Thursday, January 22, 2009

ಓ ನನ್ನ ನಲ್ಲೆ .......



ಗಾಬರಿಯಾಗಬೇಡಿ ಭಟ್ಟರು ಏನು ಸಡನ್ನಾಗಿ ರಸಿಕರಾಗಿಬಿಟ್ಟರು ಅಂತ ....!!!!
ನಾನು ಇಲ್ಲಿ ಹೇಳಹೊರಟಿರುವುದು ಹೊಸತಾದ ಒಂದು ಕಥಾನಕವನ್ನು .
ಆಗಷ್ಟೇ ಬಿಡುಗಡೆಯಾಗಿ ಸೂಪರ್ ಹಿಟ್ ಅನಿಸಿದ ಒಂದು ಸಿನೆಮಾವನ್ನು "ಯಕ್ಷಗಾನ" ವಾಗಿ ಪರಿವರ್ತಿಸಿದ್ದು ಖ್ಯಾತ ಪ್ರಸಂಗಕರ್ತ , ಸೂಪರ್ ಹಿಟ್ ಪ್ರಸಂಗಗಳ ಜನಕ ಈ ಕಥಾನಕವನ್ನೂ ಬರೆದು ಮುಂದಿನ ತಿರುಗಾಟಕ್ಕೆ ಸಿದ್ಧತೆ ಮಾಡಿದ್ದಾರೆ. ಅದರ ಕಥಾ ಹಂದರ ಎಲ್ಲವೂ ಸಿನೆಮಾದಿಂದ ಪ್ರೇರಣೆ ಮಾತ್ರ ! ಅದೇ ಸಿನೆಮಾದ "ಶಿರೋಗೀತೆಯನ್ನು" ವಿಶೇಷ ಆಕರ್ಷಣೆಯಾಗಿ ಖ್ಯಾತ ಭಾಗವತರು ನೃತ್ಯ ಸಂಯೋಜಿಸಿ ಆಡಿಸಲಿದ್ದಾರೆ . ಇದರ ಕಥಾನಾಯಕ ಗಿಟಾರ್ ನುಡಿಸುವುದರಲ್ಲಿ ನಿಸ್ಸೀಮ . ಬೇಟೆಯ ದೃಶ್ಯ , ಬೆಳದಿಂಗಳ ಕುಣಿತ , ಮಳೆಯಲ್ಲಿ ನಾಟ್ಯ , ಕ್ಷಣ ಕ್ಷಣಕ್ಕೂ ನಕ್ಕು ನಗಿಸಲು ನಾಲ್ಕು ಜನ ಹಾಸ್ಯಗಾರರು , ಕುತೂಹಲ ಭರಿತ ಸನ್ನಿವೇಶಗಳು ಖ್ಯಾತ ಕಲಾವಿದರ ಸಮ್ಮಿಲನದೊಂದಿಗೆ ರಂಗಕ್ಕೆ ಬರಲಿದೆ ನಿರೀಕ್ಷಿಸಿ.....



ಅದರಲ್ಲಿ ಬರುವ ಪ್ರಧಾನ ಪಾತ್ರಗಳ ವೇಷದ ಜಲಕ್ ಇಲ್ಲಿದೆ ....
ನಿಮ್ಮ ಅನಿಸಿಕೆಗಳೇನು ?



















Wednesday, January 7, 2009

ಆಧುನಿಕ 'ಶ್ರೀನಿವಾಸ ಕಲ್ಯಾಣ'

ಇತ್ತೀಚಿಗೆ ಮೇಳಗಳು ಹೆಚ್ಚಾಗಿ ಆಡುತ್ತಿರುವ ಪ್ರಸಂಗಗಳಲ್ಲಿ "ಶ್ರೀನಿವಾಸ ಕಲ್ಯಾಣ" ವು ಒಂದು . ಅಗರಿ ಶ್ರೀನಿವಾಸ ಭಾಗವತರು ರಚಿಸಿದ "ಶ್ರೀ ವೆಂಕಟೇಶ ಮಹಾತ್ಮೆ " ಪ್ರಸಂಗದ ಒಂದು ಭಾಗ ಈ ಶ್ರೀನಿವಾಸ ಕಲ್ಯಾಣ. ಸುಲಲಿತವಾದ ಸುಂದರ ಪದಗಳಿಂದ ಕೂಡಿದ ಈ ಪ್ರಸಂಗವನ್ನು ಸುರತ್ಕಲ್ ಮೇಳದವರು "ತಿರುಪತಿ ಕ್ಷೇತ್ರ ಮಹಾತ್ಮೆ " ಎಂಬ ಹೆಸರಿನಿಂದ ಆಡುತ್ತಿದ್ದು ಶೇಣಿ ಅಜ್ಜ ಈ ಪ್ರಸಂಗದ ಮಾಧವ ಭಟ್ಟ ನ ಪಾತ್ರವನ್ನು ತಮ್ಮದೇ ಅದ ಪ್ರತಿಭೆಯಿಂದ ಮೆರೆಸುತ್ತಿದ್ದರು . ಆ ಸಮಯದಲ್ಲಿ ಶಿವರಾಮ ಜೋಗಿಯವರ ಕಿರಾತ - ವೇಣೂರು ಸುಂದರ ಆಚಾರ್ಯರ ವಿಜಯ ಜೋಡಿ ಅತ್ಯಂತ ಜನಪ್ರಿಯವಾಗಿತ್ತು .



ಇತ್ತೀಚಿಗೆ ಕಟೀಲು ಮೇಳದವರು ಆಡಿದ 'ಪಂಚಕಲ್ಯಾಣ ' ಹಾಗೂ ಧರ್ಮಸ್ಥಳ ಮೇಳದವರು ಆಡಿದ 'ಶ್ರೀನಿವಾಸ ಕಲ್ಯಾಣ' ವನ್ನು ನೋಡುವ ಅವಕಾಶ ನನಗೆ ದೊರೆಯಿತು . ಕಟೀಲು ಮೇಳದ ಆಟದಲ್ಲಿ 'ಅನಾಮಿಕ' ವೇಷಧಾರಿಗಳು (ನನಗೆ ಕಲಾವಿದರ ಹೆಸರು ತಿಳಿದಿಲ್ಲ ) ಕಿರಾತನ -ಪದ್ಮಾವತಿ ಪಾತ್ರಗಳನ್ನು ನಿರ್ವಹಿಸಿದ್ದು ಸಭ್ಯ ಅಭಿನಯದಿಂದ ಮನಮುಟ್ಟುವಲ್ಲಿ ಯಶಸ್ವಿಯಾಯಿತು .



