Friday, May 22, 2009

ಯಕ್ಷ ಬ್ರಹ್ಮ ಅಗರಿ ಶ್ರೀನಿವಾಸ ಭಾಗವತರು ಒಂದು ಸ್ಮರಣೆ .....

ಅಗರಿ ಶ್ರೀನಿವಾಸ ಭಾಗವತರು ಯಕ್ಷ ರಂಗದ ಅನರ್ಘ್ಯ ರತ್ನಗಳಲ್ಲಿ ಒಬ್ಬರು. ಇಂದು (೨೨-೦೫-೨೦೦೯) ಅವರ ೧೦೩ ನೆ ಜನ್ಮ ದಿನ. ಭಾಗವತನಾಗಿ , ಪ್ರಸಂಗ ಕರ್ತನಾಗಿ ಎಲ್ಲಕ್ಕಿಂತ ಮಿಗಿಲಾಗಿ ಯಕ್ಷಗಾನದ ಸಮಗ್ರ ಮಾಹಿತಿಯಿದ್ದ ಅಗರಿಯವರು ಯಕ್ಷ ರಂಗ ಕಂಡ ಅದ್ಭುತಗಳಲ್ಲಿ ಒಬ್ಬರು. ೨೦ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ ಇವರು ಆಶುಕವಿಯಾಗಿದ್ದವರು .


ಅಗರಿಯವರು ಪದ್ಯಕ್ಕೆ ಕೂರುವ ಮುನ್ನ ಸಭಾವಂದನೆ ಮಾಡುತ್ತಿದ್ದ ಕ್ರಮವನ್ನು ಕೆಳಗಿನ ವಿಡಿಯೋ ದಲ್ಲಿ ಕಾಣಬಹುದು .






ಇವರ ಸ್ಮರಣಾರ್ಥ ಅಗರಿಯವರು ರಚಿಸಿದ ಲಭ್ಯವಿರುವ ಎಲ್ಲ ಪ್ರಸಂಗಗಳನ್ನು ಒಂದುಗೂಡಿಸಿ ಪ್ರಸ೦ಗ ಮಾಲಿಕೆಯೊಂದನ್ನು ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕದವರು ಬಿಡುಗಡೆ ಮಾಡಿದ್ದು ಮಾರುಕಟ್ಟೆಯಲ್ಲಿ ಲಭ್ಯವಿದೆ .


ಇದರಲ್ಲಿ ಅಗರಿಯವರ ಕುರಿತ ಲೇಖನಗಳು , ದೇವಿ ಮಹಾತ್ಮೆ ,ಬ್ರಹ್ಮ ಕಪಾಲ, ಬಪ್ಪನಾಡುಕ್ಷೇತ್ರ ಮಹಾತ್ಮೆ , ವೆಂಕಟೇಶ ಮಹಾತ್ಮೆ ( ತಿರುಪತಿ ಕ್ಷೇತ್ರ ಮಹಾತ್ಮೆ ), ಧನಗುಪ್ತ ಮಹಾಬಲಿ , ಶ್ರೀದೇವಿ ಲಲಿತೋಪಖ್ಯಾನ, ಮೊದಲಾದ ಅಗರಿಯವರು ರಚಿಸಿದ ಎಲ್ಲ ಪ್ರಸಂಗಗಳು, ಆಚಾರ ವಿಚಾರವೆಂಬ ಪದ್ಯ ಅಲ್ಲದೆ ಅಗರಿಯವರು ರಚಿಸಿದ ಕೀರ್ತನೆಗಳು ಪ್ರಕಟವಾಗಿದೆ .ಅಗರಿಯವರ ಬಗ್ಗೆ ಸಮಗ್ರ ಮಾಹಿತಿ ಒಂದೇ ಸಂಪುಟದಲ್ಲಿ ಲಭ್ಯವಾಗುವಂತೆ ಮಾಡಿದ ಕೀರ್ತಿ ಅದರ ಪ್ರಧಾನ ಸಂಪಾದಕರಿಗೆ ಸಲ್ಲಬೇಕು.
ಅಗರಿಯವರ ಧನಗುಪ್ತ ಮಹಾಬಲಿ ಪ್ರಸಂಗದ ಮಧುರವಾದ ಹಾಡು ಕೆಳಗಿನ ತಾಣದಲ್ಲಿ ಕೇಳಬಹುದು .

ಬಲು ಪ್ರಸಿದ್ಧ ಬಪ್ಪನಾಡು ಕ್ಷೇತ್ರ ಮಹಾತ್ಮೆಯ ತುಣುಕನ್ನು ಕೆಳಗಿನ ವಿಡಿಯೋ ದಲ್ಲಿ ವೀಕ್ಷಿಸಬಹುದು .


