Friday, May 27, 2011

ಕಟೀಲು ಅಮ್ಮನೂ ಬಷೀರ್ ಸಾಹೇಬರೂ .....


ಮೊನ್ನೆ ಉದಯವಾಣಿಯ
ಹನ್ನೊಂದನೇ ಪುಟ  ನೋಡಿದಾಗ ಒಂದು ಕೌತುಕವಿತ್ತು. ಯಕ್ಷಗಾನ ಕಾಲಮ್ಮಿನ ಕಟೀಲು ಮೇಳದ ಆಟ ಎಲ್ಲಿ ನಡೆಯುತ್ತದೆ ಎಂಬ ಪಟ್ಟಿಯಲ್ಲಿ ಐದನೇ ಮೇಳದ ಆ ದಿನದ ಕ್ಯಾಂಪ್  ಬಷೀರ್ ಸಾಹೇಬ್ , ಸುಡುಮದ್ದು ವ್ಯಾಪಾರಸ್ಥರು , ಬಜಪೆ ಮುರನಗರದಲ್ಲಿ ಎಂದು ನಮೂದಿಸಿತ್ತು .ಅದನ್ನು  ನೋಡಿದಾಗ ನನಗೆ ಸಹಜವಾಗಿ ಕುತೂಹಲ. ಕಳೆದ ವರ್ಷ ಕ್ರೈಸ್ತ ಬಾಂಧವರೊಬ್ಬರು ಕಟೀಲು ಮೇಳದ ಸೇವೆ ಆಟ ಆಡಿಸಿದ ಬಗ್ಗೆ ಬರೆದಿದ್ದೆ .                                                                                                              
      ಈ ಸಲ ಮುಸ್ಲಿಂ ಸಮುದಾಯಕ್ಕೆ ಸೇರಿದ ಗೃಹಸ್ಥರೊಬ್ಬರು ಕಟೀಲು ತಾಯಿಯ ಸೇವಾರೂಪದ ಶ್ರೀದೇವಿ ಮಹಾತ್ಮೆ ಆಟ ಆಡಿಸಿದ್ದು ನೋಡಿದಾಗ ಪಕ್ಕನೆ ನೆನಪಾದ್ದು "ಗೋಕುಲಾಷ್ಟಮಿಗೂ ಇಮಾಂ ಸಾಬಿಗೂ ಏನು ಸಂಬಂಧ " ಎಂದು ಓದಿದ ಗಾದೆ ಮಾತು. ಇಲ್ಲಿ ಗಾದೆ ಮಾತಿನಲ್ಲಿ ಸಂಬಂಧಗಳು ಇಲ್ಲದೆ ಇರಬಹುದು ಆದರೆ ಮಹಾಮಾತೆ ಕಟೀಲು ತಾಯಿಗೆ ಎಲ್ಲರೂ ಮಕ್ಕಳೇ ಅಲ್ಲವೇ ? ಗಾದೆಗಿಂತ ಮೀರಿದ ಭಾವನಾತ್ಮಕ ಸಂಬಂಧ ಅಲ್ಲಿತ್ತು.

ಶ್ರೀಮಾನ್ ಬಷೀರ್ ಸಾಹೇಬರು ಮಂಗಳೂರು ಸುತ್ತ ಮುತ್ತ ನಡೆಯುವ ಕಟೀಲು ಮೇಳದ ಆಟಗಳಿಗೆ ಸುಡುಮದ್ದು ಪೂರೈಕೆ ಮಾಡುವವರು . ಬಜಪೆ ಪರಿಸರದಲ್ಲಿ ಬಹಳಷ್ಟು ಜನ ಯಕ್ಷಗಾನದ ಅಭಿಮಾನಿಗಳು ಇದ್ದಾರೆ . ಕಟೀಲು ಮೇಳದ ಹೆಚ್ಚಿನ ಆಟಗಳು ಮಂಗಳೂರಿನ ಸುತ್ತ ಮುತ್ತಲಿನ ಪರಿಸರದಲ್ಲಿ ನಡೆಯುತ್ತಿದ್ದು ಹೆಚ್ಚಿನ ಆಟಗಳಿಗೆ ಬಷೀರ್ ಸಾಹೇಬರದ್ದೆ ಸುಡುಮದ್ದು. ಹಲವು ವರ್ಷಗಳಿಂದ ಕಟೀಲು ತಾಯಿಗೆ ಸುಡುಮದ್ದು ಸೇವೆ ಸಲ್ಲಿಸಿದ ಇವರು ಅವಕಾಶವಾದಾಗಲೆಲ್ಲ ಕಟೀಲು ಮೇಳದ ಆಟ ಆಡಿಸುತ್ತಾರೆಂದು ಮೇಳದ  ಕಲಾವಿದರೊಬ್ಬರು  ಹೇಳಿದರು.

ನಮಗೆಲ್ಲ ತಿಳಿದಂತೆ ಬಹಳ ಹಿಂದೆ ಬಪ್ಪನಾಡು ಕ್ಷೇತ್ರದಲ್ಲಿ ಅಮ್ಮನವರ ಗುಡಿಯನ್ನು ಬಪ್ಪ ಬ್ಯಾರಿ ಕಟ್ಟಿಸಿದನೆಂದು ಪ್ರಸಿದ್ದಿ.  ಈಗಿನ ಕಾಲದಲ್ಲೋ ಹೆಚ್ಚಿನ ಕಡೆ ಕ್ಷುಲ್ಲಕ ಕಾರಣಗಳಿಗೆ   ಕೋಮು ಗಲಭೆಗಳು  ನಡೆಯುವುದನ್ನು ಕಾಣುತ್ತೇವೆ. ಪತ್ರಿಕಾ ಮಾಧ್ಯಮದವರು ಹಿಂದೂ ಮುಸ್ಲಿಂ ಗಲಭೆ ಎಂದು ಬರೆಯುವ ಧೈರ್ಯವಿಲ್ಲದೆ "ಒಂದು ಕೋಮಿನ ಜನರು ಇನ್ನೊಂದು ಕೋಮಿನ ಜನರ ಮೇಲೆ ಹಲ್ಲೆ ನಡೆಸಿದ್ದರಿಂದ" ಎಂದು ಬರೆದು ತಾವು ಸಾಚಾ ಯಾರ ಪರವೂ ಅಲ್ಲ ! ಎಂದು ಸಾಬೀತು ಮಾಡಲು ಹೊರಟರೆ ,   ಟಿ.ವಿ. ಮಾಧ್ಯಮಗಳಂತೂ ಇದರ ಬಗ್ಗೆ ವರದಿ ಮಾಡಲು ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. "ಮಂಗಳೂರಿನಲ್ಲಿ ಕೋಮು ಗಲಭೆ" , "ಚರ್ಚ್ ಮೇಲೆ ಧಾಳಿ ... " ಇತ್ಯಾದಿಯಾಗಿ ಹಸಿ ಬಿಸಿಯಾಗಿ ವರದಿ ಮಾಡುವ ಇವರಿಗೆ  ಬಷೀರ್ ಸಾಹೇಬರಂಥವರು ಕಣ್ಣಿಗೆ ಬೀಳುವುದೇ ಇಲ್ಲ !

