
ಊರಿಗೆ ತೆರಳಿದ್ದಾಗಲೆಲ್ಲ ಹಿರಿಯರಾದ ಬಲಿಪರನ್ನು ಮಾತಾಡಿಸಿಕೊಂಡು ಬರುವುದು ನನ್ನ ಕ್ರಮ . ನಮ್ಮ ಮನೆಯಿಂದ ಬಲಿಪರಲ್ಲಿಗೆ ೮ ಮೈಲಿ ದೂರ . ನಮ್ಮ ತಂದೆಯವರಾದ ಎನ್ .ಎಚ್. ರಾಮಕೃಷ್ಣ ಭಟ್ಟರು ಬಲಿಪರ ಕಟ್ಟಾ ಅಭಿಮಾನಿಗಳಲ್ಲಿ ಒಬ್ಬರು. ಒಂದು ದಿನ ಅವರಲ್ಲಿ ಹೋಗಿದ್ದಾಗ ಐದು ದಿನದ ಪ್ರಸಂಗ ಬರೆಯುತ್ತಿರುವ ಬಗ್ಗೆ ಪ್ರಸ್ತಾವಿಸಿದರು . "ಈ ಪ್ರಸಂಗವನ್ನು ನೀವು ಪ್ರಿಂಟ್ ಮಾಡಿಸಿ , ನಿಮ್ಮ ಮನೆಯಲ್ಲೇ ನಿಮ್ಮ ತಂದೆಯವರ ಸಂಸ್ಮರಣೆ ದಿವಸ ಬಿಡುಗಡೆ ಮಾಡುವ " ಎಂದು ಬಲಿಪರು ಹೇಳಿದಾಗ ನನಗೆ ಪರಮಾನಂದವಾಯಿತು. ಚಿಕ್ಕಂದಿನಿಂದ ಬಲಿಪರ ಹಾಡುಗಾರಿಕೆಯ ಸೆಳೆತಕ್ಕೆ ಒಳಗಾದವರಲ್ಲಿ ನಾನೊಬ್ಬನಾದುದರಿಂದ ಬಲಿಪರ ಈ ಜೀವಮಾನದ ಸಾಧನೆಯನ್ನು ಶಾಶ್ವತವಾಗಿ ದಾಖಲೀಕರಿಸಿ ಇಡುವ ಗುರುತರ ಜವಾಬ್ದಾರಿಯನ್ನು ಹಿರಿಯರಾದ ಬಲಿಪರು ಸದುದ್ದೆಶಪೂರ್ವಕವಾಗಿ ನೀಡಿದಾಗ ಹಿಂದೆ ಮುಂದೆ ಯೋಚಿಸದೆ ಮುದ್ರಣಕಾರ್ಯಪ್ರವೃತ್ತನಾದೆ. ಸರಿ ಸುಮಾರು ಒಂದು ವರುಷಗಳ ಕಾಲ ಸಮಯ ಸಿಕ್ಕಾಗಲೆಲ್ಲ ಈ ಮಹಾಪ್ರಸಂಗವನ್ನು ಗಣಕೀಕರಿಸಿಒಂದೊಂದು ಕಥಾನಕ ಮುಗಿದಂತೆ ಪ್ರಿಂಟ್ ತೆಗೆದು ಕರಡು ತಿದ್ದಲು ಬಲಿಪರಲ್ಲಿಗೆ ಕಳುಹಿಸುತ್ತಾ ಬಂದೆ. ಬಲಿಪರು ಅತ್ಯಂತ ಶ್ರದ್ಧೆಯಿಂದ ಅದನ್ನು ತಿದ್ದುಪಡಿ ಮಾಡಿ ತಮ್ಮಲ್ಲಿ ಇರಿಸಿಕೊಂಡಿದ್ದು ನಾನು ಮನೆಗೆ ತೆರಳಿದ್ದಾಗ ಮರಳಿ ಅದನ್ನು ಸಂಗ್ರಹಿಸಿ ತಂದು ಪುನರ್ ತಿದ್ದುಪಡಿ ಮಾಡಿ ಇಟ್ಟುಕೊಂಡೆ . ಇಡೀ ಪ್ರಸಂಗ ಗಣಕೀಕರಿಸಿದಾಗ ಸುಮಾರು ೨೪೫ ಪುಟಗಳು ತುಂಬಿದವು . ಈ ಮಧ್ಯೆ ಶ್ರೀಬಲಿಪರ ಬಳಿ ಪ್ರಸಂಗಕ್ಕೊಂದು "ಮುನ್ನುಡಿ" ಆಗಬೇಕು ಎಂದಾಗ ಯಕ್ಷಗಾನ ಕಲಾವಿದ , ಸಂಶೋಧಕ ವಿಮರ್ಶಕರಾದ ಡಾ.ಪ್ರಭಾಕರ ಜೋಷಿ ಯವರು ಬರೆದು ಕೊಡುತ್ತಾರೆ ಎಂದು ತಿಳಿಸಿದರು. ಅಂತೆಯೇ ಮುನ್ನುಡಿ ತಯಾರಾಗಿ ನನ್ನ ಕೈಸೇರಿ ಅದೂ ಗಣಕ ಯಂತ್ರದೊಳಗೆ ಸೇರಿತು.
ಪುಸ್ತಕವೇನೋ ತಯಾರಾಗಿ ಕೈಸೇರಿತು. ಈಗ ಬಿಡುಗಡೆಯ ದಿನ ನಿರ್ಣಯ ಮಾಡಬೇಕಿತ್ತು. ಮೊದಲೇ ನಿರ್ಧರಿಸಿದಂತೆ ಹೆಚ್ಚು ಜನ ಉದ್ದ ಉದ್ದ ಭಾಷಣ ಮಾಡುವುದು ಬೇಡವೆಂದು ಸರಳ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ ಗಮನ ನೀಡಲಾಯಿತು. ಎಲ್ಲರ ಬರುವಿಕೆಯ ಅನುಕೂಲ ನೋಡಿಕೊಂಡು ಇದೇ ಏಪ್ರಿಲ್ ೧೮ನೆ ಭಾನುವಾರ ನಮ್ಮ ವೇಣೂರಿನ ಕಜೆ ಮನೆಯಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಸುವುದೆಂದು ನಿಶ್ಚಯಿಸಲಾಯಿತು .ಅಧ್ಯಕ್ಷ ಸ್ಥಾನಕ್ಕೆ ವಿಮರ್ಶಕ ಹಾಗೂ ಮುನ್ನುಡಿ ಬರೆದ ಡಾ. ಜೋಶಿಯವರೂ , ಪ್ರಸಂಗಕರ್ತ ಬಲಿಪರೂ , ವೇಣೂರಿನ ನಮ್ಮ ಯಕ್ಷಗಾನ ಸಂಘದ ಅಧ್ಯಕ್ಷರಾದ ಶ್ರೀ.ಪಿ.ಮೋಹನ ರಾವ್ ಅವರು ನಮ್ಮಲ್ಲಿ ನಡೆಯುವ ಎಲ್ಲ ಯಕ್ಷಗಾನ ಕಾರ್ಯಕ್ರಮಕ್ಕೂ ಸೂತ್ರಧಾರರೂ ಅತ್ಯಂತ ಸ್ನೇಹಜೀವಿಯಾದ ಅವರನ್ನು ವೇದಿಕೆಯಲ್ಲಿ ಅಲಂಕರಿಸುವುದು ಎಂದು ನಿರ್ಧರಿಸಲಾಯಿತು. ಎಡೆಬಿಡದ ಕಾರ್ಯಕ್ರಮದ ನಡುವೆಯೂ ಈ ಪುಟ್ಟ ಸರಳ ಕಾರ್ಯಕ್ರಮಕ್ಕೆ ಬರಲೊಪ್ಪಿದ ಡಾ.ಜೋಷಿಯವರು ಮಧ್ಯೆ ಫೋನಾಯಿಸಿ ಈ ಕಾರ್ಯಕ್ರಮ ಬೇಕೋ ? ಉಡುಪಿಯಲ್ಲೇ ಮಾಡಿದರೆ ಸಾಕಿತ್ತಲ್ಲ ? ಎಂದರೂ "ಇಲ್ಲ " ನಮ್ಮಲ್ಲೇ ಮಾಡುದು ಮಾಡುದೇ ಎಂದು ಖಂಡಿತವಾಗಿ ಹೇಳಿದೆ .ಅದೇ ದಿನ ಬೇರೆ ಅನಿವಾರ್ಯ ಕಾರ್ಯಕ್ರಮ ಇದೆ ನನ್ನನ್ನು ೪ ಗಂಟೆಗೆ ಬಿ.ಸಿ.ರೋಡ್ ಗೆ ಹೋಗಲು ಅವಕಾಶ ಮಾಡಿಕೊಡಬೇಕೆಂಬ ಶರತ್ತಿನ ಮೇಲೆ ಸಂತಸದಿಂದ ಒಪ್ಪಿದ ಅವರು ೨.೩೦ಕ್ಕೆ ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮವನ್ನು ೨ ಗಂಟೆಗೆ ನಡೆಸಲು ಸೂಚಿಸಿದರು.
ಡಾ. ಜೋಷಿಯವರು ತಮ್ಮ ಭಾಷಣದಲ್ಲಿ ತಿಳಿಸಿದಂತೆ ಉಡುಪಿಯ ರಾಜಾಂಗಣದಲ್ಲಿ ಈ ಕೃತಿಯ ಮೊದಲ ಪ್ರಯೋಗ ಶ್ರೀ ಹೊಸನಗರ ಮೇಳದವರಿಂದ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟಿತು. ಆದರೆ ಉಡುಪಿಯಲ್ಲಿ ದೊಡ್ಡ ಮಟ್ಟಿನ ಸಭೆಯಲ್ಲಿ ಈ ಕೃತಿ ಬಿಡುಗಡೆಗೊಂಡು ಜನ ಪ್ರಚಾರ ಪಡೆದೀತೆಂಬ ನಮ್ಮ ಕಲ್ಪನೆ ಮಾತ್ರ ಕನಸಾಗಿಯೇ ಉಳಿಯಿತು !
ಐದು ದಿನದ ಈ ಕೃತಿಯು ಶಾಶ್ವತವಾಗಿ ಉಳಿಯಲಿ , ಅದನ್ನು ರಂಗದಲ್ಲಿ ಪ್ರಯೋಗಿಸಿ ಜನಪ್ರಿಯಗೊಳಿಸಿ ಯಕ್ಷರಸಿಕರೆಲ್ಲರೂ ಸವಿಯುವಂತೆ ಮಾಡಬೇಕಾದ ಹೊಣೆಗಾರಿಕೆ ಈಗಾಗಲೇ ಇರುವ ವೃತ್ತಿಪರ ಮೇಳಗಳು, ಹವ್ಯಾಸಿ ಕಲಾವಿದರು , ಮಕ್ಕಳ ಯಕ್ಷಗಾನ ತಂಡದವರು , ಹಾಗೂ ಸಂಘ ಸಂಸ್ಥೆ ಗಳ ಮೇಲಿದೆ. ಆ ಕಾರ್ಯದಲ್ಲಿ ನಾವೆಲ್ಲರೂ ಒಂದಾಗಿ ಸೇರೋಣ ಎನ್ನುವುದೇ ಈ ಲೇಖನದ ಉದ್ದೇಶ.
ನಿಮಗೇನನಿಸುತ್ತದೆ ?