ಧರ್ಮಸ್ಥಳ ಮೇಳದ ಪ್ರಸಿದ್ಧ ಪುಂಡು ವೇಷಧಾರಿಯವರ ಕಿರಾತನ ಅಸಭ್ಯ ವರ್ತನೆಯನ್ನು ನೋಡಿದಾಗ ನಾನು ಧರ್ಮಸ್ಥಳ ಮೇಳದ ಆಟ ನೋಡುತ್ತಿದ್ದೇನೆಯೇ ? ಎಂಬ ಸಂದೇಹ ನನ್ನನ್ನು ಕಾಡಿತ್ತು!! ಸಹಕಲಾವಿದರ ಮೈ ಮುಟ್ಟಿ ಚೇಷ್ಟೆ ಮಾಡುವುದು , ಒದೆಯುವುದು, ಕುಣಿಯುವಾಗ ಅಡ್ಡಗಾಲಿಡುವುದು ಮುಂತಾದ ವರ್ತನೆ ಪ್ರೇಕ್ಷಕರಿಗೆ ಮುಜುಗರ ಕಿರಿಕಿರಿಯುಂಟು ಮಾಡುತ್ತಿತ್ತು. ಉಳಿದ ಪಾತ್ರಧಾರಿಗಳು ಎಷ್ಟೇ ಪ್ರಯತ್ನಿಸಿದರೂ ಪ್ರಧಾನ ಪಾತ್ರ ಕಿರಾತ ನಾದುದರಿಂದ ಒಟ್ಟು ಪ್ರದರ್ಶನ ಮನಮುಟ್ಟುವಲ್ಲಿ ವಿಫಲವಾಯಿತು.


ಎರಡೂ ಮೇಳದ ಆಟವನ್ನು ಬೆಳಗ್ಗಿನ ವರೆಗೆ ನೋಡಿದ ಬಳಿಕ ನನಗೆ ಅನಿಸಿದ್ದು 'ಶ್ರೀನಿವಾಸ ಕಲ್ಯಾಣ ' ಕೊನೆಯ ಕಥಾಭಾಗವಾಗಿ ಆಡಲು ಸೂಕ್ತವಾದ ಪ್ರಸಂಗವಲ್ಲ ! ಬೆಳಗ್ಗಿನ ಜಾವ ೪ ಗಂಟೆಯ ಬಳಿಕ ಬರೀ ಮದ್ದಳೆಯ ಪದಗಳನ್ನು ಕೇಳಲು ಹಿತವಾಗುವುದಿಲ್ಲ. ಈ ಪ್ರಸಂಗದಲ್ಲಿ ಕೊನೆಯ ಭಾಗಕ್ಕೆ ಚೆಂಡೆಯ ಪದ್ಯಗಳೇ ಇಲ್ಲ. ಒಟ್ಟಿನಲ್ಲಿ ಈ ಪ್ರಸಂಗವನ್ನು ಕೊನೆಗೆ ಆಡಿದಲ್ಲಿ ಆಟವು ನೀರಸವಾಗಿ ಕೊನೆಗೊಳ್ಳುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ .

Sunday, November 30, 2008

ಗಣಪತಿ ಕೌತುಕ

ಯಕ್ಷಗಾನ ಪೂರ್ವ ರಂಗದಲ್ಲಿ ಬರುವ ಗಣಪತಿ ಕೌತುಕವನ್ನು ಕೇಳುವುದೆಂದರೆ ಕಿವಿಗಳಿಗೆ ಹಬ್ಬ .

ಮಂಗಳೂರು ಆಕಾಶವಾಣಿಯಲ್ಲಿ ಕೃಷಿರಂಗ ಕಾರ್ಯಕ್ರಮದಲ್ಲಿ ಶ್ರೀ ದಾಮೋದರ ಮಂಡೆಚ್ಚರು ಹಾಡಿದ ಗಣಪತಿ ಕೌತುಕ ಸಣ್ಣವನಿದ್ದಾಗ ಕೇಳಿದ್ದೆ . ನಂತರ ತೆಂಕುತಿಟ್ಟು ಹಿತರಕ್ಷಣಾ ವೇದಿಕೆ ,ಸುಳ್ಯದವರು ಬಿಡುಗಡೆ ಮಾಡಿದ 'ಯಕ್ಷಗಾನ ಪೂರ್ವರಂಗ' ಧ್ವನಿ ಸುರುಳಿಯಲ್ಲಿ ಬಲಿಪ ಭಾಗವತರ ಗಣಪತಿ ಕೌತುಕ ಅದ್ಭುತವಾಗಿ ಮೂಡಿ ಬಂದಿದೆ . ಗಣಪತಿ ಕೌತುಕ ಪೂರ್ಣ ಪಾಠ ಬಾಯಿಪಾಠ ಬಂದರೆ ಮಾತ್ರ ಅದಕ್ಕೆ ಮದ್ದಲೆ ಸಾಥ್ ನೀಡುವುದಕ್ಕೆ ಸಾಧ್ಯ . ಹಾಗಾಗಿ ಪೂರ್ವರಂಗದಲ್ಲಿ ಅದನ್ನು ಹೇಳಬೇಕೆಂದರೆ ಭಾಗವತರಿಗೆ ಹಾಗೂ ಮದ್ದಲೆಗಾರನಿಗೆ ಅದು ಗೊತ್ತಿರಲೇ ಬೇಕು !


ಮತ್ತೆ ಮತ್ತೆ ನನ್ನನ್ನು ಕಾಡುತ್ತಿರುವ ಗಣಪತಿ ಕೌತುಕದ ಆರಂಭ ಹೀಗಿದೆ

" ಕಿಡ್ತಕ ಥೈ ಧಿಧ್ಧಿ ಥೈ ತಾಂ ಕಿಡ್ತಕ ತತ್ತರಿ ತತ್ತಾಂ , ತತ್ತೊಂ ಕಿಡ್ತಕ ತರಿಕಿಟ ಕಿಟತಕ ಅರುದಿನ ಮರುಮಗ ವಿಘ್ನ ವಿನಾಶಕ ......."

ಇತ್ತೀಚಿಗೆ ಮರೆಗೆ ಸಂದಿರುವ ಪೂರ್ವ ರಂಗದ ಒಂದು ವಿಶಿಷ್ಟ ಹಾಡು ಮುಂದಿನ ಪೀಳಿಗೆಗೆ " ಕೌತುಕ "ವಾಗಿಯೇ ಉಳಿಯಲಿದೆಯೇನೋ ?

Monday, October 20, 2008

ಟೆಂಟಿನ ಆಟ .....

