಕಳಕಳಿ ಸ್ವಲ್ಪವೂ ಇಲ್ಲವೇ ?? ಮಕ್ಕಳು ತಮ್ಮ ಪರಿಸರಕ್ಕನುಗುಣವಾಗಿ ಬೆಳೆಯುತ್ತಾರೆ . ಬೆಳೆಯುವ ಸಿರಿ ಮೊಳಕೆಗೆ ಈ ರೀತಿ "ರಾಸಾಯನಿಕ ಗೊಬ್ಬರ"ವನ್ನು ಹಾಕುವುದು ಯಾಕೆ ? ಯಾರಿಗೆ ಇದರಿಂದ ಏನು ಲಾಭ??

ನೀವು ಈ ಬಗ್ಗೆ ಯೋಚಿಸಿದ್ದಿರಾ ????

Sunday, March 9, 2008

ಅಡ್ಡ ಹೆಸರುಗಳು....

ಹೆತ್ತವರು ಇಟ್ಟ ಹೆಸರು ಇರುವ ತನಕ ; ಮಕ್ಕಳು ಇಡುವ ಹೆಸರು ಕೊನೆ ತನಕ ! ಎಂಬ ನಿಜಾಂಶ ನಮ್ಮ ಅನುಭವಕ್ಕೆ ಬಂದ ವಿಷಯ. ಹಾಗೆಂದು ನಾವೂ ವಿದ್ಯಾರ್ಥಿ ಜೀವನದಲ್ಲಿ ನಮ್ಮ ಗುರುಗಳನ್ನು ಬಿಟ್ಟಿಲ್ಲ ! ಯಾಕೆಂದರೆ ಅದೊಂದು ಪರಂಪರೆಯನ್ನು ಬಿಡಲು ಹೇಗೆ ಸಾಧ್ಯ ? ವಿದ್ಯಾರ್ಥಿ ಜೀವನದಲ್ಲಿ ಅದು ನಮ್ಮ ಆದ್ಯ ಅಭಿರುಚಿಗಳಲ್ಲಿ ಒಂದಾಗಿತ್ತು !

ಸುಳ್ಯದಲ್ಲಿ ತಾಂತ್ರಿಕ ಪದವಿ ಕಲಿಯುತ್ತಿದ್ದಾಗ, ಗಣಿತದ ವಿಭಾಗ ಮುಖ್ಯಸ್ಥರು ಪಾಠದ ನಡು ನಡುವೆ ಗಂಟಲು ಸರಿಪಡಿಸಿ ಕೊಳ್ಳುತ್ತಿದ್ದ ಕಾರಣ ಅವರಿಗೆ "ತುಪ್ಪ" ಎಂಬ ಅಡ್ಡ ಹೆಸರನ್ನು ಪ್ರೀತಿಯಿಂದ ಇಟ್ಟಿದ್ದೆವು !


ರಸಾಯನ ಶಾಸ್ತ್ರದ ಉಪನ್ಯಾಸಕರೋರ್ವರು ತರಗತಿಯುದ್ದಕ್ಕೂ "If suppose the case on that time" ಎಂಬ ವಾಕ್ಯವನ್ನು ನೂರಕ್ಕೆ ಕಡಿಮೆ ಇಲ್ಲದಂತೆ ಒಂದು ಗಂಟೆಯಲ್ಲಿ ಹೇಳುತ್ತಿದ್ದುದರಿಂದ ಅದೇ ಹೆಸರು ಹೆಸರು ಸೂಕ್ತವೆನಿಸಿತು !!

ಮ೦ಗಳೂರು ವಿ.ವಿ.ಯಲ್ಲಿ ತಾಂತ್ರಿಕ ಪದವಿಗೆ "Technical ಇಂಗ್ಲಿಷ್" ಎಂಬ ವಿಷಯವು ಎರಡನೆ ಚತುರ್ಮಾನ ಮಾಸಿಕದಲ್ಲಿದ್ದು ಅದನ್ನು ಪಾಠದ ಮಾಡುತ್ತಿದ್ದ ಶ್ರೀಕೃಷ್ಣಾನಂದ ಎಂಬವರು ನಮ್ಮ ಬಾಯಿಯಲ್ಲಿ "ಟೆಕ್ನಾನಂದ " ಆದರೆ ಆಪೀಸ್ ಸೂಪರಿ೦ಡೆ೦ಟ ನ್ನು ಹಾಯ್ ಬೆಂಗಳೂರ್ ಪತ್ರಿಕೆಯ ಸಂಪಾದಕರು "ಸ್ವಯಂ ಗೋಷಿತ ಜಾಣೆ " ಎಂದು ಕರೆದು ನಮ್ಮ ಕೆಲಸವನ್ನು ಕಡಿಮೆ ಮಾಡಿದ್ದಾರೆ !

ರಸಾಯನ ಶಾಸ್ತ್ರದ ಮುಖ್ಯಸ್ಥರು "if ದಿ" ಎಂದು ಪದೇ ಪದೇ ಹೇಳುತ್ತಿದ್ದು ಅದೇ ಹೆಸರು ಅವರಿಗೊಪ್ಪುತ್ತಿತ್ತು !!

ಇನ್ನೂ ಹಲವು ಹೆಸರು ಆಯಾ ವಿಬಾಗದ ಮಕ್ಕಳ ಪೇಟೆ೦ಟ ಆಗಿದ್ದು ನಾನಿಲ್ಲಿ ಬರೆಯಲಾಗುತ್ತಿಲ್ಲ.

ಈಗ ನಾನೂ ವೃತ್ತಿಯಲ್ಲಿ ಉಪನ್ಯಾಸಕ . ನನ್ನ ಶಿಷ್ಯರೂ ನನ್ನ ಪರಂಪರೆಯನ್ನು ಮುಂದುವರಿಸಿದ್ದರೆ???
ನಿಜಕ್ಕೂ ಭಯವಾಗುತ್ತಿದೆ.......





Saturday, March 8, 2008

ಒಂದು ಗುಟುಕು ...

ವೇತನ
ತಿಂಗಳಿಗೊಮ್ಮೆ ಮಿಂಚಿ ಮಾಯವಾಗುವ
ಚೇತನ!

***

ಬೆಗುಡ (ದಕ್ಷಿಣ ಕನ್ನಡ ಹವ್ಯಕರ ಬೈಗುಳದ ಒಂದು ಪದ) = ಪೆದ್ದ , ಮೂರ್ಖ

***
ನಮ ಒಯಿತ್ತ್ ನಾಡೆಗ್ ಎರು ಬತ್ತಿಜ್ಜಿಂಡ ಎರು ಒಯಿತ್ತ್ ನಾಡೆಗ್ ನಮ ಪೋವೋಡು - ತುಳು ಗಾದೆ
(ನಾವು ಎಳೆದಲ್ಲಿಗೆ ಎತ್ತು ಬರದಿದ್ದರೆ ಎತ್ತು ಎಳೆದಲ್ಲಿಗೆ ನಾವು ಹೋಗಬೇಕು )
***

Thursday, March 6, 2008

ಏಕ ಶ್ಲೋಕೀ ರಾಮಾಯಣ ಮತ್ತು ಬಾಗವತ ...

ಚಿಕ್ಕವನಿದ್ದಾಗ ಅಮ್ಮ ಹೇಳಿ ಕೊಟ್ಟ ಏಕ ಶ್ಲೋಕೀ ರಾಮಾಯಣ ಮತ್ತು ಭಾಗವತ ಹೀಗಿದೆ...



