Wednesday, December 23, 2009

ಕ್ಯಾಸೆಟ್ ಚೌರ್ಯ !

ಒಬ್ಬ ರಚಿಸಿದ ಯಾವುದೇ ಕೃತಿಯನ್ನು ಯಥಾವತ್ ಯಾ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಭಟ್ಟಿ ಇಳಿಸಿದರೆ ಅದನ್ನು ಕೃತಿ ಚೌರ್ಯ ಎನ್ನುತ್ತಾರೆ. ಕೆಲವರಂತೂ ಇತ್ತೀಚಿಗೆ ರಾಜಾರೋಷವಾಗಿ "ಇಂಥ ಕಡೆಯಿಂದ ಕದ್ದದ್ದು " ಎಂದು ತಮ್ಮ ಚೋರತನವನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಹೆಸರುವಾಸಿಯಾಗ ಬಯಸಿದರೆ ಇನ್ನು ಕೆಲವರು ಕೇವಲ ಹಣ ಸಂಪಾದನೆಯೇ ಗುರಿಯಾಗಿಸಿ ಕೃತಿ ಚೌರ್ಯ ಮಾಡುವುದು ಕಂಡುಬರುತ್ತದೆ.ಕೃತಿ ಚೌರ್ಯ ಮಾಡುವುದು ಕಾನೂನು ರೀತ್ಯಾ ಅಪರಾಧ. ಇಂಥ ಕೆಟ್ಟ ಚಾಳಿಯೂ ನಿಜವಾದ ಕೃತಿಕಾರನಿಗೆ ಹಲವು ರೀತಿಯ ನಷ್ಟವನ್ನು ಉಂಟುಮಾಡುತ್ತದೆ .ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಕೃತಿ ಚೌರ್ಯ ಇಂದು ವ್ಯಾಪಕವಾಗಿರುವುದು ವಿಷಾದನೀಯ. ನಿಜವಾದ ಪ್ರತಿಭೆ ಇದ್ದಲ್ಲಿ ಇಂಥ ದುರ್ಧೆಸೆಗೆ ಯಾವೊಬ್ಬನೂ ಇಳಿಯುವುದು ಹಿತಕರವಲ್ಲ .

ಇಲ್ಲಿ ನಾನು ಹೇಳಹೊರಟಿರುವುದು ಕೃತಿ ಚೌರ್ಯದ ಒಂದು ರೂಪವಾದ ಧ್ವನಿಮುದ್ರಿಕೆಗಳ ಚೋರತನದ ಬಗ್ಗೆ !

ಇತ್ತೀಚಿಗೆ ಬೆಂಗಳೂರಿನ ಪ್ರಸಿದ್ಧ ಕಲಾಕ್ಷೇತ್ರದಲ್ಲಿ ಯಕ್ಷಗಾನ ವೀಕ್ಷಣೆಗೆ ಹೋಗಿದ್ದಾಗ ಧ್ವನಿಮುದ್ರಿಕೆಗಳ ತಟ್ಟೆಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯಿಂದ ಅಪೂರ್ವವೆನಿಸಿದ ಕೆಲವು ಪ್ರಸಂಗಗಳ ತಟ್ಟೆಯೊಂದನ್ನು ಗಮನಿಸಿದಾಗ ಅದರಲ್ಲಿ ಮುದ್ರಿತವಾಗಿರುವಂತೆ "ಪಾಂಡವಸ್ವರ್ಗಾರೋಹಣ ", "ರಣಚಂಡಿ ", "ವಿಷಮ ದಾಂಪತ್ಯ " ಇತ್ಯಾದಿ ಎಂಟು ಪ್ರಸಂಗಗಳಿರುವ ಒಂದು ಅಪೂರ್ವ ಸಂಗ್ರಹವೆಂದೂ ಹಿಮ್ಮೇಳದಲ್ಲಿ ಬಡಗುತಿಟ್ಟಿನ ಭಾಗವತ ವಿದ್ವಾನ್ ಒಬ್ಬರು ಈ ಎಲ್ಲ ಪ್ರಸಂಗಗಳಲ್ಲೂ ಭಾಗವತರೆಂದೂ , ಮುಮ್ಮೆಳದಲ್ಲಿ ತೆಂಕು ತಿಟ್ಟಿನ ಪ್ರಸಿದ್ಧ ಅರ್ಥಧಾರಿಗಳಾದ ಶೇಣಿ, ಕುಂಬಳೆ, ನಯನ ಕುಮಾರ್,ಕೆ.ಗೋವಿಂದ ಭಟ್ ಎಂದೂ ಪಟ್ಟಿಯಲ್ಲಿ ಪ್ರಕಟಿಸಿದ್ದು ಸಹಜವಾಗಿ ಕುತೂಹಲ ಹುಟ್ಟಿಸುವ ವಿಚಾರವಾದುದರಿಂದ ಕೂಡಲೇ ಹಣ ತೆತ್ತು ಖರೀದಿಸಿದೆ .

