Thursday, September 10, 2009

ಎಲ್ಲರು ಮಾಡುವುದು ಹೊಟ್ಟೆಪಾಡಿಗಾಗಿ...


ಮೊದಲೇ ಹೇಳಿಬಿಡುತ್ತೇನೆ . ಈ ವಿಷಯವನ್ನು ಹೇಳಲು ಸಂಕಟವಾಗುತ್ತದೆ . ಹೇಳದೆ ಇರೋಣವೆಂದರೆ ಮನಸ್ಸು ಒಪ್ಪುವುದಿಲ್ಲ . ಅದ್ದರಿಂದ ಇಂಥ ಒಂದು ವಿಷಯವನ್ನು ಪ್ರಸ್ತಾಪ ಮಾಡಲು ಹೊರಟಿದ್ದೇನೆ .


ಕರಾವಳಿ ಕರ್ಣಾಟಕದ ಹೆಮ್ಮೆಯ ಕಲೆ ಯಕ್ಷಗಾನವೆಂಬುದು ಸರ್ವ ವಿದಿತ . ಯಕ್ಷಗಾನವು ಆರಾಧನಾ ಕಲೆಯಾಗಿ ಆರಂಭಗೊಂಡು ಪೌರಾಣಿಕ ಪುಣ್ಯ ಕಥಾ ಭಾಗಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಮನೋರಂಜನಾ ಕಲಾ ಮಾಧ್ಯಮವಾಗಿ ಹಲವು ಶತಮಾನಗಳಿಂದ ಬೆಳೆದು ಬಂದಿದೆ. ಅನುಭವಿಗಳು ಹಿರಿಯರು ಹೇಳುವಂತೆ ಅದು ತನ್ನ ಉನ್ನತಿಕೆಯನ್ನು ಹೊಂದಿ ಇತ್ತೀಚಿಗೆ ಅವನತಿಯತ್ತ ನಿಧಾನಗತಿಯಿಂದ ಸಾಗುತ್ತಿದೆ ಎಂಬುದು ಇಂದಿನ ಹಲವು ಘಟನೆಗಳಿಂದ ಅನುಭವವೇದ್ಯವಾಗುತ್ತಿದೆ . ಯಕ್ಷಗಾನ ಕಲಾ ಪ್ರಕಾರ ಯಾವಾಗ ವಾಣಿಜ್ಯೀಕರಣ ಹೊಂದಿತೋ ಆಗಲೇ ಎಲ್ಲ ಕಲಾಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದರೂ ಕಾಲಗತಿಯಿಂದ ಮತ್ತು ಕಲಾವಿದನ ಆರ್ಥಿಕ ನೆಲೆಗಟ್ಟಿನಲ್ಲಿ ಅದಕ್ಕೆ ವ್ಯಾಪಕ ಪ್ರೋತ್ಸಾಹವೂ ದೊರೆಯಿತು .ಇದು ಒಂದು ದೃಷ್ಟಿಯಿಂದ ಕಲೆಯ ಅವನತಿಗೂ ಕಾರಣವೆಂಬುದು ನಿರ್ವಿವಾದದ ಸಂಗತಿ.

ಇತ್ತೀಚಿಗಿನ ದಿನಗಳಲ್ಲಿ ಯಕ್ಷಗಾನವು ಪ್ರದರ್ಶನದ ವಸ್ತುವಾಗುತ್ತಿರುವುದು ವಿಷಾದನೀಯ ಸಂಗತಿ . ಗಣ್ಯ ವ್ಯಕ್ತಿಗಳ ಸ್ವಾಗತಕ್ಕೆ , ರಾಜಕೀಯ ಪಕ್ಷದ ನೇತಾರರ ಹುಟ್ಟಿದ ಹಬ್ಬಗಳಿಗೆ ಶುಭ ಹಾರೈಸಲು, ಯಾವುದೊ ಸ್ವಪ್ರತಿಷ್ಠೆಯ ಮೆರವಣಿಗೆಗಳಿಗೆ, ಸಿನೆಮಾದದ ದೃಶ್ಯಗಳಲ್ಲಿ ಅಸಂಬದ್ಧ ಸನ್ನಿವೇಶದಲ್ಲಿ ಹಿನ್ನೆಲೆಯಲ್ಲಿ ಕುಣಿಯಲು ಬಳಕೆಯಾಗುತ್ತಿರುವುದು ಈ ಕಲೆಯ ಸಾಂಸ್ಕೃತಿಕ ದಿವಾಳಿತನದ ಪ್ರತೀಕವಾಗುತ್ತಿರುವುದು ಯಕ್ಷ ಪ್ರೇಮಿಗಳಿಗೆ ಸಹಿಸಲಸಾಧ್ಯವಾದ ಹಿಂಸೆಯಾಗಿ ಪರಿಣಮಿಸತೊಡಗಿದೆ .ನೀವು ಗಮನಿಸಿ ನೋಡಿದರೆ ಇಂಥ ರೋಡ್ ಷೋ ಯಾ ಇತರ ಯಕ್ಷಗಾನದ "ಅನೈತಿಕ" ಬಳಕೆಯಾಗುವಲ್ಲಿ ಯಕ್ಷಗಾನದ ವೇಷ ಭೂಷಣ ತೊಟ್ಟವರು ನಿಜವಾದ ನಟ ಸಾರ್ವಭೌಮರಾಗಿರದೆ ಬರೇ ಚಟ ಸಾರ್ವಭೌಮರಾಗಿರುವವರೆಂದು ಮೊದಲ ನೋಟದಲ್ಲೇ ತಿಳಿದುಬರುತ್ತದೆ ! ಇವರು ತಮಗೆ ಸಿಗುವ ವಿತ್ತದ ಅಸೆಯಿಂದಲೋ, ತಮ್ಮ ಚಟವನ್ನು ಪ್ರದರ್ಶನ ಮಾಡಿ ಹೆಸರುವಾಸಿಯಾಗಲೆಂದೋ? ಮನದಂದಂತೆ ಕುಣಿದು ತೀವ್ರ ಮುಜುಗರ ಉಂಟು ಮಾಡುತ್ತಾರೆ.
ಇವತ್ತಿನ ಕನ್ನಡ ದೈನಿಕವೊಂದರಲ್ಲಿ "ಕೆ. ಪಿ. ಯಲ್ . ಉದ್ಘಾಟನಾ ಸಮಾರ೦ಭದ ಸಂದರ್ಭ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರಾವಳಿ ಕರ್ಣಾಟಕದ ಹೆಮ್ಮೆಯ ಯಕ್ಷಗಾನ ವೇಷಗಳು ಮಿಂಚಿತು . ಆದರೆ ಅಲ್ಲಿ ಯಕ್ಷಗಾನ ಪದವಿರದೆ ಇನ್ನಾವುದೋ ಹಾಡಿಗೆ ವೇಷಧಾರಿಗಳು ಹೆಜ್ಜೆ ಹಾಕಬೇಕಾಗಿ ಬಂದದ್ದು ದುರಂತ " ಎಂಬ ವರದಿ ಪ್ರಕಟವಾಗಿದೆ . ಇತ್ತೀಚಿಗೆ ಸರ್ವೇ ಸಾಮಾನ್ಯವೆಂಬಂತೆ ಗೋಚರಿಸುವ ಇಂಥ ವೇಷಗಳನ್ನು ಪ್ರಜ್ಞಾವನ್ತರೆನಿಸಿದ ಕರಾವಳಿಯ ಜನರೇ ಹಾಕುತ್ತಿರುವುದಂತೂ ತೀರಾ ಶೋಚನೀಯ ಸಂಗತಿ. ಇಂಥವರನ್ನು ಕೇಳ ಹೊರಟರೆ ಸಿಗುವ ಸಿದ್ಧ ಉತ್ತರ "ನಮ್ಮ ಕಲೆಯನ್ನು ಎಲ್ಲರಿಗೂ ಪರಿಚಯಿಸುತ್ತಿದ್ದೇವೆ ; ಅದು ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯಬೇಕೆ೦ಬುದೇ ನಮ್ಮ ಆಶಯ " ಇತ್ಯಾದಿ . ನೀವೇನಾದರೂ ಸ್ವರ ಏರಿಸಿ ಮಾತಾಡಿದರೆ ಸಿಗುವ ಉತ್ತರ " ಏನು ಮಾಡುವುದು ಸ್ವಾಮೀ ಎಲ್ಲ ಹೊಟ್ಟೆ ಪಾಡು " !!! ( ಆಗ ಪಾಪ ಬಡಪಾಯಿ ಹೋಗಲಿ ಬಿಡಿ ಎಂಬ ಕನಿಕರ ನಿಮಗೆ ಸಹಜವಾಗಿಯೇ ಮೂಡುವಂತೆ ಅವರು ಮಾಡುತ್ತಾರೆ ಬಿಡಿ !! )
ಏನಿದ್ದರೂ ಯಕ್ಷಗಾನವನ್ನು ಸಿನೆಮಾಗಳಲ್ಲಾಗಲೀ , ಅಂತರರಾಷ್ಟ್ರೀಯ ವೇದಿಕೆಗಳಲ್ಲಾಗಲೀ "ಯಕ್ಷಗಾನವನ್ನಾಗಿಯೇ " ಪ್ರದರ್ಶಿಸುವ ಬಗ್ಗೆ ನಮ್ಮ ವಿರೋಧವಾಗಲೀ ಆಕ್ಷೇಪವಾಗಲೀ ಇಲ್ಲ . ಅದನ್ನು ವಿಕಾರಗೊಳಿಸಿ , ಮನಬಂದಂತೆ ಸಿಕ್ಕ ಸಿಕ್ಕ ಸ್ಥಳಗಳಲ್ಲಿ , ಅದನ್ನು ದುರುಪಯೋಗ ಪಡಿಸಿ ಕೇವಲ ಹೊಟ್ಟೆಪಾಡು ಎಂಬಂತೆ ಬಿಂಬಿಸುವ ಬಗ್ಗೆ ನಮ್ಮ ತೀವ್ರ ವಿರೋಧವಿದೆ.