ಇವರೆಲ್ಲರಿಗೆ ಸಮಾಜದಲ್ಲಿ ಹಿತವಾಗಿ ಬದುಕುವುದು ಬೇಡ ! ಒಂದು ವೇಳೆ ಬದುಕಿದರೆ ತಮ್ಮ ಚಾನೆಲ್ ನೋಡುವವರಿಲ್ಲವಲ್ಲ ? ಎಂಬ ಭೀತಿ...!

ಒಳ್ಳೆಯ ವಿಚಾರಗಳು ನಡೆಯುವಾಗ ಅದರ ಬಗ್ಗೆ ಕನಿಷ್ಠ ಆಸಕ್ತಿಯನ್ನು ತಳೆಯದ ಜನ ಉತ್ತಮ ಸಮಾಜವನ್ನು ಹೇಗೆ ನಿರ್ಮಿಸಿಯಾರು ? ಸಮಾಜದ ಸ್ವಾಸ್ಥ್ಯದ ಸಮತೋಲನ ಹೇಗೆ ಕಾಪಾಡಿಯಾರು? ಅಷ್ಟಕ್ಕೂ ಸುದ್ದಿ ಮಾಧ್ಯಮದ ಪ್ರಾಥಮಿಕ  ಉದ್ದೇಶಗಳಲ್ಲಿ    ಸಾರ್ವಜನಿಕ ಸ್ವಾಸ್ಥ್ಯ ನಿರ್ವಹಣೆಯೂ ಒಂದು  ಅಲ್ಲವೇ?
ಯೋಚಿಸಿ...

Saturday, January 22, 2011

ಮತ್ತೊಂದು ಶ್ಲೋಕ


ಕಳೆದ ಬಾರಿ ಹರಿ-ಹರರನ್ನು ಒಂದೇ ಶ್ಲೋಕದಲ್ಲಿ ಸ್ತುತಿಸಿದ ಚಮತ್ಕಾರಿಕ ಶ್ಲೋಕದಂತೆ ಈ ಬಾರಿ ತ್ರಿಮೂರ್ತಿಗಳನ್ನು ಒಂದೇ ಶ್ಲೋಕದಲ್ಲಿ ಸ್ತುತಿಸುವ ಬಗೆ ಕೆಳಗಿನಂತಿದೆ


ವೃಹಂಗವಾಹನಂ ಚೈವ ತ್ರಿಕಚಾ ರಸವೈಪುರಿ |
ಪಾಶಾಲ ವಿನಾಕಾ ಪುತ್ರಾ ಪಬ್ರಕೇಶೋ ಪಾಹಿಮಾಂ ||



ವೃಷಭ , ಹಂಸ ಗರುಡ ವಾಹನದವರು , ತ್ರಿಶೂಲ ಕಮಂಡಲ ಚಕ್ರ ಆಯುಧಧಾರಿಗಳೂ , ರಜತಾದ್ರಿ , ಸತ್ಯಲೋಕ ,ವೈಕುಂಠ ಪುರವಾಸಿಗಳೂ, ಪಾರ್ವತಿ ,ಶಾರದಾ , ಲಕ್ಷ್ಮಿ ಪತಿಗಳು , ವಿಘ್ನೇಶ್ವರ , ನಾರದ , ಕಾಮಚಕ್ರೇಶ್ವರರೆಂಬ ಪುತ್ರರನ್ನು ಪಡೆದವರಾದ ಪರಮೇಶ್ವರ , ಬ್ರಹ್ಮ, ಕೇಶವರು ನಮ್ಮನ್ನು ರಕ್ಷಿಸಲಿ .

ಕವಿಯ ಜಾಣ್ಮೆ ಮೆಚ್ಚಬೇಕಾದ್ದಲ್ಲವೇ ?

Thursday, November 11, 2010

ಅಪೂರ್ವ ಪ್ರಸಂಗಕರ್ತ ಕೀರ್ತಿಶೇಷ ಹಲಸಿನಹಳ್ಳಿ ಶ್ರೀನರಸಿಂಹ ಶಾಸ್ತ್ರಿ..

ಪರಮ ಋಷಿ ಮಂಡಲದ ಮಧ್ಯದಿ  ಮೆರೆವ ಯಜ್ಞೇಶ್ವರನ ಪ್ರಭೆಯಲಿ |
ಮೆರೆವ ಜಟಾಮಂಡಲದಿ ಶೋಭಿಪ ಭಾರ್ಗವೇಶ್ವರನ | ಪರಕಿಸುತಲಭಿನಮಿಸಿ ಭೀಷ್ಮನು 
ಚರಣ ಪ್ರಕ್ಷಾಳನವ ಗೈಯ್ಯುತ  ಶಿರದಿ ತೀರ್ಥವ ಧರಿಸಿ |  ಮಧುಪರ್ಕಾದಿಗಳನಿತ್ತು  
ಕರ ಪಿಡಿದು ವರರತುನಮಯ ಪೀಠದಿ ಕುಳ್ಳಿರಿಸಲು | ಗುರು ನಮೋ ಎಂದೆನುತ ಶಿರವ  ಬಾಗುತ ದೈನ್ಯದಿ ನಿಂತಿರಲು ||

ಭೀಷ್ಮ ವಿಜಯ ಪ್ರಸಂಗದಲ್ಲಿ ಭೀಷ್ಮನು ತನ್ನ ಗುರುಗಳಾದ ಪರಶುರಾಮರನ್ನು ಕುರುಕ್ಷೇತ್ರದಲ್ಲಿ ಇದಿರ್ಗೊಳ್ಳುವ ಸನ್ನಿವೇಶದ  ಈ ಪದ್ಯ ಉಭಯ ತಿಟ್ಟುಗಳಲ್ಲೂ ಪ್ರಸಿದ್ಧ . ಯಕ್ಷಗಾನ ಕಲಾಸಕ್ತರೆಲ್ಲರೂ ಸವಿದಷ್ಟು ಅದರ ರುಚಿ ಹೆಚ್ಚುತ್ತಲೇ ಹೋಗುವ ಈ ಪದ್ಯವನ್ನು ಬರೆದವರಾರಿರಬಹುದು ? ಯಾವಾಗ ಬರೆದಿರಬಹುದು ? ಎಂದು ಯಾರೊಬ್ಬರೂ ಯೋಚಿಸಲು ಹೋಗುವುದಿಲ್ಲ ! ಒಂದು ಶತಮಾನದ ಹಿಂದೆ ರಚಿತವಾದ ಈ ಪ್ರಸಂಗ ಇಂದಿಗೂ ರಂಗದಲ್ಲಿ ಯಶಸ್ವೀ ಪ್ರಯೋಗವನ್ನು ಕಾಣುತ್ತಿದೆ ಎಂದರೆ ಅಚ್ಚರಿಯಾಗುತ್ತಿದೆಯೇ ?

ಈ ಪ್ರಸಿದ್ಧ ಪ್ರಸಂಗವನ್ನು ರಚಿಸಿದವರೇ  ಕೀರ್ತಿಶೇಷ ಹಲಸಿನಹಳ್ಳಿ ಶ್ರೀ ನರಸಿಂಹ ಶಾಸ್ತ್ರಿಗಳು . ಅವರ ಕುರಿತು ವಿಶೇಷವಾದ ಅಧ್ಯಯನಗಳು ನಡೆದಂತೆ ಕಂಡು ಬರುವುದಿಲ್ಲ .ಅವರ ಪ್ರತಿಯೊಂದು ಪ್ರಸಂಗ ಕೃತಿಯ ಕೊನೆಯಲ್ಲಿ ತನ್ನ ಕುರಿತು ಹಾಗೂ ಕೃತಿ ಕೊನೆಗೊಂಡ ಸಂವತ್ಸರ , ಮಾಸ, ಪಕ್ಷ , ತಿಥಿ , ವಾರಗಳನ್ನು ಹೇಳಿಕೊಂಡಿದ್ದು ವಿಷಯ ಸಂಗ್ರಹಕ್ಕೆ ಆಕರವಾಗಿದೆ.

ಸಾರ್ವಕಾಲಿಕ ಸುಂದರ ಪದ್ಯಗಳು ಅವರ ಪ್ರಸಂಗದ ವೈಶಿಷ್ಟ್ಯ . ಪ್ರಸಂಗ ರಚಿಸಿ ಶತಮಾನವೇ ಕಳೆದರೂ ಇಂದಿಗೂ ಅವರ ಪ್ರಸಂಗಗಳು ಜೀವಂತವಾಗಿ ರಂಗ ಪ್ರಯೋಗದಲ್ಲಿದೆ .ಹಲಸಿನಹಳ್ಳಿಯವರು ಪ್ರತಿವರ್ಷ ಬೇರೆ ಬೇರೆ ಮೇಳದವರನ್ನು  ಕರೆಸಿ ತಮ್ಮ ಮನೆಯ ಮುಂದೆ ಬಯಲಾಟಗಳನ್ನು ಆಡಿಸುತ್ತಿದ್ದರಂತೆ .

ಹಲಸಿನಹಳ್ಳಿ ಶ್ರೀಯುತ ನರಸಿಂಹ ಶಾಸ್ತ್ರಿಗಳು  ತೀರ್ಥಹಳ್ಳಿ ಪರಿಸರದ ತುಂಗಾನದೀ ತೀರದ ಹಲಸಿನಹಳ್ಳಿಯವರು .ಅವರು ಅದನ್ನು ಪನಸಪುರವೆಂದು ಹೆಸರಿಸಿದ್ದಾರೆ .ಅವರ ತಂದೆಯವರ ಹೆಸರು ನಾಗೇಂದ್ರ ಶಾಸ್ತ್ರಿ (ಉರಗೇ೦ದ್ರ  ಶಾಸ್ತ್ರಿ ಎಂದು ಪದ್ಯದಲ್ಲಿ ಉಲ್ಲೇಖಿಸಿರುತ್ತಾರೆ ). ಶ್ರೀಯುತ ನರಸಿಂಹ ಶಾಸ್ತ್ರಿಗಳು ಸಂಸ್ಕೃತ  ಮತ್ತು ಕನ್ನಡ ಉಭಯ ಭಾಷಾ ವಿದ್ವಾಂಸರಾಗಿದ್ದು ಆಳವಾದ ಅಧ್ಯಯನ ಸಂಪನ್ನರೂ ಪೌರಾಣಿಕ ಜ್ಞಾನಿಗಳೂ ಆಗಿದ್ದರು .


ಸರಿಸುಮಾರು ೧೮೯೮ ರಿಂದ ೧೯೧೬ ರ ತನಕ ಅವರು ಕೃತಿ ರಚನೆ ಮಾಡಿರುತ್ತಾರೆ . ಕೆಲವು ಪ್ರಸಂಗಗಳಲ್ಲಿ ಅದು ಎಷ್ಟನೆ ಕೃತಿಯೆಂದು ಕೂಡ ಸೂಚಿಸಿರುತ್ತಾರೆ .ಅವರ ೧೩ನೆ ಕೃತಿ ರುಕ್ಮಾಂಗದ ಚರಿತ್ರೆ ಯು ಅವರು ವಿಧಿವಶರಾದ ಮೇಲೆ ೧೯೫೦ ರಲ್ಲಿ    ಶೀಗೆಹಳ್ಳಿ ಪರಮಾನ೦ದ ಮಠದ ಶ್ರೀ ಅತ್ಮಾರಾಮರೆಂಬ ಮಹಾನೀಯರಿಂದ ಶಿರಸಿಯಲ್ಲಿ ಪ್ರಕಟವಾಯಿತು.ಇವರ ಹೆಚ್ಚಿನ ಕೃತಿಗಳು ೧೯೩೧ ರಲ್ಲಿ ತೀರ್ಥ ಹಳ್ಳಿಯ ರಾಧಾಕೃಷ್ಣ ಮುದ್ರಣಾಲಯದಲ್ಲಿ ಅಚ್ಚಾಗಿ ಬೆಳಕು ಕಂಡಿವೆ. ಇವುಗಳನ್ನೆಲ್ಲ ಖ್ಯಾತ ಕನ್ನಡ ಪಂಡಿತರಾಗಿದ್ದ ಕಮೆಗೋಡು  ನರಸಿಂಹ ಶಾಸ್ತ್ರಿಗಳು ಪರಿಶೀಲಿಸಿದ್ದರೆಂದು ಮುದ್ರಿತ ಪ್ರತಿಗಳ ಮುಖ ಪುಟದಲ್ಲಿ ನಮೂದಿಸಲ್ಪಟ್ಟಿದೆ . ಅವರ ಕೃತಿಯ ಆರಂಭದಲ್ಲಿ ದುರ್ಗೆಯನ್ನು ಸ್ತುತಿಸುವ ಪದವನ್ನು ಕಾಣುತ್ತೇವೆ .ಆಗುಂಬೆಯ ವೇಣುಗೋಪಾಲ , ಕಮ್ಮರಡಿಯ ಗಣಪತಿ , ತೀರ್ಥರಾಜಪುರದ ದುರ್ಗಾಮ್ಬೆ ,ಶೃಂಗೇರಿಯ ಶಾರದಾಂಬೆಯ ಸ್ತುತಿಗಳೂ ಕೃತಿಗಳಲ್ಲಿ ಕಾಣಸಿಗುತ್ತವೆ .

ಹಲಸಿನಹಳ್ಳಿ ಶ್ರೀಯುತ ನರಸಿಂಹ ಶಾಸ್ತ್ರಿಗಳು ಶಶಿಕಲಾ ಸ್ವಯಂವರ (೧೮೯೯), ವಿಧ್ಯುನ್ಮತಿ ಕಲ್ಯಾಣ (೧೯೦೧) ,ಕೌಶಿಕ ಚರಿತ್ರೆ (೧೯೦೧), ರುಗ್ಮವತಿ ಕಲ್ಯಾಣ (೧೯೦೨), ಚಂದ್ರಹಾಸ ಚರಿತ್ರೆ (೧೯೦೪),ಭೀಷ್ಮೋತ್ಪತ್ತಿ(೧೯೦೪), ಭೀಷ್ಮ ವಿಜಯ (೧೯೦೫), ಕುಮುದ್ವತೀ ಕಲ್ಯಾಣ (೧೯೦೬), ಭೀಷ್ಮಾರ್ಜುನರ ಕಾಳಗ (೧೯೦೯), ವಾಮನ ಚರಿತ್ರೆ (೧೯೧೦), ರುಕ್ಮಾಂಗದ ಚರಿತ್ರೆ (೧೯೧೧) ದೇವಯಾನಿ ಕಲ್ಯಾಣ (೧೯೧೩) ಶ್ರೀಕೃಷ್ಣ ವಿವಾಹ (೧೯೧೪) ,ಪುಂಡರೀಕ ಚರಿತ್ರೆ (೧೯೧೬), ಶಲ್ಯ ಪರ್ವ (೧೯೧೬) ವೀರಮಣಿ ಕಾಳಗ (೧೯೧೬) ರಚಿಸಿದ್ದು ಇವೆಲ್ಲವೂ ಪ್ರಕಟವಾಗಿದೆ. ಇದಲ್ಲದೆ ನವನಂದನರ ಕಾಳಗ ,ಹಂಸಡಿಬಿಕರ ಕಾಳಗ , ಶಿಶುಪಾಲನ ಕಾಳಗ , ನರಸಿಂಹಾವತಾರ  ಪ್ರಸಂಗಗಳನ್ನು ರಚಿಸಿದ್ದು ಅವುಗಳು ಪ್ರಕಟವಾಗಿಲ್ಲ .ಇವರ ಎಲ್ಲ ರಚನೆಗಳೂ ಸ್ವತಂತ್ರ ರಚನೆಗಳಾಗಿದ್ದು ಪ್ರದರ್ಶನಕ್ಕೆ ಅನುಕೂಲವಾಗುವ ದೃಶ್ಯ ವಿನ್ಯಾಸ, ಚರ್ಚೆಗೆ ಆಸ್ಪದವಿರುವ  ವಿಷಯಾಧಾರಿತ ಪದಗಳು , ಮೌಲ್ಯಯುತ ಪದಗಳ ಸರಳ ಸುಲಲಿತ ಜೋಡಣೆ ಈ ಪ್ರಸಂಗಗಳ ವೈಶಿಷ್ಟ್ಯತೆ .

ಭೀಷ್ಮೋತ್ಪತ್ತಿ , ಭೀಷ್ಮಾರ್ಜುನರ ಕಾಳಗ ( ಭೀಷ್ಮ ಸೇನಾಪತ್ಯ -ವಿಶ್ವರೂಪ ದರ್ಶನ -ಕರ್ಮಬಂಧನ -ಸುದರ್ಶನ ಕರಗ್ರಹಣ - ಶರಶಯ್ಯೆ ಕಥಾನಕವನ್ನು ಒಳಗೊಂಡಿದೆ ), ಭೀಷ್ಮ ವಿಜಯ,ವೀರಮಣಿ ಕಾಳಗ ,ವಾಮನ ಚರಿತ್ರೆ  ಪ್ರಸಂಗಗಳು  ತಾಳಮದ್ದಲೆ ಕೂಟಗಳಿಗೆ ಹೇಳಿ ಮಾಡಿಸಿದಂತಿದೆ. ಈ ಎಲ್ಲ ಪ್ರಸಂಗಗಳು ಇಂದಿಗೂ ತಾಳಮದ್ದಲೆ ಕೂಟದ ಅಗ್ರ ಪ್ರಸಂಗಗಳ ಸಾಲಿನಲ್ಲಿ ಸ್ಥಾನ ಪಡೆದಿವೆ. 