ರಾಮಾಯಣ

ಆದೌ ರಾಮ ತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ

ವೈದೆಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ

ವಾಲೀ ನಿಗ್ರಹಣಂ ಸಮುದ್ರ ತರಣಂ ಲಂಕಾಪುರೀ ದಾಹನಂ

ಪಶ್ಚಾದ್ರಾವಣ ಕುಂಭಕರ್ಣ ಹನನಂ ಏತದ್ದಿ ರಾಮಾಯಣಂ ೧


ಭಾಗವತ

ಆದೌ ದೇವಕಿ ದೇವಿ ಗರ್ಭ ಜನನಂ ಗೋಪೀ ಗೃಹೇ ವರ್ಧನ೦

ಮಾಯಾ ಪೂತನಿ ಜೀವಿತಾಪಹಾರಣಂ ಗೋವರ್ಧನೋದ್ಧಾರಣಂ

ಕಂಸ ಛೇದನ ಕೌರವಾದಿ ಮಥನ೦ ಕುಂತೀ ಸುತ: ಪಾಲನಂ

ಏತದ್ಭಾಗವತ ಪುರಾಣ ಪುಣ್ಯ ಕಥಿತಂ ಶ್ರೀಕೃಷ್ಣ ಲೀಲಾಮೃತಂ ೧




ವೇದಮೂರ್ತಿ ಸತ್ಯೇಶ್ವರ ಭಟ್ಟರು....



ಪೆರಡಾಲ ಉದನೇಶ್ವರ ದೇವಸ್ಥಾನದಲ್ಲಿ ವಸಂತ ವೇದ ಪಾಠ ಶಾಲೆಯನ್ನು ಶ್ರೀ ನವಕಾನ ಶಂಕರನಾರಾಯಣ ಭಟ್ಟರು ಹುಟ್ಟು ಹಾಕಿ ಇಂದಿಗೆ ೫ ದಶಕಗಳೇ ಸಂದವು . ಉಪನೀತರಾದ ಮಕ್ಕಳನ್ನು ವೇದ ಪಾಠ ಕಲಿಯಲು ಇಲ್ಲಿಗೆ ಕಳಿಸುವುದು ಹವ್ಯಕ ಸಮುದಾಯದವರ ಪರಿಪಾಠ. ಇಲ್ಲಿನ ಮುಖ್ಯ ಗುರುಗಳೇ ವೇದಮೂರ್ತಿ ಶ್ರೀ ಸತ್ಯೇಶ್ವರ ಭಟ್ಟರು. ಕಿಳಿಂಗಾರು ವೈದಿಕ ಮನೆತನದಲ್ಲಿ ಜನಿಸಿದ ಇವರು ಸರಳ, ಸಜ್ಜನ ಹಾಗೂ ಸಂಪ್ರದಾಯಸ್ಥ ವೈದಿಕರು.ಭಟ್ಟರು ಹಲವು ಮಂದಿ ಶಿಷ್ಯ ವರ್ಗಕ್ಕೆ ಆಪ್ತರೂ ಹೌದು. ಕಳೆದ ಹಲವಾರು ವರ್ಷಗಳಿಂದ ಗುರುಗಳಾಗಿ ಸೇವೆ ಸಲ್ಲಿಸುತ್ತಾಬಂದಿರುವ ಇವರು ವೇದಾಭ್ಯಾಸದ ಪ್ರಾಥಮಿಕ ಪಾಠಗಳನ್ನು ಕ್ರಮಬದ್ಧವಾಗಿ ಕಲಿಸುವುದರಲ್ಲಿ ನಿಷ್ಣಾತರು.

ಪೆರಡಾಲ ಉದನೇಶ್ವರ ದೇವರ ಸನ್ನಿಧಿ ಎಂಬುದು ನಿಸರ್ಗ ಸೊಬಗಿನ ತಾಣ . ಇಲ್ಲಿ ವೇದ ಪಾಠ ಕಲಿಯುವುದೆಂದರೆ ಎಲ್ಲ ಮಕ್ಕಳಿಗೂ ಎಲ್ಲಿಲ್ಲದ ಉತ್ಸಾಹ . ಶ್ರೀ ಸತ್ಯೇಶ್ವರ ಭಟ್ಟರು ಒಂದನೇ ತರಗತಿಗೆ ಸಂಧ್ಯಾವಂದನೆ , ಸೂಕ್ತಗಳು, ಅಗ್ನಿ ಕಾರ್ಯ , ಮುಂತಾದ ಪಾಠಗಳನ್ನು ಸ್ವರಯುಕ್ತವಾಗಿ ಕಲಿಸುತ್ತಾರೆ. ಮಂತ್ರಗಳನ್ನು ಹೇಳುವಾಗ ತಪ್ಪಿದರೆ " ಸರಿ ಹೇಳೋ˘ ಮಜಡ" ಎ೦ದು ಗದರಿಸಿ ಮಕ್ಕಳನ್ನು ಸರಿ ದಾರಿಗೆ ತರುವ ಕ್ರಮ ನಿಜಕ್ಕೂ ಅನನ್ಯ .