ಆಗಿನ್ನೂ ನಾನು ೪ನೆ ತರಗತಿಯಲ್ಲಿದ್ದೆ . ವೇಣೂರು ಶಾಲಾ ಮೈದಾನದಲ್ಲಿ ಧರ್ಮಸ್ಥಳ ಮೇಳದವರು "ಸಮುದ್ರ ಮಥನ " ಆಟ ಆಡಲಿದ್ದಾರೆ ಎಂಬ ವಿಚಾರ ಒಂದು ತಿಂಗಳ ಮೊದಲೇ ರಾಘವೇಂದ್ರ ಪೈಗಳ ಅಂಗಡಿ ಮುಂದೆ ಅಂಟಿಸಿದ್ದ ಭಿತ್ತಿ ಪತ್ರಿಕೆ ನೋಡಿ ನಮಗೆಲ್ಲ ಅದೇನೋ ಒಂದು ರೀತಿಯ ಆನಂದ ! ದಿನವೂ ಶಾಲೆಗೆ ಹೋಗುವಾಗ ಮತ್ತು ಶಾಲೆಯಿಂದ ಬರುವಾಗ ಆ ಪೋಸ್ಟರನ್ನು ಒಂದು ಸಲ ನೋಡದಿದ್ದರೆ ಮನಸ್ಸಿಗೆ ಸಮಾಧಾನವಿಲ್ಲ !
ತುಳು ಆಟಕ್ಕೆ ಹೋಗಬಾರದೆನ್ನುವ ಅಲಿಖಿತ ಕಟ್ಟಪ್ಪಣೆ ಮನೆಯಲ್ಲಿ ಇದ್ದದ್ದರಿಂದ ಕನ್ನಡ ಆಟಕ್ಕೆ ಖಂಡಿತ ಒಪ್ಪಿಗೆ ಸಿಗುತ್ತದೆಯೆಂಬ ಆಸೆ !ಯಾವಾಗ ಮಾರ್ಚ್ ೧೮ ಶನಿವಾರ ಬರುತ್ತದೋ ಎಂದು ಕಾಯುತ್ತ ಇದ್ದ ನಾನು , ಇನ್ನೇನು ಆಟಕ್ಕೆ ಮೂರು ದಿನ ಮೊದಲೇ ಮನೆಯಲ್ಲಿ ಅಪ್ಪನಿಗೆ "ಬೆಣ್ಣೆ" ಹಾಕಲು ಸುರುಮಾಡಿದ್ದೆ!

ಆಟದ ಮುನ್ನಾದಿನ ಶಾಲಾ ಮಕ್ಕಳಿಗೆ ಶಾಲೆಯಿಂದ ಆಟಕ್ಕೆ ಹೋಗುವವರಿಗಾಗಿ ಗುರುತಿನ ಚೀಟಿ (ಶಾಲೆಯ ಸೀಲ್ ಇರುವ ಚೀಟಿ ) ವಿತರಣಾ ವ್ಯವಸ್ಥೆ ಇತ್ತು . ಶಾಲೆಯಿಂದ ತಂದ ಚೀಟಿ ತೋರಿಸಿದರೆ ಟೆಂಟ್ ನ ಆಟಕ್ಕೆ ಟಿಕೇಟಿನಲ್ಲಿ ಅರ್ಧ ಭಾಗ ವಿನಾಯಿತಿ ಸಿಗುತ್ತಿತ್ತು . ಆ ಚೀಟಿಯನ್ನು ಪಡೆಯಲು ನಿಂತ ಸಾಲಿನಲ್ಲಿ ಮೊದಲಿಗನಾಗಿ ಶೀಲ ಟೀಚರ್ ಕೊಟ್ಟ ಚೀಟಿಯನ್ನು ಭದ್ರವಾಗಿ ಕಿಸೆಯಲ್ಲಿರಿಸಿಕೊಂಡು ಮನೆಗೆ ತಂದು ಅಪ್ಪನಲ್ಲಿ "ಜಾಗ್ರತೆ " ತೆಗೆದಿಡಲು ಹೇಳಿ ಮರುದಿವಸ ಶಾಲೆಗೆ ನಡೆದೆ. ಶನಿವಾರ ಅರ್ಧ ದಿನ ಶಾಲೆ . ತರಗತಿಯಲ್ಲಿ ಕುಳಿತಿದ್ದರೂ ಮನಸ್ಸೆಲ್ಲ ರಾತ್ರಿಯ ಆಟದ ಮೇಲೆ !

೧೧ ಗಂಟೆಗೆ ೨ ನೆ ಬೆಲ್ ಅದ ತಕ್ಷಣ ಮೂತ್ರ ವಿಸರ್ಜನೆಗೆ ಓಡಿ ಹೋಗುತ್ತಿದ್ದುದು ಶಾಲಾ ಮೈದಾನದ ಬದಿಯ ಕುರುಚಲು ಪೊದೆಯ ಬಳಿಗೆ ! ಆಗ ನಮ್ಮ ದೃಷ್ಟಿ ಎಲ್ಲ ಮೈದಾನದ ಮದ್ಯೆ . "ಮೇಳದವರು ಬಂದಿದ್ದರೋ ಇಲ್ಲವೊ?" ಎಂಬ ಕಾತರ !

ಅಲ್ಲಿ ಟೆಂಟ್ ನ ಸಾಮಗ್ರಿಗಳನ್ನು ಇಳಿಸುತ್ತಿದ್ದ ಲಾರಿಯನ್ನು ನೋಡಿದಾಗ ಮನಸ್ಸಿಗೆ ನೆಮ್ಮದಿ !

ಮಧ್ಯಾಹ್ನ ಆಗುವುದನ್ನೇ ಕಾಯುತ್ತಿದ್ದ ನಾವು ಶಾಲೆ ಬಿಟ್ಟೊಡನೆ ಮನೆಯತ್ತ ಒಂದೇ ಓಟ .

ಮನೆಗೆ ಬಂದು ಊಟ ಮಾಡಿ ರೇಡಿಯೋ ದಲ್ಲಿ ಬರುತ್ತಿದ್ದ " ಆಕಾಶದಿಂದ ಧರೆಗಿಳಿದ ರಂಭೆ ......" ಹಾಡನ್ನು ಕೇಳುತ್ತಾ ರಾತ್ರಿಯ ಆಟಕ್ಕೆ ಕಾಯುತ್ತ ಕುಳಿತಿರುತ್ತಿದ್ದೆ .

ಆ ಹೊತ್ತಿನಲ್ಲಿ ಮನೆಯವರು ಹೇಳಿದ ಯಾವ ಕೆಲಸವನ್ನಾದರೂ ಮಾಡಲು ರೆಡಿ !

" ಒಪ್ಪದ ನೀತಿಯ ಮಾತುಗಳೆಲ್ಲ ತಟ್ಟನೆ ದಾರಿಯ ಹಿಡಿಯುವುವು " ಅಂತ ಕೆ.ಎಸ್.ನ . ಹೇಳಿದ ಮಾತು ನೂರು ಪ್ರತಿಶತ ಸತ್ಯವಾಗಿತ್ತು !

