Saturday, May 29, 2010

ಯಕ್ಷಲೋಕದ ಮಹಾಪ್ರಸಂಗ "ಐದು ದಿನದ ಶ್ರೀದೇವಿ ಮಹಾತ್ಮೆ "




ಕರಾವಳಿ ಕರ್ನಾಟಕದ ಗಂಡು ಕಲೆ ಯಕ್ಷಗಾನವು ಹಲವಾರು ಕವಿಗಳ ವಿಶಿಷ್ಟ ಪ್ರಸಂಗ ರಚನೆಗಳಿಂದ ಸಮೃದ್ಧವಾಗಿದೆ .ಯಕ್ಷಗಾನ ಸಾಹಿತ್ಯವು ಕನ್ನಡ ಸಾರಸ್ವತ ಲೋಕದ ಒಂದು ವಿಶಿಷ್ಟ ಕಾವ್ಯ ಪ್ರಕಾರ. ಸರಿಯಾದ ಯಕ್ಷಗಾನ ಪ್ರಸಂಗ ರಚನೆ ಮಾಡಬೇಕಾದರೆ ವ್ಯಾಕರಣ ಛ೦ದಸ್ಸುಗಳ ಆಳವಾದ ಜ್ಞಾನ ಹಾಗೂ ರಂಗ ಪ್ರಯೋಗದ ಅಪಾರವಾದ ಅನುಭವಗಳು ಇದ್ದರೆಮಾತ್ರ ಸಾಧ್ಯ. ಯಕ್ಷಗಾನದ ಆದಿ ಕವಿ ಪಾರ್ತಿಸುಬ್ಬನಿಂದ ಹಿಡಿದು ಇಂದಿನವರೆಗೆ ಸರಿಯಾದ ಯಕ್ಷಗಾನ ಪ್ರಸಂಗ ರಚನೆ ಮಾಡಬೇಕಾದರೆ ವ್ಯಾಕರಣ ಛ೦ದಸ್ಸುಗಳ ಆಳವಾದ ಜ್ಞಾನ ಹಾಗೂ ರಂಗ ಪ್ರಯೋಗದ ಅಪಾರವಾದ ಅನುಭವಗಳು ಇದ್ದರೆಮಾತ್ರ ಸಾಧ್ಯ. ಯಕ್ಷಗಾನದ ಆದಿ ಕವಿ ಪಾರ್ತಿಸುಬ್ಬನಿಂದ ಹಿಡಿದು ಇಂದಿನವರೆಗೆ ಹಲವಾರು ಪ್ರಸಂಗಕರ್ತರು ಪುರಾಣ , ಚಾರಿತ್ರಿಕ, ಸಾಮಾಜಿಕ ಹಾಗೂ ಕಾಲ್ಪನಿಕ ಕಥೆಗಳನ್ನು ಆಧರಿಸಿ ಪ್ರಸಂಗ ರಚನೆಯನ್ನು ಮಾಡುತ್ತಾ ಬಂದಿದ್ದಾರೆ .

ತೆಂಕುತಿಟ್ಟು ಯಕ್ಷಗಾನವನ್ನು ಪರಿಷ್ಕರಿಸಿ ಪುನರುಜ್ಜೀವನ ನೀಡಿದ ಶಕಪುರುಷ ಹಿರಿಯ ಬಲಿಪ ನಾರಾಯಣ ಭಾಗವತರುಎಂಬುದು ಯಕ್ಷಪ್ರಿಯರೆಲ್ಲರೂ ತಿಳಿದಿರುವ ವಿಚಾರ . ಪರಂಪರೆಯನ್ನು ಯಶಸ್ವಿಯಾಗಿ ಮುಂದುವರಿಸಿದವರು ಈಗಿನ ಕಿರಿಯ ಶ್ರೀಬಲಿಪ ನಾರಾಯಣ ಭಾಗವತರು. ಯಕ್ಷಗಾನ ಕಲಾಲೋಕವನ್ನು ತಮ್ಮ ಕಲಾಸೇವೆಯಿಂದ ಸಮೃದ್ದಗೊಳಿಸಿದ ಬಲಿಪರು ಮೂವತ್ತಕ್ಕೂ ಮಿಕ್ಕಿ ಪ್ರಸಂಗಗಳನ್ನು ರಚಿಸಿ ರಂಗದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿ ವಿದ್ವಜ್ಜನರ ಮನ್ನಣೆಗೆ ಪಾತ್ರರಾದವರು. ಶ್ರೀಬಲಿಪರು ಹಿಂದಿನ ಯಾವ ಯಕ್ಷಕವಿಗಳೂ ಮಾಡದೆ ಇರುವ ಸಾಹಸವನ್ನು ಐದು ದಿನದ ಶ್ರೀದೇವಿ ಮಹಾತ್ಮೆ ಪ್ರಸಂಗವನ್ನು ರಚಿಸುವ ಮೂಲಕ ಮಾಡಿ ಯಕ್ಷಲೋಕದಲ್ಲೊಂದು ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ . ಐದು ರಾತ್ರಿಗಳಿಗಾಗುವ ಕಥೆಯನ್ನು ಶ್ರೀದೇವಿ ಭಾಗವತದಿಂದ ಆಯ್ದು ಮಹಾಪ್ರಸಂಗವನ್ನು ರಚಿಸಿ ನೂತನ ದಾಖಲೆ ನಿರ್ಮಿಸಿದ್ದಾರೆ .


ಪ್ರಸ್ತುತ ಯಕ್ಷಗಾನ ರಂಗದಲ್ಲಿ ಶ್ರೀದೇವಿ ಮಹಾತ್ಮೆಯ ಎರಡು ಪ್ರಸಂಗ ಕೃತಿಗಳು ಚಾಲ್ತಿಯಲ್ಲಿವೆ . ಅವುಗಳಲ್ಲಿ ಹಿರಿಯ ಬಲಿಪನಾರಾಯಣ ಭಾಗವತರು ರಚಿಸಿದ ಕೃತಿಯನ್ನು "ಬಲಿಪ ಪ್ರತಿ" ಎಂದೂ ಅಗರಿ ಶ್ರೀನಿವಾಸ ಭಾಗವತರು ರಚಿಸಿದ ಕೃತಿಯನ್ನು"ಅಗರಿ ಪ್ರತಿ"ಯೆಂದೂ ಪ್ರಸಿದ್ದಿ ಪಡೆದಿವೆ . ಅಗರಿಯವರು ಬರೆದ ಪ್ರಸಂಗವು ಗೇಯಗುಣ ಸಂಪನ್ನವೂ ಅತ್ಯಂತ ಸರಳವೂ ಆಗಿರುವ ಕಾರಣ ಬಹುತೇಕ ಎಲ್ಲ ಕಲಾವಿದರೂ ಪ್ರತಿಯನ್ನು ಅನುಸರಿಸುತ್ತಿದ್ದು ಅದರಲ್ಲಿನ ಪದ್ಯಗಳು ಪ್ರೇಕ್ಷಕರಿಗೂ ಬಾಯಿಪಾಠಬರುವಷ್ಟು ಪ್ರಖ್ಯಾತವಾಗಿದೆ. ( ಜಯತು ಜಯತು ಆದಿ ಮಾಯೆ ...., ಏಳಿರೇಳಿರಿ ಹರಿ ಹರಾದ್ಯರು , ವೀಣೆಯ ಪಿಡಿದಿರ್ಪ ವಾಣಿಯೀ ಪರಿಯಿಂದ , ದನುಜೇಶ ಕೇಳೆನ್ನ ಮಾತಾ , ಚಂಡ ಮುಂಡರ ಶಿರವ ಚೆಂಡನಾಡಿದ ವಾರ್ತೆ ... ಮುಂತಾದ ಪದ್ಯಗಳು ಅಗರಿಪ್ರತಿಯವು )
ಹಿರಿಯ ಬಲಿಪರ ಪ್ರತಿಯು ಕ್ಲಿಷ್ಟಕರ ಪದ್ಯಗಳನ್ನು ಒಳಗೊಂಡರೂ ಗೇಯಗುಣ ಸಂಪನ್ನವಾಗಿದ್ದು ಕಟೀಲು ಮೇಳದ ಎರಡನೇತಂಡದಲ್ಲಿ ( ಬಲಿಪರ ಮೇಳ ) ಇತ್ತೀಚಿನ ಕೆಲವು ವರ್ಷಗಳ ಹಿಂದೆಯವರೆಗೂ ಪೂರ್ಣ ಪ್ರಮಾಣದಲ್ಲಿ ಪ್ರದರ್ಶನವಾಗುತ್ತಿತ್ತು . (ಸಿಕ್ಕಿದಿರೆನ್ನಯ ಕೈಗೆ .... , ಓರ್ವನೇ ಮಲಗಿರಲು , ತೂಗಿದಳುಯ್ಯಲೆಯ , ಕಂಡನಾಗ ಚೆಲುವೆಯ .., ನಿದ್ದೆಯಲಿ ಮೈಮರೆತ ದಾನವ ..., ಏನೆಂಬೆ ದೈವಗತಿ ಮಾನಿನಿಯ ದೆಸೆಯಿಂದ ... ಮುಂತಾದ ಪದ್ಯಗಳು ಬಲಿಪ ಪ್ರತಿಯವು.) ಯುವ ಭಾಗವತರೊಬ್ಬರು ಬಲಿಪರ ಹಿರಿತನವನ್ನು ಧಿಕ್ಕರಿಸಿ ಕಟೀಲಿನ ಎರಡನೇ ಮೇಳದ ಪ್ರಧಾನ ಭಾಗವತರಾದ ಮೇಲೆ ಬಲಿಪ ಪ್ರತಿಯನ್ನು ರಂಗದಿಂದ ನಿವೃತ್ತಿಗೊಳಿಸುವ ಪ್ರಯತ್ನದಲ್ಲಿ ತೊಡಗಿರುವುದು ವಿಷಾದನೀಯ ಹಾಗೂ ಹೇಯಕರ. ಮೇಲೆ ಹೇಳಿದಎರಡೂ ಪ್ರತಿಗಳು ಒಂದು ರಾತ್ರೆಯಲ್ಲಿ ಆಡಿ ಮುಗಿಸಬಹುದಾದ ರಚನೆಗಳು.



ಹಿಂದೆ ನಮ್ಮ ಪೂರ್ವಿಕರು ದೇವಿ ಮಹಾತ್ಮೆಯನ್ನು ಮೂರು ದಿನ , ಐದು ದಿನ , ಏಳುದಿನ , ಒಂಭತ್ತು ದಿನ ಹೀಗೆಲ್ಲ ವಿಭಾಗಿಸಿ ಆಡುತ್ತಿದ್ದರಂತೆ . ಆದರೆ ಇದಕ್ಕೆ ಬೇಕಾಗುವ ಪ್ರಸಂಗ ಪದ್ಯಗಳನ್ನು ಆಶು ಕವಿಗಳಾದ ಅವರು ರಂಗದಲ್ಲೇ ರಚಿಸಿ ಆಡಿಸುತ್ತಿದ್ದು ಈಗ ಪದ್ಯಗಳು ಲಭ್ಯವಿಲ್ಲ . ನಮಗೆ ಹಿರಿಯರಿಂದ ತಿಳಿಯುವಂತೆ ಅಗರಿ ಭಾಗವತರು ,ಅಜ್ಜ ಬಲಿಪರು ಇಂಥ ಸಾಹಸ ಮಾಡಿದ್ದುತಿಳಿದು ಬರುತ್ತದೆ.