ಪೆರಡಾಲದಲ್ಲಿ ವೇದ ಪಾಠ ಕಲಿತ ಎಲ್ಲ ಮಕ್ಕಳ ಮನಸ್ಸಿನ ಮೇಲೆ ಗಾಢವಾದ ಪ್ರಭಾವ ಬೀರಿದವರೆಂದರೆ ಶ್ರೀ ಸತ್ಯೇಶ್ವರ ಭಟ್ಟರು . ಅವರ ಕಲಿಸುವ ಕ್ರಮವನ್ನು ಮಕ್ಕಳು ಅನುಕರಿಸುವುದು ನೋಡಲು ತು೦ಬಾ ಮಜವಾಗಿರುತ್ತದೆ !
ಸದಾ ಸ್ಪೂರ್ತಿಯ ಸೆಲೆಯಾಗಿರುವ ಭಟ್ಟರು ಸದ್ಯ ಕು೦ಬಳೆ ಸಮೀಪದ ಬೇಳದಲ್ಲಿ ವಾಸಿಸುತ್ತಿದ್ದು ಎಲ್ಲರಿಗೂ ಮಾರ್ಗದರ್ಶಕರಾಗಿದ್ದರೆ.

ಶಿಷ್ಯರೊಬ್ಬರ ಮನೆಯಲ್ಲಿ ನಾಂದಿ ಕಾರ್ಯಕ್ರಮ ಮಾಡಿಸುತ್ತಿರುವುದು ...

Monday, March 3, 2008

ಚೂರ್ಣಿಕೆ ......

ಬ್ರಾಹ್ಮಣರಿಗೆ ಭೋಜನ ವಿಧಿ ಕಡ್ಡಾಯ . ಬ್ರಾಹ್ಮಣರು ಉಣ್ಣುವ ಮೊದಲು ದೇಹದಲ್ಲಿರುವ ಪಂಚಾಗ್ನಿಗಳಿಗೆ ಆಹುತಿ ನೀಡುವುದು ಪದ್ಧತಿ. ಬಾಳೆ ಎಲೆಯಲ್ಲಿ ಬಡಿಸಿದ ಅನ್ನಕ್ಕೆ ಗಾಯತ್ರಿಯಿಂದ ಪ್ರೋಕ್ಷಣೆ ಮಾಡಿ ಪರಿಷಿ೦ಚನೆ ಗೈದ ಮೇಲೆ ಕೈಯ್ಯಲ್ಲಿ ನೀರನ್ನು ತುಂಬಿ ಅತೀ ..... ಮಂತ್ರವನ್ನುಚ್ಚರಿಸಿ ಆ ನೀರನ್ನು ಕುಡಿದ ಬಳಿಕ ಪ್ರಾಣ , ಅಪಾನ , ವ್ಯಾನ , ಉದಾನ ಮತ್ತು ಸಮಾನಗಳೆಂಬ ವಚನ ಆಹುತಿಗಳನ್ನು ಮಾಡಿ ಬಳಿಕ ಭೋಜನ ಸ್ವೀಕರಿಸುತ್ತಾರೆ . ಆದುದರಿಂದ ಬ್ರಾಹ್ಮಣ ಭೋಜನವೆಂಬುದು ದೇವ ಕಾರ್ಯವೆನಿಸಿಕೊಂಡಿದ್ದು ಪುಣ್ಯ ಕ್ಷೇತ್ರ ಗಳಲ್ಲಿ " ಮಡೆ ಸ್ನಾನ " ವೆಂಬ ಸೇವೆಗೆ ಅವಕಾಶವಿರುತ್ತದೆ. (ಅಂದರೆ ಬ್ರಾಹ್ಮಣ ಭೋಜನದ ಬಳಿಕ ಅವರುಂಡ ಬಾಳೆಯ ಮೇಲೆ ಉರುಳು ಸೇವೆ ಮಾಡಿ ಬಳಿಕ ಸ್ನಾನ ಮಾಡಿ ದೇವರ ದರ್ಶನ ಮಾಡುವುದು.)