ಇಂತಹ ಯಕ್ಷಗಾನದ ಶಕಪುರುಷನನ್ನು ಸದಾ ಸ್ಮರಿಸಬೇಕಾದ್ದು ಯಕ್ಷಪ್ರೇಮಿಗಳಾದ ನಮ್ಮೆಲ್ಲರ ಕರ್ತವ್ಯ

Friday, May 15, 2009

ಪಠ್ಯ ವಿಷಯವಾಗಿ ಯಕ್ಷಗಾನ ....

ಪಠ್ಯ ಪುಸ್ತಕದಲ್ಲಿ ಯಕ್ಷಗಾನ ಸೇರಿಸಬೇಕು ಎಂಬ ವಾದ ಹಲವು ಸಮಯದಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಉಡುಪಿ ಯಕ್ಷಗಾನ ಕೇಂದ್ರ ಹಾಗೂ ಬಡಗಿನ ಕೆಲವು ಕಡೆ ಪ್ರಾಯೋಗಿಕವಾಗಿ ಯಕ್ಷಗಾನ ಕಲಿಸುವ ಪ್ರಯತ್ನವೂ ನಡೆದಿದೆ ಎಂಬುದು ವೃತ್ತ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದನ್ನು ಗಮನಿಸಿ ಕುತೂಹಲ ಹೆಚ್ಚಾಗಿ ಇನ್ನಷ್ಟು ವಿವರ ತಿಳಿಯಲು ಹಾತೊರೆದಾಗ ತಿಳಿದು ಬಂದದ್ದು ಸುಳ್ಯ ಪರಿಸರದಲ್ಲಿ " ಪಠ್ಯ ವಿಷಯವಾಗಿ ಯಕ್ಷಗಾನ " ಎಂಬ ವಿಚಾರದ ಕುರಿತಾಗಿ ಈಗಾಗಲೇ ಕಮ್ಮಟ , ವಿಚಾರ ವಿಮರ್ಶೆಗಳು ನಡೆದ ಬಗ್ಗೆ ತಿಳಿದು ಬಂತು.


ಸಾಮಾನ್ಯವಾಗಿ ಯಾವುದೇ ವಿಚಾರ ಬಂದಾಗಲೂ "ಬುದ್ದಿ ಜೀವಿಗಳು "ಎನಿಸಿಕೊಂಡವರು ಮೊದಲು ಹೇಳಿ ಬಿಡುವ ವಾಕ್ಯವೆಂದರೆ " ಇದನ್ನು ಪಠ್ಯದಲ್ಲಿ ಸೇರಿಸಬೇಕು " ಎಲ್ಲ ವಿದ್ಯಾರ್ಥಿಗಳೂ ತಿಳಿಯುವಂತಾಗಬೇಕು " ಇತ್ಯಾದಿ ಇತ್ಯಾದಿ ....


ಆದರೆ ಪಠ್ಯ ವಿಷಯವಾಗಿ ಯಕ್ಷಗಾನ ಕಲಿಸಬೇಕೆಂಬುದು ಅತ್ಯಂತ ಸಮಯೋಚಿತ ಯೋಚನೆ . ಯಕ್ಷಗಾನವು ಪೌರಾಣಿಕ ಜ್ಞಾನ , ಭಾಷಾ ಶುದ್ಧತೆ , ಸಂಸ್ಕೃತಿ ಸಂಸ್ಕಾರಗಳನ್ನು ಕೊಡುತ್ತದೆ ಎಂಬುದನ್ನೂ ಪಾಮರರೂ ಅನುಭವದಿಂದ ಒಪ್ಪಿ ಕೊಂಡ ಸತ್ಯ .


ಹಾಗಾದರೆ ಯಕ್ಷಗಾನವನ್ನು ಪಠ್ಯಕ್ಕೆ ಅಳವಡಿಸುವುದು ಹೇಗೆ? ಅದನ್ನು ಬೋಧಿಸುವವರು ಯಾರು? ಬೋಧಿಸುವುದು ಹೇಗೆ ?ಯಕ್ಷಗಾನಕ್ಕೆ ಪಠ್ಯ ಪುಸ್ತಕ ರಚಿಸುವಾಗ ಯಾವ ಯಾವ ಅಂಶಗಳಿಗೆ ಮಹತ್ವ ನೀಡಬೇಕು ? ಎಂಬುದೂ ಅತ್ಯಂತ ಮಹತ್ವದ ವಿಚಾರ . ಯಕ್ಷಗಾನದ ನಾಟ್ಯ , ಅಭಿನಯ , ವಾಚಿಕಾಭಿನಯ , ಅರ್ಥಗಾರಿಕೆ , ಮುಖವರ್ಣಿಕೆ ಹಾಗೂ ಪ್ರಸಂಗ ಸಾಹಿತ್ಯಗಳ ಸಮಗ್ರ ವಿಚಾರಗಳನ್ನೊಳಗೊಂಡ ಸಮತೂಕದ ಒಂದು ಪಠ್ಯವನ್ನು ಸಿದ್ದ ಪಡಿಸಬೇಕಾದ ಅಗತ್ಯವಿದೆ .


ಪೂರ್ವರಂಗದೊಂದಿಗೆ ಆರಂಭವಾಗುವ ಪಠ್ಯ ಕ್ರಮ ಪ್ರಸಂಗದ ಪದ್ಯಗಳಿಗೆ ಕ್ರಮವತ್ತಾದ ಕುಣಿತ , ಸಮರ್ಪಕವಾದ ಅರ್ಥ , ಅಭಿನಯವನ್ನು , ಸೂಕ್ತ ಮುಖವರ್ಣಿಕೆಯೊಂದಿಗೆ ಕಲಿಸಿದಲ್ಲಿ ಮುಂದಿನ ಪೀಳಿಗೆಗೆ ಯಕ್ಷಗಾನದ ಸಹಜ ಸೌಂದರ್ಯ ಉಳಿಯುತ್ತದೆ . ಈ ನಿಟ್ಟಿನಲ್ಲಿ ಪ್ರಕೃತ ಯಕ್ಷಗಾನದ ಪ್ರಸಿದ್ಧರಾದವರೆಲ್ಲರೂ ತಮ್ಮ ಅನುಭವದ ದೇಣಿಗೆಯನ್ನು ನೀಡಿ ಅವೆಲ್ಲವನ್ನೂ ಒಟ್ಟು ಸೇರಿಸಿ ಪರಿಷ್ಕರಿಸಿ ಗ್ರಂಥರೂಪವನ್ನು ಕೊಡಬೇಕಾದ ಅನಿವಾರ್ಯತೆ ಇದೆ .


ಯಕ್ಷಗಾನಕ್ಕೆ ತನ್ನದೇ ಆದ ನಿರ್ದಿಷ್ಟ ಶಾಸನಗಳಿಲ್ಲದೆ ಹಿರಿಯ ಕಲಾವಿದರು ಮಾಡಿದ್ದನ್ನೇ ಅನುಕರಿಸಿ ಇತ್ತೀಚೆಗಂತೂ ಹಲವು ಕ್ರಮಗಳು ನಶಿಸಿಹೋಗಿ , ಪ್ರದರ್ಶನವೆಂದರೆ ಗಿರಕಿ ಹೊಡೆಯುವುದೆಂಬ ಮಟ್ಟಕ್ಕೆ ಬಂದದ್ದು ಮಾತ್ರ ವಿಷಾದನೀಯ .ಇನ್ನಾದರೂ ಸರಿಯಾದ ಪಠ್ಯಕ್ರಮವನ್ನು ಒಮ್ಮತದಿಂದ ಮಾಡಿ ತರಗತಿಯ ಸ್ತರಕ್ಕೆ ತಕ್ಕಂತೆ ಬಾಲ ಪಾಠದಿಂದ ತೊಡಗಿ ಎಲ್ಲ ಕ್ರಮಗಳನ್ನು ಪರಿಪೂರ್ಣ ಪಠ್ಯಕ್ಕೆ ಅಳವಡಿಸಿದಲ್ಲಿ ಶಿಸ್ತುಬದ್ಧವಾದ ಕಲೆಯನ್ನಾಗಿ ಯಕ್ಷಗಾನವನ್ನು ರೂಪಿಸಬಹುದು.


ನಿಮಗೇನನಿಸುತ್ತದೆ ........?

Wednesday, May 6, 2009

ಯಕ್ಷಗಾನ "ದಶಾವತಾರ"ದ ಕುರಿತು......

ಯಕ್ಷಗಾನದಲ್ಲಿ "ದಶಾವತಾರ" ವೆಂಬ ಕಥಾನಕ ಸುಪ್ರಸಿದ್ಧ . ವಿಷ್ಣುವಿನ ಹತ್ತು ಅವತಾರಗಳನ್ನು ಒಂದೇ ರಾತ್ರಿಯಲ್ಲಿ ಪ್ರದರ್ಶಿಸುವುದು ಈ ಪ್ರಸಂಗದಲ್ಲಿ . ಸಾಮಾನ್ಯವಾಗಿ ಪ್ರಸಂಗ ದಶಾವತಾರವಾದರೂ ವಿಷ್ಣುವಿನ ಎಂಟು ಅವತಾರಗಳಾದ ಮತ್ಸ್ಯ , ವರಾಹ ,ನರಸಿಂಹ , ಕೂರ್ಮ , ವಾಮನ ,ಪರಶುರಾಮ , ಶ್ರೀರಾಮ ಹಾಗೂ ಕೃಷ್ಣಾವತಾರಗಳನ್ನು ಮಾತ್ರ ರಂಗದಲ್ಲಿ ಪ್ರದರ್ಶಿಸುವುದು ಸಂಪ್ರದಾಯ . ಇಂದಿಗೂ ಕಟೀಲು ಮೇಳದವರು ಸಂಪ್ರದಾಯದಂತೆ ಎಂಟು ಅವತಾರಗಳನ್ನು ಮಾತ್ರ "ದಶಾವತಾರ" ಪ್ರಸಂಗದಲ್ಲಿ ಆಡಿ ತೋರಿಸುತ್ತಾರೆ . ನಾನಾ ಪ್ರಸಂಗಗಳಿಂದ ಆಯ್ದ ಪದ್ಯಗಳನ್ನು ಪೋಣಿಸಿ ಸಿದ್ಧ ಪಡಿಸಿದ ಈ ಪ್ರಸಂಗ ನಿಜಕ್ಕೂ ಆಕರ್ಷಣೀಯವಾಗಿದೆ .