ಇಂಥ ವಿಚಾರಗಳನ್ನು ಯಕ್ಷಗಾನ ಆಸಕ್ತರು , ಸಮ್ಮೇಳನಗಳಲ್ಲಿ ಹಾಗೂ ತತ್ಸಂಬಂಧೀ ವಿಚಾರ ಸಂಕಿರಣಗಳಲ್ಲಿ ಗಮನ ಹರಿಸಿ ಸಾರ್ವಜನಿಕ ಅರಿವು ಮೂಡಿಸಬೇಕಾದ ಅನಿವಾರ್ಯತೆ ಈಗಿನ ಕಾಲಘಟ್ಟದಲ್ಲಿದೆ . ಇದನ್ನು ಹೇಗೆ ಸಾಧಿಸಬಹುದು ? ನಿಮ್ಮ ಅಭಿಪ್ರಾಯಗಳೇನು? ಪುನಃ ಹೇಳುತ್ತಿದ್ದೇನೆ ಈ ವಿಷಯವನ್ನು ಹೇಳಲು ಸಂಕಟವಾಗುತ್ತದೆ . ಹೇಳದೆ ಇರೋಣವೆಂದರೆ ಮನಸ್ಸು ಒಪ್ಪುವುದಿಲ್ಲ .!

5 comments:

ಸಿ ಮರಿಜೋಸೆಫ್ said...

ಯಕ್ಷಗಾನವೆಂಬ ಕಲಾ ಪ್ರಕಾರದ ಪಾವಿತ್ರ‍್ಯವನ್ನು ಕಾಯ್ದುಕೊಳ್ಳಬೇಕೆನ್ನುವ ನಿಮ್ಮ ಕಳಕಳಿ ನನಗೆ ಅರ್ಥವಾಗುತ್ತದೆ. ಆದರೆ ಬ್ಲಾಗಿನಲ್ಲಿ ವ್ಯಕ್ತಗೊಳ್ಳುವ ನಿಮ್ಮ ಈ ಅನಿಸಿಕೆ ತಲುಪಬೇಕಾದವರಿಗೆ ತಲುಪದೆ ಒಂದು ರೀತಿಯಲ್ಲಿ ಅರಣ್ಯರೋದನವಾಗುತ್ತಿದೆಯೆಂಬ ವಿಷಾದಭಾವವೂ ನನಗಾಗುತ್ತಿದೆ. ಇರಲಿ ಒಂದಲ್ಲ ಒಂದು ದಿನ ಇದು ಕಂಡಿತ ಕೆಲವರನ್ನಾದರೂ ಚಿಂತನೆಗೆ ಹಚ್ಚಬಹುದೆಂದು ಆಶಿಸುತ್ತೇನೆ.

ಚೆ೦ಬಾರ್ಪು said...

its really sad that people are misusing name and fame of yakshagana in various platforms.. i have seen one guy dancing with yakshagana costumes in a hindi dancing reality show and judge telling him yakshagana has incomplete dancing format..

RAJ said...

ಯಕ್ಷಗಾನದ ಬಗ್ಗೆ ಅಲ್ಪ ಮಾತ್ರವಾದರೂ ಅಭಿಮಾನ ಇದ್ದವರು ಈ ರೀತಿ ಅವಮಾನಕರವಾಗಿ ಕುಣಿಯಲಾರರು. ಹೊಟ್ಟೆ ಪಾಡಿಗೆ ಇವರಿಗೆ ಇದೆ ಉದ್ಯೋಗವಾಗಬೇಕೆ . ತೀರಾ ನಿರ್ಲಜ್ಜರು ಇವರು. ಯಾವುದಕ್ಕೆ ಎಲ್ಲಿ ಸ್ಥಾನ ಎಂದು ತಿಳಿಯದ ಇವರಿಗೆ ಪ್ರಜ್ಞೆ ಯಾವಾಗ ಬರುವುದೋ. ?

chirantana said...

it is really unfortunate. i too saw in several occasions people misuse such a great art. this is there in all type of art i guess.Even i saw group of people making shooting of Kathak for their brand advertisement.
such things really hurts those really like any art.

Ultrafast laser said...

Why would you worry about those?, rather worry about the so-called yakshagana artists who have been involved in making ridiculously strange experiments in yakshagana and incorporating them in various prasangas. -D.M.Sagar