ಸಂಜೆಯಾಗುತ್ತಿದ್ದಂತೆಯೇ ಸ್ನಾನ ಮಾಡಿ ಅಪ್ಪನ ಪೂಜೆ ಮುಗಿಯುದನ್ನೇ ಕಾಯುತ್ತಿದ್ದೆ . ಎಂಟು ಗಂಟೆಯಾಗುತ್ತಿದ್ದ೦ತೆ ಏನೋ ಒಂದುರೀತಿಯ ತಳಮಳ ! ಎಲ್ಲಿ ಆಟ ಆರಂಭವಾಗಿ ಬಿಡುತ್ತದೋ , ನಮಗೆಲ್ಲಿ ಮಿಸ್ ಆಗುತ್ತದೋ ಎಂಬ ಭಯ !

ಬಟ್ಟಲಲ್ಲಿ ಬಡಿಸಿದ ಅನ್ನ ಹೊಟ್ಟೆಗಿಳಿಯದು !
"ಬಳುಸಿದ್ದೆಲ್ಲ ಉಂಡಿಕ್ಕಿ ಏಳೆಕ್ಕು " ಎಂಬ ದೊಡ್ಡಕ್ಕನ ಹುಕುಂ ಬೇರೆ ! ಅಂತೂ ಬೇಗ ಬೇಗನೆ ಊಟ ಮುಗಿಸಿ ಶಾಲನ್ನು ಹಿಡಿದುಕೊಂಡು ಅಪ್ಪನೊಂದಿಗೆ ಶಾಲಾ ಮೈದಾನದ ಕಡೆಗೆ ಅತ್ಯುತ್ಸಾಹದಿಂದ ಹೊರಟಾಗ ದೂರದಿಂದ ಮೈಕ್ನಲ್ಲಿ ಕೇಳುತ್ತಿದ್ದ "ಶರಣು ಶರಣಯ್ಯ... " ಪದ್ಯ ಇನ್ನೂ ಆಟ ಸುರುವಾಗಿಲ್ಲ ಎಂಬ ಸಮಾಧಾನ ನೀಡಿತ್ತು . ಹೋಗುವಾಗಲೇ ದಾರಿಯಲ್ಲಿ ರಾಘವೇಂದ್ರರ ಅಂಗಡಿಯಿಂದಲೇ ೧೦೦ ಗ್ರಾಂ . ನೆಲಕಡಲೆಯನ್ನು ತೆಗೆದು ಕೊಟ್ಟು "ಆಟದ ಹತ್ರೆ ಸಿಕ್ಕುದರ ತಿನ್ನೆಡ " ಅಂತ ಹಿತೋಪದೇಶ ನೀಡಿದಾಗ "ಹುಂ" ಅಂತ ತಲೆಯಾಡಿಸಿ ಬೇಗನೆ ಮೈದಾನಕ್ಕೆ ನಡೆದಾಗ ಆಗಲೇ ಜನ ಜಮಾಯಿಸಿತ್ತು . ಟಿಕೆಟ್ ಕೌಂಟರ್ ಬಳಿ ಬಂದಾಗಲೇ ನನಗೆ ಗೊತ್ತಾದದ್ದು ಶೀಲ ಟೀಚರ್ ಕೊಟ್ಟ ಚೀಟಿ "ಜಾಗ್ರತೆ" ತೆಗೆದಿಡಲು ಅಪ್ಪನ ಬಳಿ ಕೊಟ್ಟದ್ದು ಮನೆಯಲ್ಲೇ ಬಾಕಿ ಅಂತ !
ಛೆ ! ಹೀಗಾಯಿತಲ್ಲ ಅಂತ ಯೋಚಿಸುತ್ತಿದ್ದಾಗಲೆ ಎದುರಿನಲ್ಲಿ ದಿನಕರ ಮಾಸ್ತರು ದೇವರಂತೆ ಬಂದು ವಿನಾಯಿತಿ ಟಿಕೆಟ್ ಕೊಡಿಸುವಲ್ಲಿ ಸಹಕರಿಸಿದರು .ಟಿಕೆಟ್ ಪಡೆದ ನಾನು ಮತ್ತು ಅಪ್ಪ ನೇರವಾಗಿ ಚೌಕಿಯತ್ತ ನಡೆದೆವು . ಅಲ್ಲಿ ದೇವರ ಪ್ರಸಾದ ಪಡೆದ ಮೇಲೆ ಕಲಾವಿದರು ವೇಷ ಹಾಕುವುದನ್ನು ಅಪ್ಪ ತೋರಿಸಿದರು . ನಮ್ಮ ಊರಿನ ಸಮೀಪದವರೇ ಅದ ಎಂಪೆಕಟ್ಟೆ ರಾಮಯ್ಯ ರೈಗಳು ಅಪ್ಪನನ್ನು ಕಂಡು "ನಮಸ್ಕಾರ ಅಣ್ಣೆರೆ ಎಂಚ ಉಲ್ಲರ್ ?" ಅಂತ ಕೇಳಿದರು. ಅವರ ಪೆಟ್ಟಿಗೆಯ ಮೇಲೆ ಕುಳಿತು ಸ್ವಲ್ಪ ಹೊತ್ತು ಕುಶಲೋಪರಿ ಮಾತನಾಡಿದ ಬಳಿಕ ಅಪ್ಪ ಅವರನ್ನು ತೋರಿಸಿ ಇವತ್ತು ದೇವೇಂದ್ರನ ವೇಷ ರಾಮಯ್ಯಂದು ಎಂದು ಹೇಳಿದರು. ಬಳಿಕ ಉಳಿದ ಪರಿಚಯದ ಕಲಾವಿದರಿಗೆ ಕಿರು ನಗೆ ಬೀರಿ ನನ್ನನು ಕರೆದುಕೊಂಡು ಟೆಂಟಿನ ಒಳಗೆ ಕಬ್ಬಿಣದ ಕುರ್ಚಿಯಲ್ಲಿ ದಿನಕರ ಮಾಸ್ತರ ಪಕ್ಕ ಕುಳ್ಳಿರಿಸಿ "ಉದಿಯಪ್ಪಗ ಮಾಸ್ತರೊಟ್ಟಿ೦ಗೆ ಬಾ " ಹೇಳಿ ಆದೇಶಿಸಿ ಅಪ್ಪ ಬೀಳ್ಗೊಟ್ಟರು.
ಅಷ್ಟೊತ್ತಿಗಾಗಲೇ ಕೇಳಿ ಬಡಿಯಲು ಆರಂಭಿಸಿದ್ದ ಮೇಳದವರು ಮುಕ್ತಾಯ ಮಾಡಿದಾಗ ಸಂಗೀತಗಾರ ಸಂಗೀತ ಆರಂಭಿಸಿದ್ದರು.
