Wednesday, May 14, 2014

ಸಾಮಾಜಿಕ ಜಾಲತಾಣಗಳು ಮತ್ತು ಬಡಪಾಯಿ ಕಲಾವಿದನ ಜೀವನ.

ಈ ವಿಚಾರವನ್ನು ನಾನು ಬರೆಯಲೇ ಬಾರದೆಂದು ಬಹಳ ದಿನಗಳಿಂದ ಅದುಮಿಟ್ಟುಕೊಂಡಿದ್ದೆ. ಆದರೆ ಕೆಲವು ವಿಷಾದಕರ ಬೆಳವಣಿಗೆಗಳು ನನಗೆ ವೇದನೆಯನ್ನು ಉಂಟು ಮಾಡಿದ್ದರಿಂದಲೇ ಏನೋ ಈ ಕಟು ವಿಚಾರಗಳನ್ನು ಬರೆಯಲು ತೊಡಗಿದ್ದೇನೆ. ಸಾಮಾಜಿಕ ಜಾಲತಾಣಗಳಾದ ಆರ್ಕುಟ್ , ಫೇಸ್ ಬುಕ್ ವಿದ್ಯಾವಂತರನ್ನು ಬಹುಬೇಗನೆ ತಲುಪಿ ಬೇಕಾದ ಮಾಹಿತಿಗಳನ್ನು ನೀಡುತ್ತಿರುವುದು ವರದಾನವೇ ಸರಿ. ಎಷ್ಟೋ ಬಾರಿ ನಮಗೆ ತಿಳಿಯದೆ ಇದ್ದ ಮಾಹಿತಿಗಳು , ಬಹಳ ದಿನಗಳಿಂದ ಕಾರ್ಯ ಕಾರಣಗಳಿಂದ ದೂರವಿರುವ ಮಿತ್ರರನ್ನು ಸಂಪರ್ಕಿಸಿ ಅವರೊಂದಿಗೆ ಸಂವಹನ ನಡೆಸಲು ಈ ಎಲ್ಲ ಜಾಲತಾಣಗಳು ಸಹಕಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ.
ಆದರೆ ಇತ್ತೀಚಿನ ದಿನಗಳಲ್ಲಿ ಈ ಜಾಲ ತಾಣಗಳಲ್ಲಿ ಸದಭಿರುಚಿಯ ಬಳಕೆಗಿಂತ ವಿಕೃತಿ, ಅತಿ ವೈಭವೀಕರಣ , ಪೂರ್ವಾಗ್ರಹ ಪೀಡಿತ ಮಾಹಿತಿಗಳೇ ರಂಜಿಸುತ್ತಾ ರಾರಾಜಿಸತೊಡಗುತ್ತಿರುವುದು ಬೇಸರದ ವಿಷಯ.
ಯಕ್ಷಗಾನಕ್ಕೆ ಸಂಬಂಧಿಸಿದಂತೆ ಹಲವಾರು ವೀಡಿಯೋಗಳು, ತುಣುಕುಗಳು ಯು ಟ್ಯೂಬ್ ನಲ್ಲಿ ಲಭ್ಯವಿದ್ದು ಅಭಿಮಾನಿಗಳಿಗೆ ರಂಜನೆ ನೀಡುತ್ತಿವೆ. ಮನೆಯನ್ನು ಬಿಟ್ಟು ವಿದೇಶಗಲ್ಲಿ, ಉದ್ಯೋಗ ನಿಮಿತ್ತ ದೂರದ ಊರುಗಳಲ್ಲಿ ನೆಲೆಸಿರುವ ಕಲಾರಸಿಕರಿಗೆ ತಮ್ಮ ಊರಿನ ಮಣ್ಣಿನ ಕಲೆ ಯಕ್ಷಗಾನದ ಸವಿ ಉಣ್ಣಲು ಇವುಗಳು ಸಹಕಾರಿ. ಪ್ರಸಿದ್ಧ ಮೇಳಗಳ ಬಯಲಾಟದ ಪೂರ್ಣ ಚಿತ್ರೀಕರಿತ ಮಾದರಿಗಳೂ ಇಲ್ಲಿ ಲಭ್ಯವಿದ್ದು ರಾತ್ರಿ ಇಡೀ ನಿದ್ದೆಗೆಡದೆ ಬೇಕಾದಾಗ ಆಸ್ವಾದಿಸಲು ಇವುಗಳು ಸಿದ್ಧ ತಿಂಡಿಗಳಂತೆ ಸಿಗುತ್ತದೆ.
ಕೆಲವೊಂದು ಜಾಲತಾಣಗಳಲ್ಲಿ ಅಭಿಮಾನೀ ಸಂಘ/ ಬಳಗ ಹುಟ್ಟಿಕೊಂಡು ಕೇವಲ ಆ ಕಲಾವಿದನ ಕಲಾ ಕೌಶಲ್ಯ ವಿವರಿಸುವದು ಮಾತ್ರವಲ್ಲದೆ ಇತರ ಕಲಾವಿದರೊಂದಿಗೆ ತುಲನೆ ಹಾಗೂ ಉಳಿದವರನ್ನು ಹೀನಾಯವಾಗಿ ಕಾಣುವ ಪ್ರವೃತ್ತಿ ನಿಜಕ್ಕೂ ನೋವನ್ನು ತರಿಸುತ್ತದೆ.ಇಂದು ಈ ಸಾಮಾಜಿಕ ಜಾಲತಾಣಗಳ ಪ್ರಭಾವ ಎಷ್ಟರ ಮಟ್ಟಿಗೆ ಪ್ರಭಾವ ಉಂಟುಮಾಡುತ್ತಿದೆ ಎಂಬುದಕ್ಕೆ ನನ್ನ ಗಮನಕ್ಕೆ ಬಂದ ಕೆಲವು ಘಟನೆಗಳನ್ನು ಹಂಚಿಕೊಳ್ಳ ಬಯಸುತ್ತಿದ್ದೇನೆ.
ಘಟನೆ-1
ಪ್ರಸಿದ್ಧ ಬಯಲಾಟ ಮೇಳವೊಂದರ  ದಕ್ಷಾಧ್ವರ-ದಮಯಂತಿ ಪುನ:ಸ್ವಯಂವರ ಪ್ರಸಂಗ.
ಪ್ರಧಾನ ಸ್ತ್ರೀ ವೇಷಧಾರಿಯ ತಾಯಿಗೆ ಅನಾರೋಗ್ಯವಿದ್ದ ಕಾರಣ ರಜೆಯ ಮೇಲೆ ತೆರಳಿದ್ದ. ರಾತ್ರಿ 9 ಗಂಟೆಗೆ ಚೌಕಿಯ ಬಳಿ 2 ಮಂದಿ ತರುಣರು ಲಾಪ್ ಟಾಪ್ ನಲ್ಲಿ ಏನನ್ನೋ ಹುಡುಕಾಡುತ್ತಿದ್ದರೆ ಇನ್ನೊಬ್ಬ ಮಿತ್ರರಿಗೆ ಕರೆ ಮಾಡಿ ಇವತ್ತು "ಆ ಕಲಾವಿದ " ರಜೆ ಹಾಗಾಗಿ ನಮ್ಮ " ಈ ಕಲಾವಿದ " ದಾಕ್ಷಾಯಿಣಿ ಪಾತ್ರ ಮಾಡುತ್ತಾನೆ ನೀವೆಲ್ಲ ಕೂಡಲೇ ಬನ್ನಿರಿ!  ಇವತ್ತು ಬಾರದಿದ್ದರೆ ನಾನು ನಾಳೆ ಫೇಸ್ ಬುಕ್ ನಲ್ಲಿ ಫೋಟೋ ಹಾಗೂ ವೀಡಿಯೊ ಅಪ್ ಲೋಡ್ ಮಾಡ್ತೇನೆ ಎಂದು ಎಲ್ಲರಿಗೂ ಕೇಳುವಂತೆ ಹೇಳುತ್ತಿದ್ದ.ಇದನ್ನು ಕೇಳಿಸಿ ಕೊಂಡ ಕೆಲವು ಕಲಾವಿದರು ಮುಖ್ಯ ಸ್ತ್ರೀ ವೇಷಧಾರಿಗೆ ಫೋನಾಯಿಸಿ ಕೂಡಲೇ ಬರುವಂತೆಯೂ ಆ ವೇಷವನ್ನು ಮಾಡುವಂತೆಯೂ ಹೇಳಿದರು.
ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಪೀಠಿಕೆ ಸ್ತ್ರೀವೇಶ ಕುಣಿತ ಮುಕ್ತಾಯವಾಗುತ್ತಿದ್ದಂತೆಯೇ ಮುಖ್ಯ ಸ್ತೀವೇಶಧಾರಿ ಓಡೋಡಿ ಬಂದು ತನ್ನ ಜಾಗದಲ್ಲಿ ಕುಳಿತ!

ತಾಯಿಯ ಅನಾರೋಗ್ಯ ಒಂದೆಡೆ... ತನ್ನ ಜೀವನದ ತುತ್ತಿಗೆ ಎಲ್ಲಿ ಸಂಚಕಾರ ಬರುತ್ತದೋ ಎಂಬ ಆತಂಕ ಒಂದು ಕಡೆ... ! ಭಯದಲ್ಲೇ ವೇಷವನ್ನು ಮಾಡಿ ರಂಗಸ್ಥಳವೇರಿದ.

ಘಟನೆ -2
ಆ ದಿನ ದೇವಿ ಮಹಾತ್ಮೆ.  ರಕ್ತಬೀಜನ ವೇಷಧಾರಿಗೆ ಲೋ ಬಿಪಿ ಆಗಿದ್ದ ಕಾರಣ ತಾನು ಸುಗ್ರೀವನ ವೇಷ ಮಾಡಿ ಧೂಮ್ರಾಕ್ಷ ಮಾಡುವ ವ್ಯಕ್ತಿ ಅಂದು ರಕ್ತಬೀಜ ಮಾಡಲಿ ಎಂದು ನಿರ್ಧಾರ ಮಾಡಿ ಆಗಿತ್ತು. ಮೊನ್ನೆ ನೋಡಿದ್ದ ಅದೇ 3 ತರುಣರು ಇಂದೂ ಪ್ರತ್ಯಕ್ಷ!
ಮತ್ತೆ ಫೋನಾಯಿಸುತ್ತಾ ಇವತ್ತು "ಇವರ" ರಕ್ತಬೀಜ ಇಲ್ಲ ನೀವು ಸುಮ್ಮನೆ ಬರಬೇಡಿ! ನಾವು ಅಷ್ಟು ದೂರದಿಂದ ರಜೆ ಮಾಡಿ ಇವರ ವೇಷ ನೋಡಲು ಬಂದರೆ ಅವರು ಉದಾಸೀನ ಮಾಡ್ತಿದ್ದಾರೆ .ಇದನ್ನೆಲ್ಲ ಫೇಸ್ ಬುಕ್ ನಲ್ಲಿ ಹಾಕ್ಬೇಕು. ಇವರಿಗೆ ಕೂಡದಿದ್ದರೆ ಮನೆಗೆ ಹೋಗಲಿ ಎಂದು ಘೋಷಿಸಿ ಬಿಟ್ಟ!

 ಇದನ್ನು ಕೇಳಿ ಫೇಸ್ ಬುಕ್ ಅಂದರೆ ಏನು ಎಂದು ಅರಿಯದ ಆ ಹಿರಿಯ ಕಲಾವಿದ  ಬಹಳ ಸಂಕಟಪಟ್ಟು ನನ್ನಲ್ಲಿ ಹೇಳಿದ " ತೂಲೆ ಅಣ್ಣೆರೆ ಎಂಚ ಪನ್ಪೆರ್ ಎಂಕ್ ತೀರ್ದುಂಡ ಯಾನೆ ಮಲ್ಪೆದೆ". ಆ ಕಲಾವಿದ ಪ್ರಾಮಾಣಿಕವಾಗಿ ಹಲವು ವರ್ಷಗಳಿಂದ ಮುಖ್ಯ ಪಾತ್ರಗಳನ್ನು ಮೆರೆಯಿಸಿದವರು. ಅವರ ರಕ್ತಬೀಜ, ತಾಮ್ರಧ್ವಜ, ಇಂದ್ರಜಿತು, ಕೌರವ ಮುಂತಾದ ವೇಷಗಳನ್ನು ಎವೆಯಿಕ್ಕದೆ ನೋಡಿ ನಾನು ಆನಂದಿಸಿದ್ದೇನೆ. ಆ ದಿನ ಮಾತ್ರ ಈ ತರುಣರ ವರ್ತನೆಯಿಂದ ಬಹಳ ಬೇಸರೆವೆನಿಸಿತು.

ಘಟನೆ-3
ಅದು ಪ್ರಸಿದ್ದ ಮೇಳವಾದರೂ ಆ ಮೇಳಕ್ಕೆ ಈ ತರುಣರ ಬಾಧೆ ಇಲ್ಲ!! ಅವರು ಆ ಸೆಟ್ ನ ಆಟಕ್ಕೆ ಹೋಗುವುದೇ ಇಲ್ಲ !  ಯಾರೂ ಒಬ್ಬ ಟೆಕ್ಕಿ ಯಕ್ಷಗಾನ ಅಭಿಮಾನಿ ಈ ಮೇಳದ ಆಟಕ್ಕೆ ಆಕಸ್ಮಿಕವಾಗಿ ಬಂದಿದ್ದ. ಅವನಿಗೆ ಈ ಮೇಳದಲ್ಲಿದ್ದ ಸ್ತ್ರೀ ವೇಷ ಹಾಗೂ ಮುಖ್ಯ ವೇಷ ಬಹಳ ಇಷ್ಟವಾಗಿ ಅದನ್ನು ವೀಡಿಯೊ ಚಿತ್ರೀಕರಿಸಿ ಯೂ ಟ್ಯೂಬ್ ಗೆ ಅಪ್ ಲೋಡ್ ಮಾಡಿದ.
ಅದಾದ 2 ನೇ ದಿನ ಅದಕ್ಕೆ ಹಲವಾರು ಕಾಮೆಂಟ್ ಬಂದವು.

ಅದರಲ್ಲಿ ಒಬ್ಬನ ಉವಾಚ :
 ನೀವು ನಾವು ಹೋಗುವ ಈ ಸೆಟ್ ನ ಆಟಕ್ಕೆ ಬರಬೇಕಿತ್ತು. ಇವರಷ್ಟು ಚಂದ ಅವರು ಮಾಡುವುದೇ ಇಲ್ಲ. ನಾನು ಬೇಕಾದರೆ ಎಲ್ಲಿಯಾದರೂ ಬೆಟ್ ಮಾಡ್ತೇನೆ!

ಇದನ್ನೆಲ್ಲ ನೋಡಿದ ಒಬ್ಬ ಯುವ ಕಲಾವಿದ  ಆ ಟೆಕ್ಕಿಗೆ ಫೋನ್ ಮಾಡಿ ನೀವು ನಮ್ಮ ಮೇಳದ ಅಭಿಮಾನಿ ಬೇರೆ ಮೇಳವನ್ನು ಹೇಗೆ ಹೋಗಳ್ತೀರಿ ? ಇದರಿಂದ ನಮಗೆ ತೊಂದರೆ ಆಗ್ತದೆ ಎಂದು ಜೋರಾಗಿ ಕೂಗಾಡಿದನಂತೆ.

ನಾನು ಆ ಟೆಕ್ಕಿ ಬಳಿ ನಮ್ಮಲ್ಲಿ ಒಂದು ಮೇಳದ ಸಪ್ತಾಹ ನಡೆಯುತ್ತಾ ಇದೆ ಬರುತ್ತೀರಾ ಎಂದಾಗ ಈ ವಿಚಾರವನ್ನು ಪರಿಚಿತನಾದ ಆ ಟೆಕ್ಕಿ ಹೇಳಿದ!