ದಶಾವತಾರದ ಕಥೆಯನ್ನೇ ಆಧರಿಸಿದ ಆದರೆ ಎಂಟು ಅವತಾರಗಳನ್ನು ಮಾತ್ರ "ವಿಷ್ಣು ಲೀಲೆ " ಎಂಬ ಹೆಸರಿನಿಂದ ಶ್ರೀಧರ್ಮಸ್ಥಳ ಮೇಳದವರು ಪ್ರದರ್ಶಿಸುತ್ತಾರೆ . ವಿಷ್ಣು ಲೀಲೆ ಪ್ರಸಂಗವನ್ನು ವಿದ್ವಾನ್ ಶ್ರೀ ಡಿ.ವಿ.ಹೊಳ್ಳರು ಬರೆದುದಾಗಿದ್ದು ಒಳ್ಳೆಯ ಪದ್ಯ ರಚನೆಗಳಿಂದ ಕೂಡಿದೆ. ಅಂತೆಯೇ ಅಡೂರು ಬಳಕಿಲ ವಿಶ್ಣ್ವಯ್ಯನವರು ರಚಿಸಿದ "ದಶಾವತಾರ" ಕೃತಿ ಪ್ರಕಟವಾಗಿದ್ದು ರಂಗದಲ್ಲಿ ಪ್ರಯೋಗಕ್ಕೆ ಇದುವರೆಗೆ ಬಂದಿಲ್ಲ .ಕುತೂಹಲದ ವಿಷಯವೆಂದರೆ ಬೌದ್ಧಾವತಾರ ಹಾಗೂ ಕಲ್ಕ್ಯಾವತಾರವನ್ನೇಕೆ ಮೇಳಗಳು"ದಶಾವತಾರ"ಪ್ರಸಂಗದಲ್ಲಿ ಆಡುತ್ತಿಲ್ಲ ?






ಇದೇ ಬರುವ ಜೂನ್ ತಿಂಗಳಿನಲ್ಲಿ ಮಂಗಳೂರು ಪುರಭವನದಲ್ಲಿ ವಿಷ್ಣುವಿನ ಹತ್ತು ಅವತಾರಗಳನ್ನು ( ಬೌದ್ಧಾವತಾರ ಹಾಗೂ ಕಲ್ಕ್ಯಾವತಾರ ಸಹಿತ ) ಒಳಗೊಂಡ "ದಶಾವತಾರ" ಪ್ರಸಂಗವನ್ನು ಆಯೋಜಿಸಲಾಗಿದೆ ಎಂದು ಯಕ್ಷಗಾನ ಮಾಸ ಪತ್ರಿಕೆ ಯಕ್ಷಪ್ರಭಾದಲ್ಲಿ ಪ್ರಕಟವಾಗಿದೆ . ಇದರಲ್ಲಿ ಬೌದ್ಧಾವತಾರ ಕ್ಕಾಗಿ "ತ್ರಿಪುರ ಮಥನ " ಪ್ರಸಂಗವನ್ನು ಅಳವಡಿಸಲಾಗಿದೆ . ತ್ರಿಪುರ ಮಥನದಲ್ಲಿ ಬರುವ "ಚಾರ್ವಾಕನೆ " ಬೌದ್ಧಾವತಾರದ "ಬೌದ್ಧ" ಎಂಬುದು ಕುತೂಹಲದ ವಿಚಾರ . ಎಲ್ಲರಿಗೂ ಚಿರಪರಿಚಿತನಾದ ಗೌತಮ ಬುದ್ಧ ದಶಾವತಾರದ ಬುದ್ಧನಲ್ಲ ಎಂಬುದು ಗಮನಿಸಬೇಕಾದ ಅಂಶ.




ಹಾಗೆಯೇ ಬಲಿಪ ನಾರಾಯಣ ಭಾಗವತರು ರಚಿಸಿದ "ಕಲ್ಕ್ಯಾವತಾರ"ಪ್ರಸಂಗದಲ್ಲಿ ಕಲಿಯು ಮ್ಲೇ೦ಛರನ್ನು ದಮನ ಮಾಡಿ ಧರ್ಮ ಸಂರಕ್ಷಣೆ ಮಾಡುವ ಕಥೆಯಿದೆ . ಈ ಪ್ರಸಂಗವು ಅಪ್ರಕಟಿತವಾಗಿದ್ದು ಆಸಕ್ತರು ಪ್ರಕಟಿಸುವ ಕಾರ್ಯ ಮಾಡಿದಲ್ಲಿ ಅನುಕೂಲವಾಗುತ್ತದೆ .

















