Friday, May 18, 2012

ಯಕ್ಷಗಾನ ಭಾಗವತರಿಗೆ ಬೀಳ್ಕೊಡುಗೆ

ವೃತ್ತಿರಂಗದಿಂದ ನಿವೃತ್ತರಾಗುವವರಿಗೆ ಬೀಳ್ಕೊಡುಗೆ ಮಾಡುವ ಸತ್ಸಂಪ್ರದಾಯ ಹೆಚ್ಚಿನ ಎಲ್ಲ ಕ್ಷೇತ್ರದಲ್ಲಿ ಕಾಣುತ್ತೇವೆ . ಆದರೆ ಹಲವಾರು ವರ್ಷಗಳಿಂದ ಯಕ್ಷಗಾನದಲ್ಲಿ ದುಡಿದ ಕಲಾವಿದರು ನಿವೃತ್ತರಾಗುವಾಗ ಅವರು ಪಡಕೊಂಡು ಹೋಗುವುದು ಅನಾರೋಗ್ಯ, ಬಡತನದ ಬೇಗೆ ಮಾತ್ರ! 
ಬಡಗು ತಿಟ್ಟಿನ ಖ್ಯಾತ ಪ್ರಯೋಗಶೀಲ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರು ಸ್ವಯಂನಿವೃತ್ತರಾಗುವ ಸಂಧರ್ಭ ಅವರು ಇಷ್ಟು ವರ್ಷಗಳ ಸೇವೆ ಸಲ್ಲಿಸಿದ ಮೇಳ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿರುವುದು ನಿಜಕ್ಕೂ ಸಂತಸದ ವಿಚಾರ . ಇದು ಇತರ ಮೇಳದವರಿಗೆ ಅನುಸರಣೀಯ ಕಾರ್ಯ .
ಕಾರ್ಯಕ್ರಮಕ್ಕೆ ಶುಭಕೋರೋಣ ..

Wednesday, November 16, 2011

ಸೇವೆ ಇವೆ.... ಕಲಾವಿದರೆಲ್ಲಿ ....?


    
ದಿನ ಪತ್ರಿಕೆಯಲ್ಲಿನ ಸುದ್ದಿ ಓದಿದಾಗ ನಿಜವಾಗಿಯೂ ಯಕ್ಷಾಭಿಮಾನಿಗಲ್ಸಂತಸ ಪಡಬೇಕಾದ ವಿಚಾರ . ಯಕ್ಷಗಾನವು ಯಾವ ರಾಜಾಶ್ರಯವಿಲ್ಲದೆ , ಸರಕಾರದ ಕೃಪಾಶ್ರಯವಿಲ್ಲದೆ, ಬರಿಯ ಅಭಿಮಾನಿ ಸೇವಾರ್ಥಿ ಸಜ್ಜನ ಬಂಧುಗಳಿಂದ ಇಂದಿಗೂ ತನ್ನ ಸತ್ವವನ್ನು  ಉಳಿಸಿಕೊಂಡು  ವಿಕಾರತೆಗಳಿದ್ದರೂ ತನ್ನ ಕಂಪನ್ನು ಬೀರುತ್ತ ಜೀವಂತವಾಗಿ  ಇದೆ.ಬೇರೆ ಬೇರೆ ದೇವಳದ ಆಶ್ರಯದಲ್ಲಿ ಹಲವಾರು ಮೇಳಗಳಿವೆ. ವರ್ಷಾನುಗಟ್ಟಲೆ ಸೇವಾರೂಪದ ಯಕ್ಷಗಾನ ಆಖ್ಯಾನಗಳನ್ನು ಆಡಿಸುವ ಸೇವಾರ್ಥಿಗಳು, ಪ್ರಾಯೋಜಕರು ಇದ್ದಾರೆ . ಆದರೆ ಸೇವಾರ್ಥಿಗಳು ನಡೆಸುವ ಪ್ರದರ್ಶನದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಕಲಾವಿದರಿದ್ದಾರೆಯೇ ? ಎಂಬುದು ದೊಡ್ಡ ಪ್ರಶ್ನೆ . ಮುಂದೆ ಈಗಿರುವ ಪ್ರದರ್ಶನದ ಗುಣಮಟ್ಟವನ್ನಾದರು ಉಳಿಸಿಕೊಂಡು ಹೋಗಬಲ್ಲ ಯುವಕಲಾವಿದರು ರೂಪುಗೊಳ್ಳುತ್ತಿದ್ದಾರೆಯೇ ? 
ಇಂದು ಎಲ್ಲ ಕ್ಷೇತ್ರಗಳಲ್ಲೂ ನುರಿತ ವೃತ್ತಿಪರರ ಕೊರತೆ ಇದೆ .ಯಕ್ಷರಂಗವನ್ನಂತೂ ಇದು ತೀವ್ರವಾಗಿ ಬಾಧಿಸುತ್ತಿರುವ ಸಮಸ್ಯೆ . ಇತ್ತೀಚಿಗೆ ತೆಂಕಿನ ಪ್ರಖ್ಯಾತ ಮೇಳದ ಯಜಮಾನರು ಹಿಮ್ಮೇಳ ಕಲಾವಿದರ ಕೊರತೆ ಬಗ್ಗೆ  ಪ್ರಸ್ತಾಪಿಸುತ್ತಾ ಮುಂದೆ ಇದು ದೊಡ್ಡ ಸಮಸ್ಯೆಯಾಗಿ ಮುಂದುವರಿದಲ್ಲಿ ಸೇವೆಯನ್ನು ನಡೆಸುವುದು ಹೇಗೆ ? ಎಂದು ಯೋಚಿಸಬೇಕಾಗುತ್ತದೆ ಎಂದದ್ದು ಇದರ ತೀವ್ರತೆಯನ್ನು ತಿಳಿಸುತ್ತದೆ . ಹಲವು ದಶಕಗಳಿಂದ ಮೇಳ ನಡೆಸುತ್ತಿದ್ದ ಓರ್ವ ಯಜಮಾನರು ಇದ್ದದ್ದನ್ನೆಲ್ಲ ಉದಾರವಾಗಿ ಒಂದು ಸಂಸ್ಥೆಗೆ ದಾನವಿತ್ತು ಇನ್ನು ನನ್ನಿಂದ ಅಸಾಧ್ಯ ಎಂದು ದಿನಸಿ ಅಂಗಡಿ ತೆರೆದದ್ದು ವಿಷಾದಕರವಾದರೂ ಕಾಟು ಸತ್ಯ !

ಈಗಿನ ಹಿರಿಯ ಕಲಾವಿದರನ್ನು ನೋಡಿದಾಗ ಮುಂದೆ ಇಂಥ ಪ್ರದರ್ಶನಗಳನ್ನು ನೀಡುವ ಚೈತನ್ಯ ಯುವ ಕಲಾವಿದರು ಹೊಂದಿರುವರೆ ಅನುಮಾನ ಮೂಡುತ್ತದೆ ! 
ಹಾಗೆಂದು ತಾಳಮದ್ದಲೆ ಕ್ಷೇತ್ರಕ್ಕೆ ಇದೊಂದು ಅಪವಾದ . ಇಲ್ಲಿ ಹೆಚ್ಚಿನ ಎಲ್ಲರೂ ಹವ್ಯಾಸಿಗಳೇ ಕಲಾಪ್ರಕಾರ ಉಳಿಸಿಕೊಂಡು ಬರುತ್ತಿದ್ದಾರೆ. 
ಆದಾಯ ಕಡಿಮೆ, ನಿದ್ದೆ ಕೆಡುವಿಕೆ, ಆಹಾರ ವೆತ್ಯಾಸಗಳು ಪ್ರಮುಖ ಸಮಸ್ಯೆಗಳೆಂದು ಹೇಳಿದರೂ ಈಗ ಅವಕಾಶಗಳು ಹಲವಾರಿದೆ, ಕಡಿಮೆ ಕಲಿತವನಿಗೂ ಉದ್ಯೋಗ ಖಾತ್ರಿ ಇದೆ ! ಹಾಗಾಗಿ ಆತಕ್ಕೆಕೆ ಹೋಗಬೇಕು ? ಊರೂರೇಕೆ ಸುತ್ತಬೇಕು? ಎಂಬ ಭಾವ ಹೆಚ್ಚಾಗತೊಡಗಿ ಸಮಸ್ಯೆ ಉಲ್ಬಣಗೊಳ್ಳುತ್ತಿದೆ .

ಕಲೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸುವ ಯುವ ಜನತೆ ತೀವ್ರವಾಗಿ ಕ್ಷೀಣಿಸುತ್ತಿರುವ ಈ ಕಾಲದಲ್ಲಿ ಸೇವೆ ಆಟಗಳು ಬೇಕಾದಷ್ಟಿವೆ ... ಕಲಾವಿದರೆಲ್ಲಿದ್ದಾರೆ ? ಅಲ್ಲವೇ !

Sunday, September 18, 2011

ಕೆ. ಗೋವಿಂದ ಭಟ್ ಅರ್ಥ ವೈಭವ



ಸೂರಿಕುಮೇರಿ ಕೆ. ಗೋವಿಂದ ಭಟ್  ತೆಂಕು ತಿಟ್ಟು ಯಕ್ಷಗಾನ ರಂಗದ ಚಿರಪರಿಚಿತ ಹೆಸರು. ಪ್ರಬುದ್ಧ ಕಲಾವಿದ , ನಾಟ್ಯ ಗುರು, ದಶಾವತಾರಿ ಗೋವಿಂದ ಭಟ್ ಸರಿ ಸುಮಾರು ಅರುವತ್ತು ವರುಷಗಳಿಂದ ಯಕ್ಷರಂಗದಲ್ಲಿ ವ್ಯವಸಾಯಿಯಾಗಿದ್ದು ತನ್ನ ಸಹಜ ಅಭಿನಯ, ಶಿಸ್ತುಬದ್ಧ ನಾಟ್ಯ  ಮತ್ತು ಚುಟುಕಾದ ಸಮಯಪ್ರಜ್ಞೆಯಿಂದ ಕೂಡಿದ ಪಾಂಡಿತ್ಯ ಪೂರ್ಣ ವಚೋ ವೈಖರಿಯಿಂದ ತಮ್ಮದೇ ಆದ ಛಾಪನ್ನು ಒತ್ತಿ ಜನಮಾನಸದಲ್ಲಿ ಪ್ರೀತಿಯನ್ನು ಗಳಿಸಿದವರು.  ಕನ್ನಡದ ಅತ್ಯಂತ ಉತ್ಕೃಷ್ಟ ಶಬ್ದ ಸಾಹಿತ್ಯ (vocabulary) ವಿರುವ ಮೇರು ಕಲಾವಿದ ಕೆ.ಗೋವಿಂದ ಭಟ್.
ಉಜಿರೆಯ ಶ್ರೀ ಜನಾರ್ಧನ ಸ್ವಾಮೀ ದೇವಳದ ಆಶ್ರಯದಲ್ಲಿ  ಶ್ರೀಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ಉಜಿರೆಯವರು ಆಯೋಜಿಸಿರುವ ತಾಳಮದ್ದಲೆ ಸಪ್ತಾಹದಲ್ಲಿ ಈ ವರ್ಷ ಕೆ.ಗೋವಿಂದ ಭಟ್ಟರ ವಿವಿಧ ಪಾತ್ರಗಳ ವಾಗ್ವೈಭವ. ಇಂದು ಸಂಜೆ ಆರಂಭಗೊಳ್ಳುವ ಈ ಕಾರ್ಯಕ್ರಮ ನಿರಂತರ ೭ ದಿನಗಳು  ಕೆ.ಗೋವಿಂದ ಭಟ್ರ ಅರ್ಥವನ್ನು  ಸವಿಯುವ ಸುವರ್ಣಾವಕಾಶವನ್ನು ಆಯೋಜಕರು ಕಲ್ಪಿಸಿದ್ದಾರೆ . ಒಂದು ವಾರದ ಈ ಕಾರ್ಯಕ್ರಮದಲ್ಲಿ  ಕೆ.ಗೋವಿಂದ ಭಟ್ಟರ ಶ್ರೀರಾಮ , ಕೌಶಿಕ ,ಭಸ್ಮಾಸುರ,ಹಿರಣ್ಯ ಕಶಿಪು , ಇಂದ್ರಜಿತು ,ಶೂರ್ಪನಖಾ, ಭೀಷ್ಮ ಮತ್ತು ದುರ್ಯೋದನ ಪಾತ್ರಗಳ ಅನಾವರಣಗೊಳ್ಳಲಿದೆ. ಕಾರ್ಯಕ್ರಮವು ಯಶಸ್ವಿಯಾಗಲೆಂದು ಹಾರೈಸೋಣ .