ಸಾಮಾನ್ಯವಾಗಿ ಶುಭ ಕಾರ್ಯಕ್ರಮಗಳಲ್ಲಿ ಊಟ ಮಾಡುವಾಗ ದೇವರ ಸ್ಮರಣೆ ಮಾಡಲು ಶ್ಲೋಕಗಳನ್ನು ಹೇಳುವ ಪರಿಪಾಠ ಹಿರಿಯರಿಂದ ಬೆಳೆದು ಬಂದ ಸಂಪ್ರದಾಯ . ಶ್ಲೋಕವೊಂದನ್ನು ಊಟದ ವೇಳೆ ಹೇಳಿ ಕೊನೆಗೆ " ಭೋಜನ ಕಾಲೇ ನಮ: ಪಾರ್ವತಿ ಪತೆ ಹರ ಹರಾ " ಎಂದು ಹೇಳಿದಾಗ ಊಟದ ಸಾಲಿನಲ್ಲಿ ಕುಳಿತವರು " ಮಹಾದೇವ " ಎಂದುಪ್ರತಿ ವಚನ ನುಡಿಯುತ್ತಾರೆ . ಈ ಶ್ಲೋಕವನ್ನು ವಾಡಿಕೆಯಲ್ಲಿ " ಚೂರ್ಣಿಕೆ" ಎಂದು ಕರೆಯುತ್ತಾರೆ . ಮದುವೆ, ಉಪನಯನ ಮುಂತಾದ ಶುಭ ಸಮಾರಂಭ ಗಳಲ್ಲಿ ಸಾಮಾನ್ಯವಾಗಿ ಕೇಳ ಸಿಗುವ ಚೂರ್ಣಿಕೆಗಳೆಂದರೆ "ನಿತ್ಯಾನಂದಕರೀ ವರಾ ಭಯಕರೀ ...... " , " ಕಸ್ತೂರೀ ತಿಲಕೇ ...... " , "ವ೦ದೇ ಶಂಬ್ಹುಂ ...." ಇತ್ಯಾದಿ . " ಸುದರಿಕೆಯಲ್ಲಿ " ಪಳಗಿದ ಹಿರಿಯರು ಈ ಶ್ಲೋಕದ ಕೊನೆಯನ್ನೇ ಕಾಯುತ್ತಿದ್ದು ಒಮ್ಮೆಲೇ " ಭೋಜನ ಕಾಲೇ ನಮ: ಪಾರ್ವತಿ ಪತೆ ಹರ ಹರಾ " ಎಂದು ಉತ್ಸಾಹದಿಂದ ಘೋಷಿಸುತ್ತಾರೆ ! ಕೂಡಲೇ ಸಾಲಿನಲ್ಲಿ ಕುಳಿತವರು " ಮಹಾದೇವ " ಎಂದು ಹೇಳಿದರೆ ಉತ್ಸಾಹಿ ಯುವಕರ ದನಿ ಇನ್ನೂ ಮುಗಿಯದೆ " ಮಹಾ ದೇ......................................... ..........ವ " ಎಂದಾಗಿರುತ್ತದೆ. ಭೋಜನದ ಕೊನೆಗೆ "ಭೋಜನಾಂತೇ ಗೋವಿಂದ ನಾಮ ಸಂಕೀರ್ತನಂ " ಗೋವಿ೦ದಾನಿ ಗೋವಿಂದ " ಎಂದಾಗ "ಗೋವಿಂದ " ಎನ್ನುತ್ತ ಮೆಲೇಳುವುದು ಕ್ರಮ . ಹೀಗೆ ಭೋಜನ ಮದ್ಯೆ ಚೂರ್ಣಿಕೆ ಹೇಳುವವರ ಸ೦ಖ್ಯೆ ದಿನೇ ದಿನೇ ಕ್ಷೀಣವಾಗುತ್ತಿದೆ. ಕಾಲ ಕ್ರಮೇಣ ಯಾಂತ್ರಿಕ ಬದುಕಿನ ಒತ್ತಡದಿಂದಾಗಿ ಈ ಸಂಪ್ರದಾಯವೂ ನಶಿಸಿ ಹೋಗುವುದರಲ್ಲಿ ಅನುಮಾನವಿಲ್ಲ.