ಸರಿಯಾಗಿ ಹತ್ತು ಗಂಟೆಗೆ ಪುತ್ತಿಗೆ ರಘುರಾಮ ಹೊಳ್ಳರು ರಂಗಸ್ಥಳಕ್ಕೆ ಬಂದು ದೇವೇಂದ್ರನ ಒಡ್ಡೋಲಗ ಆರಂಭಿಸಿದರು . ನಿಜಕ್ಕೂ ಯಕ್ಷಲೋಕದ ಅನಾವರಣ ಆರಂಭಗೊಂಡಿತ್ತು !
ಆ ದಿವಸ ಸಮುದ್ರ ಮಥನ ಪ್ರಸಂಗದ ವಿಶೇಷ ಆಕರ್ಷಣೆಯಾಗಿ ಉಜಿರೆಯ "ಕೃಷ್ಣ " ಆನೆಯನ್ನು ಸಿಂಗರಿಸಿ ತರಲಾಗಿತ್ತು . ದೇವೇಂದ್ರನ ಒಡ್ಡೋಲಗದ ಬಳಿಕ ದೇವೇಂದ್ರ -ದೇವತೆಗಳೆಲ್ಲ ವಿಹಾರಕ್ಕೆ ಐರಾವತ ಏರಿ ಹೊರಡುವ ದೃಶ್ಯದ ಸಮಯಕ್ಕೆ ಟೆಂಟಿನ ಒಂದು ಬದಿಯನ್ನು ಬಿಡಿಸಿ ಆನೆಯ ಮೇಲೆ ನಮ್ಮ ಎಂಪೆಕಟ್ಟೆಯವರು ದೇವೆಂದ್ರನಾಗಿ ಬರುವಾಗ ಸಿಡಿಮದ್ದು ಬ್ಯಾಂಡು ಸಮೇತ ರಂಗದ ಬದಿಗೆ ಬರುವಾಗ ಕುತೂಹಲದಿಂದ ನೋಡುತ್ತಿದ್ದ ನಾನು ಕುರ್ಚಿಯಿಂದ ಜಾರಿ ನೆಲಕ್ಕೆ ಬಿದ್ದೆ ! ಮಾಸ್ತರರು ಕೂಡಲೇ ಕೈ ಹಿಡಿದು ಎತ್ತಿ ಸ್ವಸ್ಥಾನಕ್ಕೆ ಕೂರಿಸಿದರು. ರಾತ್ರಿ ೨ ರ ಸಮಯ ಪುತ್ತೂರು ನಾರಾಯಣ ಹೆಗಡೆಯವರ ಬಲಿ ಯ ಪಾತ್ರದ ಜೊತೆಗೆ ಕಡತೋಕ ಮಂಜುನಾಥ ಭಾಗವತರ ಪದ್ಯ !
ಜೊತೆಗೆ ಮೂಕಾಸುರನ ಪ್ರವೇಶ !
ನಿಜಕ್ಕೂ ಅದೊಂದು ಅವಿಸ್ಮರಣೀಯ ಕ್ಷಣ .
ವಿಚಿತ್ರ ಬಣ್ಣಗಾರಿಕೆ ಹಾಗೂ ಮಾತಿನ ಮೋಡಿಯಿಂದ ಮೂಕಾಸುರನಾಗಿ ಕಾಣಿಸಿಕೊಂಡ ನಯನ ಕುಮಾರ್ ಅದ್ಬುತವಾಗಿ ಅಭಿನಯಿಸಿದ್ದರು . ಕುಂಬಳೆ ಸುಂದರ ರಾವ್ ಅವರ ವಿಷ್ಣು ,ಶ್ರೀಧರ ರಾಯರ ಲಕ್ಷ್ಮಿ ಇಂದಿಗೂ ಕಣ್ಣ ಮುಂದೆ ಕಾಣುತ್ತಿದೆ.
ಬೆಳಗಿನ ವರೆಗೂ ಕಣ್ಣು ಮುಚ್ಚದೆ ಆಟ ನೋಡಿದ್ದೇ ನೋಡಿದ್ದು !
ಮಂಗಳ ಪದ ಹಾಡುತ್ತಿದ್ದಂತೆ ಮಾಸ್ತರರು " ಇನ್ನು ಮನೆಗೆ ಹೊಪೋ " ಹೇಳಿ ನನ್ನನ್ನು ಹೊರಡಿಸಿದರು .
ರಾತ್ರಿ ಬರುವಾಗ ಇದ್ದ ಉತ್ಸಾಹ ಬೆಳಗಾದಾಗ ನಿದ್ದೆಯ ಝಳದಲ್ಲಿ ಇರಲಿಲ್ಲ . ಹೇಗೂ ರವಿವಾರ ಮನೆಗೆ ಬಂದವನೇ ಮುಖ ತೊಳೆದು ತಿಂಡಿ ತಿಂದು ಚಾಪೆಯಲ್ಲಿ ಮಲಗಿದಗಲೂ ಕಿವಿಯಲ್ಲಿ ಚೆಂಡೆ ಶಬ್ದ ಕೇಳಿದ ಅನುಭವ !
ಅಹಾ !
ಮಲಗಿ ಚೆನ್ನಾಗಿ ನಿದ್ದೆ ಹೊಡೆದ ನನಗೆ ಮದ್ಯಾನ ಊಟಕ್ಕೆ ಅಮ್ಮ ಎಚ್ಚರಿಸಿದಾಗಲೇ ಎಚ್ಚರವಾದದ್ದು. ಆಮೇಲೆ ಸ್ನಾನ ಮಾಡಿ ಊಟ
ಮುಗಿಸಿ ಮರಳಿ ನಿದ್ದೆ !
ನಾಲ್ಕುವರೆಗೆ ವಸಂತ ಮೂಲ್ಯ ಬಂದು ಆಟ ಅದಲು ಕರೆದಾಗಲೇ ಎಚ್ಚರ .
ಮುಳಿ ಗುಡ್ಡೆಗೆ ಹೋಗಿ ನಿನ್ನೆ ನೋಡಿದ ಆಟವನ್ನೇ ಮರುಪ್ರದರ್ಶನ !
ನಾನೆ ದೇವೇಂದ್ರ , ವಸಂತನೇ ಬಲಿ . ಬೂಬನೆ ಭಾಗವತ , ತೂತಾದ ಡಬ್ಬಿಯೇ ಚೆಂಡೆ !
ನಾಯಿ ಬಟ್ಟಲೆ ಜಾಗಟೆ !
ಕೊತ್ತಲಿಗೆಯನ್ನು ಹಿಡಿದುಕೊಂಡು ನಮ್ಮ ಯುದ್ಧ !