Thursday, June 23, 2011

ಸಂಗ್ರಹ ಯೋಗ್ಯ ಶ್ಲೋಕ

ಭಾಗವತ ಪ್ರಸಂಗಗಳಲ್ಲಿ  ಮಹಾವಿಷ್ಣುವಿನ ವರ್ಣನೆ ಮಾಡುವ ಹಲವು ಸನ್ನಿವೇಶಗಳಿವೆ . ಅಲ್ಲಿ ಸಮರ್ಥನಾದ ಅರ್ಥದಾರಿ ಉಪಯೋಗಿಸಲು ಅನುಕೂಲವಾದ ಒಂದು ಶ್ಲೋಕ ಕೆಳಗಿನಂತಿದೆ . ನಮಗೆದುರಾಗುವ ಬೇರೆ ಬೇರೆ ಸನ್ನಿವೇಶದಲ್ಲಿ ಮಹಾವಿಷ್ಣುವಿನ ಯಾವ ಸ್ವರೂಪವನ್ನು ಧ್ಯಾನಿಸಬೇಕೆಂದು ಸೂಚಿಸುವ ಶ್ಲೋಕ . ಸಂಗ್ರಹಕ್ಕೆ ಉತ್ತಮವಾಗಿದೆಯಲ್ಲವೇ?

 ಔಷಧೇ ಚಿಂತಯೇದ್ವಿಷ್ಣು೦ ಭೋಜನೇ ಚ ಜನಾರ್ಧನಂ |
ಶಯನೇ ಪಧ್ಮನಾಭಂ ಚ  ವಿವಾಹೇಚ ಪ್ರಜಾಪತಿಂ ||
ಯುದ್ಧೇ ಚಕ್ರಧರಂ ದೇವಂ ಪ್ರವಾಸೇ ಚ  ತ್ರಿವಿಕ್ರಮಂ |
ನಾರಾಯಣಂ ತನುತ್ಯಾಗೇ    ಶ್ರಿಧರಂ ಪ್ರಿಯ ಸಂಗಮೇ ||
ದು:ಸ್ವಪ್ನೇ ಸ್ಮರ ಗೋವಿಂದಂ ಸಂಕಟೇ ಮಧುಸೂಧನಂ |
ಕಾನನೇ ನಾರಸಿಂಹಂ ಚ  ಪಾವಕೇ ಜಲಶಾಯಿನಂ |
ಜಲಮಧ್ಯೇ  ವರಾಹಂ ಚ ಪರ್ವತೇ    ರಘುನಂದನಂ ||
ಗಮನೇ ವಾಮನಂ ಚೈವ ಸರ್ವ ಕಾಲೇಷು ಮಾಧವಂ ||
ಷೋಡಶೈತಾನಿ  ನಾಮಾನಿ ಪ್ರಾತ:ರುತ್ಥಾಯ: ಪಟೇತ್
ಸರ್ವ ಪಾಪ ವಿನಿರ್ಮುಕ್ತೋ ವಿಷ್ಣು ಲೋಕ ಮಹೀಯತೇ||

Friday, May 27, 2011

ಕಟೀಲು ಅಮ್ಮನೂ ಬಷೀರ್ ಸಾಹೇಬರೂ .....


ಮೊನ್ನೆ ಉದಯವಾಣಿಯ
ಹನ್ನೊಂದನೇ ಪುಟ  ನೋಡಿದಾಗ ಒಂದು ಕೌತುಕವಿತ್ತು. ಯಕ್ಷಗಾನ ಕಾಲಮ್ಮಿನ ಕಟೀಲು ಮೇಳದ ಆಟ ಎಲ್ಲಿ ನಡೆಯುತ್ತದೆ ಎಂಬ ಪಟ್ಟಿಯಲ್ಲಿ ಐದನೇ ಮೇಳದ ಆ ದಿನದ ಕ್ಯಾಂಪ್  ಬಷೀರ್ ಸಾಹೇಬ್ , ಸುಡುಮದ್ದು ವ್ಯಾಪಾರಸ್ಥರು , ಬಜಪೆ ಮುರನಗರದಲ್ಲಿ ಎಂದು ನಮೂದಿಸಿತ್ತು .ಅದನ್ನು  ನೋಡಿದಾಗ ನನಗೆ ಸಹಜವಾಗಿ ಕುತೂಹಲ. ಕಳೆದ ವರ್ಷ ಕ್ರೈಸ್ತ ಬಾಂಧವರೊಬ್ಬರು ಕಟೀಲು ಮೇಳದ ಸೇವೆ ಆಟ ಆಡಿಸಿದ ಬಗ್ಗೆ ಬರೆದಿದ್ದೆ .                                                                                                              
      ಈ ಸಲ ಮುಸ್ಲಿಂ ಸಮುದಾಯಕ್ಕೆ ಸೇರಿದ ಗೃಹಸ್ಥರೊಬ್ಬರು ಕಟೀಲು ತಾಯಿಯ ಸೇವಾರೂಪದ ಶ್ರೀದೇವಿ ಮಹಾತ್ಮೆ ಆಟ ಆಡಿಸಿದ್ದು ನೋಡಿದಾಗ ಪಕ್ಕನೆ ನೆನಪಾದ್ದು "ಗೋಕುಲಾಷ್ಟಮಿಗೂ ಇಮಾಂ ಸಾಬಿಗೂ ಏನು ಸಂಬಂಧ " ಎಂದು ಓದಿದ ಗಾದೆ ಮಾತು. ಇಲ್ಲಿ ಗಾದೆ ಮಾತಿನಲ್ಲಿ ಸಂಬಂಧಗಳು ಇಲ್ಲದೆ ಇರಬಹುದು ಆದರೆ ಮಹಾಮಾತೆ ಕಟೀಲು ತಾಯಿಗೆ ಎಲ್ಲರೂ ಮಕ್ಕಳೇ ಅಲ್ಲವೇ ? ಗಾದೆಗಿಂತ ಮೀರಿದ ಭಾವನಾತ್ಮಕ ಸಂಬಂಧ ಅಲ್ಲಿತ್ತು.

ಶ್ರೀಮಾನ್ ಬಷೀರ್ ಸಾಹೇಬರು ಮಂಗಳೂರು ಸುತ್ತ ಮುತ್ತ ನಡೆಯುವ ಕಟೀಲು ಮೇಳದ ಆಟಗಳಿಗೆ ಸುಡುಮದ್ದು ಪೂರೈಕೆ ಮಾಡುವವರು . ಬಜಪೆ ಪರಿಸರದಲ್ಲಿ ಬಹಳಷ್ಟು ಜನ ಯಕ್ಷಗಾನದ ಅಭಿಮಾನಿಗಳು ಇದ್ದಾರೆ . ಕಟೀಲು ಮೇಳದ ಹೆಚ್ಚಿನ ಆಟಗಳು ಮಂಗಳೂರಿನ ಸುತ್ತ ಮುತ್ತಲಿನ ಪರಿಸರದಲ್ಲಿ ನಡೆಯುತ್ತಿದ್ದು ಹೆಚ್ಚಿನ ಆಟಗಳಿಗೆ ಬಷೀರ್ ಸಾಹೇಬರದ್ದೆ ಸುಡುಮದ್ದು. ಹಲವು ವರ್ಷಗಳಿಂದ ಕಟೀಲು ತಾಯಿಗೆ ಸುಡುಮದ್ದು ಸೇವೆ ಸಲ್ಲಿಸಿದ ಇವರು ಅವಕಾಶವಾದಾಗಲೆಲ್ಲ ಕಟೀಲು ಮೇಳದ ಆಟ ಆಡಿಸುತ್ತಾರೆಂದು ಮೇಳದ  ಕಲಾವಿದರೊಬ್ಬರು  ಹೇಳಿದರು.

ನಮಗೆಲ್ಲ ತಿಳಿದಂತೆ ಬಹಳ ಹಿಂದೆ ಬಪ್ಪನಾಡು ಕ್ಷೇತ್ರದಲ್ಲಿ ಅಮ್ಮನವರ ಗುಡಿಯನ್ನು ಬಪ್ಪ ಬ್ಯಾರಿ ಕಟ್ಟಿಸಿದನೆಂದು ಪ್ರಸಿದ್ದಿ.  ಈಗಿನ ಕಾಲದಲ್ಲೋ ಹೆಚ್ಚಿನ ಕಡೆ ಕ್ಷುಲ್ಲಕ ಕಾರಣಗಳಿಗೆ   ಕೋಮು ಗಲಭೆಗಳು  ನಡೆಯುವುದನ್ನು ಕಾಣುತ್ತೇವೆ. ಪತ್ರಿಕಾ ಮಾಧ್ಯಮದವರು ಹಿಂದೂ ಮುಸ್ಲಿಂ ಗಲಭೆ ಎಂದು ಬರೆಯುವ ಧೈರ್ಯವಿಲ್ಲದೆ "ಒಂದು ಕೋಮಿನ ಜನರು ಇನ್ನೊಂದು ಕೋಮಿನ ಜನರ ಮೇಲೆ ಹಲ್ಲೆ ನಡೆಸಿದ್ದರಿಂದ" ಎಂದು ಬರೆದು ತಾವು ಸಾಚಾ ಯಾರ ಪರವೂ ಅಲ್ಲ ! ಎಂದು ಸಾಬೀತು ಮಾಡಲು ಹೊರಟರೆ ,   ಟಿ.ವಿ. ಮಾಧ್ಯಮಗಳಂತೂ ಇದರ ಬಗ್ಗೆ ವರದಿ ಮಾಡಲು ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. "ಮಂಗಳೂರಿನಲ್ಲಿ ಕೋಮು ಗಲಭೆ" , "ಚರ್ಚ್ ಮೇಲೆ ಧಾಳಿ ... " ಇತ್ಯಾದಿಯಾಗಿ ಹಸಿ ಬಿಸಿಯಾಗಿ ವರದಿ ಮಾಡುವ ಇವರಿಗೆ  ಬಷೀರ್ ಸಾಹೇಬರಂಥವರು ಕಣ್ಣಿಗೆ ಬೀಳುವುದೇ ಇಲ್ಲ !