ಹಲಸಿನಹಳ್ಳಿ ಶ್ರೀಯುತ ನರಸಿಂಹ ಶಾಸ್ತ್ರಿಯವರ ಬಹುತೇಕ ಎಲ್ಲ ಪ್ರಸಂಗಗಳೂ ಆಟ ಕೂಟಗಳಲ್ಲಿ ಇಂದಿಗೂ ಚಿರಂಜೀವಿಗಳಾಗಿವೆ. ಈಗಾಗಲೇ ಪಾರ್ತಿಸುಬ್ಬನ ಪ್ರಸಂಗಗಳು , ಹಟ್ಟಿಯಂಗಡಿ ರಾಮ ಭಟ್ಟರ ಪ್ರಸಂಗಗಳು, ಅಗರಿ ಶ್ರೀನಿವಾಸ ಭಾಗವತರ ಪ್ರಸಂಗಗಳು, ಹಿರಿಯ -ಕಿರಿಯ ಬಲಿಪ ಭಾಗವತರ ಪ್ರಸಂಗಗಳು ,ಜತ್ತಿ ಈಶ್ವರ ಭಾಗವತರ ಪ್ರಸಂಗಗಳು ,ಅಮೃತ ಸೋಮೇಶ್ವರರ ಪ್ರಸಂಗಗಳು , ಸಂಪುಟ ರೂಪದಲ್ಲಿ ಪ್ರಕಟವಾಗಿದ್ದು ಮುದ್ರಿತ ರೂಪದಲ್ಲಿ ಲಭ್ಯವಿರುತ್ತದೆ .ಆದರೆ ಹಿರಿಯರೂ ಮೇಧಾವಿಗಳೂ ,ವಿದ್ವಾಂಸರಾಗಿ ಮೆರೆದಿದ್ದ ಹಲಸಿನಹಳ್ಳಿ ಶ್ರೀಯುತ ನರಸಿಂಹ ಶಾಸ್ತ್ರಿಯವರ ಪ್ರಸಂಗಗಳ  ಮಹಾಸಂಪುಟವೊಂದು  ಪ್ರಕಟವಾಗಬೇಕಿದೆ . ಶ್ರೀಯುತರ ಎಲ್ಲ ಪ್ರಸಂಗಗಳೂ ಒಂದೇ ಪುಸ್ತಕದಲ್ಲಿ ದೊರೆತಲ್ಲಿ ಕಲಾಸಕ್ತರಿಗೆ , ಅಭ್ಯಾಸಿಗಳಿಗೆ , ಭಾಗವತರುಗಳಿಗೆ , ಕಲಾವಿದರಿಗೆ ಮಹಾದುಪಕಾರವಾಗುತ್ತದೆ.  ಅಂಥದ್ದೊಂದು ಕಾರ್ಯವು ಶೀಘ್ರವೇ  ಆಗಿ ಅವರ ಚಿರನೂತನ ಪ್ರಸಂಗಗಳು ಚಿರಸ್ಥಾಯಿಯಾಗಿ ಜನಮಾನಸದಲ್ಲಿ ಉಳಿಯಲಿ ಎಂದು ಹಾರೈಸುತ್ತೇನೆ ..



(ಹಲಸಿನಹಳ್ಳಿ ಶ್ರೀಯುತ ನರಸಿಂಹ ಶಾಸ್ತ್ರಿಯವರ ಬಗ್ಗೆ ಮಾಹಿತಿ ಕೃಪೆ : ಕ.ಪು. ಶ್ರೀನಿವಾಸ ಭಟ್, ಪಂಚವಟಿ , ಕಟೀಲು )

Sunday, October 31, 2010

ಬಲಿಪರಿಗೆ ರಾಜ್ಯೋತ್ಸವ ಪ್ರಶಸ್ತಿ

ಯಕ್ಷಗಾನ ಭಾಗವತ ಭೀಷ್ಮರೆನಿಸಿದ ಹಿರಿಯ ಕಲಾವಿದ ಬಲಿಪ ನಾರಾಯಣ ಭಾಗವತರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಲ್ಲುತ್ತಿರುವುದು ನಮಗೆಲ್ಲ ಸಂತೋಷದ ವಿಚಾರ . ತೆಂಕುತಿಟ್ಟಿನ ಭಾಗವತಿಕೆಯ ಸರ್ವಾಂಗೀಣ ಅಧ್ಯಯನ ಸಂಪನ್ನತೆಯುಳ್ಳ ಬಲಿಪರಿಗೆ ಈ ರಾಜ್ಯೋತ್ಸವ ಪ್ರಶಸ್ತಿ ಸಲ್ಲುತ್ತಿರುವುದು ತೆಂಕುತಿಟ್ಟಿನ ಅಭಿಮಾನಿಗಳೆಲ್ಲರಿಗೆ ಹೆಮ್ಮೆಯ ವಿಷಯ . ಬಲಿಪರ ಜೀವಮಾನದ ಸಾಧನೆಗೆ ಸಂದ ಗೌರವ ಇದು . ಬಹಳ ಹಿಂದೆಯೇ ಈ ಪ್ರಶಸ್ತಿ ಅವರಿಗೆ ಸಲ್ಲಬೇಕಿತ್ತು ಈಗಲಾದರೂ ಸರಕಾರ ರಾಜ್ಯೋತ್ಸವ ಪ್ರಶಸ್ತಿ ಕೊಡುತ್ತಿರುವುದು ತೃಪ್ತಿಯ ವಿಷಯ .


ಬಲಿಪರು ಇದರಿಂದ ಸ್ಫೂರ್ತಿ ಪಡೆದು ಇನ್ನು ಹೆಚ್ಚು ವರ್ಷ ನಮ್ಮೆಲರನ್ನು ತಮ್ಮ ಭಾಗವತಿಕೆಯ ಮೂಲಕ ರಂಜಿಸಲಿ ಎಂದು ಮನ:ಪೂರ್ವಕ ಹಾರೈಸುತ್ತೇನೆ.

Wednesday, October 13, 2010

ಬಯಲಾಟ ಮತ್ತು ಕಾಲಮಿತಿ ಯಕ್ಷಗಾನ ಪ್ರದರ್ಶನಗಳು


ಕರಾವಳಿಯಲ್ಲಿ ಬಯಲಾಟವೆಂದರೆ ರಾತ್ರಿಯಿಡೀ ಎಂಟರಿಂದ ಹತ್ತು ಗಂಟೆಗಳ ಪೂರ್ಣಪ್ರಮಾಣದ ಯಕ್ಷಗಾನ ಪ್ರದರ್ಶನ. ಕೋಡ೦ಗಿಯಿಂದ ತೊಡಗಿ ಬಾಲಗೋಪಾಲರೆ ಮೊದಲಾದ ಪೂರ್ವರಂಗ ಮುಗಿದು ಕೇಳಿ ಬಡಿದು ಪ್ರಸಂಗ ಆರಂಭವಾಗಿ ಬೆಳಗಿಯ ಜಾವ ಮಂಗಳ ಆಗುವವರೆಗೆ ಸುದೀರ್ಘ ಪ್ರದರ್ಶನ . ಚಿಕ್ಕವರಿದ್ದಾಗ ಆಟಕ್ಕೆ ಹೋಗುವುದೆಂದರೆ ಸಂಭ್ರಮ ! ಶಾಲಾ ಆಟದ ಮೈದಾನಿನಲ್ಲಿ ನಡೆಯುತ್ತಿದ್ದ ರಾತ್ರಿಯಿಡೀ ಪ್ರದರ್ಶನಕ್ಕೆ ಕಿಕ್ಕಿರಿದ ಜನ ಸಂದಣಿ ಇರುತ್ತಿತ್ತು. ದೂರದರ್ಶನದ೦ಥ ದೃಶ್ಯ ಮಾದ್ಯಮಗಳು ಇನ್ನು ಜನಸಾಮಾನ್ಯರ ಮನೆಗೆ ಲಗ್ಗೆ ಇಡದೆ ಇದ್ದ ಸಮಯವದು. ಬಹುತೇಕ ಜನ ಸಾಮಾನ್ಯರಿಗೆ ಇದ್ದ ಏಕೈಕ ಮನೋರಂಜನಾ ಸಾಧನ ಯಕ್ಷಗಾನ ಪ್ರದರ್ಶನ.

