Thursday, June 5, 2008

ವಿಷಕ್ರಿಮಿ ನ್ಯಾಯ ......

ಹಂಸ ಕ್ಷೀರ ನ್ಯಾಯ , ಬೀಜ ವೃಕ್ಷ ನ್ಯಾಯ ಮುಂತಾದವುಗಳ ಬಗ್ಗೆ ಅಗಾಗ ಕೇಳುತ್ತ ಇರುತ್ತೇವೆ . ಹಾಲಿಗೆ ನೀರನ್ನು ಬೆರೆಸಿ ಹಂಸಕ್ಕೆ ಕೊಟ್ಟರೆ ಹಾಲನ್ನು ಮಾತ್ರ ಕುಡಿದು ನೀರನ್ನು ಬಿಡುತ್ತದೆ ಎಂಬುದಾಗಿ ಹಿರಿಯರು ಹೇಳುವುದನ್ನು ಕೇಳಿದ್ದೇನೆ ( ಖುದ್ದಾಗಿ ನಾನು ನೋಡಿಲ್ಲ !) . ಇದರ ಮರ್ಮವೇನೆಂದರೆ "ಯಾವುದೇ ವಿಚಾರದಲ್ಲಿ ಒಳ್ಳೆಯದನ್ನು ಮಾತ್ರ ಸ್ವೀಕರಿಸಿ " ಎಂದು.
ಹಾಗೆಯೇ ಬೀಜ ವೃಕ್ಷ ನ್ಯಾಯದ ಪ್ರಕಾರ " ಬೀಜ ಮೊದಲೋ ? ವೃಕ್ಷ ಮೊದಲೋ ? ಇನ್ನೂ ನಿರ್ಧಾರವಾಗಿಲ್ಲ !!


ಈಗ ನಾನಿಲ್ಲಿ ಹೇಳಹೊರಟದ್ದು ಇನ್ನೊ೦ದು ಸ್ವಾರಸ್ಯಕರ ನ್ಯಾಯದ ಬಗ್ಗೆ. ಅದೇ ವಿಷಕ್ರಿಮಿ ನ್ಯಾಯ . ವೆಂಕಣ್ಣಯ್ಯನೆಂಬ ಒಬ್ಬಾತ ದೇಶ ಸಂಚಾರಕ್ಕೆ ಹೊರಟಿರುತ್ತಾನೆ . ಹೀಗೇ ಹಲವು ಗ್ರಾಮಗಳನ್ನು ಕಳೆದು ಮುಂದುವರಿಯುವ ವೇಳೆ ಒಂದು ಪುಟ್ಟ ಗ್ರಾಮಕ್ಕೆ ಬರುವಾಗ ಕತ್ತಲೆಯಾಗತೊಡಗಿತು . ಆಗ ಆ ಗ್ರಾಮದಲ್ಲಿ ಉಳಕೊಳ್ಳಲು ಏನಾದರೂ ಆಗಬೇಕಲ್ಲ ಎಂದು ಯೋಚಿಸಿ ಎದುರಿಗೆ ಸಿಕ್ಕ ಗ್ರಾಮಸ್ಥನೊಬ್ಬನನ್ನು ಕುರಿತು ವಿಚಾರಿಸುತ್ತಾನೆ .
ವೆ೦ : " ಅಯ್ಯಾ ಈ ಊರಿನಲ್ಲಿ ದೊಡ್ಡವರು ಯಾರಿದ್ದಾರೆ ?"
ಗ್ರಾಮಸ್ಥ :(ಏನೋ ಯೋಚಿಸುತ್ತಾ) " ತಾಳೆ ಮರಕ್ಕಿಂತ ದೊಡ್ಡವರು ಯಾರೂ ಇಲ್ಲ ".
ವೆ೦: "ಹೋಗಲಿ ಯಾರು ದಾನಿಗಳಿದ್ದಾರೆ ?"
ಗ್ರಾ.: "ಬಾಯಿ ಮಾತಿನಲ್ಲಿ ಎಲ್ಲರೂ ದಾನಿಗಳೇ "
ವೆ೦: ಹೋಗಲಿ ಯಾರು ದಕ್ಷರಿದ್ದಾರೆ ?"
ಗ್ರಾ.: "ಇನ್ನೊಬ್ಬರ ಸಂಪತ್ತನ್ನು ಅಪಹರಿಸುವುದರಲ್ಲಿ ಎಲ್ಲರೂ ದಕ್ಷರೆ "
ಇಷ್ಟು ಹೊತ್ತಿಗೆ ತಲೆಬಿಸಿಯಾಗಿ ವೆಂಕಣ್ಣಯ್ಯಕೇಳುತ್ತಾನೆ " ಅಯ್ಯಾ ಇಲ್ಲಿ ನೀವು ಹೇಗಪ್ಪಾ ಬದುಕುತ್ತೀರಿ ??"
ಗ್ರಾ: "ವಿಷ ಕ್ರಿಮಿ ನ್ಯಾಯದಂತೆ "
ವೆ೦: ಅದೇನು ವಿಷಕ್ರಿಮಿ ನ್ಯಾಯ ಅಂದರೆ !!??"
ಗ್ರಾ:" ಅಯ್ಯಾ ಉಪ್ಪಿನಕಾಯಿ ಕಣ್ಣಿಗೆ ಬಿದ್ದರೆ ಏನಾಗುತ್ತದೆ ಹೇಳು ?"
ವೆ೦: " ಕಣ್ಣು ಉರಿಯುತ್ತದೆ "
ಗ್ರಾ: " ಆದರೆ ಉಪ್ಪಿನಕಾಯಿಯಲ್ಲಿಯೇ ಹುಟ್ಟಿದ ಹುಳಕ್ಕೆ ಕಣ್ಣು ಉರಿಯುತ್ತದೆಯೇ ?? "
ವೆ೦: "ಇಲ್ಲ !!!!"
ಹಾಗೆಯೇ ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದ ನನಗೆ ಇದು ಅಭ್ಯಾಸವಾಗಿ ಹೋಗಿದೆ . ನಿನಗೆ ಮಾತ್ರ ಇದು ಹೊಸತು ಅಷ್ಟೆ !!
ಅಂತ ನಿರಾಳವಾಗಿ ಹೇಳಿದ .

ಈಗಿನ ಹೆಚ್ಚಿನ ಎಲ್ಲ ರಾಜಕಾರಣಿಗಳೂ "ವಿಷಕ್ರಿಮಿ ನ್ಯಾಯದ " ಹಾಗೆಯೇ ನಡೆಯುತ್ತಿರುವುದರಿಂದ ಹೆಚ್ಚಿನ ಪ್ರಗತಿಯಾದೀತು ಎಂಬ ಭ್ರಮೆ ಮಾತ್ರ ಸಾಮಾನ್ಯ ನಾಗರೀಕರಾದ ನಮಗೆ ಬೇಡ ಅಂತ ನನಗನಿಸುತ್ತದೆ.
ನೀವೇನಂತೀರಿ?

No comments: