Wednesday, January 7, 2009

ಆಧುನಿಕ 'ಶ್ರೀನಿವಾಸ ಕಲ್ಯಾಣ'

ಇತ್ತೀಚಿಗೆ ಮೇಳಗಳು ಹೆಚ್ಚಾಗಿ ಆಡುತ್ತಿರುವ ಪ್ರಸಂಗಗಳಲ್ಲಿ "ಶ್ರೀನಿವಾಸ ಕಲ್ಯಾಣ" ವು ಒಂದು . ಅಗರಿ ಶ್ರೀನಿವಾಸ ಭಾಗವತರು ರಚಿಸಿದ "ಶ್ರೀ ವೆಂಕಟೇಶ ಮಹಾತ್ಮೆ " ಪ್ರಸಂಗದ ಒಂದು ಭಾಗ ಈ ಶ್ರೀನಿವಾಸ ಕಲ್ಯಾಣ. ಸುಲಲಿತವಾದ ಸುಂದರ ಪದಗಳಿಂದ ಕೂಡಿದ ಈ ಪ್ರಸಂಗವನ್ನು ಸುರತ್ಕಲ್ ಮೇಳದವರು "ತಿರುಪತಿ ಕ್ಷೇತ್ರ ಮಹಾತ್ಮೆ " ಎಂಬ ಹೆಸರಿನಿಂದ ಆಡುತ್ತಿದ್ದು ಶೇಣಿ ಅಜ್ಜ ಈ ಪ್ರಸಂಗದ ಮಾಧವ ಭಟ್ಟ ನ ಪಾತ್ರವನ್ನು ತಮ್ಮದೇ ಅದ ಪ್ರತಿಭೆಯಿಂದ ಮೆರೆಸುತ್ತಿದ್ದರು . ಆ ಸಮಯದಲ್ಲಿ ಶಿವರಾಮ ಜೋಗಿಯವರ ಕಿರಾತ - ವೇಣೂರು ಸುಂದರ ಆಚಾರ್ಯರ ವಿಜಯ ಜೋಡಿ ಅತ್ಯಂತ ಜನಪ್ರಿಯವಾಗಿತ್ತು .



ಇತ್ತೀಚಿಗೆ ಕಟೀಲು ಮೇಳದವರು ಆಡಿದ 'ಪಂಚಕಲ್ಯಾಣ ' ಹಾಗೂ ಧರ್ಮಸ್ಥಳ ಮೇಳದವರು ಆಡಿದ 'ಶ್ರೀನಿವಾಸ ಕಲ್ಯಾಣ' ವನ್ನು ನೋಡುವ ಅವಕಾಶ ನನಗೆ ದೊರೆಯಿತು . ಕಟೀಲು ಮೇಳದ ಆಟದಲ್ಲಿ 'ಅನಾಮಿಕ' ವೇಷಧಾರಿಗಳು (ನನಗೆ ಕಲಾವಿದರ ಹೆಸರು ತಿಳಿದಿಲ್ಲ ) ಕಿರಾತನ -ಪದ್ಮಾವತಿ ಪಾತ್ರಗಳನ್ನು ನಿರ್ವಹಿಸಿದ್ದು ಸಭ್ಯ ಅಭಿನಯದಿಂದ ಮನಮುಟ್ಟುವಲ್ಲಿ ಯಶಸ್ವಿಯಾಯಿತು .



ಧರ್ಮಸ್ಥಳ ಮೇಳದ ಪ್ರಸಿದ್ಧ ಪುಂಡು ವೇಷಧಾರಿಯವರ ಕಿರಾತನ ಅಸಭ್ಯ ವರ್ತನೆಯನ್ನು ನೋಡಿದಾಗ ನಾನು ಧರ್ಮಸ್ಥಳ ಮೇಳದ ಆಟ ನೋಡುತ್ತಿದ್ದೇನೆಯೇ ? ಎಂಬ ಸಂದೇಹ ನನ್ನನ್ನು ಕಾಡಿತ್ತು!! ಸಹಕಲಾವಿದರ ಮೈ ಮುಟ್ಟಿ ಚೇಷ್ಟೆ ಮಾಡುವುದು , ಒದೆಯುವುದು, ಕುಣಿಯುವಾಗ ಅಡ್ಡಗಾಲಿಡುವುದು ಮುಂತಾದ ವರ್ತನೆ ಪ್ರೇಕ್ಷಕರಿಗೆ ಮುಜುಗರ ಕಿರಿಕಿರಿಯುಂಟು ಮಾಡುತ್ತಿತ್ತು. ಉಳಿದ ಪಾತ್ರಧಾರಿಗಳು ಎಷ್ಟೇ ಪ್ರಯತ್ನಿಸಿದರೂ ಪ್ರಧಾನ ಪಾತ್ರ ಕಿರಾತ ನಾದುದರಿಂದ ಒಟ್ಟು ಪ್ರದರ್ಶನ ಮನಮುಟ್ಟುವಲ್ಲಿ ವಿಫಲವಾಯಿತು.