ಇಂದಿಗೂ ನನಗಿಂತ ಆಟ ಮರಳಿ ಸಿಕ್ಕಿಲ್ಲ .
ಎಲ್ಲಿ ಹೋಯಿತೋ ಆ ಯಕ್ಷಲೋಕದ ವಿಹಾರದ ಸಿಹಿ ದಿನಗಳು ??
ಇನ್ನು ಸಿಗಲಾರವೇ?
ತವಕದಲ್ಲಿ ಕಾಯುತ್ತಿರುವೆ .......


***



Sunday, September 7, 2008

ನೆರೆ ಬಂದ ಬಳಿಕ .......

"ಇಪ್ಪತ್ತು ವರ್ಷಗಳಿಂದ ಇಂಥ ಮಳೆ ಬಂದಿರಲಿಲ್ಲ ; ನಾನು ಶಾಲೆಗೆ ಹೋಗುತ್ತಿದ್ದಾಗ ಒಮ್ಮೆ ಇಂಥ ಮಳೆ ಬಂದು ಕೆಳಗಿನ ಪೇಟೆ ಪೂರ್ತಿ ಮುಳುಗಿ ಹೋಗಿ ಮೇಲಿನ ಪೇಟೆ ಯಾ ಅರ್ಧಕ್ಕೇ ನೀರು ಬಂದಿತ್ತು " ಎಂದು ಅಣ್ಣಪ್ಪ ಮೂಲ್ಯರು ನೆನಪಿಸಿಕೊಂಡರು. ಆ ದಿನ ನಿಜವಾಗಿಯೂ ಭಾರೀ ಮಳೆ ಸುರಿದಿತ್ತು .ಮುಸಲಧಾರೆಯ ಮಳೆ ನಿರಂತರ ಹದಿನೆಂಟು ಗಂಟೆಗಳ ಕಾಲ ಸುರಿದದ್ದರಿಂದ ಊರಿಗೆ ಊರೇ ಅಲ್ಲೋಲಕಲ್ಲೋಲವಾಗಿತ್ತು. ಫಲ್ಗುಣಿ ನದಿ ಉಕ್ಕೇರಿ ಹರಿಯುತ್ತಿತ್ತು. ಹಲವಾರು ಕುಟುಂಬಗಳು ನೀರುಪಾಲಾಗಿದ್ದವು .ಶಾಲೆಗಳಿಗೆ ಅಘೋಷಿತ ರಜೆ ಮುಂದುವರೆದಿತ್ತು . ಮಾಧ್ಯಮಗಳಲ್ಲಿ ಸಮೀಕ್ಷೆ , ಮಂತ್ರಿಗಳ ವೈಮಾನಿಕ ವೀಕ್ಷಣೆ ಎಲ್ಲವೂ ಆಗಿ ಪತ್ರಿಕೆಗಳ ಮುಖ ಪುಟಗಳಲ್ಲಿ " ಭಾರೀ ಮಳೆ ; ಇಪ್ಪತ್ತು ಸಾವು " ರಾರಾಜಿಸುತ್ತಿತ್ತು.
ನಿನ್ನೆಯಿಂದ ಮಳೆ ಇಳಿಮುಖವಾಗುತ್ತಿದ್ದಂತೆಯೇ ಆಳುವ ಪಕ್ಷದ ಶಾಸಕರು ತಮ್ಮ ಪಟಾಲಮ್ಮಿನೊಂದಿಗೆ ಊರಿಗೆ ಭೀತಿ ನೀಡಿ ನೊಂದ ಜನರಿಗೆ ಸಾಂತ್ವನ ನೀಡುವ ಕಾರ್ಯದಲ್ಲಿ ತೊಡಗುವವರಿದ್ದರು . ನದೀ ತೀರದ ಜನರಲ್ಲಿ ತೊಂಭತ್ತು ಪ್ರತಿಶತ ಜನರು ಬಡವರು. ತಮ್ಮ ಗುಡಿಸಲು ಮನೆಗಳನ್ನು ಕಳೆದುಕೊಂಡು ಶಾಲೆಯಲ್ಲಿ ಆಶ್ರಯ ಪಡೆದಿದ್ದರು . ಜನಾನುರಾಗಿಯೂ ಆಡ್ಯರೂ ಆದ ವೆಂಕಪ್ಪ ಶೆಟ್ಟರು ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಸ್ವಂತ ಖರ್ಚಿನಲ್ಲಿ ಮಾಡಿದ್ದರು . ಮಂತ್ರಿ ಮಂಡಲದಲ್ಲಿ ಚರ್ಚೆ ನಡೆದು ಎರಡು ಕೋಟಿ ರೂಪಾಯಿ ಪರಿಹಾರ ಧನ ಬಿಡುಗಡೆ ಮಾಡಲಾಗಿದೆ ಎಂಬ ವಿಚಾರ ಜನರಲ್ಲಿ ಸ್ವಲ್ಪ ಸಮಾಧಾನ ತಂದಿತ್ತು .
ಆ ದಿನ ಭೇಟಿ ನೀಡಿದ ಶಾಸಕರಾದ ಸಂಕಪ್ಪ ಬ೦ಗೇರರು ಮನೆ ಕಳೆದುಕೊಂಡವರಿಗೆ ಸಾಂತ್ವನ ಹೇಳಿದರು . ಕಾರ್ಯದಕ್ಶತೆಗೆ ಹೆಸರಾದ ಬ೦ಗೇರರು ಜನರ ಕಷ್ಟಗಳಿಗೆ ಕೂಡಲೇ ಸ್ಪಂದಿಸುತ್ತಿದ್ದುದರಿಂದ ಎರಡನೇ ಬಾರಿಯೂ ಚುನಾವಣೆಯಲ್ಲಿ ಭರ್ಜರಿ ಅಂತರದ ಗೆಲುವು ಸಾಧಿಸಿದ್ದರು .
ಇಡೀ ದಿನ ತಮ್ಮ ಪಟಾಲಮ್ಮಿನೊಂದಿಗೆ ನಷ್ಟದ ಅಂದಾಜು ಮಾಡಿದ ಶಾಸಕರು ಜನರಿಗೆ ಭರವಸೆ ನೀಡಿ ತಮ್ಮ ಕಾರನ್ನೇರಿದರು.
ಭಾರೀ ನಷ್ಟ ಸಂಭವಿಸಿದ್ದರಿಂದ ತಮ್ಮ ಕ್ಷೇತ್ರಕ್ಕೆ ಪೂರ್ತಿ ಎರಡು ಕೋಟಿ ರೂಗಳು ಬೇಕೆಂದು ವಿವರಣೆ ಬರೆದ ಶಾಸಕರು ಮರುದಿನವೇ ಪತ್ರಿಕಾಗೋಷ್ಠಿಯಲ್ಲಿ ನಿರ್ಧಾರ ಪ್ರಕಟಿಸಿದರು . ಮರುದಿವಸ ನಿರೀಕ್ಷೆಯಂತೆ ಹಣವೂ ಬಂತು .
ಸೋಮವಾರ ಪರಿಹಾರ ವಿತರಣಾ ಕಾರ್ಯಕ್ರಮ .
ರವಿವಾರ ರಾತ್ರಿ ಎರಡು ಘಂಟೆಯ ಸಮಯ ....
ಶಾಸಕರ ಆಪ್ತ ಸಹಾಯಕ ಕೇಶವ ಸುವರ್ಣರ ಮೊಬೈಲ್ ಒಂದೇ ಸಮನೆ ಮೊಳಗಿದಾಗ ನಿದ್ದೆಗಣ್ಣಲ್ಲೂ ಫೋನ್ ಎತ್ತಿದಾಗ
ಆ ಕಡೆಯಿಂದ ಶಾಸಕರು " ಕೇಶವ ನಾಳೆ ಕೊಡುವ ಪರಿಹಾರದಲ್ಲಿ "ನಮ್ಮ " ಖಾತೆಗೆ ಬರಬೇಕಾದ್ದು ಬಂದಿದೆ ತಾನೆ ??"
ಕೇಶವ : ಹೌದು ಸಾರ್
ಸಂಜೆಯೇ ಎಲ್ಲ ವ್ಯವಸ್ಥೆ ಮಾಡಿ ಬಂದಿದ್ದೇನೆ .
ನೂರುಲ್ ದರ್ಗಾದ ಹಾಜಿಯವರ ಮನೆಗೆ ಬರ್ತದೆ .!!
***