ದಶಾವತಾರದ ವರ್ಣನೆಯನ್ನು ಪುರಂದರ ದಾಸರು ತಮ್ಮ ಕೀರ್ತನೆಯೊಂದರಲ್ಲಿ ತುಂಬ ಸೊಗಸಾಗಿ ,ಸರಳವಾಗಿ ಹೇಳಿದ್ದು ಹೀಗೆ

ಜಲದಲಿ ಮತ್ಸ್ಯವತಾರನಿಗೆ
ಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ
ಧರೆಯನುದ್ಧರಿಸಿದ ವರಾಹವತಾರಗೆ
ತರಳನ ಕಾಯ್ದ ನರಸಿಂಹನಿಗೆ
ಭೂಮಿಯ ದಾನವ ಬೇಡಿದಗೆ
ಆ ಮಹಾ ಕ್ಷತ್ರಿಯರ ಗೆಲಿದವಗೆ
ರಾಮಚಂದಿರನೆಂಬ ದಶರಥ ಸುತನಿಗೆ
ಭಾಮೆಯರರಸ ಗೋಪಾಲನಿಗೆ
ಬತ್ತಲೆ ನಿಂತಿಹ ಬೌದ್ಧನಿಗೆ
ಅರ್ತಿಯಿ೦ದ ಹಯವೇರಿದ ಕಲ್ಕ್ಯನಿಗೆ
ಹತ್ತವತಾರದಿ ಭಕ್ತರ ಪೊರೆಯುವ
ಅಚ್ಚ್ಯುತ ಪುರಂದರ ವಿಠಲನಿಗೆ . ಮಂಗಳಂ

ಇದರಲ್ಲಿ ಬರುವ ಬೌದ್ಧ ಚಾರ್ವಾಕ ಸಿದ್ಧಾಂತ ಬೋಧಿಸಿದ ಚಾರ್ವಾಕನೆಂಬುದು ವಿದ್ವಾಂಸರ ಅಭಿಮತ .
ಮೇಲಿನ ದಾಸರ ಪದವನ್ನು ಯಕ್ಷಗಾನಕ್ಕೆ ಅಳವಡಿಸಿ ಹಾಡುವುದನ್ನು ಆಗಾಗ ನಾವು ನೋಡುತ್ತಿರುತ್ತೇವೆ . ಧರ್ಮಸ್ಥಳ ಯಕ್ಷಗಾನ ತರಬೇತಿ ಕೇಂದ್ರದವರು ಬಿಡುಗಡೆ ಮಾಡಿದ ಪೂರ್ವರಂಗ ಪುಸ್ತಕದಲ್ಲಿ ಈ ಹಾಡನ್ನು ಯಕ್ಷಗಾನದ ರಾಗಕ್ಕೆ ಅಳವಡಿಸಿ ಪಾಠಾ೦ತರ ಮಾಡಿದ್ದು ಓದಲು ಸೊಗಸಾಗಿದೆ.

ಒಟ್ಟಿನಲ್ಲಿ ವಿಷ್ಣುವಿನ ಎಲ್ಲ ಹತ್ತು ಅವತಾರದ "ಸಂಪೂರ್ಣ ದಶಾವತಾರ " ಯಕ್ಷಗಾನವನ್ನು ರಂಗದಲ್ಲಿ ನೋಡಬೇಕಾದಲ್ಲಿ ಜೂನ್ ೬ ರ ಕುರಿತು ಕಾಯಲೇಬೇಕು !



***

Tuesday, April 28, 2009

ಒಂದು ಫೋಟೋ ..


ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ತಮ್ಮ ಜೀವನದ ಕೊನೆಯ ಯಕ್ಷಗಾನ ಶಾಂಭವಿ ವಿಲಾಸ ಪ್ರಸಂಗದ ಪ್ರದರ್ಶನದಲ್ಲಿ .....


ಅಪ್ರತಿಮ ಹಿಮ್ಮೇಳ ವಾದಕನಿಗೆ ನುಡಿ ನಮನ ....


ಎಡನೀರು ಮೇಳದವರು " ಜಾಂಬವತಿ ಕಲ್ಯಾಣ -ವೀರ ಅಭಿಮನ್ಯು " ಪ್ರಸಂಗವನ್ನು ಆಡಲಿರುವರು ಎಂಬ ವಿಚಾರ ತಿಳಿದ ನಾವು ಬಸವ ಜಯಂತಿ ಪ್ರಯುಕ್ತ ರಜೆ ಇದ್ದುದರಿಂದ ಈ ಸಲದ ಎಡನೀರು ಮೇಳದ ಒಂದು ಆಟವಾದರೂ ನೋಡಬೇಕೆಂಬ ಆಸೆಯಿಂದ ಬೆಂಗಳೂರಿನ ಕೋರಮಂಗಲದ ಎಡನೀರು ಮಠಕ್ಕೆ ಮಿತ್ರರಾದ ರಾಜಣ್ಣನವರೊಂದಿಗೆ ಸಂಜೆ ಎಳೂಕಾಲರ ಸುಮಾರಿಗೆ ತಲುಪಿದಾಗ ನಮಗೆ "ಚಿಪ್ಪಾರು ಬಲ್ಲಾಳರು " ಇನ್ನಿಲ್ಲ ಎಂಬ ಆಘಾತಕಾರಿ ವಿಷಯ ತಿಳಿಯಿತು .ಕಲಾವಿದರೆಲ್ಲ ದು:ಖಾರ್ತರಾಗಿದ್ದ ಸನ್ನಿವೇಶ ಬಹಳಷ್ಟು ಸಂಕಟವನ್ನು ಉಂಟುಮಾಡಿತು . ಮೃತರ ಗೌರವಾರ್ಥ ಆ ದಿನದ ಆಟವನ್ನು ರದ್ದುಗೊಳಿಸಲಾಯಿತು .


ಚಿಕ್ಕಂದಿನಿಂದಲೂ ಧರ್ಮಸ್ಥಳ ಮೇಳದ ಆಟವನ್ನು ನೋಡುತ್ತಾ ಬೆಳೆದ ನಮಗೆ ಚೆಂಡೆ ಎಂದರೆ ಮೊದಲು ಕಣ್ಣೆದುರಿಗೆ ಬರುವವರೇ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು . ಇವರು ಪೀಠಿಕೆಗೆ ನಿಂತರೆಂದರೆ ಆ ಉರುಳಿಕೆಗಳನ್ನು ಕೇಳುವುದೇ ಕಿವಿಗಳಿಗೆ ಹಬ್ಬ ! ಚೆಂಡೆ ಮದ್ದಲೆಗಳ ಮೇಲೆ ಅಸಾಧಾರಣ ಪ್ರಭುತ್ವ ಹೊಂದಿದ್ದ ಬಲ್ಲಾಳರು ತೆಂಕು ತಿಟ್ಟಿನ ಎಲ್ಲ ಪ್ರಖ್ಯಾತ ಭಾಗವತರುಗಳಿಗೆ ಸಾಥ್ ನೀಡಿದವರು. ಹಿರಿಯ- ಕಿರಿಯ ಕಲಾವಿದರಿಗೆಲ್ಲ ಚೆಂಡೆ ಮದ್ದಲೆ ಸಾಥ್ ನೀಡಿ ಅವರೆಲ್ಲರ ಪದ್ಯಗಳು ಮೆರೆಸುವಂತೆ ಮಾಡಿದ ಖ್ಯಾತಿ ಇವರದ್ದು. ೧೯೨೮ ರ ಎಪ್ರಿಲ್ ೨ ರಂದು ಜನಿಸಿದ ಇವರು ರಾಜಮನೆತನದಲ್ಲಿ ಜನಿಸಿದರೂ ಕಡು ಬಡತನದ ಜೀವನ ಅನುಭವಿಸಿದವರು. ದಿವಂಗತ ದಾಮೋದರ ಮಂಡೆಚ್ಚರ ಪದ್ಯಗಳಿಗೆ ಮೃದಂಗದ ಪೆಟ್ಟುಗಳನ್ನು ಚೆಂಡೆ ಮದ್ದಳೆಗಳಿಗೆ ಅಳವಡಿಸಿದ ಕೀರ್ತಿ ಇವರದ್ದು. ಕಡತೋಕ -ಬಲ್ಲಾಳರ ಜೋಡಿ ಯಕ್ಷರಂಗ ಕಂಡ ಅದ್ಭುತ .

ಮೂಲ್ಕಿ ಮೇಳದಿಂದ ಆರಂಭಗೊಂಡ ಇವರ ಕಲಾಸೇವೆ ಧರ್ಮಸ್ಥಳ ಮೇಳದಲ್ಲಿ ನಿರಂತರವಾಗಿ 50 ವರ್ಷಗಳ ಕಾಲ ಮುಂದುವರಿದು ಮೇಳದಿಂದ ನಿವೃತ್ತರಾದರೂ ಯಕ್ಷಗಾನಗಳಲ್ಲಿ ಸಕ್ರಿಯರಾಗಿದ್ದರು .
ಸದಾ ಸ್ಥಿತಪ್ರಜ್ಞರಂತೆ ಕಾಣುತ್ತಿದ್ದ ಬಲ್ಲಾಳರು ಸಂತೃಪ್ತ ಜೀವನವನ್ನು ನಡೆಸಿದವರು. ಎಡನೀರು ಮೇಳದ ಆಟಕ್ಕೋಸ್ಕರ ಬೆಂಗಳೂರು ನಗರಕ್ಕೆ ಬಂದಿದ್ದ ಇವರು ಚೌಕಿ ಪೂಜೆಯಾಗುತ್ತಿದ್ದಂತೆ ನಮ್ಮನ್ನು ಬಿಟ್ಟು ಅಗಲಿದರು . ಅನಾಯಾಸೇನ ಮರಣಂ .. ವಿನಾ ದೈನ್ಯೇನ ಜೀವನಂ ... ಎಂಬಂತೆ ಸುಖ ಮರಣವನ್ನು ಪಡೆದ ಇವರು ಧನ್ಯರು.

ಅವರಂತೆ ಚೆಂಡೆ ಮದ್ದಲೆ ನುಡಿಸಬಲ್ಲ ಕಲಾವಿದರು ವಿರಳ .ಹಳೆಯ ತಲೆಮಾರಿನ ಕೊಂಡಿಯೊಂದು ಕಳಚಿಕೊಂಡು ಯಕ್ಷಗಾನ ಕ್ಷೇತ್ರದಲ್ಲಿ ಬಲು ದೊಡ್ಡ ನಿರ್ವಾತವನ್ನು ನಿರ್ಮಾಣವಾಯಿತು. ಇದು ಕಲಾಭಿಮಾನಿಗಳಿಗೆ ತುಂಬಲಾರದ ನಷ್ಟ . ಅವರ ದಿವ್ಯಾತ್ಮವು ಚಿರ ಶಾಂತಿಯನ್ನು ಹೊಂದಲಿ ಎಂದು ನಾವೆಲ್ಲ ಪ್ರಾರ್ಥಿಸುತ್ತೇವೆ..

Thursday, April 2, 2009

ಯಕ್ಷಗಾನ ಪತ್ರಿಕೆಗಳು ......




ಚಿಕ್ಕವನಿದ್ದಾಗ ಉದಯವಾಣಿ ಪತ್ರಿಕೆಯಲ್ಲಿ ವಾರಕ್ಕೊಮ್ಮೆ ಅಥವಾ ಅಪರೂಪಕ್ಕೊಮ್ಮೆ ಯಕ್ಷಗಾನದ ಕುರಿತಾದ ಲೇಖನಗಳು ಬರುತ್ತಿದ್ದುವು .ಅವನ್ನು ಕುತೂಹಲದಿಂದ ಓದುತ್ತಿದ್ದ ನಮಗೆ ಯಕ್ಷಗಾನಕ್ಕೆ ಮೀಸಲಾಗಿರುವ ಪತ್ರಿಕೆ ಇರಬೇಕಿತ್ತು ಎಂದು ಅನಿಸಿತ್ತು .ಆಗ ನಮಗೆ ಬೇಕಾದ ರಮ್ಯಾದ್ಭುತ ವೇಷಗಳ ಕಪ್ಪು ಬಿಳುಪು ಫೋಟೋಗಳು ಉದಯವಾಣಿಯಲ್ಲಿ ಪ್ರಕಟವಾಗುತ್ತಿದ್ದುದನ್ನು ಕತ್ತರಿಸಿ ಗೇರು ಬೀಜದ ಮರದಿಂದ ಒಸರುವ ಗೋಂದು ಬಳಸಿ ಪುಸ್ತಕವೊಂದರಲ್ಲಿ ಅಂಟಿಸಿ ಇಡುತ್ತಿದ್ದ ನಮಗೆ ಯಕ್ಷಗಾನ ಪತ್ರಿಕೆಗಳ ಬಗ್ಗೆ ಅರಿವಿರಲಿಲ್ಲ .

ಯಕ್ಷಗಾನಕ್ಕೆ ಸೀಮಿತವಾಗಿರಬೇಕೆಂದು ಈ ಹಿಂದೆ ಕಡತೋಕ ಮಂಜುನಾಥ ಭಾಗವತರು "ಯಕ್ಷಗಾನ" ಎಂಬ ಪತ್ರಿಕೆಯನ್ನು ಆರಂಭಿಸಿ ಕೈ ಸುಟ್ಟುಕೊಂಡಿದ್ದರು ಎಂಬ ವಿಚಾರ ಮೊನ್ನೆ ಮನೆಯಲ್ಲಿ ಶ್ರೀ ಕುಬಣೂರು ಶ್ರೀಧರ ರಾಯರ "ಯಕ್ಷಪ್ರಭ " ಮಾಸ ಪತ್ರಿಕೆಯ ಹಳೆಯ ಆವೃತ್ತಿ ನೋಡಿದಾಗ ತಿಳಿದು ಬಂತು. ಈಗ ಆ ಪತ್ರಿಕೆಗೆ ಪುನರ್ಜನ್ಮ ಕೊಟ್ಟು ಆರಂಭಿಸಲಾಗಿದೆ ಎಂಬ ವಿಚಾರ ತಿಳಿದು ಸಂತಸವಾಯಿತು .

