Wednesday, November 16, 2011

ಸೇವೆ ಇವೆ.... ಕಲಾವಿದರೆಲ್ಲಿ ....?


    
ದಿನ ಪತ್ರಿಕೆಯಲ್ಲಿನ ಸುದ್ದಿ ಓದಿದಾಗ ನಿಜವಾಗಿಯೂ ಯಕ್ಷಾಭಿಮಾನಿಗಲ್ಸಂತಸ ಪಡಬೇಕಾದ ವಿಚಾರ . ಯಕ್ಷಗಾನವು ಯಾವ ರಾಜಾಶ್ರಯವಿಲ್ಲದೆ , ಸರಕಾರದ ಕೃಪಾಶ್ರಯವಿಲ್ಲದೆ, ಬರಿಯ ಅಭಿಮಾನಿ ಸೇವಾರ್ಥಿ ಸಜ್ಜನ ಬಂಧುಗಳಿಂದ ಇಂದಿಗೂ ತನ್ನ ಸತ್ವವನ್ನು  ಉಳಿಸಿಕೊಂಡು  ವಿಕಾರತೆಗಳಿದ್ದರೂ ತನ್ನ ಕಂಪನ್ನು ಬೀರುತ್ತ ಜೀವಂತವಾಗಿ  ಇದೆ.ಬೇರೆ ಬೇರೆ ದೇವಳದ ಆಶ್ರಯದಲ್ಲಿ ಹಲವಾರು ಮೇಳಗಳಿವೆ. ವರ್ಷಾನುಗಟ್ಟಲೆ ಸೇವಾರೂಪದ ಯಕ್ಷಗಾನ ಆಖ್ಯಾನಗಳನ್ನು ಆಡಿಸುವ ಸೇವಾರ್ಥಿಗಳು, ಪ್ರಾಯೋಜಕರು ಇದ್ದಾರೆ . ಆದರೆ ಸೇವಾರ್ಥಿಗಳು ನಡೆಸುವ ಪ್ರದರ್ಶನದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಕಲಾವಿದರಿದ್ದಾರೆಯೇ ? ಎಂಬುದು ದೊಡ್ಡ ಪ್ರಶ್ನೆ . ಮುಂದೆ ಈಗಿರುವ ಪ್ರದರ್ಶನದ ಗುಣಮಟ್ಟವನ್ನಾದರು ಉಳಿಸಿಕೊಂಡು ಹೋಗಬಲ್ಲ ಯುವಕಲಾವಿದರು ರೂಪುಗೊಳ್ಳುತ್ತಿದ್ದಾರೆಯೇ ? 
ಇಂದು ಎಲ್ಲ ಕ್ಷೇತ್ರಗಳಲ್ಲೂ ನುರಿತ ವೃತ್ತಿಪರರ ಕೊರತೆ ಇದೆ .ಯಕ್ಷರಂಗವನ್ನಂತೂ ಇದು ತೀವ್ರವಾಗಿ ಬಾಧಿಸುತ್ತಿರುವ ಸಮಸ್ಯೆ . ಇತ್ತೀಚಿಗೆ ತೆಂಕಿನ ಪ್ರಖ್ಯಾತ ಮೇಳದ ಯಜಮಾನರು ಹಿಮ್ಮೇಳ ಕಲಾವಿದರ ಕೊರತೆ ಬಗ್ಗೆ  ಪ್ರಸ್ತಾಪಿಸುತ್ತಾ ಮುಂದೆ ಇದು ದೊಡ್ಡ ಸಮಸ್ಯೆಯಾಗಿ ಮುಂದುವರಿದಲ್ಲಿ ಸೇವೆಯನ್ನು ನಡೆಸುವುದು ಹೇಗೆ ? ಎಂದು ಯೋಚಿಸಬೇಕಾಗುತ್ತದೆ ಎಂದದ್ದು ಇದರ ತೀವ್ರತೆಯನ್ನು ತಿಳಿಸುತ್ತದೆ . ಹಲವು ದಶಕಗಳಿಂದ ಮೇಳ ನಡೆಸುತ್ತಿದ್ದ ಓರ್ವ ಯಜಮಾನರು ಇದ್ದದ್ದನ್ನೆಲ್ಲ ಉದಾರವಾಗಿ ಒಂದು ಸಂಸ್ಥೆಗೆ ದಾನವಿತ್ತು ಇನ್ನು ನನ್ನಿಂದ ಅಸಾಧ್ಯ ಎಂದು ದಿನಸಿ ಅಂಗಡಿ ತೆರೆದದ್ದು ವಿಷಾದಕರವಾದರೂ ಕಾಟು ಸತ್ಯ !

ಈಗಿನ ಹಿರಿಯ ಕಲಾವಿದರನ್ನು ನೋಡಿದಾಗ ಮುಂದೆ ಇಂಥ ಪ್ರದರ್ಶನಗಳನ್ನು ನೀಡುವ ಚೈತನ್ಯ ಯುವ ಕಲಾವಿದರು ಹೊಂದಿರುವರೆ ಅನುಮಾನ ಮೂಡುತ್ತದೆ ! 
ಹಾಗೆಂದು ತಾಳಮದ್ದಲೆ ಕ್ಷೇತ್ರಕ್ಕೆ ಇದೊಂದು ಅಪವಾದ . ಇಲ್ಲಿ ಹೆಚ್ಚಿನ ಎಲ್ಲರೂ ಹವ್ಯಾಸಿಗಳೇ ಕಲಾಪ್ರಕಾರ ಉಳಿಸಿಕೊಂಡು ಬರುತ್ತಿದ್ದಾರೆ. 
ಆದಾಯ ಕಡಿಮೆ, ನಿದ್ದೆ ಕೆಡುವಿಕೆ, ಆಹಾರ ವೆತ್ಯಾಸಗಳು ಪ್ರಮುಖ ಸಮಸ್ಯೆಗಳೆಂದು ಹೇಳಿದರೂ ಈಗ ಅವಕಾಶಗಳು ಹಲವಾರಿದೆ, ಕಡಿಮೆ ಕಲಿತವನಿಗೂ ಉದ್ಯೋಗ ಖಾತ್ರಿ ಇದೆ ! ಹಾಗಾಗಿ ಆತಕ್ಕೆಕೆ ಹೋಗಬೇಕು ? ಊರೂರೇಕೆ ಸುತ್ತಬೇಕು? ಎಂಬ ಭಾವ ಹೆಚ್ಚಾಗತೊಡಗಿ ಸಮಸ್ಯೆ ಉಲ್ಬಣಗೊಳ್ಳುತ್ತಿದೆ .

ಕಲೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸುವ ಯುವ ಜನತೆ ತೀವ್ರವಾಗಿ ಕ್ಷೀಣಿಸುತ್ತಿರುವ ಈ ಕಾಲದಲ್ಲಿ ಸೇವೆ ಆಟಗಳು ಬೇಕಾದಷ್ಟಿವೆ ... ಕಲಾವಿದರೆಲ್ಲಿದ್ದಾರೆ ? ಅಲ್ಲವೇ !