ಪ್ರಸ್ತುತ ಬಲಿಪರು ಬರೆದ ಮಹಾಪ್ರಸಂಗದಲ್ಲಿ ಶ್ರೀದೇವಿ ಭಾಗವತದ ಕಥೆಯನ್ನು ಆಧರಿಸಿ ಶ್ರೀ ಬಲಿಪರು ಐದು ಕಥಾನಕಗಳಾಗಿ ವಿಂಗಡಿಸಿ ಮೊದಲನೇ ದಿನ ಸುರಥ ವೈಶ್ಯರ ಕಥೆ , ಎರಡನೇ ದಿನ ಮಧುಕೈಟಭರ ವಧೆ - ಶಂಖ ದುರ್ಗರಪರಾಭವ , ಮೂರನೇ ದಿನ ರಂಭ-ಕರಂಭರ ವಧೆ , ನಾಲ್ಕನೆ ದಿನ ಮಹಿಷ ವಧೆ ಹಾಗೂ ಐದನೇ ದಿನ ಶುಂಭ -ನಿಶುಂಭರವಧೆಗಳೆಂಬ ಪ್ರಸಂಗ ಪದ್ಯಗಳನ್ನು ರಚಿಸಿದ್ದಾರೆ . ಓದುಗರಿಗೆ ಹಾಗೂ ಕಲಾವಿದರಿಗೆ ಅನುಕೂಲವಾಗಲೆಂದು ಪ್ರತಿ ಪ್ರಸಂಗದ ಆರಂಭದಲ್ಲಿ ಕಥಾ ಸಾರಾಂಶವನ್ನು ನೀಡಿದ್ದು ಪೂರ್ಣ ಕಥೆಯ ಅರಿವು ಕಲಾವಿದರಿಗೆ ಉಂಟಾಗಲು ಸಹಕಾರಿಯಾಗಿದೆ . ತಮ್ಮ ದೀರ್ಘ ಕಾಲದ ರಂಗಾನುಭಾವದಿಂದ ಪ್ರಸಂಗ ರಚಿಸಿದ ಕಾರಣ ಬಹುತೇಕ ಎಲ್ಲ ರಾಗಗಳ , ಎಲ್ಲ ತಾಳಗಳ ಪದ್ಯಗಳನ್ನು ಸಮಯೋಚಿತವಾಗಿ ಹದವರಿತು ಬಳಸಿರುವುದರಿಂದ ರಂಗ ಪ್ರಯೋಗದಲ್ಲಿ ಆಟವು ಕಳೆಗಟ್ಟಲು ಅನುಕೂಲವಾಗಿದೆ.
ಇಡೀ ಪ್ರಸಂಗವನ್ನು ಬರೆಯಲು ಶ್ರೀಬಲಿಪರು ಆರು ತಿಂಗಳಿಗೂ ಮಿಕ್ಕಿ ಸಮಯವನ್ನು ವಿನಿಯೋಗಿಸಿದ್ದು , ಹಸ್ತ ಪ್ರತಿಯ ಕರಡು ತಿದ್ದುವಿಕೆಯನ್ನು ಹಾಗೂ ಶುದ್ಧ ಪ್ರತಿಯನ್ನು ಬರೆದು ಕೊಟ್ಟವರು ಮಂಗಳೂರಿನ ಶ್ರೀ ಎಸ್.ನಾರಾಯಣರು . ಶ್ರೀಯುತರುಹಿರಿಯ ಬಲಿಪರ ಪ್ರಸಂಗ ಸಂಪುಟ ಮುದ್ರಿತವಾಗುವ ಸಮಯದಲ್ಲೂ ಅಂದವಾದ ಹಸ್ತ ಪ್ರತಿಯನ್ನು ಮಾಡಿ ಕೊಟ್ಟಿರುವುದು ಅವರಬಲಿಪರ ಮೇಲಿನ ಅಭಿಮಾನಕ್ಕೆ ಸಾಕ್ಷಿ .


ಊರಿಗೆ ತೆರಳಿದ್ದಾಗಲೆಲ್ಲ ಹಿರಿಯರಾದ
ಬಲಿಪರನ್ನು ಮಾತಾಡಿಸಿಕೊಂಡು ಬರುವುದು ನನ್ನ ಕ್ರಮ . ನಮ್ಮ ಮನೆಯಿಂದ ಬಲಿಪರಲ್ಲಿಗೆ ಮೈಲಿ ದೂರ . ನಮ್ಮ ತಂದೆಯವರಾದ ಎನ್ .ಎಚ್. ರಾಮಕೃಷ್ಣ ಭಟ್ಟರು ಬಲಿಪರ ಕಟ್ಟಾ ಅಭಿಮಾನಿಗಳಲ್ಲಿ ಒಬ್ಬರು. ಒಂದು ದಿನ ಅವರಲ್ಲಿ ಹೋಗಿದ್ದಾಗ ಐದು ದಿನದ ಪ್ರಸಂಗ ಬರೆಯುತ್ತಿರುವ ಬಗ್ಗೆ ಪ್ರಸ್ತಾವಿಸಿದರು . "ಈ ಪ್ರಸಂಗವನ್ನು ನೀವು ಪ್ರಿಂಟ್ ಮಾಡಿಸಿ , ನಿಮ್ಮ ಮನೆಯಲ್ಲೇ ನಿಮ್ಮ ತಂದೆಯವರ ಸಂಸ್ಮರಣೆ ದಿವಸ ಬಿಡುಗಡೆ ಮಾಡುವ " ಎಂದು ಬಲಿಪರು ಹೇಳಿದಾಗ ನಗೆ ಪರಮಾನಂದವಾಯಿತು. ಚಿಕ್ಕಂದಿನಿಂದ ಬಲಿಪರ ಹಾಡುಗಾರಿಕೆಯ ಸೆಳೆತಕ್ಕೆ ಒಳಗಾದವರಲ್ಲಿ ನಾನೊಬ್ಬನಾದುದರಿಂದ ಬಲಿಪರ ಜೀವಮಾನದ ಸಾಧನೆಯನ್ನು ಶಾಶ್ವತವಾಗಿ ದಾಖಲೀಕರಿಸಿ ಇಡುವ ಗುರುತರ ಜವಾಬ್ದಾರಿಯನ್ನು ಹಿರಿಯರಾದ ಬಲಿಪರು ಸದುದ್ದೆಶಪೂರ್ವಕವಾಗಿ ನೀಡಿದಾಗ ಹಿಂದೆ ಮುಂದೆ ಯೋಚಿಸದೆ ಮುದ್ರಣಕಾರ್ಯಪ್ರವೃತ್ತನಾದೆ. ಸರಿ ಸುಮಾರು ಒಂದು ವರುಷಗಳ ಕಾಲ ಸಮಯ ಸಿಕ್ಕಾಗಲೆಲ್ಲ ಮಹಾಪ್ರಸಂಗವನ್ನು ಗಣಕೀಕರಿಸಿಒಂದೊಂದು ಕಥಾನಕ ಮುಗಿದಂತೆ ಪ್ರಿಂಟ್ ತೆಗೆದು ಕರಡು ತಿದ್ದಲು ಬಲಿಪರಲ್ಲಿಗೆ ಕಳುಹಿಸುತ್ತಾ ಬಂದೆ. ಬಲಿಪರು ಅತ್ಯಂತ ಶ್ರದ್ಧೆಯಿಂದ ಅದನ್ನು ತಿದ್ದುಪಡಿ ಮಾಡಿ ತಮ್ಮಲ್ಲಿ ಇರಿಸಿಕೊಂಡಿದ್ದು ನಾನು ಮನೆಗೆ ತೆರಳಿದ್ದಾಗ ಮರಳಿ ಅದನ್ನು ಸಂಗ್ರಹಿಸಿ ತಂದು ಪುನರ್ ತಿದ್ದುಪಡಿ ಮಾಡಿ ಇಟ್ಟುಕೊಂಡೆ . ಇಡೀ ಪ್ರಸಂಗ ಗಣಕೀಕರಿಸಿದಾಗ ಸುಮಾರು ೨೪೫ ಪುಟಗಳು ತುಂಬಿದವು . ಈ ಮಧ್ಯೆ ಶ್ರೀಬಲಿಪರ ಬಳಿ ಪ್ರಸಂಗಕ್ಕೊಂದು "ಮುನ್ನುಡಿ" ಆಗಬೇಕು ಎಂದಾಗ ಯಕ್ಷಗಾನ ಕಲಾವಿದ , ಸಂಶೋಧಕ ವಿಮರ್ಶಕರಾದ ಡಾ.ಪ್ರಭಾಕರ ಜೋಷಿ ಯವರು ಬರೆದು ಕೊಡುತ್ತಾರೆ ಎಂದು ತಿಳಿಸಿದರು. ಅಂತೆಯೇ ಮುನ್ನುಡಿ ತಯಾರಾಗಿ ನನ್ನ ಕೈಸೇರಿ ಅದೂ ಗಣಕ ಯಂತ್ರದೊಳಗೆ ಸೇರಿತು.
ಎಲ್ಲ ತಿದ್ದುಪಡಿ ಆದ ಮೇಲೆ ಮುದ್ರಣಕ್ಕಾಗಿ ಮುದ್ರಣಾಲಯವನ್ನು ಸಂಪರ್ಕಿಸಿದಾಗ ಮುದ್ರಣ ಖರ್ಚು ಬೃಹತ್ ಮೊತ್ತವಾಗುವ ಬಗ್ಗೆ ಪೂರ್ವಸೂಚನೆ ದೊರೆಯಿತು . ಅಲ್ಲಿಗೆ ಕಡಿಮೆ ಆದಾಯದ ವೃತ್ತಿ ಪಂಗಡಕ್ಕೆ ಸೇರಿದ ನಾನು ಶ್ರೀಬಲಿಪರ ಈ ಜೀವಮಾನದ ಸಾಧನೆಯ ಕೃತಿ ಬಿಡುಗಡೆಯ ಕನಸನ್ನು ಕೈಗೂಡಿಸಬಲ್ಲೆನೆ ? ಎಂಬ ಸಂಶಯ ಮನದಲ್ಲಿ ಮನೆ ಮಾಡಿತು. ಆತ್ಮಾಭಿಮಾನ ಹಿಂದೇಟು ಹಾಕಿದರೂ ನೇರವಾಗಿ ಆತ್ಮೀಯ ಮಿತ್ರರಾದ ಚೆಮ್ಬಾರ್ಪು ಭಾವನಲ್ಲೂ , ನಮಗೆಲ್ಲ ಅನುಭವದಲ್ಲಿ ಹಿರಿಯಣ್ಣನಂತಿರುವ ಪೈವಳಿಕೆ ರಾಜಣ್ಣನವರಲ್ಲಿ ಹಾಗೂ ಅಶೋಕಣ್ಣನವರಲ್ಲಿ ಬಲಿಪರ ಮಹಾಪ್ರಸಂಗದ ಮುದ್ರಣ ಕುರಿತು ವಿಚಾರ ವಿನಿಮಯ ಮಾಡಿದಾಗ ಮಿತ್ರರೆಲ್ಲರೂ ಸೇರಿ ಮುದ್ರಣಕ್ಕೆ ಸಹಕಾರ ನೀಡುವುದೆಂಬ ನಿರ್ಣಯಕ್ಕೆ ಬರಲಾಯಿತು . ಅಂತೆಯೇ ನನ್ನ ಇತರ ಮಿತ್ರರಿಗೂ ವಿಚಾರ ತಿಳಿಸಿದಾಗ ಒಬ್ಬರು " ನಿನಗೆ ಮರುಳಲ್ಲದ ? ಆಟ ನೋಡಲೇ ಜನ ಈಗ ಹೊವ್ತವಿಲ್ಲೇ . ಇನ್ನು ನಿನ್ನ ಪ್ರಸಂಗ ಪುಸ್ತಕ ಆರು ತೆಕ್ಕೊಳ್ತವು ? " ಎಂದು ನೇರವಾಗಿ ಮುಖಕ್ಕೆ ಮಂಗಳಾರತಿ ಮಾಡಿ ಬಿಟ್ಟರು. ಅವರವರ ಅಭಿಪ್ರಾಯ ಅವರವರಿಗೆ ಎಂದು ಮರುಮಾತನಾಡದೆ ಉಳಿದ ಮಿತ್ರರೆಲ್ಲರಲ್ಲಿ ವಿಚಾರ ತಿಳಿಸಿದಾಗ ಸ್ವಯಂಸ್ಪೂರ್ತಿಯಿಂದ ಎಲ್ಲರೂ ಯಥಾಸಾಧ್ಯ ಸಹಕರಿಸಿ ವಾರದೊಳಗಾಗಿ ಮುದ್ರಣ ವೆಚ್ಚ ನನ್ನ ಉಳಿತಾಯ ಖಾತೆಗೆ ಜಮೆಯಾಯಿತು.

ಏನಿದ್ದರೂ ಒಳ್ಳೆಯ ಕೆಲಸಕ್ಕೆ ಹೊರಟಾಗ ಎಲ್ಲರ ಸಹಕಾರ ಸಹಾಯವಿದ್ದೇ ಇರುತ್ತದೆ ಎಂಬುದು ದೃಢವಾಯಿತು .
ಈ ಮಧ್ಯೆ ಸೆಮೆಸ್ಟರ್ ಕೆಲಸದ ಒತ್ತಡ ಹೆಚ್ಚಾಗಿ ಸುಮಾರು ಒಂದು ತಿಂಗಳು ಪ್ರಸಂಗವು ಗಣಕಯಂತ್ರದೊಳಗೆ ಬೆಚ್ಚಗೆ ಮಲಗಿತು .
ಮತ್ತೆ ಎಚ್ಚೆತ್ತು ಮುದ್ರಣಾಲಯಕ್ಕೆ ಹೋಗಿ ದರ ಪರಿಶೀಲನೆ ಹಾಗೂ ವ್ಯವಹಾರ ಕುದುರಿಸುವ ಕೆಲಸಕ್ಕೆ ವಾರಗಳ ಕಾಲ ಸಂದಿತು .
ಈ ಮಧ್ಯೆ ಬಲಿಪರು "ಇದು ದಾಸ್ತಾನಿಗೆ ಇರುವ ಪುಸ್ತಕ . ಆದ ಕಾರಣ ಪುಸ್ತಕ ಸ್ವಲ್ಪ ಚಂದ ಮಾಡಿ ಆಯ್ತಾ ? " ಎಂದು ಹೇಳಿದರು. ಮರಳಿ ತುಮಕೂರಿಗೆ ಬಂದ ನಾನು ಮುಖಪುಟ ವಿನ್ಯಾಸದ ಬಗ್ಗೆ ಚಿಂತಿಸತೊಡಗಿದೆ.

ಮುಖ ಪುಟ ವರ್ಣರಂಜಿತವಾಗಿ ಮಾಡಬೇಕೆಂಬ ಕಲ್ಪನೆಯಿಂದ ದೇವಿ ಮಹಾತ್ಮೆಯ ಫೋಟೋಗಳಿಗಾಗಿ ಹುಡುಕಾಟ ನಡೆಸಿದೆ . ಸಾಮಾನ್ಯವಾಗಿ ಎಲ್ಲ ಆಟಗಳಿಗೆ ಹಾಜರಾತಿ ಹಾಕುವ ನನ್ನ ಮಿತ್ರರಾದ ಉಲ್ಲಾಸ , ಲಕ್ಷ್ಮಿನಾರಾಯಣ ( ಲ. ನ .) ಹಾಗೂ ಪಡೀಲು ಶಿವಣ್ಣ ನಲ್ಲಿ ಫೋಟೋಗಳಿಗೆ ಬೇಡಿಕೆ ಇಟ್ಟಾಗ ಅವರು ತಮ್ಮ ತಮ್ಮ ಬತ್ತಳಿಕೆಯಲ್ಲಿದ್ದ ಫೋಟೋಗಳನ್ನು ಮಿಂಚಂಚೆ ಮೂಲಕ ಕಳುಹಿಸಿ ಕೊಟ್ಟರು . ಶಿವಣ್ಣ ಮಂಗಳೂರಿನಲ್ಲಿ ತೆಗೆದ ಶ್ರೀದೇವಿ ಫೋಟೋ ಒಮ್ಮತದಿಂದ ಮುಖ ಪುಟಕ್ಕೆ ಆಯ್ಕೆಯಾಯಿತು . ಇನ್ನು ನಮಗೆ ಹಿಂದಿನ ರಕ್ಷಾಪುಟಕ್ಕೆ ಮಹಿಷಾಸುರನ ಅಗತ್ಯವಿತ್ತು . ಯಾರಲ್ಲೂ ಸರಿಯಾದ ಮಹಿಷಾಸುರ ಸಿಗದಿದ್ದಾಗ ಮಿತ್ರ ಉಲ್ಲಾಸ ಮದ್ಯರಾತ್ರಿ ಮಂಗಳೂರಿನ ಡಾ . ಮನೋಹರ ಉಪಾಧ್ಯಾಯರಿಂದ ಮಹಿಷಾಸುರನನ್ನು ಸಂಗ್ರಹಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದ. ಆ ರಾತ್ರಿಯೇ " ದೇವಿಯ ಕೃಪೆ ಏನೆಂದು ಜೀ ಮೇಲ್ ನೋಡಿದವರಿಗೆ ತಿಳಿಯುತ್ತದೆ " ಎಂಬ ಸಂದೇಶ ನನ್ನ ಚರವಾಣಿಗೆ ೨.೧೯ ನಿಮಿಷಕ್ಕೆ ಬಂದಾಗ ಮಹಿಷಾಸುರ ಬಂದೇ ಬಿಟ್ಟ ಎಂಬಷ್ಟು ನೆಮ್ಮದಿಯಾಯಿತು. ಡಾ. ಜೋಷಿಯವರು ಬರೆದ ಮುನ್ನುಡಿಯ ತುಣುಕನ್ನು ಬಲಿಪರ ಭಾವಚಿತ್ರ ಸಮೇತ ಹಿಂದಿನ ರಕ್ಷಾಪುಟಕ್ಕೆ ಹಾಗೂ ಮಹಿಷಾಸುರ ಕೆಳಭಾಗಕ್ಕೆ ಹಾಗೂ ಮುಖಪುಟಕ್ಕೆ ಶ್ರೀದೇವಿ ಫೋಟೋ ಎಂದು ಅಂತಿಮಗೊಳಿಸಿ ಪುಟ ವಿನ್ಯಾಸಕಾರ ಶ್ರೀಯುತ ದಿನಕರ್ ರವರ ಬಳಿಗೆ ನಡೆದೆ. ನಿರ್ದೇಶಕರ ಕಚೇರಿಯಲ್ಲಿ ಬಿಡುವಿಲ್ಲದ ಕೆಲಸದಲ್ಲಿ ತಾವು ತೊಡಗಿದ್ದರೂ ಸಂಜೆಯ ಸಮಯ ಬಿಸಿ ಬಿಸಿ ಚಹಾ ಕುಡಿದು " ನೋಡುವ ಬನ್ನಿ ಭಟ್ರೇ " ಎಂದು ತಮ್ಮ ಬಳಿ ಕೂರಿಸಿ ನಾಲ್ಕು ವೈವಿಧ್ಯಮಯ ರಕ್ಷಾಕವಚ ವಿನ್ಯಾಸಗೊಳಿಸಿ ನನ್ನ ಕೈಗಿತ್ತರು .

ನಾಲ್ಕರಲ್ಲಿ ಯಾವುದು ಉತ್ತಮ? ಎಂಬುದು ಮುಂದಿನ ಪ್ರಶ್ನೆಯಾದಾಗ ಕೇಶವಣ್ಣ ಹಾಗೂ ಆಪ್ತ ಮಿತ್ರ ರಮೇಶ ಮೊದಲನೇ ವಿನ್ಯಾಸಕ್ಕೆ ನಾಲ್ಕನೇ ವಿನ್ಯಾಸದ ಬರೆಗಳನ್ನು ಸೇರಿಸಿದರೆ ಒಳ್ಳೆಯದು ಎಂದು ತೀರ್ಮಾನವಿತ್ತರು. ಚೆಮ್ಬಾರ್ಪು ಭಾವ ಹಾಗೂ ರಾಜಣ್ಣ ನೇರಳೆ- ನೀಲಿ ಬಣ್ಣವೇ ಸೂಕ್ತ ಎಂದು ಅಭಿಮತವಿತ್ತರು . ಅಲ್ಲಿಗೆ ಅದೇ ವಿನ್ಯಾಸ ಅಂತಿಮಗೊಳಿಸಲ್ಪಪಟ್ಟಿತು .

ಕೊನೆಗೆ ಮುಖ ಪುಟ ಮುದ್ರಣಕ್ಕೆ ಬೆಂಗಳೂರಿಗೆ ಹೊರಡುವ ಮುನ್ನ ಕೇಶವಣ್ಣನವರಲ್ಲಿ ನ್ಯಾಯ ಬೆಲೆಯ ಮುದ್ರಣಾಲಯ ಹುಡುಕಿಡುವ ಬಗ್ಗೆ ತಿಳಿಸಿದೆ . ಅದಾಗಲೇ ಹನುಮಂತನಗರದಲ್ಲಿ ಇರುವ ಮುದ್ರಣಾಲಯಕ್ಕೆ ಹಾಗೂ ಡಿಜಿಗೋ ಮುದ್ರಣದವರಲ್ಲಿ ಬೆಲೆ ವಿಚಾರಿಸಿ ನಮ್ಮ ಅವಶ್ಯಕತೆಗೆ ಹನುಮಂತನಗರದಲ್ಲಿ ಇರುವ ಮುದ್ರಣಾಲಯ ಸೂಕ್ತವೆಂದು ಕೇಶವಣ್ಣ ನಿರ್ಧರಿಸಿ, ಸೂಚನೆ ಇತ್ತಂತೆ ಅವರನ್ನೊಡಗೂಡಿ ಮುದ್ರಿಸಿ ಊರಿಗೆ ಸಾಗಿಸಿ ಒಳಪುಟಗಳನ್ನು ಮುದ್ರಿಸುವ ತೀರ್ಥಂಕರ ಪ್ರಿಂಟರ್ಸ್ ಮಾಲಿಕ ರಾಜೇಂದ್ರರಿಗೆ ತಲುಪಿಸಿದೆ .ಅವರು ಬೇರೆ ಬೇರೆ ತರಹದ ಪುಸ್ತಕ ಕೆಲಸವನ್ನು ತಮ್ಮ ಮುದ್ರಣಾಲಯದಲ್ಲಿ ಮಾಡುತ್ತಿದ್ದು , ನಮ್ಮದು ದೊಡ್ಡ ಪುಸ್ತಕವೆಂದು ನಿಧಾನಿಸಿದರು . ಪದೇ ಪದೇ ಫೋನಾಯಿಸಿ ಅವರ ಬೆನ್ನು ಹಿಡಿದು ಕೆಲಸ ಮಾಡಿಸುವ ಕೆಲಸ ನನ್ನ ಅಣ್ಣ ಶ್ರೀ ಉದನೇಶ್ವರ ಭಟ್ಟರು ಮಾಡಿದ್ದು , ಕೊನೆಗೂ ಅಚ್ಚಾಗಿ ಪುಸ್ತಕ ಹೊರಬಂದಾಗ "ಗಜ ಪ್ರಸವ" ದ ಅನುಭವ ನಮಗಾಯ್ತು !

ಈ ಮಧ್ಯೆ ಬಲಿಪರು ನಾಲ್ಕಾರು ಬಾರಿ ಫೋನಾಯಿಸಿ ಪುಸ್ತಕ ತಯಾರಾಯಿತಾ ? ಅಂತ ಉತ್ಸುಕರಾಗಿ ವಿಚಾರಿಸುತ್ತಾ ಇದ್ದು ಪುಸ್ತಕ ಪ್ರಕಟಣೆಯ ಪ್ರತಿ ಹಂತವನ್ನು ಅವರಿಗೆ ವಿವರಿಸುತ್ತ ಕೊನೆಗೊಂದು ದಿನ ಪುಸ್ತಕ ತಯಾರಾದಾಗ ೪ ಪ್ರತಿಗಳನ್ನು ತೆಗೆದುಕೊಂಡು ಅವರ ಮನೆಗೆ ತೆರಳಿ ಬಲಿಪರ ಕೈಗಿತ್ತಾಗ ಬಹಳ ಸಂತಸಪಟ್ಟು " ಕೊನೆಗೂ ಆಯ್ತಲ್ಲ . ಇನ್ನು ಹೆದರಿಕೆಯಿಲ್ಲ " ಎಂದರು .

ಇವೆಲ್ಲದರ ನಡುವೆ ಅವರಿಗೆ ಉಡುಪಿ ಬಳಿ ಕಟಪಾಡಿಯಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಸನ್ಮಾನ ಕಾರ್ಯಕ್ರಮವಿತ್ತು .ಅಲ್ಲಿ ಶ್ರೀಬಲಿಪರ ಅಭಿನಂದನಾ ಭಾಷಣ ಮಾಡುತ್ತಾ ಡಾ.ಪ್ರಭಾಕರ ಜೋಷಿಯವರು "ಬಲಿಪರು ೫ ದಿನದ ದೇವಿ ಮಹಾತ್ಮೆ ಪ್ರಸಂಗ ರಚಿಸಿದ್ದು ಅದು ಮುದ್ರಣ ಹಂತದಲ್ಲಿದೆ " ಎಂದು ಹೇಳಿದ್ದನ್ನು ಕೇಳಿಸಿಕೊಂಡ ಶೀರೂರು ಮಠದ ಶ್ರೀಪಾದಂಗಳವರು"ಅದನ್ನು ತನ್ನಿ ಉಡುಪಿ ರಾಜಾಂಗಣದಲ್ಲಿ ಬಿಡುಗಡೆ ಮಾಡೋಣ ಮಾತ್ರವಲ್ಲ ನಾನು ೫ ದಿನದ ಆಟ ಅಡಿಸ್ತೇನೆ" ಎಂದು ತುಂಬಿದ ಸಭೆಯಲ್ಲಿ ಘೋಷಿಸಿ ಬಿಟ್ಟರು . ಬಲಿಪರಿಗೆ ೫ ದಿನದ ಆಟ ಆಡಿಸುತ್ತಾರಲ್ಲಾ ಎಂದು ಸಂತಸ ಒಂದೆಡೆಯಾದರೆ ಬಿಡುಗಡೆ ಮಾಡುದು ನಮ್ಮ ಮನೆಯಲ್ಲಿ ಎಂದು ಮೊದಲೇ ನಿಶ್ಚಯಿಸಿ ಆಗಿದೆಯಲ್ಲ ? ಎಂಬ ಮಾನಸಿಕ ತುಮುಲ ಇನ್ನೊಂದೆಡೆ !

ಆ ದಿನ ಮನೆಗೆ ಬಂದವರೇ ಬಲಿಪರು ನೇರವಾಗಿ ನನಗೆ ಫೋನಾಯಿಸಿ ಸ್ವಾಮೀಜಿ ಹೀಗೆ ಹೇಳಿದ್ದಾರಲ್ಲ? ಏನು ಮಾಡುದು ಈಗ ? ಅಂತ ಕೇಳಿದರು. ನಾವು ಹೊರಟ ಉದ್ದೇಶ ಮತ್ತು ಬಲಿಪರು ಸಂಕಲ್ಪಿಸಿದ್ದು ನಮ್ಮ ಮನೆಯಲ್ಲಿ ಬಿಡುಗಡೆ ಮಾಡಲು. ಒಂದು ಕ್ಷಣ ನನಗೂ ಏನು ಮಾಡುದು ? ಎಂಬ ಗೊಂದಲ ಉಂಟಾಯಿತು. ಪ್ರಸಂಗ ಪುಸ್ತಕ ಬಿಡುಗಡೆ ನಮ್ಮ ಮನೆಯಲ್ಲಿ ಮಾಡಿದರೆ ಹೆಚ್ಚೆಂದರೂ ೧೦೦ ಮಂದಿ ಪ್ರೇಕ್ಷಕರಿದಾರಷ್ಟೇ.. ಉಡುಪಿ ರಾಜಾಂಗಣದಲ್ಲಾದರೆ ಕನಿಷ್ಠ ೫೦೦ ಜನವಾದರೂ ಇದ್ದಾರು .ಇದರಿಂದ ಪ್ರಸಂಗಕ್ಕೆ ಪ್ರಚಾರ ಹೆಚ್ಚು ಸಿಕ್ಕೇ ಸಿಗುತ್ತದೆ ಎಂಬುದು ಸಾಮಾನ್ಯ ಲೆಕ್ಕಾಚಾರ . ಬಲಿಪರ ಕಟ್ಟಾ ಅಭಿಮಾನಿಯಾಗಿದ್ದ ನಮ್ಮ ತೀರ್ಥರೂಪರ ಸ್ಮರಣಾರ್ಥ ನಡೆಸುವ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಬೇಕೆಂಬುದು ನಮ್ಮ ಸದಾಶಯ. ಹೇಗಿದ್ದರೂ ಪ್ರಸಂಗವನ್ನು ಪ್ರಕಟಿಸುವ ಅಂತಿಮ ಉದ್ದೇಶವೇ ಜನರಿಗೆ ಅದನ್ನು ತಲುಪಿಸಿ ಪ್ರಚುರಪಡಿಸಬೇಕೆಂಬುದು ಆಗಿರುವುದರಿಂದ, ನನ್ನ ಅಣ್ಣ ಉದನೇಶ್ವರ ಭಟ್ಟರು ನಮ್ಮ ಮನೆಯಲ್ಲಿ ಕೃತಿ ಬಿಡುಗಡೆಯೆಂದೂ ಉಡುಪಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಯೆಂದೂ ಎರಡು ಕಾರ್ಯಕ್ರಮ ಮಾಡೋಣ ಎಂದು ಹೇಳಿ ನಮ್ಮ ಸಂಕಟವನ್ನು ತಿಳಿಗೊಳಿಸಿದರು! ಕೂಡಲೇ ಬಲಿಪರಿಗೆ ಫೋನಾಯಿಸಿ ಹೀಗೆ ಮಾಡೋಣ ಆಗ ಅವರಿಗೂ ಬೇಸರವಾಗಲಾರದು ಎಂದೆ . ಬಲಿಪರಿಗೂ ಸಮಾಧಾನವಾಯಿತು .






ಪುಸ್ತಕವೇನೋ ತಯಾರಾಗಿ ಕೈಸೇರಿತು. ಈಗ ಬಿಡುಗಡೆಯ ದಿನ ನಿರ್ಣಯ ಮಾಡಬೇಕಿತ್ತು. ಮೊದಲೇ ನಿರ್ಧರಿಸಿದಂತೆ ಹೆಚ್ಚು ಜನ ಉದ್ದ ಉದ್ದ ಭಾಷಣ ಮಾಡುವುದು ಬೇಡವೆಂದು ಸರಳ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ ಗಮನ ನೀಡಲಾಯಿತು. ಎಲ್ಲರ ಬರುವಿಕೆಯ ಅನುಕೂಲ ನೋಡಿಕೊಂಡು ಇದೇ ಏಪ್ರಿಲ್ ೧೮ನೆ ಭಾನುವಾರ ನಮ್ಮ ವೇಣೂರಿನ ಕಜೆ ಮನೆಯಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಸುವುದೆಂದು ನಿಶ್ಚಯಿಸಲಾಯಿತು .ಅಧ್ಯಕ್ಷ ಸ್ಥಾನಕ್ಕೆ ವಿಮರ್ಶಕ ಹಾಗೂ ಮುನ್ನುಡಿ ಬರೆದ ಡಾ. ಜೋಶಿಯವರೂ , ಪ್ರಸಂಗಕರ್ತ ಬಲಿಪರೂ , ವೇಣೂರಿನ ನಮ್ಮ ಯಕ್ಷಗಾನ ಸಂಘದ ಅಧ್ಯಕ್ಷರಾದ ಶ್ರೀ.ಪಿ.ಮೋಹನ ರಾವ್ ಅವರು ನಮ್ಮಲ್ಲಿ ನಡೆಯುವ ಎಲ್ಲ ಯಕ್ಷಗಾನ ಕಾರ್ಯಕ್ರಮಕ್ಕೂ ಸೂತ್ರಧಾರರೂ ಅತ್ಯಂತ ಸ್ನೇಹಜೀವಿಯಾದ ಅವರನ್ನು ವೇದಿಕೆಯಲ್ಲಿ ಅಲಂಕರಿಸುವುದು ಎಂದು ನಿರ್ಧರಿಸಲಾಯಿತು. ಎಡೆಬಿಡದ ಕಾರ್ಯಕ್ರಮದ ನಡುವೆಯೂ ಈ ಪುಟ್ಟ ಸರಳ ಕಾರ್ಯಕ್ರಮಕ್ಕೆ ಬರಲೊಪ್ಪಿದ ಡಾ.ಜೋಷಿಯವರು ಮಧ್ಯೆ ಫೋನಾಯಿಸಿ ಈ ಕಾರ್ಯಕ್ರಮ ಬೇಕೋ ? ಉಡುಪಿಯಲ್ಲೇ ಮಾಡಿದರೆ ಸಾಕಿತ್ತಲ್ಲ ? ಎಂದರೂ "ಇಲ್ಲ " ನಮ್ಮಲ್ಲೇ ಮಾಡುದು ಮಾಡುದೇ ಎಂದು ಖಂಡಿತವಾಗಿ ಹೇಳಿದೆ .ಅದೇ ದಿನ ಬೇರೆ ಅನಿವಾರ್ಯ ಕಾರ್ಯಕ್ರಮ ಇದೆ ನನ್ನನ್ನು ೪ ಗಂಟೆಗೆ ಬಿ.ಸಿ.ರೋಡ್ ಗೆ ಹೋಗಲು ಅವಕಾಶ ಮಾಡಿಕೊಡಬೇಕೆಂಬ ಶರತ್ತಿನ ಮೇಲೆ ಸಂತಸದಿಂದ ಒಪ್ಪಿದ ಅವರು ೨.೩೦ಕ್ಕೆ ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮವನ್ನು ೨ ಗಂಟೆಗೆ ನಡೆಸಲು ಸೂಚಿಸಿದರು.

ಇದಕ್ಕೂ ಮೊದಲು ಕೃತಿ ಬಿಡುಗಡೆ ಬಳಿಕ ತಾಳಮದ್ದಲೆ ನಡೆಸುವುದೆಂದು ಯೋಚಿಸಿದ್ದೆವಾದರೂ ಅದೇ ಪ್ರಸಂಗದ ಆಯ್ದ ಪದ್ಯಗಳನ್ನು ಹಾಡಿಸುವುದು ಸೂಕ್ತವೆಂದು ಹಲವರು ಅಭಿಪ್ರಾಯಪಟ್ಟದ್ದರಿಂದ , ಮತ್ತು ಪ್ರಸಂಗದ ಪದ್ಯಗಳನ್ನು ಹೇಳಬೇಕಾದ ಕ್ರಮವನ್ನು ಪ್ರಸಂಗ ಕರ್ತರಿಂದಲೇ ಹಾಡಿಸಿದರೆ ಉತ್ತಮವೆಂಬ ನೆಲೆಯಿಂದ ಬಲಿಪ ತ್ರಯರಿಂದ ಆಯ್ದ ಹಾಡುಗಳ ಕಾರ್ಯಕ್ರಮವೆಂದು ನಿಶ್ಚಯಿಸಿದೆವು . ಅದಕ್ಕಾಗಿ ಬಲಿಪರಿಗೂ, ಅವರ ಚಿರಂಜೀವಿಗಳಾದ ಶ್ರೀ ಪ್ರಸಾದ ಬಲಿಪ ಮತ್ತು ಶ್ರೀ ಶಿವಶಂಕರ ಬಲಿಪರಿಗೆ ಯಕ್ಷ ಸಂಗೀತದ ಬಗ್ಗೆ ತಿಳಿಸಿದಾಗ ಅವರು ಸಂತೋಷದಿಂದ ಒಪ್ಪಿಕೊಂಡರು . ಹಿಮ್ಮೇಳ ಸಹಕಾರಕ್ಕೆ ಕುದ್ರೆಕ್ಕೊಡ್ಲು ರಾಮಮೂರ್ತಿ ಹಾಗೂ ಕೊಂಕಣಾಜೆ ಚಂದ್ರ ಶೇಖರಣ್ಣರನ್ನು ವಿನಂತಿಸಿಕೊಂಡು ಕಾರ್ಯಕ್ರಮದ ರೂಪುರೇಷೆಗಳನ್ನು ಅಂತಿಮಗೊಳಿಸಿದೆವು.
ಎಪ್ರಿಲ್ ೧೮ ರಂದು ಕಾರ್ಯಕ್ರಮದ ದಿನದಂದು ಸಮಯಕ್ಕೆ ಮೊದಲೇ ಎಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಸಮಯಕ್ಕೆ ಸರಿಯಾಗಿ ಆರಂಭಿಸಲು ಸಹಕರಿಸಿದರು. ಬೆಂಗಳೂರು ಮಿತ್ರರು , ಉಡುಪಿ ಮಿತ್ರರು ನೆರೆಕರೆಯ ಹಿತೈಷಿಗಳು ಎಲ್ಲರೂ ಸೇರಿ ಭೋಜನದ ಬಳಿಕ ಸರಿಯಾಗಿ ೨.೧೩ ನಿಮಿಷಕ್ಕೆ ನಿತಿನ್ ಗಣೇಶ ನ ವೈದಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭ , ಸ್ವಾಗತ, ಪುಸ್ತಕ ಬಿಡುಗಡೆ, ಡಾ. ಜೋಷಿಯವರ ಶುಭಾ೦ಸನೆ , ಪ್ರಸಂಗಕರ್ತರ ಮಾತು ಹಾಗೂ ವಂದನಾರ್ಪಣೆಯೊಂದಿಗೆ ಚುಟುಕಾಗಿ ಕಾರ್ಯಕ್ರಮ ಮುಗಿಸಿ ಬಳಿಕ ಯಕ್ಷ ಸಂಗೀತ ಬಲಿಪತ್ರಯರಿಂದ ಸಂಪನ್ನಗೊಂಡಿತು .











ಡಾ. ಜೋಷಿಯವರು ತಮ್ಮ ಭಾಷಣದಲ್ಲಿ ತಿಳಿಸಿದಂತೆ ಉಡುಪಿಯ ರಾಜಾಂಗಣದಲ್ಲಿ ಈ ಕೃತಿಯ ಮೊದಲ ಪ್ರಯೋಗ ಶ್ರೀ ಹೊಸನಗರ ಮೇಳದವರಿಂದ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟಿತು. ಆದರೆ ಉಡುಪಿಯಲ್ಲಿ ದೊಡ್ಡ ಮಟ್ಟಿನ ಸಭೆಯಲ್ಲಿ ಈ ಕೃತಿ ಬಿಡುಗಡೆಗೊಂಡು ಜನ ಪ್ರಚಾರ ಪಡೆದೀತೆಂಬ ನಮ್ಮ ಕಲ್ಪನೆ ಮಾತ್ರ ಕನಸಾಗಿಯೇ ಉಳಿಯಿತು !

ಬಲಿಪ ಭಾಗವತರು ತಮ್ಮ ಸುದೀರ್ಘ ಜೀವನಾನುಭವ ಹಾಗೂ ರಂಗಾನುಭಾವಗಳಿಂದ ಬರೆದ ಈ ಕೃತಿಯನ್ನು ಶಾಶ್ವತವಾಗಿ ಉಳಿಸಬೇಕಾದ ಗುರುತರ ಹೊಣೆಗಾರಿಕೆ ಯಕ್ಷಪ್ರಿಯರಾದ ನಿಮ್ಮ ನಮ್ಮೆಲ್ಲರ ಆದ್ಯ ಕರ್ತವ್ಯ. ಒಂದು ಮಹಾ ಕಾವ್ಯದಂತೆ ಒಂದು ಮಹಾಪ್ರಸಂಗವನ್ನು ಬಲಿಪರು ಬರೆದಿದ್ದು ಯಕ್ಷರಂಗದ ಅಪೂರ್ವ ದಾಖಲೆ ಇದು ಎಂದರೆ ಅತಿಶಯೋಕ್ತಿಯಲ್ಲ. ಕುವೆಂಪುರವರು ರಾಮಾಯಣ ದರ್ಶನಂ ಬರೆದಂತೆ, ಹಲವು ರಾಗ ತಾಳ ವೈವಿಧ್ಯತೆಯಿಂದ ಕೂಡಿದ ಒಂದು ಮಹಾ ಪ್ರಸಂಗವನ್ನು ಬಲಿಪರು ಬರೆದು ಸಮಕಾಲೀನ ಪ್ರಪಂಚದಲ್ಲಿ ತಮ್ಮ ವಿದ್ವತ್ತನ್ನು ಮೆರೆದಿದ್ದಾರೆ. ಸರಳ ಸಜ್ಜನಿಕೆಗಳ ಸಾರ್ವತ್ರಿಕ ಅಂಗೀಕಾರ ಹೊಂದಿದ ಬಹು ಅಪೂರ್ವ ಕಲಾವಿದ ಬಲಿಪರು ಮುಂದಿನ ಕಲಾವಿದರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಈ ಕೃತಿ ರಚಿಸಿದ್ದಾರೆ. ಇದನ್ನು ೫ ದಿನ , ೭ ದಿನ , ೧ ದಿನ ಅಥವಾ ಕಾಲಮಿತಿ ಪ್ರಯೋಗಕ್ಕೂ ಅಳವಡಿಸಿಕೊಳ್ಳಬಹುದಾದ ರೀತಿಯಲ್ಲಿ ರಚಿಸಿರುವುದರಿಂದ ಎಲ್ಲ ರೀತಿಯ ಯಕ್ಷ ಕಲಾಸಕ್ತರಿಗೆ ,ಹವ್ಯಾಸಿ ತಂಡದವರಿಗೆ , ಮಕ್ಕಳ ಯಕ್ಷಗಾನಕ್ಕೂ ಹಿತವಾಗಿ ಬಳಸಬಹುದಾಗಿದೆ.

ಐದು ದಿನದ ಈ ಕೃತಿಯು ಶಾಶ್ವತವಾಗಿ ಉಳಿಯಲಿ , ಅದನ್ನು ರಂಗದಲ್ಲಿ ಪ್ರಯೋಗಿಸಿ ಜನಪ್ರಿಯಗೊಳಿಸಿ ಯಕ್ಷರಸಿಕರೆಲ್ಲರೂ ಸವಿಯುವಂತೆ ಮಾಡಬೇಕಾದ ಹೊಣೆಗಾರಿಕೆ ಈಗಾಗಲೇ ಇರುವ ವೃತ್ತಿಪರ ಮೇಳಗಳು, ಹವ್ಯಾಸಿ ಕಲಾವಿದರು , ಮಕ್ಕಳ ಯಕ್ಷಗಾನ ತಂಡದವರು , ಹಾಗೂ ಸಂಘ ಸಂಸ್ಥೆ ಗಳ ಮೇಲಿದೆ. ಆ ಕಾರ್ಯದಲ್ಲಿ ನಾವೆಲ್ಲರೂ ಒಂದಾಗಿ ಸೇರೋಣ ಎನ್ನುವುದೇ ಈ ಲೇಖನದ ಉದ್ದೇಶ.

ನಿಮಗೇನನಿಸುತ್ತದೆ ?


26 comments:

YAKSHA CHINTANA said...

ಕೆಲವೊಂದು ಸತ್ಕಾರ್ಯಗಳು ಆಗಿ ಹೋದಾಗ, ಅದರಲ್ಲಿ ನಮ್ಮದೇಣಿಗೆಯೂ ಸಂದಾಯವಾದಗ ಒಂದು ರೀತಿ ಧನ್ಯತೆ ಭಾವ. ಅದಕ್ಕೆ ನಿಮ್ಮಿತ್ತವಾಗಿ ಯಾರದರೂ ಕಾರಣೀಭೂತರಾದಾಗ ಮೊದಲು ಧನ್ಯವಾದ ಅವರಿಗೆ ಸಲ್ಲಿಸಬೇಕು, ಆ ನಿಟ್ಟಿನಲ್ಲಿ ನಮ್ಮೀ ಸುಬ್ಬಣ್ಣ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇದರಲ್ಲಿ ಹಲವು ಮಿತ್ರರ ಸಹಕಾರ ಇರುವುದನ್ನು ಮರೆಯುವಂತಿಲ್ಲ.
ಈ ಮಹಾ ಪ್ರಸಂಗ ಒಂದು ಅದ್ಭುತ ಕೃತಿಯಾಗುವ ಸಕಲ ಅರ್ಹತೆ ಲಕ್ಷಣಗಳು ಇವೆ. ಕೇವಲ ಒಂದೆರಡು ಕವನ ಗೀಚಿ ಹಲವು ಪ್ರಶಸ್ತಿಗೆ ವಶೀಲಿ ಮಾಡುವವರು ಇರುವಾಗ ಬಲಿಪ್ಪರ ಈ ಯಕ್ಷಗಾನ ಕಾವ್ಯಕ್ಕೆ ಮುಕ್ತವಾಗಿ ಮತ್ತು ನ್ಯಾಯಯುತವಾಗಿ ಪ್ರಶಸ್ತಿ ಸಲ್ಲಬೇಕು, ಆದರೆ ನಮ್ಮ ಬಲಿಪ್ಪಜ್ಜ ಎಂದೂ ಅದರ ಹಿಂದೆ ಬಿದ್ದವರಲ್ಲ ಇದು ಸರ್ವ ವಿದಿತ.
ಇತ್ತಿಚಿನ ಮರಿ ಪ್ರಸಂಗ ಕರ್ತರು ಎಂದು ಕರೆಸಲ್ಪಡುವವರು, ಭಾಗವತ ಅಂತ ಹಣೆಪಟ್ಟಿ ಕಟ್ಟಿ ಶಾಲು ಹೊದ್ದು ಜಾಗಟೆ ಹಿಡಿವವರು, ಇದನ್ನು ಒಂದು ಸಲ ಪೂರ್ಣವಾಗಿ ಬರೀ ಒದುವ ಮನಸ್ಸಾದರೂ ಮಾಡಿದರೆ ಅದೇ ಮಹಾಭಾಗ್ಯ. ಅದೆಲ್ಲ ಈ ರಾಜಕೀಯ ಮತ್ಸಧ್ದಿಗಳಿಗೆ ಎಲ್ಲಿ ಮನಸ್ಸಾಗುತ್ತದೆ?
ಇನ್ನು ಕಟೀಲು ಮೇಳದ ಆ ಹಿರಿಯ ಭಾಗವತ ಅಂತ ತಾನೆ ಸ್ವಯಂ ಕರೆಸಿಕೊಳ್ಳುವವರ ಕೃತ್ಯದ ಬಗ್ಗೆ ಆಶ್ಚರ್ಯವೇನೂ ಅಗುವುದಿಲ್ಲ ಯಾಕೆಂದರೆ, ಇಂದಿನ ಜೀವನ ಕ್ರಮವೇ ಆ ರೀತಿಯಾಗಿದೆ, ಮೊದಲೆಲ್ಲ ಎಷ್ಟೇ ವಯಸ್ಸಾದರು ಆರೋಗ್ಯವಾಗಿದ್ದವರು ತಾಂಬೂಲ ತಿನ್ನುವಾಗ ಗೋಟಡಿಕೆಯನ್ನು ಹಲ್ಲಿನಲ್ಲಿ ಜಗಿದು ತಿನ್ನುತ್ತಿದ್ದರು. ಮಾತ್ರವಲ್ಲ ಎಷ್ಟೇ ಗಟ್ಟಿಯಾದ ತಿಂಡಿಯನ್ನು ಹಲ್ಲಲ್ಲಿ ಜಗಿದೇ ತಿನ್ನುತ್ತಿದ್ದರು, ಈಗಿನವರಿಗೆ ಎಲ್ಲಿದೇ...ತಾಂಬೂಲದ ಬದಲು ಗುಟ್ಕ..ಹಾಗೇನೆ ಈ ಕಠಿಣ ಶಭ್ದಗಳ ಬಲಿಪ್ಪರ ಪದಗಳು ಅವರು ಹಾಡದಿರುವುದೇ ಲೇಸಲ್ಲವೆ.. ಎರಡು ಪದಕ್ಕೆ ಇದ್ದ ಸ್ವರವನ್ನುಬೀಳಿಸಿಕೊಂಡು ಮತ್ತೆ ಸಂಗೀತ ಸೇರಿಸಿ ಸರ್ಕಸ್ಸು ಮಾಡುವ ಇವರು ಅಂತಹ ಪದಗಳನ್ನು ಹಾಡುವ ಸಾಹಸ ಮಾಡದಿರಲಿ.

Anonymous said...

೫ ದಿನದ ಪ್ರಸಂಗ ಪ್ರಕಟಿಸಿದ್ದು ಉತ್ತಮ ಪ್ರಯತ್ನ ಅದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ . ಆದರೆ ಕೆಲವೊಂದು ವಿಷಯ ಸ್ಪಷ್ಟಪಡಿಸಲು ಬಯಸುತ್ತೇನೆ .ಕಟೀಲಿನ ೩ ಮೇಳದವರೂ ಅಗರಿ ಪ್ರತಿ ಆಡುತ್ತಾರೆ . ಇದೊಂದು ಮೇಳದವರೇಕೆ ಬೇರೆ ಪ್ರತಿ ಆಡಬೇಕು ?
ಎಲ್ಲ ಮೇಳದವರೂ , ಕಲಾವಿದರೂ , ಹವ್ಯಸಿಗಳೂ ಅಗರಿ ಪ್ರತಿಯನ್ನೇ ಅನುಸರಿಸುತ್ತಾರೆ .
ಇದರಿಂದ ಕಟೀಲಿನ ೨ ನೆ ಮೇಳದ ಕಲಾವಿದರಿಗೆ ಹೊರಗಿನ ಆಟಗಳಲ್ಲಿ ಸಿಗುವ ಅವಕಾಶಗಳಿಗೆ ತೊಂದರೆ ಆಗುದಿಲ್ಲವೇ ?!
ಮೇಳದ ಯಜಮಾನರು ಯುವ ಭಾಗವತರ ಪ್ರತಿಭೆಯನ್ನು ಗುರುತಿಸಿ ಮುಕ್ಯ ಭಾಗವತನಗಿಸಿದ್ದು ತಪ್ಪೇ ???
ಅವರಲ್ಲೊ ಒಳ್ಳೆ ಸ್ವರವಿದೆ, ಆಟ ಮೆರೆಸುವ ,ಕಲಾವಿದರ ಅನುಕೂಲಕ್ಕೆ ತಕ್ಕಂತೆ ಪದ ಹೇಳುವ ಸಾಮರ್ತ್ಯವಿದೆ .
ಇಷ್ಟಿರುವಾಗ ಇನ್ನು ಹಳೆ ಕ್ರಮಕ್ಕೆ ಏಕೆ ಮಣೆ ಹಾಕಬೇಕು ? ಒಮ್ಮೆ ಯೋಚಿಸಿ ನೋಡಿ ಒಂದೇ ಯಜಮಾನರ ಮೇಳದಲ್ಲಿ ಒಂದೇ ರೀತಿ ಕ್ರಮ ತರುವುದು ಶಿಸ್ತು ಪಾಲನೆಗೆ ಒಳ್ಳೇದು ಅಂತ ನನ್ನ ಅನಿಸಿಕೆ.
ಕಾಲ ಬದಲಾಗಿದೆ. ಈಗ ಯಾರು ಸಮರ್ಥ್ಯವನ್ತರೋ ಅವರೇ ಜನಪ್ರಿಯರಾಗುವುದು . ಬಲಿಪರ ಒಂದೇ ರೀತಿಯ ಒಂದೇ ರಾಗದ ಪದ್ಯ ಕೇಳಿ ಕೇಳಿ ನಿಮಗಿನ್ನು ಸುಸ್ತಾಗಿಲ್ಲವೇ ?
ಇದು ಬದಲಾವಣೆಯ ಯುಗ ಪ್ರೇಕ್ಷಕ ಹೊಸತನ್ನು ಆಸ್ವಾದಿಸಲು ಬಯಸಿದರೆ ತಪ್ಪೇನು ?

chirantana said...

nice write-up . this gives a good insight for the first time publishing a book. i have attended that program. it was well organised.
Dr.Joshi and Balipajja spoke nicely on that day. i congratulate the efforts of Mr.Subrahmanya bhat and his friends for doing such a good work.
keep it up..

ಸುಬ್ರಹ್ಮಣ್ಯ ಭಟ್ said...

ನಿಮ್ಮ ಅಭಿನಂದನೆಗೆ ಕೃತಜ್ಞತೆಗಳು . ನೀವು ಸ್ಪಷ್ಟೀಕರಣ ನೀಡಲು ಬಹುಶ ಮೇಳದ ಯಜಮಾನರೋ ? ಆ ಯುವಕಲಾವಿದರ ಪೋಷಕರೋ ? ಅಥವಾ ಯಾರೇ ಆಗಲಿ ಯಾವ ನೆಲೆಯಲ್ಲಿ ಹೊರಟಿದ್ದೀರಿ ಎಂದು ನಮಗೆ ತಿಳಿಯಲಿಲ್ಲ ! ನೀವೆಂದಂತೆ ಎಲ್ಲ ಮೇಳಗಳೂ ಅಗರಿ ಪ್ರತಿಯನ್ನೇ ಆಡಲಿ ನಮ್ಮ ಅಭ್ಯಂತರವೇನೂ ಇಲ್ಲ ! ಆದರೆ ಅರ್ಧ ಬಲಿಪ ಪ್ರತಿ ಅರ್ಧ ಅಗರಿ ಪ್ರತಿ ಹಾದಿ ಆದೂ ಅಲ್ಲ ಇದೂ ಅಲ್ಲ ಎಂಬ ಪ್ರದರ್ಶನ ನೀಡುವುದು ಯಾವ ಪುರುಷಾರ್ಥಕ್ಕಾಗಿ ? ಇನ್ನು ಶ್ರೀಬಲಿಪರು ಸುಮಾರು ೫೦ ವರ್ಷಗಳಿಂದ ತಮ್ಮ ಮೇಳದಲ್ಲಿ ಬಲಿಪ ಪ್ರತಿಯನ್ನೇ ಶ್ರೀ ದೇವಿ ಮಹಾತ್ಮೆ ಆಡಲು ಉಪಯೋಗಿಸುತ್ತಿದ್ದು ಆಗೆಲ್ಲ ಕಲಾವಿದರಿಗೆ ತೊಂದರೆ ಆದದ್ದಿದೆಯೇ ? ಆಗಿನ ಕಲಾವಿದರು ಪ್ರಾಯ ಕಳೆದರೂ ಈಗಲೂ ಮಿಂಚುತ್ತಿಲ್ಲವೇ ?
ಇನ್ನು ಯುವ ಭಾಗವತರ ಬಗ್ಗೆ ನಿಮ್ಮ ಅಭಿಮಾನಕ್ಕೆ ನಮ್ಮ ಆಕ್ಷೇಪವಿಲ್ಲ .ಯಾವ ರೀತಿಯಿದಲೂ ಕಿರಿಯ ಬಲಿಪರಿಗೆ (ಮತ್ತು ಅವರ ಮಕ್ಕಳ ಮಟ್ಟಿಗೆ ) ಸಮಾನರಲ್ಲದ ಅವರು ತಮ್ಮ "ಸಾಮರ್ಥ್ಯ ವಿಶೇಷದಿಂದ " ಮುಖ್ಯ ಭಾಗವತರಾದದ್ದು ಸತ್ಯವೇ !

ಇದುವರೆಗೆ ಸುಮಾರು ತಮ್ಮ ವೃತ್ತಿ ಜೀವನದಲ್ಲಿ ೩೫ ಲಕ್ಷಕ್ಕೂ ಮಿಕ್ಕಿ ಪದ್ಯಗಳನ್ನು ಹಾಡಿರುವ , ಈಗಲೂ ಕ್ರಿಯಾಶೀಲರಾಗಿ ನಿವೃತ್ತರಾದರೂ ವಾರವಿಡೀ ತಮ್ಮ ವೃತ್ತಿಯಲ್ಲಿ ಪ್ರವೃತ್ತರಾಗಿರುವ ಭಾಗವತೋತ್ತಮರ ಬಗೆಗೆ ನಿಮಗೆ ಇರುವ ಅಜ್ಞಾನಕ್ಕಾಗಿ ವಿಷಾದಿಸುತ್ತೇನೆ . ಒಂದೇ ಪದ್ಯವನ್ನು ಹಲವು ರಾಗಗಳಲ್ಲಿ ಹಲವು ತಾಳಗಳಲ್ಲಿ ಹಾಡಿ ತೋರಿಸಬಲ್ಲ , ವರ್ತಮಾನದಲ್ಲಿ ಬೇರಾವ ಭಾಗವತನೂ ಅಧಿಕೃತವಾಗಿ ತಿಳಿಯದೆ ಇರುವ ಜ್ಞಾನ ಸಂಪತ್ತನ್ನು ಹೊಂದಿರುವ ಶ್ರೀ ಬಲಿಪರ ಬಗ್ಗೆ ಇನ್ನಾದರೂ ಸ್ವಲ್ಪ ತಿಳಿದುಕೊಳ್ಳಿ .
ಬದಲಾದ ಕಾಲಗತಿಯಲ್ಲಿ ಮಾಡಿದ್ದೆಲ್ಲ ಯಕ್ಷಗಾನ ಎಂದು ನೀವು ಒಪ್ಪುವುದಾದರೆ ನಿಮಗೆ ಯಾವ ಉತ್ತರ ನೀಡಿದರೂ ಪ್ರಯೋಜನವಿರಲಾರದು ಎಂದು ಭಾವಿಸುತ್ತೇನೆ .

ಇಷ್ಟಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ಇಲ್ಲಿ ಅನಾಮಧೇಯರಾಗದೆ ನಿಮ್ಮ ಹೆಸರಿನ ಸಮೇತ ಕೊಡುವ ಮನಸ್ಸು ಮಾಡಬಹುದಿತ್ತೇನೋ ? ಅಲ್ಲವೇ ?

YAKSHA CHINTANA said...

ಇಲ್ಲಿ ಭಾಗವತರ ಪ್ರತಿಭಾಸಂಪನ್ನತೆಗೆ ಆಕ್ಷೇಪವೆನೂ ಇಲ್ಲ. ಮನ್ನಿಸುವವರು ಮನ್ನಿಸುತ್ತಾರೆ, ಸವಿಯುವವರು ಸವಿಯುತ್ತಾರೆ, ಜನಪ್ರಿಯತೆಯ ಗಳಿಸುವಲ್ಲಿನ ಮಾರ್ಗ ಮಾತ್ರ ಪ್ರಷ್ನಾರ್ಹ. ಅದಕ್ಕೆ ಹೆಚ್ಚಿನವರು ಹೊರತಾಗಿಲ್ಲ ಅದು ಬೇರೆ.ಕೇವಲ ಚಪ್ಪಾಳೆಯೆ ಪ್ರತಿಭೆಗೆ ಹಿಡಿದ ಮಾನದಂಡವು ಅಲ್ಲ. ಹಾಗಾಗಿ ಪ್ರತಿಭೆಯಲ್ಲಿ ಪ್ರಸ್ತುತರು ಹೇಗೆ ಅಧಿಕ ಮತ್ತು ಅರ್ಹರು ಎಂದು ಅಥವಾ ನಿಮ್ಮ ಮಾನದಂಡ ಯಾವ ರೀತಿಯದ್ದು ಎಂದು ಅರ್ಥವಾಗುವುದಿಲ್ಲ. ಬಲಿಪ್ಪರು ಅತಿಥಿ ಕಲಾವಿದರಾಗಿಯೂ ಬಿಡಿವಿಲ್ಲದೆ ಇಂದು ಕಾರ್ಯಪ್ರವೃತ್ತರಾಗಿರುವಾಗ ಜನಪ್ರಿಯತೆ ಯಾವುದು ಎಂಬುದು ಬಿಡಿಸಿ ಹೇಳಬೇಕಾಗಿಲ್ಲ. ಹೆಚ್ಚಿನ ಎಲ್ಲ ಕಾರ್ಯಕ್ರಮಗಳಲ್ಲಿ ಬಲಿಪ್ಪರು ಇದ್ದರೆ ಬೇರೆ ಹಿರಿಯ ಕಿರಿಯ ಭಾಗವತರು ಇವರಲ್ಲಿ ಕೇಳುವ ವಾಡಿಕೆ “ನೀವು ಯಾವ ಪದಕ್ಕೆ ಕುಳಿತುಕೊಳ್ತೀರಿ ? ಎಲ್ಲಿಂದ ಪದ ಹೇಳ್ತೀರಿ ?” ಎಂದು. ಆಗ ಹಿರಿಯ ಅನುಭವಿ ಬಲಿಪ್ಪರು ಎಲ್ಲ ಕಡೆ ಅನ್ವಯವಾಗುವ ಹಾಗೆ ಪದ ಸಂದರ್ಭ ವಿಂಗಡನೆ ಮಾಡ್ತಾರೆ ಎಂಬುದು ಪ್ರತೀತಿ. ಹಾಗಿದ್ದೂ ನಮ್ಮೂರಲ್ಲಿ ಆದ ಕಟೀಲು ಮೇಳದ ಆಟದಲ್ಲಿ,, ಅಲ್ಲಿ ಬಲಿಪ್ಪರು ಸನ್ಮಾನಿತ ಹಾಗು ಗಣ್ಯ ಅತಿಥಿಗಳು.. ಅಲ್ಲಿ ಬಲಿಪ್ಪರಿಗೆ ಈ ಮಹಾಭಾಗವತ ಸಮಯ ಸಂದರ್ಭ ನಿಗದಿ ಮಾಡುವುದೆಂದರೆ ಇವರ ಉದ್ಧಟತನ ಎಷ್ಟಿರಲಾರದು? ಕೊನೆಗೆ ಬಲಿಪ್ಪರು ಅಸಮಧಾನದಿಂದಲೆ ಹೇಳಿದ್ದು “ ನಾನು ಎಲ್ಲಿ ಕುಳಿತುಕೊಳ್ಳಬೇಕೊ ಅಲ್ಲಿ ಕುಳಿತುಕೊಳ್ತೇನೆ.” ಹೀಗೆ ತನಗಾಗಿ ಎನೆಲ್ಲ ವಶೀಲಿ ಮಾಡುವ ಇಲ್ಲಿ ಯಾವ ಪ್ರತಿಬೆಗೆ ಮನ್ನಣೆ ಕೊಡಬೇಕು?

ಚೆ೦ಬಾರ್ಪು said...

ಬಲಿಪರ ಒಂದೇ ರೀತಿಯ ಒಂದೇ ರಾಗದ ಪದ್ಯ ಕೇಳಿ ಕೇಳಿ ನಿಮಗಿನ್ನು ಸುಸ್ತಾಗಿಲ್ಲವೇ ?
ಇದು ಬದಲಾವಣೆಯ ಯುಗ ಪ್ರೇಕ್ಷಕ ಹೊಸತನ್ನು ಆಸ್ವಾದಿಸಲು ಬಯಸಿದರೆ ತಪ್ಪೇನು ?- This describes certain taste and knowledge level.. which balipa would never be able to cater for. however, if one is not able to identify different raga's that balipa sings, then that would be limitation of the listener, not with balipa. I feel there are very few experts who can comment on balipa's style and capabilities..glad to see one such personality has commented to this blog anonymously..

Anonymous said...

good work bhatre... we always get stuck up in our work no time to think of these things. great work.
the songs you sent really amazing. 'lalisu rambana sukumara' sung by balipa and 'keldire ambara vaani namagaytu', kannikaamani,. songs are extreemly good. still those are ringing in my ears..
thanks a lot

- pradeep adiga
Nasik

Keshava said...

ಮೊದಲನೆಯದಾಗಿ ಸುಬ್ರಹ್ಮಣ್ಯ ಭಟ್ಟರಿಗೆ ವಂದನೆಗಳು. ಬಲಿಪರ ಹೊಸ ಪ್ರಸಂಗದ ಬಗ್ಗೆ ಚೊಕ್ಕ, ಪ್ರಸ್ತುತ, ಅಂದವಾದ ಲೇಖನ ಓದಿ ಮನ ಮುದಗೊಂಡಿತು. ಹಾಗೆಯೇ ಲೇಖನದ ಬಗ್ಗೆ ಒಬ್ಬ ಅನಾಮಧೇಯ ಬರೆದ ಅನಿಸಿಕೆ ಓದಿ ತುಂಬ ಬೆಸರವೂ ಆಯಿತು. ಹಾಗಾಗಿ ನನ್ನ ಪ್ರತಿಕ್ರಿಯೆಯನ್ನು ನೀಡುತ್ತಿದ್ದೇನೆ.
೧) ಬಲಿಪ ಭಾಗವತರನ್ನು ದಯವಿಟ್ಟು ತಾವು ಹೇಳಿದ ಯುವ ಭಾಗವತರಿಗೆ ಹೋಲಿಸಬೇಡಿ. ಬಹುಶಃ ಅವರಿಗೆ ೭ ಜನ್ಮ ಸಾಕಾಗಲಾರದು ಬಲಿಪರ ಮಟ್ಟಕ್ಕೆ ಏರಲು.
೨) ತಾವು ಹೇಳಿದಿರಿ ಬಲಿಪರಿಗೆ ಒಂದೇ ರಾಗ ಬರುವುದು ಎಂಬುದಾಗಿ. ನಿಮಗೆ ರಾಗಗಳ ಬಗ್ಗೆ ಜ್ನಾನ ಇಲ್ಲದಿದ್ದರೆ ಬಲಿಪರನ್ನು ಯಾಕೆ ದೂಶಿಸುತ್ತೀರಿ? ಬೇಕಾದರೆ ಬಲಿಪರ ಬಳಿ ಹೋಗಿ ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಕಮ್ಮಿ ಎಂದರೂ ೫೦-೬೦ ರಾಗದಲ್ಲಿ ಬಲಿಪರು ಹಾಡುತ್ತಾರೆ. ಅಷ್ಟೇ ಅಲ್ಲದೆ ಅವರಿಗೆ ೧೦೦ಕ್ಕೂ ಹೆಚ್ಚು ಪ್ರಸಂಗ ಕಂಠಪಾಟ ಬರುತ್ತದೆ. ಪೂರ್ವ ರಂಗದ ಸಂಪೂರ್ಣ ಮಾಹಿತಿ/ಅನುಭವ ಇರುವ ಏಕೈಕ ಭಾಗವತ.
೩) ಮೊನ್ನೆ ಕಳೆದ ಶುಕ್ರವಾರ ನಮ್ಮ ಮನೆಯಲ್ಲಿ ನಡೆದ "ಯಕ್ಷ ಗಾನ ಹಿಮ್ಮೇಳ ವೈಭವ" ದಲ್ಲಿ ಪದ್ಯಾಣ, ಹೊಳ್ಳ ಇಬ್ಬರನ್ನೂ ಮೀರಿಸುವ ಹಾಗೆ ಹಾಡಿದ್ದರೆ. ಬೇಕಾದರೆ ರೆಕಾರ್ಡ್ ಮಾಡಿದ ಕೊಂಡಿಯನ್ನು ಕೊಡಬಲ್ಲೆ. ಇನ್ನೊಂದು ವಿಷಯ ಹೇಳಬಯಸುತ್ತೇನೆ. ಆ ದಿವಸ ನನ್ನ ಚಿಕ್ಕಪ್ಪ ತಾವು ಬರೆದ ಪ್ರಸಂಗದಿಂದ ಒಂದು ಪದ ಹಾಡುವಂತೆ ಬಲಿಪರನ್ನು ಕೋರಿದ್ದರು. ಬಹಳ ವಿನಯವಾಗಿ ಒಪ್ಪಿದ ಬಲಿಪರು ಸ್ವತಃ ತಾವೇ ಕೈಯ್ಯಾರೆ ಒಂದು ಕಾಗದದಲ್ಲಿ ಪದ್ಯವನ್ನು ಬರೆದುಕೊಂಡು ಲೀಲಾಜಾಲವಾಗಿ ಹಾಡಿದ್ದರು. ತಮ್ಮ ಯುವ ಭಾಗವತರಿಗೆ ಇಂಥ ದೊಡ್ಡತನ ಇದ್ದೀತೇ?
೪) ಬಲಿಪರ ಸರಳತೆ. ಇಷ್ಟು ಎತ್ತರಕ್ಕೆ ಏರಿದ ಬಲಿಪರು ಎಷ್ಟು ಶಿಸ್ತುಬದ್ದ, ಸರಳ, ಮುಗ್ದ ಹಾಗು ಸಜ್ಜನ ಎಂಬುದು ಪ್ರಪಂಚಕ್ಕೆ ಗೊತ್ತಿರುವ ವಿಷಯ. ಅವರಿಗೆ ನಿಮ್ಮ ಯುವ ಭಾಗವತನ ಹಾಗೆ i10 ಕಾರಿನಲ್ಲಿ ಓಡಾಡುವ ಶೋಕಿ ಇಲ್ಲ.
೫) ಇಷ್ಟಕ್ಕೂ ಒಬ್ಬರ ಪದ ಇಷ್ಟವಾಗುವುದು ಅವರವರಿಗೆ ಬಿಟ್ಟ ವಿಚಾರ. ಹಾಗಾಗಿ ನಿಮಗೆ ಬಲಿಪರ ಹಾಡುಗಾರಿಕೆ ಇಷ್ಟವಾಗದೆ ಇರುವುದು ನನಗೆ ಬೇಸರವಿಲ್ಲ. ಆದರೆ ಬಲಿಪರಿಗೆ ಒಂದೇ ರಾಗದಲ್ಲಿ ಹಾಡಲು ಬರುವುದು ಎಂಬ ವಿಚಾರಕ್ಕೆ ನನ್ನ ವಿರೋಧ. ನಿಮಗೆ ಯಾವುದೆಲ್ಲ ರಾಗಗಳು ಗೊತ್ತು, ಅವುಗಳಲ್ಲಿ ಯಾವುದನ್ನೆಲ್ಲ ಬಲಿಪರು ಬಳಸುವುದಿಲ್ಲ? ಹಾಗು ಯಾವುದೆಲ್ಲ ರಾಗಗಳನ್ನು ಯುವ ಭಾಗವತರು ಬಲಿಪರಿಗಿ೦ತಲೂ ಉತ್ತಮವಾಗಿ (ನಿಮ್ಮ ಪ್ರಕಾರ) ಹಾಡುತ್ತಾರೆ ಎ೦ದು ತಿಳಿಸಬೇಕಾಗಿ ವಿನ೦ತಿ.

Anonymous said...

balipara mahaa prasangavannu odide. idondu shatamaanada adbhuta kelasa.
nimma saahasakke abhinandanegalu.
baliparige balipare saati.

-ananta krishna
mangalore

ಸುಬ್ರಹ್ಮಣ್ಯ ಭಟ್ said...

thanks for your comment

Anonymous said...

Balipara bagge 2 maatu illa. Aadare avaru obbare bhagavataralla taane...adesto olleya bhagavataru nammalli iddare. Adallade nammali ulida yuva bhagavatarnnu dayavittu hiyalisi maataduvudu beda. Hirya baliparannu dhikkarisi .....annuva pada balasiddu sariye? Ondu vele sariyadare Sathish patlaru rajeyalli irvaga even Prasad baliparu Agariya padya aadutare....aadiddare naanu nodidenne kooda.......Hagadare neeve andante prasad Baliparu kooda ajja baliparannu dhikkarisidareye? .......Nanage ondoo artha aagutta illa.....Nanantoo ella kale irva bhagavatarnnu mattu kalavidarannu gauravisutene............baliparaagali...patladavaraagali mattobaragali......nanna swantha abhipraya .....tappidare dayavittu kshamisi.... Hariprasad shetty

Unknown said...

Balipara bagge 2 maatu illa. Aadare avaru obbare bhagavataralla taane...adesto olleya bhagavataru nammalli iddare. Adallade nammali ulida yuva bhagavatarnnu dayavittu hiyalisi maataduvudu beda. Hirya baliparannu dhikkarisi .....annuva pada balasiddu sariye? Ondu vele sariyadare Sathish patlaru rajeyalli irvaga even Prasad baliparu Agariya padya aadutare....aadiddare naanu nodidenne kooda.......Hagadare neeve andante prasad Baliparu kooda ajja baliparannu dhikkarisidareye? .......Nanage ondoo artha aagutta illa.....Nanantoo ella kale irva bhagavatarnnu mattu kalavidarannu gauravisutene............baliparaagali...patladavaraagali mattobaragali......nanna swantha abhipraya .....tappidare dayavittu kshamisi.... Hariprasad shetty

Anonymous said...

prasadaru agari prasangavannu adisuttare. sari. tappilla.. balipparaduu adisuttare patla agariya prati maatra adisuttare idu sariye? kalavida vimarshege olagagudu adu hiyalikeye?

Unknown said...

bahusha taau (Anonymous) Kateelina 2 ne melada aatave nodilla anta kaanutade...Dayavittu bereyavara maatu keli helidare heegeye...Nodi swami Patlaru ella Agariya padya haadudilla.......kelau padyagalu maatra...ulida padya Ajja baliparadde haadudu............

Anonymous said...

ನಮಗೆ ಅಗರಿಯವರಾಗಲಿ ಬಲಿಪರಾಗಲಿ ಇಬ್ಬರ ಮೇಲೂ ಅಪಾರ ಗೌರವವಿದೆ. ಇನ್ನು ಪತ್ಲರು ಯಾವ ಪ್ರತಿಯನ್ನಾದರೂ ಹೇಳಲಿ . ಆದರೆ ಯಾವುದಾದರೊಂದು ಪ್ರತಿಯನ್ನು ಮಾತ್ರ ಸರಿಯಾಗಿ ಹೇಳಲಿ ಅಂತ ನಮ್ಮ ಅನಿಸಿಕೆ.ನಮ್ಮ ಕಳಕಳಿ ಪಟ್ಳರಾಗಲಿ ಪ್ರಸಾದರಾಗಲಿ ಯಾವ ಪ್ರತಿಯನ್ನು ಮಿಶ್ರಮಾಡಿ ಹಾಡುತ್ತಾರೆ ಎಂಬುದಲ್ಲ . ಇದುವರೆಗೆ ಎಲ್ಲ ಮೇಳಗಳೂ ಅಗರಿ ಪ್ರತಿಯನ್ನೇ ಸಾರ್ವತ್ರಿಕವಾಗಿ ಆಡುತ್ತಿದ್ದು , ಕೇವಲ ಬಲಿಪರ ಮೇಳ ಮಾತ್ರ ಬಲಿಪ ಪ್ರತಿಯನ್ನು ಇತ್ತೀಚಿನವರೆಗೆ ಆಡುತ್ತಿದ್ದು ಆ ಪ್ರತಿಯ ಸೊಗಸನ್ನು ಜನರಿಗೆ ಉಣಬದಿಸುತ್ತಿದ್ದರು. ಈಗ ಈ ಪಟ್ಲರು ಆ ಹಿರಿಯ ಚೇತನ ಹಾಕಿಕೊಟ್ಟ ದಾರಿಯನ್ನು ಬಿಟ್ಟು "ನಾನೇ ದೊಡ್ಡ ಭಾಗವತ" ಎಂಬ ಧೋರಣೆಯಿಂದ "ಬಲಿಪ ಪ್ರತಿಯೆಂಬ " ಒಂದು ಅಪೂರ್ವ ಪ್ರಸಂಗ ಸಾಹಿತ್ಯವನ್ನು ರಂಗದಿಂದ ಮರೆಮಾಚಲು ಪ್ರಯತ್ನಿಸುತ್ತಿದ್ದರಲ್ಲ ? ಇದರ ಬಗ್ಗೆ ನಮಗೆ ಬೇಸರವಿದೆ.

ನಾವು ದೇವಿ ಮಹಾತ್ಮೆ ಆಟ ಆಡಿಸುವಾಗ ಹರಕೆಯ ರೂಪದಲ್ಲಿ ಆರಾಧನಾ ಮನೋಭಾವದಿ೦ದ ಆಡಿಸುತ್ತೇವೆ. ಅದನ್ನು ಯಾವುದಾದರೊಂದು ಪೂರ್ಣ ರೂಪದಿನ ಮಾತ್ರ ನೋಡಲು ಬಯಸುತ್ತೇವೆ . ಉದಾಹರಣೆಗೆ ಸತ್ಯನಾರಾಯಣ ಪೂಜೆ ಮತ್ತು ಶನಿಪೂಜೆ ಎಂಬ ಎರಡು ಪೂಜೆ ಇದ್ದು ಎರಡಕ್ಕೂ ಬೇರೆ ಬೇರೆ ಮಂತ್ರಗಳೇ ಇವೆ . ಸತ್ಯನಾರಾಯಣ ಪೂಜೆ ಮಂತ್ರವನ್ನು ಅರ್ಧ ಶನಿಪೂಜೆಯದ್ದು ಅರ್ಧ ಯಾ ಮಿಶ್ರಮಾಡಿ ಪೂಜೆ ಮಾಡಿದರೆ ಸರಿಯಗುತ್ತದೆಯೇ?

ವಯಕ್ತಿಕವಾಗಿ ಯಾರು ಎನಾದರಾಗಿರಲಿ ಆದರೆ ರಂಗದಲ್ಲಿ ಜೀವಂತವಾಗಿದ್ದ ಒಳ್ಳೆಯ ಒಂದು ಕೃತಿಯನ್ನು ಕಶ್ಮಲಗೊಳಿಸುವುದು ಸರಿಯಲ್ಲ ಅಂತ ನನ್ನ ಭಾವನೆ.

ಅರವಿಂದ ಅಸ್ರಣ್ಣ , ಮೈಸೂರು

Anonymous said...

here is clips of devimahatme held at jeppu mangalore. if you see this you will come to know the things...

http://www.youtube.com/watch?v=9TB4kbHmmd4&feature=related

Unknown said...

kevala patlarigae maatra doorood nanage sari anta kaanudilla. even prasad baliparu kooda kelau agari padyvannu helutaralla ? avarnnu yaake doordilla embudu nanna prashne? idakke uttara beku? .......Prasad ragali patlaraagali ulida yavdae bhagavataragali......kale irvavarannu gauravisabeku aste.......

Anonymous said...

shani pooje satynaarayana pooje......sari eradoo bere bere devarugalu.....aadare illi DEVI MAHTHME..DEVIYA KATHe .Padyagalu maatra mishra.........Kateya anda vantu kedudilla......?

Anonymous said...

@hariprasad,

Prasada baliparu poorvagrahavillade balipa prathi hagoo agari prathi eradannoo aadisuttare.. adare patlaru balipa prathiyannu aadisida udaharane illa, yaake? Patlaru agaaga balipa prathiyannoo aadisidare apoorva kruthoyondu rangadinda kaNmareyaguvudannu tappisabahudallave?

-Yaksha

Anonymous said...

@ Yaksha

e modalu aada kateelina 2ne melada video recordings iddare swalpa nodi matte padya keli.......Patlaru eradu bhaghavatara padygalannu haadiddare.......nananthho nodidenne mattu kelidenne kooda.....vyrata aropakke guripadisutta iddiri aste.....
hariprasad

Anonymous said...

Hariprasad,

patlaru kaleda 3-4 varshagalalli balipa prathi aadisida dakhalegaliddare dayavittu share maaDi.. nanu nanna aropavannu hintegedukolluttene!!!!!!!????


-Yaksha

Anonymous said...

chache yake madtiddare anta shetty yavarige maretiro hagide. yavudadru mishra madi aduvudu sariyalla anta lekakaru modale heliruvaru. ondo agari illavadare balippa. roodiyalli aa meladalli balipar pratiye adisuvudu. ittchina kelavarshagalalli adu mishravaagi innu adu illade aguva sambhavaniyate yannu spasta padisiddare. vritha poorvagrahada charche madade iruvudu olitallave. patlaru balippa praitiyannu adisudilla anta shetty yavaru parokshavagi oppidante aitalla.

SOUMITRI

Anonymous said...

nanna prashne kevala patlaru haage madudilla avara jothe PRASAD BALIPA ru mishra maadi adutatre ...AVARANNU yaake doorudilla antha../...matte marethu hoguvantha charche naau maadilla aste....Egalu naanu heludu iste yare haagirali kale yannu mecchi .....balipara bagge Apara gaurava tamage maatra alla nanagoo ide aadare avarondige bere kale iruva bhagavatarannu gauravisabeku aste........hariprasad

Anonymous said...

@ yaksha

Just go through the links....u will find BAlipajja's song singing by PAtla..( CHNADA-MUNDA sannivesha) ...It was last year at JEPPU.........
http://www.youtube.com/watch?v=RtID_byPQ08&feature=relate...

HARIPRASAD

Anonymous said...

http://www.youtube.com/watch?v=Tfxkcny8OKI&feature=related

Anonymous said...

ಬಲಿಪ‌ ಭಾಗವತರ ೫ ದಿನ ದೇವಿ ಮಹಾತ್ಮೆಯ PDF app ಅಲ್ಲಿ‌ ಅಲ್ಲ , ಪುಸ್ತಕವೆ ಬೇಕಿತ್ತು , ಈ ಎಲ್ಲಿ ಸಿಗಬಹುದು ಸರ್