ದೂರದರ್ಶನವು ಜನ ಸಾಮಾನ್ಯರ ಜೀವನದ ಅವಿಭಾಜ್ಯ ಅಂಗವಾಗಿ ಸ್ಥಾಪಿತವಾದ ಮೇಲೆ ದೃಶ್ಯ ಮಾಧ್ಯಮಗಳ ಬೆಳವಣಿಗೆ  ಹಾಗೂ ಚಲನ ಚಿತ್ರಗಳ ಭಾರಾಟೆ ಯಕ್ಷಗಾನ ಪ್ರದರ್ಶನಕ್ಕೆ ತೀವ್ರ ಹೊಡೆತ ನೀಡಿದ್ದಂತೂ ನಿಜ . ಜಾಗತೀಕರಣದ ಪರಿಣಾಮ ಹಾಗೂ ಯುವ ಜನತೆಯ ಪಾಶ್ಚಾತ್ಯ ಸಂಸ್ಕೃತಿಯ ಮೋಹ  ನಮ್ಮ ಈ ಮಣ್ಣಿನ ಕಲೆಯ ಬಗ್ಗೆ ಅಸಡ್ಡೆಯೂ ಸೇರಿ ನಿಧಾನಕ್ಕೆ ಯಕ್ಷಗಾನವೂ ಕಾಲಗರ್ಭದಲ್ಲಿ ಅಡಗಿ ಹೋಗುವ ಅಪಾಯದ ಅಂಚಿಗೆ ಸರಿಯುತ್ತಿದೆ.

   ಇಡೀ ರಾತ್ರಿ ಪ್ರದರ್ಶನ ಇತ್ತೀಚಿಗೆ ಕಳೆಗುಂದಿ ತಡರಾತ್ರಿಯ ಬಳಿಕ ಆಸನಗಳು ಬರಿದಾಗಿ ಬೆಳಗಿನ ಜಾವಕ್ಕೆ ಮೇಳದ ಕಲಾವಿದರು, ಆಟ ಆಡಿಸುವ ಸೇವಾಕರ್ತರು , ಧ್ವನಿವರ್ಧಕ ಮತ್ತು ಬೆಳಕಿನ ವ್ಯವಸ್ಥೆಯವರನ್ನು ಹೊರತುಪಡಿಸಿ ಬೆರಳೆಣಿಕೆಯ ಪ್ರೇಕ್ಷಕರು  ಮಾತ್ರ ಉಳಿಯುತ್ತಿದ್ದು ಕಲಾವಿದರಿಗೆ ನಿರುತ್ಸಾಹ ಉಂಟಾಗುತ್ತಿದೆ.

ಇದಕ್ಕೊಂದು ಪರಿಹಾರ ಯತ್ನವಾಗಿ ಕಾಲಮಿತಿಯ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದು ಇಡೀ ರಾತ್ರೆಯ ಆಟದ ಸೊಗಸಿಲ್ಲದಿದ್ದರೂ ತಕ್ಷಣ ಸವಿಯಲು ಸಿಗುವ ಆಹಾರ ಪದಾರ್ಥದಂತೆ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ. ಮೂರು ನಾಲ್ಕು ತಾಸುಗಳ ಈ ಪ್ರದರ್ಶನದಲ್ಲಿ ಪೂರ್ವರಂಗವನ್ನು ಬಿಟ್ಟು ನೇರ ಕಥಾ ನಿರೂಪಣೆಗೆ ತೊಡಗುತ್ತಿದ್ದು  ಜನರಿಗೆ ಚುಟುಕಾಗಿ ಕಥೆಯನ್ನು ಅಭಿವ್ಯಕ್ತಿಗೊಳಿಸಲಾಗುತ್ತಿದೆ. ಕಾಲಮಿತಿಯ ಯಕ್ಷಗಾನದಲ್ಲಿ ಕಲಾವಿದನಿಗೆ ಸಾಕಷ್ಟು ವಿಶ್ರಾಂತಿ ದೊರೆಯುತ್ತದೆ. ಅನಾವಶ್ಯಕವಾಗಿ ನಿದ್ದೆಗೆಟ್ಟು ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗಬೇಕಿಲ್ಲವಾದರೂ ತನ್ನ ಪಾತ್ರದ ಅಭಿವ್ಯಕ್ತಿಗೆ ಕಾಲಾವಕಾಶ ಮಾತ್ರ ಕಡಿಮೆಯೇ ಸಿಗುತ್ತಿದ್ದು ಕಲಾವಿದನ ವೃತ್ತಿ ಜೀವನಕ್ಕೆ ಅದೊಂದು ಸವಾಲಾಗಿದೆ.


ಈ ಮಧ್ಯೆ ನಿರಂತರ ೨೪ ತಾಸುಗಳ ಯಕ್ಷಗಾನ ಪ್ರಯೋಗ , ಸಂಜೆ ಆರಂಭವಾಗಿ ಮರುದಿನ ಮಧ್ಯಾಹ್ನದ   ತನಕ ಪ್ರದರ್ಶನ ಅಲ್ಲೊಂದು ಇಲ್ಲೊಂದು ನಡೆಯುತ್ತಿದ್ದು ಈಗಲೂ ಅಷ್ಟು ಹೊತ್ತು ಪ್ರದರ್ಶನ ನೀಡುವ ಕಲಾವಿದರ ಸಾಮರ್ಥ್ಯವನ್ನು ತೋರಿಸುತ್ತಿದೆ.

ಇನ್ನು  ಬಯಲಾಟಗಳ ಗುಣಮಟ್ಟದಲ್ಲೂ  ಬಹಳ ಬದಲಾವಣೆಗಳಾಗಿವೆ. ಹಿಂದೆ ಹರಕೆಯ ಆಟವಾದರೂ ಕಲಾವಿದರು ತಮ್ಮ ಪಾತ್ರದ ಗುಣಮಟ್ಟವನ್ನು ಕಾಯ್ದುಕೊಂಡು ಬರುತ್ತಿದ್ದರು. ಈಗಿನ ವಾತಾವರಣವನ್ನು ಗಮನಿಸಿದಾಗ ಅದರಲ್ಲೂ ಬದಲಾವಣೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ .ಇದರೊಂದಿಗೆ ಸಾಮಾನ್ಯವಾಗಿ ಬಯಲಾಟ ಆಡಿಸುವವರು ಆಟದ ರಂಗೇರಿಸಲು ಬ್ಯಾಂಡ್ , ವಾದ್ಯ , ಕೊಂಬು ಕಹಳೆ ಇತ್ಯಾದಿ ಹೆಚ್ಚುವರಿ "ಹೊರೆ" ಯನ್ನು ದೇವರ ಪ್ರೀತ್ಯರ್ಥವಾಗಿ ? ತನ್ನ  ಪ್ರತಿಷ್ಠೆಯನ್ನು ಮೆರೆಸಲು ಬಳಸುವುದನ್ನು ಎಲ್ಲರೂ ನೋಡಿ ಅನುಭವಿಸಿರುವ ವಿಷಯವೇ ! ಇಲ್ಲಿ ಯಾವುದೊಂದು ಯಕ್ಷಗಾನದ ಆವರಣಕ್ಕೆ ಪೂರಕವಾಗಿರದೆ ಆಟದ ಕಳೆಯನ್ನೇ ಹಾಳುಗೆಡಹುತ್ತದೆ ಎಂದು ಎಷ್ಟು ಬಾರಿ ತಿಳಿ ಹೇಳಿದರೂ ನಮ್ಮೂರ ಜನಕ್ಕೆ "ಬ್ಯಾಂಡ್  ಇಜ್ಜಿಂಡ ಎಂಚ ?" ಅಂತ ಮುಖ ಸಿ೦ಡರಿಸುವುದು ಅಭ್ಯಾಸ !.  ಆಟದಲ್ಲಿ ದೇವಿ ಪ್ರತ್ಯಕ್ಷವಾಗುವಾಗ "ಕರಿಯ ಐ   ಲವ್ ಯೂ " ಹಾಡನ್ನು ರಸವತ್ತಾಗಿ ಬ್ಯಾಂಡ್ ಸೆಟ್ ನವರು ನುಡಿಸಿದ್ದನ್ನು ನೋಡಬೇಕಾದ ದುರ್ಧೈವೂ  ಈಗಿನ ಪ್ರೇಕ್ಷಕರಿಗಿದೆ !

ಹರಕೆ ಮೇಳಗಳು ಇಂದಿಗೂ ಪೂರ್ಣ ರಾತ್ರಿಯ ಪ್ರದರ್ಶನವನ್ನು ನೀಡುತ್ತಿದೆ. ಆದರೆ ಜನರನ್ನು ಸೆಳೆಯುವಲ್ಲಿ ಅದು ನಿಧಾನವಾಗಿ ವಿಫಲವಾಗುತ್ತಿರುವುದು ಒಂದು ದುರಂತವೇ ಸರಿ. ಹೀಗಾಗಿ ಕಲಾವಿದರ ಹಿತದೃಷ್ಟಿಯಿಂದ ಹರಕೆಯ ಆಟಗಳನ್ನು ಕಾಲಮಿತಿಯ ಪರಿಮಿತಿಗೆ ಒಳಪಡಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ.

ಫೋಟೋ ಕೃಪೆ : ಶ್ರೀ.ಸಂತೋಷ್ ಪೈ.

Tuesday, July 27, 2010

ಮನ ಮುಟ್ಟುವ ಶ್ಲೋಕ ...

ಹರಿ ಹರರಲ್ಲಿ ಬೇಧವಿಲ್ಲ ಎಂದು ಸಾರಲು ಕವಿಯೊಬ್ಬ ಹರಿಹರರನ್ನು ಒಟ್ಟಾಗಿ ಒಂದೇ ಶ್ಲೋಕದಲ್ಲಿ ಪ್ರಾರ್ಥಿಸಿದ್ದು ಹೀಗೆ..
ಪಾಯಾತ್ ಕುಮಾರಜನಕ: ಶಶಿಖಂಡಮೌಳಿ:
ಶಂಖಪ್ರಭಶ್ಚ  ನಿಧನಶ್ಚ ಗವೀಶಯಾನ:
ಗಂಗಾಂಚ ಪನ್ನಗಧರಶ್ಚ ಉಮಾವಿಲಾಸ:
ಆದ್ಯಕ್ಷರ ರಹಿತೋ ಸಹಿತೋಪಿ ದೇವ:

ಇದರಲ್ಲಿ ಮೊದಲ ಅಕ್ಷರ ಸೇರಿಸಿದರೆ ಶಿವನ ಸ್ತುತಿಯಾಗುತ್ತದೆ. ಮೊದಲ ಅಕ್ಷರ ಬಿಟ್ಟರೆ ವಿಷ್ಣುವಿನ ಸ್ತುತಿಯಾಗುತ್ತದೆ. ಮೊದಲ ಅಕ್ಷರವಿದ್ದರೂ ಇಲ್ಲದಿದ್ದರೂ ದೇವರನ್ನೇ ಸ್ತುತಿಸಿದಂತಾಗುತ್ತದೆ.