ಮನೆಗೆ ಮರಳಿ ಹೊಸತಾಗಿ ಖರೀದಿಸಿದ ತಟ್ಟೆಯನ್ನು ಆಲಿಸಬೇಕೆಂದು ಆರಂಭಿಸಿದಾಗ ಮೊದಲಿಗೆ "ಇದನ್ನೆಲ್ಲಿಯೋ ಕೇಳಿದ್ದೆನಲ್ಲಾ? " ಎಂಬ ಗುಮಾನಿ ಹುಟ್ಟಿಕೊಂಡಿತು . ಪಾಂಡವ ಸ್ವರ್ಗಾರೋಹಣ ಪ್ರಸಂಗದಲ್ಲಿ ಶೇಣಿಯವರ ಧರ್ಮರಾಯ ಹಾಗೂ ನಯನ ಕುಮಾರರ ಕೃಷಿಕ ಸಿದ್ಧನ ಪಾತ್ರದ ಸಂಭಾಷಣೆ ಕೇಳುತ್ತಿದ್ದಂತೆ ನನ್ನ ಸಂದೇಹವೆಲ್ಲ ಮಾಯವಾಗಿ ಇದು ಅದುವೇ! ಎಂದು ಸ್ಪಷ್ಟವಾಯಿತು . ನಾನು ೨೦೦೧ ರಲ್ಲಿ ಸುಳ್ಯದ ಸಂಗೀತ ಕ್ಯಾಸೆಟ್ ಅಂಗಡಿಯಿಂದ ಖರೀದಿಸಿದ್ದ ಆಡಿಯೋ ಕ್ಯಾಸೆಟ್ "ಪಾಂಡವ ಸ್ವರ್ಗಾರೋಹಣ " ದಲ್ಲಿ ತೆಂಕು ತಿಟ್ಟಿನ ಪ್ರಖ್ಯಾತ ಮನೆತನದ ಭಾಗವತರೊಬ್ಬರು ಭಾಗವತಿಕೆಯನ್ನು ಮಾಡಿದ್ದು ಅದರ ಸವಿಯನ್ನು ತುಂಬಾ ಸಲ ಸವಿದ ಮೇಲೆ ಈ ತಟ್ಟೆಯಿಂದ ಹೊರ ಹೊಮ್ಮುವ ಅರ್ಥಕ್ಕೂ ಆ ಕ್ಯಾಸೆಟ್ ಅರ್ಥಕ್ಕೂ ಎಳ್ಳಷ್ಟು ವೆತ್ಯಾಸವಿಲ್ಲ ಕೇವಲ ಪದಗಳು ಮಾತ್ರ ಬಡಗಿನವು ಅಷ್ಟೇ ಎಂದು ತಿಳಿಯಿತು !

ಬಹಳ ಜಾಣತನದಿಂದ ತೆಂಕಿನ ಪದಗಳನ್ನು ಮಾತ್ರ ಕಿತ್ತು ಹಾಕಿ ಬಡಗಿನ ಪದ್ಯಗಳನ್ನು ಜೋಡಿಸಿ ಮಾರುಕಟ್ಟೆಯಲ್ಲಿ ಬಿಟ್ಟು ಲಾಭ ಪಡೆದ ಕೃತಿ ಚೋರರು ಮಾಡಿದ ಕಿತಾಪತಿ ಇದು ಎಂದು ತಿಳಿದಾಗ ಬಹಳ ವಿಷಾದವೆನಿಸಿತು.

ಇದೇಕೆ ಹೀಗೆ ?
ತೆಂಕು ತಿಟ್ಟಿನ ಪ್ರಖ್ಯಾತ ಮನೆತನದ ಭಾಗವತರ ಹಾಡು ಅಷ್ಟೊಂದು ಕಳಪೆಯೇ ? ಈಗಿನಂತೆ ಕೇಳಲು ಕರ್ಣ ಕರ್ಕಶವೇ ?
ಖಂಡಿತಾ ಇಲ್ಲ .

ಯಾಕೆಂದರೆ ತೆಂಕಿನ ಗಾನ ಗಂಧರ್ವರೆನಿಸಿದ್ದ ಭಾಗವತರು ತಮ್ಮ ವೃತ್ತಿ ಜೀವನದ ಉತ್ತುಂಗ ಸ್ಥಿತಿಯಲ್ಲಿ ಇದ್ದಾಗ ಹಾಡಿದ ಹಾಡು ಅದು. ಹಿರಿಯ ಕಲಾವಿದರೆಲ್ಲ ಒಂದೇ ಉಸಿರಿಗೆ ಸೂಚಿಸುತ್ತಿದ್ದ ಯುವ ಭಾಗವತರಾಗಿದ್ದ ಅವರ ಹಾಡು ಅತ್ಯಂತ ಮನೋಹರವಾಗಿ ಮೂಡಿ ಬಂದ ಕ್ಯಾಸೆಟ್ ಅದು. ಯಾವನೇ ಕಲಾ ರಸಿಕ ಈ ಭಾಗವತರ ವೃತ್ತಿ ಜೀವನದ ಉತ್ತುಂಗ ಸ್ಥಿತಿಯಲ್ಲಿ ಹಾಡಿದ ಕರ್ಣ ಪರ್ವ ಪ್ರಸಂಗದ " ಎಲೆ ಪಾರ್ಥ ನೀ ಕೇಳು ಒಲಿದೆನ್ನ ಮಾತಾ " ಅಥವಾ ಪಟ್ಟಾಭಿಷೇಕ ಪ್ರಸಂಗದ " ವೀರ ದಶರಥ ನೃಪತಿ ಇನ ಕುಲವಾರಿಧಿಗೆ ಚಂದ್ರಮನು ...." ಕೇಳಿದರೆ ಈಗಲೂ ಹುಚ್ಚೆದ್ದು ಕುಣಿಯಬಲ್ಲ ಅದ್ಭುತ ಪ್ರತಿಭೆ ಅದು !

ಹಾಗಿದ್ದರೆ ಬಡಗಿನ ಭಾಗವತರ ಹಾಡು ಅಷ್ಟೊಂದು ಸೊಗಸಾಗಿದೆಯೇ ?
ಖಂಡಿತಾ ಇಲ್ಲ !
ಅವರಂತೂ ಗಡಿಬಿಡಿಗೆ ಮಾಡಿದ ಅಡುಗೆಯಂತೆ ಪದ್ಯಗಳನ್ನು ಹೇಳಿ ಮುಗಿಸಿದ್ದಾರೆ !

ಇರಲಿ ಇದೊಂದಲ್ಲವೇ ಎಂದು ಮುಂದಿನ "ರಣಚಂಡಿ " ತಾಳಮದ್ದಲೆ ಕೇಳ ಹೊರಟರೆ ಮತ್ತದೇ ಕಲಬೆರಕೆ!

ಕ್ಯಾಸೆಟ್ ಕಲಬೆರಕೆ ಮಾಡುವ ಭರದಲ್ಲಿ ಮೂಲ ಭಾಗವತರು ಪಾತ್ರಧಾರಿಯ ಮಾತಿನ ನಡುವೆ ಹೂಂ ಗುಟ್ಟಿದ್ದನ್ನು ತೆಗೆಯಲು ಮರೆತಿದ್ದು ಕೇಳುಗರಿಗೆ ಇದು ಕಲಬೆರಕೆ ಎಂದು ಸ್ಪಷ್ಟವಾಗಿ ತಿಳಿಯಲು ಅನುಕೂಲವಾಗಿದೆ . ಒಟ್ಟಿನಲ್ಲಿ ಈ ಕಲಬೆರಕೆ ಕ್ಯಾಸೆಟ್ ಕೇಳುವಾಗ ಹೋಳುಗಳಿಲ್ಲದ ಸಾಂಬಾರನ್ನು ಸವಿದ ಅನುಭವ ಆಗುವುದಂತೂ ಖಚಿತ !