ಇದನ್ನೆಲ್ಲ ನೋಡಿದಾಗ ನನಗೆ ಅನಿಸಿದ್ದು
1. ಪ್ರತಿಯೊಬ್ಬನಿಗೂ ಪ್ರಾಮಾಣಿಕವಾಗಿ ದುಡಿದು ತಿನ್ನುವ ಹಂಬಲವಿರುತ್ತದೆ ಹಾಗೆಯೇ ಸಮಸ್ಯೆಗಳೂ ಅನಿವಾರ್ಯತೆಗಳೂ ಕಾಡುತ್ತಿರುತ್ತವೆ. ಅದಕ್ಕಾಗಿ ಅತಿರೇಕದ ಪ್ರಚಾರ ಮಾಡಿ ಅವರ ಹೊಟ್ಟೆಗೆ , ತಿನ್ನುವ ಅನ್ನಕ್ಕೆ ಕಲ್ಲು ಹಾಕುವ ಪ್ರಯತ್ನ ಮಾಡಕೂಡದು.
2. ಎಲ್ಲರಿಗೂ ಅವರದ್ದೇ ಆದ ಸಾಮರ್ಥ್ಯವಿರುತ್ತದೆ. ಪ್ರಜ್ಞಾವಂತರೇ ಮೂರ್ಖರಂತೆ ವರ್ತಿಸಿದರೆ , ಪ್ರಭಾವಿ ಜಾಲತಾಣಗಳನ್ನು ಬಳಸುವ ಮೂಲಕ ಸದಭಿರುಚಿಯ ಪ್ರೋತ್ಸಾಹ ಕೊಡುವ ಬದಲು ಓರ್ವ ಕಲಾವಿದನ ಜೀವನಕ್ಕೆ ಮುಳುವಾಗಕೂಡದು
ನಮ್ಮಿಂದ ಸಾಧ್ಯವಿದ್ದರೆ ಸಹಕರಿಸೋಣ ಇಲ್ಲದಿದ್ದರೆ ಸುಮ್ಮನಿರೋಣ. ಯಾರ ಕಣ್ಣಲ್ಲೂ ನೀರು ತರಿಸುವ ಕಟುಕತನ ಮಾತ್ರ ಅಕ್ಷಮ್ಯ.
ಏನಂತೀರಿ...?

6 comments:

ಅರವಿಂದ said...

ಆತ್ಮೀಯ ಸುಭ್ರಮಣ್ಯ,

ಸಂದರ್ಭಿಕ ಲೇಖನ. ಎಚ್ಚೆತ್ತುಕೊಳ್ಳುವ ಅವಶ್ಯವನ್ನ ತಿಳಿಸುತ್ತೆ.

ಇಂತಿ
ಅರವಿಂದ

Anonymous said...

ಇವತ್ತಿನ ವಿಜಯಕರ್ನಾಟಕದಲ್ಲಿ ನಿಮ್ಮ ಬ್ಲಾಗಿನ ಬಗ್ಗೆ ನೋಡಿ ಕುತೂಹಲವಾಯ್ತು. ನೀವು ಹೇಳಿದ ವಿಚಾರಗಳು ಅಕ್ಷರಶ: ಸತ್ಯ. ತಂತ್ರಜ್ಞಾನ ಏನೇ ಬೆಳವಣಿಗೆಯಾದರೂ ಮಾನವೀಯತೆಯನ್ನು ಮರೆಯಬಾರದು. ಇನ್ನೊಬ್ಬರ ಬದುಕನ್ನು ಕಸಿಯುವ ಯಾ ಘಾಸಿಗೊಳಿಸುವ ವರ್ತನೆ ಖಂಡನೀಯ
- ಡಾ. ನಾರಾಯಣ ಉಪಾಧ್ಯಾಯ, ಮೂಡುಬೆಳ್ಳೆ

Anonymous said...

good article. keep writing
- yashaswini, tumkur

worldlord said...

Good Morning Sir,

You have revealed the facts which are happening....we can find these kind of people in every field...by writing this article you have made everyone(at-least those who read) to know about the facts...

Vinod Kumar Bangalore said...

Agree with you

GOPAL said...

GOOD ARTICLE
GOPAL, MANGALORE.