ಕುಮಾರಜನಕ:= ಕುಮಾರನ ತಂದೆ =ಶಿವ ; ಮಾರ ಜನಕ:= ಮನ್ಮಥನ ತಂದೆ =ವಿಷ್ಣು, ಶಶಿಖಂಡಮೌಳಿ:= ಚಂದ್ರಶೇಖರ , ಶಿಖಂಡಮೌಳಿ:=ನವಿಲುಗರಿಯನ್ನು ಧರಿಸಿದಾತ= ವಿಷ್ಣು/ಕೃಷ್ಣ , ಶಂಖಪ್ರಭ = ಬಿಳಿಬಣ್ಣದವ (ಶಿವ ) , ಖಪ್ರಭ=ಆಕಾಶ ಬಣ್ಣದವ =ವಿಷ್ಣು, ನಿಧನ=ಶಿವ, ಧನ=ವಿಷ್ಣು, ಗವೀಶಯಾನ: = ನಂದಿವಾಹನ , ವೀಶಯಾನ:=ಪಕ್ಷಿವಾಹನ , ಗಂಗಾಂಚ = ಗಂಗಾಧರ , ಗಾಂಚ =ಗೋಪಾಲ ಪನ್ನಗಧರ =ನಾಗಭೂಷಣ,ನಗಧರ = ವಿಷ್ಣು, ಉಮಾವಿಲಾಸ:= ಶಿವ , ಮಾವಿಲಾಸ: =ವಿಷ್ಣು
ಹಾಗಾಗಿ ಮೊದಲ ಅಕ್ಷರ ಸೇರಿಸಿದರೂ ಬಿಟ್ಟರೂ ದೇವರನ್ನು ನೆನೆದಂತೆಯೇ ಆಗುವುದು .

ಅರ್ಥಪೂರ್ಣವಾದ ಈ ಶ್ಲೋಕ ಎಷ್ಟು ಸೊಗಸಾಗಿದೆಯಲ್ಲವೇ ?

Wednesday, July 14, 2010

ಕೆಲವು ಅಪೂರ್ವ ಛಾಯಾಚಿತ್ರಗಳು ...

ಯಕ್ಷಗಾನ ಕ್ಷೇತ್ರದಲ್ಲಿ ಅದೆಷ್ಟೋ ಮಂದಿ ಕಲಾವಿದರು ಪ್ರಸಿದ್ಧಿಯನ್ನು ಪಡೆದು ರಂಗವನ್ನು ಬೆಳಗಿದವರಿದ್ದಾರೆ . ಕಲೆಯನ್ನು ತಮ್ಮದೇ ಆದ ಛಾಪಿನಿಂದ ಶ್ರೀಮಂತಗೊಳಿಸಿ ತೆರೆಗೆ ಸರಿದವರು ಹಾಗೂ ಅವರೊಂದಿಗೆ ಪರಿಶ್ರಮಿಸಿ ಈಗ ಹಿರಿಯರೆನಿಸಿಕೊಂಡ ಚೇತನಗಳ ಕೆಲವು ಅಪೂರ್ವ ಛಾಯಾಚಿತ್ರ ಯಕ್ಷ ರಸಿಕರಿಗಾಗಿ ಇಲ್ಲಿ ನೀಡುತ್ತಿದ್ದೇನೆ
ಮೊದಲ ಚಿತ್ರದಲ್ಲಿ ಎಪ್ಪತ್ತರ ತಲೆಮಾರಿನ "ಯಕ್ಷ ದಿಗ್ಗಜರು ಮತ್ತು ಯಕ್ಷ ಪೋಷಕರು "
ಕುಳಿತವರು (ಎಡದಿಂದ ಬಲಕ್ಕೆ ) ಶ್ರೀ ನಿಡ್ಲೆ ನರಸಿಂಹ ಭಟ್ , ಶ್ರೀ. ಬೋಳಾರ ನಾರಾಯಣ ಶೆಟ್ಟಿ ,ಶ್ರೀ ವಿಟ್ಲ ಗೋಪಾಲಕೃಷ್ಣ ಜೋಶಿ , ಶ್ರೀ.ಎಂ.ನಾರಾಯಣ ಭಟ್ (ಅಳಿಕೆ) ಶ್ರೀ ಬಲಿಪ ನಾರಾಯಣ ಭಾಗವತ , ಶ್ರೀ ಅಳಿಕೆ ರಾಮಯ್ಯ ರೈ ,ಶ್ರೀ ಕದ್ರಿ ವಿಷ್ಣು
ಮೊದಲ ಸಾಲಿನಲ್ಲಿ ನಿಂತವರು : ಶ್ರೀ ಎಂ.ವಾಸುದೇವ ಪ್ರಭು , ಶ್ರೀ.ಕೆ.ಸಂಜೀವ ಶೆಟ್ಟಿ , ಶ್ರೀ ಗೋಪಾಲಕೃಷ್ಣ ಕುರುಪ್ , ಶ್ರೀ ಬಣ್ಣದ ಕುಟ್ಯಪ್ಪು, ಶ್ರೀ ಕೋಳ್ಯುರ್ ರಾಮಚಂದ್ರ ರಾವ್ , ಶ್ರೀ ಕೆ.ವಿ. ಸುಬ್ಬಾ ರಾವ್ , ಶ್ರೀ ಅಡ್ಕಸ್ಥಳ ನಾರಾಯಣ ಶೆಟ್ಟಿ
ನಿಂತವರಲ್ಲಿ ಕೊನೆಯ ಸಾಲು : ಶ್ರೀ ಡೊಂಬ, ಶ್ರೀ ಯು. ಗಂಗಾಧರ ಭಟ್ , ಶ್ರೀ.ಕೇದಗಡಿ ಗುಡ್ಡಪ್ಪ ಗೌಡ , ಶ್ರೀ ಪಡ್ರೆ ಕುಮಾರ ಮತ್ತು ಶ್ರೀ ಪಡ್ರೆ ಚಂದು



ಎರಡನೇ ಚಿತ್ರದಲ್ಲಿ
ಶ್ರೀ ಪೆರ್ವೋಡಿ ನಾರಾಯಣ ಭಟ್ , ಶ್ರೀ ದೇಜು ಹಾಗೂ ಶ್ರೀ ಬಲಿಪ ನಾರಾಯಣ ಭಾಗವತ .
ಮೊತ್ತ ಮೊದಲ ಬಾರಿಗೆ ಶ್ರೀ ಬಲಿಪರನ್ನು ಮುಂಬೈಗೆ ಶ್ರೀ ದೇಜುರವರು ಕರೆದುಕೊಂಡು ಹೋದಾಗ ತೆಗೆದ ಛಾಯಾ ಚಿತ್ರವಿದು .



ಕೊನೆಯ ಚಿತ್ರದಲ್ಲಿ ಶ್ರೀ ಬಲಿಪರ ಭಾಗವತಿಕೆಯಲ್ಲಿ ಶ್ರೀ ಅಳಿಕೆ ರಾಮಯ್ಯ ರೈಗಳ ಪೀಠಿಕೆ ವೇಷ

ಹಳೆಯ ಕಪ್ಪು ಬಿಳುಪು ಚಿತ್ರಗಳನ್ನು ನೋಡುವಾಗ ಮನಸ್ಸಿಗೆ ಮುದವಾಗುತ್ತದಲ್ಲವೇ ?