Monday, March 3, 2008

ಚೂರ್ಣಿಕೆ ......

ಬ್ರಾಹ್ಮಣರಿಗೆ ಭೋಜನ ವಿಧಿ ಕಡ್ಡಾಯ . ಬ್ರಾಹ್ಮಣರು ಉಣ್ಣುವ ಮೊದಲು ದೇಹದಲ್ಲಿರುವ ಪಂಚಾಗ್ನಿಗಳಿಗೆ ಆಹುತಿ ನೀಡುವುದು ಪದ್ಧತಿ. ಬಾಳೆ ಎಲೆಯಲ್ಲಿ ಬಡಿಸಿದ ಅನ್ನಕ್ಕೆ ಗಾಯತ್ರಿಯಿಂದ ಪ್ರೋಕ್ಷಣೆ ಮಾಡಿ ಪರಿಷಿ೦ಚನೆ ಗೈದ ಮೇಲೆ ಕೈಯ್ಯಲ್ಲಿ ನೀರನ್ನು ತುಂಬಿ ಅತೀ ..... ಮಂತ್ರವನ್ನುಚ್ಚರಿಸಿ ಆ ನೀರನ್ನು ಕುಡಿದ ಬಳಿಕ ಪ್ರಾಣ , ಅಪಾನ , ವ್ಯಾನ , ಉದಾನ ಮತ್ತು ಸಮಾನಗಳೆಂಬ ವಚನ ಆಹುತಿಗಳನ್ನು ಮಾಡಿ ಬಳಿಕ ಭೋಜನ ಸ್ವೀಕರಿಸುತ್ತಾರೆ . ಆದುದರಿಂದ ಬ್ರಾಹ್ಮಣ ಭೋಜನವೆಂಬುದು ದೇವ ಕಾರ್ಯವೆನಿಸಿಕೊಂಡಿದ್ದು ಪುಣ್ಯ ಕ್ಷೇತ್ರ ಗಳಲ್ಲಿ " ಮಡೆ ಸ್ನಾನ " ವೆಂಬ ಸೇವೆಗೆ ಅವಕಾಶವಿರುತ್ತದೆ. (ಅಂದರೆ ಬ್ರಾಹ್ಮಣ ಭೋಜನದ ಬಳಿಕ ಅವರುಂಡ ಬಾಳೆಯ ಮೇಲೆ ಉರುಳು ಸೇವೆ ಮಾಡಿ ಬಳಿಕ ಸ್ನಾನ ಮಾಡಿ ದೇವರ ದರ್ಶನ ಮಾಡುವುದು.)

ಸಾಮಾನ್ಯವಾಗಿ ಶುಭ ಕಾರ್ಯಕ್ರಮಗಳಲ್ಲಿ ಊಟ ಮಾಡುವಾಗ ದೇವರ ಸ್ಮರಣೆ ಮಾಡಲು ಶ್ಲೋಕಗಳನ್ನು ಹೇಳುವ ಪರಿಪಾಠ ಹಿರಿಯರಿಂದ ಬೆಳೆದು ಬಂದ ಸಂಪ್ರದಾಯ . ಶ್ಲೋಕವೊಂದನ್ನು ಊಟದ ವೇಳೆ ಹೇಳಿ ಕೊನೆಗೆ " ಭೋಜನ ಕಾಲೇ ನಮ: ಪಾರ್ವತಿ ಪತೆ ಹರ ಹರಾ " ಎಂದು ಹೇಳಿದಾಗ ಊಟದ ಸಾಲಿನಲ್ಲಿ ಕುಳಿತವರು " ಮಹಾದೇವ " ಎಂದುಪ್ರತಿ ವಚನ ನುಡಿಯುತ್ತಾರೆ . ಈ ಶ್ಲೋಕವನ್ನು ವಾಡಿಕೆಯಲ್ಲಿ " ಚೂರ್ಣಿಕೆ" ಎಂದು ಕರೆಯುತ್ತಾರೆ . ಮದುವೆ, ಉಪನಯನ ಮುಂತಾದ ಶುಭ ಸಮಾರಂಭ ಗಳಲ್ಲಿ ಸಾಮಾನ್ಯವಾಗಿ ಕೇಳ ಸಿಗುವ ಚೂರ್ಣಿಕೆಗಳೆಂದರೆ "ನಿತ್ಯಾನಂದಕರೀ ವರಾ ಭಯಕರೀ ...... " , " ಕಸ್ತೂರೀ ತಿಲಕೇ ...... " , "ವ೦ದೇ ಶಂಬ್ಹುಂ ...." ಇತ್ಯಾದಿ . " ಸುದರಿಕೆಯಲ್ಲಿ " ಪಳಗಿದ ಹಿರಿಯರು ಈ ಶ್ಲೋಕದ ಕೊನೆಯನ್ನೇ ಕಾಯುತ್ತಿದ್ದು ಒಮ್ಮೆಲೇ " ಭೋಜನ ಕಾಲೇ ನಮ: ಪಾರ್ವತಿ ಪತೆ ಹರ ಹರಾ " ಎಂದು ಉತ್ಸಾಹದಿಂದ ಘೋಷಿಸುತ್ತಾರೆ ! ಕೂಡಲೇ ಸಾಲಿನಲ್ಲಿ ಕುಳಿತವರು " ಮಹಾದೇವ " ಎಂದು ಹೇಳಿದರೆ ಉತ್ಸಾಹಿ ಯುವಕರ ದನಿ ಇನ್ನೂ ಮುಗಿಯದೆ " ಮಹಾ ದೇ......................................... ..........ವ " ಎಂದಾಗಿರುತ್ತದೆ. ಭೋಜನದ ಕೊನೆಗೆ "ಭೋಜನಾಂತೇ ಗೋವಿಂದ ನಾಮ ಸಂಕೀರ್ತನಂ " ಗೋವಿ೦ದಾನಿ ಗೋವಿಂದ " ಎಂದಾಗ "ಗೋವಿಂದ " ಎನ್ನುತ್ತ ಮೆಲೇಳುವುದು ಕ್ರಮ . ಹೀಗೆ ಭೋಜನ ಮದ್ಯೆ ಚೂರ್ಣಿಕೆ ಹೇಳುವವರ ಸ೦ಖ್ಯೆ ದಿನೇ ದಿನೇ ಕ್ಷೀಣವಾಗುತ್ತಿದೆ. ಕಾಲ ಕ್ರಮೇಣ ಯಾಂತ್ರಿಕ ಬದುಕಿನ ಒತ್ತಡದಿಂದಾಗಿ ಈ ಸಂಪ್ರದಾಯವೂ ನಶಿಸಿ ಹೋಗುವುದರಲ್ಲಿ ಅನುಮಾನವಿಲ್ಲ.

No comments: