Tuesday, May 20, 2008

ಪುರಾಣ ಲೋಕದ ಬಾಲರು .....

ನಾವು ಚಿಕ್ಕವರಿದ್ದಾಗ ಮಲಗುವ ಮುನ್ನ ಅಮ್ಮ ಹೇಳುತ್ತಿದ್ದ ಕುತೂಹಲಭರಿತ ಸ್ವಾರಸ್ಯಪೂರ್ಣ ಕಥೆಗಳು ನಮ್ಮನ್ನು ಪುರಾಣ ಲೋಕಕ್ಕೆ ಕೊಂಡೊಯ್ಯುತ್ತಿದ್ದವು . ಕ್ರಮೇಣ ಪೌರಾಣಿಕ ಯಕ್ಷಗಾನಗಳು ಪೌರಾಣಿಕ ಕಥೆಗಳಲ್ಲಿರುವ ಮೌಲ್ಯಗಳನ್ನು ನವರಸಭರಿತವಾಗಿ ಕಣ್ಣ ಮುಂದೆ ತೆರೆದಿಡುತ್ತಿದ್ದ ರೀತಿ ಅನನ್ಯ .

ಇತ್ತೀಚೆಗೆ ಪುರಾಣ ಕಥೆಗಳನ್ನು ಹೇಳುವ ಅಮ್ಮಂದಿರ ಸಂಖ್ಯೆ ಕ್ಷೀಣಿಸುತ್ತಿದ್ದು ಮಕ್ಕಳು ದೂರದರ್ಶನವನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಉಂಟಾಗುತ್ತಿದೆ. ಇದಕ್ಕೆ ಪುರಾಣ ಕಥೆಗಳ ಪುಸ್ತಕದ ಕೊರತೆಯೂ ಒಂದು ಕಾರಣವಿರಬಹುದು . ಹಲವು ಸಮಯ ಹಿಂದೆ ವಾರಕ್ಕೊಮ್ಮೆ ಉದಯವಾಣಿ ದಿನ ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ " ಪುರಾಣ ಬಾಲರು " ಎಂಬ ಕಥಾಮಾಲಿಕೆಯನ್ನು ಧರ್ಮಸ್ಥಳ ಮೇಳದ ಕಲಾವಿದರಾದ ಶ್ರೀ ತಾರಾನಾಥ ಬಲ್ಯಾಯರು ಬರೆಯುತ್ತಿದ್ದು ಅದೀಗ "ಪುರಾಣ ಲೋಕದ ಬಾಲರು" ಎಂಬ ಪುಸ್ತಕವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಸುಮಾರು ೧೫೦ ವಿವಿಧ ಪುರಾಣದ ಬಾಲಕರ ಕುರಿತ ಕಥೆಗಳು ಇದರಲ್ಲಿ ಸ್ವಾರಸ್ಯಪೂರ್ಣವಾಗಿ ವಿವರಿಸುವುದರ ಜೊತೆಗೆ ಅವರ ಜೀವನದಿಂದ ಕಲಿಯಬಹುದಾದ ನೀತಿಯನ್ನು ಕೊನೆಯಲ್ಲಿ ಕೊಡಲಾಗಿದೆ . ಇದೊಂದು ಸಂಗ್ರಹಯೋಗ್ಯ ಪುಸ್ತಕವಾಗಿದ್ದು ಎಲ್ಲ ವಯೋಮಾನದವರಿಗೂ ಓದಿ ತಿಳಿದುಕೊಳ್ಳಲು ಸಹಕಾರಿಯಾಗಿದೆ . ಇದನ್ನು ಓದಿದಲ್ಲಿ ಮಕ್ಕಳಿಗೆ ಕಥೆ ಹೇಳಲು ತುಂಬ ಅನುಕೂಲ . ಕೇವಲ ಕಥೆಯನ್ನು ಕೇಳುವುದು ಮಾತ್ರವಲ್ಲ ಅಮ್ಮನೊಂದಿಗೆ ಆತ್ಮೀಯ ಕ್ಷಣಗಳನ್ನು ಸವಿಯಲು ಮಕ್ಕಳಿಗೆ ಅನುವು ಮಾಡಿ ಕೊಟ್ಟ೦ತಾಗುತ್ತದೆ.
ಬರಿಯ ದೂರದರ್ಶನವನ್ನೇ ನೋಡುತ್ತ ಅಮ್ಮನ ಮಡಿಲಿನ ಸುಖಕಥೆಗಳಿ೦ದ ಪುಳಕಿತರಾಗಲು ಪುಸ್ತಕವನ್ನು ಪ್ರಕಟಿಸಿ ಎಲ್ಲರಿಗೂ ದೊರೆಯುವಂತೆ ಮಾಡಿದ ಶ್ರೀ ತಾರಾನಾಥ ಬಲ್ಯಾಯರು ನಿಜಕ್ಕೂ ಅಭಿನ೦ದನಾರ್ಹರು . ಈ ಪುಸ್ತಕವು ದಕ್ಷಿಣಕನ್ನಡದ ಬಹುತೇಕ ಎಲ್ಲ ಪುಸ್ತಕದ ಅಂಗಡಿಗಳಲ್ಲೂ ದೊರೆಯುತ್ತದೆ. ಅವಕಾಶವಿದ್ದಲ್ಲಿ ಅವಶ್ಯ ಕೊಂಡು ಓದಿ ಆನಂದಿಸಿ....

1 comment: