Friday, March 26, 2010

ಸುಂದರ ನೆನಪು ...ಆತ್ಮೀಯ ಕಲಾಭಿಮಾನಿಗಳೇ , ಇದೇ ಬರುವ ಶನಿವಾರ ರಾತ್ರಿ ೯.೩೦ಕ್ಕೆ ಸರಿಯಾಗಿ ಶ್ರೀ ಮಹಾಮ್ಮಾಯಿ ಕೃಪಾಪೋಷಿತ ಯಕ್ಷಗಾನ ಮಂಡಲಿ ,ಸುರತ್ಕಲ್ ಇವರಿಂದ ವಿದ್ಯುತ್ ದೀಪಾಲಂಕೃತ ರಂಗು ರಂಗಿನ ರಂಗ ಮಂಟಪದಲ್ಲಿ ಒಂದೇ ಒಂದು ಆಟ "ಸಂಪೂರ್ಣ ನಳ ದಮಯಂತಿ " ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ ....ಎಂದು ಆಟೋ ರಿಕ್ಷದ ಮೇಲೆ ಕಟ್ಟಿದ ಮೈಕಿನಲ್ಲಿ ಜೋರಾಗಿ ವೇಣೂರಿನ ಮೇಲಿನ ಪೇಟೆಯ ಬದಿಯಲ್ಲಿ ಪ್ರಚಾರ ಮಾಡುತ್ತ ಹೋಗುತ್ತಿದ್ದರೆ ಶಾಲೆ ಬಿಟ್ಟು ಮನೆಗೆ ನಡೆದುಕೊಂಡು ಬರುವಾಗ ರಿಕ್ಷದಿಂದ ಎಸೆದ ಕರಪತ್ರವನ್ನು ಹೆಕ್ಕಿ ಪಡೆಯಲು ನಮ್ಮ ಸ್ಪರ್ಧೆ !

ಆ ದಿನ ಮನೆಯಲ್ಲಿ ಬಂದು ಆಟಕ್ಕೆ ಹೋಗುವ ಬಗ್ಗೆ ಅಪ್ಪನಲ್ಲಿ ಪೀಠಿಕೆ ಹಾಕಿದಾಗ "ತುಳು ಆಟಕ್ಕೆ ಹೊಪಲಿಲ್ಲೇ " ಎಂಬ ಕಟ್ಟಪ್ಪಣೆ ಬಂದರೂ ಸಂಜೆಯಾದಾಗ ಅದು ಬದಲಾದೀತೆಂಬ ಅಚಲ ವಿಶ್ವಾಸ ! ಯಾಕೆಂದರೆ ಸುರತ್ಕಲ್ ಮೇಳದಲ್ಲಿ ಪ್ರಧಾನ ಹಾಸ್ಯಗಾರ ನಮ್ಮ ನೆರೆಕರೆಯ ಸುಂದರ ಆಚಾರ್ಯ .

ಸುಂದರ ಆಚಾರ್ಯರ ಅಮ್ಮ ಸರಸಮ್ಮ ಆಚಾರ್ತಿಯವರು ನಮ್ಮ ಮನೆಗೆ ಗದ್ದೆ ಕೆಲಸಕ್ಕೆ ಸದಾ ಬರುತ್ತಾ ಇದ್ದವರು. ಹಲವಾರು ಸಂಧಿ ಪಾಡ್ದನ ಗಳ ಕಂಠಪಾಠವಿದ್ದ ಅವರು ಗದ್ದೆಯಲ್ಲಿ ಹಾಡುತ್ತಾ ನೇಜಿ ನೆಡುತ್ತಿದ್ದರೆ ಸಮಯ ಕಳೆದುದೇ ಗೊತ್ತಾಗುತ್ತಿರಲಿಲ್ಲ ಎಂಬುದು ಮನೆಗೆ ಕೆಲಸಕ್ಕೆ ಬರುತ್ತಿದ್ದ ಸಕಲರ ಸಮ್ಮತ ....

ಮೇಳ ಬಿಟ್ಟು ಮಳೆಗಾಲದಲ್ಲಿ ಸಮಯವಿದ್ದಾಗಲೆಲ್ಲ ಮನೆಗೆ ಬರುತ್ತಿದ್ದ ಸುಂದರಣ್ಣ ಅಪ್ಪನೊಂದಿಗೆ ಪುರಾಣ ಕಥೆಗಳ ಸೂಕ್ಷ್ಮತೆಗಳು , ವೈದಿಕ ಪದ್ದತಿಯ ಬಗೆಗೆ ತಿಳಿದುಕೊಂಡು ,ಚರ್ಚಿಸಿ , ಎಲೆ ಅಡಿಕೆ ತಿನ್ನುತ್ತ ಹೋಗುತ್ತಿದ್ದುದು ಇನ್ನೂ ಮಾಸದ ನೆನಪು ...

ಅಪ್ಪನಿಗೂ ಸುಂದರಣ್ಣನ ಹಾಸ್ಯದ ಬಗ್ಗೆ ಒಲವಿತ್ತು .ಮೊದ ಮೊದಲು ಅಶ್ಲೀಲತೆಗಳನ್ನು ಬಳಸುತ್ತಿದ್ದ ಸುಂದರಣ್ಣನಿಗೆ ಗದರಿ ,ತಿಳಿಹೇಳಿ ತಿದ್ದುವಲ್ಲಿ ಸಫಲರಾದ ವೇಣೂರಿನ ಹಲವು ಮಂದಿ ಯಕ್ಷಾಭಿಮಾನಿಗಳ ಪೈಕಿ ಅಪ್ಪನೂ ಒಬ್ಬರಾದ್ದರಿಂದ ಸಂಜೆಯೊಳಗೆ ಸುಂದರಣ್ಣ ಒಮ್ಮೆ ಮನೆಗೆ ಬಂದು ಎಲೆ ಅಡಿಕೆ ತಿಂದು ಅಪ್ಪನಿಗೆ "ಆಟ ಉಂಡು ಬರೋಡಣ್ಣೆರೆ " ಎಂಬ ಕರೆ ಬಂದೇ ಬರುತ್ತದೆಂಬ ದೃಡ ವಿಶ್ವಾಸ . ಸುಂದರಣ್ಣನಿಗೂ ನಮ್ಮ ಅಪ್ಪನಿಗೂ ಒಳ್ಳೆಯ ಗೆಳೆತನ ಇದ್ದುದರಿಂದ ಇವತ್ತಿನ ಆಟಕ್ಕೆ ಖಂಡಿತ ಪರ್ಮಿಶನ್ ಸಿಕ್ಕೇ ಸಿಗುತ್ತದೆಂಬ ಕಾತರ!

ಸುಂದರಾಚಾರ್ಯರ ವೃತ್ತಿ ಜೀವನದ ಬಹುತೇಕ ಪೂರ್ಣ ವರ್ಷ ಸುರತ್ಕಲ್ ಮೇಳದಲ್ಲಿ ನಡೆಯಿತು . ವಿಟ್ಲ ಗೋಪಾಲಕೃಷ್ಣ ಜೋಷಿಯವರ ನೇರ ಶಿಷ್ಯತ್ವದಿಂದ ಪ್ರಭಾವಿತರಾದರೂ ಸ್ವಂತಿಕೆಯನ್ನು ರಂಗದಲ್ಲಿ ಮೆರೆದ ಅಪೂರ್ವ ಕಲಾವಿದ . ಬಾಹುಕ , ಪಾಪಣ್ಣ , ಪೈಯ್ಯ ಬಿದ್ಯ , ಮಲೆಯಾಳಿ ಬಿಲ್ಲವ ,ಮಕರಂದ ,ವಿಜಯ ಇತ್ಯಾದಿ ಪಾತ್ರಗಳನ್ನು ಅತ್ಯುತ್ತಮವಾಗಿ ಮೆರೆಯಿಸಿದವರಲ್ಲಿ ಸುಂದರಣ್ಣ ಒಬ್ಬರು. ಪದ್ಯಾಣ ಗಣಪ್ಪಣ್ಣ- ಕಡಬ ನಾರಾಯಣ ಆಚಾರ್ಯರು ಹಿಮ್ಮೆಳದಲ್ಲಿದ್ದರೆ ಶಿವರಾಮ ಜೋಗಿ- ಸುಂದರಣ್ಣ ಮುಮ್ಮೇಳದಲ್ಲಿ ವಿಜ್ರಂಭಿಸುತ್ತಿದ್ದ ಕಾಲವದು .

ಸಂಜೆ ಅಪ್ಪ ತೋಟದಿಂದ ಬಂದ ಬಳಿಕ ಆಟಕ್ಕೆ ಹೊಪೋ ಹೇಳಿ ಕರೆದಾಗ "ಸಚಿನ್ ಡಬಲ್ ಸೆಂಚುರಿ ಬಾರಿಸಿದಾಗ" ಕ್ರಿಕೆಟ್ ಅಭಿಮಾನಿಗಳಲ್ಲಿ ಉಂಟಾಗುವ ವಿದ್ಯುತ್ ಸಂಚಾರದಂತ ಸಂತೋಷ !!

ಆ ದಿನ ರಾತ್ರಿ ಜೋಗಿಯವರ ಋತುಪರ್ಣನಿಗೆ ಸುಂದರಣ್ಣನ ಬಾಹುಕ. ಗಣಪ್ಪಣ್ಣನ " ವರ ಕಾರ್ಕೋಟಕ ಕಚ್ಚಿದ ದೆಸೆಯಿಂದರಸನ ದೇಹಗಳು ... ನೆರೆ ಕಪ್ಪಾಗುತ ಕರಗಿತು ದಿವ್ಯಾಕಾರದ ತೇಜಗಳು .... " ಪುನ್ನಾಗ ರಾಗದ ಪದ್ಯಕ್ಕೆ ಸರಿಯಾಗಿ ಬಾಹುಕನ ಪ್ರವೇಶ ಎಂಥವರನ್ನು ಮನಸೂರೆಗೊಳ್ಳುವಂತೆ ಮಾಡಿತ್ತು . ಇಂದಿನ ಕಲಾವಿದರು ಪಾತ್ರಗಳ ಪರಕಾಯ ಪ್ರವೇಶ ಮಾಡಲಾಗದೆ ಪೇಲವ ಪ್ರದರ್ಶನವನ್ನು ನೀಡುವುದನ್ನು , ಕ್ಯಾಮರಾಕ್ಕೆ ಪೋಸ್ ಕೊಡುವುದನ್ನೂ ಅದಕ್ಕೆ ಪ್ರೇಕ್ಷಕರು ಚಾಪ್ಪಳೆ -ಸಿಳ್ಳೆ ಮೂಲಕ ಪ್ರೋತ್ಸಾಹ ನೀಡುವುದನ್ನು ನೋಡುವಾಗ ನಿಜಕ್ಕೂ ವೇದನೆಯಾಗುತ್ತದೆ.

ಮಿತಭಾಷಿ ಸುಂದರಣ್ಣ ಬಡತನದ ಬೇಗೆಯಲ್ಲಿ ದಿನ ಕಳೆದವರು .ಅವರು ಸಂಜೆಯಾಗುತ್ತಿದ್ದಂತೆ ನಿತ್ಯವೂ ಭೇಟಿ ನೀಡುತ್ತಿದ್ದ ಸ್ಥಳ "ಪಂಚು ವೈನ್ಸ್". ತೀರ್ಥ ಸೇವನಾ ಚಟ ಅವರನ್ನು ಬಲಿತೆಗೆದುಕೊಂಡಿತ್ತು .

ಹಲವಾರು ಸಂಘ ಸಂಸ್ಥೆಗಳಿಂದ ಸಂಮಾನಗಳನ್ನು ಪಡೆದ ಅವರು ವೇಣೂರಿನಲ್ಲಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘದ ದಶಮಾನೋತ್ಸವದಲ್ಲಿ ಸಂಮಾನಿಸಿದಾಗ ಅವರಾಡಿದ ಮಾತು " ನನಗೆ ಇಂದಿನ ಈ ಸಮ್ಮಾನ ಪಡೆದಾಗ ಮಗುವೊಂದು ತನ್ನ ತಾಯಿಯ ಮಡಿಲಲ್ಲಿ ಕುಳಿತು ಮೊಲೆವಾಲನ್ನು ಕುಡಿದಾಗ ಪಡೆವ ಸಂತೋಷದಷ್ಟು ಸಂತೋಷವಾಯಿತು "
ಅದೇ ಕೊನೆ ಸನ್ಮಾನ .ಬಳಿಕ ಭಗವಂತನಲ್ಲಿ ಸೇರಿದ ಸುಂದರಣ್ಣ ನಿಜವಾಗಿಯೂ ಒಬ್ಬ ಅಭಿಜಾತ ಕಲಾವಿದ ...
ಸುಂದರ ನೆನಪನ್ನು ನಮ್ಮಲ್ಲಿ ಬಿಟ್ಟು ಹೋದ ಮಹಾನ್ ಹಾಸ್ಯಗಾರ...!

***

4 comments:

RAJ said...

ವೇಣೂರು ಸುಂದರ ಆಚಾರ್ಯ ...ಹಾಸ್ಯ ಪಾತ್ರಗಳನ್ನು ನೋಡಿದ್ದೆನೆ.. ಸುರತ್ಕಲ್ ಮೇಳದಲ್ಲಿ ಪೆರುವಡಿ ನಾರಾಯಣ ಭಟ್ ರವರೊಂದಿಗೆ ಜತೆ ಹಾಸ್ಯ ಮಾಡುತ್ತಿದ್ದ ಆ ದಿನಗಳು ಜೋಗಿಯವರೊಂದಿಗಿನ ವೇಷಗಳು..ಎಲ್ಲವೂ ಇಂದಿಗೂ ಹಚ್ಚಹಸಿರಿನ ನೆನಪು.

Anonymous said...

ಸುಂದರಾಚಾರ್ಯರ ಹಾಸ್ಯ ನೈಜವಾಗಿರುತ್ತಿತು. ಸುರತ್ಕಲ್ ಮೇಳದ ಅವಿಭಾಜ್ಯ ಅಂಗವಾಗಿದ್ದ ಅವರು , ಜೋಗಿ, ಗಣಪ್ಪಣ್ಣ, ಉಜಿರೆ ರಾಜ ಎಲ್ಲ ಒಂದು ಒಳ್ಳೆ ಸೆಟ್ .
ಸುರತ್ಕಲ್ ಮೇಳ ಅತ್ಯಂತ ಉತ್ತಮ ಮಟ್ಟದ ಪ್ರದರ್ಶನ ನೀಡುತ್ತಿದ್ದ ಕಾಲದಲ್ಲಿ ಮಧ್ಯ ರಾತ್ರಿ ಎದ್ದು ನಾವು ಆಟ ನೋಡಲು ಹೋಗುತ್ತಿದ್ದೆವು. ನನ್ನ ಗೆಳೆಯ ನಾರಾಯಣ ಹಾಗೂ ನಾನು ನಮ್ಮ ಲೂನ ಏರಿ ಆಟಕ್ಕೆ ಹೋಗುತ್ತಿದ್ದುದು ಮರೆಯಲಾರದ ನೆನಪು. ಒಳ್ಳೆಯ ಲೇಖನ ನೀಡಿದ್ದಕ್ಕೆ ಧನ್ಯವಾದಗಳು
- ದಿವಾಕರ ಕೋಟ್ಯಾನ್

chirantana said...

i saw his performance in "papanna vijaya -gunasundari" prasanga. he played the role of PApanna at mangalore town hall. that was in kannada. but people say even in tulu he excels with the same role.
anyway nice memories...

Ashoka said...

ವೇಣೂರು ಸು೦ದರ ಅಚಾರಿ ಅವರ ಕೆಲ ಪಾತ್ರಗಳನ್ನು ನಾನೂ ನೋಡಿದ್ಡೇನೆ. ಕಡುಗಲಿ ಕುಮಾರ ರಾಮ ಅನ್ನುವ ಪ್ರಸ೦ಗದಲ್ಲಿ ಅವರು ನಿರ್ವಹಿಸಿದ ಹಾಸ್ಯ ಪಾತ್ರ ನನಗೆ ಬಹಳ ಹಿಡಿಸಿತ್ತು.
ವೇಣೂರು ಭಾಸ್ಕರ ಅವರ ವೇಶವೂ ತಕ್ಕ ಮಟ್ಟಿಗೆ ಚೆನ್ನಾಗಿಯೆ ಇತ್ತು ಆದರೆ ದುರ೦ತ ಅ೦ದರೆ ಸು೦ದರ ಆಚಾರಿ ಅವರು ವಿಧಿವಶರಾದ ಸಲ್ಪ ಕಾಲದಲ್ಲೆ ಭಾಸ್ಕರ ಅವರೂ ವಿಧಿವಶರಾದರು.