ಇವರೆಲ್ಲರಿಗೆ ಸಮಾಜದಲ್ಲಿ ಹಿತವಾಗಿ ಬದುಕುವುದು ಬೇಡ ! ಒಂದು ವೇಳೆ ಬದುಕಿದರೆ ತಮ್ಮ ಚಾನೆಲ್ ನೋಡುವವರಿಲ್ಲವಲ್ಲ ? ಎಂಬ ಭೀತಿ...!

ಒಳ್ಳೆಯ ವಿಚಾರಗಳು ನಡೆಯುವಾಗ ಅದರ ಬಗ್ಗೆ ಕನಿಷ್ಠ ಆಸಕ್ತಿಯನ್ನು ತಳೆಯದ ಜನ ಉತ್ತಮ ಸಮಾಜವನ್ನು ಹೇಗೆ ನಿರ್ಮಿಸಿಯಾರು ? ಸಮಾಜದ ಸ್ವಾಸ್ಥ್ಯದ ಸಮತೋಲನ ಹೇಗೆ ಕಾಪಾಡಿಯಾರು? ಅಷ್ಟಕ್ಕೂ ಸುದ್ದಿ ಮಾಧ್ಯಮದ ಪ್ರಾಥಮಿಕ  ಉದ್ದೇಶಗಳಲ್ಲಿ    ಸಾರ್ವಜನಿಕ ಸ್ವಾಸ್ಥ್ಯ ನಿರ್ವಹಣೆಯೂ ಒಂದು  ಅಲ್ಲವೇ?
ಯೋಚಿಸಿ...

Saturday, January 22, 2011

ಮತ್ತೊಂದು ಶ್ಲೋಕ


ಕಳೆದ ಬಾರಿ ಹರಿ-ಹರರನ್ನು ಒಂದೇ ಶ್ಲೋಕದಲ್ಲಿ ಸ್ತುತಿಸಿದ ಚಮತ್ಕಾರಿಕ ಶ್ಲೋಕದಂತೆ ಈ ಬಾರಿ ತ್ರಿಮೂರ್ತಿಗಳನ್ನು ಒಂದೇ ಶ್ಲೋಕದಲ್ಲಿ ಸ್ತುತಿಸುವ ಬಗೆ ಕೆಳಗಿನಂತಿದೆ


ವೃಹಂಗವಾಹನಂ ಚೈವ ತ್ರಿಕಚಾ ರಸವೈಪುರಿ |
ಪಾಶಾಲ ವಿನಾಕಾ ಪುತ್ರಾ ಪಬ್ರಕೇಶೋ ಪಾಹಿಮಾಂ ||



ವೃಷಭ , ಹಂಸ ಗರುಡ ವಾಹನದವರು , ತ್ರಿಶೂಲ ಕಮಂಡಲ ಚಕ್ರ ಆಯುಧಧಾರಿಗಳೂ , ರಜತಾದ್ರಿ , ಸತ್ಯಲೋಕ ,ವೈಕುಂಠ ಪುರವಾಸಿಗಳೂ, ಪಾರ್ವತಿ ,ಶಾರದಾ , ಲಕ್ಷ್ಮಿ ಪತಿಗಳು , ವಿಘ್ನೇಶ್ವರ , ನಾರದ , ಕಾಮಚಕ್ರೇಶ್ವರರೆಂಬ ಪುತ್ರರನ್ನು ಪಡೆದವರಾದ ಪರಮೇಶ್ವರ , ಬ್ರಹ್ಮ, ಕೇಶವರು ನಮ್ಮನ್ನು ರಕ್ಷಿಸಲಿ .

ಕವಿಯ ಜಾಣ್ಮೆ ಮೆಚ್ಚಬೇಕಾದ್ದಲ್ಲವೇ ?

Thursday, November 11, 2010

ಅಪೂರ್ವ ಪ್ರಸಂಗಕರ್ತ ಕೀರ್ತಿಶೇಷ ಹಲಸಿನಹಳ್ಳಿ ಶ್ರೀನರಸಿಂಹ ಶಾಸ್ತ್ರಿ..

ಪರಮ ಋಷಿ ಮಂಡಲದ ಮಧ್ಯದಿ  ಮೆರೆವ ಯಜ್ಞೇಶ್ವರನ ಪ್ರಭೆಯಲಿ |
ಮೆರೆವ ಜಟಾಮಂಡಲದಿ ಶೋಭಿಪ ಭಾರ್ಗವೇಶ್ವರನ | ಪರಕಿಸುತಲಭಿನಮಿಸಿ ಭೀಷ್ಮನು 
ಚರಣ ಪ್ರಕ್ಷಾಳನವ ಗೈಯ್ಯುತ  ಶಿರದಿ ತೀರ್ಥವ ಧರಿಸಿ |  ಮಧುಪರ್ಕಾದಿಗಳನಿತ್ತು  
ಕರ ಪಿಡಿದು ವರರತುನಮಯ ಪೀಠದಿ ಕುಳ್ಳಿರಿಸಲು | ಗುರು ನಮೋ ಎಂದೆನುತ ಶಿರವ  ಬಾಗುತ ದೈನ್ಯದಿ ನಿಂತಿರಲು ||

ಭೀಷ್ಮ ವಿಜಯ ಪ್ರಸಂಗದಲ್ಲಿ ಭೀಷ್ಮನು ತನ್ನ ಗುರುಗಳಾದ ಪರಶುರಾಮರನ್ನು ಕುರುಕ್ಷೇತ್ರದಲ್ಲಿ ಇದಿರ್ಗೊಳ್ಳುವ ಸನ್ನಿವೇಶದ  ಈ ಪದ್ಯ ಉಭಯ ತಿಟ್ಟುಗಳಲ್ಲೂ ಪ್ರಸಿದ್ಧ . ಯಕ್ಷಗಾನ ಕಲಾಸಕ್ತರೆಲ್ಲರೂ ಸವಿದಷ್ಟು ಅದರ ರುಚಿ ಹೆಚ್ಚುತ್ತಲೇ ಹೋಗುವ ಈ ಪದ್ಯವನ್ನು ಬರೆದವರಾರಿರಬಹುದು ? ಯಾವಾಗ ಬರೆದಿರಬಹುದು ? ಎಂದು ಯಾರೊಬ್ಬರೂ ಯೋಚಿಸಲು ಹೋಗುವುದಿಲ್ಲ ! ಒಂದು ಶತಮಾನದ ಹಿಂದೆ ರಚಿತವಾದ ಈ ಪ್ರಸಂಗ ಇಂದಿಗೂ ರಂಗದಲ್ಲಿ ಯಶಸ್ವೀ ಪ್ರಯೋಗವನ್ನು ಕಾಣುತ್ತಿದೆ ಎಂದರೆ ಅಚ್ಚರಿಯಾಗುತ್ತಿದೆಯೇ ?

ಈ ಪ್ರಸಿದ್ಧ ಪ್ರಸಂಗವನ್ನು ರಚಿಸಿದವರೇ  ಕೀರ್ತಿಶೇಷ ಹಲಸಿನಹಳ್ಳಿ ಶ್ರೀ ನರಸಿಂಹ ಶಾಸ್ತ್ರಿಗಳು . ಅವರ ಕುರಿತು ವಿಶೇಷವಾದ ಅಧ್ಯಯನಗಳು ನಡೆದಂತೆ ಕಂಡು ಬರುವುದಿಲ್ಲ .ಅವರ ಪ್ರತಿಯೊಂದು ಪ್ರಸಂಗ ಕೃತಿಯ ಕೊನೆಯಲ್ಲಿ ತನ್ನ ಕುರಿತು ಹಾಗೂ ಕೃತಿ ಕೊನೆಗೊಂಡ ಸಂವತ್ಸರ , ಮಾಸ, ಪಕ್ಷ , ತಿಥಿ , ವಾರಗಳನ್ನು ಹೇಳಿಕೊಂಡಿದ್ದು ವಿಷಯ ಸಂಗ್ರಹಕ್ಕೆ ಆಕರವಾಗಿದೆ.

ಸಾರ್ವಕಾಲಿಕ ಸುಂದರ ಪದ್ಯಗಳು ಅವರ ಪ್ರಸಂಗದ ವೈಶಿಷ್ಟ್ಯ . ಪ್ರಸಂಗ ರಚಿಸಿ ಶತಮಾನವೇ ಕಳೆದರೂ ಇಂದಿಗೂ ಅವರ ಪ್ರಸಂಗಗಳು ಜೀವಂತವಾಗಿ ರಂಗ ಪ್ರಯೋಗದಲ್ಲಿದೆ .ಹಲಸಿನಹಳ್ಳಿಯವರು ಪ್ರತಿವರ್ಷ ಬೇರೆ ಬೇರೆ ಮೇಳದವರನ್ನು  ಕರೆಸಿ ತಮ್ಮ ಮನೆಯ ಮುಂದೆ ಬಯಲಾಟಗಳನ್ನು ಆಡಿಸುತ್ತಿದ್ದರಂತೆ .

ಹಲಸಿನಹಳ್ಳಿ ಶ್ರೀಯುತ ನರಸಿಂಹ ಶಾಸ್ತ್ರಿಗಳು  ತೀರ್ಥಹಳ್ಳಿ ಪರಿಸರದ ತುಂಗಾನದೀ ತೀರದ ಹಲಸಿನಹಳ್ಳಿಯವರು .ಅವರು ಅದನ್ನು ಪನಸಪುರವೆಂದು ಹೆಸರಿಸಿದ್ದಾರೆ .ಅವರ ತಂದೆಯವರ ಹೆಸರು ನಾಗೇಂದ್ರ ಶಾಸ್ತ್ರಿ (ಉರಗೇ೦ದ್ರ  ಶಾಸ್ತ್ರಿ ಎಂದು ಪದ್ಯದಲ್ಲಿ ಉಲ್ಲೇಖಿಸಿರುತ್ತಾರೆ ). ಶ್ರೀಯುತ ನರಸಿಂಹ ಶಾಸ್ತ್ರಿಗಳು ಸಂಸ್ಕೃತ  ಮತ್ತು ಕನ್ನಡ ಉಭಯ ಭಾಷಾ ವಿದ್ವಾಂಸರಾಗಿದ್ದು ಆಳವಾದ ಅಧ್ಯಯನ ಸಂಪನ್ನರೂ ಪೌರಾಣಿಕ ಜ್ಞಾನಿಗಳೂ ಆಗಿದ್ದರು .