ನನಗೆ ತಿಳಿದಂತೆ ಸುಮಾರು ೨೨ ವರ್ಷಗಳಿಂದ ಸಾಕಷ್ಟು ಏಳು ಬೀಳುಗಳನ್ನು ಅನುಭವಿಸಿ ಛಲ ಬಿಡದ ತ್ರಿವಿಕ್ರಮನಂತೆ ಶ್ರೀ ಕುಬಣೂರು ಶ್ರೀಧರ ರಾಯರು ತಮ್ಮ ವೃತ್ತಿ ಜೀವನದ ನಡುವೆಯೂ ಯಕ್ಷ ಪ್ರಭ ಪತ್ರಿಕೆಯನ್ನು ಆನೂಚಾನವಾಗಿ ನಡೆಸಿಕೊಂಡು ಬಂದಿದ್ದಾರೆ . ದಕ್ಷಿಣ ಕನ್ನಡ ,ಉತ್ತರಕನ್ನಡ , ಮುಂಬೈ ,ದುಬೈ ಹಾಗೂ ಬೆಂಗಳೂರಿನ ಮುಖ್ಯ ಕಾರ್ಯಕ್ರಮಗಳ ವಿವರ , ಲೇಖನಗಳು , ದೇಶದ ನಾನಾ ಕಡೆಗಳಲ್ಲಿನ ಯಕ್ಷಗಾನ ಪ್ರದರ್ಶನ, ಸನ್ಮಾನ ,ಸಂಸ್ಮರಣೆ ಇತ್ಯಾದಿ ವಿಷಯಗಳಲ್ಲದೇ ಸಂಗ್ರಹ ಯೋಗ್ಯ ಲೇಖನಗಳು ಮತ್ತು ತಾಳಮದ್ದಲೆ , ಕಟೀಲು, ಧರ್ಮಸ್ಥಳವೆ ಮೊದಲಾದ ಮೇಳಗಳ ಆಯಾ ಮಾಸದ ಆಟದ ವೇಳಾಪಟ್ಟಿ ಯನ್ನು ಒಳಗೊಂಡ ಈ ಪತ್ರಿಕೆಯನ್ನು ಓದುವುದೇ ಒಂದು ಯಕ್ಷ ಕಲಾಭಿಮಾನಿಗಳಿಗೆ ಆನಂದದ ವಿಚಾರ . ಯಕ್ಷಗಾನದ ಕುರಿತು ಹಲವು ಅಂತರ್ಜಲ ತಾಣಗಳಿದ್ದರೂ ಯಕ್ಷಪ್ರಭ ಪತ್ರಿಕೆಯನ್ನು ಬಿಟ್ಟು ಬೇರಾವ ಪತ್ರಿಕೆಯೂ ಯಕ್ಷಗಾನ ಪತ್ರಿಕೆಯಾಗಿ ಮಾರುಕಟ್ಟೆಯಲ್ಲಿ ಸಾರ್ವಭೌಮತ್ವ ಹೊಂದಿಲ್ಲ ಎಂದು ನನ್ನ ಅನಿಸಿಕೆ.

ನಿಮಗೇನನಿಸುತ್ತದೆ ?

Monday, March 16, 2009

ಗೆಳೆಯನಿಗೆ ವಿದಾಯ .....




ನಡೆವೆ ನೀನು ಎನ್ನ ಬಿಟ್ಟು
ನಿನ್ನ ಬಾಳ ಗುರಿಯನು
ಸೇರಲೆಂದು ಜಗದ ಬಳಿಗೆ
ಎನ್ನ ಜೀವದ ಗೆಳೆಯನೆ


ಕಳೆದೆವೆ೦ತೊ ಹಲವು ದಿವಸ
ಕೂಡಿ ನಾವು ಹಿತದಲಿ
ಸರಸ ವಿರಸ ಕೊನೆಗೆ ಹರುಷ
ಕೂಡಿ ನಾವು ಹಂಚುತ


ಬಲಿತ ಹಕ್ಕಿ ಕಾಳು ಹೆಕ್ಕಿ
ತಿನ್ನಲೆಂದು ಹಾರುತ
ಮೇಲೆ ನೆಗೆವ ತೆರದಿ ನಾವು
ಜತೆಯ ಬಿಟ್ಟು ಅಗಲುತ


ಇರಲಿ ಪ್ರೀತಿ ಸ್ನೇಹವೆಂದು
ನಿರತ ನಮ್ಮಲೆನ್ನುತ
ಮರಳಿ ನಡೆವ ನಮ್ಮ ನೆಲೆಗೆ
ಸವಿಯ ನೆನಪ ಉಳಿಸುತ

***