Saturday, March 1, 2008

ವಾನರರ ಹೆಂಡತಿಯರಿಗೇಕೆ ಬಾಲವಿರುವುದಿಲ್ಲ ?

ಯಕ್ಷಗಾನದಲ್ಲಿ ಪಾರ್ತಿ ಸುಬ್ಬನ " ಪಂಚವಟಿ- ವಾಲಿ ಸುಗ್ರೀವರ ಕಾಳಗ " ಬಹಳ ಪ್ರಸಿದ್ದ ಕೃತಿ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ " ಇಂದ್ರ ನಂದನ - ವಾಲಿ" , ವೀರ ಮಾರುತಿ , ಹನುಮದ್ವಿಲಾಸ , ಮೈಂದ-ದ್ವಿವಿದ ಕಾಳಗ ಮುಂತಾದ ಪ್ರಸಂಗಗಳಲ್ಲಿ ವಾನರರ ಪಾತ್ರಗಳು ಬರುತ್ತವೆ. ವಾನರ ಶ್ರೇಷ್ಠ ಹನುಮಂತನ ವೇಷವನ್ನು ಪರಂಪರೆಯ ಹನುಮಂತ ಹಾಗು " ಮಲೆ ಮಂಗ " ಎರಡು ತೆರನಾಗಿ ನಾವು ಅಗಾಗ ನೋಡುತ್ತಿರುತ್ತೇವೆ.














ಪರಂಪರೆಯ ಹನುಮಂತ












ಮಲೆ ಮಂಗ ( see also http://youtube.com/watch?v=lNqBpkF9axY )


ಯಕ್ಷಗಾನದ ವಾಲಿ ಸುಗ್ರೀವರದ್ದು ಬಣ್ಣದ ವೇಷ. ಕೇಸರಿ ಕಿರೀಟದ ಈ ಜೋಡಿ ವೇಷಗಳು ನೋಡಲು ರಮ್ಯಾದ್ಭುತವಾಗಿರುತ್ತದೆ ವಾಲಿ- ಸುಗ್ರೀವ



ವಾಲಿ - ತಾರೆ

ಆದರೆ ವಾಲಿಯ ಪತ್ನಿ ತಾರೆಯ ವೇಷ ರಂಗದಲ್ಲಿ ಬರುವುದು ಸುಂದರ ಸ್ತ್ರೀ ವೇಷವಾಗಿ !! ಸುಗ್ರೀವನ ಮಡದಿ ರುಮೆಯ ಪಾತ್ರವೂ ಸಾಮಾನ್ಯ ಸ್ತ್ರೀ ವೇಷವೆ ! ವಾನರ ಹೆಂಡತಿಯರಿಗೆ ವಾನರರಂತೆ ಮೂತಿ ಏಕಿಲ್ಲ ?
ಬಲ್ಲಿರೇನಯ್ಯ........????
***
























































































































































































