Tuesday, February 17, 2009

ಹೀಗೊಂದು ಲಕ್ಷ್ಮೀ ಸ್ವಯಂವರ......


ಶ್ರೀಯುತ ನಿಡ್ಲೆ ಗೋವಿಂದ ಭಟ್ ಸಾರಥ್ಯದ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ,ನಿಡ್ಲೆ ಧರ್ಮಸ್ಥಳವು ಕಳೆದ ೨೫ ವರ್ಷಗಳಿಂದ ನಾನಾ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡಿ ಯಕ್ಷ ರಸಿಕರ ಮನ ತಣಿಸುವಲ್ಲಿ ಯಶಸ್ವಿಯಾಗಿದೆ. ಹಲವು ಏಳುಬೀಳುಗಳನ್ನು ಕಂಡ ಶ್ರೀಯುತ ನಿಡ್ಲೆ ಗೋವಿಂದ ಭಟ್ಟರು ಈ ಸಂಚಾರಿ ಮೇಳವನ್ನು ಕರ್ನಾಟಕದ ವಿವಿಧ ಭಾಗಗಳಲ್ಲದೆ ಮುಂಬೈ ,ಹೈದರಾಬಾದ್, ತಮಿಳುನಾಡು , ವಿಶಾಖಪಟ್ಟಣ ,ಮುಂತಾದ ದೂರದ ಊರುಗಳಲ್ಲೂ ತೆಂಕು ತಿಟ್ಟು ಯಕ್ಷಗಾನದ ಕಂಪನ್ನು ಪಸರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ .
ತಾವು ಮಾಡುವ ಎಲ್ಲ ಪಾತ್ರಕ್ಕೂ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ನ್ಯಾಯವನ್ನು ಒದಗಿಸುವ ಅನುಭವಿ ಕಲಾವಿದರಾದ ನಿಡ್ಲೆ ಗೋವಿಂದ ಭಟ್ಟರು, ಇತ್ತೀಚೆಗೆ ಒಂದು ಹೊಸ ಪ್ರಯೋಗವನ್ನು ಮಾಡಿ ಯಕ್ಷ ರಸಿಕರ ಮುಂದೆ ಸಮರ್ಪಿಸಿದ್ದಾರೆ. ಯಕ್ಷಗಾನ "ಸಮುದ್ರ ಮಥನ " ಪ್ರಸಂಗದಲ್ಲಿ ಬರುವ "ಲಕ್ಷ್ಮೀ ಸ್ವಯಂವರ" ಪ್ರಸಂಗವನ್ನು ಹೊರಾಂಗಣ ಚಿತ್ರೀಕರಣ ಮಾಡುವ ಮುಖೇನ ಹೊಸದೊಂದು ಪ್ರಯೋಗವನ್ನು ನಡೆಸಿದ್ದಾರೆ .


ಎಂಭತ್ತರ ದಶಕದಲ್ಲೇ ಹಗಲು ಯಕ್ಷಗಾನ ಕಾರ್ಯಕ್ರಮಗಳು ಆರಂಭವಾದಾಗ ಯಕ್ಷಪ್ರಿಯರ ಟೀಕೆಗೆ ಗುರಿಯಾಗಿದ್ದ ಇಂಥ ಪ್ರದರ್ಶನಗಳು ಇತ್ತೀಚಿಗೆ ಪ್ರೇಕ್ಷಕರಿಗಾಗಿ ,ಸಮಯಾನುಕೂಲಕ್ಕಾಗಿ ಅಥವಾ ಇನ್ನಿತರೆ ಕಾರಣಗಳಿಂದ ಹಗಲು ಯಕ್ಷಗಾನ ಕ್ರಮೇಣ ಪ್ರೇಕ್ಷಕರಿಂದ ಸ್ವೀಕರಿಸಲ್ಪಟ್ಟು ಪ್ರದರ್ಶನವಾಗುತ್ತಿವೆ.

ಈಗಿನ ದಿನಗಳಲ್ಲಿ ಸಿ.ಡಿ.ಗಳ ಭರಾಟೆಯಲ್ಲಿ ಹಲವಾರು ಸಿ.ಡಿ.ಗಳು ಮಂಗಳೂರಿನ ಕ್ಯಾಡ್ ಮೀಡಿಯಾದ೦ಥ ಸ್ಟುಡಿಯೊಗಳಲ್ಲಿ ಚಿತ್ರೀಕರಣಗೊಂದು ಮಾರುಕಟ್ಟೆಯಲ್ಲಿ ಲಭ್ಯವಿದೆ . ಇವುಗಳನ್ನು ನೋಡುವಾಗ ready to eat ಆಹಾರ ವಸ್ತುಗಳಂತೆ ಅನಿಸಿದರೂ ದೂರದ ಊರುಗಳಲ್ಲಿ ನೆಲೆಸಿರುವವರಿಗೆ ಒಮ್ಮೆಗೆ ಯಕ್ಷಗಾನ ನೋಡಬೇಕೆಂಬ ಸೆಳೆತವನ್ನು ತಣಿಸುವಲ್ಲಿ ಉಪಕಾರಿಗಳಾಗುತ್ತವೆ.


ಇವೆಲ್ಲದಕ್ಕಿಂತ ಭಿನ್ನವಾಗಿ ನಿಡ್ಲೆ ಗೋವಿಂದ ಭಟ್ಟರು ಲಕ್ಷ್ಮೀ ಸ್ವಯಂವರ ಪ್ರಸಂಗವನ್ನು ಹೊರಾಂಗಣದಲ್ಲಿ ಸ್ವಾಭಾವಿಕ ಬೆಳಕಿನಲ್ಲಿ ಪ್ರದರ್ಶಿಸಿ ,ಅದನ್ನು ದಾಖಲಿಸಿ ಯಕ್ಷಪ್ರಿಯರಿಗಾಗಿ ಮಾರುಕಟ್ಟೆಗೆ ತಲುಪಿಸಿದ್ದಾರೆ. ಸಮುದ್ರ ಮಥನಕ್ಕೆ ರಾಕ್ಷಸರೂ ದೇವತೆಗಳೂ ಒಂದಾಗಿ ಮಂದರಾದ್ರಿಯನ್ನು ಕಡೆಗೋಲಾಗಿಸಿ ವಾಸುಕಿಯನ್ನು ಹಗ್ಗವಾಗಿ ತರುವ ಸನ್ನಿವೇಶ ನಿಜಕ್ಕೂ ಅದ್ಭುತವಾಗಿದೆhttp://www.youtube.com/watch?v=Uwu6uEsIzRs&feature=channel ಒಮ್ಮೆ ಇದನ್ನು ನೋಡಿದಾಗ ಉಳಿದ ಚಿತ್ರೀಕರಿಸಲ್ಪಟ್ಟ ಯಕ್ಷಗಾನಗಳಿಗಿಂತ ಬೇರೆ ಅನುಭವವನ್ನು ಕೊಡುವಲ್ಲಿ ಯಶಸ್ವಿಯಾಗಿದೆ.
ಏನಿದ್ದರೂ ಇನ್ನು ಮುಂದೆ "ಯಕ್ಷರಾತ್ರಿಗಳನ್ನು " ನಡುಗಿಸಿದ ಕಲಾವಿದರು "ಯಕ್ಷಹಗಲಿನಲ್ಲಿ" ಮೆರೆಯುತ್ತಿದ್ದಾರೆ ! ಎಂಬ ಹೊಸ ವಿಶೇಷಣವನ್ನು ಸೃಷ್ಟಿಸಿದ್ದಂತೂ ನಿಜ.
ನಿಮಗೋಸ್ಕರ ಕೆಲವು ತುಣುಕುಗಳು ಕೆಳಗಿನ ಕೊಂಡಿಯಲ್ಲಿ ಲಭ್ಯವಿದೆ . ನೋಡಿ ನಿಮ್ಮ ಅನಿಸಿಕೆ ತಿಳಿಸಿ .




2 comments:

murali said...

i feel this 'outdoor shooting'or 'daylight yakshagana' has failed to create the effect of 'yakshagana'. When performed in the dark, only the stage lit, it creates a different effect, taking audience to a different world. This daylight show does not seem interesting to me and it looks childish to some extent..

YAKSHA CHINTANA said...

ಪ್ರಯೋಗ ಮೆಚ್ಚತಕ್ಕದೆ ಅದರೂ ಹಗಲಲ್ಲಿ ನಿಜವಾದ ಯಕ್ಷಗಾನದ ಪ್ರಭಾವ ಉಂಟು ಮಾಡುವಲ್ಲಿ ಸೋತಿದೆ. ಸೂರ್ಯನ ಬೆಳಕಿಗೆ ಬಣ್ಣಗಾರಿಕೆ ಹೊಂದಿಕೊಳ್ಳುವುದು ಮತ್ತು ರಂಗಸ್ಥಳದ ಸುತ್ತ ಮುತ್ತ ಕೂಡ ಗೋಚರವಾಗುವುದು ಇದೆಲ್ಲ ಯಕ್ಷಗಾನದ ನಿಜ ಅಸ್ವಾದನೆಗೆ ಕಿರಿ ಉಂಟು ಮಾಡುತ್ತದೆ. ಇದನ್ನೇ ರಾತ್ರಿ ಅಥ ಮುಸ್ಸಂಜೆ ಹೊತ್ತಿನಲ್ಲಿ ಹೊರಾಂಗಣ ದೃಶ್ಯಗಳು ಅಲ್ಪ ಸ್ವಲ್ಪ ಗೋಚರ ಆಗುವಂತೆ ಚಿತ್ರೀಕರಿಸಿ ನೋಡಬಹುದಿತ್ತು.