Saturday, August 9, 2008

ಚಿಕನ್ ಗೂನ್ಯ ......

ಇಡೀ ದಿನ ಗೊಬ್ಬರ ಹೊತ್ತು ಕೆಳಗಿನ ತೋಟಕ್ಕೆ ಸಾಗಿಸಿ ಸಂಜೆ ಬಂದು ಕೈಕಾಲು ತೊಳೆಯುವಾಗ ಕಾಲಿನ ಗಂಟು ನೋಯಲು ಸುರು . ಗೊಬ್ಬರ ಹೊತ್ತು ಅದೂ ಕೆಳಗಿನ ತೋಟಕ್ಕೆ ಹಾಕಿದ್ದಲ್ಲವೇ ? ಹಾಗೆ ಸ್ವಲ್ಪ ನೋವು ಅಂತ ಉದಾಸೀನ ಮಾಡಿ ಬಂದು ಕುಳಿತು ಚಾ ಕುಡಿಯುತ್ತ " ವಿಜಯ ಕರ್ನಾಟಕದಲ್ಲಿ" ಬಾಂಬ್ ಸ್ಪೋಟ ಪ್ರಕರಣ ಇವತ್ತೇನಾಯಿತು? ಅಂತ ನೋಡುತ್ತಾ ಕುಳಿತೆ.
ರಾತ್ರಿ ಊಟ ಮಾಡಿ ಮಲಗುವಾಗ ಏಕೋ ಮೈ ಎಲ್ಲ ಬಿಸಿ ಏರಿ ಜ್ವರ ಬಂದು ಬಿಟ್ಟಿತು ಜೊತೆಗೆ ಅಸಾಧ್ಯ ಗಂಟು ನೋವು .ಮರುದಿನ ಬೆಳಗ್ಗೆ ಹಾಸಿಗೆ ಬಿಟ್ಟು ಮೇಲೆ ಏಳಲೂ ಆಗದಷ್ಟು ಜ್ವರ.
"ಅಯ್ಯೋ ಗ್ರಹಚಾರವೇ " ಅಂತ ನೋವನ್ನು ಅನುಭವಿಸುತ್ತಿದ್ದಾಗ ಕೆಳಗಿನ ಮನೆ ಪುಟ್ಟಣ್ಣ ಬಂದು ಬಿಟ್ಟರು .
" ಪುಟ್ಟಣ್ಣ ಎನಗೂ ಚಿಕನ್ ಗೂನ್ಯ ಹಿಡುದತ್ತು ಮಾರಾಯ " ಅನ್ನುವಾಗಲೇ ಪುಟ್ಟಣ್ಣ "ಅನು ಈಗ ಅಸ್ಪತ್ರೆಂದಲೇ ಬತ್ತಾ ಇಪ್ಪದು " ಹೇಳುತ್ತಾ ಕೆಲವು ಮಾತ್ರೆಗಳನ್ನು ನನಗೂ ಕೊಟ್ಟು ಉಪಕಾರ ಮಾಡಿದರು.
ಹೇಗೋ ಸಾವರಿಸಿಕೊಂಡು ಮಧ್ಯಾಹ್ನ ೩ ಗಂಟೆಗೆ ನಮ್ಮ ಸರಕಾರೀ ಆಸ್ಪತ್ರೆ ಬಳಿ ಬಂದರೆ ಮಾರುದ್ದದ ಕ್ಯೂ . ಎಲ್ಲರ ಮನೆಯಲ್ಲೂ ಇದೇ ಅವಸ್ಥೆ .ಮೊದಲೇ ಸರಕಾರಿ ಆಸ್ಪತ್ರೆ ಅಂದರೆ " ಸೇವೆ ಉಚಿತ ಸಾವು ಖಚಿತ " ಅಂತ ಗೊತ್ತಿದ್ದರೂ ಅಲ್ಲಿಗೆ ಹೋಗದೆ ಬೇರೆ ದಾರಿ ಇಲ್ಲ . ಆದಿತ್ಯವಾರ ಉಳಿದ ಮೂರು ಮಂದಿ ಖಾಸಗಿ ವೈದ್ಯರಿಗೂ ರಜೆ . ಹಾಗೆಂದು ರಜೆಯ ದಿವಸ ಜ್ವರ ಬರಬೇಡ ಅಂತ ಹೇಳಲಾಗುತ್ತದೆಯೇ ?ಅಂತೂ ನನ್ನ ಸರದಿ ಬಂದಾಗ ೫ ಗಂಟೆ .
ಮಾತ್ರೆಗಳನ್ನು ಪಡೆದು ರಿಕ್ಷಾ ಹತ್ತಿ ಮನೆಗೆ ಬಂದು ಕುಳಿತಾಗ "ಮದ್ದು ಬಿಡ್ಲೆ ಪಂಪು ಕೊಂಡು ಹೊಪೋ ಹೇಳಿ ಇತ್ತೆ ಬಂದೆ " ಎನ್ನುತ್ತಾ ಪುಟ್ಟಣ್ಣ ಒಳಗೆ ಬಂದರು.
"ಮದ್ದು ನೀರಿಂಗೆ ಹಾಕಿದ್ದಾ? " ಅಣ್ಣ ಕೇಳಿದ .
"ಅಪ್ಪು"
"ಹಾಂಗಾರೆ ಇನ್ನು ಒಂದು ವಾರಕ್ಕೆ ಅದರ ಬಿಟ್ಟಕ್ಕು ಹೇಳಿ ಆಶೆ ಬಿಡು " ಹೇಳಿದ ಅಣ್ಣ .
ನೋಡಿದರೆ ಮದ್ದು ಬಿಡುವ ಸಂಜೀವನಿಗೂ "ಚಿಕನ್ ಗೂನ್ಯ "!
ಒಟ್ಟಿನಲ್ಲಿ ಈ ಮಹಾಮಾರಿಯಿಂದಾಗಿ ಬೆಳೆ ಬೆಳೆಯಲಿಲ್ಲ , ತೋಟಕ್ಕೆ ಮದ್ದು ಬಿಡದೆ ಇದ್ದ ಫಸಲೂ ರೋಗಕ್ಕೆ ತುತ್ತಾಗಿ ಮರದ ಬುಡದಲ್ಲಿ ಬಿದ್ದದ್ದನ್ನು ನೋಡುವಾಗ ಮುಂದೆ ಏನು ? ತೋಚುವುದಿಲ್ಲ .
ಈಗಾಗಲೇ ಅಕ್ಕಿಗೆ ಕೆ.ಜಿ.ಗೆ ೧೪ ರೂಪಾಯಿ ಇದ್ದದ್ದು ೧೯ಕ್ಕೆ ಏರಿದೆ . ಉಳಿದೆಲ್ಲ ದಿನಸಿಗಳಿಗೆ ಕನಿಷ್ಠ ೨೦ ರಿಂದ ೨೫% ಬೆಲೆ ಏರಿಕೆಯಾಗಿದೆ .ದುಡಿಯಲು ಚೈತನ್ಯವಿಲ್ಲ ತಿನ್ನಲು ಅನ್ನವಿಲ್ಲ ಬಹುಶ ಪ್ರಳಯ ಅಂದರೆ ಇದೇ ಇರಬೇಕೇನೋ?
ಎಲ್ಲ ಕಡೆಯೂ ಒಂದಲ್ಲ ಒಂದು ಕಾರಣಕ್ಕೆ ಜನರು ಪ್ರಾಣ ಬಿಡುತ್ತಲೇ ಇದ್ದಾರೆ.
ಇದೇ ರೀತಿ ಮುಂದುವರಿದರೆ ಮುಂದೊಂದು ದಿನ "ಅನ್ನಕ್ಕಾಗಿ" ಹೋರಾಟ ನಡೆಯುವುದು ಖಂಡಿತ .
ಆ ದಿನ ಬಹಳ ದೂರವಿಲ್ಲ ಅಂತ ಮನಸ್ಸು ಸಾರಿ ಹೇಳುತ್ತಿದೆ .
ನಿಮಗೇನನಿಸುತ್ತದೆ ?