Friday, February 29, 2008

ಚುಟುಕಗಳ ಬ್ರಹ್ಮ : ಶ್ರೀ ದಿನಕರ ದೇಸಾಯಿ

ಚುಟುಕಗಳು ಜನ ಮಾನಸವನ್ನು ಬೇಗನೆ ತಲುಪುತ್ತವೆ. ಶ್ರೀಯುತ ದಿನಕರ ದೇಸಾಯಿಯವರು ಮೊತ್ತ ಮೊದಲಿಗೆ ನಾಲ್ಕು ಸಾಲುಗಳ ಈ ಪ್ರಕಾರವನ್ನು ಆರಂಭಿಸಿ ಜನಪ್ರಿಯರಾದವರು. ಅವರ ಚುಟುಕಗಳ ಸಂಪುಟವೊಂದನ್ನು ಕನ್ನಡ ಸಾಹಿತ್ಯ ಪರಿಷತ್ ಬಿಡುಗಡೆ ಮಾಡಿದ್ದು ಆಸಕ್ತರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ .
ಅದರಲ್ಲಿ ಪ್ರಕಟವಾದ ಒಂದು ಚುಟುಕ ಹೀಗಿದೆ :

ಯಾರಿಗೂ ಕೊಡದೆ ನಾಳೆ ತಿನ್ನುವೆನೆಂದು
ಅಡಗಿಸಿಟ್ಟೆನು ಹಣ್ಣನೊಂದನು ತಂದು
ಮುಂಜಾನೆ ನೋಡಿದರೆ ಬರಿ ಸಿಪ್ಪೆ
ರಾತ್ರಿಯಲಿ ತಿಂದದ್ದು ಮೂಷಿಕನ ತಪ್ಪೆ ?

ಇನ್ನು ಹಲವಾರು ಉತ್ತಮ ಚುಟುಕ ಈ ಪುಸ್ತಕದಲ್ಲಿ ಪ್ರಕಟವಾಗಿದೆ . ಅವಕಾಶವಾದಲ್ಲಿ ಓದಿ ಆನಂದಿಸಿ ......

Wednesday, February 27, 2008

ನಮಸ್ಕಾರ..


ಮನುಷ್ಯ ಪ್ರಯತ್ನಶೀಲನಾಗಿರಬೇಕು . ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವಿದ್ದರೆ ಮಾತ್ರ ಜೀವನದಲ್ಲಿ ಮೇಲೇರಲು ಸಾಧ್ಯ .
ಸಾಧಿಸಬೇಕೆಂಬ ಮನಸ್ಸಿದೆ ಆದ್ರೆ ಸಮಯವೇ ಇಲ್ಲ ! ಎಷ್ಟೋ ಜನ ಮಿತ್ರರ ಉವಾಚ ಇದು . ನಾನೂ ಒಂದು ಬರೆಯುವ ಪ್ರಯತ್ನ ಮಾಡಿದರೇನು ? ಎಂಬ ಉತ್ಸಾಹದಿಂದ ಬರೆಯಲು ತೊಡಗಿದ್ದೇನೆ . ಹುಚ್ಚು ಮನಸ್ಸಿನ ಹಲವು ಮುಖಗಳನ್ನೂ , ಸೋತದ್ದು , ಗೆದ್ದಂತೆ ಭಾಸವಾಗಿ ಹೊಡೆಸಿ ಕೊಂಡದ್ದು ! , ಪೇಚಾಟಕ್ಕೆ ಸಿಲುಕಿದ್ದು, ಕ್ಷೇತ್ರಗಳು , ವಿಶಿಷ್ಟ ಸಾಧನೆಗೈದ ಮಹನೀಯರು ಹೀಗೆ ಹತ್ತು ಹಲವು ವಿಚಾರಗಳ " ಅವಿಲು" ಈ ನಮ್ಮ ಬಲ್ಲಿರೇನಯ್ಯ....

ಓದಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ..
ನಿಮ್ಮ ಪ್ರೋತ್ಸಾಹ ನನಗೆ ಸ್ಪೂರ್ತಿ ....
ತೊಡಗಲೇ.........???