ಸರಿಸುಮಾರು ೧೮೯೮ ರಿಂದ ೧೯೧೬ ರ ತನಕ ಅವರು ಕೃತಿ ರಚನೆ ಮಾಡಿರುತ್ತಾರೆ . ಕೆಲವು ಪ್ರಸಂಗಗಳಲ್ಲಿ ಅದು ಎಷ್ಟನೆ ಕೃತಿಯೆಂದು ಕೂಡ ಸೂಚಿಸಿರುತ್ತಾರೆ .ಅವರ ೧೩ನೆ ಕೃತಿ ರುಕ್ಮಾಂಗದ ಚರಿತ್ರೆ ಯು ಅವರು ವಿಧಿವಶರಾದ ಮೇಲೆ ೧೯೫೦ ರಲ್ಲಿ    ಶೀಗೆಹಳ್ಳಿ ಪರಮಾನ೦ದ ಮಠದ ಶ್ರೀ ಅತ್ಮಾರಾಮರೆಂಬ ಮಹಾನೀಯರಿಂದ ಶಿರಸಿಯಲ್ಲಿ ಪ್ರಕಟವಾಯಿತು.ಇವರ ಹೆಚ್ಚಿನ ಕೃತಿಗಳು ೧೯೩೧ ರಲ್ಲಿ ತೀರ್ಥ ಹಳ್ಳಿಯ ರಾಧಾಕೃಷ್ಣ ಮುದ್ರಣಾಲಯದಲ್ಲಿ ಅಚ್ಚಾಗಿ ಬೆಳಕು ಕಂಡಿವೆ. ಇವುಗಳನ್ನೆಲ್ಲ ಖ್ಯಾತ ಕನ್ನಡ ಪಂಡಿತರಾಗಿದ್ದ ಕಮೆಗೋಡು  ನರಸಿಂಹ ಶಾಸ್ತ್ರಿಗಳು ಪರಿಶೀಲಿಸಿದ್ದರೆಂದು ಮುದ್ರಿತ ಪ್ರತಿಗಳ ಮುಖ ಪುಟದಲ್ಲಿ ನಮೂದಿಸಲ್ಪಟ್ಟಿದೆ . ಅವರ ಕೃತಿಯ ಆರಂಭದಲ್ಲಿ ದುರ್ಗೆಯನ್ನು ಸ್ತುತಿಸುವ ಪದವನ್ನು ಕಾಣುತ್ತೇವೆ .ಆಗುಂಬೆಯ ವೇಣುಗೋಪಾಲ , ಕಮ್ಮರಡಿಯ ಗಣಪತಿ , ತೀರ್ಥರಾಜಪುರದ ದುರ್ಗಾಮ್ಬೆ ,ಶೃಂಗೇರಿಯ ಶಾರದಾಂಬೆಯ ಸ್ತುತಿಗಳೂ ಕೃತಿಗಳಲ್ಲಿ ಕಾಣಸಿಗುತ್ತವೆ .

ಹಲಸಿನಹಳ್ಳಿ ಶ್ರೀಯುತ ನರಸಿಂಹ ಶಾಸ್ತ್ರಿಗಳು ಶಶಿಕಲಾ ಸ್ವಯಂವರ (೧೮೯೯), ವಿಧ್ಯುನ್ಮತಿ ಕಲ್ಯಾಣ (೧೯೦೧) ,ಕೌಶಿಕ ಚರಿತ್ರೆ (೧೯೦೧), ರುಗ್ಮವತಿ ಕಲ್ಯಾಣ (೧೯೦೨), ಚಂದ್ರಹಾಸ ಚರಿತ್ರೆ (೧೯೦೪),ಭೀಷ್ಮೋತ್ಪತ್ತಿ(೧೯೦೪), ಭೀಷ್ಮ ವಿಜಯ (೧೯೦೫), ಕುಮುದ್ವತೀ ಕಲ್ಯಾಣ (೧೯೦೬), ಭೀಷ್ಮಾರ್ಜುನರ ಕಾಳಗ (೧೯೦೯), ವಾಮನ ಚರಿತ್ರೆ (೧೯೧೦), ರುಕ್ಮಾಂಗದ ಚರಿತ್ರೆ (೧೯೧೧) ದೇವಯಾನಿ ಕಲ್ಯಾಣ (೧೯೧೩) ಶ್ರೀಕೃಷ್ಣ ವಿವಾಹ (೧೯೧೪) ,ಪುಂಡರೀಕ ಚರಿತ್ರೆ (೧೯೧೬), ಶಲ್ಯ ಪರ್ವ (೧೯೧೬) ವೀರಮಣಿ ಕಾಳಗ (೧೯೧೬) ರಚಿಸಿದ್ದು ಇವೆಲ್ಲವೂ ಪ್ರಕಟವಾಗಿದೆ. ಇದಲ್ಲದೆ ನವನಂದನರ ಕಾಳಗ ,ಹಂಸಡಿಬಿಕರ ಕಾಳಗ , ಶಿಶುಪಾಲನ ಕಾಳಗ , ನರಸಿಂಹಾವತಾರ  ಪ್ರಸಂಗಗಳನ್ನು ರಚಿಸಿದ್ದು ಅವುಗಳು ಪ್ರಕಟವಾಗಿಲ್ಲ .ಇವರ ಎಲ್ಲ ರಚನೆಗಳೂ ಸ್ವತಂತ್ರ ರಚನೆಗಳಾಗಿದ್ದು ಪ್ರದರ್ಶನಕ್ಕೆ ಅನುಕೂಲವಾಗುವ ದೃಶ್ಯ ವಿನ್ಯಾಸ, ಚರ್ಚೆಗೆ ಆಸ್ಪದವಿರುವ  ವಿಷಯಾಧಾರಿತ ಪದಗಳು , ಮೌಲ್ಯಯುತ ಪದಗಳ ಸರಳ ಸುಲಲಿತ ಜೋಡಣೆ ಈ ಪ್ರಸಂಗಗಳ ವೈಶಿಷ್ಟ್ಯತೆ .

ಭೀಷ್ಮೋತ್ಪತ್ತಿ , ಭೀಷ್ಮಾರ್ಜುನರ ಕಾಳಗ ( ಭೀಷ್ಮ ಸೇನಾಪತ್ಯ -ವಿಶ್ವರೂಪ ದರ್ಶನ -ಕರ್ಮಬಂಧನ -ಸುದರ್ಶನ ಕರಗ್ರಹಣ - ಶರಶಯ್ಯೆ ಕಥಾನಕವನ್ನು ಒಳಗೊಂಡಿದೆ ), ಭೀಷ್ಮ ವಿಜಯ,ವೀರಮಣಿ ಕಾಳಗ ,ವಾಮನ ಚರಿತ್ರೆ  ಪ್ರಸಂಗಗಳು  ತಾಳಮದ್ದಲೆ ಕೂಟಗಳಿಗೆ ಹೇಳಿ ಮಾಡಿಸಿದಂತಿದೆ. ಈ ಎಲ್ಲ ಪ್ರಸಂಗಗಳು ಇಂದಿಗೂ ತಾಳಮದ್ದಲೆ ಕೂಟದ ಅಗ್ರ ಪ್ರಸಂಗಗಳ ಸಾಲಿನಲ್ಲಿ ಸ್ಥಾನ ಪಡೆದಿವೆ. 

ಹಲಸಿನಹಳ್ಳಿ ಶ್ರೀಯುತ ನರಸಿಂಹ ಶಾಸ್ತ್ರಿಯವರ ಬಹುತೇಕ ಎಲ್ಲ ಪ್ರಸಂಗಗಳೂ ಆಟ ಕೂಟಗಳಲ್ಲಿ ಇಂದಿಗೂ ಚಿರಂಜೀವಿಗಳಾಗಿವೆ. ಈಗಾಗಲೇ ಪಾರ್ತಿಸುಬ್ಬನ ಪ್ರಸಂಗಗಳು , ಹಟ್ಟಿಯಂಗಡಿ ರಾಮ ಭಟ್ಟರ ಪ್ರಸಂಗಗಳು, ಅಗರಿ ಶ್ರೀನಿವಾಸ ಭಾಗವತರ ಪ್ರಸಂಗಗಳು, ಹಿರಿಯ -ಕಿರಿಯ ಬಲಿಪ ಭಾಗವತರ ಪ್ರಸಂಗಗಳು ,ಜತ್ತಿ ಈಶ್ವರ ಭಾಗವತರ ಪ್ರಸಂಗಗಳು ,ಅಮೃತ ಸೋಮೇಶ್ವರರ ಪ್ರಸಂಗಗಳು , ಸಂಪುಟ ರೂಪದಲ್ಲಿ ಪ್ರಕಟವಾಗಿದ್ದು ಮುದ್ರಿತ ರೂಪದಲ್ಲಿ ಲಭ್ಯವಿರುತ್ತದೆ .ಆದರೆ ಹಿರಿಯರೂ ಮೇಧಾವಿಗಳೂ ,ವಿದ್ವಾಂಸರಾಗಿ ಮೆರೆದಿದ್ದ ಹಲಸಿನಹಳ್ಳಿ ಶ್ರೀಯುತ ನರಸಿಂಹ ಶಾಸ್ತ್ರಿಯವರ ಪ್ರಸಂಗಗಳ  ಮಹಾಸಂಪುಟವೊಂದು  ಪ್ರಕಟವಾಗಬೇಕಿದೆ . ಶ್ರೀಯುತರ ಎಲ್ಲ ಪ್ರಸಂಗಗಳೂ ಒಂದೇ ಪುಸ್ತಕದಲ್ಲಿ ದೊರೆತಲ್ಲಿ ಕಲಾಸಕ್ತರಿಗೆ , ಅಭ್ಯಾಸಿಗಳಿಗೆ , ಭಾಗವತರುಗಳಿಗೆ , ಕಲಾವಿದರಿಗೆ ಮಹಾದುಪಕಾರವಾಗುತ್ತದೆ.  ಅಂಥದ್ದೊಂದು ಕಾರ್ಯವು ಶೀಘ್ರವೇ  ಆಗಿ ಅವರ ಚಿರನೂತನ ಪ್ರಸಂಗಗಳು ಚಿರಸ್ಥಾಯಿಯಾಗಿ ಜನಮಾನಸದಲ್ಲಿ ಉಳಿಯಲಿ ಎಂದು ಹಾರೈಸುತ್ತೇನೆ ..



(ಹಲಸಿನಹಳ್ಳಿ ಶ್ರೀಯುತ ನರಸಿಂಹ ಶಾಸ್ತ್ರಿಯವರ ಬಗ್ಗೆ ಮಾಹಿತಿ ಕೃಪೆ : ಕ.ಪು. ಶ್ರೀನಿವಾಸ ಭಟ್, ಪಂಚವಟಿ , ಕಟೀಲು )