Friday, August 8, 2008

ಬನ್ನ ಬಡುವೀ ಬಾಳು....

" ಮಕರಾಕ್ಷ ಮಡಿದ ವಾರ್ತೆಯ ಕೇಳಿ ......" ಎಂದು ಸುಶ್ರಾವ್ಯವಾಗಿ ಕಡತೋಕರ
ಪದ್ಯಗಳು ತೇಲಿ ಬರುತ್ತಿದ್ದರೆ ತನ್ಮಯವಾಗಿ ರ೦ಗದ ಮೇಲೆ ಅಭಿನಯಿಸುತ್ತಿದ್ದ
ಪಕಳಕುಂಜರ ರಾವಣ ಇಂದು ಮರಣಶಯ್ಯೆಯಲ್ಲಿ ದಿನವೆಣಿಸುತ್ತಿದ್ದಾನೆ ಎಂದು ತಿಳಿದಾಗ
ಮನಸ್ಸಿಗೆ ಬಹಳ ಖೇದವಾಗುತ್ತದೆ. ಪಕಳಕುಂಜರ ಅಂತರಂಗದ ಮಾತನ್ನು ಉದಯವಾಣಿಯಲ್ಲಿ ಓದಿದಾಗ ಎಂಥವರಿಗೂ ಮನಕಲಕುತ್ತದೆ .

ಚಿಕ್ಕವನಿದ್ದಾಗಲೇ ಪಕಳಕುಂಜರ ರಾವಣ, ಮೈರಾವಣ , ರುದ್ರಭೀಮ ,ಅಜಮುಖಿ, ಶೂರ್ಪನಖಿ, ಕುಕ್ಕಿತ್ತಾಯ , ಶು೦ಭಾಸುರ ,ಹಿಡಿಂಬ ಮುಂತಾದ ಬಣ್ಣದ ವೇಷಗಳನ್ನು ಎವೆಯಿಕ್ಕದೆ ನೋಡುತ್ತಿದ್ದವರಲ್ಲಿ ನಾನೂ ಒಬ್ಬ. ಶಿಸ್ತುಧ್ಧವಾದ ಕುಣಿತ, ತೆರೆಪೊರಪ್ಪಾಟು, ಚುಟ್ಟಿ ಇಡುವ ಕ್ರಮಗಳಿಗೆ ಹೆಸರಾದ ಕೃಷ್ಣ ನಾಯ್ಕರು ಅತೀವ ಶ್ರಧ್ಧೆಯಿಂದ ಪಾತ್ರ ನಿರ್ವಹಣೆ ಮಾಡುತ್ತಿದ್ದರು.
ಅದುವರೆಗೆ ಬಣ್ಣದ ಕುಟ್ಯಪ್ಪು , ಬಣ್ಣದ ಮಾಲಿಂಗ, ಚಂದ್ರಗಿರಿ ಅಂಬು , ತ್ರಿವಿಕ್ರಮ ಶೆಣೈ ಮುಂತಾದ ದಿಗ್ಗಜರು ತಮ್ಮ ಬಣ್ಣದ ವೇಷದ ಭೀಕರತೆಗೆ ಹೆಸರಾದರೆ ಪಕಳಕುಂಜ ಕೃಷ್ಣ ನಾಯ್ಕರು ಬಣ್ಣದ ವೇಷಕ್ಕೆ "ಲಾಲಿತ್ಯವನ್ನು" ನೀಡಿ ರಂಗದಲ್ಲಿ ಮೆರೆಸಿದವರು. ಅವರ ಕತ್ತರಿ ಕುಣಿತ ನೋಡುವುದೇ ಕಣ್ಣಿಗೆ ಹಬ್ಬ.
ಪಕಳಕುಂಜರ ದುಶ್ಯಾಸನ ವಧೆಯ ದುಶ್ಯಾಸನ ವೇಷದ ಪ್ರವೇಶವನ್ನು ಕೆಳಗಿನ ಕೊಂಡಿಯಲ್ಲಿ ಕಾಣಬಹುದು. (ರುದ್ರ ಭೀಮನ ಪಾತ್ರದಲ್ಲಿ ಬಣ್ಣದ ಮಾಲಿಂಗ .)
http://www.youtube.com/watch?v=aDjpL_UslZk

ಕಾಲನ ಹೊಡೆತಕ್ಕೆ ಸಿಕ್ಕು ಜರ್ಜರಿತರಾಗಿ ಜೀವಂತ ದಂತಕತೆಯಾಗಿರುವ ಇವರಿಗೆ ಸಹಾಯಹಸ್ತ ನೀಡಬೇಕಾದ್ದು ಯಕ್ಷಪ್ರೀಮಿಗಳೆಲ್ಲರ ಕರ್ತವ್ಯ .