ಇಂಥ ಕ್ಯಾಸೆಟ್ ಚೌರ್ಯ ನಿಜಕ್ಕೂ ಖಂಡನೀಯ . ಇದರಿಂದ ನಿಜವಾದ ರಸಾಸ್ವಾದನೆ ಸಿಗದೇ ನಿರಾಶೆಯಾಗುವುದಂತೂ ಖಂಡಿತ .

ಕಲಾ ರಸಿಕರು ಇಂಥ ತಟ್ಟೆಗಳನ್ನು ಖರೀದಿಸುವ ಮೊದಲು ಸರಿಯಾಗಿ ಪರೀಕ್ಷಿಸಿ ತೆಗೆದುಕೊಳ್ಳುವುದು ಉತ್ತಮ .

ನಿಮಗಿಂಥಾ ಅನುಭವ ಆಗಿದೆಯೇ ?

10 comments:

YAKSHA CHINTANA said...

ನನ್ನಲ್ಲಿ ಹಲವು ಬಡಗು ಯಕ್ಷಗಾನ ಕ್ಯಾಸೆಟ್ ಗಳ mp3 ಸಂಗ್ರಹ ಇದೆ .. ಹೆಚ್ಚಿನ ಎಲ್ಲವು ಗಳಲ್ಲಿ ಬಡಗು ಹಿಮ್ಮೇಳವಾಗಿ ತೆಂಕು ತಿಟ್ಟು ಕಲಾವಿದರ ಮುಮ್ಮೇಳವಿದೆ. ಕೇವಲ ಕೆಲವು ಸಂಪೂರ್ಣ ಬಡಗಿನ ಕಲಾವಿದರ ಕ್ಯಾಸೆಟ್ ಗಳೂ ಇವೆ. ಇದನ್ನು ನೋಡಿದಾಗ ತುಂಬಾ ಚೋದ್ಯವೆನಿಸಿದೆ. ಹೀಗೆಯೂ ಆಗಿರಬಹುದಲ್ಲವೇ? ವಿಚಿತ್ರ.!!!

c said...
This comment has been removed by the author.
c said...

There are a number of adulterated cassettes like this: Yayati, Ravanava Janma Rahasya; Valivadhe to name a few. What is more depressing is that once the adulterated cassettes are released, the original cassettes are not available any longer. It would be great at least if they make both the original and adulterated cassettes available so that the buyers can choose...

Keshava said...