ಎರಡೂ ಮೇಳದ ಆಟವನ್ನು ಬೆಳಗ್ಗಿನ ವರೆಗೆ ನೋಡಿದ ಬಳಿಕ ನನಗೆ ಅನಿಸಿದ್ದು 'ಶ್ರೀನಿವಾಸ ಕಲ್ಯಾಣ ' ಕೊನೆಯ ಕಥಾಭಾಗವಾಗಿ ಆಡಲು ಸೂಕ್ತವಾದ ಪ್ರಸಂಗವಲ್ಲ ! ಬೆಳಗ್ಗಿನ ಜಾವ ೪ ಗಂಟೆಯ ಬಳಿಕ ಬರೀ ಮದ್ದಳೆಯ ಪದಗಳನ್ನು ಕೇಳಲು ಹಿತವಾಗುವುದಿಲ್ಲ. ಈ ಪ್ರಸಂಗದಲ್ಲಿ ಕೊನೆಯ ಭಾಗಕ್ಕೆ ಚೆಂಡೆಯ ಪದ್ಯಗಳೇ ಇಲ್ಲ. ಒಟ್ಟಿನಲ್ಲಿ ಈ ಪ್ರಸಂಗವನ್ನು ಕೊನೆಗೆ ಆಡಿದಲ್ಲಿ ಆಟವು ನೀರಸವಾಗಿ ಕೊನೆಗೊಳ್ಳುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ .

4 comments:

murali said...

ee 'prasiddha pundu eshadhari'ge sahakalavidarannu odeyuva chata.. avaru aneka sala odeyuvudu, kuniyuvaga addaglu hauvudu ityadi maaduvudannu nanoo nodiddene..

YAKSHA CHINTANA said...

ತಿರುಪತಿ ಕ್ಷೇತ್ರ ಮಹಾತ್ಮೆ ಹಲವು ಸಲ ನೋಡಿದ್ದೇನೆ..ಶೇಣಿಯವರ ಮಾಧವ ಭಟ್ಟ ಜೋಗಿ ಹಾಗು ಆಚಾರ್ಯರ ಮೇಲೆ ಹೇಳಿದ ಕಿರಾತ ಹಾಗು ವಿಜಯನ ಪಾತ್ರಗಳು ನಾನು ಇಷ್ಟ ಪಟ್ಟಿದ್ದೇನೆ. ಹಿತ ಮಿತವಾದ ನಾಟ್ಯ ಹಾಸ್ಯದಿಂದ ಅಂದು ಮನ ಸೆಳೆದಿತ್ತು.. ಉಜಿರೆ ರಾಜ ಅವಾಗ ಪದ್ಮಾವತಿ ಮಾಡಿದ್ದರು. ಆದರೆ ಇತ್ತೀಚೆಗಿನ ತುಂಡು ಶ್ರೀನಿವಾಸ ಕಲ್ಯಾಣದ ಆವಿಷ್ಕಾರ ಮಾತ್ರ ತುಂಬ ಅಸಹನೀಯವಾಗಿದೆ. ಮನ ಬಂದಂತೆ ಸಮಯ ಮೀರಿ ಕುಣಿಯುವುದು. ಮೇರೆ ಮೀರಿದ ಹಾಸ್ಯ ಅಭಾಸಗಳು ರಂಜನೆಯ ಹೆಸರಲ್ಲಿ ಯಕ್ಷಗಾನದ ಹಿರಿಮೆಯ ಬುಡವನ್ನೇ ಅಲುಗಾಡಿಸುವ ಪ್ರಯತ್ನಗಳು ತುಂಬ ಖೇದನಿಯ. ಇನ್ನು ಹಿರಿಯ ಕಲಾವಿದರ ಬಗ್ಗೆ ಹೇಳುವಾಗ ಒಂದು ಕಟು ಸತ್ಯವಾದ ಮಾತಿದೆ. ಸಾಮಾನ್ಯವಾಗಿ ಕಲಾವಿದರು ಸಹಜವಾಗಿ ತಮ್ಮ ದೈಹಿಕ ಕ್ಷಮತೆ ಕಡಿಮೆಯಾದಾಗ ನಿರ್ವಹಿಸುವ ಸಾಮರ್ಥ್ಯಕ್ಕೆ ಹೊಂದಿ ಕೊಂಡು ಪತ್ರಗಳ ಆಯ್ಕೆ ಮಾಡುತ್ತಾರೆ ಪುಂಡು ವೇಷಧಾರಿ ಯಗಿಯೋ ಸ್ತ್ರೀ ವೇಷ ಧಾರಿಯಾಗಿಯೋ ಮೆರೆಯುತ್ತಿದ್ದವರು ಬೇರೆ ಪತ್ರ ನಿರ್ವಹಣೆಯಲ್ಲಿ ಬದಲಾವಣೆ ಬಯಸುತ್ತಾರೆ. ಆದರೆ ಉಲ್ಲೇಖಿಸಲ್ಪಟ್ಟ ಕಲಾವಿದರು ಸಕಾಲದಲ್ಲಿ ಆ ಬದಲಾವಣೆ ಮದದಿದ್ದುದೆ ಈ ರೀತಿಯ ಅಭಾಸಗಳಿಗೆ ಮೂಲ ಕಾರಣ. ಚಲಾವಣೆಯ ನಾಣ್ಯ ಆಗುವಲ್ಲಿ ಇಂತಹ ಗಿಮಿಕ್ ಮಾಡಿ ಚಪ್ಪಾಳೆ ಗಿಟ್ಟಿಸಬೇಕಾದ ಅನಿವಾರ್ಯತೆ ವೃತ್ತಿಪರರಾಗಿ ಅವರಿಗೆ ಮಾಡಬೇಕಾಗುತ್ತದೆ. ಇನ್ನಾದರೂ ಸೂಕ್ತ ಬದಲಾವಣೆ ಮಾಡಿಕೊಂಡರೆ ಕಲೆಗೂ ಕಲಾವಿದನಿಗೂ ಉತ್ತಮ.

Unknown said...

sadyada mattinalli edaneer mela paripoorna mela . ella reetiyallo uttama pradarshana needuttiruva ee melada ata omme nodi. nimma nirase kadime adeetu.

Srinivasa kalyana ammannayaru chennagi adisuttare. nanu edaneer nodida prasanga olledagittu.

chirantana said...

nowadays artist Overact in this prasanga.