ಎಂತಹ ಸ್ವಾರ್ಥಿಗಳು, ವ್ಯಾಪಾರೀ ಸ್ವಭಾವಿಗಳು ಇದ್ದಾರೆ ಪ್ರಪಂಚದಲ್ಲಿ ಎಂಬುದು ಈ ವಿಷಯದಲ್ಲಿ ಅರ್ಥವಾಗುತ್ತದೆ. ಒಂದು ರೀತಿಯಲ್ಲಿ ಇದು ದಂಡಾರ್ಹ ಅಪರಾಧ. ಕೆಲವು ಸಂಕುಚಿತ ಮನೋಭಾವದ ಕಲಾಭಿಮಾನಿಗಳು ತೆಂಕು-ಬಡಗು ಮಧ್ಯೆ ಹೋಲಿಕೆ ಮಾಡುತ್ತಾರೆ (ಒಂದು ಉದಾಹರಣೆ, ಇತ್ತೆಚೆಗೆ ಓರ್ಕುಟ್ ನಲ್ಲಿ ತಾಳಮದ್ದಲೆ ಯಲ್ಲಿ ಪದ್ಯ ಎತ್ತುವ ವಿಷಯವಾಗಿ ಒಂದು ಚರ್ಚೆ ನಡೆದಿತ್ತು), ಅಂಥವರು ಇದರ ಬಗ್ಗೆ ಏನಂತಾರೋ ಗೊತ್ತಿಲ್ಲ. ನನ್ನ ಪ್ರಕಾರ, ತೆಂಕು ತಿಟ್ಟಿನಲ್ಲಿ ಇರುವಂತಹ ಸಮರ್ಥ ಕಲಾವಿದರು (ತಾಳಮದ್ದಲೆ ವಿಷಯದಲ್ಲಿ) ಬಡಗಿನಲ್ಲಿ ಇಲ್ಲ. ಅದಕ್ಕೋಸ್ಕರವಾಗಿ ಈ ರೀತಿಯ ಮೋಸದ ಜಾಲ ಇದು. ಅವರಿಗೆ ಬೇಕಾಗುವುದು ಬರೀ ತೆಂಕಿನ ಅರ್ಥಗಾರಿಕೆ (ಬಹುಶ ಇದಕ್ಕೆ ಕೊಡುವ ವ್ಯಾಖ್ಯಾನ ಹೀಗಿರಬಹುದು: ಅರ್ಥಗಾರಿಕೆಯಲ್ಲಿ ತೆಂಕು ಬಡಗು ಎನ್ನುವ ವ್ಯತ್ಯಾಸ ಇಲ್ಲ ಅಂತ). ಅದು ಸಿಗುವುದು ಕೆಲವು ಹಳೆ ಕ್ಯಾಸೆಟ್ ರೆಕಾರ್ಡಿಂಗ್ ಗಳ ಮೂಲಕ. ಆದರೆ ಅವುಗಳಲ್ಲಿ ಇರುದು ತೆಂಕಿನ ಹಾಡುಗಾರಿಕೆ. ಎಂತಹ ಹಾಡುಗಾರಿಕೆ ಎಂದರೆ, ಅದನ್ನು ಹಾಡಿದ ಪ್ರಸಿದ್ದ ಭಾಗವತರಿಗೆ ಅದನ್ನು ಈಗ ಕೇಳಿದರೆ ಮೈ ನವಿರೇಳುತ್ತದೆ, ನಂಬಲೂ ಕಷ್ಟವಾಗುತ್ತದೆ (ತಾನು ಹಾಡಿದ ಪದ್ಯಗಳೆ ಇವ್ವು ಎಂಬಸ್ಟು, ಅಸ್ಟು ಚೆನ್ನಾಗಿವೆ ಆ ಹಾಡುಗಳು). ಅಂತಹ ಪದ್ಯಗಳಿಗೆ ಕತ್ತರಿ ಹಾಕಿ, ಬಡಗಿನ ಭಾಗವತರ ಬಾಯಲ್ಲಿ ಹಾಡಿಸಿದ ಪದ್ಯಗಳನ್ನು ಜೋಡಿಸಿ ದುಡ್ಡು ಗಿಟ್ಟಿಸುವ ಯೋಜನೆ ಇದು. ಇಂತಹ ಮೂರ್ಖರಿಗೆ ಧಿಕ್ಕಾರ ಹಾಕದೆ ಬೇರೆ ವಿಧಿ ಇಲ್ಲ.

Anonymous said...

@Keshava

if you are not aware about badagu artadhari's please do not comment. In badagu also there are enough number of artadhari's but they are not as popular as tenku artists may be because lack of support.

i too strongly condemn the adultration of audio cassettes.But
if you found one or two such cassettes, don't generalize it. its not good..

Keshava said...

@Anonymous

There is difference between "no of arthadharis" and "quality arthadharis". I meant the latter. What do you mean by lack of support?

I have not degraded badagu thittu. I condemned the illegal act. Don't you remember, adike kaddaru kalla aane kaddaru kalla. It is not one or two cassettes, a lot. I personally experienced it and discussed with Mr. Subramanya bhat.

YAKSHA CHINTANA said...

ಚೌರ್ಯ ಎಂತಿದ್ದರೂ ಅಪರಾಧವೇ. ಹಲವು ಧ್ವನಿ ಸುರುಳಿಗಳ ಪುರಾವೆಗಳನ್ನು ಲೇಖಕರು ಒದಗಿಸಬಲ್ಲರು. ಹೀಗಿದ್ದರೂ ಅದನ್ನು ಸಮರ್ಥಿಸಿಕೊಳ್ಳುವುದು ದುರಭಿಮಾನದ ಸಂಕೇತ. ಇಲ್ಲಿ ಯಾವುದೇ ತಿಟ್ಟುವಿನ ಪರವಾಗಿಯೂ ವಿರೋಧವಾಗಿಯೋ ಅಲ್ಲ. ಕೆಲವರು ತಮ್ಮ ತೀಟೆಗೆ ಮಾಡಿದ ಕಾರ್ಯ ಎಲ್ಲರ ಮೇಲೂ ಪ್ರಭಾವ ಬೀರಬಲ್ಲುದು. ಅದಕ್ಕಾಗಿ ಜಾಗ್ರಿತರಾಗಲಿ ಎಂಬುದೇ ಈ ಲೇಖನದ ಉದ್ದೇಶವಾಗಿರಬಹುದು. ಮಾಡಿದ್ದನ್ನು ಸರಿ ಎಂದು ಸಮರ್ಥಿಸುವುದು ಎಷ್ಟು ಸರಿ. ? ತಮ್ಮ ಮನೆಯ ಸಮಾರಂಭಕ್ಕೆ ಮಾಡಿದ ಭೋಜನದಲ್ಲಿ ಬೇರೆ ಮನೆಯ ಅಡುಗೆಯನ್ನು ಬಡಿಸಿ ತಮ್ಮ ಬೆನ್ನು ತಾವು ಚಪ್ಪರಿಸಿಕೊಳ್ಳುವುದಕ್ಕೆ ಏನೆಂದು ಹೇಳಬಹುದು?

Anonymous said...

i too agree that adulteration is illegal and if you are so much addicted to tenku style then there is no meaning in discussing with you people.

Keshava said...

There is nothing like addiction to one particular thittu, let it be thenku or badagu. I am a true lover of yakshagana (I watch both thittu). Adulteration is illegal and it doesn't matter if they do one cassette or multiple. If you (Anonymous) are really a fan of yakshagana, then condemn the act without any condition. And one more thing, mention your real name, if you are true you need not hesitate to announce your name :)

YAKSHA CHINTANA said...

ಇಲ್ಲಿ ತಿಟ್ಟುವಿನ ಬಗ್ಗೆ ಯಾರೂ ಚರ್ಚಿಸಿಲ್ಲ. ಕೇವಲ ಹಿಂದೆ ಯಾರೋ ಮಾಡಿದಂಥ ಕೃತ್ಯವನ್ನು ಖಂಡಿಸಿ ಬರೆಯಲಾಗಿದೆ. ಅದನ್ನು ಕೂಲಂಕುಷವಾಗಿ ಚಿಂತಿಸದೆ, ಕೇವಲ ತೆಂಕು ಬಡಗು ಎಂಬ ತಾರತಮ್ಯ ವನ್ನು ಮಾತ್ರ ಎತ್ತಿತೋರಿಸಿ , ಕಣ್ಣಿಗೆ ಕಂಡ ಸತ್ಯವನ್ನು ಪರಾಮರ್ಶಿಸಿ ಕೇಳುವ ಮನಸ್ಸು ಮಾಡದೆ ಕುರುಡು ಅಭಿಮಾನವನ್ನು ವ್ಯಕ್ತ ಪಡಿಸುವುದು ಸರಿಯೇ? ಇದರ ಬಗ್ಗೆ ನಾನು ನನ್ನ ಉತ್ತರ ಕನ್ನಡದ ಒಬ್ಬ ಸ್ನೇಹಿತರಲ್ಲಿ ಕೇಳಿದಾಗಲೂ ಅವರು ಒಂದೆರಡಲ್ಲ ಹಲವು ಪುರಾವೆಗಳನ್ನು ಹೇಳಿರುತ್ತಾರೆ. ಅನಾವಶ್ಯಕವಾಗಿ ಕುರುಡು ಅಭಿಮಾನ ಯಾರು ಪ್ರದರ್ಶಿಸುವುದು ? ಅನಾಮಧೆಯರಾದ ನೀವೇ ಅಲ್ಲವೇ? ಕೃತಿ ಚೌರ್ಯವೆಂಬ ಹೀನ ಕೃತ್ಯವನ್ನು ಮಾಡಿದವರು ಯಾವ ಘನ ಉದ್ದೇಶ್ಯ ಇರಿಸಿ ಮಾಡಿದರೋ ತಿಳಿಯದು ಆದರೆ ಅದನ್ನು ಸಮರ್ಥಿಸಿ ವಾದವನ್ನು ದಿಕ್ಕು ತಪ್ಪಿಸಿ ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸುವ ಕೃತ್ಯ ಮಾತ್ರಾ ತೀರ ಹೀನಾಯವಾಗಿದೆ